ಹಾಲು, ಹಕ್ಕಿ ಅಂತ ಹೇಳು?..

ಎಂ ಆರ್‌ ಕಮಲಾ

ಚೀಮನಹಳ್ಳಿ ರಮೇಶ್ ಬಾಬು ಅವರ ನನಗಿಷ್ಟವಾದ  ಕವಿತೆಯೊಂದನ್ನು ಓದುತ್ತಿದ್ದೆ. ಅದು ಬಡಿದೆಬ್ಬಿಸಿದ ಭಾವಗಳು ಮಾತ್ರ ಬೇರೆ. ಆ ಕವಿತೆ ಹೀಗೆ ಶುರುವಾಗುತ್ತದೆ.

‘ಅವರಿವರು ಹೇಳುತ್ತಾರೆ
ನಾನು ಅಪ್ಪನ ಪ್ರತಿರೂಪವೆಂದು
ಅದೇ ಕಣ್ಣು ಅದೇ ಮೂಗು ಅದೇ ಹಣೆ ಅದೇ ಬಾಯಿ…
ಹೀಗೆ ಎಲ್ಲವನ್ನು ಹೋಲಿಸಲು ಪ್ರಯತ್ನಿಸುತ್ತಾರೆ. ‘

ಆದರೆ ಕವಿಗೆ ತಾನು ನಿಜಕ್ಕೂ ಅಪ್ಪನಂತಿದ್ದೇನೆಯೇ ಎಂಬ ಪ್ರಶ್ನೆ ಹುಟ್ಟಿದಾಗ, ತನ್ನ  ಸ್ವಾರ್ಥ, ದುರಾಸೆ, ಲಾಲಸೆ, ಕೃತಕವಾಗಿ ಕಟ್ಟಿಕೊಂಡಿರುವ ಬದುಕು ಕಣ್ಣ ಮುಂದೆ ಬಂದು ತಾನು ಅಪ್ಪನಂತಲ್ಲವೆಂಬ ಸಂಕಟವನ್ನು ಹೇಗೆ ವಿವರಿಸಲಿ ಎಂದು ಎರಡು ಸಾಲನ್ನು ಬರೆಯುತ್ತಾರೆ. (ಅವನೋ ಹೊಂಗೆ ಮರದಡಿಯ ಕಾಸಿಲ್ಲದ ಶ್ರೀಮಂತ, ನಾನೋ ಪ್ಲಾಸ್ಟಿಕ್ ಕಾರ್ಡ್ ಗಳ ಹಾಸಿ ಮಲಗಿರುವ ಬಡವ) 

ಅಪ್ಪನಂತೆ ಇಲ್ಲದಿರುವುದು ಬರಿಯ ಸಂಕಟವಲ್ಲ, ವಿಶಿಷ್ಟವೂ ಹೌದು, ಅದರ ಕಾರಣಗಳನ್ನು ಮುಂದೆ ಬರೆಯುತ್ತೇನೆ. ಚಿಕ್ಕ ವಯಸ್ಸಿನಲ್ಲಿ ತಪ್ಪು ಮಾಡಿ ಸಿಕ್ಕಿಕೊಂಡಾಗ ಸಾಮಾನ್ಯವಾಗಿ ಜನರು ಎರಡು ಪ್ರಶ್ನೆಗಳನ್ನು ಕೇಳುತ್ತಿದ್ದರು. ‘ಯಾರ ಮಗನೋ/ಮಗಳೋ ನೀನು?’, ‘ಯಾವನೋ ನಿನ್ನ ಮೇಷ್ಟ್ರು?’. ತಂದೆಯ ಹೆಸರನ್ನೋ, ಮೇಷ್ಟ್ರ ಹೆಸರನ್ನೋ  ಹೇಳಿದಾಗ, ಅವರು ಒಳ್ಳೆಯವರಾದರೆ ‘ಇಂಥವರ ಹೊಟ್ಟೆಯಲ್ಲಿ ಹುಟ್ಟಿದ್ದೀಯ, ಥೂ’, ‘ಆ ಮೇಷ್ಟ್ರ ಹತ್ತಿರ ಪಾಠ ಕಲಿತರೂ ಹಿಂಗಿದ್ದೀಯಲ್ಲ’ ಎನ್ನುತ್ತಿದ್ದರು. ಅವರೇನಾದರೋ ಕೆಟ್ಟವರಾದರೆ ‘ಅವನ ಮಗನಾ, ಸರಿ ಬಿಡು’, ‘ಆ ಮೇಷ್ಟ್ರಾ, ಉದ್ಧಾರ ಆಗ್ತೀಯಾ ಬಿಡು’ ಎಂದು ವ್ಯಂಗ್ಯವಾಗಿ ಹೇಳುತ್ತಿದ್ದರು. ತೇಜಸ್ವಿಯವರಿಗೂ ‘ಕುವೆಂಪು ಅವರ ಮಗನಾ? ಆಹಾ ಆನೆ ಹೊಟ್ಟೆಯಲ್ಲಿ ಲದ್ದಿ ಹುಟ್ಟಿದ ಹಾಗೆ’ ಅಂದಿದ್ದರಂತೆ, ಎಲ್ಲೋ ಓದಿದ ನೆನಪು.

ಈ ನೆಲದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ, ವಿಶೇಷ ಎಂದು ತಿಳಿಯುವ ಆಲೋಚನಾ ಕ್ರಮವೇ ಇಲ್ಲವಲ್ಲ ಎಂದು ಶಿಕ್ಷಕಿಯಾಗಿದ್ದಾಗ ನನಗೆ ಬಹಳ ವ್ಯಥೆಯಾಗುತ್ತಿತ್ತು. ಮಕ್ಕಳ ಆರ್ಥಿಕ ಸ್ಥಿತಿ ಗತಿಯನ್ನು ತಿಳಿಯುವುದಕ್ಕೆ ಮಾತ್ರ ಅವರ ಹಿನ್ನೆಲೆಯ ಬಗ್ಗೆ ಒಂದೆರಡು ಪ್ರಶ್ನೆಗಳನ್ನು ಕೇಳುತ್ತಿದ್ದರೂ ಅದರ ಉದ್ದೇಶ ಹೋಲಿಸುವುದಾಗಿರಲೇ ಇಲ್ಲ. ಎಷ್ಟೆಲ್ಲಾ ತೆರೆದ ಮನಸ್ಸಿನವಳಾಗಿದ್ದರೂ ಮಕ್ಕಳು ಪೋಷಕರನ್ನು ಕರೆದುಕೊಂಡು ಬಂದಾಗ ಮಾತ್ರ ಕೊಂಚ ವಿಚಲಿತಳಾಗುತ್ತಿದ್ದುದು ನಿಜ. ಯಾರ್ಯಾರದ್ದೋ ಕಾಲು ಕೈ ಮುರಿಯುವ, ರೌಡಿತನವನ್ನೇ ಮೈಗೂಡಿಸಿಕೊಂಡಿದ್ದ ಮಕ್ಕಳ ಪೋಷಕರು ಹೆಚ್ಚಿನ ಬಾರಿ ಸಾತ್ವಿಕರಾಗಿರುತ್ತಿದ್ದರು. ಸಾತ್ವಿಕ ಮಕ್ಕಳ ತಂದೆ ತಾಯಿಗಳು ಕ್ರೂರವಾಗಿ ವರ್ತಿಸುತ್ತಿದ್ದರು. ಮಕ್ಕಳ ಗುಣ ಸ್ವಭಾವಕ್ಕೂ, ತಂದೆ-ತಾಯಂದಿರದಕ್ಕೂ ಹೋಲಿಕೆಯೇ ಇರುತ್ತಿರಲಿಲ್ಲ. ಇರಬೇಕಾಗೂ ಇಲ್ಲ. ಮೇಷ್ಟ್ರುಗಳ ಅಂತಹ ನಿರೀಕ್ಷೆಗಳೇ ಮಕ್ಕಳನ್ನು ಕಂಗೆಡಿಸುತ್ತಿದ್ದವು. ಎಲ್ಲೋ ಕೆಲವು ಮಕ್ಕಳು ಸ್ವಲ್ಪ ಮಟ್ಟಿಗೆ ಮನೆಯ ವಾತಾವರಣದಿಂದ ಪ್ರಭಾವಿತರಾಗಿರುತ್ತಿದ್ದರು ಅಷ್ಟೇ. ತಂದೆ-ತಾಯಿಯರ ಹೆಸರನ್ನು ಹಿಡಿದುಕೊಂಡು ಮಕ್ಕಳ ವ್ಯಕ್ತಿತ್ವವನ್ನು ಅಳೆಯದೆ, ಪ್ರತಿಯೊಬ್ಬ ವ್ಯಕ್ತಿಯೂ ಭಿನ್ನ ಎಂಬ ಅರಿವಿನೊಂದಿಗೆ  ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುತ್ತಿದ್ದುದರಿಂದ ನನಗೆಂದೂ ಅವರು ಸಮಸ್ಯೆ ಅನ್ನಿಸುತ್ತಲೇ ಇರಲಿಲ್ಲ.

ಆದರೆ ಸಮಸ್ಯೆಗಳು ಇದ್ದದ್ದು ನಮ್ಮ ಚಿಂತನಾ ಕ್ರಮದಲ್ಲೇ. ಅನೇಕ ಶಿಕ್ಷಕರು ತರಗತಿಯ ಮಕ್ಕಳೆಲ್ಲ  ಒಂದೇ ರೀತಿಯಲ್ಲಿ ವರ್ತಿಸಬೇಕು ಎಂದು ಒತ್ತಡ ಹೇರುತ್ತಿದ್ದರು. ತಂದೆ-ತಾಯಿಗಳು ನಮ್ಮಂತೆಯೇ ಮಕ್ಕಳಿರಬೇಕು ಎಂದುಕೊಳ್ಳುವುದು ಹೇಗೆ ವಿಚಿತ್ರವೋ, ತರಗತಿಯಲ್ಲಿ  ಶಿಕ್ಷಕರು ತೋರಿಸುತ್ತಿದ್ದ ಯಾವನೋ ‘ಮಾದರಿ ಹುಡುಗ’ನಂತೆ ಉಳಿದವರು ಇರಬೇಕು ಎನ್ನುವುದು ಅಷ್ಟೇ ಮೂರ್ಖತನದ್ದಾಗಿತ್ತು. ಹೀಗಾಗಿ ಪ್ರತಿನಿತ್ಯ ಉಪನ್ಯಾಸಕರ ಕೊಠಡಿಯಲ್ಲಿ ಸಣ್ಣ ಮಟ್ಟಿಗೆ ವಾದ ವಿವಾದಗಳಾಗುತ್ತಿದ್ದವು. ಇದರೊಂದಿಗೆ ವಿದ್ಯಾರ್ಥಿಗಳು ಬರೆಯುವಾಗ ಗ್ರಾಂಥಿಕ ಭಾಷೆಯನ್ನೇ ಬರೆದರೂ ಮಾತನಾಡುವಾಗ  ಬೇರೆಯ ರೀತಿಯೇ ಆಡುತ್ತಿದ್ದರು..

ರಾಮನಗರದಲ್ಲಿದ್ದಾಗ ವಿದ್ಯಾರ್ಥಿಗಳು ಸುರೇಸ, ರಮೇಸ ಎನ್ನುತ್ತಿದ್ದರೆ, ಆನೇಕಲ್ಲಿನಲ್ಲಿ ಕೆಲಸ ಮಾಡುವಾಗ ಸುರೇಶನು, ರಮೇಶನು ಎಂದು ಮಕ್ಕಳು ಮಾತಾಡುತ್ತಿದ್ದರು. ‘ಯಾವ ಸೀಮೆ ಕನ್ನಡ ಮೇಡಂ  ನೀವು? ಅವರ ಉಚ್ಚಾರಣೆ ತಿದ್ದುವುದೇ ಇಲ್ಲ’ ಎಂದು ಹಲವರ ಕೈಯಲ್ಲಿ ಬೈಸಿಕೊಳ್ಳುತ್ತಿದ್ದುದು ಉಂಟು. ಇವತ್ತು ಶುದ್ಧ, ಅಶುದ್ಧ ಕನ್ನಡ ಎಂದೆಲ್ಲ ಚರ್ಚೆ ನಡೆಯುತ್ತಿದೆ. ‘ಮುತ್ಯಾಲ ಮಡುವನ್ನು ಇಳೀಬಹುದು, ಆದರೆ ನಿಮಗೆ ಎಕ್ಕಕ್ಕಾಗಲ್ಲ (ಹತ್ತುವುದಕ್ಕೆ) ಮೇಡಂ’ ಎನ್ನುವ ವಿದ್ಯಾರ್ಥಿಯ ತೆಲುಗು ಮಿಶ್ರಿತ ಕನ್ನಡವನ್ನು ನಾನೇಕೆ ತಿದ್ದಬೇಕು? ಅದು ಅವನಿಗೆ ಸಹಜವಾಗಿ ಒಲಿದ ಭಾಷೆ ಎಂದು ಜಗಳವಾಡುತ್ತಿದ್ದೆ. ಅದಕ್ಕೆ ಕಾರಣವೂ ಇದೆ.

ನಾನು ಶಾಲೆಯಲ್ಲಿದ್ದಾಗ ಒಬ್ಬರು ಮೇಷ್ಟ್ರು ಮೊದಲ ತರಗತಿಯಲ್ಲಿಯೇ ಪ್ರತಿಯೊಬ್ಬರ ಬಳಿ ಬಂದು, ‘ಹಾಲು, ಹಕ್ಕಿ ಅಂತ ಹೇಳು’ ಎನ್ನುತ್ತಿದ್ದರು. ಯಾರ್ಯಾರು ಹಾಲು ಹಕ್ಕಿ ಅನ್ನುತ್ತಾರೋ ಅವರು ಬಚಾವಾಗಿ ಆಲು, ಅಕ್ಕಿ ಅಂದವರಿಗೆ ಬಲವಾಗಿ ಏಟು ಬೀಳುತ್ತಿತ್ತು. ಈ ಭಯದಿಂದ ಅನೇಕರು ‘ಹಾಲು’ ಎನ್ನುವ ಪದ ಬಂದಾಗ ವಿಶೇಷ ಕಾಳಜಿ ವಹಿಸಿ ‘ಹಾಲು’ ಎಂದರೂ ಜೊತೆಯಲ್ಲಿನ `ಹಕ್ಕಿ’ ಅಕ್ಕಿಯಾಗಿಬಿಡುತ್ತಿತ್ತು. ‘ಹಾಲು ಅಕ್ಕಿ ಅಥವಾ ಆಲು ಹಕ್ಕಿ’ ಎಂದು ಏನೇನೋ ಹೇಳಿ ಮತ್ತಷ್ಟು ಒದೆ ತಿನ್ನುತ್ತಿದ್ದರು. ನನಗೆ ಅದರ ಉಚ್ಚಾರಣೆಯ ಸಮಸ್ಯೆ ಇಲ್ಲದಿದ್ದರೂ ಅವರ ವರ್ತನೆ ಸಿಟ್ಟಿಗೆಬ್ಬಿಸುತ್ತಿದುದರಿಂದ ನನ್ನ ವಿದ್ಯಾರ್ಥಿಗಳಿಗೆ ಇಂತಹ ಗಾಬರಿ ಹುಟ್ಟಿಸುವ ವಾತಾವರಣವನ್ನು ಎಂದೂ ಮೂಡಿಸಲಿಲ್ಲ. ಅಂಕಗಳನ್ನು ಕಳೆದು ಕೊಳ್ಳಬಾರದೆಂಬ ದೃಷ್ಟಿಯಿಂದ, ಬರವಣಿಗೆಗೆ ಅನುಕೂಲವಾಗುವ ಹಾಗೆ ಎರಡು ಮೂರು ಬಾರಿ ಕಿವಿಗೆ ಬೀಳುವಂತೆ ಪುನರಾವರ್ತನೆ ಮಾಡುತ್ತಿದ್ದೆ ಅಷ್ಟೇ.    

ತಂದೆ ತಾಯಿಯರ ವ್ಯಕ್ತಿತ್ವವನ್ನು ಮಕ್ಕಳ ಮೇಲೆ ಹೇರುವುದು, ಅವರದಲ್ಲದ ಭಾಷೆಯನ್ನು ಮಾತಾಡುವಂತೆ ಒತ್ತಾಯಿಸುವುದು, ಏಕರೂಪಗೊಳಿಸುತ್ತ ವಿಶೇಷತೆಗಳನ್ನು ನಾಶ ಮಾಡುವುದು ಈ ಎಲ್ಲ ಪ್ರಕ್ರಿಯೆಗಳ ಬಗ್ಗೆ ಎಚ್ಚರದಿಂದಲೇ ಇರಬೇಕು. ಹಾಗೆ ರೂಪಿಸಿದ, ರೂಪುಗೊಂಡ ವ್ಯಕ್ತಿತ್ವಗಳು ಒಳ-ಹೊರಗಿನ ದ್ವಂದ್ವದಲ್ಲಿ ಜಳ್ಳಾಗಿ ಹೋಗಿಬಿಡುತ್ತವೆ ಎನ್ನುವುದು ಅನುಭವ.

‍ಲೇಖಕರು Admin

October 22, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Shashikumar kalasad

    ತುಂಬಾ ಓಳ್ಳೆಯ ವಿಚಾರಗಳು. ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: