ಹೃದಯ ಕೊಳದಲ್ಲಿ ಪಾದಗಳೆಬ್ಬಿಸುವ ಪುಳಕ

ಸಂತೋಷ್ ಅನಂತಪುರ

ಸೂರ್ಯನು ಬೆಳಗುವುದು, ಹುಣ್ಣಿಮೆಯ ಚಂದಿರ ಬೆಳಕನ್ನು ಚೆಲ್ಲುವುದೆಲ್ಲಾ ಎಷ್ಟು ಸಹಜವೋ, ಪ್ರೀತಿ ಹುಟ್ಟುವುದು ಕೂಡ ಅಷ್ಟೇ ಸಹಜ. ಪ್ರೀತಿ ಮೂಡಲು ಕಾರಣಗಳನೇಕ. ಏಕಾನೇಕ ಹುಟ್ಟುವಂತದ್ದಲ್ಲವಲ್ಲ ಪ್ರೀತಿ. ಒಂದಷ್ಟು ಮಾಗಿ, ಬಲಿತು ಒಲಿಯುವಂತದ್ದು ಮತ್ತು ಒಲಿಸಿಕೊಳ್ಳುವಂತದ್ದು.

ಎಲ್ಲಕ್ಕಿಂತ ಮಿಗಿಲಾಗಿ ಪ್ರಕೃತಿಯೇ ನಮ್ಮೊಳಗಿರಿಸಿದ ವರ್ಣಮಯ ಭಾವಸ್ಥಿತಿಯದು. ಇತರ ಹಲವು ಭಾವಗಳನ್ನು ಸುಪ್ತವಾಗಿರಿಸುವ ಶಕ್ತಿಯಿದ್ದರೂ, ಪ್ರೀತಿಯ ಭಾವವನ್ನು ಮುಚ್ಚಿಡಲು ಹಾಗೂ ಬಚ್ಚಿಡಲಾಗುವಂತದ್ದಲ್ಲ. ಅದನ್ನು ಅಭಿವ್ಯಕ್ತಿಸುವ ತುಡಿತ ನಮ್ಮೊಳಗೆ ಹೆಚ್ಛೇ ಇರುತ್ತದೆ.

ಪ್ರೀತಿಯೆಂಬ ಭಾವವು ಸ್ಥಾವರವಾಗದೆ ಜಂಗಮನಾಗುತ್ತಾ ಸಂಚರಿಸುತ್ತಿರುತ್ತದೆ. ಅಂತಹ ಯಾತ್ರೆಯಲ್ಲಿ ಗೋಚರಿಸಿ ಅನುಭವಕ್ಕೆ ಬರುವಂತದ್ದನ್ನು ಅನುಭವಿಸುತ್ತಾ, ಅನುಭವಕ್ಕೆ ಬಾರದ್ದನ್ನು ಅನುಭಾವಿಸುತ್ತಾ ನಡೆಯುತ್ತಿರುವಾಗ ಕೆಲವೊಂದು ಪ್ರೀತಿಯು ಸುಗಂಧವಾಗಿ ಮೈ-ಮನಗಳನ್ನು ಸೆಟೆದು ನಿಲ್ಲಿಸಿ ಬಿಡುತ್ತವೆ.

ಸಮಯಾನು ಸಮಯಕ್ಕೆ ಮಾಡಬೇಕಾದದ್ದನ್ನು ಮಾಡಿಸಿಕೊಂಡು, ನಡೆಸಬೇಕಾದದ್ದನ್ನು ನಡೆಸಿಕೊಂಡು ಹೋಗುವ ಮಾಂತ್ರಿಕ ಶಕ್ತಿ ಪ್ರೀತಿಗಿದೆ. ಜಗತ್ತನ್ನು ಆಳುವ ಲೌಕಿಕದ ಬಹುದೊಡ್ಡ ಯುಕ್ತಿಗಿಂತಲೂ ಪ್ರೀತಿಯ ಉಚ್ಛ್ರಾಯ ಸ್ಥಿತಿಯಲ್ಲಿ ಹೊಮ್ಮುವ ಭಕ್ತಿ ಮಹತ್ತಾದದ್ದು. ಪ್ರೀತಿಯ ವಿಶೇಷತೆಯೇ ಅದು. ಹಾಗೇ ಅದು ಮೂಡಿಸುವ ಭಕ್ತಿಯೂ.

Sketch by- Santhosh Ananthapura

***

ಉಷೆ ಇಳಿದು ನಿಶೆ ಏರುವಾಗ ನಶೆಯು ತೊಡಿಸುವ ಹೊದಿಕೆಯೇ ಪ್ರೀತಿ. ಆಹೊದಿಕೆಯ ತುಂಬಾ ಎಷ್ಟೇ ಬಾಗಿದರೂ ಮುರಿಯದ ಕಾಮನ ಬಿಲ್ಲಿನ ಬಿಂಬ. ಏಳುರಂಗುಗಳು ತೆರೆದು ತೋರುವ ವಿಸ್ಮಯಕ್ಕೆ ಬೆರಗಾಗಿ ಬೆತ್ತಲಾಗುವ ಜೀವದೊಳಗೆ ಪ್ರೀತಿಯು ಮಿಡಿಯುತ್ತಲಿರುತ್ತದೆ. ರಂಗಿನೊಳಗೆ ಮಿಂದೇಳುವ ಆಕರ್ಷಣೆಯು ನಿತ್ಯ ನೂತನ. ಒಂದೊಂದೂ ಭಿನ್ನವಾದದ್ದು.

ಹೀಗೇ ಎಂಬುದಿಲ್ಲದ, ಹೇಗೂ ಇರಬಹುದಾದ್ದು ಎನ್ನಿಸುವ ಮೋಹಕ ರೂಪ ಮತ್ತು ರೂಪಕಗಳು. ಕಾಮನೆಗಳನ್ನು ಹುಟ್ಟಾ ಎತ್ತಿಕೊಂಡು, ಇನ್ನೊಂದಿಷ್ಟನ್ನು ಬದುಕಿ ಆರಿಸಿ, ಗಳಿಸಿಕೊಂಡು ಪ್ರೀತಿಗೊಂದು ರೂಪವನ್ನು ಕೊಡಲು ಮುಂದಾಗುತ್ತೇವೆ. ಒಬ್ಬೊಬ್ಬರದ್ದು ಒಂದೊಂದು ರೀತಿ-ನೀತಿಯ ರೂಪ-ರೂಪಕಗಳು. ಒಟ್ಟಿನಲ್ಲಿ ಬಹುರೂಪಿಯನ್ನು ಕಾಣಲು ಹಂಬಲಿಸುವ ತನು-ಮನವು ರೂಪಾನು ರೂಪಗಳನು ದಾಟಿ ಹೋಗುವುದುಂಟು.

ವಿರೂಪಗಳು ಸ್ವರೂಪಗಳಾಗಿಯೂ, ಸ್ವರೂಪಗಳು ಕುರೂಪಗಳಾಗಿಯೂ ಬದಲಾಗುತ್ತಿರುತ್ತವೆ. ಭಿನ್ನ ಸ್ಥಿತಿಗಳೆಬ್ಬಿಸುವ ಲಯ-ಸ್ವರ ತರಂಗಗಳಿಗೆ ಜೀವನಾದವು ಹೊಮ್ಮುತ್ತಿರುತ್ತದೆ. ಶಬ್ದಗಳು ಚಿಮ್ಮಿಸುವ ತಾಳಕ್ಕೆ ಕುಣಿಯುವ ಕಾಲಾಗುತ್ತಲೇ, ಕಣ್ಣುಗಳು ಹೊಮ್ಮಿಸುವ ಕಾವ್ಯಕ್ಕೆ ಲೇಖನಿಯಾಗಿಬಿಡುತ್ತೇವೆ. ಗಲ್ಲವರಳಿ ಕೆಂಪಾದೊಡೆ ಅಧರಗಳು ಕಂಪಿಸುತ್ತವೆ. ಕುಣಿದು ದಣಿದು ಬಿಡುವ ಜೀವಕ್ಕೆ ಪ್ರೀತಿಸುವುದು ಮತ್ತು ಪ್ರೀತಿಸಲ್ಪಡುವುದೊಂದು ತಾನೇ ಬರೆಯುವ ಮಹಾ ಕಾವ್ಯವಿದ್ದಂತೆ.

ಬದಲಾದ ಕಾಲ ಮಾನದಲ್ಲೂ ಕಂಪನಗಳೊಂದಿಷ್ಟು ಬದಲಾಗಿದ್ದರೂಅಭಿವ್ಯಕ್ತಿಸುವಬಗೆಯಲ್ಲಿಯಾವುದೇವ್ಯತ್ಯಾಸವಾಗಿರುದಿಲ್ಲವಷ್ಟೆ. ನೋಡುವ, ಚಿಂತಿಸುವ, ಅನುಭವಿಸುವ ರೀತಿಯಲ್ಲಿ ಮಾರ್ಪಾಟುಗಳಾಗಿವೆಯೇನೋ ನಿಜ. ಆದರೆ ಮೂಲ ಉದ್ದೇಶ ಮಾತ್ರ ಹಾಗೆಯೇ ಇದೆ ಮತ್ತು ಇರುತ್ತದೆ ಕೂಡ.

ಋತುಗಳು ಬದಲಾದಂತೆಲ್ಲಾ ಕಲ್ಪನೆಗಳೂ ಬದಲಾಗುತ್ತವೆ. ಅರ್ಧ ಆಯುಷ್ಯವನ್ನು ಕಲ್ಪನೆಯಲ್ಲೇ ಕಳೆಯುವ ನಮಗೆ ನಿಜದಹಂಗಿನ ಸುಳಿವೂ ಇರುವುದಿಲ್ಲ. ಹಾಗಿರುವಾಗಲೇ ಛಾಯೆಯ ನೌಕೆಯೊಳಗೆ ನಿತ್ಯದ ಗೋಳಿಂದ ದೂರವಾಗಲು ಪ್ರಯತ್ನಿಸುತ್ತಿರುವಾಗ ನೀರ ಹನಿ ಹೊಳೆದು ಹೋದಂತೆನಿಸಿ ಬಿಡುತ್ತದೆ. ಆದರೂ ಪ್ರೀತಿಯನ್ನು ಪದೇಪದೇ ಸಾಕ್ಷೀಕರಿಸಿಕೊಳ್ಳುವುದನ್ನು ಬಿಡದೆ ಪ್ರಯತ್ನಿಸುತ್ತಿರುತ್ತೇವೆ.

***

ಕಾಲಾನುಕಾಲಕ್ಕೆ ಹಲವು ಬಂಧಗಳು ಒದಗಿ ಬಂದು ಮರೆಯಾಗುವುದುಂಟು. ಬೆರಳೆಣಿಕೆಯ ನಿತ್ಯ ಹರಿದ್ವರ್ಣ ಬಾಂಧವ್ಯಗಳಷ್ಟೇ ನಮ್ಮ ಪಾಲಿಗೆ ಹಸಿರಾಗಿರುತ್ತವೆ. ಅಲ್ಲೊಂದು ಇಲ್ಲೊಂದು ಹಸಿರ ಬಂಧಗಳು ಬಸಿರಾಗಿ ಭಾಗ್ಯವುಳ್ಳವರಿಗೆ ಪ್ರಾಪ್ತಿಯಾಗುವುದೂಇದೆ. ಪ್ರೀತಿಯೂ ಋತುಗಳು ಬದಲಾದಂತೆ ನಿಜದ ಸುಳ್ಳಿನ ಕಥನಗಳಾಗಿ ಮಗ್ಗುಲು ಬದಲಿಸುತ್ತಿರುತ್ತವೆ. ಅಷ್ಟಕ್ಕೇ ನೋಡುವ ಕಣ್ಣುಗಳಿಗೆ ಸಮಾಧಾನ, ತೃಪ್ತಿ. ಎಲ್ಲವೂ ಠೀಕು-ಠಾಕಾಗಿದೆಯೆಂದೂ, ‘ಭೇಷ್..’ ಬೇರೆ ಎಂದೆನಿಸಿಕೊಂಡು ಬೀಳುವ ಒಂದಷ್ಟು ಮೊಹರುಗಳ ಆಧಾರದ ಮೇಲೆ ಮತ್ತೆ ತೇಪೆ ಹಚ್ಚಿದ ಪ್ರೀತಿಯ ಚಾದರವನ್ನು ಹೊದ್ದುಕೊಳ್ಳುತ್ತೇವೆ.

ಚದುರಿದ ಮೋಡಗಳು ಚದರುತ್ತಲೇ ಒಂದಾಗಿ ಹಾದು ಹೋಗುವಾಗ, ಅವುಗಳ ನಡುವೆ ಬೆಳ್ಳಕ್ಕಿಗಳು ನುಸುಳಿ ಒಂದಾಗಿ ಬಿಡುವಂತೆ ಈ ಪ್ರೀತಿಯೂ ಕೂಡ. ಕ್ಷಣಗಳ ಬಳಿಕ ಮೋಡದಪ್ಪುಗೆಯಿಂದ ಹೊರ ಬಂದು ಮತ್ತೆ ಒಂದಾಗಿ, ಚಂದವಾಗಿ ಹಾರುತ್ತಿರುವಾಗ ಗಮ್ಯವನ್ನು ಪರಿಕ್ರಮಿಸುವ ಹಾದಿಯುದ್ದಕ್ಕೂ ಪ್ರೀತಿಯು ಹೂ-ಬಳ್ಳಿಯಾಗಿ ಕಾಲಿಗೆಡರುತ್ತಿರುತ್ತದೆ. ಬಹು ವಿಧದಲ್ಲಿ ಮೂಡಿ ಬಂದು ಬದುಕಿಗೆ ಮೂಲ ದ್ರವ್ಯವಾಗುವ ಪ್ರೀತಿಯು ಗರಿಕೆದರಿದ ಕನಸುಗಳಾಗಿ ಹಾಡುತ್ತಲೂ ಇರುತ್ತವೆ.

ಪ್ರೀತಿ-ಮಮತೆಯನ್ನು ಅರ್ಥಮಾಡಿಕೊಳ್ಳಲು ಹಂಬಲವಿಲ್ಲದ ಮನಸ್ಸು ಯಾವತ್ತೂ ಶಾಂತಿಯಿಂದಿರುವುದಿಲ್ಲ. ಅಂತಹ ಮನಸ್ಸು ಸೂರ್ಯಪ್ರಭೆಯ ಉಬ್ಬರ ಮತ್ತ ದರಹರಿವನ್ನು ತಡೆಯಲು, ಬಾಳಿನ ಬಣ್ಣಗಳನ್ನು ನಿಗ್ರಹಿಸಲು, ಬದುಕಿನ ಸೌಂದರ್ಯವನ್ನು ಸೀಮಿತವಾಗಿಸಲು ಪ್ರಯತ್ನಿಸುತ್ತಿರುತ್ತದೆ. ಆದಾಗ್ಯೂ ಜೀವಿತದುದ್ದಕ್ಕೂ ಜೊತೆಯಲ್ಲಿ ಯಾರೋ ಒಬ್ಬರು ನಡೆಯುತ್ತಿದ್ದಾರೆ ಎಂದರೆ ಅದನ್ನು ಒಲವೆಂದೇ ಪರಿಗಣಿಸಬೇಕಲ್ಲವೇ ?

***

ಪ್ರೀತಿ ಎನ್ನುವುದೊಂದು ಆತ್ಯಂತಿಕ. ಒಳಿತು-ಕೆಡುಕು, ಸುಂದರ-ಕುರೂಪಗಳೆನ್ನುವ ದ್ವಂಧ್ವಗಳು ಪ್ರೀತಿಯ ಸ್ಥಿತಿಯಲ್ಲಿ ಕರಗಿಬಿಡುತ್ತವೆ. ಪ್ರೀತಿ ಎನ್ನುವುದು ವರ್ತಮಾನದಲ್ಲಿರುವ ಸಹಜವಾದೊಂದು ಸ್ಥಿತಿ. ಗತದ ನೆನಪುಗಳಿಗೆ ಸಾಯುವ ಪ್ರೀತಿ ಮರು ಹುಟ್ಟನ್ನು ಪಡೆಯುತ್ತಿರುತ್ತದೆ. ಹಾಗಾಗಿ ನಿನ್ನೆಯ ಮಧುರ ನೆನಪಿನ ಜೊತೆಗೆ ನಾಳಿನ ಕನಸನ್ನು ಕಾಣುತ್ತಾ ಇಂದಷ್ಟೇ ಬದುಕಬೇಕು.

ನೆನಪೂ ಅಲ್ಲದ, ಕನಸೂ ಆಗಿಬಾರದ ಇನ್ನೊಂದು ಮನಸ್ಸಷ್ಟೇ ಪ್ರೀತಿ ಎಂದು ನಂಬಿದ್ದೇ ಆದಲ್ಲಿ ಅಂತಹ ಮನಸ್ಸು ಮೋಹದ ಲೋಕದೊಳಗೆ ಕಳೆದು ಹೋಗುವುದೇ ಹೆಚ್ಚು. ಕಳೆದು ಹೋಗದೆ ಇರಬೇಕಾದರೆ ಜೀವವು ವಿರಹವನ್ನು ಅನುಭವಿಸಬೇಕು ಮತ್ತು ವಿರಹದಲ್ಲಿ ಬೇಯುತ್ತಿರಬೇಕು. ಆಗಲೇ ಭಾವ ಜೀವದ ಪ್ರೀತಿ ಎಂದರೇನೆಂದು ತಿಳಿಯುವುದು.

ನಮಗೆ ತಿಳಿದಿರುವುದೆಲ್ಲವೂ ನಮ್ಮನ್ನು ಗಟ್ಟಿಗೊಳಿಸುತ್ತಲೇ ಅಹಂಕಾರವನ್ನೂ ಬೆಳೆಸಿಬಿಟ್ಟಿರುತ್ತವೆ. ಅದು ಅಳಿಯ ಬೇಕಾದರೆ ನಾವೊಂದಿಷ್ಟು ಕರಗಬೇಕು. ಕರಗದೆ ಯಾವುದೂ ಹರಿಯದು. ಹರಿಯುತ್ತಿರಲು ಆಗಾಗ ಕರಗುತ್ತಿರಬೇಕು. ಕರಗದೆ, ಹರಿಯದೆ ಯಾವುದನ್ನೂ ಬೆಸೆಯಲಾಗದು. ಕರಗಿದರೆ ಹರಿಯುವ, ಹರಿದರೆ ಬೆಸೆಯಬಲ್ಲ ಜೀವಸಾರದ ಶಕ್ತಿ ಪ್ರೀತಿಗಿದೆ. ಹೃದಯ ನದಿಯು ಹರಿಯುವ ಜುಳುಜುಳು ನಿನಾದಕ್ಕೆ ತನುವು ಪ್ರಫುಲ್ಲಗೊಳ್ಳಬೇಕು.

ಪ್ರೀತಿ ಉಲಿದಾಗ ಕಂಗಳು ಅರಳಿ ಬಿಡುತ್ತವೆ. ಅರಳಿದ ಬಟ್ಟಲು ಕಂಗಳ ತುಂಬಾ ಕಾಣಬೇಕು ಹಬ್ಬಿರುವ ನಮ್ಮದೇ ಪ್ರತಿಬಿಂಬ. ಕಳೆದುಹೋದ ಪ್ರೀತಿ, ಪಡೆಯಲಾಗದ ಪ್ರೀತಿ, ಉಳಿಸಿಕೊಳ್ಳಲಾಗದ ಪ್ರೀತಿಯನ್ನು ನೆನೆದು ಅರಸುತ್ತಾ ನಡೆಯುವ ಹೊತ್ತಲ್ಲಿ.. ಕಾಯುತ್ತಾ ಕುಳಿತಿರುವ ಕ್ಷಣಗಳಲ್ಲಿ.. ಅದೇ ಪ್ರೀತಿಯು ಧುತ್ತೆಂದು ಎದುರು ಬಂದು ನಿಂತಾಗ ಕಣ್ಣಂಚಿನಿಂದ ನಮಗರಿಯದೆ ಹನಿಯೊಂದು ಜಿನುಗಿ ಬಿಟ್ಟಿರುತ್ತದೆ.

***

ಬದುಕಿನ ಬಹಳಷ್ಟು ಸತ್ಯ-ಮಿಥ್ಯಗಳು ಪಾದಗಳಲ್ಲಿ ಅಡಗಿರುತ್ತವೆ. ಸೌಂದರ್ಯದ ದಿವ್ಯಾನುಭೂತಿ ಎಂತಹದ್ದೆಂದರೆ ಸುಂದರ ಪಾದಗಳೂ ಕಾರಣವಾಗಿ ಅನುರಕ್ತರಾಗಿ ಬಿಡುವಷ್ಟು. ನೀಳ ಪಾದಗಳಲ್ಲಿ ಪಡಿ ಮೂಡಿದ ಸುಂದರ ಬೆರಳುಗಳು, ಅವುಗಳ ಮೇಲಚ್ಚೊತ್ತಿದ ಶುಭ್ರವಾದ ಉಗುರುಗಳು, ಬಣ್ಣ ಹಚ್ಚಿ ಸಿಂಗರಿಸಿಕೊಂಡ ಉಗುರುಗಳು, ಪಾದದ ಕತ್ತಲ್ಲಿ ಇಳಿಬಿಟ್ಟು ನಾಚಿ ನುಲಿಯುವ ಗೆಜ್ಜೆಯ ಸ್ವರಗಳು, ಆ ಗೆಜ್ಜೆಗಳೆಬ್ಬಿಸುವ ನಾದದ ಏರಿಳಿತಗಳು…

…ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ವಜ್ಜೆ ಹಾಕದೆ ನಡೆಯುವ ಹಂಸ ಪಾದದ ಸೊಬಗು, ಅಂತರಂಗಕ್ಕದು ತಟ್ಟಿ ನೀಡುವ ಸುಖಾನುಭೂತಿಯೇ ಬೇರೆ. ಹೃದಯ ಕೊಳದಲ್ಲಿ ಪಾದಗಳನ್ನು ಅದ್ದಿಸುವಾಗಿನ ಪುಳಕ, ಪಾದಗಳಿಂದ ಸೊಬಗಾಗಿ ತೊಟ್ಟಿಕ್ಕುವ ಹನಿಗಳು ಚಿತ್ತಾರವಾಗಿ ಮೂಡಿ ಬಾಳು ಅಪ್ಯಾಯಮಾನವೆನಿಸಿಬಿಡುತ್ತದೆ.

ಪ್ರೀತಿಯ ಗುಡಿಯಲ್ಲಿ ಉರಿಯುವ ಗಂಧದ ಕಡ್ಡಿಯ ಪರಿಮಳಕ್ಕೆ ತನುವರಳಿದಾಗ; ಶೆಹನಾಯಿಯ ನಾದಕ್ಕೆ ಮೃದುವಾಗಿ ಹೆಜ್ಜೆಹಾಕುವ ಪಾದಗಳು, ಸಾರಂಗಿಯ ಆಲಾಪ ಕೇಳಿದ್ದೇ ನರ್ತಿಸಲು ಶುರು ಹಚ್ಚಿಕೊಳ್ಳುತ್ತವೆ. ಅದೆಷ್ಟೇ ಪದಗಳನ್ನು ಹೊತ್ತು ತಂದು ಕಟ್ಟಿಹಾಕಿದರೂ, ರಮ್ಯತೆಯನ್ನೆಲ್ಲಾ ಪದಗಳಲ್ಲಿ ಮೂಡಿಸಿದರೂ…ಇನ್ನೂ ಹೇಳಲು ಅದೆಷ್ಟೋ ಬಾಕಿಯಿದೆ ಎನಿಸುವಷ್ಟು ಕಾಡುವ ಮೋಹಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ. ನಾವು ಕಂಡುಕೊಳ್ಳುವ ಪುರುಸೊತ್ತುಗಳು ಮೊಹಬ್ಬತ್ತುಗಳಿಗೆ ಕಾರಣವಾಗಿ ಬಿಡುವುದೆಂದರೆ ಹೀಗೆ.

ಯಾರಿಗೂ ಒಬ್ಬರನ್ನೊಬ್ಬರ ಪರಿಚಯವಿರುವುದಿಲ್ಲವಷ್ಟೇ. ಹಾಗಿದ್ದೂ ಯಾಕೆ ಭೇಟಿಯಾಗುತ್ತಿರುತ್ತೇವೆ ಎನ್ನುವುದರ ಅರಿವು ನಮಗಿರುವುದಿಲ್ಲ. ರಕ್ತ ಸಂಬಂಧಿಗಳಂತೂ ಮೊದಲೇ ಆಗಿರುವುದಿಲ್ಲ. ಅಷ್ಟಿದ್ದೂ ಪರಸ್ಪರರನ್ನು ಹೃದಯವೆಂಬ ಬಂಧದ ಚಿಪ್ಪೊಳಗೆ ಭಗವಂತ ಮುತ್ತಾಗಿ ಬೆಸೆದು ಬಿಟ್ಟಿರುತ್ತಾನಲ್ಲ! ಮೋಹವನ್ನರಿಯದ ನಿರ್ಮೋಹಿಗೇನು ಗೊತ್ತು ತೀವ್ರವಾಗಿ ನಿರ್ಮೋಹಿಯನ್ನೇ ಮೋಹಿಸುತ್ತಾರೆಂದು? ಸೃಷ್ಟೀಶನ ಒಂದೊಂದು ಲೀಲೆಗೆ ಅವನಕಲಾತ್ಮಕ ವಿನ್ಯಾಸಕ್ಕೆ ಮಾರು ಹೋಗದವರುಂಟೇ?

***

ಕೆಲವೊಂದು ಸುಂದರ ಪಾದಗಳ ಸೃಷ್ಟಿಗೆ ಬ್ರಹ್ಮ ತೆಗೆದುಕೊಂಡ ಸಮಯವೆಷ್ಟೆಂದು ಖುದ್ದು ಅವನಿಗೇ ತಿಳಿದಿರುವುದಿಲ್ಲ. ತಾದ್ಯಾತ್ಮದಿ ತಿದ್ದಿತೀಡಿದ ಸೃಷ್ಟಿಯದು. ಬೆರಳೆಣಿಕೆಯ ಪಾದಗಳನ್ನು ಬಲುಜ ತನದಿಂದಲೂ, ನಾಜೂಕಿನಿಂದಲೂ ಕೆತ್ತಿ ರೂಪುಕೊಟ್ಟ ನಂತರ ಅದನ್ನೇ ಮತ್ತೆ ಮತ್ತೆ ನೋಡಿ ಅವನು ಸಂಭ್ರಮಿಸುತ್ತಿರುತ್ತಾನೇನೋ ?

ಅಕ್ಕರೆಯಿಂದ ಸೃಜಿಸಿದ ಪಾದವು ನೆಲಕ್ಕೊರಗುವಾಗ ನೋಯದಿರಲೆಂದು ಮೆತ್ತನೆಯ ಮಣ್ಣನ್ನು, ಹಸಿರು ಹೊದಿಕೆಯನ್ನು ಕಲ್ಪಿಸಿಕೊಡುವಂತೆ ವಸುಂಧರೆಗೆ ಆತನು ಆಜ್ಞಾಪಿಸುವುದೂ ಉಂಟು. ಭವದ ಹಂಗಿಗೆ ಹೆಜ್ಜೆಯಾಗುವ ಪಾದಗಳಿಗೆ ಇವು ಯಾವುದರ ಅರಿವೂ ಇಲ್ಲದೆ ಸುಮ್ಮನೆ ನಡೆಯುತ್ತಿದ್ದರೆ, ಹಂಗಿನೊಳಗಿನ ಜೀವಗಳು ಹೆಜ್ಜೆಯಾದ ಪಾದಗಳನ್ನು ಕಣ್ತುಂಬಿಸಿಕೊಳ್ಳುತ್ತಾ ಸಮಾಧಾನಪಟ್ಟುಕೊಳ್ಳುತ್ತಿರುತ್ತವೆ. ಸಂಧಾನ-ಅನುಸಂಧಾನಗಳೆಲ್ಲ ಕಣ್-ಪಾದಗಳ ಮಧ್ಯೆ ನಡೆಯುತ್ತಿರುತ್ತವೆ.

ಒಂದಷ್ಟು ಪಾದಗಳು ಹೆಜ್ಜೆ ಹಾಕುತ್ತಿದ್ದರೂ ಕಣ್ಣರಳಿಸುವಂತೆ, ರಮಿಸಿ, ಓಲೈಸಿ, ಅನುರಾಗ ಮೂಡುವಂತೆ ಮಾಡುವ ಪಾದಗಳು ಕಾಣಸಿಗುವುದು ವಿರಳ. ಹಾಗೊಂದು ವೇಳೆ ಕಂಡು ಬಂದ ಪಾದಗಳು ಉದ್ದೀಪಿಸುವಪರಿಗೆ, ಅವುಗಳು ಚೆಲ್ಲುವ ಭಾವದೊಲುಮೆಯ ಭಾರಕ್ಕೆ ದೇಹವೇ ಬಾಗಿ ಬಿಡುವುದುಂಟು.

ಮುಂದುವರಿದು ಅವನಿಷ್ಟದ ಸೃಷ್ಟಿಯು ನಮ್ಮಿಷ್ಟವೂ ಆಗಿ ಬರುವ ಸುಯೋಗ ಎಲ್ಲರಿಗೂ ದಕ್ಕುವಂತದ್ದಲ್ಲವಲ್ಲ. ಅದಕ್ಕೂ ಬೇಕಲ್ಲ ಒಂದು ಪಾದದಷ್ಟಾದರೂ ಭಾಗ್ಯ. ಹಾಗೊಮ್ಮೆ ದಕ್ಕಿದ್ದೇ ಆದಲ್ಲಿ ಪಾದ ಪ್ರೇಮವು ಪ್ರೇಮಪಾದವಾಗಿ ಹೊಮ್ಮಿಬಿಡುತ್ತದೆ. ಪ್ರೇಮ ಪಾದ ಸ್ಪರ್ಶಕ್ಕೆ ವಯಸ್ಸಿನ ಹಂಗಿಲ್ಲ. ಹಾತೊರೆಯುವ ಹೃದಯ-ಮನಸ್ಸಿರಬೇಕಷ್ಟೆ.

ಬಿಂಬದ ಪದತಳದ ದೀಪದ ಬೆಳಕು ಪಾದಗಳ ಮೇಲೆ ಚೆಲ್ಲಿ ಇಡೀ ಬಿಂಬವನ್ನೇ ಆವರಿಸಿಕೊಂಡಾಗ ಹೃದಯ ಕರಗಿ ಕಣ್ಣಾಲಿಗಳಲ್ಲಿ ಪಸೆ ಒಡೆದಿರುತ್ತದೆ. ಪ್ರೀತಿಯು ಭಕ್ತಿಯಾಗಿ ಉಕ್ಕಿಹರಿದಾಗ ಪಾದವು ‘ಶ್ರೀಪಾದ’ವಾಗುತ್ತಲೇ ಪ್ರೀತಿ ಆರಾಧನೆಯಾಗಿ ದೈವತ್ವಕ್ಕೇರಿಬಿಟ್ಟಿರುತ್ತದೆ.

‍ಲೇಖಕರು Avadhi

May 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: