ಕೆ. ಎಸ್.ನ ಅವರ ಕವಿತೆಗಳಲ್ಲಿ ಮಣ್ಣಿನ ಹಾಡು
ಗಿರಿಜಾಶಾಸ್ತ್ರಿ / ಮುಂಬಯಿ.
ಕೆ.ಎಸ್.ನ ಅವರ ಮಾತೃಕೇಂದ್ರಿತವಾದ ಕವಿತೆಗಳ ಮೇಲೆ ಗಮನಹರಿಸುವುದು ಈ ಲೇಖನದ ಉದ್ದೇಶ.
ಈ ಮಾತೆ- ಭೂಮಿ, ಕಾಲ, ಚರಿತ್ರೆ ಮತ್ತು ಸಾಕ್ಷಿ ಪ್ರಜ್ಞೆಯ ಪ್ರತೀಕವೂ ಆಗಿದ್ದಾಳೆ. ಕಾಲದ ಚಲನೆಯನ್ನು ಗುರುತಿಸುವುದೇ ಭೂಮಿಯ ಚಲನೆಯ ಮೂಲಕ. ಹೀಗಾಗಿ ಕಾಲದ ಚಲನೆಗೆ ಭೂಮಿ ಒಂದು ಸಾಕ್ಷಿ ಪ್ರಜ್ಞೆ. ಕಾಲದ ಚಲನೆಯೆಂದರೆ ಚರಿತ್ರೆಯ ಚಲನೆಯೇ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಮ್ಮಲ್ಲಿ ‘ಕಾಲ’ ಪುರುಷ ರೂಪ. ಇಂತಹ ಅಮೂರ್ತ ಪುರುಷ ರೂಪವನ್ನು ಚಲಾವಣೆಗೆ ತರುವವಳು ಭೂಮಿ. ಮಣ್ಣು ತನ್ನೊಡಲೊಳಗೆ ಬೀಜ ಧರಿಸಿ ಜೀವ ಜಾಲವನ್ನು ಪೊರೆಯುವ ವನಸ್ಪತಿಗೆ ಕಾರಣ ವಾಗುತ್ತದೆ. ಅವುಗಳ ತಂಗುದಾಣವಾಗುತ್ತದೆ..
ಭೂಮಿ ನಮ್ಮಲ್ಲಿ ಯಾವತ್ತೂ ಹೆಣ್ಣು ರೂಪ. ಆದುದರಿಂದಲೇ ಅದು ಕೆ.ಎಸ್.ನ ಅವರ ಪಾಲಿಗೆ ‘ಕುಂಕುಮ ಭೂಮಿ’. ಹೆಣ್ಣು ಈ ನೆಲಕ್ಕಂಟಿದವಳಾದರೆ ಗಂಡು ಅಮೂರ್ತಕ್ಕೆ ಹಾರುವವನು. ಆದುದರಿಂದ ಅವನು ಆಕಾಶ. ಆಕಾಶದ ಬೆಳಕಿನೆಡೆಗೆ ಸಾಗದಂತೆ ಭೂಮಿಯ ಮೋಹ ಮನುಷ್ಯನನ್ನು ಆವರಿಸಿದೆ, ಪುರುಷನ ಊಧ್ರ್ವಗಮನಕ್ಕೆ ಹೆಣ್ಣು ಬಾಧಕಳು ಎಂಬ ನಂಬಿಕೆಯೂ ನಮ್ಮಲ್ಲಿದೆ.
ಆದರೆ ಕೆ.ಎಸ್.ನ ಅವರಿಗೆ ಪಿತೃ ಎಂದೂ ಒಂದು ಮಿಥ್ಯೆಯೇ. ತಾಯಿ ಮಾತ್ರ ಸತ್ಯ. ಅವಳು ಮಾಯೆ ಎಂಬುದನ್ನು ಅವರು ಒಪ್ಪುವುದಿಲ್ಲ. ಅದು ಅವರಿಗೆ ಪೊಳ್ಳು ಅಧ್ಯಾತ್ಮವಾಗಿ ಕಾಣಿಸುತ್ತದೆ. ‘ಇಹದ ಪರಿಮಳವಿರದ ಹಾದಿ’ಯ ಮೇಲೆ ಕ್ರಮಿಸುವುದರಲ್ಲಿ ಅವರಿಗೆ ನಂಬಿಕೆ ಇಲ್ಲ. ‘ಇಹದ ತಳಹದಿಯಿಂದ’ಲೇ ‘ದಿಟದ ದರ್ಶನವರಳಿ ಹಂಬಲಿಸಿ ಹಾಡಾಗಬೇಕು; (ಬೆಳಗಿನ ಮಂಜು) ಎಂಬುದು ಅವರ ಮತ.
ಅವರಿಗೆ ಗತಿ ಮತ್ತು ಗಮ್ಯ ಎರಡೂ ಮೃತ್ತಿಕೆಯೇ. ಆದ್ದರಿಂದಲೇ “ನಾ ಬರೆದೆ ಭೂಮಿ ಮಣ್ಣೆಂದು’ ಎನ್ನುತ್ತಾರೆ. (ಬಿಳಿಯ ಹೂಗಳ ಕವಿತೆ ಗೋರಿಗಳ ಮೇಲೆ). ಏಕೆಂದರೆ ಈ ಮಣ್ಣು ಸೃಷ್ಟಿಯ ಮೂಲ ಮತ್ತು ಅದರ ಪೋಷಣೆಯ ಆಧಾರ. ಇಡೀ ವಿಶ್ವವೇ ಅವಳ ಪ್ರತಿಮೂರ್ತಿಯಾಗಿ ಅವರಿಗೆ ಕಾಣುತ್ತಿದೆ. ಮಣ್ಣಿಂದಲೇ ಕಾಯ, ಅದನ್ನು ಬಿಟ್ಟವರಿಗೆ ಆಧಾರವೇ ಇಲ್ಲ ಎಂದು ದಾಸರೂ ಹಾಡಿದ್ದಾರೆ.
‘ನದಿಗಳೆಲ್ಲ ನಿನ್ನದೆ ಹಾಲು /ಬೆಟ್ಟ ಸಾಲು ನಿನ್ನ ಹೆಗಲು/ ಹಗಲು ನೀನು ನಗಲು/ಇರಳು ನಿನ್ನ ನೆರಳು/ ಹಸಿರುಡುಗೆ, ಮುಗಿಲಿನೊಡವೆ-/ಮುನ್ನೀರ ಮೇಲೆ ಕಣ್ಣೀರ ಸುರಿವ ತಾಯೆ/ ನೀನಲ್ಲ ಮಾಯೆ’ (ಶಿಲೆಗೆ ಹೂವಿನ ವಂಕಿ). ‘ಇರುವ ತನಕ ನೈಜವಾದದ್ದೊಂದೇ- ಭೂಮಿ’
ಎನ್ನುವ ಕೆ.ಎಸ್.ನ ಅವರಿಗೆ ದೇವರೆಂದರೆ ಸೃಜನಶೀಲತೆಯೇ.
ಅವರ ಪ್ರಥಮ ಸಂಕಲನ ‘ಮೈಸೂರು ಮಲ್ಲಿಗೆ’ ಪ್ರಾರಂಭವಾಗುವುದೇ ಸುಕೋಮಲವಾದ ರಮ್ಯ ಪ್ರಪಂಚದಿಂದ. ಹೇಳಿಕೇಳಿ ಅದು ಮಲ್ಲಿಗೆ. ಮೃದುತ್ವದ ಜೊತೆಗೆ ಅತಿ ಮಾಧುರ್ಯವನ್ನೂ ಜೊತೆಗೇ ಇರಿಸಿಕೊಂಡಿರುವಂತಹದು. ಇಲ್ಲಿರುವುದು ಗಂಡು ಹೆಣ್ಣಿನ ಸರಳವಾದ ಪ್ರೇಮ ಪ್ರಪಂಚ.
ಇದು ಎಷ್ಟು ಸರಳವೆಂದರೆ, ಡಿ. ಆರ್, ನಾಗರಾಜ್ ಅವರ ಪ್ರಕಾರ, ಪ್ರೇಮ ಕಾಮಗಳ ದಟ್ಟ ಗಳಿಗೆಗಳ ಚಂಡಮಾರುತ ಇಲ್ಲಿ ಇಲ್ಲ. “ಜನಾಂಗವೊಂದು ತನ್ನ ಕಾಲದ ಭಾಷೆಯಲ್ಲಿ ಒಮ್ಮೆ ಮಾತ್ರ ಸೃಷ್ಟಿಸಲು ಸಾಧ್ಯವಿರುವ ಕೃತಿ ‘ಮೈಸೂರು ಮಲ್ಲಿಗೆ’. ಅದೇ ಜನಾಂಗದಲ್ಲಿ, ಅದೇ ಕಾಲದಲ್ಲಿ ಮತ್ತೆ ಮತ್ತೆ ಅದನ್ನು ಬರೆಯಲು ಪ್ರಯತ್ನಿಸಿದರೆ ಆಗ ಅದು ಮೂಲ ಕವಿಯ ಉಚ್ಚಿಷ್ಟ ದಂತೆ ಕಾಣುತ್ತದೆ’ ಎನ್ನುತ್ತಾರೆ ‘ಕ್ಲಾಸಿಕ’ನ ಗುಣವೇ ಅಂತುಹದೋ ಏನೋ ಸಂಪೂರ್ಣ ತೃಪ್ತಿ ಮತ್ತು ತೀವ್ರ ಅತೃಪ್ತಿಯ ಅನುಭವವನ್ನು ಏಕಕಾಲಕ್ಕೆ ನೀಡುತ್ತದೆ, ಎಂದು ಅವರು ವಿಸ್ಮಯ ಪಡುತ್ತಾರೆ (ಶಕ್ತಿ ಶಾರದೆಯ ಮೇಳ).
ಮೈಸೂರು ಮಲ್ಲಿಗೆಯ ಸರಳ ಪ್ರೇಮದಿಂದ ಹೊರಟ ಹೆಣ್ಣು ಅವರ ಕಾವ್ಯ ಪ್ರಯಾಣದ ಕೊನೆಗೆ ಮೆಟಾಫಿಸಿಕಲ್ ನೆಲೆಗೆ ತಲಪುತ್ತಾಳೆ. ಅವರ ಈ ದೀರ್ಘ ಪ್ರಯಾಣದಲ್ಲಿ ಎಲ್ಲಿಯೂ ಅವರ ‘ಕಾವ್ಯ ಖಡ್ಗ’ವಾಗುವುದಿಲ್ಲ. ಇದನ್ನು ಉದಾರ ಮಾನವತಾವಾದ ಎಂದು ಡಿ.ಆರ್. ನಾಗರಾಜ್ ಗುರುತಿಸುತ್ತಾರೆ. ಖಡ್ಗವೆಂದರೆ ಕೊಲ್ಲುವುದು. ಅದು ಪುರುಷನ ವಿಧಿ. ಮಾಂಸಲ ಪಿಂಡಕ್ಕೆ ಜೀವದಾನ ಮಾಡುವುದು ಹೆಣ್ಣಿನ ಹೆಗ್ಗಳಿಕೆ.
‘ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ’ ಕವಿತೆ ತಂದೆಯ ವಾರಸುದಾರಿಕೆಯನ್ನು ಧಿಕ್ಕರಿಸುವುದರ ಮೂಲಕವೇ ಪ್ರಾರಂಭವಾಗುತ್ತದೆ.
‘ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ; /ತೊಡಿಸದಿರು ಚಂದ್ರ ಕಿರೀಟವನು./ಕೊರಳಿಗೆ ಭಾರ ನನಗೆ ನಕ್ಷತ್ರ ಮಾಲಿಕೆ;/ನಾನೊಲ್ಲೆ ದೊರೆತನವನು’
ಇಲ್ಲಿ ತಂದೆಯನ್ನು ಉದ್ದೇಶಿಸಿ ಕವಿತೆ ಮಾತನಾಡುವುದಾದರೂ ಇಡೀ ಕವಿತೆ ಹಾಡುವುದು ಭೂಮಿಗೀತವನ್ನೇ. ‘ನಿನ್ನ ಕಾಣದೆಯೆ ಬೆಳೆದೆ, ನಾ ಕಂಡಿಹೆ ತಾಯ ಸಂಪ್ರೀತಿಯನು ಚೆಲುವನು’ ಎನ್ನುವ ನಿರೂಪಕನಿಗೆ ತಂದೆ ಇಲ್ಲಿ ಅದೃಶ್ಯ ವ್ಯಕ್ತಿ ಅಥವಾ ಯಾವಾಗಲಾದರೊಮ್ಮೆ ಕಂಡರೂ, ಮಗ ‘ಕೈಬೀಸಿ ಕರೆದರೂ ರಾಜಾಧಿರಾಜನೆನ್ನುವ ಸೊಕ್ಕಿನಿಂದ’ ಮಗನ ಮೈಮುಟ್ಟದೆಯೇ ನಡೆವನು. ಆದರೆ ತಾಯಿಯಾದರೋ ‘ಮರುಭೂಮಿಯಲಿ ಮುಗಿಲ ತೊಟ್ಟಿಲ ಕಟ್ಟಿ, ಹಿಮ ಬೆಂಕಿ ಬಿರುಗಾಳಿ’ಯ ವಿಕೋಪದ ನಡುವೆಯೂ ಹರುಷದಿಂದ ಅಮೃತವನ್ನೇ ಸೋಸಿ ಪೊರೆದವಳು.
‘ಮಳೆ ಹೊಳೆ ಕಡಲೆಲ್ಲಾ ಹಾಡಿ ಕರೆ’ದು ಮನುಷ್ಯನ ಬದುಕನ್ನು ಪೊರೆಯವವಳು, ‘ದೇಶ ದೇಶದ ಬಿಸಿಲ’ ತನ್ನ ಸೃಷ್ಟಿ ಕೂಸುಗಳ ಕೆನ್ನೆ ಮೇಲೆ ಹರಿಸಿ, ಬಾಂದಳದಲಿ ಕೂಸು ಮರಿ ಮಾಡಿ ಬೆಳೆಸುವ ಅಗ್ನಿ ಕುವರಿ ಅವಳು. ಇಲ್ಲಿ ಅಗ್ನಿ ಜೀವ ಪೋಷಕ ಧಾತುವಾಗಿರುವಂತೆ ಶಿಕ್ಷಿಸುವ ದಿವ್ಯವೂ ಹೌದು. ಅಗ್ನಿಯನ್ನು ಒಡಲೊಳಗೆ ಧರಿಸಿರುವ ಅವಳಿಗೆ ಒಂದು ‘ಋತ’ವಿದೆ ಚರಿತ್ರೆ ಅದರ ಉಲ್ಲಂಘನೆಯನ್ನು ಮಾಡಿದಾಗಲೆಲ್ಲ ಆಸ್ಫೋಟಗೊಂಡು ಚಂಡಮಾರಿಯಾಗಿ ಮನುಕುಲಕ್ಕೆ ಪಾಠ ಕಲಿಸುವವಳೂ ಹೌದು.
ಅವಳ ತಾಳ್ಮೆಗೆ ಇಲ್ಲಿ ಇನ್ನೊಂದು ಉಪಮೆಯಿಲ್ಲ ನಿಜ. ಅವಳದು ತಂಪಿನೊಡಲು. ಅದರ ಮಡಿಲಲ್ಲಿ ಬಾಳು ಸೊಂಪು, ‘ಹಸುರೆಲ್ಲ ಹೂವಾದ ಹೊನ್ನ ಗೆಲುವು’ ಆದರೆ ಪಾಪದ ಕೊಡ ತುಂಬಿದಾಗ ಆಕೆ ‘ಹೆಮ್ಮಾರಿ ಬೆಳ್ಳಿಕುರಿ ದಡವ ನಾಲಗೆ ನೀಡಿ ನೆಕ್ಕುವ ಹೊಳೆ’ ಕುರಿಯನ್ನು ಬಲಿತೆಗೆದುಕೊಳ್ಳುವ ಮಾರಿ (‘ಬಿಳಿ ಹೂಗಳ ಕವಿತೆ ಗೋರಿಗಳ ಮೇಲೆ’) ಪ್ರಕೃತಿಯ ವಿಕೋಪಕ್ಕೆ ಪಾಪಿಗಳು ಮಾತ್ರವಲ್ಲ, ಪಾಪದವರೂ ಬಲಿಯಾಗಿಬಿಡುತ್ತಾರೆ.
ಆಗ ಧೃತಿಗೆಡದೆ ಮಗ ನಿಂತು ಸವಾಲೆಸೆಯುತ್ತಾನೆ ‘ಕಣ್ಣ ಬೆದರಿಕೆಗೆ ಓಡುವೆನೆಂದು ಬಗೆಯದಿರು. ನಿನ್ನ ನೆತ್ತರೆ ನನ್ನ ಮೈಯ ತುಂಬ/ ಬರಡು ನೋಟಕೆ ರೋಸಿ ತೊಲಗಬಹುದೆನ್ನದಿರು/ಬಂಡೆ ಬಿರುಕಿಗೆ ಚಂದ್ರ ಬಿಂಬ….ತಳ್ಳುವೆಯ? ತಳ್ಳು ಕಮರಿಗೆ/ ಅಲ್ಲಿ ನಿನ್ನ ತೊಡೆ (ಸಾಂತ್ವನ ಪಡೆಯಲು ತಾಯ ತೊಡೆಗಿಂತ ಉತ್ತಮವಾದ ಆಶ್ರಯ ಯಾವುದು?)/ನನ್ನ ಬಾಳಿನ ನೋವು ನೀಗಬಹುದು /ಎತ್ತೆಸೆಯೆ ಪರ್ವತಾಗ್ರಕೆ ಅಲ್ಲಿ ನಿನ್ನ ಹೆಡೆ;/ನಾನದರ ಮಣಿಯಾಗಿ ಮಿನುಗಬಹುದು. (ಹೆಜ್ಜೆ ಗುರುತು). ಸತ್ಯಕ್ಕೆ/ಜೀವ ಪರವಾದದ್ದಕ್ಕೆ ಮಾತ್ರ ಇಂತಹ ಧಾಷ್ಟ್ರ್ಯ ಸಾಧ್ಯ. ಎಂತಹ ವಿಕೋಪನ್ನೂ ಮೀರಿ ಬದುಕಬಲ್ಲೆನೆಂಬ, ಕೊಲ್ಲುವ ಖಡ್ಗವನ್ನೇ ಗುರಾಣಿಯನ್ನಾಗಿ ಮಾಡಿಕೊಳ್ಳುವ ಎದೆಗಾರಿಕೆ ಜೀವಪರವಾದುದಕ್ಕೆ ಮಾತ್ರ ಸಾಧ್ಯ. ಜೀವ ವಿರೋಧಿಯಾದದ್ದಕ್ಕೆ ಮಾತ್ರ ಎಂದೂ ಉಳಿಗಾಲವಿಲ್ಲ. ಅದು ತಾಯಿಯ ಕ್ರೌರ್ಯದ ಎದುರು ನುಚ್ಚುನೂರಾಗಿಬಿಡುತ್ತದೆ.
ತಂದೆಯ ಪಾತ್ರ ಮಗುವಿನ ಬೆಳವಣಿಗೆಯಲ್ಲಿ ಗೌಣ. ಆದುರಿಂದಲೇ ‘ನಿನ್ನ ಹಂಗಿಲ್ಲದೆಯೇ ನಾ ಬಾಳುವುದ ಕಲಿಸು’ ಎಂದು ತಂದೆಗೆ ಹೇಳುತ್ತಾರೆಯೇ ಹೊರೆತು ತಾಯಿಗೆ ಅಲ್ಲ. ‘ಬಂದ ಬಾಗಿಲು ಮಣ್ಣು, ಬಿಡುವ ಬಾಗಿಲು ಮಣ್ಣು, ನಡುವೆ ಕಾಪಾಡುವುದು ತಾಯ ಕಣ್ಣು’ ತಾಯಿಯ ಮಡಿಲಲ್ಲಿ ಕಣ್ಣುಬಿಡುವ ಬದುಕು, ಕಣ್ಣುಮುಚ್ಚುವುದೂ ಅಲ್ಲಿಯೇ. ಈ ನಡುವೆ ಕಾಪಾಡುವವಳು ಅವಳೇ. ಆದುದರಿಂದ ತಾಯ್ತನವೇ ಅಂತಿಮವಾದುದು. ‘ಬೆಳೆದ ಮಗ ಹೊರಲಿ ನೊಗ, ಕೇಳಿಬಿಡುವೆನೆಂದು ಭ್ರಮೆಗೊಂಡು ಬಂದಿರುವೆ ನೀನು’ ಎಂದು ತಂದೆಗೆ ಹೇಳುವಾಗ ಪಿತೃಪ್ರಾಧಾನ್ಯತೆಯ ಹುಸಿತನವನ್ನು ಬಯಲಾಗಿಸುತ್ತಾರೆ.
ಪಿತೃವಿನೊಂದಿಗೇ ಗುರುತಿಸಿಕೊಳ್ಳುವ ವ್ಯವಸ್ಥೆಯೊಂದರಲ್ಲಿ ತಾಯಿಯೇ ಆತ್ಯಂತಿಕ ಸತ್ಯ ಎಂದು ಪುರುಷನೊಬ್ಬ ಹೇಳುವುದು ಬಹಳ ಮಹತ್ವವಾದುದು. ಆದುದರಿಂದಲೇ ‘ವಸುಂಧರೆಯ ಮಗ ನಾನು’ ಎನ್ನುತ್ತಾರೆ. ಬೇಂದ್ರೆಯವರು ಕೂಡ ಅಂಬಿಕಾತನಯದತ್ತ ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ. ‘ಅವಳು’ ನುಡಿಸಿದ್ದನ್ನು ತಾನು ನುಡಿಯುವುದಾಗಿ ಹೇಳಿಕೊಳ್ಳುವ ಅವರು ತಾನು “ಐದು ಐದೆಯರ ಮಗ” (ಹೆತ್ತ ತಾಯಿ, ಭೂಮಿತಾಯಿ, ಕನ್ನಡ ತಾಯಿ, ಭಾರತ ಮಾತೆ, ವಿಶ್ವಮಾತೆ) ಎಂದು ಘೋಷಿಸಿಕೊಳ್ಳುತ್ತಾರೆ. ಪಿತೃವಿನ ನೆರಳಿನಿಂದ ತಪ್ಪಿಸಿಕೊಂಡ ಈ ಇಬ್ಬರೂ ಕನ್ನಡದ ಅನನ್ಯ ಕವಿಗಳು.
‘ಬಿಳಿಹೂಗಳ ಕವಿತೆ ಗೋರಿಗಳ ಮೇಲೆ’ ಕವಿತೆಯಲ್ಲಿ ಭೂಮಿ, ಸಾಕ್ಷಿ ಪ್ರಜ್ಞೆಯಾಗಿರುವುದರ ಜೊತೆಗೆ ಕಾಲ ಮತ್ತು ಚರಿತ್ರೆಯನ್ನು ಪ್ರತಿನಿಧಿಸುತ್ತಾಳೆ. ನಮ್ಮ ಲಿಖಿತ ಚರಿತ್ರೆಯೆಂಬುದು ಪೌರುಷಮಯ ವಾದುದು. ಅಹಂಕಾರ ಮೂಲವಾದುದು. ‘ಒಡಲಿನುರಿ, ನುಡಿಯ ಮುರಿ, ರಣ ಕಹಳೆ ದೆವ್ವಗಳ ಪಂಜು; ಸಿಡಿಲು ಸಾವಿರ ಒಡೆವ ಗಗನದ ಹೆಡೆ…..ರಣಹದ್ದು ಡೇಗೆಗಳ ಗಾಳಿಯ ಪಡೆ;” ಗಗನವೇ ಹೆಡೆಯೆತ್ತಿ ಮನುಕುಲವನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಆದರೆ ಕಾಲಯಾನದ ಮಜಲುಗಳಲ್ಲಿ ಅವುಗಳೆಲ್ಲಾ ತಾಯಿಯ ಪಾದಧೂಳಿಯಾಗಿ ಬಿಟ್ಟಿವೆ. ‘ತಾಯ ಸೆರಗನೊದೆದು ಬಾಗಿ ನೋಡ ಹೋದ’ ‘ತಾಯ್ಗಂಡ’ ರಾಜ್ಯಾಧಿಪತಿಗಳೆಲ್ಲಾ ಪಾತಾಳ ಕಂಡರೂ, ತಾಯಿಯ ಮಡಿಲಿನಲ್ಲಿ ಗೋರಿಗಳಾಗಿ ಎದ್ದು ನಿಂತಿದ್ದಾರೆ. ಅಂತಹವರ ಮೇಲೆ ‘ಕೊಲುವ ಹಕ್ಕು ನಿಮಗಿಲ್ಲ ಸ್ನೇಹಿತರೇ ಅಸ್ತ್ರವೇನೆ ಇರಲಿ’ ಎಂದು ತಾಯಿ ಬಿಳಿ ಹೂಗಳ ಕವಿತೆಗಳನ್ನು ಚೆಲ್ಲಿದ್ದಾಳೆ.
ಕೊಚ್ಚಿ ಕೊಲ್ಲುವ ಯುದ್ಧಗಳ ಎದುರಿಗೆ ಶಾಂತಿ ಪತಾಕೆಯನ್ನು ಹಾರಿಸಿದ್ದಾಳೆ. ಶಿವೇತರವಾದುದರಿಂದ ರಕ್ಷಿಸಿದ್ದಾಳೆ. ಯಾಕೆಂದರೆ ಅವಳು ಮಂಗಳೆ. ಸ್ವಲ್ಪ ಅಗೆದರೂ ಸಾಕು ತೆರೆದುಕೊಳ್ಳುವ ‘ಕುಂಕುಮ ಭೂಮಿ’. ರೈತರಿಗೆ ಬೀಜ ಬಿತ್ತಲು ಬೇಕಾಗಿರುವ ಅಗೆತವೂ ಅಷ್ಟೇ. ಆನಸಾಮಾನ್ಯರಿಗೆ ಬೇಕಾಗಿರುವುದು ‘ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿ’ (ಗೋಪಾಲಕೃಷ್ಣ ಅಡಿಗ)ದಾಗ ದೊರಕುವ ಮಿರಗುವ ಚಿನ್ನದ ಅದಿರಲ್ಲ. ಚಿನ್ನ ಯಾವತ್ತೂ ಅರಮನೆಯ ಬೊಕ್ಕಸವನ್ನು ತುಂಬುವಂತಹದು. ಅಂತಹ ಅರಮನೆಗಳನ್ನು ನಿಷ್ಠುರವಾಗಿ ನೆಲಸಮ ಮಾಡಲು ಭೂಮಿಗೆ, ಚರಿತ್ರೆಗೆ, ಕಾಲಕ್ಕೆ ಮಾತ್ರ ಸಾಧ್ಯ. ಆದರೆ ಕುಂಕುಮ ಭೂಮಿಯಾದರೋ ಕೃಷಿಯ ಮೂಲಕ ಸಾಮಾನ್ಯಜನರ ಹೊಟ್ಟೆಯನ್ನು ತಂಪಾಗಿಸುತ್ತದೆ. ಕೃಷಿ ದುಡಿಮೆಯ ಜೊತೆಗೂ ಥಳಕು ಹಾಕಿಕೊಂಡಿದೆ. ಬಿದ್ದ ಮಳೆ ಮತ್ತು ಮನುಷ್ಯನ ದುಡಿಮೆಯಿಂದಾಗಿ ಭೂಮಿ ‘ಬಸುರಿ’ಯಾಗಿದ್ದಾಳೆ. ಅವಳು ಅನ್ನಪೂರ್ಣೆ. ‘(ನೀನಿಲ್ಲದ) ಅನ್ನಪೂರ್ಣೆಯಿಲ್ಲದ ಮನೆಯಲಿ ಏನಿದ್ದೂ ವ್ಯರ್ಥ’ (ಅನ್ನಪೂರ್ಣೆ) ಎನ್ನುವಾಗ ಹಸಿವಿನ ಝಂಝಾವತಕ್ಕೆ ಸಿಕ್ಕಿ ಮನುಕುಲ ತತ್ತರಿಸಿಹೋಗುವ ಚಿತ್ರ ಕಣ್ಣಮುಂದೆ ಬರುತ್ತದೆ.
‘ಮುಚ್ಚು ಮರೆಯಿರದೆ ಬಾಳಿದ ಪೂರ್ಣ ಜೀವಿಗಳಾದ ಪ್ರಾಕೃತರಂತೆ “ಹುಟ್ಟಿದ್ದು ಗಟ್ಟಿಯಾಗಲಿ ಬೆಳೆದು ಅವರಂತೆ /ತುಂಬು ರಕ್ತದ ಹಾಡು ಕೇಳಿ ಬರಲಿ/ನೆಲದೊಡಲ ಕೆಂಪು, ನೀರೊಡಲ ಹಾವಿನ ಹೊಲಿಗೆ,/ಬಾನ ತಳಮಳ ಹೆತ್ತ ನೋವ ಸ್ಮರಿಸಿ….ಹಸಿರೆಲೆಗಳಲ್ಲಿ ಮಾಸದ ಕಣ್ಣು ಥಳಥಳಿಸಿ/ ತಪ್ಪುಹೆಜ್ಜೆಗಳನ್ನು ಸರಿಪಡಿಸಿ/ ನೆಲದಾಳದಲ್ಲಿ ಬೇರಿಳಿದ ಮರಗಳು ಬದುಕಿ/ಎಲ್ಲ ಕಾಲಗಳಲ್ಲಿ ಹೂವು ತೊಡಲಿ’ (ಕುಂಕುಮ ಭೂಮಿ). ಮಣ್ಣು ಕೊಡುವುದನ್ನೆಲ್ಲ ಪಡೆದು ಅದನೆ ಹಳಿಯುವ, ಭೂಮಿಯನ್ನು ಬಿಡದೇ ಬರಡಾಗಿಸುತ್ತಿರುವ ಆಧುನಿಕ ಮನುಷ್ಯನ ಲಾಲಸೆಗೆ, ಅವನು ಎಸಗುತ್ತಿರುವ ಮಾತೃದ್ರೋಹಕ್ಕೆ ಕೊಟ್ಟ ಉತ್ತರ ಮೇಲಿನ ಸಾಲುಗಳು. ಸ್ಮರಿಸಲು ಅರ್ಹರಾದವರು ಪ್ರಾಮಾಣಿಕ ಜನರೇ ಹೊರತು, ರಾಜಾಧಿಪತ್ಯದ ಚುಕ್ಕಾಣಿ ಹಿಡಿದ ಅಧಿಕಾರಗಳಲ್ಲ ಎಂಬುದನ್ನು ಇದು ಸಾರುತ್ತದೆ.
ಇಂತಹ ಪ್ರಾಮಾಣಿಕ ಶ್ರಮಜೀವಿಗೆ “ಮಂಜಗುರುಳಿನ ತಾಯಿ ಬಿಸಿಲ ಕಣ್ಣನು ತೆರೆದು/ ನಿನ್ನ ದಾರಿಯ ಮೇಲೆ ಹೂವೆಸೆಯಲಿ” (ಬೆಳಗಿನ ಮಂಜು) ಎಂದು ಹಾರೈಸುವ ಕೆ.ಎಸ್.ನ ಅವರ ದರ್ಶನ ಇಂದಿಗೂ ಪ್ರಸ್ತುತವಾಗಿದೆ.
0 ಪ್ರತಿಕ್ರಿಯೆಗಳು