ಸಂಕೇತದತ್ತ
**
ಹೆಚ್ ಎಸ್ ವಿಶ್ವನಾಥ್
ವಿಶ್ವನಾಥ್ ಅವರು ಬಾಲ್ಯದಿಂದಲೇ ವ್ಯಂಗ್ಯಚಿತ್ರ ರಚಿಸುತ್ತಾ ಬಂದಿದ್ದಾರೆ. ಸುಮಾರು ಐದು ದಶಕಗಳಿಂದ ಕಾರ್ಟೂನ್ ರಚಿಸುತ್ತಾ ಬಂದಿದ್ದಾರೆ. ಈಗ ಹಿರಿಯ ವ್ಯಂಗ್ಯಚಿತ್ರಕಾರರ ಸಾಲಲ್ಲಿದ್ದಾರೆ. ಹಾಗಾಗಿ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಸಾಕಷ್ಟು ಹೆಸರಾಗಿದ್ದಾರೆ. ಆದರೆ ಈ ವರ್ಷದ ಆರಂಭದಲ್ಲಿ ಬೆಂಗಳೂರಿನ ವಾಡಿಯ ರಸ್ತೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಆಶ್ರಯದಲ್ಲಿ ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರರ ‘ನಗೆ ಗ್ಯಾರಂಟಿ’ ಶೀರ್ಷಿಕೆಯ ಸಮೂಹ ವ್ಯಂಗ್ಯಚಿತ್ರ ಪ್ರದರ್ಶನವನ್ನು ಮತ್ತೊಬ್ಬ ಮುಖ್ಯ ಅತಿಥಿಯ ಜೊತೆ ಕೈ ಜೋಡಿಸಿ ಉದ್ಘಾಟಿಸಿದರು. ನಂತರ ಪ್ರದರ್ಶನದ ಬಗ್ಗೆ ಉದ್ಘಾಟಕರಾಗಿ ವಿಶ್ವನಾಥ್ ಮಾತಾಡಿದರು ಅದರ ವಿಡಿಯೋ ದಿಢೀರ್ ವೈರಲ್ ಆಯ್ತು. ರಾತ್ರಿ ಕಳೆದು ಬೆಳಗಾಗುವುದರೊಳಗೆ ವಿಶ್ವನಾಥ್ ಸೆಲೆಬ್ರೇಟಿ ಆದರು. ವ್ಯಂಗ್ಯಚಿತ್ರ ಕ್ಷೇತ್ರದ ಹೊರ ವಲಯದವರಿಗೂ ಚಿರಪರಿಚಿತರಾದರು. ಐದು ದಶಕಗಳ ಕಾಲ ವ್ಯಂಗ್ಯಚಿತ್ರಕಾರರಾಗಿದ್ದರೂ ದಿಢೀರ್ ಖ್ಯಾತರಾಗಿದ್ದು ಈ ನಗೆಹೊನಲುಗಳೊಂದಿಗಿನ ಹಾಸ್ಯಪೂರಿತ ಮಾತುಗಳಿಂದ! ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್ನಲ್ಲಿರುವ ಈ ವಿಡಿಯೋ ಎಲ್ಲ ಗ್ರೂಪ್ಗಳಲ್ಲೂ ಹರಿದಾಡಿ ಟ್ರೋಲ್ ಆಯ್ತು. ಸ್ಟ್ಯಾಂಡಪ್ ಕಾಮಿಡಿಗಳಿಗೂ ಭಯ ಹುಟ್ಟಿಸುವಷ್ಟು ಹೆಸರು ತಂತು!
ಹಾಸ್ಯ ಗೋಷ್ಠಿಗಳಲ್ಲೂ ಭಾಗಿ
ಹಾಗಂತ ವಿಶ್ವನಾಥ್ ಅವರಿಗೆ ಮಾತುಗಾರಿಕೆ ಏನೂ ಹೊಸದಲ್ಲ. ಅದು ವಂಶವಾಹಿನಿಯಾಗಿ ಬಂದದ್ದು ಅಂತಾರೆ. ಅವರ ಕುಟುಂಬದವರಲ್ಲಿ ಹಲವಾರು ಉತ್ತಮ ವಾಗ್ಮಿಗಳೂ ಇದ್ದಾರಂತೆ. ಅದೇ ಗುಣ ತಮಗೂ ಬಂದಿರಬಹುದು ಎನ್ನುವುದು ವಿಶ್ವನಾಥ್ ಅವರ ಅಂಬೋಣ. ಇವರು ಕಾರ್ಪೋರೇಷನ್ ಬ್ಯಾಂಕಿನ ಉದ್ಯೋಗಿ. ಮಂಗಳೂರಿನ ಮುಖ್ಯ ಕಛೇರಿಯಲ್ಲಿದ್ದಾಗ ಅಲ್ಲಿನ ಸಹ ನೌಕರರಾಗಿದ್ದವರು ನಮ್ಮ ನಾಡಿನ ಖ್ಯಾತ ಹನಿಗವನ ಖ್ಯಾತಿಯ ದುಂಡಿರಾಜ್ ಅವರು. ಆ ಕಾಲದಲ್ಲಿ ದುಂಡಿರಾಜ್ ಅವರೊಂದಿಗೆ ಹಲವಾರು ಹಾಸ್ಯ ಗೋಷ್ಠಿಗಳಲ್ಲಿ ಹಾಸ್ಯ ಮಾತುಕತೆಯಲ್ಲಿ ಭಾಗವಹಿಸಿದ್ದರಂತೆ. ಅವರೇ ಹೇಳುವಂತೆ ಉಡುಪಿ ಹಾಗೂ ಕುಂದಾಪುರಗಳಲ್ಲಿ ಉದಯವಾಣಿ ಹಾಗೂ ರೋಟರಿ ಕ್ಲಬ್ಬಿನ ಹಾಸ್ಯಗೋಷ್ಠಿಗಳಲ್ಲೂ ಮಾತಾಡಿದ್ದು ಈಗ ಇತಿಹಾಸ. ಆದರೆ ಇತ್ತೀಚಿನ ಈ ಹಾಸ್ಯ ಮಿಶ್ರಿತ ಮಾತುಕತೆ ಮಾತ್ರ ಹೆಚ್ಚು ಪ್ರಚಾರ ಪಡೆಯಿತು. ಅದೇ ಖುಷಿಯ ಸಂಗತಿ ಅಂತಾರೆ ವಿಶ್ವನಾಥ್.
ವ್ಯಂಗ್ಯಚಿತ್ರ ರಚನೆಗೆ ಆರ್ಕೆಎಲ್ ಅವರೇ ಸ್ಫೂರ್ತಿ
ವಿಶ್ವನಾಥ್ ಅವರ ಹುಟ್ಟೂರು ಶಿವಮೊಗ್ಗ, ಹುಟ್ಟಿದ್ದು 1956ರ ಜನವರಿ ಒಂದರಂದು! ಪಿಯುಸಿಯಲ್ಲಿದ್ದಾಗಲ್ಲೇ ಕಾರ್ಟೂನ್ ಬರೆಯಲು ಪ್ರಾರಂಭವಾಯ್ತು. ಅದು ಹೇಗೆ ಎಂದು ಗೊತ್ತಿಲ್ಲ. ಯಾರೂ ಕಲಿಸಲಿಲ್ಲ. ಆದರೆ ಆರ್ ಕೆ ಲಕ್ಷ್ಮಣ್ ಅವರೇ ಸ್ಫೂರ್ತಿ ಅವರ ಕಾರ್ಟೂನ್ ಸಂಗ್ರಹಗಳು ಹಾಗೂ ಅವರ ಟೈಮ್ಸ್ ಆಫ್ ಇಂಡಿಯಾದಲ್ಲಿನ ಕಾರ್ಟೂನ್ಗಳನ್ನು ನೋಡ್ತಾ ಇದ್ದೆ. ಅವರ ಕಾರ್ಟೂನ್ ಗಳೆಂದರೆ ನನಗೆ ಅತಿ ಪ್ರೀತಿ. ಅದೇ ನನ್ನಲ್ಲಿ ಕಾರ್ಟೂನ್ ಬರೆಯಲು ಪ್ರೇರೆಪಿಸಿತಂತೆ. ನಾಡಿನ ಖ್ಯಾತ ವ್ಯಂಗ್ಯಚಿತ್ರಗಾರರಾದ ಕೆ ಆರ್ ಸ್ವಾಮಿ ಅವರು ಆಗ ಶಿವಮೊಗ್ಗದಲ್ಲಿದ್ದರು. ಅವರ ಮನೆಯ ಹತ್ತಿರವೇ ವಿಶ್ವನಾಥ್ ಅವರ ಮನೆಯೂ ಇತ್ತು. ಮೇಗರವಳ್ಳಿ ಸುಬ್ರಹ್ಮಣ್ಯ ಹಾಗೂ ನಾಡಿಗ್ ಅವರು ನಿಕಟ ಸಂಪರ್ಕದಲ್ಲಿದ್ದರು. ಅವರೆಲ್ಲರ ಒಡನಾಟವೇ ನನ್ನಲ್ಲಿ ಕಾರ್ಟೂನ್ ಬರೆಯಲು ಸಹಕಾರಿಯಾಯ್ತು. ಆರಂಭದ ದಿನಗಳಲ್ಲಿ ಇವರು ರಚಿಸಿದ ವ್ಯಂಗ್ಯಚಿತ್ರಗಳು ‘ಪ್ರಜಾಮತ’ದಲ್ಲಿ ಹೆಚ್ಚು ಪ್ರಕಟವಾಗಿತ್ತು. ಅಲ್ಲದೇ ‘ಸುಧಾ’ ಹಾಗೂ ‘ಮಯೂರ’ಗಳಲ್ಲೂ ಬರ್ತಿತ್ತು. ‘ತರಂಗ’ ಆರಂಭವಾದ ಮೇಲೆ ಅದರಲ್ಲೂ ಪ್ರಕಟವಾಗ್ತಾ ಇತ್ತು. ಈಗೀಗ ಫೇಸ್ಬುಕ್ ನಲ್ಲೂ ಪೋಸ್ಟ್ ಮಾಡ್ತಾರೆ.
ವ್ಯಂಗ್ಯಚಿತ್ರ ಸಂಘದೊಂದಿಗಿನ ನಿಟಕ ಸಂಪರ್ಕ
“1970 ರಲ್ಲಿ ಆರಂಭಗೊಂಡ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಮೊದಲ ಸುತ್ತಿನ ಮಾತುಕತೆಯಲ್ಲೂ ನಾನಿದ್ದೆ ಎನ್ನುವುದೇ ಹೆಮ್ಮೆಯ ವಿಷಯ. 1976 ರಲ್ಲಿ ಸಂಘವು ಏರ್ಪಡಿಸಿದ್ದ ಮೊದಲ ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ನಾನೂ ಭಾಗಿಯಾಗಿದ್ದೆ, ಸಂಘದಿಂದ ಹೊರ ಬರುತ್ತಿದ್ದ ಪತ್ರಿಕೆಯ ಕೆಲಸಗಳಲ್ಲಿಯೂ, ವ್ಯಂಗ್ಯಚಿತ್ರ ರಚನೆಯ ಪ್ರಕ್ರಿಯೆಯಲ್ಲೂ ನಾನೂ ಭಾಗಿಯಾಗಿದ್ದೆ ಎನ್ನುವುದೇ ಸಂತಸದ ಸಂಗತಿ. ಇಂದಿಗೂ ವ್ಯಂಗ್ಯಚಿತ್ರಕಾರರ ಸಂಘದ ಸಂಪರ್ಕದಲ್ಲಿ ಇದ್ದೀನಿ. ಅಲ್ಲದೇ ಇದೇ ಸಂಘವು ನನಗೆ ನನ್ನ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿನ ಸೇವೆಗೆ ಜೀವಮಾನದ ಪ್ರಶಸ್ತಿಯನ್ನು ಕೊಡ ಮಾಡುತ್ತಿರುವುದು ವರ್ಣಿಸಲಾಗದಷ್ಟು ಖುಷಿಯನ್ನು ತಂದಿದೆ. ಮನೆಯವರೇ ನಮ್ಮನ್ನು ಗುರುತಿಸಿ ಪುರಸ್ಕರಿಸಿದಾಗ ಆಗುವ ಸಂತೋಷ ಈಗ ನನಗಾಗುತ್ತಿದೆ” ಎನ್ನುತ್ತಾರೆ ವಿಶ್ವನಾಥ್.
ಬ್ಯಾಂಕಿನ ಮಾಸಿಕ ಪತ್ರಿಕೆಯಲ್ಲಿ ಕಾರ್ಟೂನ್ ರಚನೆ
ಇವರು ಕೆಲಸ ಮಾಡುತ್ತಿದ್ದ ಕಾರ್ಪೊರೇಷನ್ ಬ್ಯಾಂಕ್ ಪ್ರಕಟ ಮಾಡುತ್ತಿದ್ದ ‘ಆಫೀಸರ್ಸ್ ವಾಯ್ಸ್’ ಎಂಬ ಇಂಗ್ಲೀಷಿನ ಮಾಸ ಪತ್ರಿಕೆ ಕೊನೆಯ ಪುಟದಲ್ಲಿ ಇವರ ನಾಲ್ಕು ವ್ಯಂಗ್ಯಚಿತ್ರಗಳು ಪ್ರಕಟವಾಗೋದು. ಹೀಗಿದು ಸರಿ ಸುಮಾರು ಇಪ್ಪತ್ತು ವರ್ಷಗಳು ಇವರೊಬ್ಬರದೇ ಕಾರ್ಟೂನ್ಗಳು ಪ್ರಕಟವಾಗಿದ್ದು ವಿಶೇಷ. ‘ಬ್ಯಾಂಕಿನವರ ಪ್ರೋತ್ಸಾಹ ಸಾಕಷ್ಟಿತ್ತು ಅದರಿಂದಲೇ ತಾವು ನಿರಂತರವಾಗಿ ಕಾರ್ಟೂನ್ ರಚಿಸಲು ಅನುವಾಯ್ತು’ ಎಂಬುದು ವಿಶ್ವನಾಥ್ ಅವರ ವಿನಮ್ರ ನುಡಿ. ಆನಂತರದಲ್ಲಿ ‘ಕೆನರಾ ಟೈಮ್ಸ್’ ಹಾಗೂ ‘ಜನಾಂತರಂಗ’ ಪತ್ರಿಕೆಗಳಿಗೆ ಸತತ ನಾಲ್ಕು ವರ್ಷಗಳ ಕಾಲ ಒಂದೇ ಸಮಯದಲ್ಲಿ ಕನ್ನಡ ಮತ್ತು ಇಂಗ್ಲೀಷಿನಲ್ಲಿ ಪ್ಯಾಕೆಟ್ ಕಾರ್ಟೂನ್ ಬರೆದಿದ್ದಾರೆ. ಹೀಗೆ ಪ್ರಕಟವಾದ ಎಲ್ಲಾ ಕಾರ್ಟೂನ್ಗಳ ಸಂಗ್ರಹವನ್ನು ಪುಸ್ತಕರೂಪದಲ್ಲೂ ಪ್ರಕಟವೂ ಆಯ್ತು. ಅದೂ ಅಲ್ಲದೇ ಆಗೀಗ ರಚಿಸಿದ್ದ ಹಾಗೂ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಕನ್ನಡದ ಹಾಗೂ ಇಂಗ್ಲೀಷಿನ ಕಾರ್ಟೂನ್ ಸಂಗ್ರಹಗಳ ಎರಡು ಪುಸ್ತಕಗಳನ್ನೂ ಲೋಕಾರ್ಪಣೆಗೊಳಿಸಿದ್ದಾರೆ.
ಆಗೆಲ್ಲಾ ಬಿ ವಿ ರಾಮಮೂರ್ತಿ, ನರೇಂದ್ರ, ಪ್ರೇಮ್ ಕುಮಾರ್, ಎಸ್ಸೆಸ್ ಆನಂದ್, ಗುಜ್ಜಾರಪ್ಪ, ಎಸ್ಸೆಸ್ ಆನಂದ್, ಎಂ ವಿಶ್ವನಾಥ್, ಹಾಗೂ ವಿ ಆರ್ ಸಿ ಶೇಖರ್ ಅವರು ಸಂಪರ್ಕದಲ್ಲಿದ್ದರು. ಇತ್ತೀಚೆಗೆ ನಂಜುಂಡ ಸ್ವಾಮಿ, ನಾಗನಾಥ್, ರಘುಪತಿ ಅವರ ಸಂಪರ್ಕವು ಹೆಚ್ಚಾಗಿದೆ. ಸಾಮಾನ್ಯವಾಗಿ ವ್ಯಂಗ್ಯಚಿತ್ರಕಾರರಲ್ಲಿ ತಮ್ಮದೇ ಆದ ಶೈಲಿಯ ಕ್ಯಾರೆಕ್ಟರ್ಗಳಿಂದ, ಪಂಚ್ ಡೈಲಾಗ್ ಗಳಿಂದ ಚಿರಪರಿಚಿತರಾಗಿರುತ್ತಾರೆ. ಹಾಗೆಯೇ ವಿಶ್ವನಾಥ್ ಅವರದ್ದೂ ಒಂದು ಶೈಲಿ ಇದೆ.
ಈ ಹಿರಿಯ ವ್ಯಂಗ್ಯಚಿತ್ರಕಾರ ಹೆಚ್ ಎಸ್ ವಿಶ್ವನಾಥ್ ಅವರು ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ನಿನ್ನೆ (17ರ ಆಗಸ್ಟ್ 2024) ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದವರು ತುಮಕೂರಿನ ರಾಜನ್ ಅವರು ತಮ್ಮ ಮಗ ದಿ|| ಜಿ ಕೃಷ್ಣಕಾಂತ್ ಅವರ ನೆನಪಲ್ಲಿ ಕೊಡುವ ದತ್ತಿ ಪ್ರಶಸ್ತಿಯನ್ನು ನೀಡಿ ಸ್ವೀಕರಿಸಿದರು.
0 ಪ್ರತಿಕ್ರಿಯೆಗಳು