ಹಿಂದಿ ಪರೀಕ್ಷೆ ಮತ್ತು ‘ಶಂಕರಗುರು’ ಸಿನೆಮಾ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

ಹಿಂದಿಯಲ್ಲಿ ೧೨ ನಂಬರ್‌ ಬಂದ್ರೆ ಸಾಕು. ಏಳನೇ ಕ್ಲಾಸ್ ಪಬ್ಲಿಕ್‌ ಪರೀಕ್ಷೆಯಲ್ಲಿ ಪಾಸ್‌! 

ಈ ವಿಚಾರ ಹೆಚ್ಚೂ ಕಡಿಮೆ ಎಲ್ಲರಿಗೂ ಗೊತ್ತಿತ್ತು. ನನಗೂ ಕೂಡಾ. ಜೊತೆಗೆ ಯಾವ ಯಾವ ಪ್ರಶ್ನೆ ಬರುತ್ತೆ ಅನ್ನೋದೂ ಪಬ್ಲಿಕ್‌ ಆಗಿತ್ತು! ಅಂದ್ರೆ ಎಲ್ಲರಿಗೂ ಗೊತ್ತಿತ್ತು ಅಷ್ಟೆ (೧೯೭೮). 

ಇಷ್ಟು ಮಾಹಿತಿ ಇದ್ದ ಮೇಲೆ ಹಿಂದಿಯಲ್ಲಿ ಪಾಸ್‌ ಆಗೋದು ಕಷ್ಟ ಇರಲಿಲ್ಲ. 

ಹೀಗಾಗಿ ಲೆಕ್ಕ ಹಾಕಿದಂತೆ ೧೨ ನಂಬರ್‌ ಮೇಲೆ ಇನ್ನೊಂದೆರೆಡು ಪ್ರಶ್ನೆಗೆ ಯಾವುದಕ್ಕೂ ಇರಲಿ ಅಂತ ಉತ್ತರ ಬರೆದು, ಉತ್ತರ-ಪತ್ರಿಕೇನ ಟೀಚರ್‌ ಕೈಗೆ ಹಾಕಿ, ಯಾವ್ದೇ ಸ್ನೇಹಿತರ ಜೊತೆ ಮಾತಾಡಕ್ಕೂ ನಿಲ್ಲದೆ, ಓಡ್ಕೊಂಡು ಓಡ್ಕೊಂಡು ಮನೆಗೆ ಬಂದಿದ್ದೆ. ಆಗಿನ್ನೂ ಸಮಯ ೧೨ ಗಂಟೆ ಕೂಡಾ ದಾಟಿರಲಿಲ್ಲ. 

ʻಇಷ್ಟು ಬೇಗ ಬಂದ್ಬಿಟ್ಯೇನೋ…?ʼ ಅಂತ ಅಮ್ಮ ಕೇಳಿದ್ದಕ್ಕೆ ʻಹೌದುʼ ಅಂದದ್ದೇ ಮನೆಯ ಮುಂದಿದ್ದ ಪೀಠೋಪಕರಣದ ಅಂಗಡಿಗೆ ಓಡಿದ್ದೆ. ಅಲ್ಲಿ  ಸಹಾಯಕನಾಗಿ‌ ಕೆಲಸ ಮಾಡ್ತಿದ್ದ ಒಬ್ಬ ನನ್ನ  ಗೆಳೆಯನಾಗಿದ್ದವನ ಹತ್ತಿರ ಹೋಗಿ ಕೈಯೊಡ್ಡಿದೆ. 

ʻಇನ್ನೂ ಟೈಂ ಆಗಿಲ್ಲʼ ಅಂತ ಅವನಂದುಬಿಡೋದಾ! ನಿಜವಾಗಿಯೂ ಸಿಟ್ಟು ಬಂದಿತ್ತು. ಬೆಳಗ್ಗೇನೇ ಟಿಕೆಟ್‌ ತಂದಿಡ್ತೀನಿ ಅಂತ ಅಂದಿದ್ದ. ʻಹೌದು. ಹೇಳಿದ್ದೆ. ಕೌಂಟರ್‌ ಓಪನ್‌ ಆಗೋದೇ ೧ ಗಂಟೆ ಮೇಲೆ. ನೀನ್ಯಾಕೆ ಇಷ್ಟು ಬೇಗ ಬಂದೆ? ಪರೀಕ್ಷೆ ಆಗೋಯ್ತಾ?ʼ ಅಂದ.

ನನ್ನ ಹಿಂದೇನೇ ಅಮ್ಮನೂ ಓಡಿ ಬಂದಿದ್ರು. ಮನೆಗೆ ಎಳ್ಕೊಂಡು ಹೋಗಿ ʻಊಟ ಮಾಡಿಕೊಂಡು ಹೋಗೋʼ ಅಂತ ಬಲವಂತ ಮಾಡಿ, ಅನ್ನ ಕಲಸಿ ತಟ್ಟೆ ಕೊಟ್ರು. ದಡಬಡ ಎರಡೇ ನಿಮಿಷಕ್ಕೆ ನುಂಗಿದವನು, ಒಂದೇ ಜಿಗಿತದಲ್ಲಿ ಎಂಬಂತೆ ಮನೆ ಹತ್ತಿರದಲ್ಲೇ ಇದ್ದ ಗೀತಾಂಜಲಿ ಥಿಯೇಟರ್‌ ಮುಂದೆ ಇದ್ದೆ. ಅಷ್ಟು ಹೊತ್ತಿಗಾಗಲೇ ಮಧ್ಯಾಹ್ನದ ೨ ಗಂಟೆ ಪ್ರದರ್ಶನಕ್ಕೆ ಜನ ಮುಗಿಬಿದ್ದಿದ್ದರು. ಅವರಲ್ಲಿ ನಾನೂ ಒಬ್ಬನಾದೆ. 

***

ʻಶಂಕರ್‌ ಗುರುʼ ಸಿನೆಮಾ ಬಿಡುಗಡೆ ಆಗಿದ್ದಾಗ ನನಗೆ ಒಂದು ಪ್ರಶ್ನೆ ಬಹಳ ಗಟ್ಟಿಯಾಗಿ ಬಂದಿತ್ತು. ಯಾರನ್ನ ಕೇಳೋದು… ಬಹಳ ಚಡಪಡಿಸಿದ್ದೆ. ʻಏಳನೇ ಕ್ಲಾಸಿನ ಪಬ್ಲಿಕ್‌ ಪರೀಕ್ಷೆ ಮಾರ್ಚ್‌ನಲ್ಲಿ ನಡೆಯೋವಾಗ ಫೆಬ್ರವರಿ ಮಧ್ಯದಲ್ಲಿ ರಾಜ್‌ಕುಮಾರ್‌ ಅವರ ಹೊಸ ಸಿನೆಮಾ ಯಾಕೆ ಬಿಡುಗಡೆ ಮಾಡಬೇಕಿತ್ತು? ಅವರಿಗೆ ಗೊತ್ತಿಲ್ವಾ, ಮಕ್ಕಳಿಗೆ ತೊಂದರೆ ಆಗುತ್ತೇಂತ. ಪರೀಕ್ಷೆ ಆದ ಮೇಲೆ ನಿಧಾನವಾಗಿ ಬಿಡುಗಡೆ ಮಾಡಲಿಕ್ಕೆ ಅವರಿಗೇನು ಕಷ್ಟ?ʼ 

ಊಹ್ಞು! ಯಾರೂ ಉತ್ತರಿಸಿರಲಿಲ್ಲ. 

ಇನ್ನೊಂದು ದೊಡ್ಡ ಕಷ್ಟ ಅಂದ್ರೆ, ಮಲ್ಲೇಶ್ವರಂ ವೃತ್ತದ ಹತ್ತಿರ ಇದ್ದ ಗೀತಾಂಜಲಿ ಥಿಯೇಟರ್ನಿಂದ ಕೂಗಳತೆಯಲ್ಲಿತ್ತು ನಮ್ಮ ಮನೆ. ಗೀತಾಂಜಲಿ ಟಾಕಿಸ್ ಇದ್ದ ಅದೇ ಐದನೇ ಕ್ರಾಸ್‌ನಲ್ಲಿ. ಇದಕ್ಕೆ ಮೊದಲು ನಮ್ಮ ಮನೆ ಇದ್ದದ್ದು ನವರಂಗ್‌ ಥಿಯೇಟರ್‌ ಹತ್ತಿರ ರಾಜಾಜಿ ನಗರದಲ್ಲಿ. ಚಿಕ್ಕಪುಟ್ಟ ರಜಕ್ಕೆಲ್ಲಾ ಹೋಗ್ತಿದ್ದ ಅಜ್ಜಿ ಮನೆ ನೆಲಮಂಗಲದಲ್ಲಿಯೂ ಟೆಂಟಿಗಳೆಲ್ಲಾ ಮಾಯವಾಗಿ ಒಂದು ಥಿಯೇಟರ್‌ ಶುರುವಾಗಿತ್ತು. ಒಟ್ನಲ್ಲಿ ಹೆಚ್ಚೂ ಕಡಿಮೆ ಆ ವರ್ಷಗಳಲ್ಲಿ ಬಂದ ರಾಜ್‌ಕುಮಾರ್‌ ಸಿನೆಮಾಗಳಲ್ಲಿ ಸಾಕಷ್ಟನ್ನು ನೋಡಿದ್ದೆ. ಆದರೆ  ‘ಶಂಕರ್‌ ಗುರು’ ಹೀಗೆ ಅತಂತ್ರದಲ್ಲಿ ಬಿಡುಗಡೆಯಾಗ್ತಿದ್ದುದು ಸಿನಿಮಾಪ್ರಿಯ ಹೈಕಳಾದ ನಮಗೆಲ್ಲಾ, ಮುಖ್ಯವಾಗಿ ನನಗೆ, ರಾಜ್ ಅಣ್ಣಾವ್ರ ಆರಾಧಕನಿಗೆ ಬಹಳ ನೋವಾಗಿತ್ತು. 

ರಾಜ್‌ಕುಮಾರ್‌ ಅವರ ಸಿನೆಮಾ ಅಂದ್ರೆ ಸುಮ್ನೇನಾ? ಎಲ್ಲೆಲ್ಲಿಂದ ಅಭಿಮಾನಿ ಜನ ಸ್ಟಾರ್‌ಗಳನ್ನ ಮಾಡಿಕೊಂಡು, ತಮಟೆ ಬಾರಿಸ್ಕೊಂಡು, ಪೀಪಿ ಊದ್ಕೊಂಡು, ಪಟಾಕಿ ಹೊಡ್ಕೊಂಡು, ಸಿಳ್ಳೆ ಹೊಡ್ಕೊಂಡು, ಅದರ ಮುಂದೆ ಹಿಂದೆ ಮೆರವಣಿಗೇಲಿ ಕುಣ್ಕೊಂಡು ಬರ್ತಿದ್ರು. ಅದೂ ನಮ್ಮ ಮನೆ ಮುಂದೇನೇ ಹೋಗೋವ್ರು. ಎಷ್ಟೋ ಸರ್ತಿ ನಾನೂ ಅವರ ಜೊತೆ ಇನ್ನೇನು ಹೊರಟೆ ಅನ್ನೋ ಹೊತ್ತಿಗೆ ನಮ್ಮಕ್ಕಂದಿರು ಯಾರಾದ್ರೂ ಹಿಡ್ಕೊಂಡು ಎಳ್ಕೊಂತಿದ್ರು… ಹಾಗೆಲ್ಲಾ ಕುಣಿಯಕ್ಕೆ ಬಿಡ್ತಿರಲಿಲ್ಲ. ನಾವೆಲ್ಲಾ ಸಿನೆಮಾ ನೋಡಿ ಬಂದ ಮೇಲೆ ಮಾತ್ರ ಎಲ್ರೂ ಕೂತ್ಕೊಂಡು ಮಾತಾಡಕ್ಕೆ ಅವಕಾಶವಿತ್ತು. 

ಅವತ್ತು ಒಬ್ಬನೇ ಸಿನೆಮಾ ನೋಡಿ ಬಂದೆ. ಮನೇಲಿ ಕತೆ ಹೇಳ್ದೆ. ಆಮೇಲೆ ಮನೆ ಮಂದಿಯೆಲ್ಲಾ ನಿಧಾನವಾಗಿ ಒಟ್ಟಿಗೆ ಹೋಗಿ ‘ಶಂಕರ್‌ ಗುರು’ ಸಿನೆಮಾ ನೋಡಿದಾಗಲೂ ಹೋಗಿ ಬಂದೆ. ನೆಲಮಂಗಲಕ್ಕೆ ಹೋದಾಗ ಅಲ್ಲಿನ ಬಳಗದ ಗುಂಪಿನ ಜೊತೆ ನೋಡಿದೆ. ಅದೇ ವರ್ಷ ಗೌರಿಬಿದನೂರಿಗೆ ಬಂಧುಗಳ ಮನೆಗೆ ಹೋಗಿದ್ದಾಗಲೂ ನೋಡಿದೆ. ‘ಶಂಕರ್‌ ಗುರು’ ಮನಸ್ಸಿನ ತುಂಬಾ ಆವರಿಸಿಕೊಂಡಿತ್ತು. 

ಪೀಕಲಾಟ ಶುರುವಾಗಿದ್ದು, ಏಳನೇ ಕ್ಲಾಸ್‌ ಪರೀಕ್ಷೆಯ (ಆಗ ಅದು ಪಬ್ಲಿಕ್‌ ಪರೀಕ್ಷೆ!) ಫಲಿತಾಂಶದ ದಿನ ಹತ್ತಿರ ಹತ್ತಿರ ಬಂದಾಗ. ಫೇಲ್‌ ಆಗ್ಬಿಟ್ರೆ? ಅದೂ ಹಿಂದಿಯಲ್ಲಿ ಫೇಲ್‌ ಆಗ್ಬಿಟ್ರೆ? ಆಗೆಲ್ಲಾ ಫೇಲ್‌ ಆದ್ರೆ ಹೋಗಿ ಮತ್ತೆ ಏಳನೇ ಕ್ಲಾಸ್‌ನಲ್ಲೇ ಕೂತ್ಕೊಳ್ಳಬೇಕಿತ್ತು. ಸಪ್ಲಿಮೆಂಟರಿ ಪರೀಕ್ಷೆಗಳು ಇರಲಿಲ್ಲ. 

ಅದ್ಯಾಕೋ ಏನೋ ಹಿಂದಿ ಬಗ್ಗೆ ಆ ಹೊತ್ತಿಗೆ ನಮ್ಮ ನಡುವೆ ಕೆಲವರು ಚಳವಳಿಗಾರರು ಏನೇನೋ ಹೇಳಿ ಸರಿಯಾಗಿ ಗಮನ ಕೊಡದಂತೆಯೋ, ಕಲಿಯದಂತೆಯೋ ಅಡ್ಡ ಬಂದಿದ್ದರು ಅಂತ ಈಗ ಜ್ಞಾಪಕ. ಹಿಂದಿಯ ಬಗ್ಗೆ ಒಂದು ತರಹದ ಅಸಡ್ಡೆ ಬೆಳೆಸಿಕೊಂಡಿದ್ದೆ. ಹಿಂದಿ ಪಾಠವನ್ನ ಸರಿಯಾಗಿ ನಾನು ಕೇಳಲಿಲ್ಲವೋ, ಹಿಂದಿ ಟೀಚರ್‌ ಆಸಕ್ತಿ ಬರುವ ಹಾಗೆ ಹೇಳಿಕೊಡಲಿಲ್ಲವೋ ತಿಳಿಯದು. ಆದರೆ ಹಿಂದಿಯನ್ನು ಕಲಿಯಲಿಲ್ಲವಲ್ಲ ಅಂತ ಈಗಲೂ ಕಸಿವಿಸಿಯಾಗುತ್ತೆ. 

ಇಷ್ಟರ ಮೇಲೆ ನನ್ನಪ್ಪನ ಮೊದಲ ಕೆಲಸ ʻಹಿಂದಿʼ ಮೇಷ್ಟ್ರಾಗಿದ್ದುದಂತೆ. ಅಪ್ಪ ಸುಲಲಿತವಾಗಿ ಹಿಂದಿ ಓದ್ತಾರೆ, ಬರೀತಾರೆ, ಮಾತಾಡ್ತಾರೆ. ಅದ್ಯಾಕೋ ಏನೋ ಕನ್ನಡ, ಸಂಸ್ಕೃತ, ಇಂಗ್ಲಿಷ್‌ ಕಲಿಸಲಿಕ್ಕೆ ಆಗಾಗ್ಗೆ ಕಿವಿ ಹಿಡಿದು ಕೂಡಿಸುತ್ತಿದ್ದ ಅಪ್ಪ, ಹಿಂದಿ ಕಲಿಸಲಿಕ್ಕೆ ಒತ್ತಾಯ ಮಾಡಿರಲಿಲ್ಲ. 

ಹಿಂದಿಯ ಮಾತುಗಳು ಅಲ್ಪಸ್ವಲ್ಪ ಅರ್ಥವಾದರೂ ಸರಿಯಾಗಿ ತಿಳಿಯಲ್ಲ ನನಗೆ. ಹಿಂದಿಯಲ್ಲಿ ಮಾತನಾಡಲು ನಾಲಗೆಗೆ ಮಿದುಳು ಸರಿಯಾಗಿ ನಿರ್ದೇಶನಗಳನ್ನ ಕೊಡುವುದೇ ಇಲ್ಲ. ಹಿಂದಿ ಸಿನೆಮಾ ನೋಡುವಾಗಲೂ ಅಲ್ಲಿನ ಸನ್ನಿವೇಶದಿಂದ ಒಂದಷ್ಟು ತಿಳಿದರೂ, ಅವುಗಳ ಪ್ರಮುಖವಾದ ಮಾತುಗಳನ್ನು ಅದು ಏನು ಅಂತ ಹೇಳಲಿಕ್ಕೆ ನನ್ನ ಹೆಂಡತಿ ಅಥವಾ ಮಗಳು ಪಕ್ಕದಲ್ಲಿ ಇರಲೇಬೇಕು. ರಾಜಕೀಯ ಭಾಷಣಗಳೂ ಅಷ್ಟೆ. ಅರ್ಥ ಆಗುತ್ತೆ, ಆದ್ರೆ ತಿಳಿಯಲ್ಲ! ಹಿಂದಿ ನ್ಯೂಸ್ ಕೂಡಾ. ಇನ್ನು ನನ್ನ ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿನ ಸಂಭಾಷಣೆಗಳು, ತರಬೇತಿಗಳು, ಚರ್ಚೆಗಳು ಹಿಂದಿಯಲ್ಲಾದರೆ ಸಂವಾದಗಳಲ್ಲಿ ಪಾಲ್ಗೊಳ್ಳಲಾಗದೆ ಚಡಪಡಿಸುವಂತಾಗುತ್ತದೆ. ಉತ್ತರ ಭಾರತದಲ್ಲಿ ಮಕ್ಕಳ ಹಕ್ಕುಗಳು, ಮಕ್ಕಳ ನ್ಯಾಯ ಕುರಿತು ತರಬೇತಿಜಗಳು ನಡೆದಾಗ, ಬನ್ನಿ ಎಂದು ಆಹ್ವಾನ ಕೊಟ್ಟಾಗಲೆಲ್ಲಾ ಮೊದಲಿಗೇ ನನ್ನ  ಪ್ರತಿಕ್ರಿಯೆ ಅಂದರೆ, ʻಇಂಗ್ಲಿಷ್‌ ಆದರೆ ಬರ್ತೀನಿ. ಹಿಂದಿ ಅಂದ್ರೆ ಆಗಲ್ಲʼ. ಆಯೋಜಕರಲ್ಲಿ ಯಾರಾದರೂ ‘ಪರವಾಗಿಲ್ಲ ಬನ್ನಿ, ಅನುವಾದಕರು ಇರ್ತಾರೆ’ ಅಂದ್ರೆ ಗೆದ್ದೆ. ಇಲ್ಲದಿದ್ದರೆ ಬೇರೆ ಸಂಪನ್ನ್ಮೂಲ ವ್ಯಕ್ತಿಗಳತ್ತ ಬೆರಳು ತೋರಿಸಬೇಕಷ್ಟೆ. 

ಬೆಂಗಳೂರಿನಲ್ಲೇ ರೈಲ್ವೆ‌ ಪೊಲೀಸರಿಗೆ ತರಬೇತಿ ಅಂದರೆ ಹಿಂದೇಟು ಹಾಕಬೇಕಾಗುತ್ತದೆ. 

ನಾನೇನಾದರೂ ಹಿಂದಿಯಲ್ಲಿ ಮಾತನಾಡುವ ಯತ್ನ ಮಾಡಿದರೆ, ಅದನ್ನು ಕೇಳಿದ ಹಿಂದಿ ಭಾಷಿಕರು, ʻಪರವಾಗಿಲ್ಲ ನೀವು ಇಂಗ್ಲಿಷ್‌ನಲ್ಲಿ ಮುಂದುವರೆಸಿʼ ಅಂತ ತಾವಾಗಿಯೇ ಸಲಹೆ ಕೊಟ್ಟು, ನನ್ನ ಮಾನಪ್ರಾಣಗಳನ್ನೂ, ಅವರ ಶ್ರವಣಾಂಗಗಳನ್ನು ಕಾಪಾಡಿಕೊಳ್ಳುತ್ತಲೇ ತಮ್ಮ ಭಾಷೆಯ ಶುದ್ಧತೆಯನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ!  

ಹಿಂದಿಯಲ್ಲಿ ಏನಾದರೂ ಗಹನವಾದ ಚರ್ಚೆಗಳು ಆರಂಭವಾದರೆ, ತರಬೇತಿ ಹಿಂದಿಯಲ್ಲೇ ಎಂದಾಗ ಬೇರೆಯವರ ಹೆಸರನ್ನು ಸೂಚಿಸುತ್ತೇನೆ ಅಂತ ಹೇಳಿದೆನಲ್ಲ, ಆಗೆಲ್ಲಾ ಹಿಂದಿಯ ಬಗ್ಗೆ  ಚಿಕ್ಕಂದಿನ ನಮ್ಮ ಪುಟ್ಟ ತಲೆಗೆ ʻಯಾಕೆ ಹಿಂದಿ? ಅದೇನೂ ಬೇಡʼ ಎಂಬ ನೇತ್ಯಾತ್ಮಕ ಸಂದೇಶ ಕೊಟ್ಟವರ ಬಗ್ಗೆ ಮತ್ತು ಅದರ ಹಿಂದೆಯೇ ʻಶಂಕರ್‌ ಗುರುʼ ಸಿನೆಮಾಗೋಸ್ಕರ ೧೨ + ಅಂಕದಷ್ಟೆ ಉತ್ತರ ಬರೆದು ತರಾತುರಿಯಲ್ಲಿ ಓಡಿ ಬಂದ ಆ ದಿನ ನೆನಪಾಗುತ್ತದೆ. ಹಾಗಂತ ಆ ಸಿನೆಮಾವನ್ನ  ಎಂದೆಂದೂ ಏನೂ ಅಂದಿಲ್ಲಪ್ಪ! ಇಷ್ಟು ವರುಷ ಕಳೆದ ಈಗಲೂ ನನಗೆ ʻಶಂಕರ್ ಗುರುʼ ತುಂಬಾ ಪ್ರಿಯವಾದ ಚಿತ್ರ. 

ಆಂಧ್ರ ಪ್ರದೇಶದಲ್ಲಿ ಹರಕು ಮುರುಕು ತೆಲುಗಿನಲ್ಲಿ ಮಾತಾಡಿ ಜೈಸಿಕೊಂಡುಬಿಡುತ್ತೇನೆ. ತಮಿಳು ನಾಡಿನಲ್ಲೂ ಕೊಂಚಂ ಕೊಂಚಂ ಇಂಗ್ಲಿಷಂ, ತಮಿಳಂ, ಕನ್ನಡಂ ಕಲೆಸಿ ಭಾವ ಸಂವಹನೆಯಲ್ಲಿ ಗೆದ್ದು ಬರುತ್ತೇನೆ. ಯಾವ ಭಾಷಿಕರೂ ಇದು ತಮ್ಮ  ನಲ್ಮೆಯ ಭಾಷೆಯ ಕೊಲೆ ಯತ್ನ ಎಂದು ಇಲ್ಲಿಯವರೆಗೂ ಪೊಲೀಸ್‌ ದೂರು ಕೊಟ್ಟಿಲ್ಲ! ಆದರೆ ಯಾಕೋ ಹಿಂದಿ ಮಂದಿಯ ಮುಂದೆ ನನ್ನ ಭಾಷಾ ಮಿಶ್ರಣ ಕಸರತ್ತಿನ ಪ್ರಯೋಗ ನಡೆಯದು. ಅಲ್ಲೆಲ್ಲಾ ವಿಧಿಯಿಲ್ಲದೆ ಇಂಗ್ಲಿಷ್‌ ಹೇರುವುದೇ ಆಗುತ್ತೆ. 

ನಾವೆಲ್ಲ ಬಹುಭಾಷಾ ಸರಸ್ವತಿ ಭಾರತಾಂಬೆಯ ಮಕ್ಕಳು. ಅನ್ಯೋನ್ಯ ಭಾವದಲ್ಲಿ ವ್ಯವಹರಿಸುತ್ತಾ ನಡೆದರೆ, ನಮ್ಮನ್ನೆಲ್ಲಾ ಒಂದಾಗಿ ಬೆಸೆದಿರುವ ನಮ್ಮದೇ ಆದ ಸಹಸ್ರಮಾನಗಳ ಸಾಂಸ್ಕೃತಿಕ ಸನ್ನಿವೇಶದ ಪ್ರಭಾವದಲ್ಲಿ ಅಣ್ಣ-ತಮ್ಮಂದಿರಾದ ನಮ್ಮ ನಡುವೆ ಈ ನೆಲದಲ್ಲಿ ವಿಕಾಸಗೊಂಡ ಬಹು ಭಾಷೆಗಳು ಜನಸಾಮಾನ್ಯರ ಅನುದಿನದ ಸಾಮಾನ್ಯ ವ್ಯವಹಾರಕ್ಕೆ, ಭಾವವಿನಿಮಯಕ್ಕೆ ಎಂದೂ ತೊಡಕಾಗಲಾರವು, ಆಗಬಾರದು.

ಅದರಲ್ಲೂ ಕಲಿಕೆಯ ವಯಸ್ಸಿನ ಮುಗ್ಧ ಮಕ್ಕಳ ಮನಸ್ಸಿನಲ್ಲಿ ಯಾವುದೇ ಕಾರಣಕ್ಕೂ ಭಾಷೆಗಳ ಕುರಿತಾಗಿ ಮೇಲರಿಮೆ ಕೀಳರಿಮೆಗಳು ಮೂಡದಂತೆ ದೊಡ್ಡವರು ಎಚ್ಚರವಹಿಸುವುದು ಅವಶ್ಯವಿದೆ. ಕಠಿಣ ಪರೀಕ್ಷೆಗಳ ಗುಮ್ಮನ ಭಯವಿಲ್ಲದಂತೆ, ಭಾಷೆಗಳನ್ನು ಕಲಿಯುತ್ತಾ ಮಕ್ಕಳು ಮುಂದುಮುಂದಕ್ಕೆ ದಾಟುವಂತಾದರೆ ಅದರಿಂದ ಮಕ್ಕಳಿಗೆ ಹಿತವೇ ಆಗುತ್ತದೆಂದು ನನ್ನ ಆಶಯ. ಹಾಗೆಂದು ನಾನಿಲ್ಲಿ ʻಹಿಂದಿʼಯನ್ನು ಕುರಿತು ಮಾತ್ರ ಡೋಲು ಬಾರಿಸುತ್ತಿದ್ದೀನಿ ಎಂದು ತಿಳಿಯಬೇಕಿಲ್ಲ!

ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೧೭ ಬಹಳ ವಿಶಾಲಾರ್ಥದಲ್ಲಿ ಎಲ್ಲ ಮಕ್ಕಳಿಗೆ ಎಲ್ಲ ಕಡೆಗಳಿಂದಲೂ ಯಾವುದೇ ಅಡೆತಡೆಯಿಲ್ಲದೆ ಮಾಹಿತಿ ದೊರೆತು ಅವರು ವಿಕಾಸವಾಗಬೇಕು ಎಂದು ಬಯಸುತ್ತದೆ. ʻಆನೋ ಭದ್ರಾಃ ಕೃತವೋ ಯಂತು ವಿಶ್ವತಃʼ ಎಂಬ ಅಮೋಘವಾದ ಕಲ್ಪನೆಯಿಂದ, ವಿಶ್ವದೆಲ್ಲೆಡೆಯಿಂದ ನಮಗೆ ಜ್ಞಾನದ ಬೆಳಕು ಹರಿದು ಬರಲಿ ಎಂಬ ಆಶಯವನ್ನು ನಾವು ಒಪ್ಪಿದರೂ, ಕೇವಲ ನಮ್ಮ ಕನ್ನಡ ಬಿಟ್ಟರೆ ʻಇಂಗ್ಲಿಷ್‌ʼನಿಂದ ಮಾತ್ರ ಜ್ಞಾನ ಬರಲಿ ಎಂದು ಸೀಮಿತಗೊಳಿಸಿದರೇನೋ ಎಂದು ಕಸಿವಿಸಿಯಾಗುತ್ತದೆ. ಪರಿಚ್ಛೇದ ೧೭ರ ಆಶಯ ನಿಮಗೆ ಸಿಕ್ಕ ಮಾಹಿತಿ, ಜ್ಞಾನ ಇತರರಿಗೂ ಪ್ರಯೋಜನಕ್ಕೆ ಬರಬೇಕು ಎಂಬುದಾದರೆ ಇದೇ ಒಡಂಬಡಿಕೆಯ ಪರಿಚ್ಛೇದ ೨೮ (ಶಿಕ್ಷಣದ ಹಕ್ಕು) ಮತ್ತು ಪರಿಚ್ಛೇದ ೨೯ (ಶಿಕ್ಷಣದ ಗುರಿ) ಸಾಧನೆಗೂ ಅವಕಾಶವಾಗಬೇಕು. ಇಂತಹದೇ ಆಶಾಭಾವನೆ ಸುಸ್ಥಿರ ಅಭಿವೃದ್ಧಿ ಗುರಿಗಳು ೨೦೧೬-೩೦ ತನ್ನ ಗುರಿ ೪ರಲ್ಲಿ (ಗುಣಮಟ್ಟದ ಶಿಕ್ಷಣ-ಎಲ್ಲರಿಗೂ ಸಮನ್ವಯ ಮತ್ತು ಸಮಾನ ಗುಣಮಟ್ಟದ ಶಿಕ್ಷಣ ಮತ್ತು ಜೀವನದುದ್ದಕ್ಕೂ ಕಲಿಕೆಯ ಅವಕಾಶಗಳಿಗೆ ಉತ್ತೇಜನವನ್ನು ಖಾತ್ರಿಪಡಿಸಿ) ಕಾಣುತ್ತದೆ. ಅದಕ್ಕಾಗಿ ಹಲವು ಕಿಟಕಿಗಳು, ಬಾಗಿಲುಗಳು, ಹಾದಿಗಳು ತೆರೆದಿಟ್ಟುಕೊಳ್ಳುವುದು ಅತ್ಯಾವಶ್ಯಕ.

ಇಂದಿನ ದಿನಗಳಲ್ಲಿ ಮಕ್ಕಳು ಕನ್ನಡ ಕಲಿಯುತ್ತಿಲ್ಲ ಎಂಬ ಭಯ ಬಲಿಯುತ್ತಿದೆ. ನಗರ ಸಂಸ್ಕೃತಿಯಲ್ಲಿ ಬಹುತೇಕ ಮಕ್ಕಳು ಮೂರ್ನಾಲ್ಕು ಭಾಷೆಗಳನ್ನು ಅದರಲ್ಲೂ ಹಿಂದಿಯನ್ನು ಶಾಲೆ, ಕಾಲೇಜು ಮತ್ತು ವ್ಯಾವಹಾರಿಕ ಜಗತ್ತಿನಲ್ಲಿ ಸುಲಲಿತವಾಗಿ ಕಲಿಯುತ್ತಿದ್ದಾರೆ. ಇದೇ ಮುಂದುವರಿದರೆ ಕನ್ನಡದ ಗತಿಯೇನು ಎಂಬ ಆತಂಕ ಸಹಜವೇ. ಆದರೆ ಭರವಸೆಯ ದನಿ ಮತ್ತು ಬೆಳಕು ಅಲ್ಲಲ್ಲಿ ಕಂಡುಬರುತ್ತದೆ. ಕನ್ನಡದಲ್ಲಿ ಬರೆಯುವವರ, ಓದುವವರ ಸಂಖ್ಯೆ ಸಾಕಷ್ಟು ವಿಸ್ತಾರವಾಗುತ್ತಿರುವುದನ್ನು ಕೂಡಾ ಕಾಣುತ್ತಿದ್ದೇವೆ. ಹಲವು ರೂಪಗಳಲ್ಲಿ ಸಾಮಾಜಿಕ ಮಾ‍ಧ್ಯಮಗಳಲ್ಲಿ ಕನ್ನಡದ ಬಳಕೆ ನೋಡಿದಾಗ ಪ್ರಾಯಶಃ ಹಿಂದೆಂದಿಗಿಂತಲೂ ಈಗ ಹೆಚ್ಚು ಹೆಚ್ಚು ಜನರು ಕನ್ನಡದಲ್ಲಿ ಒಡನಾಡುತ್ತಿದ್ದಾರೆ ಎಂದೇ ಭಾವಿಸುತ್ತೇನೆ.

ಒಟ್ಟಿನಲ್ಲಿ ನಾವು ನಮ್ಮ ಭಾಷೆಯನ್ನು ಮರೆಯದೆ , ಅದರೊಂದಿಗೆ ಇನ್ನೂ ಹಲವು ಭಾಷೆಗಳನ್ನು ವಿಷಯ ಮಂಡನೆಗಾಗಿ, ವಿಚಾರ ವಿನಿಮಯಕ್ಕಾಗಿ ಕಲಿಯುವುದಕ್ಕೆ ಹಿಂಜರಿಯಬಾರದು. ಅನುಕೂಲ ಸನ್ನಿವೇಶ ಒದಗಿದಾಗ ಮಕ್ಕಳು ಹಲವು ಭಾಷೆಗಳನ್ನು ಕಲಿಯುತ್ತಿದ್ದರೆ ಅದಕ್ಕೆ ದೊಡ್ಡವರು ಅಡ್ಡಿಯಾಗಲೇಬಾರದು. ಇದು ಭಾಷಾ ಕಲಿಕೆಯ ವಿಚಾರಕ್ಕೆ ತಲೆ ತಗುಲಿದ ಮೇಲೆ ಬುದ್ಧಿ ಬಂದಿರುವ ನನ್ನ ನಮ್ರವಾದ ಮುಕ್ತ ಅಭಿಪ್ರಾಯ.

‍ಲೇಖಕರು Admin

September 2, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: