
ಗೊರೂರು ಶಿವೇಶ್
45 ವರ್ಷಗಳ ಹಿಂದೆ ಹಾಸನದ ಜಾತ್ರೆಗೆ ಬರಲು ನಮಗಿದ್ದ ವಿಶೇಷ ಆಕರ್ಷಣೆಗಳಲ್ಲಿ ನಾಟಕಗಳು ಕೂಡಾ ಒಂದು. ರಾಜಕೀಯ ವಿಡಂಬನೆಯ ನಾಟಕಗಳಿಗೆ ಹೆಸರಾಗಿದ್ದ ಮಾಸ್ಟರ್ ಹಿರಣಯ್ಯನವರ ನಾಟಕಗಳು, ʻಕೊಂಡು ತಂದ ಗಂಡʼ, ʻಮುದುಕನ ಮದುವೆʼ, ʻಮಲಮಗಳುʼ ಮುಂತಾಗಿ ಸಾಮಾಜಿಕ ಹಾಸ್ಯನಾಟಕಗಳಿಗೆ ಹೆಸರಾದ ಉತ್ತರ ಕರ್ನಾಟಕದ ಕಂಪನಿ ನಾಟಕಗಳು, ವಿಭಿನ್ನ ಅಭಿರುಚಿಯ ರಂಗಾಸಕ್ತರನ್ನು ಗಮನ ಸೆಳೆಯುತ್ತಿದ್ದರೆ, ಇವುಗಳ ನಡುವೆ ತಣ್ಣನೆ ಕ್ರಾಂತಿ ಮಾಡಿದ ರಂಗಮಂದಿರವೊಂದು ನನ್ನನ್ನು ಸೆಳೆದಿತ್ತು. ವಿವೇಕ ವೇದಿಕೆ ಹೆಸರಿನ ಆ ರಂಗಮಂದಿರದಲ್ಲಿ ನಾನು ನೋಡಿದ ನಾಟಕ ʻರಾಹುಚಂದ್ರʼ. ಕುರೂಪ ಮೊಗದ, ಆದರೆ ಸುಂದರ ಮನಸಿನ ತರುಣನ ಕುರಿತಾದ ನಾಟಕವದು.
ಭಾವಪರವಶತೆಯ ಅನೇಕ ದೃಶ್ಯಗಳನ್ನೊಳಗೊಂಡಿದ್ದ ನಾಟಕ, ಸಂಗೀತ ಪ್ರಧಾನವಾಗಿದ್ದು, ಅದರ ಹಾಡುಗಳು ಹೃದಯ ತಟ್ಟುತ್ತಿದ್ದವು. ʻಆಸೆನೆ ಮನ್ಸುಂಗೆ ದುಃಖದುಃಖದ ಕಥೆಗೆ ಮೂಲʼ, ʻಚಾಪೆ ಇದ್ದಷ್ಟು ಚಾಚ್ಕಬೇಕು ಮನ್ಸ ನಿನ್ನೀ ಕಾಲʼ ಎಂಬ ಗೀತೆ, ಮತ್ತೊಂದು ʻಹುಟ್ಟದೊಕ್ ಒಂದು ಚಿಂತೆ, ಸಾಯೋದಕ್ಕು ಒಂದು ಚಿಂತೆ, ಈ ಲೋಕನೆ ಒಂದು ಚಿಂತೆ ತುಂಬಿದ ಸಂತೆ. ನಾವ್ ಸಂತೆಗೆ ಬಂದೋವ್ರಂತೆ, ಅಳ್ತಾ ಕುಂತ್ರೆ ಹೆಂಗಂತೆ, ನಗ್ತಾ ನಗ್ತಾ ಕಂತೆ ಒಗಿಬೇಕಂತೆʼ.
ಮುಂದೆ ಈ ಗೀತೆಗಳು ರಂಗಾಸಕ್ತರಲ್ಲಿ ಎಷ್ಟು ಜನಪ್ರಿಯವಾದವೆಂದರೆ ನಮ್ಮೂರಿನಲ್ಲಿ ಆಡುತ್ತಿದ್ದ ಸಾಮಾಜಿಕ ನಾಟಕಗಳ ನಡುನಡುವೆ ನಟ ಮಲ್ಲಪ್ಪದೂರ ಈ ಹಾಡುಗಳನ್ನು ಹಾಡಿ ಸಾಕಷ್ಟು ಜನಪ್ರಿಯತೆ ಗಳಿಸಿದ. ಅದೇ ವಿವೇಕರಂಗ ವೇದಿಕೆಯಿಂದ ʻರೈತಜೀವಿʼ, ʻಜೋಕುಮಾರಸ್ವಾಮಿʼ ನಾಟಕಗಳು ಪ್ರದರ್ಶನಗೊಂಡು ಪ್ರತಿದಿನ ನಾಟಕದ ಪ್ರಚಾರಕ್ಕಾಗಿ ಆ ನಾಟಕಗಳ ಗೀತೆಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ತಮಟೆ ಬಡಿದುಕೊಂಡು ರಂಗಗೀತೆ ಹಾಡುತ್ತಾ ಅದೇ ತಂಡದಲ್ಲಿದ್ದ ಗಂಗಾಚರಣ್ ಮುಂತಾದವರು ಹಾಡುತ್ತಾ ಹೋಗುತ್ತಿದ್ದದ್ದು ನೆನಪಿಗೆ ಬರುತ್ತದೆ. ಹೀಗೆ ನಾಟಕದ ರಚನೆ, ರಂಗನಿರ್ದೇಶನ, ಸಂಗೀತ ನಿರ್ದೇಶನದ ಮೂಲಕ ಆ ಕಾಲಕ್ಕೆ ಗಮನಸೆಳೆದವರು ಹಂಸಲೇಖ.
ಅದೇ ಸಮಯದಲ್ಲಿ ʻತ್ರಿವೇಣಿʼ ಚಿತ್ರದ ಗೀತೆಯೊಂದು ಆಕಾಶವಾಣಿಯಲ್ಲಿ ಮೂಡಿಬರುತ್ತಿತ್ತು. ʻನೀನಾ ಭಗವಂತ ಜಗದುಪಕರಿಸಿ, ನನಗಪಕರಿಸೊ, ಜಗದ್ದೊಳ್‍ದ್ಧಾರಕ ನೀನೇನಾʼ. ಅಷ್ಟು ಪರಿಚಯವಿಲ್ಲದ ಬಾಲಕೃಷ್ಣ ಎಂಬುವವರು, ಹಾಡಿದ ಗೀತೆ ಸಾಕಷ್ಟು ಜನಪ್ರಿಯವೂ ಆಗಿತ್ತು. ಅದು ಹಂಸಲೇಖಣಿಯಿಂದ ಮೂಡಿಬಂದ ಗೀತೆಯೆಂದು ತಿಳಿದ ಮೇಲೆ ಅಭಿಮಾನ ಮೊಳೆಯಿತು. ಗಂಗರಾಜು ಎಂಬ ಹೆಚ್ಚು ಓದದ, ತಂದೆಯ ಪ್ರಿಂಟಿಂಗ್ ಪ್ರೆಸ್‍ಗೆ ಬರುತ್ತಿದ್ದ ಲಾವಣಿಗಳನ್ನು ಓದುತ್ತಾ ಕವಿಯಾಗಿ, ನಾಟಕಕಾರನಾಗಿ ಬೆಳದು ಗುರುಗಳಿಂದ ಪಡೆದ swan ಪೆನ್ನನ್ನು ಹಂಸಲೇಖನನ್ನಾಗಿ ಕಾವ್ಯನಾಮವಾಗಿರಿಸಿಕೊಂಡು, ಮುಂದೆ ಕನ್ನಡ ಚಲನಚಿತ್ರ ಸಂಗೀತ ಸಾರ್ವಭೌಮನಾಗಿ ಬೆಳದು ನಿಂತಿದ್ದು ಇತಿಹಾಸ.

ನಂಜನಗೂಡಿನಲ್ಲಿ ಅವರೇ ಕಷ್ಟಪಟ್ಟು ಕಟ್ಟಿದ್ದ ಥೇಟರ್ ಬೆಂಕಿಗೆ ತುತ್ತಾಗಿ ಸಂಕಷ್ಟವನ್ನು ಎದುರಿಸಿ, ಮುಂದೆ ಚಲನಚಿತ್ರರಂಗ ಪ್ರವೇಶಿಸಿ ʻಹೆಣ್ಣೆ ನಿನಗೇನು ಬಂಧನʼ ಚಿತ್ರಕ್ಕೆ ಗೀತೆರಚನೆ, ಸಂಗೀತ ಮಾಡಿ ಗಮನಸೆಳೆದರೂ ತಿರುವು ಸಿಕ್ಕಿದ್ದು ರವಿಚಂದ್ರನ್ ಸಾಂಗತ್ಯ ದೊರಕಿದ ನಂತರವೆ. ʻನಾನು ನನ್ನ ಹೆಂಡ್ತಿʼ ಚಿತ್ರದ ಸಂಗೀತ ನಿರ್ದೇಶನ ಶಂಕರ್ ಗಣೇಶ್‍ರದ್ದಾದರೂ ಆ ಚಿತ್ರದ ʻಯಾರೇ ನೀನು ಚೆಲುವೆʼ ಹಾಗೂ ʻಕರುನಾಡ ತಾಯಿ ಸದಾ ಚಿನ್ಮಯಿʼ ಗೀತರಚನೆ ಹಂಸಲೇಖರದ್ದೇ. ಆ ಎರಡು ಗೀತೆಗಳು ಪ್ರೇಮಗೀತೆಯ ಜೊತೆಗೆ ದೇಶಭಕ್ತಿ ಗೀತೆಯನ್ನು ಸಮರ್ಥವಾಗಿ ರಚಿಸಬಲ್ಲರು ಎನ್ನುವುದಕ್ಕೆ ಮುನ್ನುಡಿಯಾದವು. ʻಹುಣ್ಣಿಮೆ ರಾತ್ರಿಯಲಿ, ತಿಂಗಳ ಬೆಳಕಿನಲಿ ಚಂದ್ರನ ಮೇಲೊಂದು ಕಾವ್ಯ ಕಟ್ಟಲು ಏಕಾಂತದಲ್ಲಿದ್ದೆ, ಮೇಲೆ ನೋಡಿದರೆ ಅಲ್ಲಿ, ಚಂದ್ರನಿಲ್ಲ ಬಾನಿನಲ್ಲಿ ನೀನೆ ನಿಂತಿದ್ದೆ ಅಲ್ಲಿ, ಹಾಲಿನಂಥ ನಗುವನು ಚೆಲ್ಲಿʼ ಸರಳ ಸುಂದರವಾಗಿದ್ದ ಸಾಲುಗಳು ಗುನುಗುನಿಸುವಂತೆ ಮಾಡಿದ್ದವು.
ರವಿಚಂದ್ರನ್ ಹಂಸಲೇಖರ ಯಶಸ್ಸಿಗೆ ದಾರಿ ತೋರಿದ ಚಿತ್ರ ʻಪ್ರೇಮಲೋಕʼ. ಮುಂದಿನ ಹದಿನೈದು ವರ್ಷಗಳ ಕಾಲ ಇಬ್ಬರ ಪಾಲಿಗೆ ಸುವರ್ಣಕಾಲವೇ ಸರಿ. ಹಂಸಲೇಖರ ಸಾಹಿತ್ಯ ಸಂಗೀತ ರವಿಚಂದ್ರನ್‍ರವರ ದೃಶ್ಯ ಸಂಯೋಜನೆ ಕಲಾರಸಿಕರ ಕಣ್ಣು–ಕಿವಿಗಳಿಗೆ ರಸದೌತಣವನ್ನೇ ಉಂಟು ಮಾಡಿದವು. ಪ್ರೇಮಲೋಕದ ಮಾಲು-ಬಾಲು ಗೀತೆಯನ್ನು ಕೇಳಿ ಸಿನಿಸಾಹಿತ್ಯವನ್ನೇ ನಾಶ ಮಾಡಿದರು ಎಂದ ವಿಮರ್ಶಕರೇ ಬೆರಳು ಕಚ್ಚುವಂತೆ ಮಾಡಿದ್ದು ಹಂಸಲೇಖರ ಹೆಗ್ಗಳಿಕೆ.
ರವಿಚಂದ್ರನ್ ಚಿತ್ರಗಳ ಹೊರತಾಗಿಯೂ ರಾಜೇಂದ್ರಬಾಬು, ರಾಜೇಂದ್ರಸಿಂಗ್‍ಬಾಬು, ಎಸ್. ನಾರಾಯಣ್ ಮುಂತಾಗಿ ಹಲವು ನಿರ್ದೇಶಕರ ಚಿತ್ರಗಳನ್ನು ತಮ್ಮ ಸಾಹಿತ್ಯ ಸಂಗೀತದಿಂದ ಗೆಲ್ಲಿಸಿದ್ದಾರೆ. ʻಹಸಿರು ಗಾಜಿನ ಬಳೆಗಳೆ, ಸ್ತ್ರೀಕುಲದ ಶುಭಕಳೆಗಳೆʼ, ʻಈ ಭೂಮಿ ಬಣ್ಣದ ಬುಗುರಿʼ, ʻಮಡಿಕೇರಿ ಸಿಪಾಯಿʼ, ʻಹುಟ್ಟಿದರೆ ಕನ್ನಡನಾಡಿನಲ್ಲಿ ಹುಟ್ಟಬೇಕುʼ. ʻಚೈತ್ರದ ಪ್ರೇಮಾಂಜಲಿಯʼ, ʻಒಂದೇ ಉಸಿರಂತೆ ಇಂದು ನಾನು ನೀನುʼ, ʻಎಲೆ ಹೊಂಬಿಸಲೆʼ, ʻಅನಾಥ ಮಗುವಾದೆ ನಾನುʼ, ʻದೇವರು ಹೊಸೆದ ಪ್ರೇಮದ ಹಾರʼ, ʻಕೂರಕ್ಕೂರಳ್ಳಿಕೆರೆ…ʼ ಈ ಕ್ಷಣಕೆ ನೆನಪಿಗೆ ಬರುತ್ತಿರುವ ಗೀತೆಗಳು. ಶಾಸ್ತ್ರೀಯ, ಜಾನಪದ, ಪಾಶ್ಚಾತ್ಯ, ಹಿಂದೂಸ್ತಾನಿ… ಹೀಗೆ ಸಂಗೀತದ ಎಲ್ಲಾ ಪ್ರಕಾರಗಳನ್ನು ಅರೆದು ಕುಡಿದವರಂತೆ ಸಾಹಿತ್ಯ ಸಂಗೀತ ಸಂಯೋಜಿಸಿ ಕನ್ನಡವಷ್ಟೇ ಅಲ್ಲದೆ ತಮಿಳು, ತೆಲುಗು, ಹಿಂದಿ ಭಾಷೆಯ್ಲೂ ತಮ್ಮ ಛಾಪು ಮೂಡಿಸಿದವರು.
ಈ ನಾದಬ್ರಹ್ಮ ಶಬ್ದಬ್ರಹ್ಮನೂ ಹೌದು. ಶಬ್ದಗಳ ಜೊತೆ ಅಡುವ ಆಟ ಮೋಹಿತರಾಗುವಂತೆ ಮಾಡುತ್ತದೆ.
ʻಜೀವನ ಎಂದರೇನು/ ಏಳು ದಿನದ ವಾರ/ ಯೌವನವೆಂದರೇನು? ಅದರಲ್ಲಿ ಭಾನುವಾರ…ʼ,
ʻಆಕಾಶದಾಗೆ ಯಾರೋ ಮಾಯಾಗಾರನು ಚಿತ್ತಾರ ಮಾಡಿ ಹೋಗೋನೆ/ ಈ ಭೂಮಿಯಾಗೆ ಯಾರೋ ತೋಟಗಾರನು ಮಲೆನಾಡ ಮಾಡಿ ಹೋಗೋನೆ/ʼ, ʻಸಾವಿರ ಹೂವ ಎದೆ ಹನಿ ಬೇಕು ಜೇನಿನಗೂಡಾಗಲು/ಸಾವಿರ ಭಾವಸಂಗಮ ಬೇಕು ಕನ್ನಡ ಹಾಡಾಗಲು…ʼ ಕೆಲ ಉದಾಹರಣೆಗಳು. ಅಷ್ಟೇ ಏಕೆ “ಶ್ರೀ ಮಂಜುನಾಥ” ಚಿತ್ರದಲ್ಲಿ ʻಮಹಾಪ್ರಾಣ ದೀಪಂʼನಂತಹ ಸಂಸ್ಕೃತ ಭೂಯಿಷ್ಟ ಗೀತರಚನೆ ಜೊತೆಗೆ ಮಾಧುರ್ಯಭರಿತ ಸಂಗೀತ ನೀಡಿ ಪಂಡಿತಪಾಮರರನ್ನು ಏಕಕಾಲಕ್ಕೆ ಮೆಚ್ಚಿಸಿದ್ದಾರೆ.
ಹಂಸಲೇಖ-ರವಿಚಂದ್ರನ್ ಜೋಡಿ ಬೇರ್ಪಟ್ಟ ನಂತರ ಚಿತ್ರಸಂಗೀತ ಕಾಯಕದ ಜೊತೆಗೆ ದೇಸಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ರಂಗಕಲೆ, ಸಂಗೀತದ ವಿವಿಧ ಪ್ರಕಾರಗಳನ್ನು ಸಾಂಪ್ರದಾಯಿಕ ಶಿಕ್ಷಣದ ಜೊತೆಜೊತೆಯಲ್ಲಿಯೆ ಕಲಿಸುತ್ತಾ ಕನ್ನಡನುಡಿ ಸಂಗೀತದ ಸೇವೆಗೆ ಹೊಸ ಪಡೆಯನ್ನೇ ಕಟ್ಟುತ್ತಿದ್ದಾರೆ. ವಿ. ಮನೋಹರ್, ಅರ್ಜುನ್ ಜನ್ಯ ಮುಂತಾಗಿ ಅನೇಕ ಸಂಗೀತ ಸಂಯೋಜಕರು, ರಾಜೇಶ್ ಕೃಷ್ಣನ್ ಎಲ್.ಎನ್. ಶಾಸ್ತ್ರಿ, ನಂದಿತಾ, ಹೇಮಂತ್ ಮುಂತಾದ ಗಾಯಕರು ಹಲವರನ್ನು ಪೋಷಿಸಿ ಬೆಳಸಿದ್ದಾರೆ.
ಇನ್ನೂ ಅವರೊಡನೆ ಅಲ್ಪಕಾಲ ಒಡನಾಡಿದ ದಿನಗಳನ್ನು ಸ್ಮರಿಸುವುದಾದರೆ ಹಾಸನ ಜಿಲ್ಲಾ ಕ.ಸಾ.ಪದಲ್ಲಿ ಗೌ. ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಶಾಲೆಗಳಲ್ಲಿ ನಶಿಸುತ್ತಿರುವ ನಾಟಕ ಸಂಸ್ಕೃತಿಯನ್ನು ಉಳಿಸಲು ಒಂದು ಸಾವಿರ ಕಿರುನಾಟಕಗಳನ್ನು ವಿವಿಧ ನಾಟಕಾರರಿಂದ ರಚಿಸಿ, ಪರಿಷ್ಕರಿಸಿ ಮುದ್ರಿಸಿ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಅಭಿನಯಿಸಲು ಪ್ರೇರೇಪಣೆ ನೀಡುವ ಅವರ ಕನಸಿಗೆ ಒತ್ತಾಸೆಯಾಗಿ ಮೊಟ್ಟಮೊದಲಿಗೆ ಕಮ್ಮಟ್ಟವೊಂದನ್ನು ಡಾ. ಜನಾರ್ಧನ್‍ರವರ ಜಿಲ್ಲಾ ಕ.ಸಾ.ಪದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರೂಪಿಸಿದ್ದು ಒಂದು ನೆನಪಾದರೆ, ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರ ದೇಸಿ ವಿದ್ಯಾಸಂಸ್ಥೆಯಿಂದ ಕಡೆಯ ದಿನ ಸಂಗೀತಸಂಜೆ ಏರ್ಪಡಿಸಿದ್ದು ಮತ್ತೊಂದು. ಕಾರ್ಯಕ್ರಮಗಳ ವ್ಯತ್ಯಯದಿಂದಾಗಿ ಅದು ತಡರಾತ್ರಿ ಒಂದು ಗಂಟೆಗೆ ಆರಂಭವಾಗಿ ಬೆಳಗಿನಜಾವದವರೆಗೂ ನಡೆದಿದ್ದು, ಆ ಭಾಗದ ಜನತೆ ಕೊನೆಯವರೆಗೂ ಇದ್ದು ಸಂತೋಷ, ಅಭಿಮಾನ ಮೆರೆದಿದ್ದು ಎಲ್ಲವೂ ಸಿಹಿನೆನಪು. ಅದೇ ಸಂದರ್ಭದಲ್ಲಿ ʻಜೈಭಾರತ ಜನನಿಯ ತನುಜಾತೆʼ ನಾಡಗೀತೆಯ ಅವಧಿಯನ್ನು ಕಡಿತಗೊಳಿಸಿ ಹಾಡಿದ್ದು, ಕನ್ನಡ ಭಾಷೆ ಚರಿತ್ರೆಯನ್ನು ತಮ್ಮ ವಿವಿಧ ಗೀತೆಗಳಲ್ಲಿ ತಂದದ್ದು ಅವರು ಪ್ರಯೋಗಶೀಲತೆಯ ಮನಸ್ಸಿಗೆ ಸಾಕ್ಷಿಯಾಗಿ ನಿಂತಿದೆ. ಅವರ ಹಸ್ತಾಕ್ಷರಕ್ಕಾಗಿ ಬಂದ ಅಭಿಮಾನಿಗಳಿಗೆ ಕನ್ನಡ ನಾಡುನುಡಿ ಉಕ್ಕಿಸುವ ನುಡಿಮುತ್ತುಗಳನ್ನು ಬರೆಯದೆ ಇರಲಾರರು.
ಈ ಬಾರಿಯ ನಾಡಹಬ್ಬ ದಸರಾವನ್ನು ಇಡೀ ರಾಜ್ಯದ ದೇಸಿ ಪ್ರತಿಭೆಗಳ ಪ್ರತೀಕರಾಗಿ ಹಂಸಲೇಖ ಉದ್ಘಾಟಿಸಲಿದ್ದಾರೆ. ಈ ಲೇಖನ 300ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ, 2000ಕ್ಕೂ ಹೆಚ್ಚು ಗೀತರಚನೆ ಮಾಡಿ ಕನ್ನಡ ಚಿತ್ರರಂಗಕ್ಕೆ ಚಂದನವನವೆಂದೇ ಹೆಸರಿಸಿದ ಈ ಗಾನ ಗಾರುಡಿಗನಿಗೆ ಮತ್ತು ಅವರ ನುಡಿಸೇವೆಗೆ ತೋರಿದ ಅಕ್ಷರ ನಮನ.
0 ಪ್ರತಿಕ್ರಿಯೆಗಳು