ಸಚಿನ್‌ಕುಮಾರ ಬ.ಹಿರೇಮಠ
ಕಪಿಲ್ ಪಿ.ಹುಮನಾಬಾದೆ ಅವರ ‘ಹಾಣಾದಿ’ ಹಾಗೂ ಪೆದ್ರೊ ಪರಮೊ ಕುರಿತಾದ ನೂರುಲ್ಲಾ ತ್ಯಾಮಗೊಂಡ್ಲು ಅವರ ವಿಮರ್ಶೆ ವಸ್ತುನಿಷ್ಠವಾಗಿಯೇ ಇದೆ.
ನಾನು ಪೆದ್ರೊ ಪರಮೊ ಓದಿಲ್ಲವಾದ್ದರಿಂದ ಆ ಬಗ್ಗೆ ತಿಳಿದುಕೊಳ್ಳಲು ಈ ಚರ್ಚೆ ಸಹಾಯವಾಯಿತು. ಪೆದ್ರೊ ಪರಮೊ ಹಾಗೂ ಹಾಣಾದಿ ಕಾಕತಾಳೀಯವಾಗಿ ಒಂದೇ ಆಗಿರುವುದು ಸಾಧ್ಯವಿಲ್ಲವೆನಿಸುತ್ತದೆ. ಕಪಿಲ್ ಅವರು ನೇರವಾಗಿ ಈ ಕೃತಿಯನ್ನು ಅನುಕರಣೆ ಮಾಡಿ ಅದನ್ನು ನಮ್ಮ ದೇಸೀತನಕ್ಕೆ ಒಗ್ಗುವಂತೆ ಬರೆದಿದ್ದರೆ ನಿಜಕ್ಕೂ ಅದೊಂದು ಕಲಾತ್ಮಕತೆಯೇ ಹೊರತು ಸೃಜನಾತ್ಮಕತೆ ಅಲ್ಲವೇ ಅಲ್ಲ. ಇದು ಫಾರಿನ್ ಚಿತ್ರಗಳನ್ನು ಕನ್ನಡಕ್ಕೆ ಒಗ್ಗಿಸಿ ರಿಮೇಕ್ ಮಾಡಿದಂತೆಯೇ.
ಕಾದಂಬರಿ ಮನಪಟಲದ ರಂಗ ಶಾಲೆ ಎಂದು ಕುವೆಂಪು ಅವರು ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಪ್ರಸ್ತಾಪಿಸುತ್ತಾರೆ. ಈ ನಿಟ್ಟಿನಲ್ಲಿ ಕಪಿಲ್ ಅವರ ನಿರೂಪಣೆಯ ಶೈಲಿಯಿಂದಾಗಿ ಒಬ್ಬ ಭರವಸೆಯ ಕಾದಂಬರಿಕಾರ ಎನಿಸುತ್ತಾರೆ.
ಇನ್ನು ನೂರುಲ್ಲಾ ತ್ಯಾಮಗೊಂಡ್ಲು ಅವರು ಸೂಚಿಸಿರುವ ಪ್ರತ್ಯಯ ದೋಷಗಳೂ ಸಹ ಚಿಂತನಾರ್ಹ. ಆದರೆ ಕಪಿಲ್ ಮೂಲತಃ ಬೀದರ್‌ನವರಾಗಿದ್ದು ಅಲ್ಲಿನ ಗ್ರಾಮ್ಯ ಭಾಷೆಯು ಮರಾಠಿ, ತೆಲಗುವಿನಿಂದ ಪ್ರಭಾವಿತವಾಗಿದ್ದು ಸಂಭಾಷಣೆಯ ಸುಂದರತೆಗಾಗಿ ಹಾಗೇ ಪ್ರಯೋಗಿಸಿರಬಹುದು. ಗ್ರಾಮ್ಯ ಹಾಗೂ ಗ್ರಾಂಥಿಕ ವಾಕ್ಯಗಳನ್ನು ಒಂದೇ ತೆರದಲ್ಲಿ ಪ್ರಯೋಗಿಸುವುದೂ ಸಹ ಕನ್ನಡ ಭಾಷೆಯ ಸೌಂದರ್ಯವಲ್ಲ.
ಆರ್.ಜಿ. ಹಳ್ಳಿ ನಾಗರಾಜ ಅವರ ಎಚ್ಚರಿಕೆಗೂ ನನ್ನ ಸಹಮತವಿದೆ. ವಯಸ್ಸಿನ ಮಾನದಂಡದ ಮೇಲೆ ಬರಹಗಾರರನ್ನು ಪ್ರೋತ್ಸಾಹದ ನೆಪದಲ್ಲಿ ಸ್ಟಾರ್ ಮಾಡುವುದು ಆ ಬರಹಗಾರನ ಭವಿಷ್ಯದ ದುರಂತವೇ ಸರಿ. ಕನ್ನಡದ ಭರವಸೆಯ ಬರಹಗಾರರು ಓದಿಗೆ ತೆರದುಕೊಂಡು ಕೃತಿ ರಚನೆಗೆ ಇಳಿದರೆ ಸೂಕ್ತ ಎಂಬುದಷ್ಟೇ ನನ್ನ ಅಭಿಪ್ರಾಯ..
0 ಪ್ರತಿಕ್ರಿಯೆಗಳು