ಕಿರಣ ಭಟ್, ಹೊನ್ನಾವರ
**
ನಾಡಿನ ಖ್ಯಾತ ರಂಗಕರ್ಮಿ ಹುಲಿಮನೆ ಸೀತಾರಾಮ ಶಾಸ್ತ್ರಿ ಅವರ ಆತ್ಮಕತೆ ‘ರಂಗಕಥನ’.
ಸಾಹಿತಿ ಜಿ.ಎಚ್. ಭಟ್ಟ ಅವರು ಇದನ್ನು ನಿರೂಪಿಸಿದ್ದಾರೆ.
ಈ ಕೃತಿಯನ್ನು ಕರ್ನಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿದೆ.
ಪ್ರಸಿದ್ದ ರಂಗಕರ್ಮಿ ಕಿರಣ ಭಟ್, ಹೊನ್ನಾವರ ಅವರು ಈ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ.
**
ಹುಲಿಮನೆ ಸೀತಾರಾಮ ಶಾಸ್ತ್ರಿ ಯವರನ್ನು ನಾನು ಮೊದಲು ಕಂಡಿದ್ದು ನನ್ನ ಹೈಸ್ಕೂಲು ದಿನಗಳಲ್ಲಿರಬೇಕು. ಆಗ ನನ್ನ ಅಜ್ಜ ಕೆಕ್ಕಾರು ಗಣೇಶ ಭಟ್ಟರು ‘ಮುನ್ನಡೆ‘ ವಾರಪತ್ರಿಕೆಯ ಸಂಪಾದಕರಾಗಿದ್ದರು. ಹಾಗಾಗಿ ಅನೇಕ ಸಾಹಿತ್ಯಾಸಕ್ತರು, ಸಾಂಸ್ಕೃತಿಕ ಲೋಕದ ಜನ ಆಗಾಗ್ಗೆ ಮನೆಯಲ್ಲಿ ಸೇರುತ್ತಿದ್ದರು. ಗಂಟೆಗಟ್ಲೆ ಮಾತುಕತೆಗಳಾಗುತ್ತಿದ್ದವು. ಹಾಗೆ ಅಲ್ಲಿ ಸೇರುತ್ತಿದ್ದವರಲ್ಲಿ ಹುಲಿಮನೆ ಸೀತಾರಾಮ ಶಾಸ್ತ್ರಿಗಳೂ ಒಬ್ಬರು. ಅವರ ಎತ್ತರದ ಅಜಾನುಬಾಹು ದೇಹ, ಮಾತಿನ ಓಘ ಇವನ್ನೆಲ್ಲ ಕಂಡು ನಾನು ಬೆರಗಾಗಿದ್ದೆ. ಆಗಲೇ ಅಜ್ಜ ಅವರ ಕುರಿತು ತುಂಬ ಹೇಳಿದ್ದರು. ಅದೆಲ್ಲ ಅಸ್ಪಷ್ಟ ನೆನಪು. ಅವರನ್ನೊಮ್ಮೆ ರಂಗದಲ್ಲಿ ನೋಡುವ ಆಸೆಯಂತೂ ಆಗಲೇ ಹುಟ್ಟಿಕೊಂಡಿತ್ತು. ಅದು ಸಾಧ್ಯವಾದದ್ದು ನಾನು ಪಿಯುಸಿ ಒದುತ್ತಿದ್ದಾಗ. ಆಗ ಸಿದ್ದಾಪುರದ ‘ಕರ್ನಾಟಕ ಸಂಘ‘ ಪ್ರತಿ ವರ್ಷವೂ ನಾಡಹಬ್ಬವನ್ನು ನಿಷ್ಠೆಯಿಂದ ವಾರವಿಡೀ ಆಚರಿಸುತ್ತಿತ್ತು. ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತಿದ್ದವು. ಅಲ್ಲಿ ನಾನು ಶಾಸ್ತ್ರಿಯವರನ್ನು ರಂಗದ ಮೇಲೆ ಮೊದಲ ಬಾರಿಗೆ ಅದೂ ‘ಟಿಪ್ಪೂ ಸುಲ್ತಾನ’ ನಾಗಿ. ಅವರು ಏಕಪಾತ್ರಾಭಿನಯ ಮಾಡುತ್ತಿದ್ದರು. ಆಗಲೇ ತುಂಬ ವಯಸ್ಸಾಗಿತ್ತು ಅವರಿಗೆ. ಆ ಪ್ರಾಯದಲ್ಲೂ ಅವರು ಟಿಪ್ಪುವನ್ನು ರಂಗದ ಮೇಲೆ ಬದುಕಿದ ರೀತಿ ಮರೆಯಲಾರದ್ದು. ನಿಜಕ್ಕೂ ‘ರಂಗಭೂಮಿಯ ಹುಲಿ’ ಯಲ್ಲಿ ‘ಮೈಸೂರು ಹುಲಿ’ ಯ ಪ್ರವೇಶವಾಗಿತ್ತು.
ಅಂಥ ಹುಲಿಮನೆ ಸೀತಾರಾಮ ಶಾಸ್ತ್ರಿ ಯವರ ಕಥನದ ಪುಸ್ತಕ ಕೈಸೇರಿದೊಡನೆಯೇ ಓದಲು ಕೈಗೆತ್ತಿಕೊಂಡೆ. ಅವರ ಕುರಿತ ಮೊದಲ ಪುಸ್ತಕವೇನಲ್ಲ ಇದು. ಈಗಾಗಲೇ ಆರ್.ಪಿ. ಹೆಗಡೆಯವರು ರಚಿಸಿದ ʼಹುಲಿಮನೆʼ, ರವೀಂದ್ರ ಭಟ್ಟರು ಸಂಪಾದಿಸಿದ ʼರಂಗಭೂಮಿಯ ಹುಲಿʼ ಅವರ ಜನ್ಮ ಶತಮಾನೋತ್ಸವದ ಸ್ಮರಣ ಸಂಚಿಕೆ ಗಳು ಪ್ರಕಟವಾಗಿವೆ. ಆದರೆ ಈ ಪುಸ್ತಕ ಅವುಗಳಿಗಿಂತ ಭಿನ್ನವಾಗಿರುವದು, ಇದು ಅವರೇ ಖುದ್ದಾಗಿ ಹೇಳಿದ ಅವರ ಕತೆಯಾದುದರಿಂದ. ಅವರು ಹೇಳಿದ ಕತೆಯನ್ನ ಜಿ.ಎಚ್. ಭಟ್ಟರು ತುಂಬ ನಿಷ್ಠೆಯಿಂದ ದಾಖಲಿಸಿದ್ದಾರೆ. ನಿಜವಾಗಿಯೂ ಇದು ಸವಾಲಿನ ಕೆಲಸವೇ. ʼಸುಧಾʼ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ಈ ಕತೆ ಈಗ ಕರ್ನಾಟಕ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾಗಿದೆ. ಡಾ. ಶ್ರೀಪಾದ ಭಟ್ ಈ ಪುಸ್ತಕಕ್ಕೆ ಮೌಲಿಕವಾದ ಮುನ್ನುಡಿ ಬರೆದಿದ್ದಾರೆ. ಈ ಕತೆ ರಂಗಕ್ಕೆ ಎಂಟ್ರಿ ಕೊಡೋದೇ ಉಡಾಳತನದ ಸನ್ನಿವೇಶದೊಂದಿಗೆ. ಹುಲಿಮನೆಯ ಸೀತಾರಾಮನೆಂಬ ಮಾಣಿ ಅಪ್ಪನ ದುಡ್ಡು ಕದ್ದು ಭಂಗಿ, ಅವಲಕ್ಕಿ ಸೇವನೆ ಮಾಡುವದರೊಂದಿಗೆ. ಅಲ್ಲಿ ಶುರುವಾದ ಭಂಗಿ, ಬೀಡಿಗಳ ಚಟ ಅದೆಷ್ಟೋ ಕಳವು, ಸುಳ್ಳುಗಳ ಹಾದಿ ಸವೆಸಿ ಅವರನ್ನು ಈಗ ‘ಜಯಚಾಮರಾಜ ಸಂಸ್ಕೃತ ಕಾಲೇಜಿನ’ ಬಾಗಿಲಿಗೆ ತಂದು ನಿಲ್ಲಿಸಿದೆ. ಈಗ ಬೀಡಿಯಿಂದ ಸಿಗರೇಟಿಗೆ ಭಡ್ತಿಯಾಗಿದೆ. ಅಪ್ಪ ಕಳಿಸಿದ ದುಡ್ಡಿನಿಂದ ಸಿಗರೇಟು ಸುಡುತ್ತಿದೆ.
