ಹೀಗಿದ್ದರು ಮಹಿಳಾ ಮೀಸಲಾತಿ ಮಸೂದೆಗಾಗಿ ಶ್ರಮಿಸಿದ ಗೀತಾದಿ

ಮ ಶ್ರೀ ಮುರಳಿ ಕೃಷ್ಣ

—-

ಸೆಪ್ಟೆಂಬರ್‌ 12, 1996ರಂದು ಲೋಕಸಭೆಯಲ್ಲಿ ಏಳು ಬಾರಿ ಪಶ್ಚಿಮ ಬಂಗಾಳದ ಪನ್ಸ್ಕೂರಾ ಕ್ಷೇತ್ರದಿಂದ ಚುನಾಯಿತರಾಗಿದ್ದ ಭಾರತ ಕಮ್ಯುನಿಸ್ಟ್‌ ಪಕ್ಷದ ಸಂಸದೆ ಗೀತಾ ಮುಖರ್ಜಿ ಸಂಸತ್‌ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಇರಬೇಕೆಂಬ ಒತ್ತಾಯದ ಒಂದು ಪ್ರೈವೇಟ್‌ ಮೆಂಬರ್‌ ಮಸೂದೆಯನ್ನು ಮಂಡಿಸಿದರು (ಆ ಸಮಯದಲ್ಲಿ ಅವರು ಈ ವಿಷಯಕ್ಕೆ ಸಂಬಂಧಿಸಿದ ಸಂಸತ್‌ನ  ಜಾಯಿಂಟ್‌ ಸೆಲೆಕ್ಟ್‌ ಕಮಿಟಿಯ ಚೇರ್ಪರ್ಸನ್‌ ಆಗಿದ್ದರು). ನಂತರ ಅದು 2010ರಲ್ಲಿ ರಾಜ್ಯ ಸಭೆಯಲ್ಲಿ ಪಾಸ್‌ ಕೂಡ ಆಯಿತು.  ಆದರೂ ಕೂಡ ಅದು ಲೋಕಸಭೆಯಲ್ಲಿ ಪಾಸಾಗಲು ಮೊದಲ ಮಂಡನೆಯಿಂದ ಇಪ್ಪತ್ತೇಳು ವರ್ಷಗಳ ಕಾಲ ಕಾಯಬೇಕಾಯಿತು. 

ಮಹಿಳಾ ಮೀಸಲಾತಿ ಕಾಯಿದೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ತಿದ್ದುಪಡಿ ಮಸೂದೆ(ನಾರಿ ಶಕ್ತಿ ವಂದನ್‌ ಅಧಿನಿಯಮ್)ಯನ್ನು ಲೋಕಸಭೆಯಲ್ಲಿ ಸೆಪ್ಟೆಂಬರ್‌ 19ರಂದು ಮಂಡಿಸುವಾಗ, ಎಂದಿನ ತಮ್ಮ ಭಾವನಾತ್ಮಕ ವರಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಗವಂತನೇ ತನ್ನನ್ನು ಈ ಚಾರಿತ್ರಿಕ ಸಂದರ್ಭಕ್ಕಾಗಿ ಆಯ್ಕೆ ಮಾಡಿರುವನು ಎಂಬರ್ಥದ ಮಾತುಗಳನ್ನು ಆಡಿದರು.  ಟ್ರೆ಼ಶರಿ ಬೆಂಚುಗಳಿಂದ ಭಾರಿ ಕರತಾಡನವಾಯಿತು.  ಆದರೆ ಇಂತಹ ಕಾನೂನು ಜಾರಿಯಾಗಬೇಕೆಂದು ಒತ್ತಾಯಿಸಿ ಅನೇಕ ಮಹಿಳಾ ಸಂಘಟನೆಗಳು ದಶಕಗಳಿಂದ ನಾನಾ ತೆರನಾದ ಹೋರಾಟಗಳನ್ನು ನಡೆಸುತ್ತ ಬಂದಿರುವುದನ್ನು ಮನಗಾಣಬೇಕು. ಅನೇಕ ಮಹಿಳಾ ನಾಯಕಿಯರು ತಮ್ಮ ಕೊಡುಗೆಗಳನ್ನು ನೀಡಿದ್ದಾರೆ.  ಅಂತಹವರಲ್ಲಿ ಒಬ್ಬರಾಗಿದ್ದರು ಗೀತಾ ಮುಖರ್ಜಿ.

ಮಹಿಳಾ ಮೀಸಲಾತಿ ಮಸೂದೆಯನ್ನು ಮೊದಲ ಬಾರಿಗೆ ಮಂಡಿಸಿದ ಗೀತಾ ಮುಖರ್ಜಿಯವರು ಜನವರಿ 8, 1924ರಂದು ಕಲ್ಕತ್ತದಲ್ಲಿ ಜನಿಸಿದರು.  ಪ್ರಸ್ತುತ ಬಾಂಗ್ಲಾ ದೇಶದಲ್ಲಿರುವ ಜೆಸ್ಸೋರ್‌ನಲ್ಲಿ ಅವರ ಶಾಲೆಯ ಶಿಕ್ಷಣ ಜರುಗಿತು.  ಹುಟ್ಟಿದಾಗ ಅವರಿಗೆ ಗೀತಾ ರಾಯ್‌ ಚೌಧರಿ ಎಂದು ಹೆಸರಿಡಲಾಗಿತ್ತು.  ವಿದ್ಯಾರ್ಥಿನಿಯಾಗಿದ್ದಾಗಲೇ ಅವರು 1939ರಲ್ಲಿ ಬಂಗಾಳ ಪ್ರಾಂತೀಯ ವಿದ್ಯಾರ್ಥಿ ಒಕ್ಕೂಟವನ್ನು ಸೇರಿದರು.  1947-1951ರವರೆಗೆ ಆಕೆ ಈ ಒಕ್ಕೂಟದ ಕಾರ್ಯದರ್ಶಿಯಾಗಿದ್ದರು.  ಕಲ್ಕತ್ತಾದ ಅಶುತೋಷ್‌ ಕಾಲೇಜಿನಲ್ಲಿ ಅವರು ಬಂಗಾಳಿ ಸಾಹಿತ್ಯವನ್ನು ಓದಿ ಪದವೀಧರರಾದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು. ಭಾರತ ಕಮ್ಯುನಿಸ್ಟ್‌ ಪಕ್ಷವನ್ನು 1942ರಲ್ಲಿ ಸೇರಿದರು.  ನಂತರ ಅವರು ಅದೇ ಪಕ್ಷದ ನಾಯಕರಾಗಿದ್ದ ಬಿಶ್ವನಾಥ್‌ ಮುಖರ್ಜಿಯವರನ್ನು ಮದುವೆಯಾದರು.  1945ರಲ್ಲಿ ಜರುಗಿದ ಅಂಚೆ ನೌಕರರ ಮುಷ್ಕರದಲ್ಲಿ ಅವರು ಪ್ರಧಾನ ಪಾತ್ರವನ್ನು ವಹಿಸಿದರು.

ಭಾರತ ಕಮ್ಯುನಿಸ್ಟ್‌ ಪಕ್ಷವನ್ನು 1948ರಲ್ಲಿ ನಿಷೇಧಿಸಲಾಯಿತು.  ಆ ಸಂದರ್ಭದಲ್ಲಿ ಅವರು ತಮ್ಮ ಪತಿಯ ಜೊತೆ ವಿಚಾರಣಾರಹಿತ  ಬಂಧನಕ್ಕೆ ಒಳಗಾಗಿ ಕಲ್ಕತ್ತಾದ ಪ್ರಸಿಡೆನ್ಸಿ ಜೈಲ್‌ನಲ್ಲಿ ಆರು ತಿಂಗಳ ಕಾಲ ಕಳೆದರು.  ಅವರು ವಿದ್ಯಾರ್ಥಿ, ರೈತ ಮತ್ತು ಮಹಿಳಾ ಚಳುವಳಿಗಳಲ್ಲಿ ತಮ್ಮ ಛಾಪನ್ನು ಮೂಡಿಸಿದರು.  ಅನೇಕರಿಗೆ ಅವರು ಮಾದರಿಯಾದರು.  1964ರಲ್ಲಿ ಭಾರತ ಕಮ್ಯುನಿಸ್ಟ್‌ ಪಕ್ಷ ವಿಭಜನೆಯಾದಾಗ ಅವರು ಮಾತೃಪಕ್ಷದಲ್ಲೇ ಉಳಿದರು.  ಅವರು ಪ್ರಥಮ ಬಾರಿಗೆ 1967ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆಗೆ ಮಿದ್ನಪೊರ್‌ ಜಿಲ್ಲೆಯ ತಮ್ಲುಕ್‌ ಕ್ಷೇತ್ರದಿಂದ ಚುನಾಯಿತರಾದರು. 1980ರಲ್ಲಿ ಪನ್ಸ್ಕೂರಾ ಕ್ಷೇತ್ರದಿಂದ ಲೋಕಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ, ಜಯಶಾಲಿಯಾದರು.

ಹಂತ, ಹಂತವಾಗಿ ಪಕ್ಷದಲ್ಲಿ ಬೆಳೆದು ಅದರ ಸೆಕ್ರೆಟೇರಿಯಟ್‌ನ ಪ್ರಥಮ ಸದಸ್ಯೆಯಾದರು.  1965ರಿಂದಲೇ ಅವರು ಭಾರತ ಮಹಿಳೆಯರ ರಾಷ್ಟ್ರೀಯ ಒಕ್ಕೂಟದ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಲು ತೊಡಗಿದರು.  ಮಹಿಳೆಯರಿಗೆ ಸಂಬಂಧಿಸಿದ ಅನೇಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.  ಮಹಿಳಾ ಬೀಡಿ ಕಾರ್ಮಿಕರ ಸಂಘಟನೆಯಲ್ಲಿನ ಅವರ ಪಾತ್ರ ಗಮನಾರ್ಹವಾಗಿತ್ತು.  ಅವರು ಮಹಿಳೆಯರ, ಗ್ರಾಮೀಣ ದುಡಿಮೆಯ ರಾಷ್ಟ್ರೀಯ ಆಯೋಗದ ಮತ್ತು ಪತ್ರಿಕಾ ಮಂಡಲಿಯ ಸದಸ್ಯೆಯಾಗಿ ದುಡಿದರು. ಸಂಸತ್ತಿನಲ್ಲಿ ಅನೇಕ ಸಮಿತಿ, ಉಪಸಮಿತಿಯ ಸದಸ್ಯೆಯಾಗಿ ಗಮನೀಯ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಿದರು. ಅನೇಕರು ಅವರನ್ನು “ಗೀತಾದಿ” ಎಂದೇ ಗೌರವದಿಂದ ಸಂಬೋಧಿಸುತ್ತಿದ್ದರು.

ಅವರಿಗೆ ಓದುವುದರಲ್ಲಿ ಆಸಕ್ತಿಯಿತ್ತು.  ಸಾಹಿತ್ಯ ಕೃತಿಗಳು, ವೈಚಾರಿಕ ಪುಸ್ತಕಗಳು ಮತ್ತು ಕವನ ಸಂಕಲನಗಳನ್ನು  ಓದುತ್ತಿದ್ದರು.  ರವೀಂದ್ರನಾಥ್‌ ಟಾಗೂರು ಮತ್ತು ಕಾಝಿ ನಝ್ರುಲ್‌ ಇಸ್ಲಾಂ ಅವರ ಕವಿತೆಗಳು ಅವರಿಗೆ ಇಷ್ಟವಾಗಿದ್ದವು.  ಅವರು ಮಕ್ಕಳಿಗಾಗಿ ʼಭಾರತ ಉಪಕಥಾ ʼ(ಜಾನಪದ ಕಥೆಗಳು) ‌ʼಛೊಟೋದೆರ್‌ ರಬೀಂದ್ರನಾಥ್ ʼ (ಮಕ್ಕಳಿಗಾಗಿ ಟಾಗೂರ್) ಮುಂತಾದ ಕೃತಿಗಳನ್ನು ಬಂಗಾಳದಲ್ಲಿ ಬರೆದರು.

ಎಚ್‌ ಡಿ ದೇವೇಗೌಡರ ನೇತೃತ್ವವಿದ್ದ ರಾಷ್ಟ್ರೀಯ ರಂಗ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಭಾರತ ಕಮ್ಯುನಿಸ್ಟ್‌ ಪಕ್ಷದ ಇಂದ್ರಜಿತ್‌ ಗುಪ್ತಾರ ತಂಗಿಯಾಗಿದ್ದ ಗೀತಾದಿ ಮೆದುಮಾತಿನ, ಸರಳ ಜೀವನ ನಡೆಸುವ ಸಂಗಾತಿಯಾಗಿದ್ದರು.  ಅವರು ಮಾರ್ಚ್‌ 4, 2000ರಂದು ಅಸುನೀಗಿದರು.  ಆಗ ಅವರಿಗೆ 76 ವರ್ಷಗಳಾಗಿತ್ತು.

                  

‍ಲೇಖಕರು avadhi

September 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: