ಹಾಡ್ಲಹಳ್ಳಿ ನಾಗರಾಜ್ ‘ದಾಟು ಹಲಗೆ’ ಅಂಕಣ ಆರಂಭ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ ಹಾಗೂ ನಾನು, ಕುಂಭದ್ರೋಣ (ಕತಾಸಂಕಲನಗಳು), ಬಾಡಿಗೆಬಂಟರು, ಬಿಂಗಾರೆಕಲ್ಲು, ಬೆಂಕಿಯಸುಳಿ, ಗೃಹ ಪುರಾಣ, ಕಡವೆಬೇಟೆ, ನಿಲುವಂಗಿಯ ಕನಸು ಕಾದಂಬರಿಗಳು ಪ್ರಕಟವಾಗಿವೆ.

‘ಕಾಡುಹಕ್ಕಿಯ ಹಾದಿನೋಟ’ ಎಂಬ ಆತ್ಮಕಥನ ಸ್ವರೂಪದ ಪ್ರಬಂಧ ಸಂಕಲನವಾಗಿದೆ. ಸುಮಾರು ನಾಲ್ಕು ದಶಕಗಳಿಂದಲೂ ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು, ಸಾಹಿತ್ಯಿಕ ಚಟುವಟಿಕೆ, ನಾಟಕ ಹಾಗೂ ಜನಪದ ಗೀತ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಕಿರಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಿದ್ದಗಂಗಾ ಮಠ ಅನ್ನ ದಾಸೋಹ, ಅಕ್ಷರ ದಾಸೋಹ ಮುಖೇನ ವಿದ್ಯಾದಾನಕ್ಕೆ ಕಾರಣವಾಗಿ ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದೆ.

ವಿದ್ಯೆಯಿಂದ ವಂಚಿತರಾಗಿ ಎಲ್ಲೋ ಮೂಲೆ ಗುಂಪಾಗಬೇಕಾಗಿದ್ದ ಬಡ ಗ್ರಾಮೀಣ ಮಕ್ಕಳು ಮಠದ ಮಡಿಲಿಗೆ ಬಿದ್ದ ಕಾರಣ ಸಮಾಜದ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗಿದೆ. ಅಲ್ಲಿ ವಿದ್ಯೆ ಕಲಿತು ಹೋದವರು ಸಾಹಿತಿಗಳಾಗಿದ್ದಾರೆ, ಶಿಕ್ಷಣ ತಜ್ಙರಾಗಿದ್ದಾರೆ, ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ, ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳಾಗಿದ್ದಾರೆ, ನಾಟಕ, ಸಿನಿಮಾರಂಗಗಳಲ್ಲಿ ಮಿಂಚಿದ್ದಾರೆ.

ಹೀಗೆ ಮಠದ ಅನ್ನ ದಾಸೋಹ, ಅಕ್ಷರ ದಾಸೋಹಗಳು ಲಕ್ಷಾಂತರ ಬಡಮಕ್ಕಳ ಬದುಕಿನಲ್ಲಿ ‘ದಾಟು ಹಲಗೆ’ಯಾಗಿ ಪರಿಣಮಿಸಿದೆ. ಈ ಶ್ರೀ ಮಠದಲ್ಲಿ ವಿದ್ಯಾರ್ಜನೆ ಮಾಡಿ ಬದುಕು ರೂಪಿಸಿಕೊಂಡ ಹಾಡ್ಲಹಳ್ಳಿ ನಾಗರಾಜ್ ಕತೆಗಾರರಾಗಿಯೂ, ಕಾದಂಬರಿಕಾರರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಸಿದ್ದಗಂಗೆಯಲ್ಲಿನ ಅವರ ಅನುಭವ ಕಥನಗಳನ್ನು ಇಲ್ಲಿ ನಿರೂಪಿಸಿದ್ದಾರೆ.

1

ಫಂಡ್‌ ಹಾಕಿ ಓದುಸ್ತಾ ಇದ್ವಿ

ಹೆತ್ತೂರಿನ ಜನ ನಾಯಕರ ಶ್ರಮ ಫಲ ಕೊಡತೊಡಗಿತ್ತು. ‘ಐಗೂರು ಅಂಗಡಿʼ ಎಂಬ ಮಳಿಗೆಯಲ್ಲಿ ನಡೆಯುತ್ತಿದ್ದ ಪ್ರೌಢಶಾಲೆಯ ಮೊದಲನೇ ಬ್ಯಾಚ್‌ನಲ್ಲಿ ಗೌಡೇಗೌಡ ಮುಂತಾದವರು ಎಸೆಸೆಲ್ಸಿ ಪಾಸು ಮಾಡಿದ್ದರು. ನಮ್ಮದು ಎರಡನೇ ಬ್ಯಾಚು. ಷಣ್ಮುಖ, ಹೆಚ್‌.ಬಿ.ನಾಗರಾಜು, ಚೊಂಟಿ ಮಂಜ, ಹಿರಿಯಣ್ಣ ಮುಂತಾದ ಘಟಾನುಘಟಿಗಳೇ ನನ್ನೊಂದಿಗೆ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದರು. ಎಸೆಸೆಲ್ಸಿ ನಂತರ ಮುಂದೇನು ಎಂಬ ಪ್ರಶ್ನೆ.

ಹಣಕಾಸಿನಲ್ಲಿ ಚೆನ್ನಾಗಿದ್ದ ಮನೆಯ ಹುಡುಗರು ಹಾಸನ, ಮೈಸೂರುಗಳಲ್ಲಿ ಕಾಲೇಜಿಗೆ ಸೇರಲು ಬ್ಯಾಗ್‌ ರೆಡಿ ಮಾಡಿಕೊಳ್ಳತೊಡಗಿದ್ದರು. ಫೇಲ್‌ ಆಗಿದ್ದವರಿಗೆ ಚಿಂತೆಯೇ ಇರಲಿಲ್ಲ. ತೋಟ, ಗದ್ದೆ, ದನ – ಕರುಗಳ ಪಾಲನೆ ಇದ್ದೇ ಇತ್ತಲ್ಲ. ಕಾಡಿನ ಹಣ್ಣು – ಹಂಪಲು, ಹೊಳೆಯ ಏಡಿ ಮೀನುಗಳು ಅವರಿಗೆ ಆಪ್ಯಾಯಮಾನವಾಗಿ ಕಾಣತೊಡಗಿದ್ದವು.ನಮ್ಮ ಮನೆಯಲ್ಲೇ ಮನೆ ತುಂಬ ನಾಲ್ಕು ಗಂಡು, ಮೂರು ಹೆಣ್ಣು ಮಕ್ಕಳು. ನಮ್ಮ ಅವ್ವನಿಗಂತೂ ಅವರ ಗೊಣ್ಣೆ ಒರೆಸಲು ಸಹಾ ಪುರುಷೊತ್ತಿರಲಿಲ್ಲ. ವರ್ಷಕ್ಕೊಮ್ಮೆ ಸಂಕ್ರಾಂತಿ ಜಾತ್ರೆಗೆಂದು ಮಕ್ಕಳ ಕೈಗೆ ಮೂರು ಕಾಸು ಆರು ಕಾಸು ಹಾಕಲೂ ಆಗದಂತಹ ದುಃಸ್ಥಿತಿ.ಅಂತಹದ್ದರಲ್ಲಿ ನಾನು ಬೇರೆ ಎಸೆಸೆಲ್ಸಿ ಪಾಸು ಮಾಡಿಕೊಂಡು ಬಿಟ್ಟಿದ್ದೆ!

ನಮ್ಮ ಅಪ್ಪ ಅವ್ವ ಮೈನೆರೆದ ಹೆಣ್ಣನ್ನು ಮನೆಯಲ್ಲಿಟ್ಟುಕೊಂಡವರಂತೆ ಚಡಪಡಿಸತೊಡಗಿದ್ದರು. ಪೇಲಾದ ಮಕ್ಕಳ ಕೆಲ ತಂದೆ ತಾಯಂದಿರು ʼದುಡ್ಡು ಬ್ಯಾಡ್ವಾ ಕಾಲೇಜು ಓದ್ಸಕೆ?… ಸುಮ್ನೆ ದನ ಕಾಯಕೆ ಹಾಕಿʼ ಎಂದು ನಮ್ಮ ತಂದೆ ತಾಯಿಯರಿಗೆ ಪುಕ್ಕಟ್ಟೆ ಸಲಹೆ ನೀಡಿ ತಮ್ಮ ಹೊಟ್ಟೆ ಉರಿ ತೀರಿಸಿಕೊಳ್ಳುತ್ತಿದ್ದರು. ಮಗ ಪರೀಕ್ಷೆ ಪಾಸು ಮಾಡಿದ್ದು ಅವರನ್ನು ಸಂಕಟದ ಪರಿಸ್ಥಿತಿಗೆ ದೂಡಿತ್ತು. ಮನೆಯಲ್ಲಿ ಮಾತು ಕಡಿಮೆಯಾಯಿತು. ನೆಮ್ಮದಿಯೇ ಕದಡಿ ಹೋಗಿತ್ತು. ನಾನಂತೂ ತಂದೆ ತಾಯಿಗಳ ದೃಷ್ಟಿಯನ್ನು ಎದುರಿಸದಾದೆ. ಎಸೆಸೆಲ್ಸಿ ಪಾಸು ಮಾಡಿ ತಪ್ಪು ಮಾಡಿ ಬಿಟ್ಟನೇನೋ ಎನಿಸಿ ಮುಜುಗರ ಪಡುತ್ತಿದ್ದೆ. ಅತಂತ್ರ ಸ್ಥಿತಿ ಹೀಗೇಯೇ ಮುಂದುವರೆದಿತ್ತು.

ಅಪ್ಪನ ಈ ಮೌನದಲ್ಲಿ ಒಂದು ನಿರ್ಧಾರ ರೂಪುಗೊಳ್ಳತೊಡಗಿದ್ದು ನಮಗಾರಿಗೂ ತಿಳಿದಿರಲಿಲ್ಲ. ಒಂದು ದಿನ ರಾತ್ರಿ ಅವ್ವನೊಂದಿಗೆ ಹೇಳುತ್ತಿದ್ದರು.

ʼಹುಡುಗನನ್ನು ಮಠಕ್ಕೆ ಸೇರ್ಸನ ಅಂತ ಮಾಡಿದೀನಿʼ ನಿದ್ರೆ ಹತ್ತದೆ ಹೊರಳಾಡುತ್ತಿದ್ದ ನನ್ನ ಕಿವಿಗಳು ಅಪ್ಪನ ಮಾತಿಗೆ ತೆರೆದುಕೊಂಡವು. ʼಮಠಕ್ಕಾʼ ಅವ್ವ ಕೇಳಿದಳು. ಅವಳ ಧ್ವನಿಯಲ್ಲಿ ಆತಂಕ ತುಂಬಿಕೊಂಡಿತ್ತು.“ಅದು ಹಂಗಲ್ಲ ಕನೆ, ನಿನ್ನ ಮಗನನ್ನು ಏನು ಸನ್ಯಾಸಿ ಮಾಡದಿಲ್ಲ” ಎಂದರು ಅಪ್ಪ. ʼಮತ್ತೆ ಮಠಕ್ಕೆ ಸೇರುಸ್ತಿನಿ ಅಂದ್ರಿʼ ಅವ್ವನ ಅನುಮಾನ ಬಗೆಹರಿದಿರಲಿಲ್ಲ. “ಸಿದ್ಧಗಂಗೆ ಮಠ ಅಂತಾ ಐತಂತೆ. ಅಲ್ಲಿ ಬಡವರ ಮಕ್ಕಳನ್ನು ಸೇರಿಸಿಕೊಂಡು ಪುಕ್ಸಟ್ಟೆ ಊಟಕೊಟ್ಟು ವಿದ್ಯೆನೂ ಓದುಸ್ತಾರಂತೆ. ಅಲ್ಲಿ ಕರ್ಕಂಡು ಹೋಗಿ ಸೇರಿಸಿ ಬಂದ್ರೆ ಆಯ್ತು. ಮುಂದೆ ಒಂದಾಣಿ ಖರ್ಚಿಲ್ಲ” ಎಂದರು.

ಅವ್ವನಿಗೆ ಎರಡು ಮೈಲಿ ದೂರದ ತನ್ನ ತೌರುಮನೆ, ನಂತರ ತನ್ನ ಕಾಡು ತೋಟ ಬಿಟ್ಟರೆ ಬೇರೆ ದಾರಿಯೇ ಗೊತ್ತಿರಲಿಲ್ಲ. “ಸಿದ್ಧಗಂಗೆ ಅಂದ್ರೆ ಅದು ಎಷ್ಟ್‌ ದೂರ ಆಗುತ್ತೆ. ನಮ್ಮ ಸಕ್ಲೇಶಪುರ ಪ್ಯಾಟೆಗೆ  ಹತ್ರವಾ” ಅವ್ವ ಅನುಮಾನದಿಂದ ಕೇಳಿದಳು.“ಅದು ನಮ್ಮ ಜಿಲ್ಲೆ ಅಲ್ಲ ಮಾರಾಯ್ತಿ. ಇಲ್ಲಿಂದ ನೂರ್‌ ಮೈಲಿಗಿಂತಾ ದೂರ ಐತೆ ತುಮಕೂರು ಜಿಲ್ಲೆಲಿ” “ಓ ಅಷ್ಟ್‌ ದೂರನಾ, ಗುರ್ತು ಪರಿಚಯ ಇಲ್ಲದ ದೇಶಕ್ಕೆ ನಮ್ಮ ಹುಡುಗನನ್ನ ಒಬ್ಬನನೇ ಹೆಂಗೆ ಕಳ್ಸದು? ಅವ್ವ ಚಡಪಡಿಸಿದಳು.“ ಅಲ್ಲಿ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಅಂತಾ ಒಳ್ಳೆ ಸ್ವಾಮೀಜಿ ಇದಾರಂತೆ. ಸಾವ್ರಾರು ಮಕ್ಳನ್ನು ಮಠದಲ್ಲಿ ಇಟ್ಗಂಡು ಓದುಸ್ತಾ ಅವ್ರಂತೆ… ನೀನೇನು ಹೆದುರ್ಬೇಡ. ಐಗೂರ್‌ ಎಸ್ಟೇಟ್‌ ರಾಜಶೇಖರ್‌ ಅಂತಾ ಇದಾರೆ. ಅವ್ರು ಮಠಕ್ಕೆ ದಾನಿಗಳು. ನಾಳೆ ಹುಡುಗ್ನ ಕರ್ಕಂಡ್‌ ಹೋಗಿ ಅವ್ರ ಕೈಲಿ ಸ್ವಾಮೀಜಿಗಳಿಗೆ ಒಂದು ಕಾಗ್ದ ಬರಿಸ್ಗಂಡ್‌ ಬರ್ತೀನಿ. ಈಗ ಮಲ್ಗು ಎಂದರು… ಬೆಳಗ್ಗೆ ಲಗು ಬಗೆಯಿಂದ ಓಡಾಡುತ್ತಿದ್ದ ಅವ್ವ ನಮಗಿಬ್ಬರಿಗೂ ಬೇಗ ರೊಟ್ಟಿ ತಿನ್ನಿಸಿ ಕಳಿಸಿಕೊಟ್ಟಿದ್ದಳು. ನಾನು ಅದುವರೆಗೂ ಹೆತ್ತೂರು ಬಿಟ್ಟು ಐಗೂರು ರಸ್ತೆಯಲ್ಲಿ ಹೋದವನೇ ಅಲ್ಲ. ಐಗೂರು ಉಡುವೆಯ ಬಗ್ಗೆ ನಮ್ಮ ಶಾಲೆಯ ಕೆಲ ಹುಡುಗರ ಬಾಯಿಂದ ಕೇಳಿ ತಿಳಿದಿದ್ದೆ. ರಜಾ ಇದ್ದ ದಿನ ಅವರು ಆ ಎಸ್ಟೇಟ್‌ಗೆ ಕಳ್ಳತನದಿಂದ ನುಗ್ಗಿ ಕಿತ್ತಳೆ ಹಣ್ಣು ಬಿಳುವನ ಹಲಸಿನಹಣ್ಣು ಮುಂತಾದುವನ್ನು ಮನಸಾರೆ ಮೆದ್ದು ಬರುತ್ತಿದ್ದುದನ್ನು ನಮ್ಮ ಬಾಯಲ್ಲಿ ನೀರೂರುವಂತೆ ವರ್ಣಿಸುತ್ತಿದ್ದರು. ಹಾಗಾಗಿ ಐಗೂರು ಉಡುವೆಯ ಬಗ್ಗೆ ವಿಸ್ಮಯ ತುಂಬಿಕೊಂಡಿದ್ದ ನನಗೆ ಒಮ್ಮೆ ಅದನ್ನು ನೋಡಬೇಕೆಂಬ ಆಸೆ ಇತ್ತು.ಒಂದು ಮೈಲಿ ನಡೆಯುವಷ್ಟರಲ್ಲಿ ರಸ್ತೆಯ ಆಚೀಚೆ ಹಬ್ಬಿಕೊಂಡ ವಿಶಾಲ ಕಾಫಿತೋಟ ಎದುರಾಯಿತು. ಅಲ್ಲಲ್ಲಿ ಕಾಫಿ ಗಿಡಗಳ ನಡುವೆ ಎದ್ದುನಿಂತ ಕಿತ್ತಳೆ ಗಿಡಗಳ ರೆಂಬೆ ಕೊಂಬೆಗಳಲ್ಲಿ ಹಳದಿ ಬಣ್ಣದ ಹಣ್ಣುಗಳು ತೂಗಾಡುತ್ತಿದ್ದವು. ಹಲಸಿನ ಮರಗಳ ಅಡ್ಡ ಕೊಂಬೆಗಳಲ್ಲಿ ನೇತಾಡುತ್ತಿದ್ದ ಬಿಳುವನ ಹಣ್ಣು ಮನ ಸೆಳೆಯುತ್ತಿದ್ದವು. ನಾನು ನಡಿಗೆಯ ವೇಗ ಕಡಿಮೆ ಮಾಡಿ ತೋಟವನ್ನು ವೀಕ್ಷಿಸುತ್ತಿದ್ದುದನ್ನು ಕಂಡ ನಮ್ಮ ಅಪ್ಪ “ಇದೇ ಕನ ಮಗ ಐಗೂರುಡುವೆ” ಎಂದರು.

ಬಹುದಿನಗಳಿಂದ ನೋಡಲು ಬಯಸುತ್ತಿದ್ದ ಆ ತೋಟ ಕಣ್ಣ ಮುಂದೇ ಕಂಗೊಳಿಸುತ್ತಿತ್ತು. ಧನ್ಯನಾದೆ ಎಂದುಕೊಂಡೆ. ಆ ತೋಟದ ಒಳಗೆಯೇ ರಾಜಶೇಖರ್‌ ರವರ ಬಂಗಲೆ, ರಸ್ತೆ ಬದಿಯ ಗೇಟಿನಿಂದ ಒಂದರ್ಧ ಪರ್ಲಾಂಗ್‌ ನಡೆಯುವಷ್ಟರಲ್ಲಿ ಮನೆಯ ಬಳಿ ಕಟ್ಟೆ ಹಾಕಿದ್ದ ಆಲ್ಸೆಷನ್‌ ನಾಯಿಗಳು ಬೊಗುಳ ತೊಡಗಿದವು. ಬಂಗಲೆಯೊಳಗಿಂದ ಮಧ್ಯಮ ವಯಸ್ಸಿನ ಆಕರ್ಷಕ ವ್ಯಕ್ತಿತ್ವದ ಗಂಡಸೊಬ್ಬರು ಹೊರ ಬಂದರು. “ಅವರೇ ರಾಜುಗೌಡ್ರು ಹತ್ತಿರ ಹೋಗಿ ಕೈಮುಗಿ” ಎಂದರು ನಮ್ಮಪ್ಪ. ಅವರು ನಮ್ಮನ್ನು ಸ್ವಾಗತಿಸಿ ವೆರಾಂಡದ ಬೆತ್ತದ ಕುರ್ಚಿಗಳ ಮೇಲೆ ಕುಳ್ಳರಿಸಿ ಕಾಫಿ ತರಿಸಿಕೊಟ್ಟರು.

ದಿನವೂ ಹಾಲಿಲ್ಲದ ಬರಗಾಫಿ ಕುಡಿದು ರೂಢಿಯಾಗಿದ್ದ ನನಗೆ ಆ ಕಾಫಿ ಅಮೃತ ಸಮಾನವೆನಿಸಿತು. ಅಪ್ಪನ ಕುಶಲೋಪರಿ ವಿಚಾರಿಸಿದ ಅವರು ನನ್ನೆಡೆಗೆ ತಿರುಗಿ “ಏನಪ್ಪಾ ಕಾಲೇಜು ಓದ್ಬೇಕಾ” ಎನ್ನುತ್ತಾ ಟೀಪಾಯಿಯ ಮೇಲಿದ್ದ ಲೆಟರ್‌ ಹೆಡ್‌ ಹಾಳೆಯ ಮೇಲೆ ‘ ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಗಳ ಪಾದಾರವಿಂದಗಳಲ್ಲಿ….” ಎನ್ನುತ್ತಾ ಬಾಯಲ್ಲಿ ಹೇಳಿಕೊಳ್ಳುತ್ತ ಪತ್ರ ಬರೆಯ ತೊಡಗಿದರು… ಆಪತ್ರ ಕೈ ಸೇರಿದಾಗ ಅಪ್ಪನಿಗೆ ದೂರದೇಶಕ್ಕೆ ಹೋಗಲು ಸರ್ಕಾರದ ವೀಸಾ ಸಿಕ್ಕಷ್ಟೇ ಖುಷಿಯಾಗಿತ್ತು. ಅರಳಿದ ಮುಖದ ಮುಂದೆ ಅದನ್ನು ಹಿಡಿದು ಒಮ್ಮೆ ಹೆಮ್ಮೆಯಿಂದ ನೋಡಿದ ಅಪ್ಪ ಅದನ್ನು ಗೌರವ ಭಾವದಿಂದ ಮಡಚಿ ಜೇಬಿಗಿಳಿಸಿಕೊಂಡರು. ಆಗ ವಿಧಾನ ಸಭೆಯ ಚುನಾವಣೆಯ ಭರಾಟೆ ಜೋರಾಗಿತ್ತು. ನಮ್ಮ ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜಾತಿ ತನ್ನ ವಿರಾಟ ರೂಪದಲ್ಲಿ ಪ್ರಕಟಗೊಳ್ಳುವುದು ಆಗಲೇ!

 ಮತದಾರರು ತಮ್ಮ ಜಾತಿಯ ತುಂಡು ನಾಯಕರ ಪ್ರಚೋದನೆಗೊಳಗಾಗಿ ಜಾತಿಯ ಹೊಲಸು ಮೆತ್ತಿಕೊಂಡು ಕುಣಿಯ ತೊಡಗುತ್ತಾರೆ. ಇಲ್ಲಿಯೂ ಹಾಗೆಯೇ ಆಗಿತ್ತು. ನಮಗೆ ಪತ್ರ ಕೊಟ್ಟ ರಾಜಶೇಖರ್‌ ಲಿಂಗಾಯತರು. ಅವರು ಅವರ ಜಾತಿಯ ಅಭ್ಯರ್ಥಿ ಗುರಪ್ಪನವರನ್ನು ಬೆಂಬಲಿಸಿದ್ದರು. ನಮ್ಮ ಒಕ್ಕಲಿಗರ ಜಾತಿಯವರೆಲ್ಲಾ ಚಿಕ್ಕೇಗೌಡರನ್ನು ಬೆಂಬಲಿಸಿದ್ದರು. ನಾವು ಹೆತ್ತೂರು ಅಂಗಡಿ ಬೀದಿಗೆ ಇಳಿದಿದ್ದೇ ತಡ, ಒಂದು ಪುಡಾರಿಗಳ ಗುಂಪು ನಮ್ಮಪ್ಪನಿಗೆ ಎದುರಾಗಿ ದಬಾಯಿಸತೊಡಗಿತು.

“ಯಾಕಪ್ಪಾ ನೀನು ಒಕ್ಕಲಿಗರ ಹೊಟ್ಟೆಲಿ ಹುಟ್ಟಿಲ್ವಾ, ಆ ಲಿಂಗಾಯತನ ಮನೆ ಬಾಗಿಲಿಗೆ ಯಾಕೆ ಹೋಗಿದ್ದೆ”
ಎಂದು ಮೂದಲಿಸುತ್ತ ಅಪ್ಪನನ್ನು ತಳ್ಳಾಡ ತೊಡಗಿದರು. “ಬುಡ್ರಪ್ಪಾ ನಾನು ಬಡವ, ನಮ್ಮ ಹುಡುಗನನ್ನು ಮಠಕ್ಕೆ ಸೇರ್ಸಕೆ ಅಂತಾ ಅವ್ರ ಹತ್ರ ಹೋಗಿದ್ದೆ” ಎನ್ನುತ್ತಾ ಪತ್ರ ಇದ್ದ ಜೇಬನ್ನು ಒತ್ತಿ ಹಿಡಿದು ಅಂಗಲಾಚತೊಡಗಿದರು. “ಈಗ ಎಲೆಕ್ಷನ್ನು ಗೊತ್ತಿಲ್ವಾ? ಜಾತಿಯವರನ್ನು ಬಿಟ್ಟು ಹೆಂಗೆ ಹೋದೆ? ಅವರು ಗದರ ತೊಡಗಿದರು. “ಹಂಗಾದ್ರೆ ನನ್ನ ಹುಡುಗನ ಓದು ಹಾಳ್ಮಾಡಬೇಕಾಗಿತ್ತಾ” ಅಪ್ಪ ಸಮಜಾಯಿಸಿ ಕೊಡತೊಡಗಿದರು.

ನನಗೆ ಅಳು ಬಂದು ಬಿಟ್ಟಿತು.ಆ ತುಂಡು ಪುಡಾರಿಗಳ ಗುಂಪಿನ ನಾಯಕನಂತಿದ್ದವನು ಮುಂದೆ ಬಂದು “ನಮಗೆ ಹೇಳಿದ್ದರೆ ನಾವೆಲ್ಲಾ ಫಂಡ್‌ ಹಾಲಿ ಓದಿಸುತ್ತಿದ್ವಿ” ಎಂದು ವಾದ ಹೂಡಿದ. ಅಷ್ಟರಲ್ಲಿ ನಮ್ಮ ಅದೃಷ್ಟವೆಂಬಂತೆ ಹಿರಿಯರೊಬ್ಬರು ಅಡ್ಡ ಬಂದರು. ಇಲ್ಲಿ ತಂಕ ಎಷ್ಟು ಬಡವರ ಮಕ್ಳ ಫಂಡ್‌ ಹಾಕಿ ಓದ್ಸಿದೀರಾ? ಎನ್ನುತ್ತಾ ಅವರನ್ನು ಗದರಿಸಿ ಅರುಗಾಗಿಸಿದರು. “ನೀನ್‌ ಹೋಗಪ್ಪ, ಹುಡುಗ್ನ ಓದ್ಸಕೆ ನಿನಗೆ ಕಂಡ ದಾರಿ ಮಾಡು’ ಎಂದು ಅಲ್ಲಿಂದ ತೆರಳಲು ನಮಗೆ ದಾರಿ ಮಾಡಿಕೊಟ್ಟರು. ಮನೆ ತಲಪಿದಾಗ ಅವ್ವ ತನ್ನ ಮದುವೆಯ ಕಬ್ಬಿಣದ ಟ್ರಂಕಿನ ತುಕ್ಕನ್ನು ಉಜ್ಜಿ ಒರೆಸತೊಡಗಿದ್ದಳು.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

July 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: