ಹರಿ ಪರಾಕ್ ನೋಡಿದ ‘ಬೈರಾಗಿ’

ಹರಿ ಪರಾಕ್

ಬೈರಾಗಿ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. ‘ನಾಲ್ಕು ಜನ ನಮ್ಮ ಬಗ್ಗೆ ಹೆಮ್ಮೆ ಪಡದೇ ಇದ್ರೂ ಪರವಾಗಿಲ್ಲ, ಕನ್ನಡಿಯಲ್ಲಿ ನಮ್ಮ ಮುಖ ನಾವು ನೋಡಿಕೊಂಡಾಗ ನಮಗೆ ಹೆಮ್ಮೆ ಅನಿಸಬೇಕು’ ಅಂತ. ಆದ್ರೆ, ನಿರ್ದೇಶಕ ವಿಜಯ್ ಮೆಲ್ಟನ್ ತಾವೇ ತಮಿಳಿನಲ್ಲಿ ಮಾಡಿದ್ದ ಕಡುಗು ಸಿನಿಮಾನ ಕನ್ನಡಿಯಲ್ಲಿ ಅಲ್ಲ, ಕನ್ನಡದಲ್ಲೂ ನೋಡಿ ತಮ್ಮ ಬಗ್ಗೆ ಹೆಮ್ಮೆ ಪಟ್ಕೋಬೇಕು ಅನ್ನಿಸ್ತೋ ಏನೋ ಅದಕ್ಕೇ ಬೈರಾಗಿ ಮಾಡಿದ್ದಾರೆ.

ಇತ್ತೀಚೆಗೆ ಈ ಕಮರ್ಷಿಯಲ್ ಸಿನಿಮಾಗಳಲ್ಲಿ ನ್ಯೂ ಏಜ್ ಸಿನಿಮಾ ಅಂತ ಒಂದು ಕೆಟಗರಿ ಶುರುವಾಗಿದೆ. ಅದರಲ್ಲಿ ಹೆಂಗಪ್ಪಾ ಅಂದ್ರೆ, ಕಥೆ ಕೇಳಿದ್ರೆ ನಿಮಗೆ ಹೊಸದೇನೋ ಇದೆ ಅಂತ ಅನ್ನಿಸೊಲ್ಲ. ಆದ್ರೆ ಈ ಚಿತ್ರಗಳಲ್ಲಿ ಡೈರೆಕ್ಟರ್ ಒಂಥರಾ ಡಾಕ್ಟರ್ ಇದ್ದಂಗೆ. ಅಂದ್ರೆ, ಕಥೆ ಅದೇ, ಆದ್ರೆ ಟ್ರೀಟ್ ಮೆಂಟ್ ಹೊಸದು. ಆ ಕೆಟಗರಿಯ ಚಿತ್ರ ಬೈರಾಗಿ.

ಒಬ್ಬ ದುಷ್ಟ ಇರ್ತಾನೆ. ಅವನು ಒಂದು ಹೆಣ್ಣುಮಗು ಮೇಲೆ ಕಣ್ಣಾಕ್ತಾನೆ. ಆಗ ನಾಯಕ ತನ್ನ ಮೂರನೇ ಕಣ್ಣು ತೆರೆಯುತ್ತಾನೆ. ಆ ದುಷ್ಟನ ಕಣ್ಣುಮುಚ್ಚಿಸ್ತಾನೆ. ಆ ಮೂಲಕ ದುಷ್ಟ ಶಿಕ್ಷಕ, ಸಿಸ್ಟರ್ ರಕ್ಷಕ ಆಗ್ತಾನೆ. ಇಂಥ ಅನೇಕ ಕಥೆಗಳನ್ನು ನೀವು ಕೇಳಿರ್ತೀರ. ಅಂಥದ್ದೇ ಕಥೆಯ ಇನ್ನೊಂದು ಬೈ ಪ್ರಾಡಕ್ಟ್ ಈ ಬೈರಾಗಿ.

ಆದರೆ ಹಾಗಂತ ಈ ಸಿನಿಮಾ ನ್ನಾಗಿಲ್ಲ ಅನ್ನೋ ನಿರ್ಧಾರಕ್ಕೆ ಬಂದ್ರೆ ನೀವು ಈ ಚಿತ್ರದ ನಾಯಕನಷ್ಟೇ ಬೇಗ ದುಡುಕುವ ಬುದ್ಧಿ ಇರೋವ್ರು ಅಂತಾಗುತ್ತೆ. ಯಾಕಂದ್ರೆ, ನಾಯಕ ಶಿವರಾಜ್ ಕುಮಾರ್ ಅವರ ಕ್ಯಾರೆಕ್ಟರೈಸೇಶನ್, ಅವನ ವ್ಯಕ್ತಿತ್ವದಲ್ಲಿ ಇರುವಂಥ ಸೆನ್ಸೇಶನ್, ಅದರ ಜೊತೆಗೆ ಶಿವಣ್ಣ ಮತ್ತು ಡಾಲಿ ಧನಂಜಯ ಅವರ ಜೊತೆಗಿನ ಡೆಡ್ಲಿ ಕಾಂಬಿನೇಶನ್ ಬೈರಾಗಿಯನ್ನ ಒಂದು ಸ್ಪೆಷಲ್ ಸಿನಿಮಾ ಆಗಿ ಮಾಡಿದೆ.

ಆರಂಭದಲ್ಲಿ ಬರೋ ಒಂದು ಫೈಟು ಆಗ ಮಾಮೂಲಿಯಾಗಿ ಕಂಡರೂ, ನಂತರದ ಕಥೆಯಲ್ಲಿ ಅದಕ್ಕೆ ಸಿಗೋ ಟ್ವಿಸ್ಟ್ ಅದಕ್ಕೆ ವ್ಯಾಲ್ಯೂ ತಂದುಕೊಡುತ್ತೆ. ಚಿತ್ರಕಥೆಯಲ್ಲಿ ಇಂಥ ಅಂಶಗಳೇ ಬೈರಾಗಿಯನ್ನು ಸ್ಪೆಷಲ್ ಅನ್ನಿಸುವಂತೆ ಮಾಡಿರೋದು. ಹಾಗಾಗಿ ಚಿತ್ರಕಥೆಯೇ ಬೈರಾಗಿಯ ಜೀವಾಳ.

ಆರಂಭದ ಕೆಲವು ದೃಶ್ಯಗಳಲ್ಲಿ ಮೂಡ್ ಆಫ್ ಮಾಡುವಂತಿದ್ದರೂ, ಸಿನಿಮಾ ಇದ್ದಕ್ಕಿದ್ದಂತೆ ಟೇಕಾಫ್ ಆಗುತ್ತದೆ. ಹುಲಿ ವೇಷ ಹಾಕೋ ಶಿವಪ್ಪ ಒಂಥರಾ ಸೈಲೆಂಟ್ ಹುಲಿ. ಆದ್ರೆ, ಈ ಟೈಗರ್ ಗೆ ಸಿಟ್ಟು ಬಂದು ಅದು ತನ್ನ ಒರಿಜಿನಲ್ ಕ್ಯಾರೆಕ್ಟರ್ ಗೆ ಘರ್ ವಾಪ್ಸಿ ಮಾಡಿದ್ರೆ, ಟೈಗರ್ ಜಿಂದಾ ಹೈ ಅನ್ನೋದು ಇಡೀ ಪ್ರಪಂಚಕ್ಕೇ ಗೊತ್ತಾಗುತ್ತೆ. ಹಲ್ಲು ಕಚ್ಚಿ, ಹುಲ್ಲು ತಿನ್ನೋ ಹುಲಿಯಂತೆ ಬದುಕ್ತಾ ಇರೋ ಇವನನ್ನ ಕೆಣಕಿದರೆ ಏನಾಗುತ್ತೆ ಅನ್ನೋದೇ ಬೈರಾಗಿ ಚಿತ್ರದ ಮುಂದಿನ ಕಥೆ. ಅಲ್ಲಿಂದ ಮುಂದೆ ಬೈರಾಗಿಯ ರುದ್ರತಾಂಡವ ಆರಂಭ.

ಈತ ಹರಹರ ಮಹದೇವ ಎನ್ನುತ್ತ ಕೆಂಗಣ್ಣು ಬಿಟ್ಟರೆ ವೈರಿಗಳ ಗತಿ ಹರೋಹರ. ಆದರೆ, ಸೇರಿಗೆ ಸವ್ವಾ ಸೇರು ಎಂದು ತೊಡೆ ತಟ್ಟಿ ನಿಲ್ಲುವ ಶಿವಪ್ಪ ಅನ್ನೋ ಈ ಶೇರ್, ಪ್ರೀತಿ ಪ್ರೇಮದ ವಿಷಯದಲ್ಲಿ ಭಾವನೆಗಳನ್ನೂ ಶೇರ್ ಮಾಡುತ್ತದೆ. ಇಂಥ ಚಿತ್ರಕ್ಕೆ ಕ್ಲಾಸ್ ಟಚ್ ಕೊಟ್ಟುಕೊಂಡೇ, ಶಿವಣ್ಣನ ಮಾಸ್ ಅಭಿಮಾನಿಗಳನ್ನೂ ತೃಪ್ತಿ ಪಡಿಸೋದು ಕಷ್ಟದ ಕೆಲಸ. ಅದನ್ನು ನಿರ್ದೇಶಕ ವಿಜಯ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಹಾಗಾಗಿ ಏನೇ ಕ್ಲಾಸ್ ಕಂಟೆಂಟ್ ಇದ್ರೂ, ಶಿವಣ್ಣ ಅವರ ಅಭಿಮಾನಿಗಳಿಗೆ ಸಿಗಬೇಕಾದ ಮನರಂಜನೆಯ ಶೇರ್ ಖಂಡಿತ ಸಿಗುತ್ತದೆ.

ಎಂಟ್ರಿ ಸೀನ್ ನಲ್ಲಿ ಆಫ್ ದ ಪೀಪಲ್, ಫಾರ್ ದಿ ಪೀಪಲ್ ಮತ್ತು ಬೈ ದ ಪೀಪಲ್ ಎನಿಸುವ ಮಟ್ಟಕ್ಕೆ ಸ್ಕೋಪ್ ತೆಗೆದುಕೊಳ್ಳುವ ಬೈರಾಗಿ, ನಿಜ ಹೇಳಬೇಕು ಅಂದ್ರೆ ಒಬ್ಬ ಕಾಮನ್ ಮ್ಯಾನ್. ಆದರೆ ನಿರ್ದೇಶಕರ ಪಾತ್ರ ಪರಿಕಲ್ಪನೆಯಲ್ಲಿ ಅವನು ಹೀರೋ. ಹಾಗಾಗಿ ನಿರ್ದೇಶಕರು ಯಾವ ಪಾತ್ರೆಗೆ ಹಾಕುತ್ತಾರೋ ಆ ರೂಪ ಪಡೆಯುವ ಪಾತ್ರ ಅದು. ತಮ್ಮ 123 ನೇ ಸಿನಿಮಾದಲ್ಲಿ, ಒನ್ ಟೂ, ತ್ರೀ ರೆಡಿ ಸ್ಟಾರ್ಟ್ ಅನ್ನುವ ವೇಳೆಗೆ ಕೆಲಸ ಮುಗಿಸುವ ಮಿಂಚಿನಂತೆ ಕಾಣಿಸಿಕೊಂಡಿದ್ದಾರೆ ಶಿವಣ್ಣ.

ಇನ್ನು ಕರ್ಣನ ಪಾತ್ರದಲ್ಲಿರೋ ಧನಂಜಯ ಅವರದ್ದು ವಾಲ್ ಮೇಲೆ ಇಟ್ಟ ದೀಪದಂಥ ಪಾತ್ರ. ಆದ್ರೆ ಕೊನೆಗೆ ಅದು ಯಾವ ಕಡೆ ವಾಲುತ್ತದೆ ಅನ್ನೋದೇ ಕುತೂಹಲ. ಆದರೆ ಈ ದೀಪದ ಪಾತ್ರದಲ್ಲಿ ಧನಂಜಯ ಎಂಬ ಬೆಂಕಿ ಝಗಮಗಿಸುತ್ತದೆ. ಚಿತ್ರದ ಮೂರನೇ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್ ಲವರ್ ಬಾಯ್ ಆಗಿ ಲವಬಲ್ ಎನಿಸುತ್ತಾರೆ. ವಿಶೇಷ ಅಂದ್ರೆ ಖಳನಾಯಕನ ಪಾತ್ರದಲ್ಲಿ ಶರತ್ ಲೋಹಿತಾಶ್ವ ದುಷ್ಟ ರಾಜಕಾರಣಿಯಾಗಿ ನೋ ಬಡಿ ಕೆನ್ ರೀಪ್ಲೇಸ್ ಮಿ ಎನ್ನುವಂಥ ಅಭಿನಯದಲ್ಲಷ್ಟೇ ಅಲ್ಲ, ಫಾರ್ ಎ ಚೇಂಜ್ ತಮ್ಮ ಸ್ಟೈಲಿಷ್ ಲುಕ್ ನಿಂದಲೂ ಗಮನ ಸೆಳೆಯುತ್ತಾರೆ.

ಇನ್ನು, ಡಮ್ಮಿ ಪೊಲೀಸ್ ಅಧಿಕಾರಿಯಾಗಿ ಕಾಣಿಸುವ ಶಶಿಕುಮಾರ್ ಅವರ ಪಾತ್ರ ಕೂಡಾ ಯಾರಿಗೂ ಕಮ್ಮಿ ಇಲ್ಲ. ಆದರೆ, ಚಿಕ್ಕಣ್ಣನ ಪಾತ್ರ ಮಾತ್ರ ತೀರಾ ಚಿಕ್ಕದಾಯ್ತು ಅನ್ಸುತ್ತೆ. ನಮ್ಮ ಉಪಾಧ್ಯಕ್ಷರಿಗೆ ಪಾಪ, ಮಾಮೂಲಿ ಸದಸ್ಯನಿಗೆ ಕೊಡುವಂಥ ಪಾತ್ರನೂ ಕೊಟ್ಟಿಲ್ಲ. ಯಶ ಶಿವಕುಮಾರ್ ತಮ್ಮ ಸೌಂದರ್ಯದಿಂದ ಕಣ್ಸೆಳೆದರೆ, ಸಮಾಜಕ್ಕೆ ಅಂಜುವ ಪಾತ್ರದಲ್ಲಿ ಅಂಜಲಿ ತಮ್ಮ ಅಭಿನಯದಿಂದ ಗಮನ ಸೆಳೆಯುತ್ತಾರೆ.

ಅನೂಪ್ ಸೀಳಿನ್ ಸಂಗೀತದ ಮೂರು ಹಾಡುಗಳಲ್ಲಿ, ಆಕ್ಷನ್ ಸನ್ನಿವೇಶದಲ್ಲಿ ಬರೋ ಹಾಡು ಮೈ ಝುಮ್ ಅನ್ನಿಸೋ ಹಾಗೆ ಮಾಡುತ್ತೆ. ನಿರ್ದೇಶಕರೇ ಛಾಯಾಗ್ರಾಹಕರಾಗಿರೋ ಸಿನಿಮಾದಲ್ಲಿ, ವಿಜಯ್ ಮೆಲ್ಟನ್ ಮನುಷ್ಯತ್ವ ಮತ್ತು ಕ್ರೌರ್ಯ ಎರಡಕ್ಕೂ ಜೂಮ್ ಹಾಕಿದ್ದಾರೆ.

ಒಟ್ಟಾರೆ, ಶಿವರಾಜ್ ಕುಮಾರ್ ಅವರ 123 ನೇ ಚಿತ್ರ ಆಗಿರೋ ಬೈರಾಗಿ, ಕ್ಲಾಸ್ ಮತ್ತು ಮಾಸ್ ಅಂಶಗಳಿರೋ ಟೂ ಇನ್ ಒನ್ ಸಿನಿಮಾ ಅನ್ನಬಹುದು. ಶಿವಣ್ಣ ಅವ್ರ ಸಿನಿಮಾ ಆಯ್ಕೆಗಳನ್ನು ನೋಡ್ತಾ ಇದ್ರೆ, ಅವರು ಕವಚ ಚಿತ್ರದಿಂದ ರಿಮೇಕ್ ಸಿನಿಮಾ ಮಾಡೋಕೆ ಒಪ್ಪಿಕೊಂಡಿದ್ದು ಒಳ್ಳೇದೇ ಆಯ್ತು ಅನ್ನಿಸುತ್ತೆ.

‍ಲೇಖಕರು Admin

July 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: