ಹಾಲು ಉಕ್ಕಿದರೆ ಗದರಬೇಡಿ..

ಚಂದ್ರಿಕಾ ಹೆಗಡೆ

ಹಾಲು ಉಕ್ಕಿದರೆ ಗದರಬೇಡಿ
ಒಲೆ ಮೇಲೆ ಕಾಸಲಿಟ್ಟ ಹಾಲು
ಕಾಯಲು ಕುಳಿತವಳು
ಅವಳು ನಿಮ್ಮದೇ ಮಗಳು .. ಮಡದಿ
ಸೊಸೆ … ಅಕ್ಕತಂಗಿ…ಅಥವಾ ತಾಯಿ.

ಚಿಕ್ಕ ಹುಡುಗಿ ಕಿಟಕಿಯಾಚೆಯ ಚಿಟ್ಟೆ ಕಂಡು ಕಣ್ಣು
ಮಿಟುಕಿಸುವಷ್ಟರಲಿ
ಮಧುರ ಕನಸಿನ ತೆರೆಯೊಂದು ತರುಣಿಯ ಕಣ್ಣ ಕ್ಷಣ
ಮರೆಮಾಚುವಷ್ಟರಲಿ
ತಣಿಸಲಾರದ ತಲ್ಲಣದ ಹನಿಯೊಂದು ಹೆಣ್ಣ ಕಣ್ಣಂಚಿನಲಿ ಜಾರಿ
ಬೀಳುವಷ್ಟರಲಿ
ಬಾಗಿ ನೋಯುವ ಸೊಂಟವನೊಮ್ಮೆ ನೇವರಿಸಿ ನೆಟ್ಟಗೆ ಮಾಡಿ
ಮೈಮುರಿಯುವಷ್ಟರಲಿ
ಅತ್ತನೋಡಿ ಇತ್ತ ತಿರುಗುವಷ್ಟರಲಿ
ಹಾಲುಕ್ಕಿ ಚಲ್ಲಿದರೆ ಗದರಬೇಡಿ.

ಪಾತ್ರೆಯ ತಳಕ್ಕೆ ಉರಿ ಕೊಂಚ ಹೆಚ್ಚಾದರೂ
ಬೆಂಕಿ ಆರಿಸುವುದು ನಿಮಿಷ ತಡವಾದರೂ
ತಾಳ್ಮೆಯಿಲ್ಲದ ಹಾಲು ಉಕ್ಕಿಯೇ ಬಿಡುತ್ತದೆ
ಉಕ್ಕಿದ ಹಾಲಿನ ರಾಡಿ ಚೊಕ್ಕಮಾಡುವುದು ಅಷ್ಟೇ ಕಷ್ಟ ಮತ್ತು
ಅದು ಕೂಡಾ ಅವಳದೇ ಕೆಲಸ
ಮೇಲಿಂದ ಮತ್ತೆ ಗದರಬೇಡಿ
ಸಾಧ್ಯವಾದರೆ ಸ್ವಲ್ಪ ಸಹಾಯ ಮಾಡಿ.

ಹಾಲುಕ್ಕಿದ ಕಮರು ವಾಸನೆ
ಬಾಗಿಲು ದಾಟಿ ಅಕ್ಕಪಕ್ಕದ ಮನೆಗೆ ಪಸರಿಸಿ
ಕೆಣಕಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ
ಕಸಿವಿಸಿಯಲಿ ಅವಳಿರಲು
ಗದರಿ ಮತ್ತಷ್ಟು ತಲೆಬಿಸಿ ಹೆಚ್ಚಿಸಬೇಡಿ

ಅಂದಿಗೂ ಇಂದಿಗೂ ಹಾಲು ತುಂಬಾ ದುಬಾರಿಯೇನೋ ಹೌದು
ಆದರೂ ಅವಳದೊಂದು ಕ್ಷಣಕ್ಕೂ ಬೆಲೆಯುಂಟು ನೆನಪಿಡಿ
ಹಾಲು ತನಗೆ ತಾನೇ ಉಕ್ಕಿದ ಪರಿಗೆ
ಮೊದಲೇ ಪರಿತಪಿಸುತ್ತಿರುವವಳಿಗೆ
ಮತ್ತೆ ಮತ್ತೆ ಗದರಿ ಅಪರಾಧಿಯನ್ನಾಗಿಸಬೇಡಿ
ಹಾಲು ಉಕ್ಕುಕ್ಕಿ ಉಬ್ಬಿ
ಪಾತ್ರೆಯಂಚಿಗೆ ಜಾರುತಿರುವುದ ಕಂಡು
ದೂರದಿಂದಲೇ ಕಿರುಚುವುದರ ಬದಲು
ನೀವಾದರೂ ಓಡಿಹೋಗಿ ಒಲೆ ಆರಿಸಬಹುದಿತ್ತು
ಎನ್ನುವುದ ಮರೆಯಬೇಡಿ.

ಹಾಲು ಉಕ್ಕಿದರೆ ಗದರಬೇಡಿ
ಯಾರು ಯಾರಿಗೂ ದಯವಿಟ್ಟು……
ಒಳಗಿನ ಕುದಿ ಹೆಚ್ಚಾದಾಗಲೊಮ್ಮೊಮ್ಮೆ
ಯಾರೆಷ್ಟು ಕಾಯ್ದರೂ
ಹೀಗೇ ಉಕ್ಕಿ ಚಲ್ಲಿಬಿಡುವುದು ಸಹಜ
ಚಲ್ಲಲಿ ಬಿಡಿ
ಕೆಲವೊಮ್ಮೆ ಹಾಲು ಉಕ್ಕುವುದೂ ಶುಭವಂತೆ .

‍ಲೇಖಕರು Admin

November 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: