ಹಾಡ್ಲಹಳ್ಳಿ ನಾಗರಾಜ್ ಅಂಕಣ – ಬೆನ್ನಿಗಂಟಿದ ಮುದ್ದೆ ಕೈ…

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ.

ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಪ್ರಸ್ತುತ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ದೇವರಬೆಟ್ಟ, ಗುದ್ದಿನಿಂದ ತೆಗೆದ ಹೆಣ, ನಕ್ರ ಹಾಗೂ ನಾನು, ಕುಂಭದ್ರೋಣ (ಕತಾಸಂಕಲನಗಳು), ಬಾಡಿಗೆಬಂಟರು, ಬಿಂಗಾರೆಕಲ್ಲು, ಬೆಂಕಿಯಸುಳಿ, ಗೃಹ ಪುರಾಣ, ಕಡವೆಬೇಟೆ, ನಿಲುವಂಗಿಯ ಕನಸು ಕಾದಂಬರಿಗಳು ಪ್ರಕಟವಾಗಿವೆ.

‘ಕಾಡುಹಕ್ಕಿಯ ಹಾದಿನೋಟ’ ಎಂಬ ಆತ್ಮಕಥನ ಸ್ವರೂಪದ ಪ್ರಬಂಧ ಸಂಕಲನವಾಗಿದೆ. ಸುಮಾರು ನಾಲ್ಕು ದಶಕಗಳಿಂದಲೂ ಮಿತ್ರರೊಡಗೂಡಿ ಹಾಸನದಲ್ಲಿ ಹೊಯ್ಸಳ ಕಲಾ ಸಂಘ ಎಂಬ ಸಾಂಸ್ಕ್ರತಿಕ ಸಂಘಟನೆ ನಡೆಸುತ್ತಿದ್ದು, ಸಾಹಿತ್ಯಿಕ ಚಟುವಟಿಕೆ, ನಾಟಕ ಹಾಗೂ ಜನಪದ ಗೀತ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯ ಪ್ರಕಾರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಕಿರಂ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಿದ್ದಗಂಗಾ ಮಠ ಅನ್ನ ದಾಸೋಹ, ಅಕ್ಷರ ದಾಸೋಹ ಮುಖೇನ ವಿದ್ಯಾದಾನಕ್ಕೆ ಕಾರಣವಾಗಿ ನಾಡಿನ ಲಕ್ಷಾಂತರ ಬಡ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದೆ.

ವಿದ್ಯೆಯಿಂದ ವಂಚಿತರಾಗಿ ಎಲ್ಲೋ ಮೂಲೆ ಗುಂಪಾಗಬೇಕಾಗಿದ್ದ ಬಡ ಗ್ರಾಮೀಣ ಮಕ್ಕಳು ಮಠದ ಮಡಿಲಿಗೆ ಬಿದ್ದ ಕಾರಣ ಸಮಾಜದ ಹಲವಾರು ರಂಗಗಳಲ್ಲಿ ತಮ್ಮ ಪ್ರತಿಭೆ ಮೆರೆಯಲು ಸಾಧ್ಯವಾಗಿದೆ. ಅಲ್ಲಿ ವಿದ್ಯೆ ಕಲಿತು ಹೋದವರು ಸಾಹಿತಿಗಳಾಗಿದ್ದಾರೆ, ಶಿಕ್ಷಣ ತಜ್ಙರಾಗಿದ್ದಾರೆ, ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ, ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳಾಗಿದ್ದಾರೆ, ನಾಟಕ, ಸಿನಿಮಾರಂಗಗಳಲ್ಲಿ ಮಿಂಚಿದ್ದಾರೆ.

ಹೀಗೆ ಮಠದ ಅನ್ನ ದಾಸೋಹ, ಅಕ್ಷರ ದಾಸೋಹಗಳು ಲಕ್ಷಾಂತರ ಬಡಮಕ್ಕಳ ಬದುಕಿನಲ್ಲಿ ‘ದಾಟು ಹಲಗೆ’ಯಾಗಿ ಪರಿಣಮಿಸಿದೆ. ಈ ಶ್ರೀ ಮಠದಲ್ಲಿ ವಿದ್ಯಾರ್ಜನೆ ಮಾಡಿ ಬದುಕು ರೂಪಿಸಿಕೊಂಡ ಹಾಡ್ಲಹಳ್ಳಿ ನಾಗರಾಜ್ ಕತೆಗಾರರಾಗಿಯೂ, ಕಾದಂಬರಿಕಾರರಾಗಿಯೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.

ಸಿದ್ದಗಂಗೆಯಲ್ಲಿನ ಅವರ ಅನುಭವ ಕಥನಗಳನ್ನು ಇಲ್ಲಿ ನಿರೂಪಿಸಿದ್ದಾರೆ.

2

ಬೆನ್ನಿಗಂಟಿದ ಮುದ್ದೆ ಕೈ

ನಾನು ಮೊದಲ ಬಾರಿಗೆ ಸಕಲೇಶಪುರ ದಾಟಿ ಹೊರಟಿದ್ದೆ. ಸೀಮೆಣ್ಣೆ ದೀಪದ ಬೆಳಕಿನಲ್ಲಿ ಬೆಳೆದ ನನಗೆ ಹಾಸನ ನಗರದ ಬೀದಿಯ ಫ್ಲೋರಸೆಂಟ್‌ ದೀಪಗಳು ವಿಸ್ಮಯ ಹುಟ್ಟಿಸುತ್ತಿದ್ದವು. ರೈಲನ್ನು ಅಲ್ಲಿಯವರೆಗೆ ಕಣ್ಣಾರೆ ಕಂಡಿರದ ನಾನು ಆ ದಿನ ಅದರಲ್ಲಿ ಕುಳಿತು ಪಯಣಿಸುವ ಅನುಭವ ಹೊಂದುವ ತವಕದಲ್ಲಿದ್ದೆ. ಅಪ್ಪ ಬ್ಯಾಗ್‌ ಹಿಡಿದು ರೈಲು ನಿಲ್ದಾಣದ ಕಡೆಗೆ ಅವಸರದ ಹೆಜ್ಜೆ ಹಾಕುತ್ತಿದ್ದರು. ತಲೆಯ ಮೇಲೆ ಟ್ರಂಕ್ ಹೊತ್ತು ನಾನು ಅವರನ್ನು ಅನುಸರಿಸುತ್ತಿದ್ದೆ.

ದೂರದಲ್ಲಿ ರೈಲಿನ ಸಿಳ್ಳೆ ಕೇಳಿತು. ನಾನು ಉದ್ವೇಗ ಭರಿತನಾಗಿ ಆ ದಿಕ್ಕಿಗೆ ನೋಡಿದೆ. ಮುಂದಿನ ದೀಪದಿಂದ ಕತ್ತಲನ್ನು ಸೀಳುತ್ತಾ ಚಕು ಬುಕು ಸದ್ದಿನೊಂದಿಗೆ ರೈಲು ನಾವು ನಿಂತಿದ್ದ ನಿಲ್ದಾಣದ ಕಡೆಗೆ ದೌಡಾಯಿಸಿ ಬರುತ್ತಿತ್ತು. ಧಡ್ ಧಡ್ ಎಂದು ಸದ್ದು ಮಾಡುತ್ತಾ ಇಂಜಿನ್‌ ನಮ್ಮ ಮುಂದೆಯೇ ಹಾದು ಹೋಯಿತು. ಅದರ ಹಿಂದೆ ಲಗತ್ತಿಸಿದ್ದ ಹಲವಾರು ಪ್ರಯಾಣಿಕರ ಭೋಗಿಗಳು ನಿಧಾನವಾಗಿ ನಿಲ್ದಾಣದ ಉದ್ದಕ್ಕೆ ನಮ್ಮೆದುರು ನಿಂತುಕೊಂಡವು. ಬೋಗಿ ಒಳಗೆ ಹಾಗೂ ಪ್ಲಾಟ್ ಫಾರ್ಮ್ ಮೇಲೆ ಗಡಿಬಿಡಿ ಶುರುವಾಯಿತು.

ಕೆಲವೇ ಕ್ಷಣ ಅಷ್ಟೇ. ಇಳಿಯುವವರು ಇಳಿದರು. ಹತ್ತುವವರು ಹತ್ತಿಕೊಂಡರು. ಅವರೊಂದಿಗೆ ನಾವೂ ರೈಲಿನ ಗರ್ಭದೊಳಗೆ ನುಸುಳಿಕೊಂಡೆವು. ರೈಲಿನ ಎಂಜಿನ್ ಶಿಳ್ಳೆ ಹಾಕಿಕೊಂಡು ಎಲ್ಲ ಡಬ್ಬಿಗಳನ್ನು ಎಳೆಯುತ್ತಾ ತನ್ನದೇ ಸಂಗೀತದ ಲಹರಿಯಲ್ಲಿ ಅರಸೀಕೆರೆಯ ದಿಕ್ಕಿಗೆ ಚಲಿಸತೊಡಗಿತು.

ಅರಸೀಕೆರೆಯ ಜಂಕ್ಷನ್‌ನಲ್ಲಿ ಭಾರೀ ಜನಜಂಗುಳಿ. ಕಾಫಿ, ತಿಂಡಿ, ಹಣ್ಣು, ಹಂಪಲು ಮಾರುವವರ ಚಿತ್ರ ವಿಚಿತ್ರ ಸದ್ದು. ಹಲವಾರು ರೈಲು ಹಳಿಗಳು .ಅವುಗಳ ಮೇಲೆ ಅಲ್ಲಲ್ಲಿ ನಿಂತ ಇಂಜಿನಿಲ್ಲದ ಪ್ರಯಾಣಿಕರ ಬೋಗಿಗಳು. ಉಸ್ಸೆನ್ನುತ್ತ ತಮ್ಮ ತಮ್ಮ ಡಬ್ಬಿಗಳನ್ನು ಹುಡುಕುತ್ತಾ ಹಿಂದೆ ಮುಂದೆ ತಿರುಗುವ ಇಂಜನ್‌ಗಳು.

ಆ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದೆ. ನಾವು ಬಂದ ರೈಲಿನ ಇಂಜಿನ್‌ ನಾವು ಕುಳಿತಿದ್ದ ಬೋಗಿಯೂ ಸೇರಿದಂತೆ ಕೆಲ ಬೋಗಿಗಳನ್ನು ಅಲ್ಲಿಯೇ ಕಳಚಿ ಹಾಕಿ ಮುಂದೆ ಹೊರಟು ಹೋಯಿತು. ಮತ್ತೊಂದು ಇಂಜಿನ್‌ ಹಿಮ್ಮುಖವಾಗಿ ಚಲಿಸುತ್ತಾ ಬಂದು ಆ ಡಬ್ಬಿಗಳನ್ನು ತಗಲು ಹಾಕಿಕೊಂಡಿತು.ಹಾಗೆಯೇ ಬೇರೆ ಹಳಿಗಳ ಮೇಲಿದ್ದ ಕೆಲವು ಬೋಗಿಗಳನ್ನು ತಗಲು ಹಾಕಿಕೊಂಡು ನಾವು ಕಂಡರಿಯದ ತುಮಕೂರು ದಿಕ್ಕಿಗೆ ಧಾವಿಸತೊಡಗಿತು.
ಆ ಬಯಲು ಪ್ರದೇಶದ ಕತ್ತಲಲ್ಲಿ ದುತ್ತನೆ ಎದುರಾದ ಮರಗಿಡಗಳನ್ನು ಹಳ್ಳಿ ಪಟ್ಟಣಗಳನ್ನು ಹಿಂದೆ ಹಾಕತ್ತಾ ಉಲ್ಲಾಸದಿಂದ ಸಿಳ್ಳೆ ಹಾಕುತ್ತಾ ರೈಲು ಸಾಗಿದಂತೆ ನಾನು ಕತ್ತಲಲ್ಲೂ ಕಣ್ಣರಳಿಸಿ ಕುಳಿತು ಹೊಸ ಪ್ರಪಂಚವೊಂದಕ್ಕೆ ತೆರೆದುಕೊಳ್ಳ ತೊಡಗಿದೆ.

ಕೇವಲ ಎರಡೇ ನಿಮಿಷ ಕ್ಯಾತ್ಸಂದ್ರ ನಿಲ್ದಾಣದಲ್ಲಿ ರೈಲು ನಿಂತದ್ದು. ಆ ರೈಲು ನಮ್ಮನ್ನು ಅಲ್ಲಿಯೇ ಉದುರಿಸಿ ಸಿಳ್ಳೆ ಹಾಕುತ್ತಾ ಮುಂದಕ್ಕೆ ಹೊರಟು ಹೋಯಿತು.

ಎದುರಿಗೆ ಕೇವಲ ಫರ್ಲಾಂಗ್‌ ದೂರದಲ್ಲಿ ಗಂಭೀರವಾಗಿ ನಿಂತ ಬಂಡೆಯ ಬೆಟ್ಟ. ಅದರ ಮೇಲೆ ದೂರ ದೂರಕ್ಕೆ ಕಾಣುವಂತೆ ಬರೆದ ‘ಕಾಯಕವೇ ಕೈಲಾಸ’ ನುಡಿಗಟ್ಟು! ನಾವು ಸ್ವಲ್ಪ ಹೊತ್ತಿನಲ್ಲೇ ಮಠದ ಆವರಣದೊಳಗಿದ್ದೆವು.
ಆವರಣದ ಆಚಿಚೆ ಬದಿಯಲ್ಲಿ ಮಕ್ಕಳ ವಾಸದ ಕಟ್ಟಡಗಳು ಎದುರಿಗೆ ಬೆಟ್ಟಕ್ಕೆ ತಾಗಿದಂತೆ ನಿಂತ ಸಂಸ್ಕೃತ ವಿದ್ಯಾಲಯದ ಭವ್ಯ ಕಟ್ಟಡ.

ಆಗಿನ್ನು ಬೆಳಗಿನ ಆರು ಗಂಟೆ, ಬೆಳಗಿನ ನಿತ್ಯ ಕರ್ಮ ಸ್ನಾನಾದಿಗಳನ್ನು ಪೂರೈಸಿಕೊಳ್ಳಲು ಲಗುಬಗೆಯಿಂದ ಓಡಾಡುತ್ತಿದ್ದರು ವಿವಿಧ ವಯಸ್ಸಿನ ವಿದ್ಯಾರ್ಥಿಗಳು.

ಟ್ರಂಕ್‌ ಹಿಡಿದು ನಿಂತಿದ್ದ ನಮ್ಮ ಬಳಿಗೆ ಬಂದ ಹುಡುಗನೊಬ್ಬ ನೀವು ಹೊಸದಾಗಿ ಸೇರದಿಕ್ಕೆ ಬಂದದೀರಾ? ಎಂದ.
ನಂತರ ಒಂದು ಕಟ್ಟಡದ ಕಡೆ ಬೆರಳು ಮಾಡಿ ‘ಅದು ಸ್ವಾಮೀಜಿಯ ಕಚೇರಿ. ಹತ್ತು ಗಂಟೆಗೆ ಬನ್ನಿ ಅಲ್ಲಿ ದರ್ಶನ ಸಿಕ್ಕುತ್ತದೆ…. ಟ್ರಂಕ್‌ ಬೇಕಾದರೆ ನಮ್ಮ ರೂಮಿನಲ್ಲಿಟ್ಟು ಕ್ಯಾತ್ಸಂದ್ರ ಕಡೆ ತಿರುಗಾಡಿಕೊಂಡು ಬನ್ನಿ ಎಂದ.
ನಾವು ಕ್ಯಾತ್ಸಂದ್ರದ ಹೋಟೆಲಿನಲ್ಲಿ ಇಡ್ಲಿ ತಿಂದು ಬಿ.ಹೆಚ್‌.ರಸ್ತೆಗುಂಟ ಸ್ವಲ್ಪ ತಿರುಗಾಡಿ ಬರುವಷ್ಟರಲ್ಲಿ ಇಡೀ ಮಠವೇ ಚಟುವಟಿಕೆಯ ಬೀಡಾಗಿತ್ತು. ಹಣೆಗೆ ವಿಭೂತಿ ಬಳಿದುಕೊಂಡು. ಸೊಂಟಕೊಂದು ಖಾವಿ ಪಂಚೆ, ಮೈಮೇಲೆ ಖಾವಿ ವಸ್ತ್ರ ಹೊದ್ದ ವಿದ್ಯಾರ್ಥಿಗಳು ತಮ್ಮ ಕಟ್ಟಡಗಳಿಂದ ಪುತಪುತನೆ ಹೊರಬಂದು ಭೋಜನ ಶಾಲೆಯ ಕಡೆಗೆ ಧಾವಿಸುತ್ತಿದ್ದರು.

ಹಳೆಯ ಮಠದ ಕಟ್ಟಡದಿಂದ ಹೊರಬಂದ, ಕೊರಳಲ್ಲಿ ರುದ್ರಾಕ್ಷಿ ಇಲ್ಲವೆ ಲಿಂಗ ಧರಿಸಿದ ವಿದ್ಯಾರ್ಥಿಗಳು ತಟ್ಟೆಗಳನ್ನು ಸೊಂಟದ ಬಳಿ ಅವುಚಿ ಹಿಡಿದು ಇನ್ನೊಂದು ದಿಕ್ಕಿನಲ್ಲಿ ಸಾಗುತ್ತಿದ್ದರು.
ಆಗಲೇ ಭಕ್ತಾದಿಗಳ ಹಾಗೂ ಹೊಸ ವಿದ್ಯಾರ್ಥಿಗಳ ಭೇಟಿಗೆ ಸ್ವಾಮೀಜಿ ಕಚೇರಿಯ ಮುಂದೆ ಸಣ್ಣ ಕ್ಯೂ ಶುರುವಾಗಿತ್ತು. ನಾವೂ ಸರತಿಯ ಸಾಲಿನಲ್ಲಿ ನಿಂತುಕೊಂಡೆವು.

ನಮ್ಮ ಅವಕಾಶ ಬರುತ್ತಲೇ ಕೊಠಡಿಯೊಳಗೆ ಕಾಲಿರಿಸಿದೆವು. ಅಲ್ಲೆಲ್ಲಾ ಒಂದು ಬಗೆಯ ಭಕ್ತಿಯ ಸುಗಂಧ ಹರಡಿದ್ದಂತೆನಿಸಿತು. ಸುಮಾರು ಅರವತ್ತರ ಹರೆಯದ ಶಿವಕುಮಾರ ಸ್ವಾಮಿಗಳು ವಿರಾಜಮಾನರಾಗಿದ್ದರು. ಅವರು ನನ್ನಡೆಗೆ ದಿಟ್ಟಿಸಿದರು. ಕಳಾ ಪೂರ್ಣವಾದ ಅವರ ಮುಖದಿಂದ ಪ್ರಭೆಯೊಂದು ಹೊರಹೊಮ್ಮಿ ನನ್ನೆದೆಯಲ್ಲಿ ಲೀನವಾದಂತೆ ಭಾಸವಾಯಿತು ಎಲ್ಲರೂ ಮಾಡುತ್ತಿದ್ದಂತೆ ನಾನೂ ಸ್ವಾಮೀಜಿಯ ಪಾದಕ್ಕೆ ಎರಗಿದೆ. ಎದ್ದು ನಿಂತಾಗ ಸ್ವಾಮೀಜಿ ನನ್ನ ತಲೆಯನ್ನು ನೇವರಿಸಿ ಬೆನ್ನು ತಟ್ಟಿದರು. ಆ ದಿವ್ಯ ಸ್ಪರ್ಶ ನನ್ನ ಬದುಕಿನಲ್ಲಿ ಮರೆಯಲಾಗದಂತದ್ದು.

ನಮ್ಮಪ್ಪನ ಕೈಲಿದ್ದ ಪತ್ರ ಪಡೆದು ಕಣ್ಣಾಡಿಸಿದರು. ನನ್ನಡೆಗೆ ತಿರುಗಿ ‘ಚೆನ್ನಾಗಿ ಓದಬೇಕು’ ಎಂದು ಹೇಳುತ್ತಾ ಕಾಗದದ ಮೇಲೆ ‘ಸೇರಿಸಿಕೊಳ್ಳಿ’ ಎಂದು ಬರೆದು ಅಪ್ಪನ ಕೈಗೆ ವಾಪಾಸು ಕೊಟ್ಟರು.
ಶಾಲೆಗೆ ಸೇರ್ಪಡೆಯೇನೂ ತಡವಾಗಲಿಲ್ಲ. ಅಗತ್ಯ ಸಣ್ಣ ಪುಟ್ಟ ವಸ್ತುಗಳನ್ನು ಅಲ್ಲಿಯೇ ಮಳಿಗೆಯಲ್ಲಿ ಅಪ್ಪ ತೆಗೆದುಕೊಟ್ಟರು. ಪ್ರಾರ್ಥನೆ ಹಾಗೂ ಭೋಜನದ ವೇಳೆ ಧರಿಸಲು ಬೇಕಾದ ಖಾವಿ ಪಂಚೆ ಹಾಗೂ ವಸ್ತ್ರವನ್ನು ತೆಗೆದು ಕೊಡಲು ಮರೆಯಲಿಲ್ಲ.

ಕೆಲಸವನ್ನೆಲ್ಲಾ ಮುಗಿಸಿದ ನನ್ನ ಅಪ್ಪ ಊರಿಗೆ ಹಿಂತಿರುಗಲು ಕ್ಷಣಗಣನೆ ಶುರುವಾಗಿತ್ತು. ಅದುವರೆಗೂ ಮನೆಯವರನ್ನು ಬಿಟ್ಟು ಕದಲದೇ ಇದ್ದ ನನಗೆ ಒಂದು ಬಗೆಯ ಆತಂಕ ಶುರುವಾಗಿತ್ತು. “ಹೋಮ್‌ ಸಿಕ್‌ನೆಸ್‌” ಎಂಬುದು ಆವರಿಸತೊಡಗಿತ್ತು.

ನನ್ನ ಸಪ್ಪೆ ಮೋರೆ ಗಮನಿಸಿದ ಅಪ್ಪ ‘ಏನೂ ಹೆದರಬೇಡ ಮಗಾ ಇಲ್ಲಿ ನಿನ್ನಂತ ಸಾವಿರಾರು ಹುಡುಗರು ಮನೆ ಮಠ ಬಿಟ್ಟು ಬಂದು ವಿದ್ಯೆ ಕಲಿತಾ ಇದಾರೆ…. ಬಾ ಇಲ್ಲಿ ನಮ್ಮ ಕಡೆಯ ಒಬ್ಬ ಹಳೇ ವಿದ್ಯಾರ್ಥಿನ ಪರಿಚಯ ಮಾಡಿಸಿಕೊಡ್ತೀನಿ’ ಎನ್ನುತ್ತಾ ಹೈಸ್ಕೂಲ್‌ ಕಡೆ ನಡೆಯ ತೊಡಗಿದರು.

ಹತ್ತನೆಯ ತರಗತಿಯ ಮುಂದೆ ನಿಂತ ಅವರು ಜೇಬಿನಿಂದ ಒಂದು ಸಣ್ಣ ಚೀಟಿ ತೆಗೆದು ಒಮ್ಮೆ ಓದಿಕೊಂಡು ‘ಸಿಎ ಜನಾರ್ಧನ ಬೇಕು’ ಎಂದರು.

ಲವಲವಿಕೆಯಿಂದ ಕೂಡಿದ ಸುಂದರ ಹುಡುಗ ನಮ್ಮೆದುರಿಗೆ ಬಂದು ನಿಂತ.

ನಮ್ಮ ಅಪ್ಪ ಪರಿಚಯ ಹೇಳಿಕೊಂಡರು. ಇವನು ನನ್ನ ಮಗ ಹೊಸದಾಗಿ ಹನ್ನೊಂದನೇ ಕ್ಲಾಸಿಗೆ ಸೇರಿದಾನೆ. ಇದೇ ಮೊದಲು ಮನೆ ಬಿಟ್ಟು ಬಂದಿರುವುದು ಯಾಕೋ ಬೇಜಾರಲ್ಲಿದಾನೆ. ನೀನು ನಿಮ್ಮ ಸ್ನೇಹಿತರು ಎಲ್ಲಾ ಸೇರಿ ಇವನಿಗೆ ಧೈರ್ಯ ತುಂಬಿ ಚೆನ್ನಾಗಿ ನೋಡ್ಕೋಬೇಕು ಎಂದು ಕೇಳಿಕೊಂಡರು.

‘ಇವನು ನೋಡು, ಚಿಕ್ಕಂದೂರು ಅಪ್ಪ ಸ್ವಾಮಿಗೌಡರ ಮಗ. ಇಲ್ಲಿಗೆ ಹೊಂದಿಕೊಳ್ಳುವರೆಗೂ ಇವರ ಸಹವಾಸದಲ್ಲೇ ಇರು’ ಅಪ್ಪ ಧೈರ್ಯ ತುಂಬಿದರು.

ಸಿ.ಎ. ಜನಾರ್ಧನ (ನಂತರ ಬದಲಾದ ಹೆಸರು ಸಿ.ಎ.ಆನಂದ ಕುಮಾರ್‌) ನನಗಿಂತ ವಯಸ್ಸಿನಲ್ಲಿ ಚಿಕ್ಕವನಾದರೂ ಒಂದು ವರ್ಷದ ಅನುಭವದಲ್ಲಿ ಮಠದಲ್ಲಿ ಪಳಗಿದ್ದ.

‘ಮೊದಲಿಗೆ ಹಂಗೇ, ನೀವೇನೂ ಹೆದರಬೇಡ ಧೈರ್ಯವಾಗಿ ಊರಿಗೆ ಹೋಗಿ, ನಾವೆಲ್ಲಾ ನೋಡಿ ಕೊಳ್ತೀವಿ’ ಎಂದು ಧೈರ್ಯ ತುಂಬಿದ.

ಅಪ್ಪ ಕ್ಯಾತ್ಸಂದ್ರದ ಕಡೆ ಮುಖ ಮಾಡಿದರು. ನಾನು ನನಗೆ ತೋರಿಸಿದೆ ರೂಮಿನ ಮೂಲೆಯಲ್ಲಿ ಚಾಪೆ ಹಾಸಿ ಟ್ರಂಕ್‌ ಇಟ್ಟುಕೊಂಡೆ.’ ಅಷ್ಟೇ ಜಾಗ ನನ್ನದು ‘ಎಂದು ನನ್ನ ಅರಿವಿಗೆ ಬಂದಿತು.

ಹೊಸದಾಗಿ ಜೈಲಿಗೆ ಬಂದ ಖೈದಿಯನ್ನು ‘ನೀನು ಎಲ್ಲಿಂದ ಬಂದೆ, ಏನು ತಪ್ಪು ಮಾಡಿ ಬಂದೆ’ ಎಂದು ವಿಚಾರಿಸಿಕೊಳ್ಳಲು ಆತುರದಿಂದ ಬರುವ ಹಳೆಯ ಖೈದಿಗಳಂತೆ ಆ ರೂಮಿನಲ್ಲಿದ್ದ ಹಳೆಯ ವಿದ್ಯಾರ್ಥಿಗಳು ತಮ್ಮ ಪ್ರಶ್ನೆಗಳೊಂದಿಗೆ ನನ್ನ ಮೇಲೆ ಮುಗಿಬಿದ್ದರು.

ಆಗ ಪರಿಚಯವಾದವನು ನಮ್ಮದೇ ಜಿಲ್ಲೆಯವನಾದ ಸಬ್ಬನಹಳ್ಳಿ ಬೋರೇಗೌಡ.

ಸಂಜೆಯಾಗುತ್ತಲೇ ಸಿ.ಎ.ಜನಾರ್ಧನ ನಮ್ಮ ರೂಮಿಗೆ ಬಂದ. ಬೋರೇಗೌಡ ಹಾಗೂ ಅವನ ನೇತೃತ್ವದಲ್ಲಿ ನನ್ನ ಮಠದ ಬದುಕಿಗೆ ತರಬೇತಿ ಶುರುವಾಯಿತು.

ಸಾಮೂಹಿಕ ನಲ್ಲಿಯ ಆವರಣಕ್ಕೆ ಸರತಿಯಲ್ಲಿ ನುಗ್ಗಿ ಮುಖ ತೊಳೆದುಕೊಂಡೆ. ರೂಮಿಗೆ ಬಂದು ಹಣೆಗೆ ವಿಭೂತಿ ಹಚ್ಚಿಕೊಂಡೆ. ಖಾವಿ ಪಂಚೆ ಧರಿಸಿ ವಸ್ತ್ರ ಹೊದ್ದುಕೊಂಡೆ. ಕೈಯಲ್ಲಿ ಊಟದ ತಟ್ಟೆ ಹಿಡಿದು ಪ್ರಾರ್ಥನೆಯ ಆವರಣಕ್ಕೆ ಅವರನ್ನು ಹಿಂಬಾಲಿಸಿದೆ.

ಐದಾರು ಸಾವಿರ ವಿದ್ಯಾರ್ಥಿಗಳು ಕಿಕ್ಕಿರಿದಿದ್ದ ಆವರಣದಲ್ಲಿ ಸ್ಥಳ ಮಾಡಿ ನಾವೂ ಕುಳಿತುಕೊಂಡೆವು.
ಸ್ವಾಮೀಜಿ ಬಂದು ತಮ್ಮ ಸ್ಥಾನದಲ್ಲಿ ಆಸೀನರಾಗುವ ವೇಳೆಗೆ ಅದುವರೆಗಿದ್ದ ಗುಸುಪಿಸು ನಿಂತು ಹೋಯಿತು. ಸೂಜಿ ಬಿದ್ದರೂ ಕೇಳುವಂತಹ ನಿಶ್ಶಬ್ಧ ಅಲ್ಲಿ ನೆಲಿಸಿತು.

ಸ್ವಾಮೀಜಿ ಪ್ರಾರ್ಥನೆ ಭೋದಿಸಿದರು. ಎದುರು ಕುಳಿತ ವಿದ್ಯಾರ್ಥಿಗಳು ಅವರನ್ನನುಸರಿಸಿ ಭಕ್ತಿಯಿಂದ ಪ್ರಾರ್ಥನೆ ಹಾಡಿದರು.

ಅಲ್ಲಿಂದ ಸೀದಾ ಹೊರಟಿದ್ದು ಭೋಜನ ಶಾಲೆಗೆ. ಲಿಂಗ, ರುದ್ರಾಕ್ಷಿ ಧರಿಸಿದ ವಿದ್ಯಾರ್ಥಿಗಳು ವಿಂಗಡಿಸಿದಂತೆ ಬೇರೆ ದಿಕ್ಕಿಗೆ ಹೋಗ ತೊಡಗಿದರು. ನನಗೆ ಅಚ್ಚರಿಯಾಯಿತು. ಸ್ನೇಹಿತರನ್ನು ಕೇಳಿದೆ.

ಅವರು ‘ಇನ್‌ ಕ್ಯಾಸ್ಟ್‌’ ಅವರ ಭೋಜನ ಶಾಲೆ ಆ ಕಡೆಗಿದೆ. ‘ಔಟ್‌ ಕ್ಯಾಸ್ಟ್‌’ನವರಿಗೆ ಊಟದ ಹಾಲ್‌ ಈ ಕಡೆಗಿದೆ ಬಾ ಎಂದು ಎಳೆದುಕೊಂಡು ಹೊದರು.

ಇದ್ಯಾವುದು ಈ ಒಳಜಾತಿ, ಹೊರಜಾತಿ? ಹೊಲೆಯರು, ಬ್ರಾಹ್ಮಣರು, ಗೌಡರು, ಲಿಂಗಾಯತರು ಈ ಜಾತಿಗಳ ಬಗ್ಗೆ ಮಾತ್ರ ಕೇಳಿ ತಿಳಿದಿದ್ದ ನನಗೆ ಅಚ್ಚರಿ ಮೂಡಿತು.

ಅದೊಂದು ಸಾವಿರಾರು ಜನ ಒಮ್ಮೆಗೇ ಕುಳಿತುಕೊಳ್ಳುವಂತಹ ವಿಶಾಲವಾದ ಹಾಲ್‌. ಆ ಹಾಲ್‌ಗೆ ಸಮಾನಾಂತರದಲ್ಲಿ ತುಸು ಎತ್ತರದಲ್ಲಿ ಗೋಡೆ. ಅದರೊಳಗೆ ಪ್ರವೇಶಿಸಲು ಒಂದೆರಡು ಕಡೆ ಮೆಟ್ಟಿಲುಗಳು.
‘ಅದರೊಳಗೆ ಇಷ್ಟೇ ವಿಶಾಲವಾದ ಡೈನಿಂಗ್‌ ಹಾಲ್‌ ಇದೆ ಇನ್‌ ಕ್ಯಾಸ್ಟ್‌ನವರಿಗೆ: ಅದರಾಚೆಗೆ ವಿಶಾಲವಾದ ಅಡುಗೆ ಮನೆಯಿದೆ’ ಎಂದು ನನ್ನ ಹೊಸ ಗೆಳೆಯರು ಪರಿಚಯಿಸಿದರು.

ಆ ಹಾಲ್‌ನಲ್ಲಿ ತುಂಬಿ ಹೋಗಿದ್ದ ಸಾವಿರಾರು ವಿದ್ಯಾರ್ಥಿಗಳ ಗುಜು ಗುಜು ಸದ್ದು, ಊರಲ್ಲಿ ದಿನವೂ ಒಲೆಯ ಬುಡದಲ್ಲಿ ದೀಪದ ಬೆಳಕಲ್ಲಿ ಕುಳಿತು ಮೌನವಾಗಿ ಊಟ ಮಾಡುತ್ತಿದ್ದ ನನಗೆ ಯಾವುದೋ ಸಮುದ್ರದ ನಡುವೆ ಕುಳಿತಿದ್ದಂತೆನಿಸಿತು.

‘ಬಿ.ಕೆ.ಎಲ್‌. ಬಂದರು’ ಎಂದು ಪಕ್ಕದವರು ಪಿಸುಗುಟ್ಟಿದರು. ಕ್ಷಣ ಮಾತ್ರದಲ್ಲಿ ಹಾಲ್‌ ನಿಶ್ಶಬ್ಧವಾಯಿತು.
ಎಡಗೈಯಲ್ಲಿ ಪಂಚೆಯ ಅಂಚನ್ನು ಎತ್ತಿ ಹಿಡಿದು ಬಲಗೈಯ ಬೆತ್ತವನ್ನು ನೆಲಕ್ಕೆ ಕುಟ್ಟುತ್ತಾ ‘ಯಾವನೋ ಅವನು?’ ಎಂದು ಸಂಪ್ರದಾಯದಂತೆ ಆವಾಜ್‌ ಹಾಕುತ್ತಾ ಹಾಲ್‌ ಮಧ್ಯೆ ನಿಂತುಕೊಂಡರು.

ಎಡಗೈ ಅಂಗೈ ಮೇಲೆ ಮುದ್ದೆ ತುಂಬಿದ ಬಾಂಡಲಿಗಳನ್ನು ಎತ್ತಿ ಹಿಡಿದ ಬಲಿಷ್ಠ ಯುವಕರು ಕೊರಳಲ್ಲಿ ಲಿಂಗ ನೇತಾಡಿಸುತ್ತಾ ಒಳಗಿನ ಹಾಲ್‌ ಕಡೆಯಿಂದ ಸಿಪಾಯಿಗಳ ಶಿಸ್ತಿನಲ್ಲಿ ಒಬ್ಬೊಬ್ಬರೇ ಮೆಟ್ಟಿಲಿಳಿದು ಬಂದು ತಮತಮಗೆ ನಿಗಧಿಯಾಗಿದ್ದ ಸಾಲುಗಳ ಕಡೆ ಹೋಗಿ ನಿಂತುಕೊಂಡರು. ಒಮ್ಮೆಗೇ ಎಲ್ಲರೂ ಬಾಗಿ ವಿದ್ಯಾರ್ಥಿಗಳ ತಟ್ಟೆಗೆ ಎರಡೆರಡು ಮುದ್ದೆ ಬಡಿಸತೊಡಗಿದರು.

ಮಲೆನಾಡಿನ ಮೂಲೆಯಿಂದ ಬಂದ ನಾನು ಮುದ್ದೆಯನ್ನು ತಿನ್ನುವುದಿರಲಿ, ಕಣ್ಣಲ್ಲಿಯೂ ಕಂಡರಿಯದವನಾಗಿದ್ದೆ. ಕಪ್ಪಗೆ ಕಲ್ಲು ಗುಂಡಿನಂತೆ ಕಾಣುತ್ತಿದ್ದ ಅವು ನನ್ನಲ್ಲಿ ಭಯ ಹುಟ್ಟಿಸಿದವು. ಅಷ್ಟರಲ್ಲಿ ನನ್ನ ಬಳಿ ಬಂದ ಆತ ನನ್ನ ತಟ್ಟೆಗೂ ಎರಡು ಗುಂಡುಗಳನ್ನು ಇಟ್ಟು ಬಿಟ್ಟ! ತಕ್ಷಣ ಏನು ಮಾಡಬೇಕೆಂದು ತೋಚಲಿಲ್ಲ. ‘ಬೇಡ ಬೇಡ’ ಎನ್ನುತ್ತಾ ಒಂದು ಗುಂಡನ್ನು ತೆಗೆದು ಪಕ್ಕದವನಿಗೆ ಬಡಿಸುತ್ತಿದ್ದವನ ಬಾಂಡಲಿಗೆ ವಾಪಸ್‌ ಹಾಕಿದೆ. ಅವನಿಗೆ ಸಿಟ್ಟು ಬಂದಂತೆ ತೋರಿತು. ಬಡಿಸುವುದು ಬಿಟ್ಟು ಬಿರಬಿರನೆ ಹೋಗಿ ಮೆಟ್ಟಲಿನ ಮೇಲೆ ಬಾಂಡಲಿ ಇಟ್ಟು ನನ್ನ ಬಳಿ ಬಂದ.

ನನ್ನ ತಲೆಯನ್ನು ತನ್ನಡೆಗೆ ಬಗ್ಗಿಸಿಕೊಂಡು ಬೆತ್ತಲೆ ಬೆನ್ನಿಗೆ ರಪ್ಪನೆ ಭಾರಿಸಿದ. ಅಂಟಿದ ಮುದ್ದೆ ಕೈಯನ್ನು ಬೆನ್ನಿನಿಂದ ತೆಗೆದು ಬಾಂಡಲಿ ತೆಗೆದುಕೊಂಡು ರಭಸದಲ್ಲಿ ಅಡಿಗೆ ಮನೆಯ ಕಡೆ ಧಾವಸಿದ. ನನಗೆ ಏನಾಗುತ್ತಿದೆ ಎಂಬುದು ತಿಳಿಯದಾಯಿತು. ದುಃಖದಿಂದ ಕಣ್ಣಲ್ಲಿ ನೀರು ಬಳಬಳನೆ ಸುರಿಯ ತೊಡಗಿತು.
ಸಾವಿರಾರು ಜನರ ಮಧ್ಯೆ ನನ್ನ ಮನಸ್ಸು ಘಾಸಿಗೊಳಗಾಗಿತ್ತು.

‘ನಾವು ಔಟ್‌ ಕ್ಯಾಸ್ಟು, ನಮ್ಮ ತಟ್ಟೆಯಿಂದ ಬಾಂಡಲಿಗೆ ಹಾಕಬಾರದು. ನಮ್ಮ ಎಂಜಲನ್ನು ಹಾಕಿದಂತೆ ಆಗುತ್ತದೆ’.
ನನ್ನ ಸುತ್ತಲಿನ ಹುಡುಗರು ನನ್ನನ್ನು ಸಂತೈಸತೊಡಗಿದರು.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

July 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: