ಹರಿಣಿಯವರ ಕ್ಯಾರಿಕೇಚರ್ ಸವಿನೆನಪು…

ಪ್ರಸಾದ್ ನಾಯ್ಕ್

2010 ರ ಅವಧಿ:
ನಾವೆಲ್ಲಾ ಆಗ ವಿದ್ಯಾರ್ಥಿಗಳಾಗಿದ್ದೆವು. ಕ್ಯಾಂಪಸ್ ಪ್ಲೇಸ್ಮೆಂಟ್, ಉನ್ನತ ಶಿಕ್ಷಣ… ಇತ್ಯಾದಿ ಜಂಜಾಟಗಳ ನಡುವೆಯೂ ನಮ್ಮೊಳಗಿನ ಸೃಜನಶೀಲ ವ್ಯಕ್ತಿತ್ವವನ್ನು ಜೀವಂತವಾಗಿಟ್ಟುಕೊಳ್ಳಲು ನಾವು ಶಕ್ತಿಮೀರಿ ಶ್ರಮಿಸುತ್ತಿದ್ದೆವು. ನಾನಾಗ ನೂರಕ್ಕೂ ಹೆಚ್ಚು ವಿದ್ಯಾರ್ಥಿ ಕಲಾವಿದರಿದ್ದ ದೊಡ್ಡ ತಂಡವೊಂದನ್ನು ಮುನ್ನಡೆಸುತ್ತಿದ್ದೆ. ಅಂದು ನೂರಾರು ಮಂದಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಹರಿಣಿ ತಮ್ಮ ರೇಖೆಗಳ ಮೂಲಕವಾಗಿ ಮ್ಯಾಜಿಕ್ ಸೃಷ್ಟಿಸುತ್ತಿದ್ದರೆ ನಾವೆಲ್ಲ ಬಾಯಿಬಿಟ್ಟು, ಜಗವನ್ನೇ ಮರೆತು ಅವರ ಮೋಹಕ ರೇಖೆಗಳಲ್ಲಿ ಕಳೆದುಹೋಗುತ್ತಿದ್ದೆವು.

ಹರಿಣಿಯವರು ಅಂದು ಅದೆಷ್ಟು ಕ್ಯಾರಿಕೇಚರ್ ಗಳನ್ನು ಮಾಡಿರಬಹುದು ಎಂಬುದನ್ನು ಯಾರೂ ಲೆಕ್ಕವಿಟ್ಟಿರಲಿಕ್ಕಿಲ್ಲ. ಸಮಾರಂಭ ಮುಗಿದು ಪ್ಯಾಕಪ್ ಮಾಡುವ ಹಂತದಲ್ಲಿ ನನಗೂ ಒಂದು ಕ್ಯಾರಿಕೇಚರ್ ಬೇಕಿತ್ತಲ್ಲ ಸಾರ್ ಎಂದು ಸಂಕೋಚದಿಂದಲೇ ಕೇಳಿದ್ದೆ. ನಗುಮುಖದ ಹರಿಣಿ ಕೊಂಚವೂ ಬೇಸರ ಮಾಡಿಕೊಳ್ಳದೆ, ಹೊರಡುವ ಮುನ್ನ ನನ್ನದೊಂದು ಕ್ಯಾರಿಕೇಚರ್ ಕೂಡ ಮಾಡಿಕೊಟ್ಟರು. ತಮಾಷೆಯೆಂದರೆ “ಹರಿಣಿ” ಎಂದೇ ಎಲ್ಲೆಡೆ ಖ್ಯಾತರಾಗಿರುವ ವ್ಯಂಗ್ಯಚಿತ್ರಕಾರರು ಅಸಲಿಗೆ ಹರಿಶ್ಚಂದ್ರ ಶೆಟ್ಟಿ ಎಂದು ನನಗೆ ತಿಳಿದಿದ್ದೇ ಆ ಕಾರ್ಯಕ್ರಮದ ಆಯೋಜನೆಯ ಸಂದರ್ಭದಲ್ಲಿ.

ಅಸಲಿಗೆ ಸಂಘಸಂಸ್ಥೆಗಳನ್ನು ನಡೆಸುವ ಬಗ್ಗೆ ಯಾವ ಪೂರ್ವ ಅನುಭವಗಳೂ ಇಲ್ಲದ ನಾವು ಒಂದು ವರ್ಷದ ಅವಧಿಯಲ್ಲಿ ಹಲವು ಮೌಲಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೆವು. ಮಿತಿಯಲ್ಲಿದ್ದ ಬಜೆಟ್, ಅಪಾರ ಖರ್ಚುಗಳ ಹೊರತಾಗಿಯೂ ನಾಡಿನ ಹಲವಾರು ಖ್ಯಾತನಾಮ ಚಿತ್ರಕಲಾವಿದರನ್ನು ಎನ್.ಐ.ಟಿ.ಕೆ. ಗೆ ಕರೆಸಿ ನಾವು ವರ್ಷವಿಡೀ ಯಶಸ್ವಿ ಶಿಬಿರಗಳನ್ನು ನಡೆಸಿದ್ದೆವು. ನನ್ನೊಂದಿಗೆ ಬಹಳ ಪ್ಯಾಷನೇಟ್ ಆಗಿ ತೊಡಗಿಕೊಂಡಿದ್ದ ವಿದ್ಯಾರ್ಥಿಗಳ ಪುಟ್ಟ ತಂಡವೊಂದು ಅಸಾಧ್ಯವಾದುದನ್ನು ಸಾಧಿಸುತ್ತಿತ್ತು.

ನಮ್ಮೆಲ್ಲರ ಪ್ಯಾಷನ್ ಅದ್ಯಾವ ಮಟ್ಟಿಗಿತ್ತೆಂದರೆ ಖರ್ಚುಗಳ ಹೊರತಾಗಿ ಕಾರ್ಯಕ್ರಮಗಳಿಂದ ಬರುತ್ತಿದ್ದ ಲಾಭವನ್ನು ಒಂದಿಷ್ಟೂ ದುಂದುವೆಚ್ಚ ಮಾಡದೆ, ಮತ್ತೆ ಸಂಪೂರ್ಣವಾಗಿ ತಂಡದ ಭವಿಷ್ಯದ ನಿಧಿಗೇ ಹಾಕಿ, ಹೊಸ ಚಟುವಟಿಕೆಗಳನ್ನು ಆಯೋಜಿಸುವ ಹುಮ್ಮಸ್ಸು ನಮ್ಮಲ್ಲಿ ತುಳುಕುತ್ತಿತ್ತು. ನಮ್ಮ ಈ ತಂಡದ ಪ್ರತಿಭಾವಂತ ಸದಸ್ಯರು ಇಂದು ಜಗತ್ತಿನ ಹಲವು ಮೂಲೆಗಳಲ್ಲಿ ಚದುರಿಹೋಗಿದ್ದಾರೆ.

ಈ ಮಧ್ಯೆ ನಾನು ಹರಿಣಿಯವರಿಗೆ ಆಗಾಗ ಕರೆ ಮಾಡುತ್ತಾ ಚಿತ್ರಕಲೆಯ ಪಟ್ಟುಗಳನ್ನು ಒಂದಿಷ್ಟು ಕಲಿಯುತ್ತಿದ್ದೆ. ಮಂಗಳೂರಿನ ಭಾರತ್ ಮಾಲಿನಲ್ಲಿ ಅಂಗಡಿಯೊಂದರ ಅಂಗಳದಲ್ಲಿ ಕೂತು ನಾವೂ ಕಾಗದ-ಸ್ಕೆಚ್ ಪೆನ್ ಹಿಡಿದು ನೂರಾರು ಕ್ಯಾರಿಕೇಚರ್ ಗಳನ್ನು ಬಿಡಿಸಿದೆವು. ಮಾಲಿನಲ್ಲಿ, ಸುರತ್ಕಲ್ಲಿನ ಸಮುದ್ರತೀರದಲ್ಲಿ ಕೂತು ಲೆಕ್ಕವಿಲ್ಲದಷ್ಟು ಮಂದಿ ಆಸಕ್ತರಿಗಾಗಿ ಹಲವು ಬಗೆಯ ಟ್ಯಾಟೂಗಳನ್ನು ಮೂಡಿಸುತ್ತಿದ್ದೆವು. ಕಾಲೇಜಿನ ಸಾಂಸ್ಕೃತಿಕ ಉತ್ಸವಗಳಿಗಾಗಿ ದಿನರಾತ್ರಿಗಳ ಪರಿವೆಯಿಲ್ಲದೆ ದೈತ್ಯಾಕಾರದ ಕಲಾಕೃತಿಗಳನ್ನು ಸೃಷ್ಟಿಸುತ್ತಿದ್ದೆವು. ಈ ಅವಧಿಯಲ್ಲಿ ಶಾಲಾ ಮಕ್ಕಳಿಗಾಗಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಹಲವು ಪಠ್ಯ ಮತ್ತು ಪಠ್ಯೇತರ ತರಗತಿಗಳನ್ನು ನಡೆಸಿದೆವು. ಪಾಠಗಳನ್ನು ಮಾಡಿದೆವು. ನಾವೂ ಸಾಕಷ್ಟು ಕಲಿತೆವು. ಕಾಲೇಜಿನ ಆರ್ಟಿಸ್ಟ್ ಫೋರಂ ಕ್ಲಬ್ಬಿನಲ್ಲಿ ಓರ್ವ ನಾಯಕನಾಗಿ ಮತ್ತು ಚಿತ್ರಕಲಾವಿದನಾಗಿ ನಾನು ಕಲಿತಿದ್ದು ಹಲವು ಜನ್ಮಗಳಿಗಾಗುವಷ್ಟು ಸಾಕು.

ಈಗ ಓದು ಮತ್ತು ಬರವಣಿಗೆಗಳ ಹೊರತಾಗಿ, ಮತ್ತೊಮ್ಮೆ ನನ್ನನ್ನು ಧ್ಯಾನಸ್ಥ ಸ್ಥಿತಿಗೆ ಕರೆದೊಯ್ಯಬಲ್ಲ ಏಕೈಕ ಚಟುವಟಿಕೆಯೆಂದರೆ ಚಿತ್ರಕಲೆಯೇ. ಹೀಗಾಗಿ ಅಪರೂಪಕ್ಕೊಮ್ಮೆಯಾದರೂ ಆಗಾಗ ಅತ್ತ ಹೊರಳುತ್ತಿರುತ್ತೇನೆ. ದೊಡ್ಡವರಾದೆವು ಎಂಬ ಒಂದೇ ಕಾರಣಕ್ಕೆ ಬಾಲ್ಯದ ಹವ್ಯಾಸಗಳನ್ನು ನಂತರದ ವರ್ಷಗಳಲ್ಲಿ ಕಳಚಿಕೊಳ್ಳುತ್ತಾ ಹೋಗುವುದು ದೊಡ್ಡ ದುರಂತವೇ ಸರಿ. ಇದು ಪ್ರಾಕ್ಟಿಕಲ್ ಆಗಿ ಕೊಂಚ ಕಷ್ಟವೆನಿಸಬಹುದು. ಆದರೆ ಅಸಾಧ್ಯವಂತೂ ಅಲ್ಲ. ಈ ಬಗ್ಗೆ ನಾವು ಸಾಮಾನ್ಯವಾಗಿ ಮುಂದಿಡುವ ಯಾವ ಕುಂಟುನೆಪಗಳೂ ಇದಕ್ಕೆ ನ್ಯಾಯ ನೀಡಲಾರವು. ಇವೆಲ್ಲಾ ಬಹುಷಃ ನಮಗೆ ನಾವೇ ನಿರಂತರ ಹೇಳಿಕೊಳ್ಳುವ ಕಂಫರ್ಟ್ ಝೋನಿನ ಸುಳ್ಳುಗಳು!
ಸಂಸ್ಥೆಯೊಂದರ ಪ್ರಾಜೆಕ್ಟ್ ಒಂದಕ್ಕಾಗಿ ಇತ್ತೀಚೆಗೆ ಕೆಲ ಇಲಸ್ಟ್ರೇಷನ್ ಗಳನ್ನು ಸಿದ್ಧಪಡಿಸುತ್ತಿದ್ದೆ. ಆಗ ಹಳೆಯ ಸವಿನೆನಪುಗಳೆಲ್ಲಾ ಹೀಗೆ ಹಸಿರಾಗಿಬಿಟ್ಟವು.

‍ಲೇಖಕರು Admin

August 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: