ಹಣದ ಬೆಳೆಯ ಹಿಂದಿನ ರಹಸ್ಯ!

ನಾರಾಯಣ ಯಾಜಿ

**

ಖ್ಯಾತ ಹೂಡಿಕೆ ತಜ್ಞ ಹಾಗೂ ಸಾಹಿತಿ ಶರತ್ ಎಂ ಎಸ್ ಅವರ ಅತಿ ಹೆಚ್ಚುಮಾರಾಟವಾಗುತ್ತಿರುವ ಕೃತಿ ‘ದುಡ್ಡು ಬಿತ್ತಿ, ದುಡ್ಡು ಬೆಳೆಯಿರಿ’.

‘ಬಹುರೂಪಿ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಪ್ರಸಿದ್ಧ ಆರ್ಥಿಕ ತಜ್ಞ ಹಾಗೂ ಸಾಹಿತಿ ನಾರಾಯಣ ಯಾಜಿ ಅವರು ಈ ಜನಪ್ರಿಯ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ.

**

“Why we need money?”. ಗೌತಮ ಬುದ್ಧನನ್ನು ಕೇಳಿದರೆ “ಆಸೆಯೇ ದುಃಖಕ್ಕೆ ಕಾರಣ. ಆಸೆಗೆ ಮೂಲ ಕಾರಣವಾದ ಹಣದ ಹಿಂದೆ ಹೋಗಬಾರದು” ಎಂದು ಹೇಳುತ್ತಾನೆ. ಸಿದ್ಧೇಶ್ವರ ಸ್ವಾಮಿಗಳು ಹಣವನ್ನೇ ಮುಟ್ಟುತ್ತಿರಲಿಲ್ಲ. ಅವರ ಜುಬ್ಬಕ್ಕೆ ಕಿಸೆಯೇ ಇಲ್ಲವಾಗಿತ್ತು. ಮಹಾತ್ಮಾ ಗಾಂಧಿಯವರು ಸರಳ ಜೀವನಕ್ಕೆ ಹೆಸರಾದವರು. ಅವರನ್ನು ಬಡತನದಲ್ಲಿಡಲು ಸಾಕಷ್ಟು ಹಣವನ್ನು ಖರ್ಚುಮಾಡಬೇಕಿತ್ತೆನ್ನುವುದು ಅಷ್ಟೇ ಪ್ರಸಿದ್ಧವಾದ ಜೋಕು ಪ್ರಚಲಿತದಲ್ಲಿದೆ. ಜಗತ್ತಿನ ಎಲ್ಲಾ ತತ್ತ್ವಶಾಸ್ತ್ರಜ್ಞರು ಆಧ್ಯಾತ್ಮ ಸಾಧಕರು ಹಣ ಎನ್ನುವ ಮಾರಿಯ ಕುರಿತು ಹೇಳುತ್ತಲೇ ಹಣವನ್ನು ಕೊಪ್ಪರಿಗೆಗಟ್ಟಳೆ ಸಂಗ್ರಹಿಸುತ್ತಿದ್ದಾರೆ. ಅನೇಕ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ನಾನು ಪಾಠ ಮಾಡಲು ಹೋಗುವಾಗ ಮೊದಲ ಪ್ರಶ್ನೆ ಕೇಳುವುದೇ “ನಮಗೆ ಹಣ ಯಾಕೆ ಬೇಕು” ಎನ್ನುವುದು.

ಪ್ರತಿಯೊಬ್ಬರ ಉತ್ತರವೂ ವಿಭಿನ್ನ. ಕೆಲವರಿಗೆ ಬದುಕಲು, ಆಸ್ತಿ ಮಾಡಲು, ಇನ್ನು ಕೆಲವರಿಗೆ ಪ್ರವಾಸಕ್ಕೆ ಹೋಗಲು, ಮಕ್ಕಳ ವಿದ್ಯಾಭ್ಯಾಸಕ್ಕೆ, ಮನೆ ಕಟ್ಟಲು, ದಾನ ಮಾಡಲು ಹೀಗೆ ಹಲವಾರು ಉತ್ತರಗಳು ಬರುತ್ತವೆ. ಆಸ್ತಿ ಮಾಡಿದ ನಂತರವೂ ಹಣ ಯಾಕೆ ಬೇಕು? ಎನ್ನುವ ಮರು ಪ್ರಶ್ನೆ ಹಾಕಿದಾಗ, ಮತ್ತೊಂದು ಉತ್ತರ ಬರುತ್ತದೆ, ಅದಾದ ನಂತರ? ಹೀಗೆ ಮುಂದುವರಿಸಿದಾಗ ಹಣಗಳಿಸಿದ್ದು ಸಾಕು ಎನ್ನುವುದಿಲ್ಲ, ಆದರೆ ನಿರುತ್ತರರಾಗುತ್ತಾರೆ. ಹಣ ನಮಗೆ ಬೇಕಾಗಿರುವುದು ಯಾಕೆ ಎನ್ನುವದಕ್ಕೆ ಸರಳವಾದ ಉತ್ತರ “To make more money” ಇನ್ನಷ್ಟು ಹೆಚ್ಚು ಹಣಗಳಿಸಲು ಹಣ ಬೇಕಾಗಿದೆ. ಒಮ್ಮೆಲೆ ಎಲ್ಲರೂ ಸ್ತಬ್ಧರಾಗಿಬಿಡುತ್ತಾರೆ. ಹಣದ ದಾಹ ತೀರಿತು ಎನ್ನುವುದಿಲ್ಲ. ಏಕೆಂದರೆ ನಮ್ಮ ಅಗತ್ಯಕ್ಕೆ ಮಿತಿಯಿಲ್ಲ. ಅದು ಆಕಾಶಕ್ಕೆ ಹಾಕಿದ ಏಣಿಯಂತೆ. “Mankind has Endless wants”. ಒಂದು ಮುಗಿಯಿತು ಎಂತಾದ ಮೇಲೆ ಅದು ಮತ್ತೊಂದು ಬಯಕೆಗೆ ದಾರಿಮಾಡಿಕೊಡುತ್ತದೆ. ಹಾಗಾಗಿ ಹಣದ ಅಗತ್ಯವಿದ್ದೇ ಇದೆ.

ಈ ಹಿನ್ನೆಲೆಯಲ್ಲಿ ಯಾವಾಗ ಮನುಷ್ಯಜೀವಿ ಪದಾರ್ಥಗಳ ವಿನಿಮಯ (Barter system) ಪದ್ಧತಿಯಿಂದ  ಹಣದ ಮಾಧ್ಯಮಕ್ಕೆ ಹೊರಳಿದನೋ, ಅಂದಿನಿಂದ ಹಣದ ಬೆಳೆ ತೆಗೆಯುವ ವಿಧಾನದ ಅನ್ವೇಷಣೆಯೂ ಪ್ರಾರಂಭವಾಯಿತೆನ್ನಬಹುದು. ಹಣಗಳಿಸಲು ಎರಡು ವಿಧಾನಗಳಿವೆ. ಒಂದು ಕಾನೂನಾತ್ಮಕ ವಿಧಾನ, ಇನ್ನೊಂದು ಅಕ್ರಮ ವಿಧಾನ. ನಾಗರಿಕ ಸಮಾಜದಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ. ಕಾನೂನಿನ ಪರಿಧಿಯಲ್ಲಿಯೇ ಎಲ್ಲವನ್ನೂ ಮಾಡಬೇಕಾಗುತ್ತದೆ. ಜಾಗತಿಕವಾಗಿ ಇಂದು ಎಲ್ಲರನ್ನೂ ಕಾಡುವ ಪ್ರಶ್ನೆ ಹಣಮಾಡುವ ಉದ್ಧೇಶವಿದೆ, ಆದರೆ ಹೇಗೆ ಎಂದು ತಿಳಿದಿಲ್ಲ? ಯಶಸ್ವೀ ಉದ್ದಿಮೆದಾರರನ್ನು ಕಂಡಾಗ “ಅವರದೇನು ಸಾಧನೆ ಬಿಡು, ಕಪ್ಪು ಹಣದ ಕೊಪ್ಪರಿಗೆ” ಎಂದು ಸುಲಭವಾಗಿ ಆಡಿಬಿಡುತ್ತಾರೆ. ಕಾನೂನಿನ ಪರಿಧಿಯೊಳಗೂ ಕಡಿಮೆ ಆದಾಯದ ವ್ಯಕ್ತಿಯೂ ಸಹ  ಕೊಪ್ಪರಿಗೆ ಹಣಮಾಡಬಹುದೆನ್ನುವ ವಿಷಯವನ್ನು ಯಾರಾದರೂ ಹೇಳಿದರೆ ನಂಬುವವರು ಮಾತ್ರ ಕಡಿಮೆಯೇ. ಇದಕ್ಕೆ ಕಾರಣ ‘ಆರ್ಥಿಕ ಅನಕ್ಷರತೆ‘.

ಬ್ಯಾಂಕಿಂಗ್ ಬದುಕಿನ ಮೂವತ್ತೆಂಟು ವರ್ಷಗಳಲ್ಲಿ ಹಣದ ಕನಸನ್ನು ಹೊತ್ತ ಗ್ರಾಹಕರನ್ನು ಕಂಡಿದ್ದೇನೆ. ಆ ಕನಸನ್ನು ನನಸು ಮಾಡಿಕೊಳ್ಳಲು ಯಾರು ಯಾರೋ ಒಡ್ಡುವ ಚೀಟಿಯೋ, ಡಬಲ್ ಆಮಿಷಕ್ಕೋ ಬಲಿಯಾಗಿ ಗೋಳಾಡುವವರನ್ನು ನೋಡಿ ನೊಂದಿದ್ದೇನೆ.  ಈ ಎಲ್ಲದಕ್ಕೆ ಪರಿಹಾರವಾಗಿ ಹೆಚ್ಚಿನ ಪತ್ರಿಕೆಗಳು ಆರ್ಥಿಕ ವಿಷಯಗಳ ಕುರಿತು ಬರೆಯುತ್ತಿವೆ. ಆದರೆ ಇವೆಲ್ಲವೂ ಒಂದು ಮಿತಿಯಲ್ಲಿ ಇದೆ. ಇಂಗ್ಲೀಷಿನಲ್ಲಿ ಆರ್ಥಿಕ ವ್ಯವಹಾರಗಳ ಕುರಿತು ಬೇಕಾದಷ್ಟು ಪುಸ್ತಕಗಳಿವೆ. ಕನ್ನಡದಲ್ಲಿ ತುಂಬಾನೇ ವಿರಳ. ಇಂತಹ ಹೊತ್ತಿನಲ್ಲಿ ಶರತ್ ಎಂ. ಎಸ್. ಇತ್ತೀಚೆಗೆ ಎರಡು ಪುಸ್ತಕಗಳನ್ನು ಹೊರತಂದಾಗ ಅದನ್ನು ಗಮನಿಸದಿರಾಗಲಿಲ್ಲ. ಮೊದಲನೆಯದು ‘ಮನಿಸಿಕ್ರೇಟ್, ಮತ್ತು ಸ್ಟಾಕ್ ಮಾರ್ಕೆಟ್ ಸೀಕ್ರೆಟ್’ ಶೇರು ಮಾರುಕಟ್ಟೆಯ ಕುರಿತು ಮಾಹಿತಿಯನ್ನು ಸರಳವಾಗಿ ಹೇಳಿದ ಕೃತಿ. ಆ ಕೃತಿಯು ಇದಾಗಲೇ ಹತ್ತನೇ ಮುದ್ರಣದತ್ತ ದಾಪುಗಾಲು ಹಾಕುತ್ತಿರುವುದು ಕನ್ನಡದವರೂ ಗುಣಮಟ್ಟದ ಕೃತಿಗಳನ್ನು ಬಯಸುತ್ತಾರೆ ಎನ್ನುವುದಕ್ಕೆ ಸಾಕ್ಷಿ,

ಇದೀಗ ಶರತ್ ಅವರು ಮತ್ತೊಮ್ಮೆ ಹಣಗಳಿಸುವ ಸುಲಭ ವಿಧಾನಗಳೊಂದಿಗೆ ಕನ್ನಡ ಸಾಹಿತ್ಯಲೋಕವನ್ನು ಹೊಸ ದಿಕ್ಕಿನತ್ತ ಒಯ್ಯುತ್ತಿದ್ದಾರೆ. ಅವರ ಕೃತಿ “ದುಡ್ಡು ಬಿತ್ತಿ, ದುಡ್ಡು ಬೆಳೆಯಿರಿ- ಮ್ಯೂಚುಯಲ್ ಫಂಡ್ ಮ್ಯಾಜಿಕ್” ಮತ್ತೊಮ್ಮೆ ಬಿಡುಗಡೆಗೆ ಮುನ್ನವೇ ಓದುಗರ ಕಣ್ಮಣಿಯಾಗಿದೆ. ಸಾಂಪ್ರದಾಯಿಕವಾದ ಬ್ಯಾಂಕ್ ಠೇವಣಿ ಸುರಕ್ಷಿತವಾದ ಹೂಡಿಕೆಯಾದರೂ ಅದರಲ್ಲಿ ಹಣದುಬ್ಬರವನ್ನು ತಡೆಯುವದಕ್ಕೆ ಸಾಧ್ಯವಾಗುತ್ತಿಲ್ಲ. ಇಂದು ಬ್ಯಾಂಕುಗಳೂ ಸಹ ನಿಖರ ಠೇವಣಿಗಿಂತ ಉಳಿತಾಯ ಖಾತೆಗೆ ಒತ್ತು ಕೊಡುತ್ತಿವೆ. ಸಾಲದ್ದಕ್ಕೆ ಠೇವಣಿಯ ಬಡ್ಡಿವರ್ಷಕ್ಕೆ ರೂ. 40000/- ದಾಟಿದರೆ ಅದರ ಮೇಲೆ ಕರವನ್ನು ಪ್ರತ್ಯೇಕವಾಗಿ ಕೊಡಬೇಕು. 

ಶೇರು ಮಾರುಕಟ್ಟೆ ಎನ್ನುವುದು ತುಂಬಾ ಕ್ಲಿಷ್ಟಕರವಾದ ಲೋಕ. ಇಲ್ಲಿ ಎಲ್ಲರೂ ಪಿಸುಮಾತಿನಲ್ಲಿಯೇ ಹೂಡಿಕೆದಾರರ ಹಾದಿಯನ್ನು ತಪ್ಪಿಸುತ್ತಾರೆ. ಹೂಡಿಕೆ ಸುರಕ್ಷಿತವಾಗಿ ಇರಬೇಕು, ಆದರೆ ಅದರ ಬೆಳವಣಿಗೆ ಹಣದುಬ್ಬರವನ್ನು ಮೀರಿ ಸುಮಾರು ನಾಲ್ಕರಿಂದ ಐಸು ಪ್ರತಿಶತವಾದರೂ ಮೇಲಿರಬೇಕು ಎನ್ನುವವರಿಗೆ ಇದೊಂದು ಅತ್ಯುಪಯುಕ್ತವಾದ ಮಾರ್ಗದರ್ಶಿಯಾಗುತ್ತದೆ. ಅವರು ಈ ಕೃತಿಯಲ್ಲಿ “ಪರಸ್ಪರ ನಿಧಿ- Mutual Fund” ಯನ್ನು ಕೇಂದ್ರಿಕರಿಸಿಕೊಂಡು ಬರೆದಿದ್ದಾರೆ. ಮೊದಲ ಮಾತಿನಲ್ಲಿಯೇ ಅವರು ಬಿಲ್ ಗೇಟ್ಸ್ ಹೇಳಿದ “ನೀವು ಬಡವರಾಗಿ ಹುಟ್ಟಿದರೆ ಅದು ನಿಮ್ಮ ತಪ್ಪಲ್ಲ, ಆದರೆ ಬಡವರಾಗಿಯೇ ಸಾಯುವುದು ನಿಮ್ಮ ತಪ್ಪು” ಎನ್ನುವ ಪ್ರಸಿದ್ಧವಾದ ವಾಕ್ಯವನ್ನು ಎತ್ತಿಕೊಂಡು ಈ ಕೃತಿಯ ಉದ್ಧೇಶವನ್ನು ಸ್ಪಷ್ಟಪಡಿಸಿಬಿಟ್ಟಿದ್ದಾರೆ. ಬ್ಯಾಂಕ್ ಠೇವಣಿಯ ನಂತರ ಅತ್ಯಂತ ಸುರಕ್ಷಿತ ವಿಧಾನವೆಂದರೆ ಅದು ಪರಸ್ಪರ ನಿಧಿ.

ಒಂದು ಕಾಲದಲ್ಲಿ ಭಾರತದಲ್ಲಿ ಕೇವಲ UTI ಮಾತ್ರ ಪರಸ್ಪರ ನಿಧಿಗಳಲ್ಲಿ ಹೂಡಿಕೆ ಮಾಡುತ್ತಿತ್ತು. ಈಗ ಸುಮಾರು ಮೂವತ್ತೆಂಟು ವರ್ಷಗಳ ಹೀಂದ ಅವರು ತಂದ “Master share” ಹೂಡಿಕೆ ಮಾಡಿದವರಿಗೆ ಅದು ಕೊಪ್ಪರಿಗಟ್ಟಳೆ ಹಣವನ್ನು ಸೃಷ್ಟಿಸಿದೆ. ಹರ್ಷದ್ ಮೆಹ್ತಾನ ಹಗರಣವನ್ನೂ ಸಹ ಎದುರಿಸಿ ಯಶಸ್ವಿಯಾದ ನಿಧಿಯದು. ಅದಾದ ಬಳಿಕ ಇಂದು ಮಾರುಕಟ್ಟೆಯಲ್ಲಿ ಬಹಳಷ್ಟು ಮ್ಯೂಚುಯಲ್ ಫಂಡಿನ ಹೂಡಿಕೆಯ ಕಂಪನಿಗಳಿವೆ. ಸಂಬಳದ ಹಣದಲ್ಲಿ ತೆರಿಗೆ ಉಳಿತಾಯದ ವಿಷಯದಲ್ಲಿಯೂ ಫಂಡ್ ಗಳಿವೆ. ದೀರ್ಘಾವಧಿಯಲ್ಲಿ ವಾರ್ಷಿಕವಾಗಿ ಪ್ರತಿಶತ  ಹದಿನೈದರಿಂದ ಇಪ್ಪತ್ತು ಶೇಕಡಾದಷ್ಟು ಏರಿಕೆಯನ್ನು ಕಂಡಿವೆ. ಮ್ಯೂಚುಯಲ್ ಫಂಡ್ ಎಂದರೆ ಯಾರು ಬೇಕಾದರೂ ಸುಲಭವಾಗಿ ಹೂಡಿಕೆ ಮಾಡಬಹುದಾದ ಮಾಧ್ಯಮವಾದರೂ ಸರಿಯಾದ ತಿಳುವಳಿಕೆ ಇಲ್ಲದಿದ್ದರೆ. ಹಾಕಿದ ಬಂಡವಾಳವೂ ಕರಗಿಹೋಗುವ ಅಪಾಯಗಳಿವೆ.

ಕೆಲ ವರ್ಷಗಳ ಹಿಂದೆ ರಿಯಲ್ ಎಷ್ಟೇಟ್ ಕುರಿತಾದ ನಿಧಿಯೊಂದು ಬಂದಿತ್ತು. ಅದು ಅಸಲನ್ನೂ ಸಹ ಬಾಚಿಕೊಂಡು ಹೋಗಿದೆ. ಹಾಗಾಗಿ ಒಂದು ಪ್ರಾಥಮಿಕ ಜ್ಞಾನವೆನ್ನುವುದು ಹೂಡಿಕೆದಾರನಿಗೆ ಅತ್ಯಗತ್ಯ. ಮ್ಯೂಚುಯಲ್ ಫಂಡಿನ ಪ್ರತಿನಿಧಿಗಳು ಹೂಡಿಕೆದಾರರಿಗೆ ಕೊಡುವ ಮಾಹಿತಿಯಲ್ಲಿ ಅವರಿಗೆ ಕಮಿಷನ್ ಯಾವುದರಲ್ಲಿ ಹೆಚ್ಚು ಬರುತ್ತದೆ ಎನ್ನುವುದರ ಕಡೆ ಆಸಕ್ತಿ ಇರುತ್ತದೆ. ಇದರಲ್ಲಿಯೂ ರೆಗ್ಯುಲರ್ ಮತ್ತು ಡೈರೆಕ್ಟ್ ಎನ್ನುವ ಎರಡು ವಿಧಗಳಿವೆ ಎನ್ನುವದನ್ನು ತಿಳಿಸಿದ ವಿಷಯ ಬಹಳ ಮುಖ್ಯವಾಗುತ್ತದೆ. ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಇವೆರಡರ ವೆತ್ಯಾಸವನ್ನು ತಿಳಿಸುವ ಚಾರ್ಟ್ ಸಹ ಇಲ್ಲಿದೆ. ಸುಮಾರು 11% ಜಾಸ್ತಿ ಪ್ರತಿಫಲ ಡೈರೆಕ್ಟ್ ಪ್ಲಾನಿನಲ್ಲಿ ಸಿಗುತ್ತದೆ ಎನ್ನುವ ವಿಷಯ ಪ್ರತಿಯೊಬ್ಬನೂ ತಿಳಿಯುವುದು ಉತ್ತಮ.

ಈ ಪುಸ್ತಕದಲ್ಲಿ ಒಟ್ಟೂ ಮುವತ್ತೆಂಟು ಅಧ್ಯಾಯಗಳಿವೆ. ಇವುಗಳನ್ನು ಯಶಸ್ವೀಯಾಗಿ ಹಣದ ಬೆಳೆ ಪಡೆಯಲು ಅಗತ್ಯವಿರುವ ಮೂವತ್ತೆಂಟು ಮೆಟ್ಟಿಲುಗಳು ಎನ್ನಬಹುದಾಗಿವೆ. ತಿಂಗಳಿಗೆ ಕೇವಲ ಐದುನೂರರು ರೂಪಾಯಿಗಳಿಂದ ತೊಡಗಿ ಅವರವರಸಾಮರ್ಥ್ಯಕ್ಕೆ ತಕ್ಕಂತೆ ಹೂಡಿಕೆ ಮಾಡುವ ವಿಷಯ ಹೆಚ್ಚಿನವರಿಗೆ ಅರಿವಿಲ್ಲ. ಏಕ ಗಂಟಿನಲ್ಲಿ ಹೂಡಿಕೆ ಮಾಡುವ ಪ್ರಾಚೀನ ವಿಧಾನಗಳಿಗಿಂತ ಪ್ರತಿ ತಿಂಗಳೂ ಬ್ಯಾಂಕಿನ ಆರ್. ಡಿ.ಯಂತೆ ಹೂಡಿಕೆ ಮಾಡಬಹುದಾದ ಎಸ್. ಆಯ್. ಪಿ. ಯ ಕುರಿತು ಮಹತ್ವದ ವಿಧಾನವನ್ನು ತಿಳಿಸಿದ್ದಾರೆ. ಬ್ಯಾಂಕಿನಲ್ಲಿ ಇಟ್ಟ ಹಣದ ಮುಖ್ಯವಾದ ಅನುಕೂಲವೆಂದರೆ ಅದರ ನಗದೀಕರಣ. ಅವಧಿಠೇವಣಿಯನ್ನೂ ಸಹ ಯಾವಾಗ ಬೇಕೋ ಆವಾಗ ನಗದೀಕರಿಸಿಕೊಳ್ಳಬಹುದಾದ ಅನುಕೂಲ (Withdrawal on demand) ಬ್ಯಾಂಕಿನಲ್ಲಿದೆ.

ಪರಸ್ಪರ ನಿಧಿಯಲ್ಲಿ ಇದು ಸಾಧ್ಯವೇ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಾಧ್ಯವಿದೆ ಎನ್ನುವುದನ್ನು ಸೋದಾರಣೆಯಾಗಿ ಕೊಡುತ್ತಾರೆ. ಕೇವಲ ತೆರಿಗೆಯ ಉಳಿತಾಯಕ್ಕಾಗಿ ಹೂಡಿಕೆ ಮಾಡಿರುವುದನ್ನು ELSS Fund ಗಳಲ್ಲಿ ಮೂರು ವರ್ಷಗಳ ವರೆಗಿನ ನಗದೀಕರಣಕ್ಕೆ ನಿರ್ಬಂಧವಿದೆ. ಮ್ಯೂಚುಯಲ್ ಫಂಡಿನಲ್ಲಿರುವ ಆಯ್ಕೆಗಳಾದ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಫಂಡ್ಸ್, ಮಲ್ಟಿಕ್ಯಾಪ್ಸ್ ಗಳಿಂದ ಹಿಡಿದು ವಿದೇಶಿ ಮ್ಯೂಚುಯಲ್ ಫಂಡಿನವರೆಗೂ ಶರತ್ ಹೇಳದೇ ಇರುವ ವಿಷಯಗಳಿಲ್ಲ. ಶರತ್ ಅವರು ಓರ್ವ ಮಧ್ಯಮವರ್ಗದ ಯುವಕ. ಅವರ ಬದುಕಿನ ಕನಸನ್ನು ನನಸು ಮಾಡಲು ಯಾವೆಲ್ಲ ಸವಾಲನ್ನು ಎದುರಿಸಬೇಕಾಗಿದೆ ಎನ್ನುವದರ ಕುರಿತು ಆಲೋಚಿಸಿ ಅದನ್ನು ಬರಹರೂಪದಲ್ಲಿ ನೀಡಿದ್ದಾರೆ. ಅದೇ ಹೊತ್ತಿನಲ್ಲಿ ಇವೆಲ್ಲವೂ ಶೇರು ಮಾರುಕಟ್ಟೆಯನ್ನು ಆಧರಿಸುವುದರಿಂದ ಶೇರು ಮಾರುಕಟ್ಟೆಯ ಏರುಪೇರುಗಳು ಫಂಡಿನ ಹೂಡಿಕೆಯನ್ನೂ ನಿರ್ಧರಿಸುತ್ತವೆ ಎನ್ನುವ ಎಚ್ಚರಿಕೆಯನ್ನು ಹೇಳಲು ಮರೆಯುವುದಿಲ್ಲ.

ದೀರ್ಘಾವಧಿಯ ಅಂದರೆ ಮಕ್ಕಳ ವಿದ್ಯಾಭಾಸ, ಮದುವೆ, ನಿವೃತ್ತಿ ಮುಂತಾದ ಅಗತ್ಯಗಳಿಗೆ ಮನಸ್ಸನ್ನು ಇಟ್ಟುಕೊಂಡು ಹೂಡಿಕೆ ಮಾಡಬೇಕು ಎನ್ನುವ ಕಿವಿಮಾತುಗಳನ್ನು ಆಗಾಗ ಹೇಳುತ್ತಲೇ ಬಂದಿದ್ದಾರೆ. ಇಂದಿನ ಆಯ್ ಟಿ ತರುಣರನ್ನು ಲಕ್ಷದಲ್ಲಿರಿಸಿ ಕೊಂಡು ಅವರು ಹೇಳುವ FIRE – Financial Independence retire early ನಿಧಿಯ ಕುರಿತು ಇದು ತನಕ ಯಾವ ಹೂಡಿಕೆ ತಜ್ಞನೂ ಸಹ ಇಷ್ಟು ಸ್ಪಷ್ಟವಾಗಿ ಹೇಳಿಲ್ಲ. ಮತ್ತೊಂದು ಆಸಕ್ತಿ ವಿಷಯಗಳು ಬ್ಯಾಂಕಿನಲ್ಲಿ ಅವಧಿ ಠೇವಣಿಯಲ್ಲಿ ನೀಡುವ ತಿಂಗಳ ತಿಂಗಳ ಬಡ್ಡಿಯಂತೆ ಮ್ಯೂಚುಯಲ್ ಫಂಡಿನಲ್ಲಿಯೂ ಸಹ SWP–Systematic Withdrawal Plan ಗಳ ಅನುಕೂಲತೆ ಇರುವುದು. ಶರತ್ ಅವರ ಎರಡು ಪುಸ್ತಕಗಳಲ್ಲಿ ಅವರು ಮಾರುಕಟ್ಟೆಯ ತಂತ್ರಗಳನ್ನು ತನಗೇನೋ ಗೊತ್ತಿದೆ, ಓದುಗರಿಗೆ ಅದನ್ನು ತಿಳಿಸುವುದರ ಮೂಲಕ ಪರೋಕ್ಷವಾಗಿ ತನ್ನದೇ ಯಾವುದೋ ಒಂದು ಟ್ರೇಡಿಂಗ್ ಅಂಗಣಕ್ಕೆ ಓದುಗರನ್ನು ಸೆಳೆಯುತ್ತಿಲ್ಲ. ಮದ್ಯಮ ವರ್ಗದ ಜನರ ಸಿರಿವಂತಿಕೆಯ ಕನಸನ್ನು ನನಸು ಮಾಡುವುದು ಹೇಗೆ?ಎನ್ನುವುದನ್ನು ಓರ್ವ ಗೆಳೆಯನ ಹಾಗೇ ಇಲ್ಲಿ ಹೇಳಿದ್ದಾರೆ. ಕೊನೆಯಲ್ಲಿ ರಿಯಲ್ ಎಸ್ಟೇಟ್ ಫಂಡ್ ಮತ್ತ್ ಗೋಲ್ಡ್ ಬಾಂಡ್ ಕುರಿತೂ ಬಿಟ್ಟಿಲ್ಲ.

ತಂದೆಯಿಂದ ಕೇವಲ ಐದು ಸಾವಿರ ರೂಪಾಯಿ ಪಡೆದ ರಾಕೇಶ ಜುಂಝುನವಾಲಾ ಹೂಡಿಕೆಯನ್ನು ಜತನದಿಂದ ವಿನಿಯೋಗಿಸಿ ಮೂವತ್ತೈದು ಸಾವಿರ ಕೋಟಿ ರೂಪಾಯಿಯವರೆಗಿನ ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದ ಸಂಗತಿ ನಮ್ಮ ಕಾಲದಲ್ಲಿಯೇ ಆಗಿದೆ. ಹರ್ಷದ್ ಮೆಹ್ತಾ ಮತ್ತು ರಾಕೇಶ್ ಜುಂಝುನ್ ವಾಲಾ ಈ ಇಬ್ಬರು ಎರಡು ಧ್ರುವಗಳು. ಮೊದಲನೆಯವ ಹಣದ ದುರಾಸೆಗೆ ಬಿದ್ದು ಶೇರು ಮಾರುಕಟ್ಟೆಯ, ಬ್ಯಾಂಕಿಂಗ್ ವ್ಯವಸ್ಥೆಯ ಲೋಪಗಳನ್ನು ಬಳಸಿ ಏರಿದವ, ನಂತರ ಜಾರಿ ಬಿದ್ದು ಹೇಳ ಹೆಸರಿಲ್ಲದೇ ಹೋದ. ಎರಡನೆಯವರು ಕಾನೂನಾತ್ಮಕವಾಗಿ ಹೂಡಿಕೆಯಲ್ಲಿ ಹಣವನ್ನು ಗಳಿಸಬಹುದು ಎಂದು ಇತರರಿಗೆ ದಾರಿ ತೋರಿಸಿದ ಭಾರತದ ವಾರೆನ್ ಬಫೆಟ್. ಝಿರೋಧಾದ ನಿತಿನ್ ಕಾಮತ್ ಅವರೂ ಸಹ ನಮ್ಮೆದುರು ಮಾದರಿಯಾಗಿದ್ದಾರೆ.

ಇಂದು ಭಾರತದಲ್ಲಿ ಒಟ್ಟು ಬ್ಯಾಂಕ್ ಖಾತೆ ಸುಮಾರು 225 ಕೋಟಿಗೆ ತಲುಪಿದೆ. ಶೇರು ಮಾರುಕಟ್ಟೆಯಲ್ಲಿ ಒಟ್ಟಿಗೆ ಡಿಮ್ಯಾಟ್ ಹೊಂದಿರುವವರ ಸಂಖ್ಯೆ 14.39 ಕೋಟಿ ಡಿಮ್ಯಾಟ್ ಖಾತೆಗಳಿವೆ. ಅವುಗಳಲ್ಲಿ ವಹಿವಾಟು ನಡೆಸುವವರ ಸಂಖ್ಯೆ 3 ಕೋಟಿಯನ್ನೂ ದಾಟಿಲ್ಲ. ಇದಕ್ಕೆ ಕಾರಣ ಶೇರು ಮಾರುಕಟ್ಟೇ ಎಂದರೆ ಲಾಟರಿಗಿಂತಲೂ ಬೇಗ ಹಣ ಮಾಡಬಹುದೆಂದು ಬಂದು ಹಣ ಹೂಡಿ ಕಳೆದುಕೊಂಡು ಮಾಯವಾದವರೇ ಹೆಚ್ಚು. ಇದಕ್ಕೆ ಹೋಲಿಸಿದರೆ  ಮ್ಯೂಚುವಲ್ ಫಂಡನಲ್ಲಿ ಹೂಡಿಕೆದಾರರ ಸಂಖ್ಯೆ  4 ಕೋಟಿಯನ್ನು ದಾಟಿದೆ. ಒಟ್ಟೂ ಹೂಡಿಕೆಯ ಮೊತ್ತ 55,77,900 ಕೋಟಿರೂಪಾಯಿಯನ್ನು ದಾಟಿದೆ. ಬ್ಯಾಂಕಿನ ಒಟ್ಟೂ ಠೇವಣಿಯ ಮೊತ್ತ 180.44 ಲಕ್ಷ ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಪರಸ್ಪರ ನಿಧಿಯ ಹೂಡಿಕೆಯ  ಅನುಪಾತ ಕಡಿಮೆ ಇದೆ.

ಆದರೂ ವರ್ಷದಿಂದ ವರ್ಷಕ್ಕೆ ಅಗಾಧವಾಗಿ ಬೆಳೆಯುತ್ತಿರುವಂತೆ ಅದಕ್ಕೆ ತಕ್ಕಂತೆ ತಿಳುವಳಿಕೆ ಕೊಡುವ ಕೃತಿಗಳು ಕಡಿಮೆಯೇ. ಕನ್ನಡದಲ್ಲಿಯಂತೂ ಇಲ್ಲವೇ ಇಲ್ಲ ಎನ್ನಬಹುದು. “ಮ್ಯೂಚುವಲ್ ಫಂಡ್ ಸರಿ ಇದೆ” ಎನ್ನುವ ಜಾಹಿರಾತು ಏನನ್ನು ಹೇಳುತ್ತಿದೆ ಎನ್ನುವುದು ಯಾರಿಗೂ ಅರ್ಥ ಆಗುತ್ತಿಲ್ಲ. ಶರತ್ ವಿಸ್ತಾರ ಮನಿಯಲ್ಲಿ  ಆರ್ಥಿಕ ಸಾಕ್ಷರತೆಯ ವಿಡಿಯೋಗಳ ಮೂಲಕ ಕನ್ನಡದಲ್ಲಿ ಇಲ್ಲದ ಒಂದು ಕೊರತೆಯನ್ನು ನೀಗುವ ಪ್ರಯತ್ನವನ್ನು ಮಾಡುತ್ತಿದ್ದಾರೆ, ಈ ಕೃತಿ ಹೂಡಿಕೆದಾರರಾಗಲು ಮಾತ್ರವಲ್ಲ, ಮ್ಯೂಚುವಲ್ ಫಂಡ್ ವಿತರಕರಾಗಲು NISM – Series V ಎನ್ನುವ ಪರೀಕ್ಷೆಯನ್ನು ಉತ್ತಿರ್ಣರಾಗುವವರಿಗೂ ಅತ್ಯಗತ್ಯವಾದ ಮಾರ್ಗದರ್ಶಿಯಾಗಿದೆ. ಏನನ್ನು ಬಿತ್ತುತ್ತೇವೆಯೋ ಅದನ್ನೇ ಪಡೆಯುತ್ತೇವೆ. ಬಿತ್ತುವ ಜಾಗದ ಕುರಿತು ಮಾಹಿತಿ ಸರಿಯಾಗಿ ಇರಬೇಕಷ್ಟೆ. ಶರತ್ ಎಂ. ಎಸ್. ಅವರ ಪ್ರಯತ್ನ ಈ ನಿಟ್ಟಿನಲ್ಲಿದೆ.

ವಿನ್ಯಾಸ ಮತ್ತು ಮುದ್ರಣವನ್ನು ಅಷ್ಟೇ ಚನ್ನಾಗಿ ‘ಬಹುರೂಪಿ’ ಪ್ರಕಾಶನದವರು ರೂಪಿಸಿದ್ದಾರೆ. ಜಿ. ಎನ್. ಮೋಹನ್ ಅವರೂ ಅಭಿನಂದನಾರ್ಹರು.

| ಈ ಲೇಖನ ಈ ಮೊದಲು ‘ವಿಜಯ ಕರ್ನಾಟಕ’ದಲ್ಲಿ ಪ್ರಕಟವಾಗಿದೆ |

‍ಲೇಖಕರು Admin MM

May 14, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: