ನರಹಳ್ಳಿ ಬಾಲಸುಬ್ರಮಣ್ಯ
**
ಪ್ರಸಿದ್ಧ ಲೇಖಕ ವೈ ಜಿ ಮುರಳೀಧರನ್ ಅವರ ಕೃತಿ ‘ವಿಕ್ಟರ್ ಫ್ರಾಂಕಲ್’.
‘ಅಂಕಿತ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ.
ಖ್ಯಾತ ವಿಮರ್ಶಕ ಹಾಗೂ ಸಾಹಿತಿ ನರಹಳ್ಳಿ ಬಾಲಸುಬ್ರಮಣ್ಯ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ.
**
ಅಧುನಿಕ ಜಗತ್ತಿನ ಕೊಳ್ಳುಬಾಕ ಸಂಸ್ಕ್ರತಿಯಲ್ಲಿ ಗ್ರಾಹಕನಿಗೆ ಅಪಾರವಾದ ಅವಕಾಶಗಳಿವೆ, ಆಯ್ಕೆಗಳಿವೆ. ಬೇಕಾದ್ದನ್ನು ಮನೆ ಬಾಗಿಲಿಗೆ ತಂದುಕೊಡುವ ನೂರಾರು ವಾಣಿಜ್ಯ ಸಂಸ್ಥೆಗಳಿವೆ. ತಂತ್ರಜ್ಞಾನ ಭೋಗ ಜೇವನಕ್ಕೆ ಬೇಕಾದ ಎಲ್ಲ ಅನುಕೂಲಗಳನ್ನು ಮಾಡಿಕೊಟ್ಟಿದೆ.
ಆದರೆ ಅದರ ಜೊತೆಗೆ ಅನೇಕ ಅಪಾಯಗಳೂಬೆಸೆದುಕೊಂಡಿವೆ. ಕೊಂಚ ಎಚ್ಚರ ತಪ್ಪಿದರೂ ಗ್ರಾಹಕ ಮೋಸ ಹೋಗುವ ಸಾಧ್ಯತೆ ಇದೆ.
ಒಂದು ಕ್ಲಿಕ್ ಏನು ಬೇಕಾದರೂ ಮಾಡಿಬಿಡಬಹುದು. ಹೀಗಾಗಿ ಗ್ರಾಹಕ ಹೆಚ್ಚು ಜಾಗೃತನಾಗಿರಬೇಕಾಗುತ್ತದೆ. ಆತನಿಗೆ ಈ ಕ್ಷೇತ್ರದಲ್ಲಿ
ಪ್ರಾಥಮಿಕ ಜ್ಞಾನ ಇರಬೇಕಾಗುತ್ತದೆ. ಶಾಲಾ ಕಾಲೇಜುಗಳಲ್ಲಿ, ನಮ್ಮ ಪುಠ್ಯಪುಸ್ತಕಗಳಲ್ಲಿ ಈ ಜ್ಞಾನ ಸಿಗುವುದಿಲ್ಲ. ನಮ್ಮ ಸಾರ್ವಜನಿಕ ಬದುಕಿನಲ್ಲಿಯೇ ನಾವು ಈ ತಿಳುವಳಿಕೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಈ ಬಗೆಯ ಅರಿವು ಆಧುನಿಕ ಬದುಕಿನಲ್ಲಿ ಅನಿವಾರ್ಯ ಅಗತ್ಯ. ನಮ್ಮ ಸಂದರ್ಭದಲ್ಲಿ ಸಾಮಾಜಿಕ ಕಾಳಜಿಯನ್ನಿಟ್ಟುಕೊಂಡು ಇಂತಹ ಅರಿವನ್ನು ಮೂಡಿಸುತ್ತಿರುವವರು ವೈ.ಜಿ.ಮುರಳೀಧರನ್. ಸುಮಾರು ಎರಡು ದಶಕಗಳಿಂದ ಗ್ರಾಹಕ ಜಾಗೃತಿ ಹಾಗೂ ಮಾಹಿತಿ ಹಕ್ಕಿನ ಆಂದೋಲನದಲ್ಲಿ ಮುರಳೀಧರನ್ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
ಮುರಳೀಧರನ್ ಮೂಲತ: ವಾಣಿಜ್ಯಶಾಸ್ತ್ರದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಸಾಹಿತ್ಯವನ್ನು ಆಸಕ್ತಿಯಿಂದ ಅಧ್ಯಯನ ಮಾಡಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಗಳಲ್ಲೂ ಅವರಿಗೆ ಪ್ರಭುತ್ವವಿದೆ. ಸಮಕಾಲೀನ ಜಾಗತಿಕ ವಿದ್ಯಮಾನಗಳ ಬಗ್ಗೆ ಅವರಿಗೆ ಸದಾ ಕುತೂಹಲ. ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶಕ್ಕೆ ಕನ್ನಡ ಮನಸ್ಸನ್ನು ಸಿದ್ದಗೊಳಿಸಬೇಕೆಂಬುದು ಅವರ ಹಂಬಲ. ಅವರ ಎಲ್ಲ ಬರವಣಿಗೆಯ ಹಿಂದೆ ಈ ಆಶಯವಿದೆ. ಈ ಹಿನ್ನೆಲೆಯಲ್ಲಿ ಅವರು ಇದುವರೆಗೆ ೪೦ ಪುಸ್ತಕಗಳನ್ನು ೩೦೦೦ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ.
ತಂತ್ರಜ್ಞಾನ ನಮ್ಮ ಬದುಕಿಗೆ ಎಲ್ಲ ರೀತಿಯ ಸವಾಲುಗಳನ್ನು ಒದಗಿಸಿಕೊಟ್ಟಿದೆ. ಚಲುವಾಗಿಸಿದೆ. ಆದರೆ ನೆಮ್ಮದಿಯನ್ನು ದೊರಕಿಸಿ ಕೊಡುವಲ್ಲಿ ಸೋತಿದೆ ಎಂಬುದು ಎಲ್ಲಾ ಸಂವೇದನಾಶೀಲರ ಅಭಿಮತ. ಪ್ರಖ್ಯಾತ ಮನೋವಿಜ್ಞಾನಿ ʼಎರಿಕ್ ಫ್ರಾಮ್ ʼ “ಇಂದು ನಾವು ಒಂದು ರೋಗಿಷ್ಠ ಸಮಾಜದಲ್ಲಿ ಬದುಕುತ್ತಿದ್ದೇವೆ. ನೈತಿಕ ಅನಾಯಕ ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ಮೇರೆ ಮೀರಿ ಅನುಭವಿಸುವುದು ಇವುಗಳಲ್ಲಿಯೇ ನಿರತರಾಗಿದ್ದೇವೆ. ಭೋಗ ಸಂಸ್ಕೃತಿಯಲ್ಲಿ ಮುಳುಗಿ ಹೋಗಿರುವ ನಾವು ಅದರಿಂದ ಹೊರಬರುವ ಬಗ್ಗೆ ಯೋಚಿಸಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮನೋವಿಜ್ಞಾನದ ಪಾತ್ರ ಅತ್ಯಂತ ಮಹತ್ವದ್ದು” ಎನ್ನುತ್ತಾನೆ. ಸಾಮಾಜಿಕ ಕಾಳಜಿಯ ಮುರಳೀಧರನ್‌ರವರಿಗೆ ಎರಿಕ್ ಫ್ರಾಮ್‌ನ ಈ ಮಾತುಗಳು ಬಹಳವಾಗಿ ಕಾಡಿವೆ. ಇದರಿಂದಾಗಿ ಸಹಜವಾಗಿ ಅವರು ಮನೋವಿಜ್ಞಾನ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಆಸಕ್ತಿ ತಾಳಿದ್ದಾರೆ. ಅದರ ಫಲವೇ ಈ ಕೃತಿ.
ಇತ್ತೀಚಿಗೆ ಓದುವ ವಲಯದಲ್ಲಿ ಗಾಢ ಪ್ರಭಾವ ಬೀರಿದ ಕೃತಿಗಳಲ್ಲೊಂದು ವಿಕ್ಟರ್ ಫ್ರಾಂಕಲ್‌ರ ʼಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್ʼ. ಸುಮಾರು ಒಂದು ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿರುವ ಈ ಕೃತಿ ಜಗತ್ತಿನ ೨೮ ಭಾಷೆಗಳಲ್ಲಿ ಅನುವಾದಗೊಂಡಿದೆ. ನಮ್ಮ ಕಾಲದಲ್ಲಿ ಹೆಚ್ಚು ಚರ್ಚೆಗೊಳಗಾಗಿರುವ ಕೃತಿಗಳಲ್ಲಿ ಇದೂ ಒಂದು. ಈ ಪುಸ್ತಕವನ್ನು ಕುರಿತು ಸುಮಾರು ೫೦೦೦ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಸಿವಿಜಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿತ್ತು ಎಂಬ ಮಾಹಿತಿ ಇದೆ. ಇತ್ತೀಚೆಗೆ ಸುಭಾಷ್ ರಾಜಮನೆ ‘ಬದುಕಿನ ಅರ್ಥವನ್ನು ಹುಡುಕುತ್ತಾ’ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಶಿವಾನಂದ್ ಬೇಕಲ್ ಸಹ ‘ಬದುಕಿನ ಅರ್ಥದ ಹುಡುಕಾಟದಲ್ಲಿ ಮನುಷ್ಯʼ ಎಂಬ ಹೆಸರಿನಲ್ಲಿ ಕನ್ನಡ ಅನುವಾದಿಸಿದ್ದಾರೆಂದು ಕೇಳಿದ್ದೇನೆ. ಅತ್ಯಂತ ಪ್ರಸಿದ್ಧವಾದ ‘ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್ʼ ಎಂಬ ಕೃತಿ ಕನ್ನಡದಲ್ಲಿ ಅನುವಾದವಾಗಿದ್ದರೂ ಫ್ರಾಂಕಲ್ ಬಗ್ಗೆ ಹೆಚ್ಚಿನ ಮಾಹಿತಿಗಳು ನಮಗೆ ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮುರಳೀಧರನ್ ಅವರು
ವಿಕ್ಟರ್ ಫ್ರಾಂಕಲ್‌ರ ಜೀವನ ಚಿತ್ರ ಹಾಗೂ ಅವರು ಪ್ರತಿಪಾದಿಸಿದ ಪರಿಕಲ್ಪನೆಗಳ ಬಗ್ಗೆ ಹೆಚ್ಚಿನ ವಿವರ ನೀಡಲು ಈ ಕೃತಿಯಲ್ಲಿ ಪ್ರಯತ್ನಿಸಿದ್ದಾರೆ.
ವಿಕ್ಟರ್ ಫ್ರಾಂಕಲ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದು ತುಂಬಾ ಕಡಿಮೆ. ಸ್ನೇಹಿತರು ಹಾಗು ಪತ್ನಿಯ ಒತ್ತಾಯಕ್ಕೆ ಮಣಿದು ತಮ್ಮ ಜೀವನದ ಕೆಲ ವಿವರಗಳನ್ನು ಬರೆದರೂ ಅದನ್ನು ಪ್ರಕಟಿಸಲು ಅಪೇಕ್ಷಿಸಲಿಲ್ಲ. ಆದರೆ ಅವರ ಸ್ನೇಹಿತರು ಫ್ರಾಂಕಲ್‌ರ ೯೦ನೇ ಹುಟ್ಟುಹಬ್ಬದ ಸಂದರ್ಭಧಲ್ಲಿ ʼವಾಟ್ ಇಸ್ ನಾಟ್ ಇನ್ ಮೈ ಬುಕ್ಸ್ʼ ಎಂಬ ಹೆಸರಿನಲ್ಲಿ ಈ ಹಸ್ತಪ್ರತಿಯನ್ನು ಜರ್ಮನ್ ಭಾಷೆಯಲ್ಲಿ ಪ್ರಕಟಿಸಿದರು. ಫ್ರಾಂಕಲ್‌ರ ಮರಣಾನಂತರ ಅವರ ಬಗ್ಗೆ ಮೂರು ಪುಸ್ತಕಗಳು ಪ್ರಕಟವಾಗಿದೆ. ಮನೋವಿಜ್ಞಾನದ ಜನಕ ಎಂದು ಪ್ರಸಿದ್ಧನಾದ ಸಿಗ್ಮಂಡ್ ಫ್ರಾಯ್ಡ್ ಹಾಗೂ ವೈಯಕ್ತಿಕ ಮನೋವಿಜ್ಞಾನ ಎಂಬ ಪರಿಕಲ್ಪನೆಯನ್ನು ಪ್ರತಿಪಾದಿಸಿದ ಆಲ್‌ಫ್ರೆಡ್ ಆಡ್ಲೆರ್‌ನನ್ನು ಜಗತ್ತಿಗೆ ಕೊಟ್ಟ ಆಸ್ಟ್ರಿಯಾ ದೇಶದ ರಾಜಧಾನಿ ವಿಯನ್ನಾ ನಗರವೇ ವಿಕ್ಟರ್ ಫ್ರಾಂಕಲ್‌ಗೂ ಜನ್ಮ ನೀಡಿದೆ. ವಿಯನ್ನಾ ನಗರದ ಒಂದು ಯಹೂದಿ ಕುಟುಂಬದಲ್ಲಿ ಜನಿಸಿದ ವಿಕ್ಟರ್ ಫ್ರಾಂಕಲ್ ತಂದೆ ಗ್ಯಾಬ್ರಿಯಲ್ ಫ್ರಾಂಕಲ್. ತಾಯಿ ಪ್ರಾಗ್ ಮೂಲದ ಎಲ್ಲಾ ಫ್ರಾಂಕಲ್. ಫ್ರಾಂಕಲ್ ಹುಟ್ಟಿದ ಮನೆಯ ಎದುರಿನ ಮನೆಯಲ್ಲೇ ಮನೋವಿಜ್ಞಾನಿ ಆಡ್ಲೇರ್ ವಾಸಿಸುತ್ತಿದ್ದನಂತೆ. ಮಹಾಯುದ್ಧದ ಪರಿಣಾಮವಾಗಿ ವಿಯನ್ನಾದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಹೀಗಾಗಿ ಫ್ರಾಂಕಲ್‌ನ ಬಾಲ್ಯ ಬಡತನದಲ್ಲಿಯೇ ಕಳೆಯಿತು. ದೈಕಿನ ಬದುಕನ್ನು ಸಾಗಿಸುವುದೇ ದುಸ್ತರವಾಗಿತ್ತು.
ನೆಲದ ಗುಣ ಹಾಗೂ ಪರಿಸರದ ಪ್ರಭಾವವಿದ್ದಿರಬೇಕು. ಚಿಕ್ಕಂದಿನಿಂದಲೇ ಫ್ರಾಂಕಲ್‌ಗೆ ಮನೋವಿಜ್ಞಾನದ ಬಗ್ಗೆ ಆಸಕ್ತಿ ಬೆಳದಿತ್ತು. ಹದಿಹರೆಯದಲ್ಲಿಯೇ ಆತ ಈ ಬದುಕಿಗೆ ಏನಾದರು ಅರ್ಥವಿದಿಯೇ ಎಂದು ಶಿಕ್ಷಕರನ್ನು ಪ್ರಶ್ನಿಸುತ್ತಿದ್ದನಂತೆ. ಮನೋವಿಜ್ಞಾನಿ ಆಗಬೇಕೆಂಬ ಹಂಬಲ ಅವರ ಪ್ರಾಥಮಿಕ ಆದ್ಯತೆಯಾಗಿದ್ದರೂ ಬಹುಮುಖಿಯಾದ ಅನೇಕ ಸೃಜನಶೀಲ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ತೊಗಡಿಸಿಕೊಂಡಿದ್ದರು. ಹಿಪ್ನೋಟಿಸಮ್ ಕಲಿತಿದ್ದರು. ವ್ಯಂಗ್ಯಚಿತ್ರ ರಚಿಸುತ್ತಿದ್ದರು. ಕನ್ನಡಕದ ಫ್ರೇಮ್‌ಗಳ ವಿನ್ಯಾಸ ರೂಪಿಸುತ್ತಿದ್ದರು. ಪರ್ವತಾರೋಹಣ ಮಾಡುತ್ತಿದ್ದರು, ಪೈಲೆಟ್ ಆಗಿ ವಿಮಾನ ಓಡಿಸಿದ್ದೂ ಉಂಟು. ಸಾಹಿತ್ಯದಲ್ಲೂ ಆಸಕ್ತಿ ಇದ್ದು ಎರಡು ಕಥೆ ಒಂದು ನಾಟಕವನ್ನು ಅವರು ಬರೆದಿದ್ದಾರ. ಈ ಎಲ್ಲವೂ ಅವರನ್ನು ಕ್ರಿಯಾಶೀಲವಾಗಿಡಲು ನೆರವಾಗಿದ್ದವು.
ಈ ಕೃತಿಯ ಅತ್ಯಂತ ಮುಖ್ಯವಾದ ಭಾಗವೆಂದರೆ ಅವರ ಬದುಕಿನ ಎರಡನೆಯ ಘಟ್ಟವಾದ ಯಾತನಾ ಶಿಬಿರದ ದಿನಗಳು. ೧೯೩೮ರಲ್ಲಿ ಹಿಟ್ಲರ್ ಆಸ್ಟ್ರಿಯ ದೇಶವನ್ನು ವಶಪಡಿಸಿಕೊಂಡ ನಂತರ ಅಲ್ಲಿದ್ದ ಯಹೂದಿಗಳ ಬದುಕು ನರಕಸದೃಶವಾಯಿತು. ಹಿಟ್ಲರ್‌ನ ನಾಜಿಗಳು ಅತ್ಯಂತ ಅಮಾನವೀಯವಾಗಿ ನಡೆದುಕೊಂಡು ಸಾವಿರಾರು ಜನ ಯಹೂದಿಗಳನ್ನು ಸೆರೆಮನೆಗೆ ತಳ್ಳಿದರು. ಆ ಗುಂಪಿನಲ್ಲಿ ಫ್ರಾಂಕಲ್‌ರ ಕುಟುಂಬವೂ ಸೇರಿತ್ತು. ಯಾತಾನಾ ಶಿಬಿರದ ಅವಧಿಯಲ್ಲಿ ಫ್ರಾಂಕಲ್ ತನ್ನ ಕುಟುಂಬದ ಎಲ್ಲರನ್ನು ಕಳೆದುಕೊಂಡು ಏಕಾಂಗಿಯಾದರು. ತಂದೆ ಗ್ಯಾಬ್ರಿಯಲ್ ಯಾತನಾ ಶಿಬಿರಕ್ಕೆ ಬಂದ ಆರು ತಿಂಗಳಲ್ಲಿ ತೀರಿಕೊಂಡರು. ತಾಯಿಯನ್ನು ಗ್ಯಾಸ್‌ಚೇಂಬರ್‌ಗೆ ಕಳುಹಿಸಿ ಸುಡಲಾಯಿತು. ಸಹೋದರ ಮತ್ತು ಆತನ ಪತ್ನಿ ಗಣಿ ಕೆಲಸದಲ್ಲಿ ತೀರಿಕೊಂಡರು. ಪತ್ನಿ ಟೆಲ್ಲಿ ಹಸಿವು ಹಾಗು ಪೌಷ್ಠಿಕಾಂಶದ ಕೊರತೆಯಿಂದ ಸಾವನ್ನಪ್ಪಿದ್ದರು.
ನಾಜಿಗಳ ನಿಯಂತ್ರಣದಲ್ಲಿದ್ದ ಅನೇಕ ಯಾತನಾ ಶಿಬಿರಗಳಲ್ಲಿ ಆಶ್‌ವಿಟ್ಜ್ ಶಿಬಿರ ಅತ್ಯಂತ ಭಯಾನಕ ಕೇಂದ್ರವಾಗಿತ್ತು. ಅಲ್ಲಿ ಅವರು ಪಡೆದ ದಾರುಣ ಅನುಭವಗಳೇ ಮನೋವಿಜ್ಞಾನದ ಅವರ ಮುಂದಿನ ಅಧ್ಯಯನಕ್ಕೆ ಸಾಮಗ್ರಿಯನ್ನು ಒದಗಿಸಿತು. ಫ್ರಾಂಲ್ ಜೀವನದಲ್ಲಿ ಎಷ್ಟೇ ಕಷ್ಟವನ್ನು ಅನುಭವಿಸಿದರೂ ಬದುಕಿನ ಬಗ್ಗೆ ವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಅವರ ಪ್ರಕಾರ ವ್ಯಕ್ತಿ ಒಳ್ಳೆಯವನಾಗುವುದಕ್ಕೆ ಅಥವಾ ಕೆಟ್ಟವನಾಗುವುದಕ್ಕೆ ಅವನು ಆಂತರಿಕವಾಗಿ ಕೈಗೊಳ್ಳುವ ನಿರ್ಧಾರಗಳು ಕಾರಣವೇ ಹೊರತು ಅವನ ಬಾಹ್ಯ ಪ್ರಪಂಚವಲ್ಲ. ವ್ಯಕ್ತಿ ಪರಿಸ್ಥಿತಿಗೆ ಯಾವ ರೀತಿ ಸ್ಪಂದಿಸಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಅವನಿಗೆ ಇದ್ದೇ ಇರುತ್ತದೆ. ಅದನ್ನು ಯಾರೂ ಅವನಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ಇದು ಅವರ ಖಚಿತ ನಂಬಿಕೆ. ಈ ಸಿದ್ಧಾಂತವನ್ನು ಅವರು ಕಡೆಯವರೆಗೂ ಪ್ರದಿಪಾದಿಸುತ್ತಲೇ ಬಂದರು.
ಫ್ರಾಂಕಲ್ ಆರಂಭದಲ್ಲಿ ಫ್ರಾಯ್ಡ್ ಹಾಗೂ ಆಡ್ಲೆರ್ ಪ್ರಭಾವಕ್ಕೆ ಒಳಗಾದರೂ, ಬಹಳ ಬೇಗ ಅದರಿಂದ ಹೊರಬಂದು ತಮ್ಮದೇ ಆದ ಸಿದ್ಧಾಂತ ರೂಪಿಸಿಕೊಳ್ಳಲು ಪ್ರಯತ್ನಿಸಿದರು. ಫ್ರಾಯ್ಡ್‌ನ ‘ಸುಖದ ಇಚ್ಛಾಶಕ್ತಿ’ ಹಾಗೂ ಆಡ್ಲೆರ್‌ನ ‘ಅಧಿಕಾರದ ಇಚ್ಛಾಶಕ್ತಿ’ ಇವುಗಳಿಗೆ ಬದಲಾಗಿ ಫ್ರಾಂಕಲ್ ‘ಅರ್ಥದ ಇಚ್ಛಾಶಕ್ತಿ’ ಎಂಬ ಹೊಸ ಪರಿಕಲ್ಪನೆಯನ್ನ ಪ್ರತಿಪಾದಿಸಿದರು. ಚರಿತ್ರೆಯ ಒಂದು ಘಟ್ಟದಲ್ಲಿ ಮನುಷ್ಯ ಸಾವಿರಾರು ವರ್ಷಗಳಿಂದ ತನಗೆ ಮಾರ್ಗದರ್ಶನ ನೀಡುತ್ತಿದ್ದ ಪರಂಪರೆಯ ಸಂಬಂಧವನ್ನು ಕಡಿದುಕೊಂಡ. ಇದರ ಪರಿಣಾಮದಿಂದಾಗಿ ಹತಾಶೆ ಅವನನ್ನು ಕಾಡಲಾರಂಭಿಸಿತು. ಈ ಹತಾಶ ಭಾವದಿಂದ ಮನುಷ್ಯನನ್ನು ಪಾರು ಮಾಡಲು, ಬದುಕಿಗೊಂದು ಅರ್ಥ ಕಂಡುಕೊಳ್ಳಲು ಅವರು ಲೋಗೋಥೆರಪಿ ಎಂಬ ಚಿಕಿತ್ಸಾ ವಿಧಾನವನ್ನು ಆರಂಭಿಸಿದರು. ವ್ಯಕ್ತಿ ತನಗೆ ಎದುರಾಗುವ ನೋವು ಕಷ್ಟ ಸಂಕಟ ಇತ್ಯಾದಿಗಳನ್ನು ತನ್ನ ಬದುಕಿಗೊಂದು ಅರ್ಥ ಕಂಡುಕೊಳ್ಳುವ ಮೂಲಕ ಸಮರ್ಥವಾಗಿ ನಿರ್ವಹಿಸಬಹುದೆಂಬುದು ಲೋಗೋಥೆರಪಿಯ ಹಿಂದಿನ ಸಿದ್ಧಾಂತ. ಇದನ್ನು ಅವರು ಅರ್ಥದ ಇಚ್ಛಾಶಕ್ತಿ ಎಂದು ಕರೆದದ್ದು. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನವಾದ್ದರಿಂದ ಅವರವರ ಬದುಕಿನ ಅರ್ಥವನ್ನು ಅವರೇ ಕಂಡುಕೊಳ್ಳಬೇಕು ಎಂದು ಫ್ರಾಂಕಲ್ ಪ್ರತಿಪಾದಿಸುತ್ತಾರೆ.
ಮನುಷ್ಯ ಸದಾ ಸುಖದ ಅನ್ವೇಷಣೆಯಲ್ಲಿ ಇರುತ್ತಾನೆ. ಅಧಿಕಾರಕ್ಕಾಗಿ ಹಾತೊರೆಯುತ್ತಿರುತ್ತಾನೆ. ಅದರ ಬದಲು ತನ್ನ ಬದುಕಿಗೊಂದು ಅರ್ಥ ಕಂಡುಕೊಳ್ಳಲು ಅತ ತನ್ನನ್ನು ತೊಡಗಿಸಿಕೊಂಡಾಗ ಸಹಜವಾಗಿಯೇ ಮನುಷ್ಯನಿಗೆ ಬದುಕಿನ ಬಗ್ಗೆ ಭರವಸೆ ಮೂಡುತ್ತದೆ. ಫ್ರಾಂಕಲ್ ಹೇಳಿರುವಂತೆ “ಪರಿಸ್ಥಿತಿ ಎಷ್ಟೇ ಭಯಾನಕವಾಗಿದ್ದರೂ, ವ್ಯಕ್ತಿ ಎಷ್ಟೇ ಅಸಹಾಯಕನಾಗಿದ್ದರೂ ಅದನ್ನು ಮೀರಿ ನಿಲ್ಲುವ ಶಕ್ತಿ ಮನುಷ್ಯನಿಗೆ ಇದೆ. ವೈಯಕ್ತಿಕ ಸೋಲನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳುವ ಸಾಮರ್ಥ್ಯ ಆತನಿಗೆ ಇದೆ. ಇದು ಸಾಧ್ಯವಾಗಬೇಕಾದರೆ ನಮ್ಮ ಶಕ್ತಿ ಸಾಮರ್ಥ್ಯಗಳನ್ನು ನಾವು ಸರಿಯಾಗಿ ಗುರುತಿಸಿಕೊಳ್ಳಬೇಕು ಅಷ್ಟೆ”. ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್ ಪುಸ್ತಕವನ್ನು ಓದಿ ಅನೇಕರು ಪ್ರಭಾವಿತರಾಗಿದ್ದಾರೆ. ಹತಾಶ ಭಾವದಿಂದ ಹೊರಬಂದು ತಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆಯನ್ನು ತಂದುಕೊಂಡಿದ್ದಾರೆ. ಫ್ರಾಂಕಲ್‌ರ ಚಿಂತನೆ ಮಾತ್ರವಲ್ಲ, ಅವರ ಬದುಕೂ ಸಹ ಭರವಸೆಯನ್ನು ಮೂಡಿಸುತ್ತದೆ. ಮುರಳೀಧರನ್ ಅವರ ಈ ಪುಸ್ತಕ ಕನ್ನಡ ಮನಸ್ಸಿಗೊಂದು ಭರವಸೆಯ ಕೊಡುಗೆ. ಅಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ಇಂತಹ ಪುಸ್ತಕಗಳು ಅತ್ಯಗತ್ಯ.
0 ಪ್ರತಿಕ್ರಿಯೆಗಳು