ಸ್ವ್ಯಾನ್ ಕೃಷ್ಣಮೂರ್ತಿ ಅಂಕಣ: ವಾಪಸ್ ಊರಿಗೆ ಹೋಗು ಎಂದರೂ ಇಲ್ಲೇ ಇದ್ದೀಯಲ್ಲ..!

ಲಕ್ಷ್ಮೀ ಮುದ್ರಣಾಲಯಕ್ಕೆ ಕಾಲಿಟ್ಟ ಮೊದಲ ದಿನವೇ ಇವನನ್ನು ವಾಪಸು ದುರ್ಗದ ಬಸ್ ಹತ್ತಿಸು ಅಂದಿದ್ದರು ಯಜಮಾನರು….

ಲಕ್ಷ್ಮೀ ಮುದ್ರಣಾಲಯದ ಮೂಲಕ ಕರ್ನಾಟಕದ ಮುದ್ರಣ ಲೋಕದಲ್ಲಿ ವೇಗ, ಸೌಂದರ್ಯ ಮತ್ತು ಗುಣಮಟ್ಟದ ತ್ರಿವೇಣಿ ಸಂಗಮದಿಂದ ಕ್ರಾಂತಿಪಥ ನಿರ್ಮಾಣ ಮಾಡಿ, ಪುಸ್ತಕವೆಂದರೆ ಹೀಗೇ ಇರಬೇಕೆಂದು ಒಂದಾದ ಮೇಲೆ ಒಂದರಂತೆ ಮೇರು (Master price) ಕೃತಿಗಳನ್ನು ಮುದ್ರಿಸಿದವರು ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷರಾದ ಅಶೋಕ್‌ಕುಮಾರ್.

ಅವರು ನಮ್ಮ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರ ಅತ್ಯಂತ ಆತ್ಮೀಯರು ಹಾಗೂ ಆಗ ಆಡಳಿತಾಧಿಕಾರಿಯಾಗಿದ್ದ ಎಸ್.ಕೆ. ಬಸವರಾಜನ್ ಮತ್ತು ಅವರ ಶ್ರೀಮತಿ ಸೌಭಾಗ್ಯರವರ ಕುಟುಂಬ ಸ್ನೇಹಿತರು ಆಗಿದ್ದರು. 1998ರಲ್ಲಿ ಅಶೋಕ್ ಅವರೊಂದಿಗೆ ಮಾತನಾಡಿ ನನ್ನನ್ನು ಲಕ್ಷ್ಮೀ ಮುದ್ರಣಾಲಯಕ್ಕೆ ಕೆಲಸಕ್ಕೆ ಕಳಿಸಿದರು.

ಬೆಂಗಳೂರು ಮಠದ ಹನುಮಂತಪ್ಪ ನನ್ನನ್ನು ಚಾಮರಾಜಪೇಟೆಯ ಲಕ್ಷ್ಮೀ ಮುದ್ರಣಾಲಯಕ್ಕೆ ಕರೆದೊಯ್ದರು. ಅಶೋಕ್ ಕುಮಾರ್ ಅವರ ಕೋಪದ ವಿಷಯ ಕೇಳಿ ಭಯ, ಆತಂಕದಿಂದಲೇ ದುರ್ಗದಿಂದ ಬಸ್ ಹತ್ತಿ ಬಂದಿದ್ದ ನನಗೆ ಕಚೇರಿಯಲ್ಲಿ ಯಜಮಾನರು ಕುರ್ಚಿ ಮೇಲೆ ಕೂತ ಹುಲಿಯಂತೆ ಕಾಣುತ್ತಿದ್ದರು.

ನಾನು ಅಲ್ಲಿಗೆ ಹೋದಾಗ ಅವರು ಫೋನಿನಲ್ಲಿ ಯಾರೊಂದಿಗೋ ಗಟ್ಟಿದನಿಯಲ್ಲಿ ಸಿಟ್ಟಿನಿಂದ ಮಾತನಾಡುತ್ತಿದ್ದರು. ಅದನ್ನು ನೋಡಿ ನನಗೆ ಎದೆ ಬಡಿತ ಇನ್ನಷ್ಟು ಜಾಸ್ತಿ ಆಯ್ತು. ಅವರು ಫೋನ್ ಇಡುತ್ತಲೇ ಏರುತ್ತಿರುವ ಹೃದಯ ಬಡಿತವನ್ನು ಲೆಕ್ಕಿಸದೆ ಒಳಹೋಗಿ ಅವರೆದುರು ನಿಂತೆವು.

ಹನುಮಂತಪ್ಪ ‘ಮಠದಿಂದ ಹುಡುಗನನ್ನು ಕಳಿಸಿದ್ದಾರೆ’ ಎಂದು ಹೇಳಲು… “ಏನು? ಯಾರು? ಏನು ನಿನ್ನ ಹೆಸರು..?” ಎಂದು ಕೇಳಿದರು. ನಾನು ಮೆಲುದನಿಯಲ್ಲಿ ಹೇಳಿದೆ. “ಜೋರಾಗಿ ಮಾತನಾಡು… ಯಾಕೆ ಊಟ ಹಾಕಿಲ್ವಾ ಮಠದಲ್ಲಿ..?” ಎಂದು ಗುಟುರು ಹಾಕಿದರು. ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ ಹಾಕುತ್ತಲೇ ಇದ್ದರು. ಅವರ ಮಾತಿನ ವೇಗ ಮತ್ತು ಸಿಟ್ಟು ಕಂಡು ನನಗೆ ಮಾತೇ ಹೊರಡದಾಯಿತು, ಮಾತನಾಡದೆ ಸುಮ್ಮನೆ ನಿಂತೆ.

ಅವರು ಹನುಮಂತಪ್ಪನ ಕಡೆ ನೋಡಿ “ಈತನಿಗೆ ಸರಿಯಾಗಿ ಮಾತನಾಡಲೂ ಬರುವುದಿಲ್ಲ!!! ಇಲ್ಲಿ ಇವನು ಏನು ಕೆಲಸ ಮಾಡಿಯಾನು..? ವಾಪಾಸು ಕರ್ಕೊಂಡು ಹೋಗಿ ದುರ್ಗದ ಬಸ್ ಹತ್ತಿಸು” ಎಂದು ಎದ್ದು ಹೋದರು.

ನಾನು ಪೂರ್ತಿ ಹೆದರಿ, ಬಾಯಿ ಒಣಗಿತ್ತು, ನನ್ನ ಶರೀರದ ನಡುಕ ನಿಲ್ಲುತ್ತಲೇ ಇಲ್ಲ, “ನಡಿಯಪ್ಪ ಹೊರಗೆ ಹೋಗೋಣ… ನಾನು ಊರಿಗೆ ಹೋಗ್ತೀನಿ” ಅಂದೆ. ಅಷ್ಟರಲ್ಲಿ ಅಲ್ಲೇ ಇದ್ದ ಮ್ಯಾನೇಜರ್ ವೆಂಕಟೇಶ್ ಹಾಗೂ ಗಾಯತ್ರಿ ಮೇಡಂ “ಏ… ಅವರು ಹಂಗೆ, ಸ್ವಲ್ಪ ಸಿಟ್ಟು… ಇರಿ ಮತ್ತೆ ಬರ್ತಾರೆ, ಇನ್ನೂ ಒಂದು ಸಾರಿ ಕೇಳಿಕೊಳ್ಳಿ” ಎಂದರು.

ಸ್ವಲ್ಪ ಹೊತ್ತು ಬಿಟ್ಟು ಮರಳಿ ಬಂದ ಅಶೋಕ್ ಸರ್, ಕದಲದೆ ಅಲ್ಲೇ ನಿಂತಿದ್ದ ನನ್ನ ನೋಡಿ, “ಆಗಲೇ ವಾಪಸ್ ಊರಿಗೆ ಹೋಗು ಎಂದರೂ ಇಲ್ಲೇ ಇದ್ದೀಯಲ್ಲ” ಎಂದರು. ತಕ್ಷಣ ಹನುಮಂತಪ್ಪ “ಸರ್ ಒಂದು ವಾರ ಇಟ್ಟುಕೊಳ್ಳಿ, ಸರಿಯಾಗಿ ಕೆಲಸ ಮಾಡಲಿಲ್ಲ ಅಂದರೆ ವಾಪಸ್ ಬಸ್ ಹತ್ತಿಸುತ್ತೇನೆ” ಎಂದನು. ಆಗ ಅಶೋಕ್ ಸರ್ “ಹೋ… ಆಗಲಿ” ಎಂದು, “ವೆಂಕಟೇಶ್ ಇವನನ್ನು ಪ್ಲೇಟ್ ಮೇಕಿಂಗ್‌ನಲ್ಲಿ ಸಹಾಯಕನಾಗಿ ಬಿಡಿ” ಎಂದರು. ಆಗ ಪ್ಲೇಟ್ ಮೇಕಿಂಗ್ ವಿಭಾಗದಲ್ಲಿ ಟಿ.ಎಲ್.ಮಂಜುನಾಥ್ ಅವರಿಗೆ ವಿಶ್ವನಾಥ್ ಸಹಾಯಕನಾಗಿದ್ದ, ನನ್ನ ಕೆಲಸ ವಿಶ್ವನಾಥನ ಕೈಕೆಳಗೆ.

ನಾನು ಮುದ್ರಣಾಲಯ ಪ್ರವೇಶಿಸಿದಾಗ ನನ್ನ ಪಾಲಿಗೆ ಅದೊಂದು ಅಯೋಮಯವೆನಿಸುವ ಜಗತ್ತು..! 50ಕ್ಕೂ ಹೆಚ್ಚು ನೌಕರರು, ಮೂರು ಅಂತಸ್ತುಗಳಲ್ಲಿ ಕೆಲಸ ನಡೆಯುವುದು ಬೇರೆ!! ಒಂದೊಂದಕ್ಕೂ ಏನು ಸಂಬಂಧವಿದೆ ಎಂದೇ ತಿಳಿಯಲಾಗದ.., ಕೆಲವೊಮ್ಮೆ ದಿನದ 24 ಗಂಟೆಗಳ ಕಾಲವೂ ಎರಡು ಮೂರು ಪಾಳಿಗಳಲ್ಲಿ ನಡೆಯುವ ಕೆಲಸ… ಯಂತ್ರಗಳಿಗಿಂತ ವೇಗವಾಗಿ ಕೆಲಸ ಮಾಡುವ ಅಲ್ಲಿನ ನೌಕರರು… ಇವೆಲ್ಲವೂ ನನ್ನನ್ನು ಇಲ್ಲಿಯೇ ಉಳಿಸುತ್ತವೆಯೋ ಇಲ್ಲ ಹೊರಗೆ ತಳ್ಳುತ್ತವೆಯೋ ಎಂಬ ಹೆದರಿಕೆ.

ಆ ದಿನಗಳಲ್ಲಿ ಈಗಿನ ರೀತಿ P S ಪ್ಲೇಟ್‌ಗಳು ಇರಲಿಲ್ಲ, D P H ಪ್ಲೇಟ್‌ಗಳು, ಎಕ್ಸ್‌ಪೋಸಿಂಗ್ ಆದ್ಮೇಲೆ ನೀರಿನಲ್ಲಿ ನೆನಸಿ ಬ್ರಷ್ ಹಾಕಿ ಉಜ್ಜಿ ಉಜ್ಜಿ ತೊಳೆಯಬೇಕು. ಒಂದು ದಿನಕ್ಕೆ ನೂರಕ್ಕೂ ಹೆಚ್ಚು ಪ್ಲೇಟ್‌ಗಳನ್ನು ತೊಳೆಯಬೇಕಿತ್ತು. ಇದರ ನಡುವೆ ಕಚೇರಿಗೆ ಯಾರಾದರೂ ಬಂದರೆ ಕಾಫಿ, ಟೀ, ತಿಂಡಿ, ಊಟ ತಂದುಕೊಡಬೇಕು ಹಾಗೂ ಕಟಿಂಗ್ ಮಷೀನ್‌ಗೆ ಬುಕ್ಸ್‌ನ ಕಟಿಂಗ್‌ಗೆ ಎತ್ತಿಕೊಂಡು ಹೋಗಿ ಕೊಡಬೇಕು. ಕಟಿಂಗ್, ಪ್ಯಾಕ್ ಆದ ಮೇಲೆ ಆಟೋಗೆ ಲೋಡ್ ಮಾಡಬೇಕು, ನಂತರ ಹೊರಗೆ ಹೋಗಿ ಪಾರ್ಟಿಗಳು ಹೇಳಿದ ಕಡೆ ‘ಅನ್‌ಲೋಡ್’ ಮಾಡಬೇಕು. ನಾನು ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಕೆಲಸ ಕಲಿಯಲೇಬೇಕು ಎಂದು ನಿಶ್ಚಯಿಸಿಕೊಂಡು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದೆ. ಹೀಗೇ ಒಂದು ತಿಂಗಳು ಕಳೆದು ಮೊದಲ ತಿಂಗಳ ಸಂಬಳ 750 ರೂಪಾಯಿಗಳು ನನ್ನ ಕೈಗೆ ಬಂದ ಕ್ಷಣದಲ್ಲಿ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ!!

ಆಗೆಲ್ಲಾ ಕೆಲಸಗಳಲ್ಲಿ ದಿನವೂ ಏನಾದರೂ ಒಂದು ಎಡವಟ್ಟು ಮಾಡಿ ಯಜಮಾನರ ಕೋಪಕ್ಕೆ ಗುರಿಯಾಗುತ್ತಿದ್ದೆ. ಬಹುಶಃ ಅಶೋಕ್‌ಕುಮಾರ್ ಅವರ ಬಳಿ ನನ್ನಷ್ಟು ಬೈಯಿಸಿಕೊಂಡವರು ಯಾರೂ ಇಲ್ಲ ಅನಿಸುತ್ತದೆ. ಕೆಲಸ ಸಮರ್ಪಕವಾಗಿಲ್ಲ ಎನಿಸಿದರೆ, ಅಶಿಸ್ತು ಕಾಣಿಸಿದರೆ ಕೆಂಡಾಮಂಡಲವಾಗಿ ಪ್ರಶ್ನಿಸುವ, ಬೈಯುವ, ಆದರೆ ಒಳಗೆ ಅಪಾರವಾದ ಅಕ್ಕರೆಯನ್ನು ತುಂಬಿಕೊಂಡು ಬೆಳೆಸುವ ಅಶೋಕ್‌ಕುಮಾರ್ ಅವರ ಗರಡಿಯಲ್ಲಿ ಮತ್ತು ಶ್ರೀಮತಿ ವರಲಕ್ಷ್ಮಿ ಅಶೋಕ್‌ಕುಮಾರ್ ಅವರ ಮಾತೃವಾತ್ಸಲ್ಯದಲ್ಲಿ ಕಲಿಯಬೇಕಾದ್ದನ್ನು ಬಹುಬೇಗ ಕಲಿಯತೊಡಗಿದೆ. ಅಶೋಕ್‌ಕುಮಾರ್ ತಮ್ಮ ಮೊನಚಾದ ಮಾತುಗಳಿಂದಲೇ ನನ್ನನ್ನು ಹಂತ-ಹಂತವಾಗಿ ದಾರಿಗೆ ತಂದರು.

ಸ್ವಲ್ಪ ದಿನಗಳಲ್ಲೇ ಎಲ್ಲಾ ಹಿರಿಯ-ಕಿರಿಯ ಕಾರ್ಮಿಕ ಸ್ನೇಹಿತರಿಗೆ ಪ್ರೀತಿಪಾತ್ರನಾದೆ. ಹೀಗೆ ಬಿಡುವಿನ ಸಮಯದಲ್ಲಿ, ಕಚೇರಿಯಲ್ಲಿದ್ದ ಗಾಯತ್ರಿ ಮೇಡಂಗೆ ಸಹಾಯಕನಾಗಿ, ದೂರವಾಣಿ ಕರೆ ಸ್ವೀಕರಿಸಿ ಉತ್ತರ ಕೊಡುವುದು, ಕರಡು ಪ್ರತಿಯನ್ನು ತಿದ್ದುವುದು, ಬಂದ ಗ್ರಾಹಕರನ್ನು ಮಾತನಾಡಿಸುವುದು, ಕಾಗದ, ಇಂಕ್, ಪ್ಲೇಟ್, ಕೆಮಿಕಲ್ಸ್ ಹೀಗೆ ಪ್ರೆಸ್‌ಗೆ ಅವಶ್ಯವಾದ ವಸ್ತುಗಳನ್ನು ಆಯಾ ಅಂಗಡಿಯವರಿಗೆ ಹೇಳಿ ತರಿಸುವುದು, ವಸ್ತುಗಳು ಬಂದಮೇಲೆ ಸರಿ ಇದೆಯೇ ಪರೀಕ್ಷಿಸುವುದು… ಹೀಗೆ ಅನೇಕ ಕೆಲಸಗಳನ್ನು ಕಲಿತೆ. ವ್ಯವಸ್ಥಾಪಕರಾಗಿದ್ದ ಟಿ.ಎಲ್. ವೆಂಕಟೇಶ್ ಮತ್ತು ಶ್ರೀಮತಿ ಗಾಯತ್ರಿ ಅವರಿಂದ ಮುದ್ರಣಲೋಕದ ಅನೇಕ ಪಾಠಗಳನ್ನು ಕಲಿತೆ. ಆಗ ಅಷ್ಟು ದಿನಗಳವರೆಗೆ ಪ್ರೊಬೇಷನರಿ ಪೀರಿಯಡ್‌ನಲ್ಲಿದ್ದ ನನಗೆ 1-10-2000 ರಂದು ಸಂಬಳ ಜಾಸ್ತಿ ಮಾಡಿ, ನನ್ನ ಕೆಲಸ ಖಾಯಂಗೊಳಿಸಿ – ಪಿ.ಎಫ್. ವೇತನಪಟ್ಟಿಗೆ ನನ್ನನ್ನು ಸೇರಿಸಿದರು.

ಆಗೆಲ್ಲಾ ಸಂಬಳದ ದಿನವೆಂದರೆ ಏನೋ ಒಂದು ಹಬ್ಬದ ದಿನದಂತೆ ಸಂತೋಷ… ಸಡಗರ… ಅಂದು ರಾತ್ರಿ ಹಿರಿಯ-ಕಿರಿಯ ನೌಕರರೆಲ್ಲ ಒಂದೆಡೆ ಸೇರಿ ಪಾರ್ಟಿಯನ್ನು ಜೋರಾಗಿ ಮಾಡುತ್ತಿದ್ದೆವು. ಪ್ರತಿ ತಿಂಗಳು 5ನೇ ತಾರೀಖು ಸಂಬಳದ ದಿನ. ಅದು ಯಾವ ಕಾರಣಕ್ಕೂ ಬದಲಾಗುತ್ತಲೇ ಇರಲಿಲ್ಲ..! ಕೆಲವು ಬಾರಿ 5ನೇ ತಾರೀಕು ಭಾನುವಾರ ಬಂದರೆ 4ರಂದೇ ಸಂಬಳ ಕೊಟ್ಟು ಬಿಡುತ್ತಿದ್ದರು ಯಜಮಾನರು. ಸಂಬಳದ ದಿನಕ್ಕೆ 5-6 ದಿನಗಳು ಮುಂಚಿತವಾಗಿ ಹಬ್ಬವೇನಾದರೂ ಬಂದರೆ ಹಬ್ಬಕ್ಕಿಂತ ಮೊದಲ ದಿನವೇ ಸಂಬಳ. ಸಂಬಳ ಕೊಡುವುದರಲ್ಲಿ ಯಜಮಾನರು ಅದು ಏನೋ ಒಂದು ರೀತಿಯ ಆನಂದ ಅನುಭವಿಸುತ್ತಿದ್ದರು. ಕಚೇರಿಯ ಕೋಣೆಯಲ್ಲಿ ಕೂತು ಸಂಬಳ ಕೊಡುವಾಗ ಹಣ ಎಣಿಸುವ ಶೈಲಿಯೇ ವಿಶೇಷವಾಗಿ ಇರುತ್ತಿತ್ತು. ಅದನ್ನು ನಾವು ಕುತೂಹಲದಿಂದ ನಿಂತು ನೋಡುತ್ತಿದ್ದೆವು. ಜೊತೆಗೆ ಒಬ್ಬೊಬ್ಬರಿಗೂ ಹಾಸ್ಯ ಮಿಶ್ರಿತ ಏರು ಧ್ವನಿಯಲ್ಲಿ ಒಂದೋ ಎರಡೋ ಡೈಲಾಗ್ ಹೊಡೆದು ಸಂಬಳ ಕೊಟ್ಟು ಕಳುಹಿಸುತ್ತಿದ್ದರು.

ನನಗೆ ಸಂಬಳ ಕೊಡುವಾಗಂತೂ… “ವೆಂಕಟೇಶ್, ಇವನಿಗೆ ಸಂಬಳ ಕೊಡುವುದು ಬೇಡ, ಕೊಟ್ಟರೆ ಮುಗಿಯಿತು..! ನಾಳೆ ಇವನಿಗೆ ತಲೆನೋವು… ಜ್ವರ… ಏನೋ ಒಂದು ಕಾಯಿಲೆ ಬಂದು ಕೆಲಸಕ್ಕೆ ಚಕ್ಕರ್ ಹಾಕಿ ಬಿಡುತ್ತಾನೆ. “ಅವರ ಮಾತಿನಂತೆಯೇ ಸಂಬಳದ ಮಾರನೇ ದಿನ ಬೆಳಗ್ಗೆ 9ರಿಂದ 3-4 ಸಿನಿಮಾಗಳು, ಮಧ್ಯಾಹ್ನ ಮುದ್ದೆ ಮಾದಪ್ಪ, ನರ್ತಕಿ, ರಾಮಕೃಷ್ಣ ಹೋಟೆಲ್ ಗಳಲ್ಲಿ ಊಟ, ಸಂಜೆ ಅಲಂಕಾರ್ ಪ್ಲಾಜಾ, ನ್ಯಾಷನಲ್ ಮಾರ್ಕೆಟ್ ಹೀಗೆ ಮೆಜೆಸ್ಟಿಕ್‌ನ ಗಲ್ಲಿಗಲ್ಲಿಗಳಲ್ಲಿ ಸುತ್ತಿಕೊಂಡು, ಪಡಖಾನೆ ಹೊಕ್ಕು ಕಳ್ಳಬೆಕ್ಕಿನಂತೆ ಕದ್ದು ಹೊರಬಂದು, ಕಪಾಲಿ ಥಿಯೇಟರ್ ಎದುರಿನ ರಸ್ತೆಯ ಗಾಡಿಗಳಲ್ಲಿ ಅಥವಾ ಚಿಕ್ಕಪೇಟೆಯ ರಸ್ತೆಬದಿ ಗಾಡಿಗಳಲ್ಲಿ ಸಿಕ್ಕಸಿಕ್ಕಿದ್ದನ್ನು ತಿಂದು ರೂಮ್ ಸೇರುವಷ್ಟರಲ್ಲಿ ನಡುರಾತ್ರಿ ಒಂದು ಗಂಟೆ ದಾಟಿರುತ್ತಿತ್ತು. ಇನ್ನು ಮಾರನೇ ದಿನ ಬೆಳಗ್ಗೆ ಎದ್ದು ಮತ್ತೆ ಎಂದಿನಂತೆ ಆಫೀಸಿಗೆ ಹೋಗಿ ಮ್ಯಾನೇಜರ್ ಕೈಯಲ್ಲೋ ಯಜಮಾನರ ಕೈಯಲ್ಲೋ ಬೈಯಿಸಿಕೊಳ್ಳುವುದು ಸರ್ವೇಸಾಮಾನ್ಯವಾಗಿ ಬಿಟ್ಟಿತ್ತು. ನಿಜಕ್ಕೂ ಆ ದಿನಗಳು ನಮ್ಮೆಲ್ಲರ ಸಂತೋಷದ, ಸೌಭಾಗ್ಯದ ದಿನಗಳೇ ಆಗಿದ್ದವು.

(ಮುಂದುವರಿಯುವುದು)

‍ಲೇಖಕರು nalike

July 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Jayalaxmi Patil

    ಎಷ್ಟು ಸ್ಪಷ್ಟತೆ ಮತ್ತು ಆಪ್ತತೆ ಇದೆ ಈ ಕಂತಿನಲ್ಲಿ!
    ಅಲ್ಲಿ ಎಲ್ಲ ವಿಭಾಗಗಳಲ್ಲಿ ಶ್ರದ್ಧೆಯಿಂದ ಕೆಲಸ ಮಾಡಿದ್ದರಿಂದಲೇ ನೀವೀಗ ಇಷ್ಟು ಚಿಕ್ಕ ವಾಸ್ಸಿನಲ್ಲೇ ಅಷ್ಟು ಪ್ರಸಿದ್ಧ ಮುದ್ರಕರಾಗಿರಲು ಸಾಧ್ಯವಾಯಿತು ಅನಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: