ಹರಿ ಪರಾಕ್ review: ಡಿಯರ್ ವಿಕ್ರಮ್…

ಹರಿ ಪರಾಕ್

ಸಿನಿಮಾ ರಂಗದಲ್ಲಿ ಈಗ ವಿಕ್ರಮ್ ಗಳ ಹಾವಳಿ, ಮೊನ್ನೆ ಮೊನ್ನೆ ಕಮಲ್ ಹಾಸನ್ ಅವರ ವಿಕ್ರಮ್ ಸಿನಿಮಾ ಬಂದಿತ್ತು, ಅದರ ಜೊತೆಗೆ ಕನ್ನಡದಲ್ಲಿ ರವಿಚಂದ್ರನ್ ಮಗನ ತ್ರಿವಿಕ್ರಮ್ ಬಂದಿತ್ತು. ಈಗ ಸತೀಶ್ ನೀನಾಸಂ ಅವರ ಡಿಯರ್ ವಿಕ್ರಮ್ ಬಂದಿದೆ. ಒಟ್ನಲ್ಲಿ ವಿಕ್ರಮ್ ಚಿತ್ರರಂಗದ ಹಿಂದೆ ಬೇತಾಳನ ಥರ ಬಿದ್ದಿದ್ದಾನೆ ಅನ್ನಬಹುದು.
ಇನ್ನು ಈ ವಾರ ನಾನು ನೋಡಿದ ಡಿಯರ್ ವಿಕ್ರಮ್ ಸಿನಿಮಾ ವಿಷಯಕ್ಕೆ ಬಂದ್ರೆ ಇದು ಮಾಮೂಲಿ ಕಮರ್ಷಿಯಲ್ ಸಿನಿಮಾ ಅಲ್ಲ.

ಹಾಗೆ ನೋಡಿದ್ರೆ ಈ ಸಿನಿಮಾ ಬಿಡುಗಡೆಗೆ ಮುಂಚೆ ಇದು ಎಡಪಂಥೀಯ, ಬಲಪಥೀಯ ವಿಷಯಕ್ಕೆ ಸಂಬಂಧಪಟ್ಟ ಸಿನಿಮಾ ಅನ್ನೋ ಮಾತು ಹರಿದಾಡ್ತಾ ಇತ್ತು. ಇದು ಯಾರ ಪರ ಇರಬಹುದು ಅನ್ನೋ ಕುತೂಹಲವೂ ಇತ್ತು. ಆದ್ರೆ ಸತ್ಯ ಏನು ಅಂದ್ರೆ ಇದು, ಎಡನೂ ಅಲ್ಲ, ಬಲನೂ ಅಲ್ಲ, ಸಮಾಜದಲ್ಲಿ ನೆಟ್ಟಗೆ ಬದುಕೋದು ಹೇಗೆ ಅನ್ನೋದ್ರ ಬಗ್ಗೆ ಗೊಂದಲ ಇರೋ ಸಾಮಾನ್ಯರ ಚಿತ್ರ. ಹಾಗಾಗಿ ಇಲ್ಲಿ ರೈಟ್ ರೈಟಾ, ಲೆಫ್ಟು ರೈಟಾ ಅನ್ನೋ ಆಸಕ್ತಿ ಇಲ್ಲ, ಇಲ್ಲಿ ಯಾವ ಪಂಗಡದವರನ್ನೂ ಲೆಫ್ಟ್ ಅಂಡ್ ರೈಟ್ ಕ್ಲಾಸ್ ತೆಗೆದುಕೊಳ್ಳುವ ಪ್ರಯತ್ನವೂ ಇಲ್ಲ. ಕೇವಲ ನಿರ್ದೇಶಕರ ಒಳಗಿರೋ ರೈಟರ್ ನ ಪ್ರಶ್ನೆಗಳು ಮಾತ್ರ ಇಲ್ಲಿವೆ.

ಹಾಗಾದ್ರೆ, ಈ ಸಿನಿಮಾಕ್ಕೆ ಈ ಮೊದಲು ಗೋಧ್ರಾ ಅಂತ ಹೆಸರಿಟ್ಟಿದ್ದು ಯಾಕೆ ಅನ್ನೋ ಪ್ರಶ್ನೆ ಮೂಡೋದು ಸಹಜ. ಯಾಕಂದ್ರೆ ಅಂಥ ಯಾವ ವಿಷಯಗಳೂ ಈ ಸಿನಿಮಾದಲ್ಲಿ ಇಲ್ಲ.

ನಾವು ಮನೆ ಮಠ ಕಳ್ಕೊಂಡು ಕಷ್ಟ ಪಟ್ಟಿದ್ದು ಸಾಕು, ಆಗ ಯಾರೂ ಬರಲಿಲ್ಲ ಅಂತ ಅಪ್ಪ ಅಂದಾಗ, ಇವತ್ತು ನಾವು ಚೆನ್ನಾಗಿದ್ದೀವಿ, ಆದ್ರೆ ನಮ್ಮ ಥರ ಬೇರೆ ಜನ ಮನೆ ಮಠ ಕಳ್ಕೊಂಡಿದ್ದಾರೆ, ಅವರಿಗೆ ಯಾರು ಸಹಾಯ ಮಾಡೋದು ಅಂತ ಪ್ರಶ್ನೆ ಮಾಡುತ್ತಾನೆ ನಾಯಕ. ಈ ರೀತಿಯ ಸಮಾಜಮುಖಿ ವಿಷಯಗಳನ್ನು ನಿರ್ದೇಶಕ ನಂದೀಶ್ ಯಾವುದೇ ಅತಿರೇಕವಿಲ್ಲದೇ ಹೇಳಿದ್ದಾರೆ.

ಈ ಸಿನಿಮಾದಲ್ಲಿ ಕೆಲವೊಂದು ಸಂಭಾಷಣೆಗಳಿವೆ.
ಈ ರಾಜಕಾರಣಿಗಳು ಬ್ರಿಟಿಷರಿಂದ ಸ್ವಾತಂತ್ರ್ಯ ತೆಗೆದುಕೊಂಡು ತಮ್ಮತ್ರ ಇಟ್ಕೊಂಡಿದ್ದಾರೆ ಅಷ್ಟೇ.
ಸಿದ್ಧಾಂತಕ್ಕಿಂತ ಜೀವನಾನೇ ಮುಖ್ಯನಾ?
ನಮ್ಮ ದೇಶದಲ್ಲಿ ಯಾರು ಯಾರಿಗೋಸ್ಕರ ಹೋರಾಟ ಮಾಡ್ತಾ ಇದ್ದಾರೆ ಅಂತಾನೇ ಗೊತ್ತಾಗಲ್ಲ

ಮೇಲ್ನೋಟಕ್ಕೆ ಇದು ನಕ್ಸಲರ ಕಥೆ ಅನ್ನಿಸಬಹುದು. ಆದರೆ ಅದರ ಜೊತೆ ಸಾಮಾನ್ಯ ನಾಗರಿಕರ ಮನಸ್ಸಿನ ದ್ವಂದ್ವಗಳನ್ನು ಇಂಥ ಸಂಭಾಷಣೆಗಳ ಮೂಲಕ ನಿರ್ದೇಶಕ ನಂದೀಶ್ ಸೂಕ್ಷ್ಮವಾಗಿ ಹೇಳಿದ್ದಾರೆ.
ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ನಂದೀಶ್ ಅವರ ನಿರೂಪಣೆಯಲ್ಲಿ ಎಲ್ಲೂ ಅತಿರೇಕ ಇಲ್ಲ. ನಕ್ಸಲರ ಕಥೆಯನ್ನೂ ತೀರಾ ವಿವರವಾಗಿ ಹೇಳೋಕೆ ಹೋಗಿಲ್ಲ.

ನಕ್ಸಲರ ವಿಜೃಂಭಣೆ ಬಿಡಿ, ಒಂದು ಕಥೆ ಆಗಿ ಹೇಳುವಾಗಲೂ, ಅಪ್ಪ ಸತ್ತಾಗಲೂ, ಗಂಡ, ತಮ್ಮ, ಸತ್ತಾಗಲೂ, ಅಷ್ಟೇ ಯಾಕೆ ತಾನೇ ಸಾಯ್ತೀನಿ ಅಂತ ಗೊತ್ತಾದಾಗಲೂ, ಪ್ರೀತಿಸಿದ ಹುಡುಗಿ ಇದ್ದಕ್ಕಿದ್ದಂತೆ ಕಾಣೆಯಾಗಿ, ಇವನು ಮದುವೆ ಆಗದೇ ಉಳಿದು, ಅವಳು ವಾಪಸ್ ಬಂದು, ನಾನು ಬೇರೆ ಮದುವೆ ಆಗಿದ್ದೆ, ಡಿವೋರ್ಸ್ ಆಯ್ತು ಅಂದಾಗಲೂ, ಇವನು ಮತ್ತೆ ನಾವಿಬ್ಬರೂ ಮದುವೆ ಆಗಬಹುದು ಅಂದಾಗಲೂ ಯಾವ ಪಾತ್ರಗಳೂ ಓವರ್ ಆಗಿ ರಿಯಾಕ್ಟ್ ಮಾಡೋದಿಲ್ಲ, ಎಲ್ಲೂ ಅನಗತ್ಯ ಭಾವನಾತ್ಮಕ ಅತಿರೇಕಗಳಿಲ್ಲ. ದುಡ್ಡು, ಹೆಸರಿನ ಹಿಂದೆ ಬಿದ್ದಿರೋ ಇಂದಿನ ಸಮಾಜದಲ್ಲಿ, ಸಿದ್ಧಾಂತಕ್ಕಿಂತ ಜೀವನನೇ ಮುಖ್ಯನಾ ಅನ್ನೋ ಗಾಬರಿ, ಅಚ್ಚರಿ ಮೂಡಿಸುವ ಡೈಲಾಗ್ ಅನ್ನೂ ಕೂಡಾ ತುಂಬಾ ಸರಳವಾಗಿಯೇ ಹೇಳಿಸಿದ್ದಾರೆ. ಹಾಗಾಗಿ, ಯಾವುದನ್ನೂ ಎಳೆದಾಡದೆ, ತಾವು ಹೇಳಬೇಕಾದ ಕಥೆಯ ಎಳೆಗೆ ನಿಷ್ಟರಾಗಿ ಸಂಯಮದಿಂದ ಹೇಳಿದ್ದಾರೆ ನಿರ್ದೇಶಕರು.

ಹಿಂದೂ ಪರ ಹೋರಾಟಗಾರ ಒಬ್ಬ, ನಕ್ಸಲ್ ಸಿದ್ಧಾಂತ ನಂಬಿದ ಇನ್ನೊಬ್ಬ ಇವೆರಡರ ಮಧ್ಯೆ ಕಾರ್ತಿಕ್ ಸ್ವಾಮಿ ಅನ್ನೋ ರಾಜಕಾರಣಿಯ ಕಥೆಯನ್ನ ಬಹಳ ನೀಟಾಗಿ ಹೇಳಲಾಗಿದೆ. ಹಾಗೆ ನೋಡಿದರೆ ಇಡೀ ಸಿನಿಮಾದಲ್ಲಿ ಒಂದ್ ಸೀನ್ ಕೂಡ ನಿಮಗೆ ಕಟ್ ಮಾಡೇಕಿತ್ತು ಅನ್ನಿಸಲ್ಲ. ಅಷ್ಟು ಟೈಟ್ ಆಗಿದೆ ಸ್ಕ್ರಿಪ್ಟ್. ಚಿತ್ರದ ಕಾನ್ಸೆಪ್ಟ್ ಅಷ್ಟು ಸ್ಟೈಟ್ ಆಗಿ, ಸ್ಪಷ್ಟವಾಗಿ ನಿರ್ದೇಶಕರ ಮೆದುಳಲ್ಲಿ ಕೂತಿದೆ ಅನ್ನೋದೇ ಇದಕ್ಕೆ ಕಾರಣ. ಆದ್ರೆ, ಕಾರ್ತಿಕ್ ಸ್ವಾಮಿ ಪಾತ್ರಕ್ಕೆ ಜೆಡಿಎಸ್ ಕುಮಾರಸ್ವಾಮಿ ಅವರ ವ್ಯಕ್ತಿತ್ವದ ನೆರಳು ಯಾಕೆ ಬೇಕಿತ್ತು ಅನ್ನೋದೊಂದು ಪ್ರಶ್ನೆಗೆ ಮಾತ್ರ ಉತ್ತರ ಸಿಗಲ್ಲ.

ಸಿನಿಮಾದಲ್ಲಿ ಅನೇಕ ಪಾತ್ರಗಳಿವೆ. ಎಲ್ಲರೂ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಆರೆ ಮೊದಲೇ ಹೇಳಿದಂತೆ ಸತೀಶ್ ನೀನಾಸಂ, ವಸಿಷ್ಠ ಸಿಂಹ ಮತ್ತು ಅಚ್ಯುತ್ ಅವರ ಪಾತ್ರಗಳು ಚಿತ್ರದ ಹೈಲೈಟ್. ಮೂರೂ ಪಾತ್ರಗಳಿಗೂ ನಿರ್ದೇಶಕರು ಕೊಟ್ಟಿರೋ ಅಂತ್ಯ ಈ ಸಮಾಜಕ್ಕೆ ಸೂಚ್ಯವಾಗಿ ತುಂಬಾ ವಿಷಯಗಳನ್ನು ಹೇಳುತ್ತೆ.

ತಮಾಷೆ ಮಾಡ್ಕೊಂಡೇ ಚಿತ್ರರಂಗಕ್ಕೆ ಕಾಲಿಟ್ಟ ಮಂಡ್ಯ ಹೈದ ಸತೀಶ್ ನೀನಾಸಂ, ಮನೆನಾಡಿನ ಕಾಡಲ್ಲಿ ನಕ್ಸಲ್ ಆಗಿ ತಮ್ಮ ಪಾತ್ರದಲ್ಲಿ ತಾವೇ ಕಳೆದುಹೋಗಿದ್ದಾರೆ. ಸಮಾಜಕ್ಕೆ, ನೊಂದವರಿಗೆ ನ್ಯಾಯ ಒದಗಿಸೋ ಪ್ರಯತ್ನ ಮಾಡೋ ಯುವಕನ ಪಾತ್ರದಲ್ಲಿ ಅಭಿನಯಿಸಿರೋ ತಮ್ಮ ಪಾತ್ರಕ್ಕಂತು ತುಂಬಾ ನ್ಯಾಯ ಒದಗಿಸಿದ್ದಾರೆ. ವಸಿಷ್ಟ ಸಿಂಹ ಅವರದ್ದು ಒಬ್ಬ ಮಿಡ್ಲ್ ಕ್ಲಾಸ್ ಹುಡುಗನಾಗಿ ಹೈ ಕ್ಲಾಸ್ ಅಭಿನಯ. ಹಿಂದೂ ಆಕ್ಟಿವಿಸ್ಟ್ ಆಗಿದ್ದಾಗ ಮತ್ತು ಬದಲಾದಾಗ, ಆ ಬದಲಾವಣೆ ಅವರ ಅಭಿನಯದಲ್ಲಿ ಕಾಣುತ್ತೆ. ಅಚ್ಯುತ್ ಕುಮಾರ್ ತಮ್ಮ ಪಾತ್ರದಲ್ಲಿ ಘನತೆ, ಗಾಂಭೀರ್ಯ, ಚಾಣಾಕ್ಷತೆ ಎಲ್ಲವನ್ನೂ ತೋರಿಸಿದ್ದಾರೆ.

ಇನ್ನು ಇಂಥ ಸಿನಿಮಾಗೆ ಹಾಡುಗಳ ಅವಶ್ಯಕತೆ ಇರಲಿಲ್ಲ ಅನ್ನಿಸಿದರೂ, ಇಲ್ಲಿ ಕೇವಲ ಸಮಾಜ ಅಷ್ಟೇ ಅಲ್ಲದೆ ನಮ್ಮ ಕುಟುಂಬ, ನಮ್ಮ ವೈಯಕ್ತಿಕ ಸಂಬಂಧಗಳಿಗೂ ಬೆಲೆ ಕೊಡಬೇಕು ಅಂತ ಸಂಭಾಷಣೆಯ ಮೂಲಕವೇ ಹೇಳಿರುವ ಕಾರಣಕ್ಕೆ ಇಲ್ಲಿ ಹಾಡುಗಳನ್ನು ಹೇರಲಾಗಿದೆ ಅನ್ನಿಸೊಲ್ಲ. ಚಿತ್ರದ ಹಿನ್ನೆಲೆ ಸಂಗೀತದಲ್ಲಿ ಸಿನಿಮಾಗೆ ಬೇಕಾದ ಫೋರ್ಸ್ ಇದೆ. ಚಿತ್ರದ ಛಾಯಾಗ್ರಹಣ ಅನವಶ್ಯಕ ಗಿಮಿಕ್ ಮಾಡದೇ ಕಥೆಗೆ ಪೂರಕವಾಗಿದೆ.

ಒಟ್ಟಾರೆ ಹೇಳೋದಾದ್ರೆ, ಡಿಯರ್ ವಿಕ್ರಮ್ ಚಿತ್ರ ಇಂದು ರಾಜಕಾರಣಿಗಳ ಹಿಂಬಾಲಕರಾಗಿ, ಇನ್ನೊಬ್ಬರ ಕೈಗೊಂಬೆ ಆಗಿ ಅವರ ತಾಳಕ್ಕೆ ತಕ್ಕಂತೆ ಕುಣಿದು ತಮ್ಮ ಜೀವನ ಹಾಳು ಮಾಡಿಕೊಳ್ತಾ ಇರೋ ಇಂದಿನ ಅನೇಕ ಯುವಕರಿಗೆ ಬುದ್ಧಿ ಕಲಿಯೋ ಅವಕಾಶ ಅಂತನೂ ಅಂದುಕೊಳ್ಳಬಹುದು.

ಯಾಕಂದ್ರೆ, ಚಿತ್ರದ ಕೊನೆಯಲ್ಲಿ, ನಮ್ಮ ದೇಶದಲ್ಲಿ ಯಾರು ಯಾರಿಗೋಸ್ಕರ ಹೋರಾಟ ಮಾಡ್ತಾ ಇದ್ದಾರೆ ಅಂತಾನೇ ಗೊತ್ತಾಗಲ್ಲ ಅಂತ ನಾಯಕ ನಿಟ್ಟುಸಿರು ಬಿಡ್ತಾನೆ. ಉಸಿರೂ ಬಿಡ್ತಾನೆ. ಆದರೆ ಅದು ಗಾಯಗೊಂಡ ಸಿಂಹದ ಉಸಿರಲ್ಲ, ದುಷ್ಟ ರಾಜಕಾರಣಿಗಳ ರಾಜಕೀಯದ ಆಟದಲ್ಲಿ ಬಲಿ ಕಾ ಬಕ್ರಾ ಆಗಿರುವ ಅಮಾಯಕ ಕುರಿಗಳ ಉಸಿರು. ಅದು, ಘರ್ಜನೆ ಅಲ್ಲ, ಸಾಮಾಜಿಕವಾಗಿ ನೊಂದು ಘಾಸಿಗೊಂಡ ಮನಸ್ಸಿನ ಆರ್ತನಾದ.

‍ಲೇಖಕರು Admin

July 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: