ಹೊರಬರುತ್ತಿದೆ ‘ಡಾ ರಾಜಕುಮಾರ್: ನಾಡು ನುಡಿಯ ಅಸ್ಮಿತೆ’

ಡಾ ರಾಜಕುಮಾರ್ ಅವರ ಕುರಿತು ನಡೆಸಿದ ರಾಷ್ಟ್ರೀಯ ಉತ್ಸವದಲ್ಲಿ ಮಂಡನೆಯಾದ ಪ್ರಬಂಧಗಳನ್ನು ಒಳಗೊಂಡ ಕೃತಿ ಈ ಶನಿವಾರ, 30 ಡಿಸೆಂಬರ್ ಬಿಡುಗಡೆಯಾಗಲಿದೆ. ಡಾ ಜಿ ವಿ ಆನಂದಮೂರ್ತಿ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ ‘ಪ್ರೀತಿ ಪುಸ್ತಕ ಪ್ರಕಾಶನ’ ಇದನ್ನು ಪ್ರಕಟಿಸಿದೆ.

‘ಅವಧಿ’ ಓದುಗರಿಗಾಗಿ ಸಂಪಾದಕರ ಮಾತುಗಳನ್ನು ಇಲ್ಲಿ ನೀಡಲಾಗಿದೆ-

ಸಂಪಾದಕನ ಮಾತು
ಡಾ. ಜಿ ವಿ ಆನಂದಮೂರ್ತಿ

ಡಾ. ರಾಜಕುಮಾರ್ ಅವರನ್ನು ಕುರಿತು ದೊಡ್ಡಹುಲ್ಲೂರು ರುಕ್ಕೋಜಿ ಹೊರತಂದಿರುವ ‘ರಾಜಕುಮಾರ್ ಸಮಗ್ರ ಚರಿತ್ರೆ’ಯ ಎರಡು ಹೆಬ್ಬೊತ್ತಿಗೆಗಳು ಇಂದು ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಇತಿಹಾಸವಾಗಿವೆ. ರಾಜಕುಮಾರ್ ಅವರ ವ್ಯಕ್ತಿತ್ವ ಮತ್ತು ಸಿನಿಮಾ ರಂಗಕ್ಕೆ ಹಾಗೂ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ ಅವರು ನೀಡಿರುವ ಕೊಡುಗೆಗಳನ್ನು ಕುರಿತು ಹೇಳಿರುವ ಈ ಬೃಹತ್ ಸಂಪುಟಗಳು, ನೂರು ವರ್ಷ ತುಂಬಿರುವ ಭಾರತೀಯ ಚಿತ್ರರಂಗಕ್ಕೆ ಕನ್ನಡ ಚಲನಚಿತ್ರ ರಂಗ ನೀಡಿದ ಅಪೂರ್ವ ಕೃತಿಯಾಗಿವೆ.

ಕನ್ನಡ ಜನಸಮುದಾಯದ ಆರಾಧನೆಯ ವ್ಯಕ್ತಿಯಾಗಿರುವ ಡಾ. ರಾಜಕುಮಾರ್ ಅವರ ಮುಖ್ಯ ಸಾಧನೆ ಎಂದರೆ, ಅವರು ತಮ್ಮ ಕೃತಿಗಳ ಮೂಲಕ ಬಹುಸಂಸ್ಕೃತಿವಾದವನ್ನು ಎತ್ತಿಹಿಡಿದರು. ಈ ಮೂಲಕ ಏಕ ಸಾಮತ್ಯೆ ಸಂಸ್ಕೃತಿಯ ಹಿಡಿತ ಸಡಿಲಗೊಳ್ಳುವಂತೆ ಮಾಡಿ, ಬಹುಸಂಸ್ಕೃತಿ ಮತ್ತು ಬಹುಸಂಗತಿಗಳ ಮೌಲ್ಯಗಳು ವರ್ಧಿಸುವಂತೆ ನೋಡಿಕೊಂಡರು. ಇದು ರಾಜಕುಮಾರ್ ಅವರ ಸಮಗ್ರ ಸಿನಿಮಾಗಳಲ್ಲಿ ನೇಯ್ಗೆಗೊಂಡಿರುವ ಸಾಂಸ್ಕೃತಿಕ ಸಮೀಕರಣ. ಈ ತಾತ್ವಿಕ ಹಿನ್ನೆಲೆಯಲ್ಲಿ ಕುವೆಂಪು ಸಾಹಿತ್ಯಕವಾಗಿ ಸಾಧಿಸಿದ್ದನ್ನು ರಾಜಕುಮಾರ್ ಚಲನಚಿತ್ರರಂಗದಲ್ಲಿ ಸಾಧಿಸಿದರು. ‘.. ಕರ್ನಾಟಕದ ಗರ್ಭಗುಡಿಯ ಮೂರ್ತಿ ಮತ್ತು ಉತ್ಸವ ಮೂರ್ತಿಗಳಾಗಿ ಕುವೆಂಪು ಮತ್ತು ರಾಜಕುಮಾರ್ ಇದ್ದಾರೆ. ಕುವೆಂಪು ಗರ್ಭಗುಡಿಯ ಮೂರ್ತಿಯಾಗಿ, ರಾಜಕುಮಾರ್ ಅವರು ಉತ್ಸವ ಮೂರ್ತಿಯಾಗಿ ನಾಡಿನಲ್ಲಿ ಮೆರೆದರು. ಏಕೆಂದರೆ, ಇವರಿಬ್ಬರೂ ಕರ್ನಾಟಕದಲ್ಲಿ ನಡೆದ, ನಡೆಯುತ್ತಿರುವ, ನಡೆಯಬೇಕಾದ ಬದಲಾವಣೆಗಳ ಕನಸು ಕಂಡರು. ದರ್ಶನವನ್ನು ಕಟ್ಟಿದರು’ ಎಂದು ಈ ಸಂಕಲನದಲ್ಲಿರುವ ವಿಮರ್ಶಕ ಹೆಚ್ ಎಸ್ ರಾಘವೇಂದ್ರ ರಾವ್ ಅವರು ಹೇಳಿರುವ ಮಾತು ಹೆಚ್ಚು ಗಮನಾರ್ಹವಾದದ್ದು (‘ನುಡಿಯ ಅಸ್ಮಿತೆ ಡಾ. ರಾಜಕುಮಾರ್’). ಹೀಗಾಗಿಯೇ ಕುವೆಂಪು ಮತ್ತು ರಾಜಕುಮಾರ್ ಇಪ್ಪತ್ತನೇ ಶತಮಾನದ ಕನ್ನಡದ ಪ್ರಜ್ಞೆಯನ್ನು ಆವರಿಸಿಕೊಂಡ ಸಾಂಸ್ಕೃತಿಕ ಅಸ್ಮಿತೆಗಳು.

ರಾಜಕುಮಾರ್ ಅವರಲ್ಲಿದ್ದ ಔದಾರ್ಯ, ಪ್ರೀತಿ, ತಮಗೆ ತೊಂದರೆ ಕೊಟ್ಟವರನ್ನೂ ಮನ್ನಿಸುವ ಕ್ಷಮಾ ಗುಣ, ಕಲೆಯ ಮುಂದೆ ನಾನಿನ್ನೂ ಅತಿ ಚಿಕ್ಕವನು ಎಂದು ನಮ್ರತೆಯಿಂದ ಹೇಳುವ ನಿಷ್ಕಳಂಕವಾದ ಅವರ ಮಾತುಗಳು, ನಾಡು ನುಡಿಯ ಬಗ್ಗೆ ಇದ್ದ ಅದಮ್ಯ ಮೋಹ, ತಮ್ಮ ಒಡನಾಡಿಗಳ ಬಗ್ಗೆ ಇದ್ದ ಗೌರವ ಮತ್ತು ಕಾಳಜಿ, ತನ್ನ ಹುಟ್ಟಿದೂರಿನ ಬಗೆಗಿನ ಆಳವಾದ ಸೆಳೆತ ಹೀಗೆ ಅವರ ವ್ಯಕ್ತಿತ್ವಕ್ಕೆ ಸಂಯೋಜನೆಗೊಂಡ ಸಂಗೀತದ ಮಾಧುರ್ಯವಿತ್ತು. ಇದರಿಂದಾಗಿಯೇ ರಾಜಕುಮಾರ್ ಅವರು ಕನ್ನಡ ಜನತೆಯ ನಿತ್ಯ ಸ್ಮರಣೆಯಲ್ಲಿ ದೈವಿಕ ಗುಣಗಳನ್ನು ಪಡೆದ ಆದರ್ಶ ವ್ಯಕ್ತಿಯಾದರು. ಇವುಗಳನ್ನೇ ಅಲ್ಲವೇ ನಾವು ರಾಜಕುಮಾರ್ ಅವರಿಂದ ಕಲಿಯಬೇಕಾದದ್ದು! ‘ಕನ್ನಡ ಎಂದರೆ ರಾಜಕುಮಾರ್ ಎಂಬ ನಂಬಿಕೆ ಜನಸಾಮಾನ್ಯರ ಮಟ್ಟದಲ್ಲಿ ನೆಲೆಯೂರಿದ್ದನ್ನೂ ನಾನು ಕಂಡಿದ್ದೇನೆ. ಅಷ್ಟರ ಮಟ್ಟಿಗೆ ರಾಜಕುಮಾರ್ ಕನ್ನಡ ರಾಜ್ಯದ ಏಕೀಕರಣ ಸಂದರ್ಭದಲ್ಲಿ ಹುಟ್ಟಿಕೊಂಡ ಕನ್ನಡ ಭಾಷೆ-ಸಂಸ್ಕೃತಿಗಳನ್ನು ಕುರಿತ ಹೊಸ ಎಚ್ಚರ ಮತ್ತು ನವೋತ್ಸಾಹಗಳ ವಾಹಕರೂ, ಅದಕ್ಕೊಂದು ಸಾಮಾಜಿಕ ಅಭಿವ್ಯಕ್ತಿಯನ್ನು ನೀಡಿ ಸಾಧಕರೂ ಆದರು. .. ರಾಜಕುಮಾರ್ ಅವರ ಬಾಯಲ್ಲಿ ಹೊಮ್ಮುತ್ತಿದ್ದ ಕನ್ನಡ ತನ್ನೆಲ್ಲ ಶಕ್ತಿ-ಸೊಬಗು ಮತ್ತು ನಿಖರ ಬಾಗು ಬಳುಕುಗಳೊಂದಿಗೆ ಒಂದು ಹೊಸ ಶೋಭೆಯನ್ನು ಪಡೆದುದು ಕನ್ನಡದ ಒಂದು ಭಾಗ್ಯವೇ ಆಗಿತ್ತು. .. ರಾಜಕುಮಾರ್ ಅವರನ್ನು ಬಿಟ್ಟು ಕನ್ನಡ ಚಿತ್ರರಂಗವನ್ನು ಕಲ್ಪಿಸಿಕೊಳ್ಳುಲು ಸಾಧ್ಯವೇ? ಸದ್ಯಕ್ಕಂತೂ ಸಾಧ್ಯವಿಲ್ಲ ಎಂಬ ಮಾತನ್ನು ಇಲ್ಲಿ ಹೇಳಿಬಿಡಬೇಕು’ ಎಂದು ಹೇಳಿರುವ ಡಿ ಎಸ್ ನಾಗಭೂಷಣ (‘ರಾಜಕುಮಾರ್ ಪುರಾಣ’) ಅವರ ಮಾತುಗಳು ರಾಜಕುಮಾರ್ ಅವರ ಸಮಗ್ರ ವ್ಯಕ್ತಿತ್ವವನ್ನು ಹಾಗೂ ಕನ್ನಡ ಜಗತ್ತಿಗೆ ಅವರ ಸಾಂಸ್ಕೃತಿಕ ಕೊಡುಗೆಗಳನ್ನು ಸಮರ್ಥವಾಗಿ ಹೇಳಿವೆ.

ಇದುವರೆಗೂ ಅಲ್ಲೊಂದು, ಇಲ್ಲೊಂದರAತೆ ರಾಜಕುಮಾರ್ ಅವರನ್ನು ಕುರಿತು ಪ್ರಕಟವಾಗಿದ್ದ ಹಲವಾರು ಕೃತಿಗಳು ಹಾಗೂ ಬಿಡಿ ಬರೆಹಗಳನ್ನು ಹೊರತುಪಡಿಸಿದರೆ, ರಾಜಕುಮಾರ್ ಅವರನ್ನು ಕುರಿತ ಗಂಭೀರವಾದ ಚರ್ಚೆ, ವಿಚಾರ ಗೋಷ್ಠಿಗಳು ನಡೆದಿರಲಿಲ್ಲ! ಅದರಲ್ಲೂ ಕನ್ನಡ ಚಲನ ಚಿತ್ರರಂಗವಾಗಲಿ ಅಥವಾ ಕನ್ನಡ ಸಾಹಿತ್ಯಕ ವಲಯದ ಲೇಖಕರಾಗಲಿ, ವಿಮರ್ಶಕರಾಗಲಿ ರಾಜಕುಮಾರ್ ಅವರ ಸಿನಿಮಾ ಮತ್ತು ವ್ಯಕ್ತಿತ್ವವನ್ನು ಕುರಿತು ಮನಬಿಚ್ಚಿ ಮಾತನಾಡಿದ್ದು, ಚರ್ಚಿಸಿದ್ದು ಅತಿ ವಿರಳದ ಸಂಗತಿಯಾಗಿತ್ತು. ಈ ಕೊರೆತೆಯನ್ನು ನೀಗಿಸಲೋ ಎಂಬAತೆ, ಡಾ. ರಾಜಕುಮಾರ್ ಸಮಗ್ರ ಚರಿತ್ರೆಯ ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ ಮತ್ತು ಅವರ ತಂಡದವರು ಹಾಗೂ ಬೆಂಗಳೂರಿನ ಪ್ರೀತಿ ಪುಸ್ತಕ ಪ್ರಕಾಶನ ಜಂಟಿಯಾಗಿ ಡಿಸೆಂಬರ್ ೨, ೩ ಮತ್ತು ೪, ೨೦೧೬ರಂದು ಮೂರು ದಿನಗಳ ಕಾಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಿದ ಡಾ. ರಾಜಕುಮಾರ್ ಅವರನ್ನು ಕುರಿತ ರಾಷ್ಟ್ರೀಯ ಉತ್ಸವ ಕನ್ನಡದ ಸಂದರ್ಭಕ್ಕೆ ಚಾರಿತ್ರಿಕ ದಾಖಲೆಯಂತಾಯಿತು.

ನಮ್ಮ ಸಮಾಜದ ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರೇ ರಾಜಕುಮಾರ್ ಅವರ ನಿಜವಾದ ಅಭಿಮಾನಿಗಳು ಎಂದು ಇದುವರೆಗೂ ಭಾವಿಸಲಾಗಿತ್ತು! ಆದರೆ ರಾಜಕುಮಾರ್ ಸಮಗ್ರ ಸಂಪುಟಗಳು ಈ ನಂಬಿಕೆಯನ್ನು ಸುಳ್ಳುಮಾಡಿದವು. ರಾಜಕುಮಾರ್ ರಾಷ್ಟ್ರೀಯ ಉತ್ಸವದಲ್ಲಿ ಕನ್ನಡ ಸಾಹಿತ್ಯ ವಲಯದ ಲೇಖಕರು, ವಿಮರ್ಶಕರು, ಸಂಶೋಧಕರು, ರಂಗಭೂಮಿ ಮತ್ತು ಸಿನಿಮಾ ರಂಗದ ಗಣ್ಯರು, ಸಂಗೀತಗಾರರು, ಚಿತ್ರಕಲಾವಿದರು, ಸಿನಿಮಾ ನಿರ್ದೇಶಕರು ಹೀಗೆ ಎಲ್ಲರೂ ಮೊದಲಬಾರಿಗೆ ರಾಜಕುಮಾರ್ ಅವರನ್ನು ಕುರಿತು ಗೌರವಾರ್ಹವಾದ, ಹೆಚ್ಚು ಒಳನೋಟಗಳಿಂದ ಮಾತನಾಡಿದರು. ಇವರೆಲ್ಲರೂ ಒಗ್ಗೂಡಿ ರಾಜಕುಮಾರ್ ಅವರ ಬಗ್ಗೆ ಕನ್ನಡ ನಾಡಿನ ವಿಶಾಲವಾದ ಸಾಂಸ್ಕೃತಿಕ ಮತ್ತು ಕಲೆಯ ಹಿನ್ನೆಲೆಯಲ್ಲಿ ನಿರ್ಲಕ್ಷಿಸಲು ಸಾಧ್ಯವಾಗದ ಇನ್ನೊಂದು ಪುರಾಣವನ್ನು ವೈಚಾರಿಕ ಮತ್ತು ಮಾನವೀಯ ನೆಲೆಯಲ್ಲಿ ಮರುಸೃಷ್ಟಿಸಿದರು. ನಾನೂ ಕೂಡ ಈ ರಾಜಕುಮಾರ್ ರಾಷ್ಟ್ರೀಯ ಉತ್ಸವದಲ್ಲಿ ಅರ್ಹ ಸದಸ್ಯನಾಗಿ ಪಾಲ್ಗೊಂಡಿದ್ದೆ. ಈ ಎಲ್ಲ ಚಿಂತಕರು ಮತ್ತು ವಿಮರ್ಶಕರ ಬರೆಹಗಳು ದಾಖಲೆಯಾಗಿ ನಮ್ಮಲ್ಲಿ ಉಳಿದಿದ್ದವು. ಒಂದು ಕೃತಿಯ ರೂಪದಲ್ಲಿ ಈ ಬರೆಹಗಳೆಲ್ಲ ಕನ್ನಡ ಓದುಗರಿಗೆ ಮತ್ತು ಸಂಶೋಧಕರಿಗೆ ದೊರೆಯುವಂತಾಗಲಿ ಎಂಬ ಆಶಯ ನಮ್ಮದಾಗಿತ್ತು. ‘ರಾಜಕುಮಾರ್ ರಾಷ್ಟ್ರೀಯ ಉತ್ಸವ’ ನಡೆದು ಸುಮಾರು ಆರು ವರ್ಷಗಳ ನಂತರ ಹತ್ತಾರು ಎಡರು-ತೊಡರುಗಳನ್ನು ದಾಟಿಕೊಂಡು ಇದೀಗ ಹೊರಬರುತ್ತಿರುವುದು ಸಂತೋಷದ ಸಂಗತಿಯಾಗಿದೆ. ಈ ಸಮ್ಮೇಳನದಲ್ಲಿ ಮಂಡಿತವಾದ ಇಂಗ್ಲಿಶ್ ಮತ್ತು ಕನ್ನಡ ಪ್ರಬಂಧಗಳನ್ನು, ಲೇಖನದ ಸ್ವರೂಪಕ್ಕೆ ಇಳಿಸಿದ ಕೆಲವು ಮುಖ್ಯ ಚಿಂತಕರ ಭಾಷಣಗಳನ್ನು ಈ ಕೃತಿ ಒಳಗೊಂಡಿದೆ. ಅಧ್ಯಯನದ ಹಿನ್ನೆಲೆಯಲ್ಲಿ ಈ ಕೃತಿ ಮೂರು ಅಧ್ಯಾಯಗಳನ್ನು ಒಳಗೊಂಡಿದೆ. ಮೊದಲ ಅಧ್ಯಾಯದಲ್ಲಿ ರಾಜಕುಮಾರ್ ವ್ಯಕ್ತಿತ್ವವನ್ನು ಕರ್ನಾಟಕದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿರುವ ಬರೆಹಗಳಿವೆ. ಎರಡನೇ ಅಧ್ಯಾಯದಲ್ಲಿ ‘ರಾಜಕುಮಾರ್ ಸಮಗ್ರ ಚರಿತ್ರೆ’ಯ ಎರಡು ಸಂಪುಟಗಳನ್ನು ಕುರಿತ ವಿಮರ್ಶಾ ಬರೆಹಗಳಿವೆ. ಕೊನೆಯ ಅಧ್ಯಾಯದಲ್ಲಿ ಎಂಬತ್ತರ ದಶಕದಲ್ಲಿ ನಡೆಸಿದ್ದ ರಾಜಕುಮಾರ್ ಅವರ ಅಪರೂಪದ ಸಂದರ್ಶನವಿದೆ.

ರಾಜಕುಮಾರ್ ಅಂದರೆ ‘ಕನ್ನಡದ ಅಸ್ಮಿತೆ’ ಎಂದು ಹೇಳಿರುವ ಮಾತುಗಳು ಈ ಸಂಕಲನದ ಬಹುಪಾಲು ಲೇಖಕರಲ್ಲಿ ಮತ್ತೆ, ಮತ್ತೆ ಸಾಂಸ್ಕೃತಿಕ ರೂಪಕವಾಗಿ ಪ್ರಕಟಗೊಂಡಿದೆ. ‘I realize that my own analysis of Rajkumar and kannada identity hinges upon a narrative of modern Karnataka’ (Rajendra chenni). ‘Rajkumar as a cultural symbol goes far beyond the confines of cinema for he represented the dream, desires, aspirations and wishes of everybody in society across distinctions of caste, class and religion’ (Manu Chakravarthi). ಆದ್ದರಿಂದಲೇ ರಾಜಕುಮಾರ್ ಅವರ ಪ್ರತಿಭೆ ಮತ್ತು ವ್ಯಕ್ತಿತ್ವವನ್ನು ಪ್ರತಿನಿಧಿಸುವ ‘ರಾಜಕುಮಾರ್ ಕನ್ನಡದ ಅಸ್ಮಿತೆ’ ಎಂಬ ಶಕ್ತಿಶಾಲಿಯಾದ ರೂಪಕವನ್ನೇ ‘ಪ್ರೀತಿ ಪುಸ್ತಕ ಪ್ರಕಾಶನ’ ಬಳಗ ಈ ಕೃತಿಯ ಶೀರ್ಷಿಕೆಯಾಗಿ ಆಯ್ಕೆಮಾಡಿಕೊಂಡಿತು. ‘ನಾಡು ಒಬ್ಬ ನಾಯಕನನ್ನು ಕಟ್ಟುತ್ತೆ. ನಾಯಕ ನಾಡನ್ನು ಕಟ್ಟುತ್ತಾನೆ. ಈ ನಾಡು ಮತ್ತು ನಾಯಕರು ಪರಸ್ಪರ ಕಟ್ಟಿಕೊಳ್ಳುವ ಕೆಲಸ ಇದೆಯೆಲ್ಲಾ ಅದನ್ನ ನಾವು ರಾಜಕುಮಾರ್ ಅವರ ಬದುಕಿನಲ್ಲಿ ಮತ್ತು ಸಾಧನೆಯಲ್ಲಿ ಕೂಡಾ ನೋಡಬಹುದು’ ಎಚ್ ಎಸ್ ರಾಘವೇಂದ್ರ ರಾವ್ (ನುಡಿಯ ಅಸ್ಮಿತೆ ಡಾ. ರಾಜಕುಮಾರ್) ಅವರ ಈ ಮಾತುಗಳು ಇವುಗಳಿಗೆ ಹೆಚ್ಚು ಪೂರಕ ಎಂದು ನಾನು ಭಾವಿಸುತ್ತೇನೆ.

ಈ ಸಂಕಲನದಲ್ಲಿರುವ ಎಲ್ಲ ಚಿಂತಕರ ಬರೆಹಗಳನ್ನು ಓದಿದರೆ, ರಾಜಕುಮಾರ್ ಅವರು ಕುವೆಂಪು ಅವರಂತೆ ಯಾವ ಸಂದಿಗ್ಧತೆಯೂ ಇಲ್ಲದೆ ದೃಢ ನಿಶ್ಚಯದಿಂದ ಕನ್ನಡದ ಮತ್ತು ಮಾನವೀಯತೆಯ ಪರವಾಗಿದ್ದರು ಎನ್ನುವುದನ್ನು ಇಲ್ಲಿನ ಬರಹಗಳು ಏಕ ಕಂಠದಿಂದ ಹೇಳುತ್ತವೆ. ‘ರಾಜ್ ಒಬ್ಬ ಅಹಿಂಸಾತ್ಮಕ ನಟ. ಅಶೋಕ ಚಕ್ರವರ್ತಿ ದೇಶದ ಮಹಾನ್ ಚಕ್ರವರ್ತಿ. ಆತ ಬುದ್ಧನ ಅಹಿಂಸೆಯ ಬೆಳಗನ್ನು ಬಿತ್ತಿದ. ಡಾ. ರಾಜ್ ಬಡವರ ಕನಸಿನ ಗಾಂಧೀಜಿಯ ಕನಸಿನ ಸರಳತೆಯ ಸರ್ವೋದಯದ ನಟನೆಯನ್ನು ಅಧ್ಯಾತ್ಮದ ಎತ್ತರದಲ್ಲಿ ಕನ್ನಡಿಗರಿಗೆ ಮುಟ್ಟಿಸಿದರು (ಮೊಗಳ್ಳಿ ಗಣೇಶ್). ಕನ್ನಡದ ರಾಜಕುಮಾರ್ ಅವರ ವ್ಯಕ್ತಿತ್ವದಲ್ಲಿ ಕೇವಲ ನಟನೆಯಷ್ಟೇ ಸ್ಥಾನಪಡೆದಿಲ್ಲ, ಅದಕ್ಕೂ ಮಿಗಿಲಾಗಿ ಎಲ್ಲರನ್ನೂ ಆಳವಾಗಿ ತಾಕುವಂತಹ ಗುಣಗಳಾದ ಜಾತ್ಯತೀತತೆ ಹಾಗೂ ಪರವಶಗೊಳಿಸುವ ಮಾನವೀಯತೆಯ ಗುಣಗಳು ತುಂಬಿದ್ದವು ಎನ್ನುವುದನ್ನು ಸಾಬೀತುಗೊಳಿಸುತ್ತವೆ. ಹಾಗೆಯೇ ಕನ್ನಡ ಭಾಷೆಯ ಬಗ್ಗೆ ಅವರಿಗಿದ್ದ ಬದ್ಧತೆ ಎಲ್ಲರನ್ನೂ ಸೆಳೆದುಕೊಂಡಿತ್ತು. ಇಲ್ಲಿಯೇ ಕನ್ನಡದ ಖ್ಯಾತ ಚಿಂತಕ ಡಾ. ಸಿ ಎನ್ ರಾಮಚಂದ್ರನ್ ಅವರ ಮಾತುಗಳು ಉಲ್ಲೇಖಾರ್ಹ ‘ಎಷ್ಟೇ ಒಳ್ಳೆಯ ಆಹ್ವಾನಗಳು ಬಂದರೂ ಕನ್ನಡವನ್ನು ಹೊರತುಪಡಿಸಿ ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸಲಿಲ್ಲ. ನಾಡು-ನುಡಿಗೆ ಅಂತಹ ಬದ್ಧತೆ ಅಪರೂಪ. ಕನ್ನಡ ಚಿತ್ರರಂಗ ಒಂದು ಉದ್ಯಮವಾಗಿ ದೃಢವಾಗಿ ಕರ್ನಾಟಕದಲ್ಲಿ ಬೇರು ಬಿಡಲು ರಾಜಕುಮಾರ್ ಅವರ ಕೊಡುಗೆ ಅಪಾರ’ (ಡಾ. ರಾಜಕುಮಾರ್ ಮತ್ತು ಕನ್ನಡ ಅಸ್ಮಿತೆ). ಇಂತಹ ಕಾರಣಗಳಿಂದಾಗಿಯೇ ರಾಜಕುಮಾರ್ ಅವರನ್ನು ಕನ್ನಡ ಜನತೆ ತನ್ನ ದೈವವನ್ನಾಗಿ ಸ್ವೀಕರಿಸಿದೆ. ಈ ಅರ್ಥದಲ್ಲೇ ಕಂಠೀರವ ಸ್ಟುಡಿಯೋದಲ್ಲಿ ರಾಜಕುಮಾರ್ ಅವರ ಸಮಾಧಿ (ಇಂದು ಆ ಸ್ಥಳವನ್ನು ಜನರು ‘ಪುಣ್ಯಭೂಮಿ’ ಎಂದು ಕರೆಯುತ್ತಿದ್ದಾರೆ) ಸಂಕೀರ್ಣದ ಉದ್ಘಾಟನೆಗೆ ಬಂದಿದ್ದ ಭಾರತೀಯ ಚಿತ್ರರಂಗದ ಜನಪ್ರಿಯ ತಾರೆ ರಜನೀಕಾಂತ್ ‘ಈ ಸ್ಥಳ ಮುಂದೆ ಒಂದು ಹರಕೆಯ ತೀರ್ಥಸ್ಥಳವಾಗುವುದು’ ಎಂದು ಹೇಳಿದ್ದರು.ಈ ಮಾತು ಇಂದು ಅಕ್ಷರಶಃ ನಿಜವಾಗಿದೆ.

ಈ ಸಂಕಲನವನ್ನು ಕುರಿತು ಉಲ್ಲೇಖಿಸಲೇ ಬೇಕಾದ ಇನ್ನೊಂದು ಮಾತೆಂದರೆ, ರಾಜಕುಮಾರ್ ಅವರನ್ನು ಕುರಿತ ಅಪರೂಪದ ಸಂದರ್ಶನವೊಂದು ಈ ಕೃತಿಯಲ್ಲಿ ಬೆಳಕು ಕಂಡಿದೆ. ರಾಜಕುಮಾರ್ ಅವರಿಗೆ ೧೯೮೩ರಲ್ಲಿ ಕೇಂದ್ರ ಸರ್ಕಾರ ‘ಪದ್ಮಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಆ ಸ್ಮರಣೀಯ ಸಂದರ್ಭದಲ್ಲಿ ಕನ್ನಡ ಚಲನಚಿತ್ರರಂಗದವರು ಒಂದು ಅಭೂತಪೂರ್ವ ಸಮಾರಂಭವನ್ನು ಏರ್ಪಡಿಸಿ ರಾಜಕುಮಾರ್ ಅವರನ್ನು ಗೌರವಿಸಿದರು. ಆ ಸಂದರ್ಭದಲ್ಲಿ ‘ಪದ್ಮಭೂಷಣ’ ಎನ್ನುವ ಸಂಚಿಕೆಯನ್ನು ಹೊರತರಲಾಯಿತು. ಈ ಸಂಚಿಕೆಯಲ್ಲಿ ವಿ ಎನ್ ಸುಬ್ಬರಾವ್, ಕೆ ಎಸ್ ನಾರಾಯಣ ಸ್ವಾಮಿ, ಎಂ ವಿ ರಾಮಕೃಷ್ಣಯ್ಯ ಮತ್ತು ಶ್ಯಾಮಸುಂದರ ಕುಲಕರ್ಣಿ ಈ ನಾಲ್ಕೂ ಜನರು ರಾಜಕುಮಾರ್ ಅವರೊಡನೆ ನಡೆಸಿದ ಸುದೀರ್ಘ ಸಂದರ್ಶನವನ್ನು ಅಚ್ಚುಮಾಡಲಾಗಿತ್ತು. ಸನ್ಮಾನ ಕರ‍್ಯಕ್ರಮದ ತುರ್ತಿನಲ್ಲಿ ಈ ವಿಶೇಷ ಸಂಚಿಕೆಯ ನೂರು ಪ್ರತಿಗಳನ್ನು ಮಾತ್ರ ತಂದು ಅಂದು ಬಿಡುಗಡೆಗೊಳಿಸಿದ್ದರು. ಇನ್ನುಳಿದ ಸಂಚಿಕೆಗಳನ್ನು ಅಚ್ಚಾಗಿದ್ದ ಪ್ರೆಸ್‌ನಲ್ಲೇ ಉಳಿದುಬಿಟ್ಟವು ಎಂದು ಬಲ್ಲವರು ಹೇಳುತ್ತಾರೆ. ಆನಂತರ ಕಾಲಕ್ರಮೇಣ ಆ ಪ್ರೆಸ್ ಕೂಡ ಮುಚ್ಚಿಹೋಯಿತು. ಅಲ್ಲಿ ಉಳಿದಿದ್ದ ಸಂಚಿಕೆಗಳು ಏನಾದವು ತಿಳಿಯದು! ಹೀಗಾಗಿ ಆ ಸಂದರ್ಶನ ಎಲ್ಲರಿಗೂ ತಲುಪಲಾಗಲಿಲ್ಲ! ಮತ್ತು ಹೆಚ್ಚು ಚರ್ಚೆಗೂ ಒಳಪಡಲಿಲ್ಲ! ಆದ್ದರಿಂದ ಈ ಅಪರೂಪದ ಸಂದರ್ಶನ ಎಲ್ಲರಿಗೂ ದೊರೆಯುವಂತಾಗಲಿ ಹಾಗೂ ಈ ಮೂಲಕ ರಾಜಕುಮಾರ್ ಅವರನ್ನು ಕುರಿತು ಹೆಚ್ಚಿನ ಸಂಶೋಧನೆ ನಡೆಸುವವರಿಗೆ ಈ ಸಂದರ್ಶನ ನೆರವಾಗಬಹುದು ಎಂಬ ಕಾರಣದಿಂದ ಈ ಸಂಕಲನದಲ್ಲಿ ಮರುಮುದ್ರಿಸಲು ತೀರ್ಮಾನಿಸಲಾಯಿತು.

ಅಂದು ರಾಜಕುಮಾರ್ ಅವರನ್ನು ಸಂದರ್ಶಿಸಿದ್ದ ನಾಲ್ಕು ಜನ ಸಂದರ್ಶಕರಲ್ಲಿ ಈಗ ಉಳಿದಿರುವ, ರಾಜಕುಮಾರ್ ಅವರಿಗೆ ಹೆಚ್ಚು ನಿಕಟವರ್ತಿಗಳಾಗಿದ್ದ ಶ್ರೀ ಶ್ಯಾಮಸುಂದರ ಕುಲಕರ್ಣಿ ಅವರನ್ನು ಕಂಡು ಸಂದರ್ಶನವನ್ನು ನಮ್ಮ ಸಂಕಲನದಲ್ಲಿ ಅಚ್ಚುಮಾಡಲು ಅನುಮತಿ ನೀಡಬೇಕೆಂದು ಕೇಳಿಕೊಂಡೆವು. ರಾಜಕುಮಾರ್ ಅವರನ್ನು ಕುರಿತು ಈಗ ಹೊರಬರುತ್ತಿರುವ ವಿಮರ್ಶಾ ಕೃತಿಯ ಬಗ್ಗೆ ನಮ್ಮಿಂದ ಮಾಹಿತಿ ಪಡೆದುಕೊಂಡ ಶ್ಯಾಮಸುಂದರ ಕುಲಕರ್ಣಿ ಅವರು ಬಹಳ ಸಂತೋಷಪಟ್ಟು ಒಪ್ಪಿಗೆ ನೀಡಿದರು. ಹೀಗಾಗಿಯೇ ಎಂಬತ್ತರ ದಶಕದ ಆ ವಿರಳ ಸಂದರ್ಶನ ಈ ಸಂಕಲನದಲ್ಲಿ ಸೇರ್ಪಡೆಗೊಂಡಿದೆ.

ಇದರ ನಡುವೆ ಶ್ಯಾಮಸುಂದರ ಕುಲಕರ್ಣಿ ಅವರು ಕೆಲದಿನಗಳ ನಂತರ ತಮ್ಮ ಅನಾರೋಗ್ಯದ ನಡುವೆಯೂ ಈ ಸಂದರ್ಶನಕ್ಕೆ ಪೂರಕವಾದ ಹಿನ್ನೆಲೆಗಳನ್ನು ಕುರಿತು ‘ಅಂತಃಕರಣ ಮಿಡಿದ ಕ್ಷಣಗಳು’ ಎಂಬ ತಮ್ಮದೊಂದು ಬರೆಹವನ್ನು ಉತ್ಸಾಹದಿಂದ ನೀಡಿದರು. ಅವರು ಪ್ರೀತಿಯಿಂದ ನೀಡಿರುವ ಬರೆಹವನ್ನು ಈ ಸಂಕಲನ ಒಳಗೊಂಡಿದೆ. ಸಂದರ್ಶನವನ್ನು ಅಚ್ಚುಮಾಡಲು ಒಪ್ಪಿಗೆಯನಿತ್ತ ಶ್ರೀ ಶ್ಯಾಮಸುಂದರ ಕುಲಕರ್ಣಿ ಅವರನ್ನು ವಿಶೇಷವಾಗಿ ನೆನೆಯುವುದು ನಮ್ಮ ಕರ್ತವ್ಯ.

ಈ ಸಂದರ್ಶನದಲ್ಲಿ ರಾಜಕುಮಾರ್ ಅವರ ಮುಚ್ಚುಮರೆಯಿಲ್ಲದ ಮಾತುಗಳಲ್ಲಿ, ಅವರ ಬದುಕಿನ ಜೀವಂತಿಕೆ, ನಿರಾಶೆ, ಸಾರ್ಥಕತೆ, ಆದರ್ಶ, ಕನಸು ಎಲ್ಲವೂ ಪ್ರಕಟಗೊಂಡಿದೆ. ಇವುಗಳ ಜೊತೆಗೆ ಅವರ ವ್ಯಕ್ತಿತ್ವದಲ್ಲಿ ಸಹಜವಾಗಿ ಕಂಡುಬರುವ ಆತ್ಮೀಯತೆ ಮತ್ತು ನಮ್ರತೆಯ ಗುಣಗಳು ಹೆಚ್ಚು ಸಾಂದ್ರಗೊಂಡಿರುವುದು ಎದ್ದುಕಾಣುತ್ತದೆ.


ಕೊನೆಯ ಮಾತು: ರಾಜಕುಮಾರ್ ರಾಷ್ಟ್ರೀಯ ಉತ್ಸವದಲ್ಲಿ ಮಂಡಿತವಾದ ಲೇಖನ ಮತ್ತು ಭಾಷಣಗಳನ್ನು ಸಂಪಾದಿಸುವ ಹೊಣೆಯನ್ನು ನನ್ನ ಹೆಗಲಿಗೆ ಜಾರಿಸಿ, ಈ ಕೃತಿಯನ್ನು ‘ಪ್ರೀತಿ ಪುಸ್ತಕ ಪ್ರಕಾಶನ’ದ ಮೂಲಕ ಪ್ರಕಟಿಸಲು ಮುಂದಾದ ಗೆಳೆಯ ದೊಡ್ಡಹುಲ್ಲೂರು ರುಕ್ಕೋಜಿ ಅವರನ್ನು ಪ್ರೀತಿಯಿಂದ ನೆನೆಯುವುದು ನನ್ನ ಮೊದಲ ಕರ್ತವ್ಯ.

ನಮ್ಮೆಲ್ಲರ ಆತ್ಮೀಯ ಒಡನಾಡಿಯಾಗಿದ್ದು, ರಾಜಕುಮಾರ್ ಸಮಗ್ರ ಚರಿತ್ರೆ ರೂಪುಗೊಳ್ಳುವ ಕಾಲದಿಂದಲೂ ನಮ್ಮೆಲ್ಲಾ ಕಾರ‍್ಯಕ್ರಮಗಳಿಗೆ ಹೆಗಲೆಣೆಯಾಗಿ ದುಡಿಯುತ್ತಿದ್ದ ಶ್ರೀ ಅಜ್ಜೀಮನೆ ನಾಗೇಂದ್ರ ಅನಿರೀಕ್ಷಿತವಾಗಿ ನಮ್ಮೆಲ್ಲರನ್ನೂ ಅಗಲಿದರು. ಅವರ ಸ್ನೇಹದ ನೆನಪಿಗೆ ಈ ಕೃತಿಯನ್ನು ಅರ್ಪಿಸಿಸಲಾಗಿದೆ.

ಈ ಕೃತಿಗೆ ಪೂರಕವಾಗಿ ಬೇಕಿದ್ದ ಕೆಲವು ಡಾ. ರಾಜಕುಮಾರ್ ಅವರ ಹಾಗೂ ಪತ್ರಕರ್ತ ಸಂದರ್ಶಕರ ಚಿತ್ರಗಳನ್ನು ನೀಡಿ ಸಹಕರಿಸಿದ ಚಿತ್ರರಂಗದ ಹಿರಿಯ ಛಾಯಾಗ್ರಾಹಕರಾದ ಶ್ರೀ ಪ್ರಗತಿ ಅಶ್ವತ್ಥನಾರಾಯಣ, ಈ ಕೃತಿಗೆ ಅಗತ್ಯವಿದ್ದ ಕೆಲವು ವಿಮರ್ಶಕರ ಲೇಖನಗಳನ್ನು ಬರೆಸಿಕೊಟ್ಟ ಸಿನಿಮಾ ತಜ್ಞರು ಹಾಗೂ ಲೇಖಕರೂ ಆದ ಶ್ರೀ ಎನ್ ವಿದ್ಯಾಶಂಕರ್, ಕೆಲವು ಲೇಖಕರ ಛಾಯಚಿತ್ರಗಳನ್ನು ಒದಗಿಸಿದ ಶ್ರೀಮತಿ ಸುಧಾ ಡಿ ಸಿ ನಾಗೇಶ್ ಮತ್ತು ನಿಸರ್ಗ ಗೋವಿಂದರಾಜು ಚಳ್ಳಕೆರೆ ಇವರೆಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ.

ಈ ಕೃತಿಗೆ ಸೂಕ್ತವಾದ ಡಾ. ರಾಜಕುಮಾರ್ ಅವರ ವಾಟರ್‌ಕಲರ್ ಚಿತ್ರವನ್ನು ೪೫ ವರ್ಷಗಳ ಹಿಂದೆ ‘ಕಥಾನಾಯಕನ ಕಥೆ’ (ಡಾ. ರಾಜಕುಮಾರ್ ಅವರ ಆತ್ಮ ಕಥೆ) ಪ್ರಕಟಿಸುತ್ತಿದ್ದ ಸಿನಿಮಾ ಪತ್ರಿಕೆ ‘ವಿಜಯಚಿತ್ರ’ದ (೧೯೭೭, ಏಪ್ರಿಲ್) ಮೊದಲ ಸಂಚಿಕೆಯಿಂದ ತಗೆದುಕೊಳ್ಳಲಾಗಿದೆ. ರಾಜಕುಮಾರ್ ಅವರ ಅಪರೂಪದ ಚಿತ್ರವನ್ನು ರೂಪಿಸಿದ ಚೆನ್ನೈನ ಪೋಸ್ಟರ್ ಕಲಾವಿದ ಈಶ್ವರ ಅವರನ್ನು ಮರೆಯದೆ ನೆನೆಯುತ್ತೇನೆ.

ಮುಖಪುಟ ವಿನ್ಯಾಸ ಮಾಡಿದ ಕಲಾವಿದರೂ ಮತ್ತು ಗೆಳೆಯರೂ ಆದ ಶ್ರೀ ಮುರಳೀಧರ ರಾಥೋಡ್ ಅವರಿಗೆ ನನ್ನ ಧನ್ಯವಾದಗಳು. ಕೃತಿಯನ್ನು ಅಂದವಾಗಿ ಮುದ್ರಿಸಿದ ಬೆಂಗಳೂರು ಲಕ್ಷ್ಮಿ ಪ್ರೆಸ್‌ನ ಶ್ರೀ ಮಂಜುನಾಥ್ ಹಾಗೂ ಸಿಬ್ಬಂದಿ ವರ್ಗದವರಿಗೆ ನನ್ನ ನೆನಕೆಗಳು ಸಲ್ಲುತ್ತವೆ.

‍ಲೇಖಕರು avadhi

December 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: