ಹಲವು ಬಣ್ಣದ ‘ಗ್ರಾಫಿಟಿಯ ಹೂವು’

ಕವಿಚಂದ್ರ

ಕಾವ್ಯವೆಂಬ ವೈನು ಕುಡಿದಷ್ಟು ಅಮಲೇರುವ, ತಿಂದಷ್ಟೂ ಹಸಿಯುವ ವಿಚಿತ್ರ ವಿಲಕ್ಷಣದ ರೋಗ ಕವಿ ಮನಸ್ಸಿಗಲ್ಲದೆ ಮತ್ತಾರಿಗೂ ಇರಲಾರದು. ಬೆಚ್ಚನೆಯ ಬೆಂಕಿಯ ಕಾವಿನಲ್ಲಿ ನವಿರೇಳುವ ಭಾವನೆಗಳನ್ನು ಅಕ್ಷರಗಳಲ್ಲಿ ಬಂಧಿಸುವ ಜೈಲರ್ ನಂತಹ ಕವಿ, ಎಣಿಸಲಾಗದಷ್ಟು ಭಾವನೆಗಳಲ್ಲಿ ಬಂಧಿಯಾಗಿರುವ ಶತಮಾನದ ಖೈದಿ ಎಂದರೆ ತಪ್ಪಾಗಲಾರದು. ಇಂಥ ಭಾವನೆಗಳ ಕಾರಾಗೃಹದ ಖಾಯಂ ಖೈದಿಯಂತ್ತಿರುವ ಆಕರ್ಷ ಪ್ರತಿ ಉಸಿರಿಗೊಂದು ಕವಿತೆ ಕಟ್ಟಿ ಆಕಾಶಕ್ಕೆ ಹಾರಬಲ್ಲ ಮತ್ತು ಹೂಗಿಡಕ್ಕೆ ಪರಿಮಳವ ಬಿಗಿದು ಮಣ್ಣಾಗಬಲ್ಲ!

‘ಗ್ರಾಫಿಟಿಯ ಹೂವು’ ಕಾವ್ಯದ ತುಮುಲ, ತುರಿಕೆಗಳು ಪ್ರತಿಯೊಬ್ಬರಿಗೂ ಅನುಭವಕ್ಕೆ ಬಂದಿರುವವೆ; ಆದರೆ, ಅವುಗಳನ್ನು ಅಭಿವ್ಯಕ್ತಿಸಿದ ರೀತಿ ಮಾತ್ರ ಫ್ರೆಶ್ ಅನ್ನಿಸುದಲ್ಲೆ ಸಂಕಲನದ ಸುಮ ಘಮ್ಮೆನ್ನುವುದು. ಬದುಕಿನ ಬಂಡಾಯತನದೊಂದಿಗೆ ಅಸಹಾಯಕ ರಾಜಿತನಗಳು ಮನುಷ್ಯ ಮನಸ್ಸಿನ ಮಿಡಿತದಷ್ಟೇ ಸತ್ಯ !

ಇಲ್ಲಿನ ಪ್ರತಿ ಕವಿತೆಯಲ್ಲೂ ಅಂಥ ಮುಖಗನ್ನಡಿಯನ್ನು ಕಾಣಬಹುದು. ಒಂದೇ ಕವಿತೆ ಏಕಕಾಲಕ್ಕೆ ಕವಿಯ ಅಸ್ತವ್ಯಸ್ತತೆಯೊಂದಿಗೆ ಓದುಗನ ಅಥವಾ ಲೋಕದ ಅಸ್ತವ್ಯಸ್ತತೆಯನ್ನು ತೋರಿಸುವುದು ಈ ಸಂಕಲನದ ವಿಶಿಷ್ಟವಾದ ಗುಣವೆಂದು ನನಗನ್ನಿಸುತ್ತದೆ. ಓದುವಾಗಲೆಲ್ಲ ಒಂದು ಗುಟುಕಿಗೆ ಧಕ್ಕಿದ್ದಂತೆ ಕಂಡರೂ ಕೂಡ, ಹೊಸ ಪ್ರತಿಮಾ ದೃಷ್ಟಿಕೋನ ಮತ್ತು ಮಾನಸಿಕ ವ್ಯಾಪಾರದ ಚಲನೆ ತಟ್ಟನೆ ನಿಲ್ಲಿಸಿ ಮತ್ತೆ ಮುಂದೆ ಸಾಗಿಸುತ್ತವೆ.

ನೀವು ಅರಿವೇ ಇಲ್ಲದೆ
ನೀವು ಮಲಗಿದ್ದಾಗ ಗಾಜಾಗಿರುತ್ತೀರಿ
ಕೈ ಕಾಲುಗಳೆಲ್ಲ ಯಾವುದೋ ಕಿಟಕಿಯ ಕಂಬಿಗಳಾಗಿ,
ಗಾಜನ್ನೇ ಉಸಿರಾಡುತ್ತಿರಬಹುದು
******

ಎಂದಿನಂತೆ ಅವನು ಇಡೀ ನಗರವನ್ನು
ಒಂದು ಗ್ರಾಫಿಟಿಯ ಹೂವಾಗಿಸಿ
ಈ ನಗರಕ್ಕೆ ಮತ್ತು ಮಳೆಗೆ
ಅದರ ಇರುವಿಕೆಯನ್ನು ಬಿಟ್ಟುಬಿಡುತ್ತಾನೆ
******

ಕೆಲವೊಮ್ಮೆ ಈ ಕಾಂಕ್ರೀಟ್ ಗೋಡೆಗಳಲ್ಲಿ ಹುದುಗಿ
‘ಇನ್ನೂ ಬದುಕಿದ್ದೇನೆ’ ಎಂದು ಕಿರಚಬೇಕೆನಿಸುತ್ತದೆ
******

ಎದುರು ಚರಂಡಿಯಲ್ಲಿನ ನೀರು
ಆಗಾಗ್ಗೆ ಇಲ್ಲಿ ಮನುಷ್ಯನ ವಿಕೃತಗಳಾಗಿ
ಕೋಣೆಯ ಒಳಗೂ ಹೊರಗೂ ಹರಿದು

ಈ ಬಗೆಯ ಹತ್ತು ಹಲವು ಸಾಲುಗಳು ಈ ಸಂಕಲನದಲ್ಲಿ ಕಾಣಲು ಸಾಧ್ಯವಿದೆ. ಹಾಗೆಂದ ಮಾತ್ರಕ್ಕೆ ಈ ‘ಗ್ರಾಫಿಟಿಯ ಹೂವಿ’ಗೆ  “ನಗರ ಸಂವೇದನೆ ” ಎಂಬ ಹಣೆ ಪಟ್ಟಿ ಕೊಟ್ಟರೆ, ವಿಮರ್ಶಕನ ಅಲ್ಪಮತಿಯಂತ ವಿಕೃತಿ ಚರಂಡಿಯ ನೀರಾಗಿ ಕೋಣೆಯ ಒಳಗೂ, ಹೊರಗೂ ಹರಿದು ಬಿಡಬಹುದು. ನನಗನ್ನಿಸಿದ ಹಾಗೆ ಈ ಸಂಕಲದಲ್ಲಿರುವ ಪ್ರತಿ ಕಾವ್ಯವು ಮನುಷ್ಯನೊಂದಿಗೆ ಹಾಗೂ ಮನುಷ್ಯನಂತೆ ಜೀವ ಹೊಂದಿರಬಹುದಾದ ಪ್ರತಿ ವಸ್ತು, ಜೀವಿಗಳ ಸಮೂಹ ಸಂವೇಧನೆಯೇ ಆಗಿದೆ. ಹೀಗಿರುವ ಕಾವ್ಯದಲ್ಲಿನ ರಚನೆ, ಪ್ರತಿಮೆ ಹಾಗೂ ಅಭಿವ್ಯಕ್ತಗೊಂಡ ಭಾಷೆಯ ಆಧಾರದ ಮೇಲೆ “ನಗರ ಸಂವೇದನೆ”  ಎಂದು ಪೋಸ್ಟ್ ಮಾರ್ಟ್ಂ ಮಾಡದಿರುವುದು ಒಳ್ಳೆಯದು.

ಇನ್ನು ಕಾವ್ಯದ ರಚನೆಗೆ ಬರುವುದಾದರೆ, ಕನ್ನಡ ಸಾಹಿತ್ಯದ ಹೊಸ ತಲೆಮಾರಿನ ತಲ್ಲಣ, ಸಹಜ ಸ್ಥಿತಿಗತಿ ಹಾಗೂ ಪ್ರತಿಮಾನ್ವೇಷಣೆಯನ್ನು ಕಾಣಬಹುದು. ಬರೆದದ್ದನ್ನೇ ಬರೆಯದ ಬೇರೊಂದು ಬಗೆಯ ಬರಹದ ಘಮಲು ಗ್ರಾಫಿಟಿಯ ಹೂವಿನಲ್ಲಿದೆ. ಸಹಜವಾಗಿ ಬರೆದಷ್ಟೇ ಕವಿಯಾಗಬಲ್ಲ ಎಂಬ ಮಾತಿಗೆ ಆಕರ್ಷ ಉದಾಹರಣೆಗೆ ಸಿಗಬಲ್ಲ ಕವಿ ಎಂದು ಹೇಳಬಹುದು.

ಆತನ ಮುಂದಿನ ಬರಹಗಳನ್ನು ಅತ್ಯಂತ ಕೂತೂಹಲದಿಂದ ಎದುರು ನೋಡುತ್ತಾ, ಇನ್ನಷ್ಟು ಹೊಸತನ್ನು ನೀಡಲಿ ಎಂದು ಒಬ್ಬ ಓದುಗನ ಆಶಾಗೋಪುರವನ್ನು ಆತನ ಹೆಗಲ ಮೇಲಿರಿಸಿ, ಕವಿಯ ಜವಾಬ್ದಾರಿಯನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಂಡು ಮುಂದುವರಿಯಲಿ ಎಂದು ಆಶಿಸುತ್ತೇನೆ !

ಪುಸ್ತಕ ಕೊಳ್ಳಲು-

https://bahuroopi.in/

‍ಲೇಖಕರು avadhi

June 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. prakash konapur

    ಕೃತಿಯ ಕುರಿತು ಬರೆದ ಬರವಣಿಗೆ ತುಂಬಾ ಚೆನ್ನಾಗಿದೆ
    ಕೃತಿ ಪರಿಚಯ ಚೆನ್ನಾಗಿ ಮಾಡಿಕೊಟ್ಟಿದ್ದೀರಿ .

    ಪ್ರತಿಕ್ರಿಯೆ
  2. ಡಿ.ಎಮ್. ನದಾಫ್.

    ತಮ್ಮ ಹೆಸರಿನಲ್ಲೇ “ಆಕರ್ಷ”ಕ ನಾಗಿರುವ ಕವಿಯ ಕವನಗಳು ವಿಭಿನ್ನ ಕುಸುರಿಗಾರಿಕೆಯಿಂದ ಹೊಸ ಆಕರ್ಷಣೆಯ ಟ್ರೆಂಡ್ ಸೆಟ್ ಮಾಡುವಂತಿವೆ.ಹೊಸ ಬಗೆ ವಸ್ತು, ಹೊಸ ಬಗೆಯ ಕಲೆಗಾರಿಕೆಯನ್ನು ಪರಿಚಯಿಸಿದ ಕವಿಗೆ ಅಭಿನಂದನೆಗಳು.
    ಡಿ ಎಮ್ ನದಾಫ್, ಅಫಜಲಪುರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: