ಲೋಕೇಶ್ ಕಾಯರ್ಗ
**
ಸುಮಾರು 10 ತಿಂಗಳ ಹಿಂದೆ ಇರಬೇಕು… ಜಯಕುಮಾರ್ ಅವರ ಮೈಸೂರಿನ ತೋಟದ ಮನೆಗೆ ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆಯವರು ಬಂದಿದ್ದರು. ಜಯಕುಮಾರ್ ಮತ್ತು ಲೀಲಾ ಸಂಪಿಗೆಯವರ ಹೋರಾಟದ ಸಂಗಾತಿಗಳು ಸೇರಿ 20ರಿಂದ 30 ಮಂದಿ ಸ್ನೇಹಿತರು ಅಲ್ಲಿದ್ದರು. ಬಿಳಿಮಲೆಯವರು ಸುಮಾರು ಎರಡು ಗಂಟೆಗಳ ಕಾಲ ದೇಶ, ಭಾಷೆ, ಇತಿಹಾಸ ಮತ್ತು ವರ್ತಮಾನದ ಸಂಗತಿಗಳ ಬಗ್ಗೆ ಮಾತನಾಡಿದ್ದರು. ಜಯಕುಮಾರ್ ಅಷ್ಟೂ ಮಂದಿಗೆ ತೋಟದ ಮನೆಯಲ್ಲಿಯೇ ಸೊಗಸಾದ ಊಟದ ವ್ಯವಸ್ಥೆ ಮಾಡಿದ್ದರು.
ತಿಂಗಳಿಗೊಂದಾದರೂ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದು ಆ ದಿನ ಜಯಕುಮಾರ್ ತಿಳಿಸಿದಾಗ ನಾನೂ ತಲೆಯಾಡಿಸಿದ್ದೆ.
ಇದಾದ ನಂತರ ಕೆಲವು ದಿನಗಳಲ್ಲೇ ಕೆಲವು ಅನಿರೀಕ್ಷಿತ ಬೆಳವಣಿಗೆಗಳು ನಡೆದವು. ಜಯಕುಮಾರ್ ತಮ್ಮ ತಂದೆಯ ಸ್ಥಾನದಲ್ಲಿ ಕಾಣುತ್ತಿದ್ದ ಅಣ್ಣ ಚಂದ್ರಶೇಖರ್ ತೀರಿಕೊಂಡರು.
ನಂತರದ ಕೆಲ ದಿನಗಳಲ್ಲಿ ಜಯಕುಮಾರ್ ಅವರು, ಆಗಾಗ ಕಾಡುತ್ತಿದ್ದ ಸೊಂಟ ನೋವಿನ ಕಾರಣ ತಿಳಿಯಲು ಅಣ್ಣನ ಮಗ ವೈದ್ಯನಾಗಿದ್ದ ಮೈಸೂರಿನ ಅಪೋಲೋ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಂದ ನೇರವಾಗಿ ಬಂದು ಸೇರಿದ್ದು ಬೆಂಗಳೂರಿನ ಶಂಕರ್ ಕ್ಯಾನ್ಸರ್ ಆಸ್ಪತ್ರೆಗೆ.
ಈ ಬೆಳವಣಿಗೆಗಳು ಇನ್ನೂ ನನ್ನ ಗಮನಕ್ಕೆ ಬಂದಿರಲಿಲ್ಲ.
ಒಂದು ದಿನ ಬೆಳಿಗ್ಗೆ ಆರು ಗಂಟೆಗೆ ಕರೆ ಮಾಡಿ ವಿಜಯಕರ್ನಾಟಕದ ಕೆಲವು ಹಳೆಯ ಸಹೋದ್ಯೋಗಿಗಳ ನಂಬರ್ ಕಳುಹಿಸಲು ತಿಳಿಸಿದ್ದರು. ಮರುದಿನವೂ ಬೆಳಿಗ್ಗೆ ಸರಿಸುಮಾರು ಅದೇ ಹೊತ್ತಿಗೆ ಕರೆ ಮಾಡಿ ಏನೋ ಮಾಹಿತಿ ಕೇಳಿದ್ದರು. ನನಗೆ ಆಗ ಅಚ್ಚರಿಯಾಗಿತ್ತು. ತಡರಾತ್ರಿ ಮಲಗಿ ತಡವಾಗಿ ಏಳುವ ಪತ್ರಕರ್ತರ ದಿನಚರಿ ಜಯಕುಮಾರ್ ಅವರಿಗೆ ತಿಳಿಯದ ಸಂಗತಿಯಾಗಿರಲಿಲ್ಲ. ಅದೇ ದಿನ ಲೀಲಕ್ಕ ಕರೆ ಮಾಡಿ, ಜಯಕುಮಾರ್ ಆಸ್ಪತ್ರೆಯಲ್ಲಿರುವ ವಿಷಯ ತಿಳಿಸಿದಾಗ ನನಗೆ ಆಘಾತವಾಗಿತ್ತು.
ಸಾವು ತನ್ನೆದುರು ಬಂದು ನಿಂತಿದೆ ಎಂದು ಗೊತ್ತಾದ ಕ್ಷಣದಿಂದ ಜಯಕುಮಾರ್ ಹೈಪರ್ ಆ್ಯಕ್ಟಿವ್ ಆಗಿದ್ದರು. ಆಸ್ಪತ್ರೆ ಬೆಡ್ ನಲ್ಲಿಯೇ ಕುಳಿತು ತನ್ನ ಆತ್ಮಕಥನ ರೂಪದ ಕಾದಂಬರಿ ಬರೆದಿದ್ದರು. ತನ್ನ ಅಮ್ಮ ಮತ್ತು ಅಣ್ಣನ ಸುತ್ತವೇ ಹೆಣೆದ ಆತ್ಮಚರಿತ್ರೆಯಲ್ಲಿ ಮಿತ್ರರ ಬಳಗಕ್ಕೆ ಗೊತ್ತಿಲ್ಲದ ತಮ್ಮ ಬಾಲ್ಯದ ಹಲವು ವಿಷಯಗಳನ್ನು ಅನಾವರಣಗೊಳಿಸಿದ್ದರು. ಈ ಕಾದಂಬರಿ ಆರಂಭವಾಗುವುದೇ ಅಣ್ಣನ ಜತೆಗಿನ ಸಂಭಾಷಣೆ ಮುಖಾಂತರ. ಸಾವನ್ನು ಬರ ಮಾಡಿಕೊಳ್ಳಲು ಮಾನಸಿಕವಾಗಿ ಅವರು ಅಂದೇ ಸಿದ್ದರಾಗಿದ್ದರು. ಆದರೆ ಬದುಕಿನ ಉಳಿದ ದಿನಗಳನ್ನು ಸಾರ್ಥಕ್ಯದಿಂದ ಕಳೆಯಬೇಕೆಂಬ ಹಂಬಲ ಅದಮ್ಯವಾಗಿತ್ತು. ಇದಾದ ನಂತರ ಎರಡು ವಾರಗಳ ಹಿಂದಿನವರೆಗೂ ಒಂದಾದರ ಮೇಲೆ ಇನ್ನೊಂದರಂತೆ ಸಮಾಜಮುಖಿ ಚಿಂತನೆಯ ಕಾರ್ಯಕ್ರಮಗಳನ್ನು ಸಂಘಟಿಸಿದರು. ಬೆಂಗಳೂರಿನ ಗಾಂಧಿಭವನದಲ್ಲಿ ತಮ್ಮ ಎರಡು ಪುಸ್ತಕಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿದರು.
ದೈಹಿಕ ಯಾತನೆಯ ನಡುವೆಯೇ ಲೀಲಾ ಅವರ ಜತೆ ಬೆಂಗಳೂರಿಗೆ ಹೋಗಿ ಮತದಾನವನ್ನೂ ಮಾಡಿದ್ದರು. ತೋಟದ ಮನೆಯಲ್ಲಿಯೇ ಕೆಯುಡಬ್ಲ್ಯೂಜೆ ಪ್ರಶಸ್ತಿ ಸ್ವೀಕರಿಸಿ ಗಟ್ಟಿ ಸ್ವರದಲ್ಲಿ ಮಾತನಾಡಿದ್ದರು.
ವೈದ್ಯರನ್ನು ಕಾಣಲೆಂದು ಗದ್ದಿಗೆ ರಸ್ತೆ ಹಾದಿಯಾಗಿ ನಗರಕ್ಕೆ ಆಗಮಿಸುವಾಗಲೂ ನನ್ನನ್ನು ನೆನಪಿಸಿಕೊಂಡು ಕಾರಿನಲ್ಲಿ ಒಂದಷ್ಟು ತರಕಾರಿ ತುಂಬಿಕೊಂಡು ಮನೆಗೆ ಬಂದು ಕೊಟ್ಟು ಹೋಗಿದ್ದರು.
ಮೊನ್ನೆ (ಮೇ 9) ಹಂಸಲೇಖಾ ಅವರು ಕಮರಳ್ಳಿಯ ಬಯಲು ಫಾರ್ಮ್ಸ್ ಗೆ ಬಂದಾಗಲೂ, ಪ್ರೊ.ಮುಜಾಫರ್ ಅಸಾದಿ, ಜೆನ್ನಿ, ರಾಜಪ್ಪ ದಳವಾಯಿ ಮುಂತಾದ ಸಮಾನ ಮನಸ್ಕರನ್ನು ಕರೆಸಿ ಚಿಂತನಾಕೂಟ ಏರ್ಪಡಿಸಿದ್ದರು. ತಾನಿನ್ನೂ ಬರೆಯಲಿಕ್ಕಿದೆ, ಇಷ್ಟು ಬೇಗ ಹೋಗಲಾರೆ ಎಂಬ ಅವರ ಮಾತು ನಮಗೂ ಭರವಸೆಯಾಗಿತ್ತು….
ಆದರೆ ಇದೀಗ ಮಾತುಗಳಷ್ಟೇ ಉಳಿದಿವೆ. ಮಿತ್ರನಿಗಾಗಿ ತುಂಬಿಸಿಟ್ಟ ಹೋಮ್ ಮೇಡ್ ವೈನ್, ಗೆಳೆಯ ಓಂಕಾರ್ ಕೊಯ್ದು ಇಟ್ಟ ಲಕ್ಷ್ಮಣ ಫಲ ಹಾಗೆಯೇ ಇದೆ.
‘ಧನಿಕುಲೆ, ನಮಸ್ತೆ ಎಂಚ ಉಲ್ಲರ್…’ ಎಂದು ವಾರಕ್ಕೊಂದು ಬಾರಿಯಾದರೂ ಅಕ್ಕರೆ ತುಂಬಿದ ಧ್ವನಿಯಲ್ಲಿ ಕರೆ ಮಾಡಿ ಕ್ಷೇಮ ಸಮಾಚಾರ ವಿಚಾರಿಸುತ್ತಿದ್ದ ಹೃದಯವಂತ ಗೆಳೆಯನನ್ನು ಹೇಗೆ ಮರೆಯಲಿ…
ಲೀಲಕ್ಕ ಮತ್ತು ಕುಟುಂಬ ಸದಸ್ಯರೆಲ್ಲರಿಗೂ ದುಃಖ ಸಹಿಸುವ ಶಕ್ತಿ ಸಿಗಲಿ ಎಂದಷ್ಟೇ ಪ್ರಾರ್ಥಿಸಬಲ್ಲೆ…
0 Comments