“ಆದರೆ ಬಹಳ ಗುಟ್ಟಾಗಿ ಸೇದಬೇಕಾಗಿತ್ತು ಯಾಕೆಂದರೆ ನಾನು ಸಂಸ್ಕೃತದ ವಿದ್ಯಾರ್ಥಿ. ಅದರಲ್ಲೂ ಭಿಕ್ಷಾನ್ನದ ಹುಡುಗ. ಕೋಟೆಯ ಮೇಲೆ ಒಂದು ಗುಹೆಯಿತ್ತು. ಅಲ್ಲಿ ಸೇದಿ, ನಂತರ ಬಾಯಿಗೆ ತುಳಸಿ ಎಲೆ ತಿಕ್ಕಿಕೊಂಡು ಬರಬೇಕಿತ್ತು” ಪಾಪ. ಎಷ್ಟು ಕಷ್ಟ! ಹೀಗೆ ಹುಲಿಮನೆ ಸೀತಾರಾಮ ಶಾಸ್ತ್ರಿಯವರು ಇಡಿಯ ಪುಸ್ತಕದುದ್ದಕ್ಕೂ ತಮ್ಮ ಕತೆ ಹೇಳುತ್ತಲೇ ಹೋಗುತ್ತಾರೆ. ಹಾಗೆ ಹೇಳುವಾಗ ಅವರು ಏನನ್ನೂ ಮುಚ್ಚಿಡುವದಿಲ್ಲ. ಎಲ್ಲವನ್ನೂ ನೇರವಾಗಿ ಹೇಳುತ್ತಲೇ ಹೋಗಿದ್ದಾರೆ. ಎಲ್ಲಿಯವರೆಗೆ ಎಂದರೆ ʼಸೀತಾರಾಮ ಆಕ್ಷಿಡಂಟಲ್ಲಿ ಸತ್ತು ಹೋದ. ನಾನೂರು ರೂಪಾಯಿಯೊಂದಿಗೆ ಬರಬೇಕುʼ ಅಂತ ತಾವೇ ತನ್ನ ತಂದೆಗೆ ಟೆಲಿಗ್ರಾಮ್ ಹಾಕಿಸುವವರೆಗೆ. ನಿಜಕ್ಕೂ ಇದು ಅಪರೂಪದ ಪ್ರಾಮಾಣಿಕತೆ. ಹಾಗಾಗಿ ಇದು ಶಾಸ್ತ್ರಿಯವರ ಬದುಕಿನ ʼತೆರೆದ ಪುಸ್ತಕʼವೇ. ಇಲ್ಲಿಂದ ಮುಂದೆ ಶುರುವಾಗೋದೇ ಪುಸ್ತಕದ ಮುಖ್ಯ ಭಾಗ. ವರದಾಚಾರ್ಯರು ಕೊಟ್ಟ ಫ್ರೀ ಪಾಸಿನಿಂದ ನಾಟಕಕ್ಕೆ ಎಂಟ್ರಿ. ಮುಂದೆಲ್ಲ ಅವರ ರಂಗ ಬದುಕಿನ ಸವಾಲಿನ ಕಥೆಗಳೇ. ಅದೊಂದು ಆ ಕಾಲದ ಟಿಪಿಕಲ್ ಕನ್ನಡ ರಂಗ ಕಲಾವಿದನ ಬದುಕು. ವರದಾಚಾರ್ಯರ ಫ್ರೀ ಪಾಸಿನಿಂದ ನಾಟಕ ನೋಡುತ್ತ ಶಾಸ್ತ್ರಿಗಳು ಅವುಗಳ ಕುರಿತು ಬರೀ ಟೀಕೆಗಳನ್ನೇ ಬರೆಯುತ್ತಾರೆ. ಅದನ್ನು ವರದಾಚಾರ್ಯರ ಎದುರು ಓದುವ ಭಂಡ ಧೈರ್ಯವನ್ನೂ ಮಾಡುತ್ತಾರೆ. ಆದರೆ ಈ ಘಟನೆಯೇ ಅವರನ್ನು ʼನಾನು ನಾಟಕಕಾರನಾಗಬೇಕು, ನಟನಾಗಬೇಕುʼ ಎಂದು ನಿರ್ಧರಿಸುವಂತೆ ಮಾಡುತ್ತದೆ.
ಸರಿ, ನಿರ್ಧಾರವಾದ ಮೇಲೆ ಇನ್ನೇನು? ಶುರುವಾಗುತ್ತದೆ ರಂಗ ಪಯಣ. ಇದೊಂದು ದೀರ್ಘ ರಂಗ ಪಯಣ ಗರುಡ ಸದಾಶಿವರಾಯರ ‘ದತ್ತಾತ್ರೇಯ ಸಂಘ’ ದಿಂದ ಶುರುವಾಗಿ, ಅವರ ಕೊನೆಯ ದಿನಗಳಲ್ಲಿ ನಾನು ನೋಡಿದ ಏಕಪಾತ್ರಾಭಿನಯದವರೆಗಿನ ಬದುಕಿನ ಕಥನ. ನೋವೇ ಇಲ್ಲಿ ಸ್ಥಾಯಿ ಭಾವ. ಇದು ತನ್ನದೇ ನಾಟಕ ಕಂಪನಿ ಕಟ್ಟುವ ಆಸೆ ಹೊತ್ತ ಹಳ್ಳಿ ಮನೆಯ ಹುಡುಗನೊಬ್ಬ ಅದನ್ನು ಸಾಧಿಸಿ ತೋರಿಸಿದ ಯಶೋಗಾಥೆಯೂ ಹೌದು. ಮುಂದೆ ಅದನ್ನೆಲ್ಲವನ್ನೂ ಕಳಕೊಂಡು ಏಕಾಂಗಿಯಾಗಿಬಿಡುವ ದುರಂತಗಾಥೆಯೂ ಹೌದು. ಈ ರಂಗ ಪಯಣದಲ್ಲಿ ಅದೆಷ್ಟು ಸೋಲುಗಳು! ಸೋತ ಹಾಗೂ ಮತ್ತೆ ಎದ್ದು ನಿಲ್ಲುವ ಛಲ. ಜಾಣತನ. ಭಂಡ ಧೈರ್ಯ. ಬಹುಶಃ ಈ ಗುಣಗಳೇ ಹುಲಿಮನೆ ಸೀತಾರಾಮ ಶಾಸ್ತ್ರಿ ಯವರನ್ನು ʼರಂಗಭೂಮಿಯ ಹುಲಿʼ ಯಾಗಿಸಿದ್ದೆಂದು ತೋರುತ್ತದೆ. ಮುನ್ನುಡಿ ಯಲ್ಲಿ ಶ್ರೀಪಾದ ಭಟ್ ಹೇಳುವ ಹಾಗೆ ‘ಇದು ವ್ಯಕ್ತಿಯ ಕತೆ ಮಾತ್ರವಲ್ಲದೆ ಆ ನೆವದಲ್ಲಿ ಹೇಳಲ್ಪಟ್ಟ ಕಾಲಮಾನದ ಕತೆ. ವೃತ್ತಿ ರಂಗಭೂಮಿಯ ಒಟ್ಟೂ ಬದುಕಿನ ಹಾವು ಏಣಿಯಾಟದ ಕತೆ.’ ಇದಕ್ಕೆ ನಿದರ್ಶನವಾಗಬಲ್ಲ ಹಲವಾರು ಸಂಗತಿಗಳಿವೆ ಇಲ್ಲಿ. ಆ ಕಾಲದ ರಂಭೂಮಿಯ ಘಟಾನುಘಟಿಗಳ ಕುರಿತ ನೇರ ನುಡಿಗಳಿವೆ. ಅದೆಷ್ಟೋ ಕಂಪನಿಗಳ ಏಳು ಬೀಳಿನ ಕತೆಗಳಿವೆ. ಸಂದರ್ಭಕ್ಕೆ ಬದಲಾಗುವ ಮಾನವ ಸಂಬಂಧಗಳ ಕತೆಗಳಿವೆ. ಮಳೆ, ಬೇಸಿಗೆಯ ಋತುಗಳ ಕತೆಗಳಿವೆ. ಮುಖ್ಯವಾಗಿ ಆಗಾಗ್ಗೆ ತೆರೆದುಕೊಳ್ಳುತ್ತಿದ್ದ ಹೊಸ ಮಾಧ್ಯಮಗಳಿಗೆ ಬೆದರುತ್ತಲೇ ಆ ಕಾಲದ ರಂಗಭೂಮಿ ತನ್ನನ್ನು ತಾನು ಗಟ್ಟಿಗೊಳಿಸಿಕೊಂಡ ಕತೆಗಳಿವೆ.
ಇಲ್ಲಿ ನಿಜಕ್ಕೂ ಗಮನ ಸೆಳೆಯುವದು ಆ ಕಾಲದ ಸಾಹಿತಿಗಳು ರಂಗಭೂಮಿಯೊಟ್ಟಿಗೆ ಇಟ್ಟುಕೊಂಡ ಸಂಬಂಧ. ಅ.ನ. ಕೃಷ್ಣರಾಯರು, ಶಿರಾಮ ಕಾರಂತರಂಥ ಹಲವು ಸಾಹಿತಿಗಳು ರಂಗಭೂಮಿಯ ಜೊತೆ ಹೊಂದಿದ್ದ ನಂಟು. ಅ.ನ.ಕೃ ರವರು ಹುಲಿಮನೆ ಸೀತಾರಾಮ ಶಾಸ್ತ್ರಿ ಯವರ ನಾಟಕಗಳನ್ನು ಮೆಚ್ಚಿ ಆಕಾಶವಾಣಿಗಾಗಿ ಅವರ ಸಂದರ್ಶನವನ್ನೂ ಮಾಡುತ್ತಾರೆ. ಶಿವರಾಮ ಕಾರಂತರಂತೂ ಈ ಕತೆಯ ಮಧ್ಯೆ ಹಲವು ಬಾರಿ ಬಂದು ಹೋಗುತ್ತಾರೆ. ಶಾಸ್ತ್ರಿಗಳಿಗಾಗಿ ʼಕಠಾರಿ ಭೈರವʼ ನಾಟಕವನ್ನು ಬರೆದುಕೊಟ್ಟ ಶಿವರಾಮ ಕಾರಂತರು ಮುಂದೆ ಒಂದು ಸಂದರ್ಭದಲ್ಲಿ ಕುಮಟಾದ ಕ್ಯಾಂಪುಗಳ ನಾಟಕಗಳ ವಿಷಯದಲ್ಲಿ ಶಾಸ್ತ್ರಿಯವರ ಜೊತೆ ಪತ್ರಿಕಾಯುದ್ಧವನ್ನೇ ಮಾಡುತ್ತಾರೆ. ಅದು ವೈಯಕ್ತಿಕ ಮಟ್ಟಕ್ಕೂ ಹೋಗಿ ಕೊನೆಗೆ ಸಂಧಿಯೊಂದಿಗೆ ಮುಗಿಯುತ್ತದೆ. ಹೀಗಿರುವಾಗಲೂ ತೀರ ಸಂಕಷ್ಟದ ಸಂದರ್ಭದಲ್ಲಿ ಶಿವರಾಮ ಕಾರಂತರು ಡೈನಮೋ ಕೊಳ್ಳಲು ಶಾಸ್ತ್ರಿಗಳಿಗೆ ಸಹಾಯ ಮಾಡುತ್ತಾರೆ.
ಶಾಸ್ರಿಗಳ ಮಹತ್ವದ ನಾಟಕ ʼಟಿಪ್ಪೂ ಸುಲ್ತಾನ್ʼ. ಅದರದ್ದೇ ಒಂದು ಕತೆ. ೧೯೩೨ ನೇ ಇಸವಿಯಲ್ಲಿ ಸ್ವಾತಂತ್ರ್ಯ ಚಳುವಳಿ ಭರದಿಂದ ಸಾಗುತ್ತಿದ್ದ ಹೊತ್ತು. ಆಗಲೇ ಒಮ್ಮೆ ಬೇರೆ ಕಂಪನಿಯ ʼಟಿಪ್ಪೂ ಸುಲ್ತಾನ್ʼ ನಿಷೇಧಿಸಲ್ಪಟ್ಟಿತ್ತು. ಅದಕ್ಕಿಂತ ತೀರ ವಿಭಿನ್ನವಾಗಿ, ಆಗಿನ ರಾಜಕೀಯ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ನಾಟಕ ರಚಿಸಿದ ಶಾಸ್ತ್ರಿಗಳು ಅದನ್ನೆತ್ತಿಕೊಂಡು ಆಗಿನ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ರ ಹತ್ತಿರ ಹೋಗುತ್ತಾರೆ. ಅದನ್ನು ಓದಿದ ದಿವಾನರು ‘ಬ್ರಿಟಿಷರು ಭಾರತದಲ್ಲಿ ಇರುವ ವರೆಗೆ ಇದಕ್ಕೆ ಲೈಸೆನ್ಸ್ ಸಿಗಲಾರದು’. ಎಂದು ಷರಾ ಬರೆದು ಬಿಡುತ್ತಾರೆ. ಆಗ ಟ್ರಂಕ್ ಸೇರಿದ ಈ ನಾಟಕ ಮುಂದೆ ಶಾಸ್ತ್ರಿಯವರೇ ಹೆಮ್ಮೆಯಿಂದ ಕಟ್ಟಿದ ʼಜಯಕರ್ನಾಟಕ ನಾಟಕ ಸಂಘʼ ದ ಮಾಸ್ಟರ್ ಪೀಸ್ ಆದದ್ದು ಎಲ್ಲ ಈಗ ಇತಿಹಾಸ. ಕಂಪನಿ ನಾಟಕಗಳ ದೈನಂದಿನ ಬದುಕಿನ ಒಳ ಹೊಕ್ಕಂತೆಲ್ಲ ಹಲವಾರು ವಿಲಕ್ಷಣ ಪ್ರಸಂಗಗಳ ದರ್ಶನವಾಗುತ್ತದೆ. ಅವುಗಳಲ್ಲಿ ತುಂಬ ಕುತೂಹಲಕಾರಿಯಾದದ್ದು ಪ್ರದರ್ಶನದ ವೇಳೆಯ ಹೊಡೆದಾಟಗಳು. ಇವುಗಳನ್ನು ಅದೆಷ್ಟು ಸಹಜವಾಗಿ ಶಾಸ್ತ್ರಿಗಳು ಹೇಳುತ್ತಾರೆಂದರೆ ಗಲಾಟೆ ಇಲ್ಲದ ಶೋ ಗಳೇ ಇಲ್ಲವೇನೋ ಎಂಬಂತೆ. ಗೇಟಿನಲ್ಲಿ ನುಗ್ಗಲು ಹೊಡೆದಾಟ, ಒಂದು ರೂಪಾಯಿ ಟಿಕೇಟು ತಗೊಂಡ ಕುಡುಕ ಐದು ರೂಪಾಯಿ ಖುರ್ಚಿಗೆ ನುಗ್ಗಿದ ಹೊಡೆದಾಟ, ನಾಟಕ ನಿಲ್ಲಿಸಲು ಬಂದ ಪೋಲೀಸರನ್ನೇ ಒದ್ದು ಹಾಕಿದ ಕತೆ, ಟೆಂಟ್ ನಲ್ಲಿ ಗುಂಪು ಘರ್ಷಣೆ ಹೀಗೆ ಹಲವಾರು. ಇದು ಎಲ್ಲಿಯ ತನಕ ಎಂದರೆ ಪ್ರೇಕ್ಷಕರೇ ಹಾರಿ ರಂಗಕ್ಕೆ ಹೋಗಿ ಪಾತ್ರಧಾರಿಗೆ ಹೊಡೆಯುವವರೆಗೂ.
ಇಂಥದೊಂದು ಮಜವಾದ ಪ್ರಸಂಗ ಹೀಗಿದೆ: ʼವರದಕ್ಷಿಣೆʼ ನಾಟಕ. ಶಾಸ್ತ್ರಿಗಳದು ಖಳನಾಯಕ ಲಕ್ಷ್ಮೀಪತಿರಾಯನ ಪಾತ್ರ. ದೃಶ್ಯವೊಂದರಲ್ಲಿ ಸೊಸೆ ಸೀತೆ ಭಿಕ್ಷೆ ಬೇಡುತ್ತ ಬರುತ್ತಾಳೆ. ಎದುರಿಗೆ ಬಂದ ಲಕ್ಷ್ಮೀಪತಿರಾಯ ಆಕೆಯ ಜೋಳಿಗೆಗೆ ಕೈಹಾಕಿ ಕಾಸನ್ನೆಲ್ಲ ಎತ್ತಿಕೊಂಡಿಬಿಡುತ್ತಾನೆ. ಅಷ್ಟರಲ್ಲಿ ಎದುರು ಸೀಟಿನ ಪ್ರೇಕ್ಷಕನೊಬ್ಬ ಸಿಟ್ಟಿನಿಂದ ರಂಗಕ್ಕೆ ಹಾರಿ ಲಕ್ಷ್ಮೀಪತಿರಾಯನ ಕೈ ಹಿಡಿದು ʼ ಸೂ.. ಮಗನೆ ಅವಳ ಕಾಸು ಅವಳಿಗೆ ಕೊಡುʼ ಎಂದು ಕೂಗಾಡಿದ. ಹಿಂದಿನಿಂದ ಒಬ್ಬʼಬಿಡಬೇಡ ಹೊಡಿ ಆ ಬೋ..ಮಗನಿಗೆ” ಎಂದು ಜೋರಾಗಿ ವದರಿದ. ನಾಟಕ ಅರ್ಧ ತಾಸು ನಿಂತಿತು. ನಿಜಕ್ಕೂ ನಾಟಕ ಕಂಪನಿ ನಡೆಸುವವರಿಗೆ ಎಷ್ಟೆಲ್ಲ ಸವಾಲುಗಳು!
ಅವರೇ ಹೇಳುವಂತೆ ಅವರ ಬದುಕಿನ ಸಾರ್ಥಕ ಕ್ಷಣ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ರ ಎದುರಿಗೆ ಅವರು ʼಟಿಪ್ಪೂ ಸುಲ್ತಾನ್ʼ ಪಾತ್ರ ನಿರ್ವಹಿಸಿದ ಕ್ಷಣ. ಆಗ ಬಾಬು ರಾಜೇಂದ್ರ ಪ್ರಸಾದ್ ರು ಅವರನ್ನು ಶಾಲು ಹೊದೆಸಿ ನಟರಾಜ ವಿಗ್ರಹ ತೊಡಿಸಿ ಗೌರವಿಸಿದರು ‘ಆ ದಿನದ ಸಂಜೆ ನನ್ನ ಬಂಗಾರದ ಸಂಜೆಯಾಯಿತು’. ಹೀಗೆ ಭಂಗಿಯಿಂದ ಬಂಗಾರದ ವರೆಗಿನ ಅವರ ಪಯಣ ಸುಖಕರವಾದ್ದೇನೂ ಅಲ್ಲ. ಆದರೆ ಆ ಕಾಲಘಟ್ಟದಲ್ಲಿ ಅವರು ಕನ್ನಡ ರಂಗಭೂಮಿಗೆ ಕೊಟ್ಟ ಕೊಡುಗೆ ಅನನ್ಯವಾದದ್ದು. ಅಂತೆಯೇ ಅವರ ಈ ಕತೆ ಕೂಡ. ಪ್ರಸ್ತುತ ಪುಸ್ತಕದಲ್ಲಿ ಅವರ ಮೊಮ್ಮಕ್ಕಳಾದ ರವೀಂದ್ರ ಭಟ್, ಭಾರತಿ ಹೆಗಡೆಯವರ ಆಪ್ತ ಲೇಖನಗಳಿವೆ. ಅ.ನ.ಕೃ ರವರ ಸಂದರ್ಶನವಿದೆ. ಗಿರೀಶ ಕಾರ್ನಾಡರು ಅವರ ಕುರಿತು ಬರೆದಿದ್ದಾರೆ. ಮನೆಯವರಾದ ಶ್ರೀಧರ ಹೆಗಡೆ, ಜಯರಾಮ ಹೆಗಡೆ ತಮ್ಮ ʼಕಕ್ಕʼ ನನ್ನು ನೆನೆಸಿಕೊಂಡಿದ್ದಾರೆ. ಇದು ರಂಗ ವಿದ್ಯಾರ್ಥಿಗಳಿಗೂ ರಂಗಾಸಕ್ತರಿಗೂ ಉಪಯುಕ್ತವಾದ ಪುಸ್ತಕ. ಲೇಖನಕ್ಕೆ ಚಿತ್ರಗಳನ್ನು ಒದಗಿಸಿದ ಹುಲಿಮನೆ ಗಣಪತಿಗೆ ಕೃತಜ್ಞ.
0 ಪ್ರತಿಕ್ರಿಯೆಗಳು