ಹೊಸತನದ ಹೊಳಪಿನಲ್ಲಿ ಹೊಳೆವ ಕಥೆಗಳು

ನರೇಂದ್ರ ಪೈ

**

ಕಥೆಗಾರ್ತಿ ಪೂರ್ಣಿಮಾ ಮಾಳಿಗಿಮನಿ ಅವರ ಹೊಸ ಕಥಾ ಸಂಕಲನ ‘ಮ್ಯಾಜಿಕ್ ಸೌಟು’.

ಈ ಕೃತಿಯನ್ನು ‘ಸಾವಣ್ಣ ಪ್ರಕಾಶನ’ ಪ್ರಕಟಿಸಿದೆ.

ವಿಮರ್ಶಕ ನರೇಂದ್ರ ಪೈ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ.

**

ಪೂರ್ಣಿಮಾ ಮಾಳಿಗಿಮನಿ ಇಂಗ್ಲೀಷಿನಲ್ಲಿ ಸಣ್ಣಕತೆಗಳ ಸಂಕಲನವೊಂದನ್ನು ತಂದು ಕನ್ನಡದ ಓದುಗರ ಗಮನಕ್ಕೆ ಬಂದವರು. ಮುಂದೆ ಅವರು ಬರೆದಿದ್ದು ಕಾದಂಬರಿಗಳನ್ನು. ಇದು ನನಗೆ ತಿಳಿದಂತೆ ಅವರ ಎರಡನೆಯ ಕಥಾಸಂಕಲನ. ಈ ನಡುವೆ ಬುಕ್‌ಬ್ರಹ್ಮ, ವಿಜಯಕರ್ನಾಟಕ ಮತ್ತು ವೀರಲೋಕ ನಡೆಸುವ ಕಥಾಸ್ಪರ್ಧೆಗಳಲ್ಲಿ ಅವರ ಹೆಸರು ಸದಾ ಕೇಳಿ ಬರುತ್ತಲೇ ಇತ್ತು. ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿಯೂ ಅವರ ಕಥೆ ಮೆಚ್ಚುಗೆ ಪಡೆದ ಕಥೆಗಳ ಸಾಲಲ್ಲಿತ್ತು. ಈಗ ಅವರ ಹೊಸ ಸಂಕಲನ “ಮ್ಯಾಜಿಕ್ ಸೌಟು” ಹೊರಬಂದಿದೆ. ಪೂರ್ಣಿಮಾ ಮಾಳಿಗಿಮನಿ ಸ್ವತಃ ನುರಿತ ಕತೆಗಾರ್ತಿ, ಕಾದಂಬರಿಕಾರರಾಗಿದ್ದೂ ಕಥೆಕೂಟದಂಥ ಒಕ್ಕೂಟದಲ್ಲಿ ಹಿರಿಯ ಕತೆಗಾರರಾದ ಗೋಪಾಲಕೃಷ್ಣ ಕುಂಟಿನಿ, ಜೋಗಿ, ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿ ಮುಂತಾದವರೊಂದಿಗೂ, ಆ ಸಮೂಹದ ನೂರಾರು ಎಳೆಯ ಪ್ರತಿಭಾವಂತ ಕತೆಗಾರರೊಂದಿಗೂ ಬೆರೆತು ಕಲಿಯುತ್ತ ಸಾಗಿದವರು, ಸದಾ ಕಲಿಯುವ ಉತ್ಸಾಹ, ಪ್ರಾಮಾಣಿಕ ತುಡಿತ ಇರಿಸಿಕೊಂಡವರು. ಹಾಗಾಗಿ ಇವರ ಕಥಾಸಂಕಲನದ ಕತೆಗಳ ಬಗ್ಗೆ ವಿಶೇಷ ಕುತೂಹಲ, ಆಸಕ್ತಿ ಇದ್ದೇ ಇತ್ತು. ಮೂರು ಕಾದಂಬರಿಗಳನ್ನೂ, ಎರಡು ಕಥಾಸಂಕಲನಗಳನ್ನೂ ತಂದಿರುವ, ಎರಡು ಬಾರಿ ಛಂದ ಪುಸ್ತಕ ಬಹುಮಾನ ಸ್ಪರ್ಧೆಯ ಅಂತಿಮ ಸುತ್ತಿಗೆ ತಲುಪಿದ್ದ ಇವರ ಕತೆಗಳ ಬಗ್ಗೆ ಮುಕ್ತವಾಗಿ ಮಾತನಾಡಬಹುದು ಎಂದು ಭಾವಿಸುವೆ.

ಈ ಸಂಕಲನದ ಮೊದಲ ಕತೆ, ‘ಕೇಳದೆ ನಿಮಗೀಗ..’ ಪೂರ್ಣಿಮಾ ಮಾಳಿಗಿಮನಿಯವರ ಕಥನದ ಎಲ್ಲ ಪಟ್ಟುಗಳನ್ನೂ ಮೆರೆಯುವ ಒಂದು ಅದ್ಭುತವಾದ ಕತೆ ಎಂದು ಅನಿಸುತ್ತದೆ. ಪೂರ್ಣಿಮಾ ಅವರ ಮೂಲಭೂತ ಶಕ್ತಿ, ಕೌತುಕವನ್ನು ಹುಟ್ಟಿಸಿ, ಬೆಳೆಸಿ ಓದುಗನನ್ನು ಕೊನೆತನಕ ಹಿಡಿದಿಟ್ಟುಕೊಳ್ಳಬಲ್ಲ ಸಾಮರ್ಥ್ಯ. ಈ ಪುಸ್ತಕವನ್ನು ನೀವು ಸುಮ್ಮನೇ ಕೈಯಲ್ಲಿ ಹಿಡಿದರೂ ಸಾಕು, ಈ ಕತೆಗಳು ಒಂದಾದ ಬಳಿಕ ಒಂದು ನಿಮ್ಮಿಂದ ಓದಿಸಿಕೊಳ್ಳುತ್ತವೆ, ಅಂಥ ಒಂದು ರೀಡೆಬಿಲಿಟಿ ಇವುಗಳಿಗಿದೆ. ಇದರಾಚೆ ಅವರಿಗೇ ವಿಶಿಷ್ಟವಾದ ಕೆಲವೊಂದು ಅಂಶಗಳನ್ನು ಗಮನಿಸುವುದಾದರೆ, ಇಲ್ಲಿಯೂ ಅವರಿಗಿಷ್ಟವಾದ ಫ್ಯಾಂಟಸಿ ಇದೆ. ಅವರ ಫ್ಯಾಂಟಸಿಯ ಎರಡು ಆಯಾಮಗಳಾದ ವಿಜ್ಞಾನ ಮತ್ತು ಮೌಢ್ಯ ಎರಡೂ ಕೂಡ ಇಲ್ಲಿ ಕೆಲಸ ಮಾಡುತ್ತಿವೆ. ಹಾಗೆಯೇ ಅವರ ಹೆಚ್ಚಿನ ಕತೆಗಳ ಮೂಲಧಾತುವಾದ ಗಂಡು-ಹೆಣ್ಣು ಸಂಬಂಧ, ಅದರ ದೈಹಿಕ ಮತ್ತು ಮಾನಸಿಕ ಎರಡೂ ಆಯಾಮಗಳಲ್ಲಿ ಬಂದಿದೆ. ಇಷ್ಟರ ಮೇಲೆ ಎರಡು ತತ್ಸಂವಾದಿ ನೆಲೆಯಲ್ಲಿ ಒಂದೇ ಕತೆಯನ್ನು ಇಟ್ಟು ನೋಡುವ ಅವರ ಶೋಧಕ ಪ್ರವೃತ್ತಿ ಕೂಡ ಈ ಕತೆಯಲ್ಲಿ ಮುಂದುವರಿದಿದೆ. ಹಾಗಾಗಿ ಇದನ್ನು ಸ್ವಲ್ಪ ವಿವರವಾಗಿ ಗಮನಿಸಬಹುದು.

ಪೂರ್ಣಿಮಾ ಮಾಳಿಗಿಮನಿ

ಇಲ್ಲಿ ಲಂಕೇಶರ ಒಂದು ಕತೆ ನೆನಪಾಗುತ್ತದೆ. ಕತೆಯ ಹೆಸರು ‘ಸುಭದ್ರ’. ಅದೇನೂ ಅಷ್ಟೊಂದು ಚರ್ಚೆಗೊಳಗಾದ ಕತೆಯಲ್ಲ. ಆರೂವರೆ ಪುಟಗಳ ತೀರ ಪುಟ್ಟ ಕತೆ. ಸಣ್ಣ ಎಳೆ ಕೊಟ್ಟರೆ ಅದನ್ನು ಓದಿದ ಎಲ್ಲರಿಗೂ ನೆನಪಾಗುತ್ತದೆ. ಒಂದು ದಿನ ಅಚಾನಕ್ಕಾಗಿ, ಮೆಡಿಕಲ್‌ನಲ್ಲಿ ಒಟ್ಟಿಗೇ ಓದುತ್ತಿದ್ದ ಹಳೆಯ ಸಹಪಾಠಿ, ಮದುವೆಯಾಗಿ ಅಮೆರಿಕಕ್ಕೆ ಹೋದ ಮೂರೇ ವರ್ಷದಲ್ಲಿ ಗಂಡ ತೀರಿಕೊಂಡು ವಿಧವೆಯದ ಸುಭದ್ರ, ಪತ್ರಕರ್ತ ಹೆಗ್ಗಡೆಗೆ ಕರೆಮಾಡಿ ಸಂಜೆ ಮನೆಗೆ ಬರಲು ಕೇಳಿಕೊಳ್ಳುತ್ತಾಳೆ. ಅಲ್ಲಿ ಅವಳ “ಕಂಪ್ಲೇಂಟು” ವಿಚಿತ್ರವಾಗಿರುತ್ತದೆ. ನೆರೆಹೊರೆಯಲ್ಲಿ ಕೆಲವು ಗಂಡಸರು ಬಿಸಿಲು ಮಚ್ಚಿನ ಮೇಲೆ ಅರೆಬೆತ್ತಲೆ ನಿಲ್ಲುವುದು, ನಗುವುದು, ಕೆಳಗಿನಿಂದ ಆ ಮನೆಯವರನ್ನು ಕರೆಯಲು ಕಾರಿನ ಹಾರನ್ ಮಾಡಿ ತನನ್ನು ಬೆಚ್ಚಿ ಬೀಳಿಸುವುದು, ನಾಯಿಗಳು ಬೊಗಳುವಂತೆ ಮಾಡಿ ಕಿರಿಕಿರಿ ಕೊಡುವುದು, ಕಾಂಪೌಂಡಿನಲ್ಲಿ ಹರಿದ ಬ್ರಾ, ಕಾಂಡಮ್‌ಗಳನ್ನು ಹಾಕುವುದು ಇತ್ಯಾದಿ ಮಾಡುತ್ತಿದ್ದಾರೆ; ಇದನ್ನೆಲ್ಲ ಯಾರು ಮಾಡಿಸುತ್ತಿದ್ದಾರೆ, ಯಾಕೆ ಮಾಡಿಸುತ್ತಿದ್ದಾರೆ ಎನ್ನುವುದನ್ನು ಹೆಗ್ಗಡೆ ತನಿಖೆ ಮಾಡಲಿ ಎನ್ನುವುದು ಸುಭದ್ರಾ ಆಸೆ. ಇದೆಲ್ಲ ಎಲ್ಲಿಗೆ ಹೋಗಿ ತಲುಪುತ್ತದೆ ಎನ್ನುವ ಅರಿವು ನಿಮಗೆ ಈಗಾಗಲೇ ಆಗಿರುತ್ತದೆ. ಇಲ್ಲ ಎಂದಾದರೆ ಆ ಕತೆಯನ್ನು ತೆರೆದು ದಯವಿಟ್ಟು ಓದಿ, its worth it. ಪೂರ್ಣಿಮಾರ ಕತೆಯಲ್ಲಿ ಓದುಗರನ್ನು ಹಾದಿ ತಪ್ಪಿಸುವಷ್ಟು ಸಶಕ್ತವಾದ ಒಂದು ಪಂಚಿಂಗ್ ಎಂಡಿಂಗ್ ಇದೆ. ಅಲ್ಲಿ ಸರಿಯಿಲ್ಲ ಯಾರು, ಅವನೋ ಅವಳೋ ಎಂಬುದೇ ಮುಖ್ಯವಾದ ಪ್ರಶ್ನೆಯಿರಬಹುದು ಎಂಬಂಥ ಹೊಳಹು ಇದೆ. ಆದರೆ ಕತೆಯ ಮುದ್ದೆ ನಿಜಕ್ಕೂ ಅದಲ್ಲ. ಅಥವಾ, ಅದೇ ಎನ್ನುವುದು ಪೂರ್ಣಿಮಾ ಅವರ ನಿಲುವೂ ಆಗಿದ್ದರೂ ಸಹ, ಕತೆಯಲ್ಲಿ ಕಾಣುವ ಗುರುತರವಾದ ಹೊಳಹು ಬೇರೆಯೇ ಎನ್ನುವುದು ನಿರ್ವಿವಾದ.

ಅದು, ಹದಿನೈದನೆ ಅಂತಸ್ತಿಗೆ, ಅಲ್ಲೇ ಅಂಗಳದೆದುರಿನ ರಸ್ತೆಯಲ್ಲಿ ನಡೆಯುತ್ತಿದೆಯೋ ಎಂಬಂತೆ ಕೇಳಿಸುವ ತಳ ಅಂತಸ್ತಿನ ಪಕ್ಕದ ರಸ್ತೆಯಲ್ಲಿ ನಡೆಯುವ ವಿದ್ಯಮಾನಗಳ ಸದ್ದು ಕೇಳಿಸುವ “ಕಂಪ್ಲೇಂಟು”, ಗಂಡನ ವಾಯ್ಸ್ ಕ್ಯಾನ್ಸಲಿಂಗ್ ಸೌಲಭ್ಯವಿರುವ ಇಯರ್ ಫೋನ್, ಹೆಂಡತಿ ಮಲಗಿದ ನಂತರ ಬಾತ್‌ರೂಮಿನಲ್ಲಿ ವರ್ಚ್ಯುಯಲ್ ರತಿಕೇಳಿ ನಡೆಸಿ ಬಂದು ಮಲಗುವ ಗಂಡ, ನಿಟ್ಟುಸಿರು ಬಿಡುವ ಹೆಂಡತಿ ಇತ್ಯಾದಿ. ಇದು ಸುಭದ್ರೆಯ ಸಮಸ್ಯೆಗಿಂತ ಹೆಚ್ಚು ಭಿನ್ನವಾದದ್ದೇನಲ್ಲ. ಪಂಚಿಂಗ್ ಎಂಡಿಂಗ್, ರೋಚಕತೆ ಹುಟ್ಟಿಸಬಲ್ಲ ಅನಿರೀಕ್ಷಿತ ತಿರುವು, ಕಥನದ ಚೌಕಟ್ಟಿನೊಳಗೆ ತರ್ಕಶುದ್ಧ ಎನಿಸದ ಆದರೆ ನಿಶ್ಚಿತವಾಗಿ ಅನಿರೀಕ್ಷಿತ ತಿರುವು ಕೊಡುವ ಒಂದು ಪುಟ್ಟ ನಡೆ – ಕತೆಗೆ ದಕ್ಕಿಸುವ ಹೆಚ್ಚುಗಾರಿಕೆಯೇನು, ಅದರ ಗೈರು ಕತೆಗೆ ಮಾಡುವ ಕೊರತೆಯೇನು ಎನ್ನುವ ಬಗ್ಗೆ ಯೋಚಿಸುವ ಅಗತ್ಯವಿದೆ. ಲಂಕೇಶ್ 1990ರಲ್ಲಿ ಬರೆದ ಕತೆಯ ಜೊತೆ ಪೂರ್ಣಿಮಾರ ಕತೆಯನ್ನಿಟ್ಟು ನೋಡುವುದರ ಉದ್ದೇಶ ಇಷ್ಟೇ. ‘ಮ್ಯಾಜಿಕ್ ಸೌಟು’ ಮನೆಯೊಡತಿಯ ಕೈಯಲ್ಲಿ ಸೌಟು ಹಿಡಿಸುವಲ್ಲಿ ಯಶಸ್ವಿಯಾದಂತೆಯೇ ಹೆಣ್ಣಿನ ಆತ್ಮವಿಶ್ವಾಸದ, ಘನತೆಯ ರೂಪಕವಾಗಿಯೂ ನಿಲ್ಲುವಲ್ಲಿ ಯಶಸ್ವಿಯಾಗಿದೆ. ಆದರೂ ಇಂಥ ತಾತ್ವಿಕತೆಯ ಹಂಗಿಲ್ಲದೆ ಕೂಡ ಈ ಕತೆ ಯಶಸ್ವಿಯಾಗುವ ಆಯಾಮವೊಂದನ್ನು ಇಟ್ಟುಕೊಂಡಿರುವುದು ಕೂಡ ಸುಳ್ಳಲ್ಲ. ಹಾಗಾಗಿ ಇಶಾನ್ ದೃಷ್ಟಿ ಕಳೆದುಕೊಳ್ಳದೆ ಇದ್ದಿದ್ದರೆ ಕತೆಗೆ ಸಿಗಬಹುದಾಗಿದ್ದ ಆಯಾಮಕ್ಕಾಗಿ ಅವರು ಪ್ರಯತ್ನಿಸುವುದಿಲ್ಲ. ಪ್ರಯತ್ನಿಸಿದ್ದರೆ, ಬಹುಶಃ ಲಲಿತಾ ಆಡಿದ್ದೆಲ್ಲ ಕಟ್ಟುಕತೆಯಾಗುತ್ತಿತ್ತು. (ಇಲ್ಲದಿದ್ದರೂ ಅದು ಕಟ್ಟುಕತೆಯೇ, ಅಲ್ಲವೆ?) ಆಗ, ಆಗ ಮಾತ್ರ, ಯಾಕೆ ಹಾಗೆ ಕಟ್ಟುಕತೆಯನ್ನು ಹೇಳಿದಳು ಎಂಬ ಪ್ರಶ್ನೆ ಓದುಗನನ್ನು ಕಾಡುವ ಪ್ರಶ್ನೆಯಾಗುತ್ತಿತ್ತು. ಈಗ ಇಲ್ಲಿ ಫ್ಯಾಂಟಸಿ ಉಳಿದುಕೊಂಡಿತು. ಕತೆಯ ಚೌಕಟ್ಟಿನೊಳಗೆ ಯಾವುದೇ ಪಾತ್ರ ಏನನ್ನು ಹೇಳಿದರೂ, ಎದುರಿನ ಪಾತ್ರ ಅದನ್ನು ಒಪ್ಪಿಕೊಂಡಂತೆಯೇ ಓದುಗರಾಗಿ ನಾವು ಒಪ್ಪಿಕೊಳ್ಳುತ್ತೇವೆ. ಲಲಿತಾಗೆ ಗಂಗೆ ಬಂದು ಸೌಟು ಕೊಟ್ಟಿದ್ದು ನಿಜ ಮತ್ತು ಆಕೆ ಕೊಟ್ಟ ಎಚ್ಚರಿಕೆಯ ಶಾಪ ಕೂಡ ಇಲ್ಲಿ ಅಕ್ಷರಶಃ ನಿಜ – ಈಗ. ಹಾಗಾಗಿ, ಇವರ ಮೂಲ ಉದ್ದೇಶಕ್ಕೆ ತಾತ್ವಿಕತೆಯ ಲೇಪವಿದೆ ಎನ್ನುವುದು ಡಿರೈವ್ಡ್ ಡೈಮೆನ್ಷನ್ ಆಗಿ ಕಂಡರೆ ಅಚ್ಚರಿಯೇನಿಲ್ಲ.

ಪೂರ್ಣಿಮಾ ಅವರ ಕತೆಗಳಲ್ಲಿ ವೈಜ್ಞಾನಿಕ ಅದ್ಭುತಗಳು, ಸಾಧ್ಯತೆಗಳು ಕಾಣಿಸಿಕೊಳ್ಳುವಷ್ಟೇ ಸಹಜವಾಗಿ ತಾಯಿತಗಳು, ಮುಂದೇನಾಗುತ್ತದೆಂದು ಹೇಳಬಲ್ಲ ಸ್ವಾಮೀಜಿಗಳು, ಅಗತ್ಯ ಬಿದ್ದರೆ ವರ ಕೊಡಬಲ್ಲ ದೇವರುಗಳು ಕೂಡ ಬರುತ್ತಾರೆ. ಆದರೆ ಫ್ಯಾಂಟಸಿಗಳು ಅವರಲ್ಲಿ ರೂಪಕಗಳಾಗುವ, ಸಂಕೇತಗಳಾಗುವ ತಂತ್ರಗಾರಿಕೆಯಾಗುವುದಿಲ್ಲ, ರಂಜನೆಯ ನೆಲೆಯಲಷ್ಟೇ ನಿಲ್ಲುತ್ತವೆ. ಅದು ತಪ್ಪು, ಅವು ರೂಪಕಗಳಾಗಿದ್ದರೆ ಹೆಚ್ಚು ಚೆನ್ನ ಎಂದು ಸೂಚಿಸಲು ಈ ಮಾತನ್ನು ಹೇಳುತ್ತಿಲ್ಲ. ಅವುಗಳನ್ನು ಹಾಗೆ ನೋಡುವುದಕ್ಕೆ ಪೂರಕವಾದ ಅಂಶಗಳು ಕತೆಯೊಳಗೇ ಇಲ್ಲದಿದ್ದರೆ, ಹಾಗೆ ನೋಡಲು ಹೋಗುವುದು ಓದುಗನ ಹೆಚ್ಚುಗಾರಿಕೆಯಾಗುತ್ತದೆ ಎನ್ನುವುದು ಒಂದು. ಕತೆಯ ಚೌಕಟ್ಟಿನಲ್ಲಿ ಅವು ಹಾಗೆ ಆಗದೆಯೇ ಸಾಧಿಸುವ ಲಯದ ಕಡೆ ನೋಡಿ ಅದನ್ನೇಕೆ ಹಾಗೆಯೇ ಆಸ್ವಾದಿಸಬಾರದು ಎನ್ನುವುದು ಇನ್ನೊಂದು. ಇದೊಂದು ಪುಟ್ಟ ಜಿಜ್ಞಾಸೆ, ಇವರ ಕತೆಗಳನ್ನು ಓದುವಾಗ ನಮ್ಮನ್ನು ಕಾಡುತ್ತದೆ. ‘ಅದಲು ಬದಲು’ ಕತೆಯ ಕೊನೆಯ ಸಾಲಿನಲ್ಲಿ ಬಹುಶಃ ನಮಗೆ ಈ ಪ್ರಶ್ನೆಗೆ ಹೆಚ್ಚು ಸ್ಪಷ್ಟವಾದ ಉತ್ತರ ಸಿಗುತ್ತದೆ. ಚರಣ್ಯ ಬಳಿ ಕೊನೆಯದಾಗಿ ಅವಳೇಕೆ “ಇಲ್ಲ” ಎನ್ನುತ್ತಾಳೆ ಎನ್ನುವುದು ಪ್ರಶ್ನೆ, ಉತ್ತರವಲ್ಲ. ಆದರೆ ಈ ಪ್ರಶ್ನೆಯ ಉತ್ತರ ಪೂರ್ಣಿಮಾ ಮಾಳಿಗಿಮನಿಯವರ ಕಥನ ಪ್ರಾಶಸ್ತ್ಯದ ಹೊಳಹು ಕಾಣಿಸಬಲ್ಲ ಉತ್ತರ. ಇಲ್ಲಿ, ತಾನು ಬೇಸತ್ತ, ಬಿಟ್ಟು ಬಿಡಬೇಕೆಂದುಕೊಂಡ, ಯಾವ ಕೌನ್ಸೆಲಿಂಗ್, ಥೆರಪಿಗಳಿಗೂ ಬಗ್ಗದೆ ತನ್ನ ನಿರ್ಧಾರಕ್ಕೆ ಅಚಲವಾಗಿ ಅಂಟಿಕೊಂಡೇ ಉಳಿಯಬೇಕೆಂದುಕೊಂಡ ಆಕೆಯ ನಿರ್ಧಾರ ಬದಲಾಗುವುದಕ್ಕೆ ಮೂರು ಕಾರಣಗಳಿರಲು ಸಾಧ್ಯ. 1. ಅದು ಕಥೆಗೆ ಕೊಡಬಹುದಾದ ರಂಜಕ ತಿರುವು, ಕೊನೆಯ ಪಂಚ್. (ಇದು ಕಥೆಯ ಚೌಕಟ್ಟಿಗೆ ಹೊರಗಿನದ್ದು) 2. ತನಗೆ ಬೇಡವಾದ ವಸ್ತು ಇನ್ನೊಬ್ಬ ವ್ಯಕ್ತಿಗೆ, ಅದರಲ್ಲೂ ಕಾಂಪಿಟೀಟರ್ ಅನಿಸುವಂಥ ವ್ಯಕ್ತಿಗೆ at any cost ಬೇಕು ಅನಿಸುವಷ್ಟು ಅಮೂಲ್ಯವಾದದ್ದು ಎಂದಾದಲ್ಲಿ ತಾನದನ್ನು ಬಿಟ್ಟುಕೊಡಬಾರದು ಎಂಬ ಪ್ರಜ್ಞೆ ಇದ್ದಕ್ಕಿದ್ದಂತೆ ಜಾಗೃತವಾಗಿದ್ದು. 3. ತನ್ನ ಮೊದಲ ನಿಲುವಿನಲ್ಲೇನೋ ತಪ್ಪಿದೆ ಎಂಬ ಪ್ರಾಮಾಣಿಕ ಅರಿವು ಮೂಡಿದ್ದು. ಬೇರೆ ಬೇರೆ ಓದುಗರಿಗೆ ಕೇಂದ್ರ ಪಾತ್ರದ ಕೊನೆಯ ನಿಲುವು ಬೇರೆ ಬೇರೆ ರೀತಿಯಾಗಿ ಕಾಣಿಸಬಹುದು ಎಂಬ ಕಾರಣಕ್ಕೆ ಈ ಪ್ರಶ್ನೆಯನ್ನು ಉತ್ತರಿಸುವ ಗೋಜಿಗೆ ಹೋಗದೆ ಹಾಗೆಯೇ ಬಿಡುತ್ತೇನೆ.

‘ಒಂದು ಬೇಡಿಕೆ’ ಮತ್ತು ‘ಹಸಿದ ಹೊಟ್ಟೆ ಮತ್ತು ಶಿಷ್ಟಾಚಾರ’ ಎರಡೂ ಕತೆಗಳು ಇವತ್ತಿನ ಸಮಕಾಲೀನ ಜೀವನಶೈಲಿ, ಅದರ ಒತ್ತಡಗಳನ್ನು ಸಮೃದ್ಧ ವಿವರಗಳಲ್ಲಿ ಕಟ್ಟಿಕೊಡುವ ಸುಂದರವಾದ ಕಥಾನಕಗಳು. ‘ಒಂದು ಬೇಡಿಕೆ’ ಕತೆಯನ್ನು ಗಮನಿಸಿದರೆ ಒಂದು ತಲೆಮಾರಿನ ಪ್ರೇಮ, ಭಕ್ತಿ, ಧಾರ್ಮಿಕ ನಿಲುವುಗಳು ಇನ್ನೊಂದು ತಲೆಮಾರಿನ ಪ್ರೇಮ, ಲಿವಿಂಗ್ ಟುಗೆದರ್, rational ಅನಿಸುವಾಗಲೂ ಬಾಲಿಶತನ ತೋರುವ ನಿಲುವುಗಳು ಇಲ್ಲಿನ ತಾಕಲಾಟ. ಒಂದು ತಲೆಮಾರಿನ ಧಾರ್ಮಿಕತೆ ಮತ್ತು ಮೌಢ್ಯ ಇನ್ನೊಂದು ತಲೆಮಾರಿನಲ್ಲಿ ಸ್ವಲ್ಪ ಬೇರೆ ತರದ ಮುಖವಾಡ ಹೊತ್ತು ಮುಂದುವರಿಯುತ್ತಿರುವಂತೆ ಕಾಣುತ್ತದೆ ಇಲ್ಲಿ. ಅದೇ ರೀತಿ ‘ಹಸಿದ ಹೊಟ್ಟೆ ಮತ್ತು ಶಿಷ್ಟಾಚಾರ’ ಕತೆ ಕೂಡಾ ವಾಚ್ಯವಾಗಿಯೇ ಕಾಲ್‌ಸೆಂಟರ್‌ಗಳು ಕೊಡುವ ಕಿರಿಕಿರಿ ಮತ್ತು ಪುರುಸೊತ್ತಿಲ್ಲದ ಮನುಷ್ಯನ ಜೀವನಶೈಲಿಯಿಂದಾಗಿ ಸದಾ ಬ್ಯುಸೀಯಾಗಿರುವ, ಮಾತಿಗೆ, ಲೋಕಾಭಿರಾಮಕ್ಕೆ ಪುರುಸೊತ್ತಿಲ್ಲದವನಾಗಿ ಬದಲಾಗಿರುವ ಮನುಷ್ಯನ ಚಿತ್ರ ಕಟ್ಟಿಕೊಡುತ್ತದೆ. ಆದರೆ, ಎರಡೂ ಕತೆಗಳು ವಸ್ತುಸ್ಥಿತಿಯನ್ನು ನಿರೂಪಿಸುವುದರಾಚೆಗೆ ಕೈಚಾಚುವುದಿಲ್ಲ ಎನ್ನುವುದು ಕೂಡ ನಿಜ. ಅಂದರೆ, ಅಬ್ರಪ್ಟ್ ಆಗಿ ಮುಗಿದು ಬಿಡುವ ಎರಡೂ ಕತೆಗಳು ಮನುಷ್ಯನ ದೈನಂದಿನದ ದುರಂತದಾಚೆ ಅವನನ್ನು ನಡೆಸುವುದರಲ್ಲಿ ಆಸಕ್ತಿ ಹೊಂದಿಲ್ಲ.

‘ಮಾಮರವೆಲ್ಲೋ..’ ಮತ್ತು ‘ನಮ್ಮಿಬ್ಬರ ಕಥೆ ಒಂದೇ’ ಎರಡೂ ನಿರೂಪಣೆಯ ಸೊಗಸಿನಿಂದಾಗಿಯೇ ಇಷ್ಟವಾಗುವ ಕತೆಗಳು. ‘ನೆನಪಿನ ದೋಣಿಯಲೀ’ ಹೆಚ್ಚು ಮಹತ್ವಾಕಾಂಕ್ಷಿಯಾದ ಕತೆಯಾಗಬಹುದಾದ ಸಾಧ್ಯತೆಯನ್ನು ಹೊಂದಿರುವ ಕತೆ. ಇಲ್ಲಿ, ಮೆದುಳಿನ ಮೈಂಡ್ ಮ್ಯಾಪಿಂಗ್ ಮತ್ತು ಮೆದುಳಿನಿಂದ ಯಶಸ್ವಿಯಾಗಿ ನಿರ್ದಿಷ್ಟ ನೆನಪುಗಳನ್ನು ಡಿಲಿಟ್ ಮಾಡುವ ತಂತ್ರವೊಂದನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ವ್ಯಸ್ತನಾಗಿರುವ ಒಬ್ಬ ಸಂಶೋಧಕ ಮತ್ತು ಅವನೆದುರಿನ ಸವಾಲಾಗಿ MEMORY ಎನ್ನುವ, ಇನ್ನೂ ಮನುಷ್ಯನಿಗೆ ಸರಿಯಾಗಿ ಅರ್ಥವಾಗದೇ ಇರುವ ಒಂದು ಚೋದ್ಯವಿದೆ. ಇಲ್ಲಿ ಒಂದು ನೆನಪು ಇನ್ನೊಂದು ನೆನಪಿನ ಜೊತೆ ಕೊಂಡಿ ಬೆಸೆದುಕೊಂಡಿರುವುದಿಲ್ಲ, ಬದಲಿಗೆ ಪ್ರತಿಯೊಂದು ನೆನಪೂ ಸ್ವತಂತ್ರ ಅಸ್ತಿತ್ವವುಳ್ಳದ್ದು ಎನ್ನುವಂಥ ಒಂದು presumption ಕೆಲಸ ಮಾಡುತ್ತಿರುತ್ತದೆ. ಕತೆಯ ಕೊನೆಯಲ್ಲಿ ಅದು ತಪ್ಪು ಪರಿಕಲ್ಪನೆ ಎನ್ನುವುದು ತಿಳಿದರೂ, ಕತೆಯ ಒಟ್ಟಾರೆ ಪ್ರಯಾಣದ ಗುರಿ ಕೊಂಚ ಅಸ್ಪಷ್ಟವಾಗಿಯೇ ಉಳಿಯುತ್ತದೆ. ಏಕೆಂದರೆ, ಪ್ರಣವ್, ನಿಖಿಲ್, ಸೌಭಾಗ್ಯ ಮತ್ತು ನಿಖಿಲನ ತಂದೆ – ಈ ನಾಲ್ಕು ಪಾತ್ರಗಳ ನಡುವಿನ ತಾಕಲಾಟಗಳು ನೆನಪು ಅಥವಾ ಸ್ಮೃತಿಗೆ ಸಂಬಂಧಿಸಿದ್ದಾಗಿ ನಿಲ್ಲದೆ, ಆ ನಿಟ್ಟಿನಲ್ಲಿ ಮುಂದುವರಿಯದೆ, ಸೌಭಾಗ್ಯಳಿಗೆ ಹುಟ್ಟಿದ ಮಗು (ಆಕೆಯ ಗಂಡ ತೀರಿಕೊಂಡ ನಂತರ ಹುಟ್ಟಿದ ಮಗು?) ನಿಜಕ್ಕೂ ಯಾರದ್ದು ಎನ್ನುವ ಕಡೆಯೇ ಕೇಂದ್ರೀಕರಿಸಲ್ಪಡುವುದು. ಈ ಅಂಶ ಕಥಾನಕದ ನಡೆಗೆ ಎಂತಹ ಕೌತುಕದ ವೇಗವನ್ನು ದೊರಕಿಸಿಕೊಟ್ಟರೂ ಅದು ಒಟ್ಟು ಕತೆಯ ಗಮ್ಯವಾಗಿ ಯಶಸ್ವಿಯಾಗುವ ಗುರುತ್ವವನ್ನು ಹೊಂದಿಲ್ಲ.

ಒಂದು ಕತೆಗೆ ಮಲ್ಟಿಲೇಯರ್ಸ್ ಇರುವ ಹಾಗೆ ಅದನ್ನು ಬೆಳೆಸುವುದು ಒಳ್ಳೆಯದೇ, ಅಂಥ ಲೀಪ್‌ಗಾಗಿ ಪ್ರತಿಯೊಬ್ಬ ಕತೆಗಾರನೂ ಪ್ರಯತ್ನಿಸುತ್ತಲೇ ಇರುತ್ತಾನೆ ಎನ್ನುವುದು ನಿಜವೇ. ಆದರೆ ಅದನ್ನು ಪೂರ್ಣಿಮಾ ಮಾಳಿಗಿಮನಿಯವರು ತಮ್ಮ ಹೆಚ್ಚಿನ ಎಲ್ಲಾ ಕತೆಗಳಲ್ಲಿಯೂ ಮಾಡುತ್ತ ಬಂದಿರುವ ರೀತಿ ತೀರ ಹೊಸತನದ್ದು, ಸ್ವಲ್ಪ ದಾರಿ ತಪ್ಪಿಸುವ ತೀವ್ರತೆಯುಳ್ಳದ್ದು. ಇದನ್ನು ಗಮನಿಸಿ ನೋಡುವ ಅಗತ್ಯವಿದೆ. ಈ ತಂತ್ರ, ಹಾಗೆಂದು ಅದನ್ನು ಕರೆಯಬಹುದಾದಲ್ಲಿ ಹೆಚ್ಚು ಪರಿಣಾಮಕಾರಿಯೇ ಅಥವಾ ನಾವು ಈ ತನಕ ಗಮನಿಸುತ್ತ ಬಂದ, ಏಕಸೂತ್ರದ ನೇಯ್ಗೆಯಲ್ಲಿ ಹೆಚ್ಚು ಸ್ಪಷ್ಟವಾಗಿ ಬಹುಮುಖದ ಆಯಾಮಗಳನ್ನು ತೆರೆಯುತ್ತಿದ್ದ ಮತ್ತು ಸ್ಪಷ್ಟವಾಗಿ ತಂತ್ರವೇ ಆಗಿದ್ದ ಕ್ರಮ ಹೆಚ್ಚು ಪರಿಣಾಮಕಾರಿಯೇ ಎನ್ನುವುದು ಕಾಡುವ ಜಿಜ್ಞಾಸೆ. ಕೊನೆಗೂ ಒಂದು ತಂತ್ರ ಕೂಡ ಕಲೆಯಾಗದೇ ಹೋದರೆ ಅದು ವ್ಯರ್ಥಪ್ರಯಾಸವಾಗುತ್ತದೆ ಎನ್ನುವ ಸತ್ಯವನ್ನು ಇಲ್ಲಿ ಮರೆಯಬಾರದು. ಹಾಗಾಗಿ ಈ ಜಿಜ್ಞಾಸೆಗೆ ಒಂದು ಉತ್ತರವಿಲ್ಲ, ಹಲವು ಉತ್ತರಗಳೇ ಅದರ ಯಶಸ್ಸನ್ನು ನಿರ್ಧರಿಸಬೇಕಾಗುತ್ತದೆ. ಏಕೆಂದರೆ, ಕೊನೆಗೂ ಒಂದು ಕತೆಯಲ್ಲಿ ಕತೆಗಾರನ ಲೇಖನಿ ಮೊದಲ ಅರ್ಧವೃತ್ತವನ್ನಷ್ಟೇ ಬರೆಯುತ್ತದೆ. ಆ ವೃತ್ತದ ಉತ್ತರಾರ್ಧ ಪೂರ್ತಿಗೊಳ್ಳುವುದು ಓದುಗನ ಮನಸ್ಸಿನಲ್ಲಿ, ಪ್ರತಿಸ್ಪಂದನದಲ್ಲಿ.

‍ಲೇಖಕರು Admin MM

August 21, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: