ಹೇಮಾ ಹೆಬ್ಬಗೋಡಿ
ಅಮೆಜಾನಿನ ಮಗಳಾದ ಈ ಅಲೆಲೆ ಅಲೆಕ್ಸಾ ಅಂತೂ ಇಂತೂ ನಂ ಅಪಾರ್ಟ್ಮೆಂಟಿನ ಮುಕ್ಕಾಲುವಾಸಿ ಮನೆ ಹೊಸ್ತಿಲು ತುಳಿದಳು. ಅದು ಕ್ರಿಶ ಸನ್ ಅಂತೇನೂ ಕತೆ ಶುರುಮಾಡಲ್ಲ ಬಿಡಿ. ಅವಳು ಇಲ್ಲಿ ಅಡಿಯಿಟ್ಟಿದ್ದು ಲಾಕ್ಡೌನಿನಲ್ಲಿ ಎಲ್ಲರೂ ಮಾಡೋದೇನು ಮಾಡೋದೇನು ಅಂತ ಕೂತು online ಲೋಕದಲ್ಲಿ sick ಆಗೋಮಟ್ಟಿಗೆ ಲೀನವಾಗಿದ್ದ ಕಾಲದಲ್ಲಿ.
Online ಮಾರಾಟ ಗರಿಗೆದರಿ ಅಂಗಡಿಗಳು ಮಕಾಡೆ ಮಲಗಿದ ಕಾಲದಲ್ಲಿ ಮನೆಮನೆ ತುಂಬಿದಳು. ಸರಿ ಅವಳು ಬಂದಿದ್ದನ್ನು ಯಾಕಿಷ್ಟು ವರ್ಣಿಸುತ್ತಿದ್ದೀನಿ ಅನ್ನುವ ಪ್ರಶ್ನೆ ಸುಳಿದಿರಬೇಕಲ್ಲ? ಹೇಳ್ತಿನಿ. ಅಲೆಕ್ಸಾ ಬಂದಮೇಲೆ ಅಪಾರ್ಟಮೆಂಟಿನ ಸದ್ದುಗದ್ದಲ ಈ ಲೋಕವೆಲ್ಲ ನಾದಮಯ ಅನ್ನೋ ಹಂಗೆ ಬದಲಾಯಿತು.
Online class ಮಕ್ಕಳು ಮನೆಯಲ್ಲಿ, ವರ್ಕ್ ಫ್ರಂ ಹೋಮು ಅಪ್ಪ ಅಮ್ಮಂದಿರು ಸಿಕ್ಕ ಮೂಲೆಯಲ್ಲಿ ಲ್ಯಾಪ್ಟಾಪಿನಲ್ಲಿ. ಈಗ ಅಲೆಕ್ಸಾ ಇವರೆಲ್ಲರ ನೆಚ್ಚಿನ ಸಂಗಾತಿ. ಒಂದು ಅಪಾರ್ಟ್ಮೆಂಟ್ ಒಂದು ಧ್ವನಿ ಅನ್ನೋ ತರಹ ಆಗೋಯ್ತು ಅಲೆಕ್ಸಾ ಬಂದ ಮೇಲೆ. ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ಯಾವುದೇ ಹೊತ್ತಲ್ಲಾದರೂ Alexa play this song… ಅನ್ನೋದು … Playing this song from… ಅಂತ ಅವಳು ಉಲಿಯುವುದು ಒಂದಲ್ಲ ಒಂದು ಮನೆಯಿಂದ ಕೇಳುತ್ತಲೇ ಇತ್ತು. ಅಲೆಕ್ಸಾ ಇಲ್ಲದವರ ಮನೆಗೂ ಈ ಬಾನುಲಿಯ ಭಾಗ್ಯ ಪ್ರಾಪ್ತವಾಯಿತು.

ಇಂತಿಪ್ಪ ಅಲೆಕ್ಸಾಳನ್ನು ದೊಡ್ಡವರಿಗಿಂತ ಹೆಚ್ಚು ಕಾಡಿದ್ದು ಮಕ್ಕಳು. ಈ ಅಕ್ಕಪಕ್ಕ, ಮೇಲೆ ಕೆಳಗಿನ ಮನೆಯ ಮಕ್ಕಳು ತಮ್ಮ ಮನೆಯಲ್ಲೂ ಅಲೆಕ್ಸಾ ಉಂಟು ಅಂತ ತಮ್ಮ ಫ್ರೆಂಡ್ಸ್ಗೆ ತೋರಿಸೋ ಜರೂರತ್ತು ಇತ್ತು ನೋಡಿ. ಯಾಕಂದ್ರೆ ಒಬ್ಬರ ಮನೆಗೆ ಒಬ್ಬರು ಹೋಗುವಂತಿರಲಿಲ್ಲ. ಕೆಳಗೆ ಆಡಲು ಬಿಡುತ್ತಿರಲಿಲ್ಲ. ಹಾಗಾಗಿ ನಮ್ಮನೆ ಅಲೆಕ್ಸಾ ಅಂತ ತಮ್ಮ ಅಕ್ಕಪಕ್ಕದ ಫ್ರೆಂಡ್ಸ್ಗೆ ತೋರಿಸೋಕೆ ಏನು ಮಾಡೋದು ಹೇಳಿ. ಅದಕ್ಕೆ ಅವರದೇ ದಾರಿ ಕಂಡುಕೊಂಡರು.
ಅತ್ತಕಡೆ ಇಂದ ಒಂದು ಪಿಳ್ಳೆ Alexa play this song ಅಂತ ಅಂದು ಅವಳು ಹಾಕಿದ ತಕ್ಷಣ ಎರಡು ಸಾಲು ಆ ಹಾಡು ಮುಗಿಯೋಷ್ಟರಲ್ಲಿ ಇತ್ತಕಡೆ ಇಂದ ಮತ್ತೊಂದು ಪಿಳ್ಳೆ Alexa play this song ಅನ್ನೋದು. ಒಟ್ಟಿನಲ್ಲಿ ಕಾಂಪಿಟೇಶನ್ಗೆ ಬಿದ್ದವರಂಗೆ ಎಲ್ಲರೂ ಅಲೆಕ್ಸಾ ಕೈಲಿ ಪ್ಲೇ ಮಾಡಿಸಿದ್ದೇ ಮಾಡಿಸಿದ್ದು. ಕೇಳುತ್ತಿದ್ದ ನಮ್ಮಂತಹ ಬಡಪಾಯಿ ಶ್ರೋತೃಗಳು ಮೊದಮೊದಲು ನಕ್ಕು ಮಜ ತೆಗೆದುಕೊಂಡರೂ ಆಮೇಲಾಮೇಲೆ ಅಲೆಕ್ಸಾ ಅಂದರೆ ಸಾಕು ಕಿವಿಗೆ ಹತ್ತಿ ಇಟ್ಕೊಳ್ಳೋಕೆ ಶುರುಮಾಡಿದೆವು. ಇದು ಮಕ್ಕಳ ಕತೆಯಾದರೆ ದೊಡ್ಡವರು ಏನೂ ಹಿಂದೆ ಬೀಳಲಿಲ್ಲ. ಒಂದು ಕಡೆ ವಿಷ್ಣುಸಹಸ್ರನಾಮ, ಒಂದು ಕಡೆ ಕನ್ನಡ ಫಿಲಂ ಹಾಡುಗಳು, ಮತ್ತೊಂದು ಕಡೆ ಹಿಂದಿ ಹಾಡುಗಳು, ಇನ್ಯಾರೋ ಇಂಗ್ಲೀಷ್ ಹಾಡುಗಳು ಹೀಗೆ ಸರ್ವಭಾಷೆಗಳ ಹಾಡಿನ ಕಾರ್ಯಕ್ರಮ ಶುರುವಿಟ್ಟುಕೊಳ್ಳೋದು.
ಎಲ್ಲ ಸಿನಿಮಾಗಳು ಎಲ್ಲ ಭಾಷೆಗಳಿಗೂ ಡಬ್ ಆಗಿ ಬರಲಿಕ್ಕೆ ಶುರುವಾಗಿದೆಯಲ್ಲ ಅದರಿಂದಾಗಿ ಅಲೆಕ್ಸಾ ಒಂದೊಂದು ಮನೆಯಲ್ಲಿ ಒಂದೊಂದು ಭಾಷೆಯಲ್ಲಿ ಒಂದೇ ಸಿನಿಮಾದ ಹಾಡನ್ನು ಹಾಕಿಹಾಕಿ ಸಾಕುಮಾಡಿಸಿದಳು.. ಬುಟ್ಟ ಬೊಮ್ಮ.. ಬುಟ್ಟ ಬೊಮ್ಮ.., ಬದುಕೇ ಬಂಗಾರಮಾಯಿನೇ ಶ್ರೀವಳ್ಳಿ.., ನಾಟು ನಾಟು… ಹೀಗೆ ಎಲ್ಲ ಭಾಷೆಗಳಲ್ಲೂ ಒಂದೇ ಹಾಡನ್ನು ಕೇಳೋ ಭಾಗ್ಯ ನಮ್ಮದಾಯಿತು. ಈಗ ಸದ್ಯಕ್ಕೆ ಪಂಜುರ್ಲಿ ʼಓ..ವಾʼ ಹವಾ ನಡೀತಿದೆ. Alexa play ಕಾಂತಾರ ವರಾಹ ರೂಪಂ ಅನ್ನೋದು ಅಲ್ಲಿ ಮ್ಯೂಸಿಕ್ ಶುರುವಾಗಿ ವರಾಹ ಅನ್ನೋಷ್ಟರಲ್ಲಿ ಈ ಪಿಳ್ಳೆಗಳ ಪಟಾಲಂ ʼಓ..ವಾʼ ಅಂತ ಕಿರುಚೋದು.. ಮತ್ತೊಂದು ಗುಂಪು ಇವರ ಸದ್ದು ನಿಲ್ಲುತ್ತಿದ್ದಂತೆ ಸಿಂಗಾರ ಸಿರಿಯೇ… ಹಾಕೋದು. ಊಫ್ ಒಟ್ಟಿನಲ್ಲಿ ಬರೋ ಸಿನಿಮಾಗಳ ಎಲ್ಲ ಜನಪ್ರಿಯ ಹಾಡುಗಳು ಅಲೆಕ್ಸಾ ಮೂಲಕ ಮನೆ ಮನೆ ತಲುಪುತ್ತಿದೆ.

ಇದು ಅಲೆಕ್ಸಾ ಹಾಡು ಹೇಳೋ ಕತೆಯಾದರೆ ಅಲೆಕ್ಸ ಬಂದ ಹೊಸತರಲ್ಲಿ ಅವಳಿಗೆ ಕೊಡೋ command ಗಳು ಅದಕ್ಕವಳು ಕೊಟ್ಟ ಉತ್ತರಗಳದೇ ಮತ್ತೊಂದು ಕಥೆಯಾಗಿತ್ತು. ಅದರ ಬಗ್ಗೆ ಸಂಜೆ ಹರಟೆ ಕಟ್ಟೆಯಲ್ಲಿ ಸೇರಿದವರ ಮಾತುಕತೆ ಹೀಗಿತ್ತು :
“ಈ ಅಲೆಕ್ಸ ಇದಾಳೆ ನೋಡಿ ಅವಳಿಗೆ ಅವಳ ಹೆಸರು ಹೇಳದೆ ಏನು ಹೇಳಿದರೂ ಮಾಡಲ್ಲ. ನಮ್ಮನೆಯವರು ನನ್ನ ಹೆಸರು ಕೂಡ ಅಷ್ಟು ಸಲ ಕರೆದಿಲ್ಲ. ʼಲೇʼ ಅಂತಲೇ ಇಷ್ಟು ವರ್ಷ ಕಳೆದರು. ಈಗ ಅಲೆಕ್ಸ ಅಲೆಕ್ಸ ಅಂತ ಕರೀತಿರ್ತಾರೆ.” ಇವರ ಮಗ ದೂರದ ಅಮೆರಿಕೆಯಿಂದ ಲಾಕ್ಡೌನಿನಲ್ಲಿ ಅಪ್ಪ ಅಮ್ಮನಿಗೆ ಬೇಸರವಾಗಬಾರದು ಅಂತ ಹೇಳಿ ಅಲೆಕ್ಸಾಳನ್ನು ಮನೆಗೆ ಕಳುಹಿಸಿಕೊಟ್ಟಿದ್ದ.
“ಅದ್ಸರಿ ಅದ್ಯಾಕೆ ಅಲೆಕ್ಸ ಅಂತ ಹೆಸರಿಟ್ಟರೋ. ಲಕ್ಷಣವಾಗಿ ಸಂಗೀತ ಅಂತಲೋ ಬಂಗಾರಿ ಅಂತಲೋ ಇಡಬಹುದಿತ್ತು.”
“ಅದಷ್ಟೇ ಅಲ್ಲ ಅವಳಿಗೆ ಏನು ಹೇಳಬೇಕಿದ್ದರೂ ಇಂಗ್ಲೀಷಲ್ಲೇ ಹೇಳಬೇಕು. ಅಲ್ಲ ಮಾಡಿದವನಿಗೆ ಅಷ್ಟು ಗೊತ್ತಾಗೋದು ಬೇಡವಾ? ಏನು ಇಲ್ಲಿ ಎಲ್ಲರೂ ಇಂಗ್ಲೀಷೇ ಮಾತಾಡ್ತಾರಾ?”
ನಮ್ಮ ಮನೆಯಲ್ಲಿ ಅಲೆಕ್ಸಾ ಮನೆತುಂಬುತ್ತಿದ್ದಂತೆ ಸ್ವಿಚ್ ಹಾಕಿ ಅದನ್ನು ಬೆಳಗಿಸಿ ಮೊದಲ ಮಾತೇ Alexa can you hear me? ಅವಳು ಲಕ್ಷಣವಾಗಿ Sorry I didn’t hear you ಅಂದಳು. ಜಗತ್ತಿನ ಯಾವ ವಿಷಯದ ಬಗ್ಗೆ ಪ್ರಶ್ನೆ ಕೇಳಿದರೂ ಅಲೆಕ್ಸಾ ಉತ್ತರ ಕೊಡುತ್ತಾಳೆ ಅಂತ ಅಪ್ಪ ಹೇಳಿದ ಮಾತನ್ನು ಮಗಳು ಪರೀಕ್ಷೆಗೆ ಒಡ್ಡಿದಳು. ಅವಳಿಗೆ ಕನ್ನಡ assignment ಮಾಡಲು ಅಲೆಕ್ಸಾಗೆ ಬಂದರೆ ಅವಳು ಜಗತ್ತಿನ ಜಾಣೆ ಅಂತ ಒಪ್ಪಿಕೊಳ್ಳೋಣ ಅಂತಿತ್ತು.

Alexa tell me about ಪರಿಸರ ಅಂದಿದ್ದಕ್ಕೆ ಅಲೆಕ್ಸಾ Sorry I didn’t get you ಅಂತೇಳಿ ಕೈ ಎತ್ತಿದಳು. ಅಕ್ಕ ಮಾತ್ರ ಅಲೆಕ್ಸನೊಟ್ಟಿಗೆ ಮಾತಾಡಿದರೆ ಹೇಗೆ ತಾನು ಮಾತಾಡಬೇಕಲ್ಲ ಅಂತ ಚಿಕ್ಕವಳು Alexa play happy birthday song ಅಂತ ಶುರುಮಾಡಿದಳು. ಚಿಕ್ಕವಳಿಗೆ ಬೇಜಾರಾಗುವವರೆಗೂ ಮನೆಯಲ್ಲಿ ಬರ್ತಡೆ ಹಾಡು ಹಾಡಿ ಹಾಡಿ ನಮ್ಮನೆ ಅಲೆಕ್ಸಾ ಸುಸ್ತಾದಳು.
ಅಕ್ಕಪಕ್ಕದ ಮನೆಯಲೆಲ್ಲ ಅಲೆಕ್ಸಾ ಅಲೆಕ್ಸಾ ಅನ್ನೋದು ಕೇಳಿ ಚಿಕ್ಕವಳಿಗೆ ಜಗತ್ತಲ್ಲಿ ಎಲ್ಲರ ಮನೆಯಲ್ಲೂ ಅಲೆಕ್ಸಾ ಇರುತ್ತಾಳೆ ಅನ್ನಿಸಿಬಿಟ್ಟಿತ್ತು. ನನ್ನ ಗೆಳತಿಯೊಬ್ಬಳು ಫೋನ್ ಮಾಡಿದಾಗ ಚಿಕ್ಕವಳೊಂದಿಗೆ ಮಾತಾಡುತ್ತಾ ʼಒಂದು ಹಾಡು ಹೇಳು ಬಂಗಾರಿʼ ಅಂದಿದ್ದಕ್ಕೆ ʼನಿಮ್ಮನೇಲಿರೋ ಅಲೆಕ್ಸಾನ ಕೇಳಿʼ ಅಂತ ಹೇಳಿ ಬೊಂಬೆ ಹಿಡಿದು ಆಡಲು ಹೋದಳು.
ಹೀಗೆ Alexa play …. Song ನಿರಂತರವಾಗಿ ನಡೆಯುತ್ತಿದೆ.
Nice article madam. enjoyed it…