ಹೊಕ್ಕಳ ಬಳ್ಳಿ…

ರಾ ಬಂದೋಳ್

‘ಸುರಿಬಾರ್ದಂತ ಮಳೆ ಸುರಿದು, ಕರೆದುಂಬಿ ಕೋಡಿ ಉಕ್ಕಿ, ಕೇರ್ಯಾಗೆಲ್ಲಾ ನೀರ್ ಹರಿದು, ಮೀನ್ಮರಿಗೆಳೆಲ್ಲಾ ಮನೆವಸ್ಲ ಮುಟ್ತಾವೋ! ಬಾಲ್ ಬಸ್ಸವ್ವೋ! ಹಣೆ ಹಣೆಯಾಂಗಿರಲ್ಲ, ಕಣ್ಣು ಕಣ್ಣಾಂಗಿರಲ್ಲ, ಮೂಗು ಮೂಗಾಂಗಿರಲ್ಲ, ಮೂತಿ ಮೂತಿಯಾಂಗಿರಲ್ಲ, ಮುಸುಡಿ ಮುಸುಡಿಯಾಂಗಿರಲ್ಲ, ಸೂಲ್ಗಿತ್ತಿ ಬೆಚ್ಬಿದ್ದು, ಮನೆಮಂದೀಗ್ ಬಾಯ್ ಬಿದ್ದು, ಹಡೆದಾಕಿಗ್ ಗರ ಬಡಿದ್ರು, ಕರುಳೆಲ್ಲಾ ಚುರ್ಕೆಂದು, ಕೂಸಿಗೆ ಹಾಲೂಡ್ಸಿ, ತಾಯ್ಪ್ರೀತಿ ಗೆಲ್ತಾತೊ! ಬಾಲ್ ಬಸ್ಸವ್ವೋ! ಮನ್ಸತ್ವ ಉಳಿತೈತೋ ಬಾಲ್ ಬಸ್ಸವ್ವೋ!’ ಎಂದು ಬಾಲ್ ಬಸವ ಹೇಳಿ ಸರಿಯಾಗಿ ಮೂರು ದಿನಕ್ಕೆ ಬೆಳ್ಳಂಬೆಳಗ್ಗೆ ಮಳೆ ಹಿಡಿದು ಜೋರಾಗುತ್ತಾ ಇತ್ತು.

ಲಕ್ಕವ್ವ ಮನೆಗೆ ಬಂದವಳೇ ಪಾರೋತಕ್ಕನಿಗೆ ‘ಒಲೆ ಮೇಲೆ ನೀರಿಟ್ಟಿದೆಯೇನೆ ಪಾರೋತಿ?’ ಎಂದು ಕೇಳುತ್ತಾ ಅವಳ ಉತ್ತರಕ್ಕೂ ಕಾಯದೆ ಬಸುರಿ ಕೋಣೆಯ ಒಳಗೋಗಿ ಒಳಗಿನಿಂದ ಚಿಲಕ ಹಾಕಿಕೊಂಡಳು. 

ಲಕ್ಕವ್ವ ಚೆಂಡು ಹೊರಬರುತ್ತಿದ್ದಂತೆ ಬೆಚ್ಚಿಬಿದ್ದಳು. ರಕ್ತದ ಕೈಗಳಿಂದಲೇ ಕಣ್ಣುಜ್ಜಿಕೊಂಡು ಮತ್ತೆ ಮತ್ತೆ ನೋಡಿದಳು. ಇದೊಂದು ಕನಸಂತೆ ಭಾಸವಾದರೂ ಇದು ದಿಟವೆಂದು ಮತ್ತೆ ಮತ್ತೆ ದೃಢಪಡಿಸಿಕೊಂಡು ಮುಂದುವರೆಸಿದಳು. ಇದಕ್ಕಾಗಿಯೇ ನನ್ನನ್ನು ಸೂಲಗಿತ್ತಿಯಾಗಿ ಬದುಕಿಸಿದೆಯಾ ಹನುಮಪ್ಪಾ? ಎಂದು ನಿಟ್ಟುಸಿರುಬಿಟ್ಟಳು. ನಿಧಾನವಾಗಿ ಹೊರಗೆ ಎಳೆಯುತ್ತಿದ್ದಂತೆ ಲಕ್ಕವ್ವನ ಕರುಳು ಚುರುಕ್ ಎನ್ನತೊಡಗಿತು, ಅವಳ ತಾಯಿ ಹೃದಯ ಜಾಗೃತವಾಯಿತು. ಇದೂ ಜೀವವಲ್ಲವೇ! ಇದೂ ಮಗುವೇ ಅಲ್ಲವೇ! ಕೈ ಕಾಲುಗಳೆಲ್ಲಾ ಮನುಷ್ಯರಂತೆ ಇದ್ದವು ಆದರೆ ಮುಖ ಮಾತ್ರ!!! 

‘ಒಳಗೊಂದಿಷ್ಟು ವಗಾತ್ಯ ಮಾಡು’ ಎನ್ನುತ್ತಾ ಸರಸರನೆ ಬಚ್ಚಲಿಗೆ ನಡೆದು ಮಗುವನ್ನು ತೊಳೆದಳು. ಕಮಲ ಕಿರುಚಿ ಒದ್ದಾಡಿ ಸುಸ್ತಾಗಿ ಎಚ್ಚರತಪ್ಪಿ ಮಲಗಿದ್ದಳು.

*****

ಸುಂದರ ಮಗುವೊಂದರ ಕನಸು ಕಾಣುತ್ತಿದ್ಜ ಕಮಲ ಇನ್ನೂ ಈ ಆಘಾತದಿಂದ ಹೊರಬಂದಿರಲಿಲ್ಲ. ಅಷ್ಟರಲ್ಲಾಗಲೇ ಊರಿಗೆಲ್ಲಾ ಸುದ್ದಿಯಾಗಿ ಈ ಜೋರು ಮಳೆಯಲ್ಲೂ ಕೆಲವರು ಕೊಡೆ ಹಿಡಿದು, ಕೆಲವರು ಟವಲ್ ಹೊದ್ದು, ಕೆಲವರು ಪಂಚೆಯನ್ನೆ ತಲೆ ಮೇಲೆಳೆದುಕೊಂಡು, ಹಲವರು ನೆನೆದುಕೊಂಡೇ ಬಂದಿದ್ದರು. ಕೆಲವರು ಕುತೂಹಲ ತಾಳಲಾರದೆ ಕಿಟಕಿಯಲ್ಲೇ ಇಣುಕಿ ನೋಡಿ ವಿಚಿತ್ರ ಉದ್ಗಾರಗಳನ್ನು ತೆಗೆಯುತ್ತಿದ್ದರು. ಕಟ್ಟೆಯ ಮೇಲೆ ಕೂತಿದ್ದ ಊರಿನ ಪ್ರಮುಖರು, ಕೆಲ ಅನುಭವಸ್ಥ ಹಿರಿಯ ಜೀವಗಳು, ಇದು ಒಳ್ಳೆಯದಾ? ಕೆಟ್ಟದ್ದಾ? ಯಾವುದರ ಫಲಾಫಲ? ಇವುಗಳ ಚರ್ಚೆಯಲ್ಲಿ ನಿರತರಾಗಿದ್ದರು. ಅಕ್ಕಪಕ್ಕದ ಮನೆಗಳಿಂದ ನಿರಂತರವಾಗಿ ಪೊರೈಕೆಯಾಗುತ್ತಿದ್ದ ಅಡಿಕೆ-ಎಲೆ ಮತ್ತು ಟೀ ಚರ್ಚೆಗೆ ಬೇಕಾದ ಇಂಧನ ಒದಗಿಸುತ್ತಿದ್ದವು.

ಪುಟ್ಟಯ್ಯನೋರುಗೆ ಕಮಲಳ ಗಂಡ ಸೂರಪ್ಪ ಮನೆಯ ಹಿತ್ತಲಿನಲ್ಲಿ ದೊರೆತ ಲಿಂಗಮುದ್ರೆ ಕಲ್ಲುಗಳ ಬಗ್ಗೆ ಹೇಳಿ ಮುಂದೇನು ಮಾಡಬೇಕೆಂದು ಕೇಳಿದ್ದ. ಅಂದು ಯಾವುದೋ ಕೆಲಸದ ತರಾತುರಿಯಲ್ಲಿದ್ದ ಅವರು ಮರುದಿನ ಬಾ ಎಂದು ತಿಳಿಸಿದ್ದರು. ಆದರೆ ಸೂರಪ್ಪ ತನ್ನದೇ ಆದ ಕಾರಣಗಳಿಂದ ಹೋಗಿರಲಿಲ್ಲ. ಈಗ ಪುಟ್ಟಯ್ಯನೋರು, ಸೂರಪ್ಪ ಆ ಲಿಂಗಮುದ್ರೆ ಕಲ್ಲುಗಳನ್ನು ಅಲಕ್ಷ್ಯ ಮಾಡಿದ್ದೇ ಕಾರಣವೆಂದು ತೀರ್ಮಾನಿಸಿ ಆರೋಪಿಸುತ್ತಿದ್ದರು. ಮತ್ತು ಅವನ್ನು ಶುದ್ಧಗೊಳಿಸಿ, ಚಿಕ್ಕದೊಂದು ಗುಡಿ ಕಟ್ಟಿ, ಪ್ರತಿಷ್ಠಾಪಿಸಿ, ನಿತ್ಯವೂ ಪೂಜೆ ನಡೆಯಬೇಕು ಇಲ್ಲವಾದಲ್ಲಿ ಇಡೀ ಊರು ಅದರ ಪರಿಣಾಮ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು.

ಆದರೆ ಸೂರಪ್ಪನ ಆಪ್ತ ಪರಸಣ್ಣ ಇಡೀ ಊರಿಗೆ ಗುಟ್ಟಾಗಿ ಬೇರೆಯದೇ ಕಾರಣ ಹೇಳಿದನು. ಈ ಗುಟ್ಟು ಬಹಳಷ್ಟು ಜನಕ್ಕೆ ಆಗಲೇ ಗೊತ್ತಿದ್ದರೂ ಅದನ್ನು ಗುಟ್ಟಂತೆಯೇ ಕೇಳಲು ಶುರು ಮಾಡಿದರು. ಕಮಲಕ್ಕ ಬಸರಿಯಿದ್ದಾಗ ಬಯಕೆಯಾಗಿತ್ತೆಂದು ಸೂರಪ್ಪ ಕೊಮ್ಮಾರನಹಳ್ಳಿ ಕಣಿವೆಯಲ್ಲಿ ಕಾಡು ಹಂದಿಯೊಂದನ್ನು ಬೇಟೆಯಾಡಿ ತಂದಿದ್ದನು. ಅದನ್ನು ತಿಂದ ಪರಿಣಾಮವೇ ಇದೆಂದು ಪರಸಣ್ಣ ಉಸುರಿದನು.

*****

ಕಮಲಳ ಅತ್ತೆ ಪಾರೋತಕ್ಕ ಕಟ್ಟೆಮನೆಯಲ್ಲಿ ಕೂತಿದ್ದಳು. ಹಣೆಯ ಮೇಲೆ ಚಿಂತೆಯ ಗೆರೆಗಳು ಧಾರಾಳವಾಗಿ ಮೂಡಿದ್ದವು. ಕಣ್ಣ ಮಳೆ ಹೊರಗಿನ ಮಳೆಗೆ ಸ್ಪರ್ಧಿಸುತ್ತಾ ಧಾರಾಕಾರವಾಗಿ ಹರಿಯುತ್ತಿತ್ತು. ಮನಸ್ಸು ಸ್ತಬ್ದವಾಗಿ, ದೇಹ ನಿಶ್ಚಲವಾಗಿ, ಸೂರಪ್ಪ ಕಲ್ಲಾಗಿದ್ದನು ಹಿತ್ತಲಲ್ಲಿ. ಬಾಣಂತಿ ಕೋಣೆಯಲ್ಲಿ ಗರಬಡಿದವಳಂತೆ ಕೂತಿದ್ದ ಕಮಲಳಿಗೆ ಯಾವುದೊ ಧ್ವನಿಯು ಕರುಳನಿಂದ ಕೇಳಿದಂತಾಯಿತು. ಭಾವಾವೇಶಗಳು ಕಮಲಳ ಮುಖಕ್ಕೆ ಕೆಂಪು ತುಂಬುತ್ತಿದ್ದವು. ಮೈಯ ಕಸುವನ್ನೆಲ್ಲಾ ಕಾಲಿಗೆ ಹಾಕಿ ಎದ್ದಳು. ಹೆಜ್ಜೆಗಳು ಹಿತ್ತಲಿನೆಡೆಗೆ ನುಗ್ಗಿದವು. ‘ಲೇ ಸೂರ, ಎದ್ ಬಾರೋ ಒಳಗೆ’ ಎಂದು ಕಿರುಚಿದಳು.

ಈ ಗುಡುಗಿಗೆ ಚರ್ಚೆಯೆಲ್ಲಾ ಮೌನದಡಿ ಸಮಾಧಿಯಾಗಿತ್ತು. ಆದರೆ ಬಾಣಂತಿ ಕೋಣೆಯಿಂದ ಅಳುವಿನಂತ ವಿಚಿತ್ರ ಶಬ್ದವೊಂದು ಅನುರಣಿಸುತ್ತಿತ್ತು. ಕಣ್ಣ ಗುಡ್ಡೆಗಳು ಮನೆಯೊಳಕ್ಕೆ ದೃಷ್ಠಿ ತಿರುಗಿಸಿದ್ದವು. ತನ್ನನ್ನು ಏಕವಚನದಲ್ಲಿ ಕರೆಯುತ್ತಿದ್ದಾಳೆ ಎಂಬುದನ್ನೂ ಮರೆತು ಸೂರಪ್ಪ ಒಳಗೋಡಿ ಬಂದನು. ದಢಾರನೆ ಹಿತ್ತಿಲ ಬಾಗಿಲು ಹಾಕಿದಳು. ಕಮಲಳ ಹೆಜ್ಜೆಗಳು ಮತ್ತೆ ಮುಂಬಾಗಿಲಿಗೆ ನುಗ್ಗಿದವು. ಹೊರಬಂದು ಹೊರಗಿದ್ದವರನ್ನೆಲ್ಲಾ ಒಮ್ಮೆ ದುರುಗುಟ್ಟಿ ನೋಡಿ ಮನೆಯ ಮುಂಬಾಗಿಲು ಹಾಕಿಕೊಂಡಳು. ಊರ ಬಾಯಿ-ಕಣ್ಣುಗಳೀಗ ದಾರಿ ತೋಚದೆ ತಮ್ಮ ದಾರಿ ಹಿಡಿದವು.

‍ಲೇಖಕರು Admin

October 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: