ಹೊಸ ಸಂಶೋಧನಾ ಪತ್ರಿಕೆ ‘ಆರಯ್’ ಬರುತ್ತಿದೆ..

**

ಬಂಡಾರ ಪ್ರಕಾಶನ, ಮಸ್ಕಿ ಅವರು ಹೊಸ ಸಂಶೋಧನಾ ಪತ್ರಿಕೆ ‘ಆರಯ್’ ಆರಂಭಿಸಿದ್ದಾರೆ.

ಈ ಪತ್ರಿಕೆ ಕುರಿತು ಸಂಪಾದಕ ಹಾಗೂ ಪ್ರಕಾಶಕರಾದ ಬಸವರಾಜ ಕೋಡಗುಂಟಿ ಹಾಗೂ ಪರಶುರಾಮ ಕೋಡಗುಂಟಿ ಅವರ ಕೋರಿಕೆ ಹೀಗಿದೆ.

**

ಕಾಲವು ಕಾಲದ ಬೆಳವಣಿಗೆಯಲ್ಲಿ ನಿರಂತರ ಪ್ರಭಾವವನ್ನು ಬೀರುತ್ತಿರುತ್ತದೆ. ಭಾರತೀಯ ಸಂದರ್ಭದಲ್ಲಿ ಇತಿಹಾಸದ ಉದ್ದಕ್ಕೂ ಮನುಷ್ಯ ಬದುಕಿನ ಪ್ರತಿಯೊಂದು ಬೆಳವಣಿಗೆಗಳೂ, ಸಾಮಾಜಿಕ ಬದುಕಿನ ಪ್ರತಿಯೊಂದು ಪಲ್ಲಟಗಳೂ ಇಂದಿನ ಸಾಮಾಜಿಕ ಬದುಕಿಗೆ ಕಾರಣವಾಗಿರುತ್ತವೆ. ಬ್ರಿಟೀಶರ ಕಾಲದಲ್ಲಿ ಬಾರತೀಯ ಸಮಾಜದಲ್ಲಿ ಆದ ಪಲ್ಲಟಗಳು ಆಧುನಿಕ ಕಾಲದಲ್ಲಿ ಇಂದು ಇತಿಹಾಸದ ಸಾವಿರಾರು ವರುಷಗಳ ಬದುಕು ಮತ್ತು ಸಮಾಜಗಳ ತಿಳುವಳಿಕೆಯನ್ನೆ ರೂಪಿಸುತ್ತಿವೆ. ಬ್ರಿಟೀಶರ ಕಾಲದಲ್ಲಿ ಭಾರತಕ್ಕೆ ಒದಗಿ ಬಂದ ಹಲವಾರು ಪ್ರಕ್ರಮಗಳಲ್ಲಿ ಸಂಶೋಧನೆ ಎಂಬ ಶಾಸ್ತ್ರವೂ ಒಂದು. ಸಂಶೋಧನೆ ಭಾರತೀಯ ನೆಲದಲ್ಲಿ ಯಾವತ್ತಿನಿಂದಲೂ ಇದ್ದರೂ ಅದಕ್ಕೆ ಒಂದು ಶಾಸ್ತ್ರ ಸ್ವರೂಪ ಓದಗಿದ್ದು ಬ್ರಿಟೀಶರ ಕಾಲದಲ್ಲಿ. ಆಧುನಿಕಪೂರ್ವ ಯುರೋಪಿನಲ್ಲಿ ಅಲ್ಲಿಂದ ಮುಂದಕ್ಕೆ ಅಮೆರಿಕಾದಲ್ಲಿ ಸಂಶೋಧನೆ ಶಾಸ್ತ್ರೀಯ ಬೆಳವಣಿಗೆಯನ್ನು ಪಡೆದುಕೊಂಡಿತು. ಭಾರತದಲ್ಲಿ ಪಶ್ಚಿಮದಿಂದ ಬಂದ ಈ ಸಂಶೋಧನಾ ಶಾಸ್ತ್ರ ಆಧುನಿಕ ಭಾರತೀಯ ವಿದ್ವತ್ ವಲಯಗಳಲ್ಲಿ ವ್ಯಾಪಿಸಿಕೊಂಡಿದೆ.

ಪಶ್ಚಿಮದಲ್ಲಿ ಬೆಳೆದ ಸಂಶೋಧನಾ ಶಾಸ್ತ್ರ ಸಹಜವಾಗಿ ಪಶ್ಚಿಮವನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಪೂರಕವಾಗಿ ಬೆಳೆದಿದೆ. ಮುಖ್ಯವಾಗಿ ಕಲೆ ಮತ್ತು ಮಾನವಿಕ ವಿಷಯಗಳಲ್ಲಿ ಇದನ್ನು ಕಾಣಬಹುದು. ಆಧುನಿಕ ಜಗತ್ತಿನ ತಿಳುವಳಿಕೆಯ ಬಹುಬಾಗ ಪಶ್ಚಿಮದ ಅರಿವಿನ ಆಧಾರದಲ್ಲಿ ಬೆಳೆದಿದೆ. ಹಾಗಾಗಿ ಆಧುನಿಕ ಸಂಶೋಧನಾ ಸಿದ್ದಾಂತಗಳು ಭಾರತವನ್ನು ಅರ‍್ತ ಮಾಡಿಕೊಳ್ಳುವುದಕ್ಕೆ ಎಷ್ಟು ಸಹಾಯಕವಾಗುತ್ತವೆಯೊ ಅಷ್ಟು ಎರವಾಗುತ್ತವೆ ಕೂಡ. ಈ ತಿಳುವಳಿಕೆಯನ್ನು ಇಟ್ಟುಕೊಂಡು ಭಾರತೀಯ ಸಮಾಜವನ್ನು ಅವಲೋಕಿಸಿ, ಅಧ್ಯಯನಿಸಿ ಸೂಕ್ತವಾದ ಸಿದ್ದಾಂತಗಳನ್ನು ಬೆಳೆಸಬೇಕಿದೆ. ಆ ಮೂಲಕ ಪ್ರಸ್ತುತ ಜಗತ್ತಿನ ತಿಳುವಳಿಕೆಯನ್ನು ಅವಶ್ಯವಾಗಿ ಬೆಳೆಸಬೇಕಿದೆ. ಶೈಕ್ಷಣಿಕ ವಲಯದ ಭಾಗವಾಗಿ ಸಂಶೋಧನೆ ಬಂದ ನಂತರ ಅದರ ಬೆಳವಣಿಗೆ ವ್ಯಾಪಕತೆಯನ್ನು ಕಂಡುಕೊಂಡಿದೆ. ಆದರೆ ಸಂಶೋಧನಾ ಪರಿಸರ ಎನ್ನುವುದು ಸರಿಯಾಗಿ ಬೆಳೆಯಲಿಲ್ಲ. ವಸ್ತುವಿಷಯಗಳನ್ನು ನೋಡುವ ಪ್ರಕ್ರಮದಿಂದ ಅವುಗಳನ್ನು ಸಂಗ್ರಹಿಸುವ, ವರ‍್ಗೀಕರಿಸುವ, ವಿಶ್ಲೇಷಿಸುವ ಮತ್ತು ಆ ಮೂಲಕ ವಾಸ್ತವಗಳನ್ನು ಕಂಡುಕೊಳ್ಳುವ ಪ್ರತಿಯೊಂದು ಹೆಜ್ಜೆಯಲ್ಲಿಯೂ ಸೂಕ್ತವಾದ ಕ್ರಮಗಳನ್ನು ಬೆಳೆಸಿಕೊಳ್ಳಬೇಕಿದೆ.

ಕನ್ನಡದಲ್ಲಿ ಮತ್ತು ಕನ್ನಡ-ಕರ‍್ನಾಟಕಗಳಿಗೆ ಸಂಬಂಧಿಸಿದ ಕೆಲವು ಸಂಶೋಧನೆಗಳು ಶಾಸ್ತ್ರೀಯವಾಗಿ ಬರುತ್ತಿವೆಯಾದರೂ ಅವು ಮಾದರಿಯಾಗಿ ಬೆಳೆದಿಲ್ಲ. ಸಂಶೋಧನಾ ಶಾಸ್ತ್ರವನ್ನು ಸೂಕ್ತವಾಗಿ ಅಳವಡಿಸಿಕೊಂಡರೆ, ಅನ್ವಯಿಸಿಕೊಂಡರೆ ಸಹಜವಾಗಿ ಇರುವ ಶಾಸ್ತ್ರ-ಸಿದ್ದಾಂತಗಳಲ್ಲಿನ ಕಂದಕಗಳು ಎದ್ದು ಕಾಣುತ್ತವೆ. ಇದು ಸೂಕ್ತವಾದ ಸಿದ್ದಾಂತಗಳ ಬೆಳವಣಿಗೆಯ ಅವಶ್ಯಕತೆಯನ್ನು ನಿಚ್ಚಳವಾಗಿ ತೋರಿಸುತ್ತವೆ. ಈ ಎರಡು ಆಯಾಮಗಳು, ಅಂದರೆ ಭಾರತೀಯವಲ್ಲದ ಸಿದ್ದಾಂತಗಳು ಮತ್ತು ಸಂಶೋಧನಾ ಶಾಸ್ತ್ರದ ಅಸಮರ‍್ಪಕ ಅಳವಡಿಕೆ ಕನ್ನಡ ಮತ್ತು ಕರ‍್ನಾಟಕದಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ. ಈ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಬಂಡಾರ ಪ್ರಕಾಶನ ಒಂದು ಸಂಶೋಧನಾ ಪತ್ರಿಕೆಯನ್ನು ತರಲು ಮೊದಲಾಗಿದೆ. ನಾಡಿನಲ್ಲಿ ಸಂಶೋಧನಾ ವಾತಾವರಣವೊಂದು ಸೂಕ್ತವಾಗಿ ಬೆಳೆಯಬೇಕಿದೆ ಮತ್ತು ಬೆಳೆಸಬೇಕಿದೆ.

ಬಂಡಾರ ಪ್ರಕಾಶನ ಕನ್ನಡ ಮತ್ತು ಕರ‍್ನಾಟಕಗಳ ಗುಣಾತ್ಮಕ ಸಂಶೋಧನೆಯನ್ನು ಬೆಳೆಸುವ ಆಶಯವನ್ನು ಇಟ್ಟುಕೊಂಡು ಕೆಲಸವನ್ನು ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಹಲವು ಸಂಶೋಧನಾ ಪ್ರಕಟಣೆಗಳನ್ನು ತರುತ್ತಿದೆ ಮತ್ತು ಹಲವು ಸರಣಿಗಳನ್ನು ತರುತ್ತಿದೆ ಮತ್ತು ವಿವಿಧ ಯೋಜನೆಗಳನ್ನು ಹಾಕಿಕೊಂಡಿದೆ. ಇದರ ಮುಂದುವರಿಕೆಯಾಗಿ ಈಗ ಒಂದು ಸಂಶೋಧನಾ ಪತ್ರಿಕೆಯನ್ನು ತರುತ್ತಿದೆ. ಇದು ‘ಇಮ್ಮುಖ ಕುರುಡು’ (Double Blind Review) ಮತ್ತು ದಟ್ಟೋದು (Peer Review) ಮೂರುತಿಂಗಳ ಪತ್ರಿಕೆಯನ್ನು ಮೊದಲು ಮಾಡಿದೆ. ಇದರಲ್ಲಿ ಕಲೆ ಮತ್ತು ಮಾನವಿಕಗಳಿಗೆ ಸಂಬಂಧಿಸಿದ ಸಂಶೋಧನೆಗಳಿಗೆ ವೇದಿಕೆಯನ್ನು ಒದಗಿಸಲಾಗುತ್ತದೆ. ಕರ‍್ನಾಟಕದ ಮತ್ತು ಕನ್ನಡ-ಕರ‍್ನಾಟಕ ಅಧ್ಯಯನಗಳಲ್ಲಿ ತೊಡಗಿರುವ ಹಲವು ಸಂಶೋಧಕರು ಈ ಹೊಸ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿರುವುದು ಸಂತೋಶವನ್ನು ತಂದಿದೆ. ಈ ಪತ್ರಿಕೆಗೆಂದು ಅಂತರ‍್ಜಾಲ ತಾಣವನ್ನು ಪ್ರಕಾಶನ ಮಾಡಿದೆ. ಇದರಲ್ಲಿ ಪತ್ರಿಕೆಯ ಆಶಯಗಳು, ಮಾನದಂಡಗಳನ್ನು ಕಾಣಬಹುದು. ಪತ್ರಿಕೆ ಕನ್ನಡದ ಸಂಶೋದನೆ ಅಳವಡಿಸಿಕೊಳ್ಳಬೇಕಾದ ಇಲ್ಲವೆ ಅಳವಡಿಸಿಕೊಳ್ಳಬಹುದಾದ ಸೂಕ್ತ ಸಿದ್ದಾಂತಗಳ ಮಾನಕಗಳನ್ನು ಇಲ್ಲಿ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಕನ್ನಡದ ಸಂಶೋಧಕರ ಅಭಿಪ್ರಾಯಗಳನ್ನು ಪಡೆದುಕೊಳ್ಳಲಾಗುತ್ತದೆ.

ಈ ಪತ್ರಿಕೆಯಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟ ಮಾಡುವುದಕ್ಕೆ ಸಂಶೋಧಕರು ತಮ್ಮ ಪ್ರಬಂಧಗಳನ್ನು ಪತ್ರಿಕೆಯ ಅಂತರ್ಜಾಲ ತಾಣದಲ್ಲಿ (https://aray.in) ಅಪ್ಲೋಡು ಮಾಡಬೇಕು. ಹೀಗೆ ಅಪ್ಲೋಡು ಮಾಡಿದ ಪ್ರಬಂಧಗಳನ್ನು ಮೊದಲ ಹಂತದಲ್ಲಿ ಪತ್ರಿಕೆಯ ಮಾನದಂಡಗಳಿಗೆ ಪೂರಕವಾಗಿದೆಯೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಮೊದಲ ಹಂತದಲ್ಲಿ ಸಂಪಾದಕರ ಮಟ್ಟದಲ್ಲಿ ಪರಿಗಣಸಿಲಾಗುವುದು. ಆನಂತರ ಪ್ರಬಂಧವನ್ನು ಆಯಾ ವಿಷಯದ ಪರಿಣತರಿಗೆ ಕಳಿಸಿಕೊಡಲಾಗುವುದು. ಪತ್ರಿಕೆ ಈಗಾಗಲೆ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಸಂಶೋಧನೆಯನ್ನು ಮಾಡಿರುವ ಕರ್ನಾಟಕದ ಹಲವು ಸಂಶೋಧಕರನ್ನು ಪರಿಣತರ ಪಟ್ಟಿಯಲ್ಲಿ ಸೇರಿಸಿದೆ. ಇವರು ಪ್ರಬಂಧಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಮೌಲ್ಯಮಾಪಕರಿಗೆ ಪ್ರಕಾಶನವು ನಿರ್ದಿಷ್ಟ ಮಾನದಂಡಗಳನ್ನು ಇಟ್ಟುಕೊಂಡು ಮೌಲ್ಯಮಾಪನ ಮಾಡಲು ಕೇಳಲಾಗುತ್ತದೆ. ಹೀಗೆ ಮೌಲ್ಯಮಾಪಕರ ವರದಿಯನ್ನು ಆಧರಿಸಿ ಪ್ರಬಂಧವನ್ನು ಪತ್ರಿಕೆಯಲ್ಲಿ ಪ್ರಕಟಿಸಲು ಪರಿಗಣಿಸಲಾಗುವುದು ಇಲ್ಲವೆ ತಿರಸ್ಕರಿಸಲಾಗುವುದು. ಮೌಲ್ಯಮಾಪಕರು ಕೊಟ್ಟ ಸಲಹೆಗಳನ್ನು ಸಂಶೋಧಕರಿಗೆ ಕಳಿಸಿಕೊಡಲಾಗುವುದು. ಆ ಸಲಹೆಗಳನ್ನು ಇಟ್ಟುಕೊಂಡು ಸಂಶೋಧಕರು ಪ್ರಬಂಧದ ಮೇಲೆ ಕೆಲಸ ಮಾಡಿ ಮತ್ತೊಮ್ಮೆ ಪತ್ರಿಕೆಗೆ ಸಲ್ಲಿಸಬೇಕು. ಈ ಪ್ರಕ್ರಿಯೆಯ ಕೊನೆಯಲ್ಲಿ ಸಂಪಾದಕರು ಪ್ರಬಂಧದ ಪ್ರಕಟಣೆಗೆ ಅವಶ್ಯವಾದ ಅಂಶಗಳನ್ನು ಗಮನಿಸಿ ಪತ್ರಿಕೆಯಲ್ಲಿ ಪ್ರಕಟಿಸಲು ಪರಿಗಣಿಸುವುದು.

ಇಮ್ಮುಖ ಕುರುಡೋದು ಪತ್ರಿಕೆಗಳು ಸಂಶೋಧನೆಯ ಗುಣಾತ್ಮಕತೆಯನ್ನು ಕಾಯುವುದಕ್ಕೆ ಹೆಚ್ಚು ಸಹಾಯಕವಾಗುತ್ತದೆ. ಇದರಲ್ಲಿ ಪ್ರಬಂಧ ಬರೆದ ಸಂಶೋಧಕರಿಗೆ ಅವರ ಪ್ರಬಂಧದ ಮೌಲ್ಯಮಾಪನ ಮಾಡುವವರು ಯಾರು ಎಂದು ತಿಳಿದಿರುವುದಿಲ್ಲ ಮತ್ತು ಮೌಲ್ಯಮಾಪನ ಮಾಡುವ ಪರಿಣತರಿಗೆ ಸಂಶೋಧಕರು ಯಾರು ಎಂದು ತಿಳಿದಿರುವುದಿಲ್ಲ. ಇದರ ಜೊತೆಗೆ ದಟ್ಟೋದು ಎಂಬುದು ಇಂದಿನ ಸಂಶೋಧನಾ ಜಗತ್ತಿನ ಅತ್ಯನಿವಾರ‍್ಯ ಅವಶ್ಯಕತೆಯಾಗಿದೆ. ಇದರಲ್ಲಿ ಪ್ರಬಂಧಗಳನ್ನು ಆಯಾ ನಿರ್ದಿಷ್ಟ ಕ್ಷೇತ್ರಗಳಲ್ಲಿನ ಪರಿಣತರು ಸೂಕ್ಷ್ಮವಾದ ಓದಿಗೆ ಒಳಪಡಿಸಿ ಮೌಲ್ಯಮಾಪನ ಮಾಡುತ್ತಾರೆ. ಈ ಎಲ್ಲ ಪ್ರಕ್ರಿಯೆಗಳು ಆರಯ್ ಪತ್ರಿಕೆಯಲ್ಲಿ ಇರುತ್ತವೆ. ಆರಯ್ ಪತ್ರಿಕೆಯ ಮೊದಲ ಸಂಚಿಕೆಯು ಈಗ ಪ್ರಕಟವಾಗುತ್ತಿದೆ. ಇದರಲ್ಲಿ ಕನ್ನಡ-ಕರ‍್ನಾಟಕಗಳನ್ನು ಅರ‍್ತ ಮಾಡಿಕೊಳ್ಳುವ ವಿಭಿನ್ನ ಆಯಾಮಗಳಲ್ಲಿನ ಅಧ್ಯಯನಗಳು ಇವೆ. ನಾಡಿನ ಹಿರಿ-ಕಿರಿಯ ಸಂಶೋಧಕರ ಪ್ರಬಂಧಗಳನ್ನು ಈ ಸಂಚಿಕೆ ಒಳಗೊಂಡಿದೆ. ಕನ್ನಡ-ಕರ‍್ನಾಟಕ ಸಂಶೋಧನೆಗಳ ಗುಣಾತ್ಮಕ ಬೆಳವಣಿಗೆಗೆ ಈ ಪತ್ರಿಕೆ ಒಂದು ವೇದಿಕೆಯಾಗಿ ಒದಗಿದರೆ ಇದರ ಹಿಂದಿನ ಆಶಯಗಳು ಈಡೇರುತ್ತವೆ. ಈ ಪತ್ರಿಕೆಯ ಒಟ್ಟು ಪ್ರಕ್ರಿಯೆಯಲ್ಲಿ ಸಹಾಯಕವಾಗಿರುವ ಎಲ್ಲರಿಗೂ ನಮನಗಳು. ಪತ್ರಿಕೆ ಮೊದಲ ಸಂಚಿಕೆಯನ್ನು ತರುತ್ತಿದೆ. ತಮ್ಮ ಸಹಕಾರ, ಬೆಂಬಲ ಇರಲಿ. ಈ ಪತ್ರಿಕೆಯನ್ನು ಬೆಳೆಸುವುದು ಕರ‍್ನಾಟಕದ ವಿದ್ವತ್ವ ವಲಯದ ಜವಾಬ್ದಾರಿಯಾಗಿದೆ. ಈಗಾಗಲೆ ಬಹಳಷ್ಟು ಮಂದಿ ವಿದ್ವಾಂಸರು ಪತ್ರಿಕೆಗೆ ತಮ್ಮ ಸಹಾಯ ಸಹಕಾರವನ್ನು ನೀಡಿದ್ದಾರೆ.

‍ಲೇಖಕರು Admin MM

June 10, 2024

ನಿಮಗೆ ಇವೂ ಇಷ್ಟವಾಗಬಹುದು…

‘ವೀರಲೋಕ’ದಿಂದ ಉತ್ತರಪರ್ವ

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ....

ಬೆಂಬಿಡದ ದಾಹ

ಬೆಂಬಿಡದ ದಾಹ

** ಎದ್ದೆ. ಕಣ್ಬಿಟ್ಟಾಗ ರೂಮು ಅರೆ ಕತ್ತಲಾಗಿತ್ತು, ಫ್ಯಾನ್ ಎರಡರ ಸ್ಪೀಡಿನಲ್ಲಿ ತಿರುಗುತ್ತಿತ್ತು, ಮೊಬೈಲ್ ಚಾರ್ಜ್ ಆಗುತ್ತಿತ್ತು,...

0 Comments

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This