ಹೆಚ್ಚು ಹೆಚ್ಚು ಮಾನವರಾಗಲು..

ಕೃಷ್ಣಮೂರ್ತಿ ಕವತ್ತಾರ್

೧೯೯೭ರಷ್ಟು ಹಿಂದೆ ನೀನಾಸಮ್ ಪದವಿ ಪಡೆದು, ತಿರುಗಾಟವನ್ನೂ ನಡೆಸಿ ಬೆಂಗಳೂರಿಗೆ ಬಂದು ನೆಲೆಸಿದ ಕೃಷ್ಣಮೂರ್ತಿ ಕವತ್ತಾರ್ ‘ರಂಗಾವತಾರ’ ಎಂಬ ತಂಡ ಕಟ್ಟಿ ದೇಸೀ ಸತ್ವವುಳ್ಳ ನಾಟಕಗಳಿಗೆ ಒತ್ತುಕೊಟ್ಟು ರಂಗಕಾಯಕ ಆರಂಭಿಸಿದರು. ಯಕ್ಷಗಾನ, ಸಂಗೀತ, ನಿರ್ದೇಶನ ಅಭಿನಯ -ಎಲ್ಲವುಗಳಲ್ಲೂ ವಿಸ್ತಾರ ಅನುಭವವುಳ್ಳ ಕವತ್ತಾರ್ ಇಂದೀಗ ರಂಭೂಮಿ ಮಾತ್ರವಲ್ಲ; ಧಾರವಾಹಿ, ಸಿನಿಮಾಗಳಲ್ಲೂ ಬೇಡಿಕೆಯುಳ್ಳ ನಟ.

ನೀನಾಸ್ ರಂಗಶಿಕ್ಷಣ ಕೇಂದ್ರದಿಂದ ಪಡೆದ ತರಬೇತಿ ಹಾಗೂ ಆ ಬಳಿಕದ ತಿರುಗಾಟ ನನ್ನಲ್ಲಿ ರಂಗತಂಡ ಕಟ್ಟಲು ಆತ್ಮಸ್ಥೈರ್ಯ ಹುಟ್ಟಿಸಿತು. ತಿರುಗಾಟ ಮುಗಿಸಿ ಬೆಂಗಳೂರಿಗೆ ಬಂದು ಕೆಲಕಾಲದ ಬಳಿಕ ‘ರಂಗಾವತಾರ’ ತಂಡಕಟ್ಟಿದೆ. ಕರಾವಳಿ ಕರ್ನಾಟಕದಿಂದ ಬಂದವನಾದ್ದರಿಂದ ಅಲ್ಲಿನ ಯಕ್ಷಗಾನ, ಭಾಗವತಿಕೆ, ಸಂಗೀತ ಇತ್ಯಾದಿ ಕಾಯಕಗಳಲ್ಲೂ ಪರಿಶ್ರಮವಿದ್ದುದು ನನ್ನ ರಂಗಭೂಮಿಯ ಮುಂದಿನ ಬೆಳವಣಿಗೆಗೆ ಪ್ರಯೋಜನಕಾರಿಯಾಯಿತು.

ನಮ್ಮ ‘ರಂಗಾವತಾರ’ ತಂಡವೆಂದರೆ ಪರಿಪೂರ್ಣ ನಮ್ಮದೇ ತಂಡವೆಂದಲ್ಲ. ನಾವು ಕೆಲವರು ತಂಡದಲ್ಲಿ ಭದ್ರವಾಗಿದ್ದುಕೊಂಡು ಉಳಿದಂತೆ ನಾಟಕ ತಯಾರಿಯ ಹೊತ್ತಿಗೆ ಇತರ ಕಲಾವಿದರನ್ನು ಆಮಂತ್ರಿಸುವುದು ನಮ್ಮ ಸಂಪ್ರದಾಯ. ಕೆಲವು ತಂಡಗಳಲ್ಲಿ ತಮ್ಮ ನಟರು ಇನ್ನೊಂದು ತಂಡದಲ್ಲಿ ಅಭಿನಯಿಸಕೂಡದೆಂಬ ಶರತ್ತು ವಿಧಿಸುವುದುಂಟು. ನಮ್ಮ ತಂಡದಲ್ಲಿ ಆ ಭಾವನೆಯೇ ಇಲ್ಲ. ಯಾವುದೇ ತಂಡದವರು ನಮ್ಮ ನಾಟಕದಲ್ಲಿ ಅಭಿನಯಿಸಬಹುದು. ನಮಗೆ ರಂಗ ಜಂಗಮದಲ್ಲಿ ವಿಶ್ವಾಸ. ನಾವು ಯಾವ ತಂಡಕ್ಕೆ ಬೇಕಾದರೂ ನಾಟಕ ಮಾಡಬಹುದು. ಸಮಾನ ಮನಸ್ಕರ ತಂಡವಾಗಿದ್ದರಾಯಿತು. ಎಲ್ಲರೊಳಗೊಂದಾಗಿ ಆರೋಗ್ಯಪೂರ್ಣ ಅಸ್ತಿತ್ವ ಕಂಡುಕೊಂಡರೆ ಅಷ್ಟೇ ಸಾಕು. ನಾನಷ್ಟೇ ಅಲ್ಲ, ನನ್ನ ತಂಡದವರು ಕೂಡ ನನ್ನೊಂದಿಗೆ ಇತರ ಸಂಸ್ಥೆಗಳ ನಾಟಕ ಸಿದ್ಧತೆಯಲ್ಲಿ ಸಹಕರಿಸುತ್ತಾರೆ ಎಂಬುದು ನಮ್ಮ ಹೆಮ್ಮೆ.

‘ಅಭಿನಯಿಸಬೇಡಿ-ಅನುಭವಿಸಿ’ ಎಂಬುದು ನಮ್ಮ ನಟನೆಯ ಮೂಲಮಂತ್ರ. ಇದರಲ್ಲಿ ನಟನ ಮನಸ್ಥಿತಿಯೂ ನಾಟಕಕಾರನ ಮನಸ್ಥಿತಿಯೂ ಪ್ರೇಕ್ಷಕನ ಮನಸ್ಥಿತಿಯೂ ಒಟ್ಟಿಗೆ ಸೇರಿ ಕೆಲಸ ಮಾಡುತ್ತದೆ. ರಾಷ್ಟ್ರೀಯ ರಂಗಭೂಮಿ ಅಲ್ಕಾಜಿ, ಶ್ರೀರಂಗರಂಥವರ ತಲೆಯಲ್ಲಿ ಹುಟ್ಟಿದ್ದು. ನಮ್ಮ ರಂಗಭೂಮಿ ನಮ್ಮ ಕೃಷಿ ಸಂಸ್ಕೃತಿಯಲ್ಲಿ ಹುಟ್ಟಿದ್ದು. ಗದ್ದೆಯಲ್ಲಿ ನೇಜಿ ನಡುವಾಗ, ಭತ್ತ ಕುಟ್ಟುವಾಗ, ಭೂತ ಕಟ್ಟುವಾಗ ಎಷ್ಟೊಂದು ಹಾಡುಗಳು, ಪಾಡ್ದನಗಳು ಹುಟ್ಟಿಕೊಂಡವು. ಅವೆಲ್ಲವೂ ನಮ್ಮ ದೇಸೀ ರಂಗಭೂಮಿಗೆ ಮೂಲಧಾತುವಾದವು. ಹಾಗಾಗಿಯೇ ನನ್ನ ಹೆಚ್ಚಿನ ನಾಟಕಗಳಲ್ಲಿ ಮೂಲಧಾತುವಿನ ಸತ್ವ ಇದ್ದೇ ಇರುತ್ತದೆ.

ನಮ್ಮ ರಂಗಾವತಾರದಲ್ಲಿ ತರಬೇತಾದ ಯಾವ ಕಲಾವಿದರೂ ಅವರಿಗೆ ಬಂದೊದಗಿದ ಅವಕಾಶಗಳನ್ನು ನಿರಾಕರಿಸಬೇಕಾದ್ದಿಲ್ಲ. ನಾಟಕದ ಜೊತೆಗೆ ಹೊಟ್ಟೆಪಾಡಿಗೂ ಆದ್ಯತೆ ಸಲ್ಲಬೇಕಾದ್ದರಿಂದ ಅವರು ಸಿನಿಮಾದಲ್ಲಿ ಅಭಿನಯಿಸಲಿ, ಧಾರಾವಾಹಿಗಳಲ್ಲಿ ಅಭಿನಯಿಸಲಿ, ನಾಟಕ ಬಿಡದಿದ್ದರಾಯಿತು. ರಂಗಭೂಮಿ ಮುಖ್ಯವಾಗಿ ಬದುಕಿಗೊಂದು ಏಣಿಕೂಡ. ನಮ್ಮ ತಂಡದ ಪ್ರಮೋದ್ ಶೆಟ್ಟಿ, ವಲ್ಲಭ, ನವೀನ್ ಮೊದಲಾದವರು ವಿವಿಧ ಕಲಾಮಾಧ್ಯಮಗಳಲ್ಲಿ ಮಿಂಚುವುದು ಕೂಡ ನಮ್ಮ ಹೆಮ್ಮೆಯೆ.

ಏಕಪಾತ್ರ ನಾಟಕವನ್ನು ಮೆಚ್ಚಿಕೊಳ್ಳುವಂತೆಯೇ ಟೀಕಿಸುವವರೂ ಇದ್ದಾರೆ. ಸಾಯುವನೇ ಚಿರಂಜೀವಿ (ರ: ಶಶಿಧರ ಭಾರಿಘಾಟ್) ನಾಟಕದ ನೂರಾರು ಪ್ರದರ್ಶನಗಳನ್ನು ಮಾಡಿ, ‘ಪರಿಪೂರ್ಣ ಕಲಾವಿದ ಹೇಗಿರಬೇಕು’ ಅಂತಲೋ ‘ಸಾವಯವ ಪ್ರಜ್ಞೆಯ ಕಲಾವಿದ’ ಎಂತಲೋ ವಿಮರ್ಶಕರಿಂದ ಮೆಚ್ಚುಗೆ ಪಡೆದದ್ದೂ ಇದೆ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವೇದಿಕೆಯಲ್ಲಿ ನಾಟಕ ನಡೆದಾಗ ಕಲಾವಿದ ನಾನು, ಪ್ರೇಕ್ಷಕರನ್ನು ಕುರಿತು ‘ನಾನು ಮಾತಾಡಿದ್ದು ಜಾಸ್ತಿ ಆಯ್ತಾ?’ ಎಂಬ ಪ್ರಶ್ನೆ ಹಾಕಿದೆ. ಪ್ರೇಕ್ಷಕರೆಲ್ಲ ಒಮ್ಮೆಲೆ ‘ಇಲ್ಲ ಇಲ್ಲ ಮಾತಾಡಿ’ ಎಂದರು.

ತುಮಕೂರಿನಲ್ಲಿ ಕೂಡಾ ವೇದಿಕೆಯಿಂದ ಇದೇ ಪ್ರಶ್ನೆ ಹಾಕಿದೆ. (ಅದು ನಾಟಕದ್ದೇ ಮಾತು.) ಅಲ್ಲಿನ ಡಿ.ಸಿ.ಯವರು ಹಾಗೂ ಖ್ಯಾತ ನಿರ್ದೇಶಕ ಆರ್ ನಾಗೇಶ್ ಅಕ್ಕಪಕ್ಕದಲ್ಲಿ ಕುಳಿತಿದ್ದರು. ಡಿ.ಸಿ.ಯವರು ತಟ್ಟನೆ ಎದ್ದು ನಿಂತು ಪ್ರೇಕ್ಷಕರ ಮುಂದಾಳತ್ವ ವಹಿಸಿದವರಂತೆ ‘ಇಲ್ಲ ಇಲ್ಲ ಮಾತಾಡಿ, ಏನೂ ತೊಂದರೆಯಿಲ್ಲ’ ಎಂದರು. ಆರ್. ನಾಗೇಶ್ ಡಿಸಿಯವರಿಗೆ ‘ಕುಳಿತುಕೊಳ್ಳಿ, ಇದು ನಾಟಕದ ಭಾಗ’ ಎಂದರೂ ಅವರು ಕೇಳಲಿಲ್ಲ. ಅಷ್ಟರ ಮಟ್ಟಿಗೆ ಪ್ರೇಕ್ಷಕರು ನಾಟಕದಲ್ಲಿ ತನ್ಮಯರಾಗಿದ್ದರು ಎಂಬುದು ಏಕವ್ಯಕ್ತಿ ಪ್ರದರ್ಶನವನ್ನು ಜನ ಒಪ್ಪುತ್ತಾರೆ ಎಂಬುದಕ್ಕೆ ನಿದರ್ಶನ. ಮಂಗಳೂರಿನಲ್ಲಿ ಪ್ರೇಕ್ಷಕರಾಗಿದ್ದವರೆಲ್ಲರೂ ವೇದಿಕೆಗೆ ಬಂದು ಮುಕ್ತ ಪ್ರಶಂಸೆ ಮಾಡಿದ್ದೂ ಇದೆ. ‘ರಂಗಭೂಮಿಯೊಂದು ಸಾಮೂಹಿಕ ಕಲೆ. ಏಕವ್ಯಕ್ತಿ ನಾಟಕ ಮಾಡುವುದಿದ್ದರೆ ರಂಗಭೂಮಿಯೇ ಏಕೆ ಬೇಕು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ನಾಟಕ ಏಕವ್ಯಕ್ತಿಯದ್ದಾದರೂ ಅದೂ ಒಂದು ಸಾಮೂಹಿಕ ಕ್ರಿಯೆಯೆ.

ಏಕವ್ಯಕ್ತಿ ಎಂದಾಗ ನಮ್ಮ ಹರಿಕತೆ ಏಕವ್ಯಕ್ತಿಯದ್ದಲ್ಲವೆ? ತಾಳಮದ್ದಳೆಯಲ್ಲಿ ಅರ್ಥಧಾರಿ ಕುಳಿತುಕೊಂಡು ಒಬ್ಬನೇ ಗಂಟೆಗಟ್ಟಲೆ ಮಾತನಾಡುವುದಿಲ್ಲವೆ? ನಮ್ಮ ಅಜ್ಜಿಕತೆಗಳು, ಭೂತಕೋಲ ಮುಂತಾದವು ಏಕವ್ಯಕ್ತಿ ಅಭಿವ್ಯಕ್ತಿಯಲ್ಲವೆ? ನಮ್ಮ ದೇಸೀ ಅಭಿವ್ಯಕ್ತಿಗಳಲ್ಲಿ ಏಕವ್ಯಕ್ತಿ ಪ್ರದರ್ಶನಕ್ಕೆ ಬಹಳ ಪ್ರಾಧಾನ್ಯವಿದೆ. ರಾಷ್ಟ್ರೀಯ ರಂಗಭೂಮಿಯ ನವ್ಯ ಪರಿಕಲ್ಪನೆಗಿಂತ ದೇಸೀ ರಂಗಭೂಮಿಯ ಪರಿಕಲ್ಪನೆ ಭಿನ್ನ ಎಂಬುದನ್ನು ಮನಗಾಣಬೇಕು. ಇದು ನಮ್ಮ ಮಣ್ಣಿಗೆ, ನಮ್ಮ ಕೃಷಿ ಸಂಸ್ಕೃತಿಗೆ ಹೊಂದಾಣಿಕೆ ಆಗುವಂಥದ್ದು ಎಂಬುದನ್ನು ಮರೆಯಲಾಗದು. ನಮ್ಮ ಪುರಾಣ, ಜಾನಪದ ಕಲೆಗಳನ್ನು ಬಿತ್ತರಿಸುವಾಗಲೆಲ್ಲ ಏಕವ್ಯಕ್ತಿ ಪ್ರಜ್ಞೆ ಬಹಳ ಮುಖ್ಯವಾಗುತ್ತದೆ.

ಬೆಂಗಳೂರಿನ ಕಲಾವಿದರಿಂದ ಕರಿಯವಜ್ಜೆರೆನ ಕತೆಕುಲು ಎಂಬ ಡಿಕೆ ಚೌಟ ಅವರ ತುಳು ಸಣ್ಣಕತೆಗಳ ಗೊಂಚಲನ್ನು ನಾಟಕ ರೂಪದಲ್ಲಿ ಪ್ರದರ್ಶನಕ್ಕೆ ಅಣಿಗೊಳಿಸಿದೆ. ಅದರ ಕಲಾವಿದರಲ್ಲಿ ಹೆಚ್ಚಿನವರು ಕನ್ನಡಿಗರು. (ರಾಷ್ಟ್ರೀಯ ನಾಟಕ ಶಾಲೆಯಲ್ಲೂ ಹೀಗೇ ಆಗುತ್ತದೆ.) ಅವರು ತುಳುವನ್ನು ಕಲಿತು ಎಷ್ಟು ಚೆನ್ನಾಗಿ ಪಾತ್ರ ನಿರ್ವಹಣೆ ಮಾಡಿದರೆಂದರೆ ನಾಟಕ ಮುಗಿದ ಬಳಿಕ ಮಂಗಳೂರಿನ ಪ್ರೇಕ್ಷಕರು ವೇದಿಕೆಗೆ ಬಂದು ನಟರ ಜೊತೆ ಮಾತನಾಡಿಸಿದಾಗಲೇ ಗೊತ್ತು, ಅರ‍್ಯಾರಿಗೂ ತುಳು ಭಾಷೆ ಬರುವುದಿಲ್ಲ ಎಂದು. ಅವರ ‘ಒಳಗೊಳ್ಳುವಿಕೆ, ಅನುಭವಿಸುವಿಕೆ’ ಎಷ್ಟು ಅಮೋಘವಾಗಿತ್ತೆಂದರೆ ನಾಟಕಕಾರ ಡಿ.ಕೆ. ಚೌಟರು ಮೈಮರೆಯುವಷ್ಟು.

ಡಾ. ವಿವೇಕ ರೈ, ಶಶಿಧರ ಅಡಪ, ಐ.ಕೆ. ಬೊಳುವಾರು ಮೊದಲಾದವರು ಕರಿಯವಜ್ಜೆರೆನ ಕತೆಕುಲು ನಾಟಕದ ವಿಭಿನ್ನತೆಯ ಬಗ್ಗೆ ಸಾಕಷ್ಟು ಮಾತುಗಳನ್ನಾಡಿದ್ದಾರೆ. ಒಟ್ಟಾರೆಯಾಗಿ ರಂಗಭೂಮಿ ನಮಗೆ ಬದುಕು ಕೊಟ್ಟಿದೆ. ಹೆಚ್ಚುಹೆಚ್ಚು ರಂಗಭೂಮಿಯನ್ನು ಅರಿಯುತ್ತಲೇ ಹೆಚ್ಚುಹೆಚ್ಚು ಮಾನವರಾಗುವಂತೆ ಮಾಡುವ ಶಕ್ತಿ ರಂಗಭೂಮಿಗಿದೆ ಎಂಬದನ್ನು ಅರಿತುಕೊಂಡಿದ್ದೇನೆ.

‍ಲೇಖಕರು Avadhi

December 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: