ಸ್ಮಿತಾ ಭಾವಾಭಿನಯದ ನೃತ್ಯ ವಲ್ಲರಿ…

 ಶಿವಾನಿ ಹೊಸಮನಿ

‘ಶ್ರದ್ಧಾ ಡ್ಯಾನ್ಸ್ ಸೆಂಟರ್’ನ ಗುರು ಶ್ರೀಮತಿ ಶಮಾ ಕೃಷ್ಣ ಅವರ ಶಿಷ್ಯೆ ಕುಮಾರಿ ಸ್ಮಿತಾ ಎನ್. ಎಸ್. ಅವರ ರಂಗಪ್ರವೇಶವು ನಗರದ  ಭಾರತೀಯ ವಿದ್ಯಾಭವನದ ರಂಗಮಂದಿರದಲ್ಲಿ ನಡೆಯಿತು. ಸುಂದರವಾಗಿ ಅಲಂಕೃತಗೊಂಡ ವೇದಿಕೆಯಲ್ಲಿ ಕುಮಾರಿ ಸ್ಮಿತಾ ಅವರು ಅತ್ಯಂತ ಭಕ್ತಿಯಿಂದ ಪುಷ್ಪಾಂಜಲಿ ನೃತ್ಯದೊಂದಿಗೆ ತಮ್ಮ ನೃತ್ಯ ಕಾರ್ಯಕ್ರಮವನ್ನು ಆರಂಭಿಸಿದರು.   

ಆಂಗಿಕಂ ಭುವನಂ ಶ್ಲೋಕದೊಂದಿಗೆ ಬ್ರಹ್ಮಾಂಡವೇ ಶಿವನ ಅಂಗಗಳು, ಶಿವನ ವಾಚನವೇ ಲೋಕದ ಭಾಷೆ, ಚಂದ್ರ ತಾರೆಗಳೇ ಶಿವನ ಆಹಾರ್ಯ ಎಂದು ಹೇಳುವ ಮೂಲಕ ನಾಟ್ಯದ ಅದಿದೇವತೆ ನಟರಾಜನಿಗೆ ತಲೆಬಾಗಿ ನಮಿಸಿದರು. ವಿದ್ಯೆ ಕಲಿಸಿದ ಗುರುಗಳಿಗೆ ನಮಸ್ಕರಿಸುತ್ತಾ, ಸಂಗೀತ ಹಾಗೂ ವಾದ್ಯ ವಿದ್ವಾಂಸರುಗಳಿಗೆ ವಂದಿಸಿ, ನಂತರ ಕಲ್ಪತರು ಮರದಂತೆ ಶೋಭಿಸುವ ಕಲಾರಾಧಕರು, ಅದರ ಶಾಖೆಗಳೇ ವೇದಗಳು, ಶಾಸ್ತ್ರಗಳೇ ಪುಷ್ಪಗಳು ಹಾಗೂ ರಸವನ್ನು ಆಸ್ವಾದಿಸುವ ವಿದ್ವಾಂಸರೇ ಭ್ರಮರಗಳೆಂದು ಹೇಳುವ  ಸಭಾಕಲ್ಪತರುರ್ಭಾತಿ ಶ್ಲೋಕದ ಉಲ್ಲೇಖ ಹೊಂದಿದ ಅರ್ಥಪೂರ್ಣ ಪುಷ್ಪಾಂಜಲಿಯೊಂದಿಗೆ ರಂಗಪ್ರವೇಶವು ಶುಭಾರಂಭಗೊಂಡಿತು.

ನಂತರ ನರ್ತಕಿಯು ತಿಲ್ಲಾಂಗ್ ರಾಗ, ಆದಿತಾಳದಲ್ಲಿದ್ದ  ಶ್ರೀಗಣೇಶ ಶರಣಂ ಎಂಬ ಕೃತಿಯನ್ನು ಪ್ರಸ್ತುತ ಪಡಿಸಿದರು. ದೇವತೆಗಳು, ಮುನಿಗಳಿಂದ ಪೂಜಿತನಾದ ಗಜಾನನ, ಚತುರ್ವೇದಗಳ ಜ್ಞಾನಿ, ನಾಗಾಭರಣ, ಪ್ರಣವ ಸ್ವರೂಪ, ಮೋದಕ ಪ್ರಿಯನಾದ ಗಣೇಶನ ಆರಾಧನೆಯನ್ನು ಹೊಂದಿದ್ದ ಈ ನೃತ್ಯಬಂಧದಲ್ಲಿ ಗಣೇಶನ ವಿವಿಧ ಆಕರ್ಷಣೀಯ ಭಂಗಿಗಳು ಮುದ ನೀಡಿದವು.

ರಾಗಮಾಲಿಕೆ, ತಾಳಮಾಲಿಕೆಯಲ್ಲಿದ್ದ ಜತಿಸ್ವರವನ್ನು ಪ್ರದರ್ಶಿಸಿದ ಕಲಾವಿದೆ, ಈ ನೃತ್ಯಬಂಧದಲ್ಲಿ ತಮ್ಮ ಲಯ ಚಾತುರ್ಯತೆ, ತಾಳಜ್ಞಾನವನ್ನು ಮೆರೆದರು. ಚಾಷಗತಿ, ಅಧ್ಯರ್ದಿಕ, ಸಮೋತ್ಸಾರಿತ ಮತ್ತಲ್ಲಿ, ಊರೂಧೃತ ಮುಂತಾದ ಚಾರಿಗಳಿಂದ ಕೂಡಿದ ಈ ನೃತ್ಯ ಸಂಯೋಜನೆಯು ಅತ್ಯಂತ ವಿಭಿನ್ನವಾಗಿತ್ತು. ಜೊತೆಗೆ ನರ್ತಕಿಯು ಅತ್ಯಂತ ನೈಪುಣ್ಯತೆಯಿಂದ ಕಲಾರಸಿಕರ ಮನಗೆದ್ದರು. 

ಮುಂದಿನ ನೃತ್ಯಬಂಧವಾದ ಸಮ್ಮೋಹಕ ಕುಮುದಕ್ರಿಯ ರಾಗದಲ್ಲಿ ರಚನೆಗೊಂಡಂತಹ ಅರ್ಧನಾರೀಶ್ವರ ಶ್ಲೋಕವು ವೀಕ್ಷಕರನ್ನು ದೈವಿಕ ಪರಾಕಾಷ್ಠತೆಗೆ ಕರೆದೊಯ್ಯಿತು. ಇದರಲ್ಲಿ ಸೂಕ್ತ ಕರಣಗಳನ್ನು ಪ್ರಸ್ತುತ ಪಡಿಸುವುದರೊಂದಿಗೆ ಅರ್ಧನಾರೀಶ್ವರನ ಸುಂದರ ಚಿತ್ರಣವನ್ನು ನರ್ತಕಿಯು ಕಣ್ಣಿಗೆ ಕಟ್ಟಿ ಕೊಟ್ಟರು. ನಿಶುಂಬಿತಂ, ವಿದ್ಯುದ್ ಭ್ರಾಂತ, ಗೃಧ್ರಾವಲೀನಕಂ, ಕುಂಚಿತಂ, ಸರ್ಪಿತಂ, ನಾಗಾಪಸರ್ಪಿತ, ಭುಜಂಗಾಂಚಿತಕಂ, ವೃಷಭಕ್ರೀಡಿತಂ ನಂತಹ ಕ್ಲಿಷ್ಟಕರ ಹಾಗೂ ಸುಂದರವಾದ ಕರಣಗಳನ್ನು ಲಾಲಿತ್ಯಪೂರ್ಣ ಹಾಗೂ ಅತ್ಯಂತ ಪ್ರಬುದ್ಧತೆಯ ಪ್ರಸ್ತುತಿಯಿಂದ ನೃತ್ಯಬಂಧದ ಸೊಗಸನ್ನು ಇಮ್ಮಡಿಗೊಳಿಸಿದರು.

ಪಾಪನಾಶಂ ಶಿವಂ ಅವರು ರಚಿಸಿದಂತಹ ಧನ್ಯಾಸಿ ರಾಗದಲ್ಲಿ ಸಂಯೋಜನೆಗೊಂಡಿರುವ ನೀ ಇಂದ ಮಾಯಂ ವರ್ಣದಲ್ಲಿ ಕೃಷ್ಣನ ಸಾನಿಧ್ಯಕ್ಕಾಗಿ ಪರಿತಪಿಸುವ ವಿರಹೋತ್ಕಂಠಿತ ನಾಯಕಿಯ ತೊಳಲಾಟವನ್ನು ಬಹಳ ಅದ್ಭುತವಾಗಿ ತೋರಿದ ಕಲಾವಿದೆಯ ನೃತ್ತದ ಮೇಲಿನ ಹಿಡಿತ, ಮತ್ತು ಅಭಿನಯ ಚಾತುರ್ಯ ಪ್ರಶಂಸನೀಯವಾಗಿತ್ತು. ಶ್ರೀಕೃಷ್ಣನನ್ನು ನೋಡುವ ಕಾತುರತೆಯಲ್ಲಿ ಭಾವವು ಮೇಳೈಸಿತು. ಮನ್ಮಥನು ನನ್ನ ಮೇಲೆ ಐದನೆಯ ಕುಸುಮ ಬಾಣವನ್ನು ಬಿಡುವ ಮೊದಲು ಬಂದು ನನ್ನನ್ನು ಸೇರು ಎಂದು ನಾಯಕಿ ಇಲ್ಲಿ ಹೇಳುತ್ತಾಳೆ. ಈ ನೃತ್ಯಬಂಧದ ಜತಿಗಳ ಸಂಯೋಜನೆಯನ್ನು ವಿದ್ವಾಂಸರಾದ ಶ್ರೀಹರಿ ರಂಗಸ್ವಾಮಿಯರು ಮಾಡಿದ್ದರು.  

ಗುರು ಪದ್ಮಾ ಸುಬ್ರಹ್ಮಣ್ಯಂ ಅವರು ನೃತ್ಯ ಸಂಯೋಜನೆ ಮಾಡಿರುವಂತಹ ಹಾಗೂ ಅವರ ತಾಯಿಯವರಾದ ಶ್ರೀಮತಿ ಮೀನಾಕ್ಷಿ ಸುಬ್ರಹ್ಮಣ್ಯಂ ಅವರು ರಚಿಸಿದಂತಹ ಪದಂ ಅನ್ನು ಕಲಾವಿದೆಯು ಪ್ರದರ್ಶಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ವಿವಾಹವಾದ ನಾಯಕಿಯು ತನ್ನ ನಾಯಕ ಮನೆಗೆ ಬರುವ ಸಮಯದಲ್ಲಿ ಆತನ ದಾರಿ ಕಾಯುತ್ತಿರುವ ಸನ್ನಿವೇಶವು ಕಲಾವಿದೆಯ ಅಭಿನಯದ ಪ್ರೌಢಿಮೆಗೆ ಹಿಡಿದ ಕನ್ನಡಿಯಂತಿತ್ತು. ಸಂಜೆ ಬರುವೆನೆಂದು ಹೇಳಿ ಹೊರಟ ನಾಯಕ ಇನ್ನೂ ಬಂದಿಲ್ಲವೆಂದು ನಾಯಕಿ ಚಿಂತಿಸುತ್ತಾಳೆ, ಇಲ್ಲಿ ಆಕೆಯ ಮುಗ್ಧತೆ, ಆಕೆಯ ಮನಸ್ಸಿನ ಕಸಿವಿಸಿ ಎಲ್ಲವನ್ನು ಸೂಕ್ತವಾದ ಅಭಿನಯದೊಂದಿಗೆ ನಿಭಾಯಿಸಿ ಪ್ರೇಕ್ಷಕರ ಗಮನ ಹಿಡಿದಿಟ್ಟುಕೊಂಡರು. 

ಕಮಾಜ್ ರಾಗ ರೂಪಕ ತಾಳದಲ್ಲಿ ನಿಬದ್ಧವಾದ ಏರಾ ರಾರಾ ಜಾವಳಿಯ ಪ್ರಸ್ತುತಿಯಲ್ಲಿಯೂ ಸಹ ಅಭಿನಯಕ್ಕೆ ಪ್ರಾಧಾನ್ಯತೆ ಇತ್ತು. ತನ್ನ ನಾಯಕನನ್ನು ಪ್ರೀತಿಯಿಂದ ಕರೆದು ಮದನನ ಬಂಧದಿಂದ ನನ್ನನ್ನು ಬಿಡಿಸು ಎಂದು ಹೇಳುತ್ತಾಳೆ. ನಿನ್ನನ್ನು ಮನಸಾರೆ ನಾನು ಪ್ರೀತಿಸಿದ್ದೇನೆ, ನನ್ನನ್ನು ಆಲಂಗಿಸು, ನೀನು ಪರಮ ದಯಾಕರನೆಂದು ಕೇಳಿದ್ದೇನೆ. ನನ್ನನ್ನು ಸೇರು ಬಾ ಎಂದು ಪರಿಪರಿಯಾಗಿ ಕೇಳಿಕೊಳ್ಳುವ ಸನ್ನಿವೇಶದಲ್ಲಿ ಕಲಾವಿದೆಯು ತನ್ನ ಮನದ ತುಮುಲವನ್ನು ಮನಮುಟ್ಟುವಂತೆ ಅಭಿನಯಿಸಿದರು. 

ತುಳಸಿದಾಸರ ರಚನೆಯ ತುಮಕ ಚಲತ ರಾಮಚಂದ್ರ ಎಂಬ ಭಜನೆಯ ಪ್ರಸುತಿಯಲ್ಲಿ ರಾಮನ ಬಾಲ್ಯವನ್ನು ಬಹಳ ಸೊಗಸಾಗಿ ವರ್ಣಿಸಲಾಯಿತು. ಗೆಜ್ಜೆಗಳನ್ನು ಧರಿಸಿದ ಪುಟಾಣಿ ರಾಮನು ನಡೆಯಲು ಪ್ರಯತ್ನಿಸುತ್ತಾ, ಮುದ್ದಾದ ಹೆಜ್ಜೆಗಳನ್ನಿಡುತ್ತಾ ತನ್ನ ತಾಯಂದಿರ ಮಡಿಲಲ್ಲಿ ಆಡುತ್ತಾನೆ. ನಗುತ್ತಾ, ಆಡುತ್ತಾ, ಓಡುತ್ತಾ ಮುಗ್ಗರಿಸುತ್ತಾನೆ. ಆತನ ತಾಯಂದಿರು ಅವನನ್ನು ಎತ್ತಿ ಪ್ರೀತಿಯಿಂದ ಮುದ್ದಾಡಿ, ಹೊಸ ವಸ್ತ್ರಗಳನ್ನು ಹಾಕಿ ಅವನೊಂದಿಗೆ ವಿವಿಧ ಆಟಗಳನ್ನು ಆಡುತ್ತಾರೆ. ಕಲಾವಿದೆಯು ಇದೆಲ್ಲದರ ಹೃದಯಂಗಮ ಅನುಭವವನ್ನು ಪ್ರೇಕ್ಷಕರಿಗೆ ಮಾಡಿಸಿದರು. ರಾಮನ ಬಾಲ್ಯದ ಮನಮೋಹಕ ದೃಶ್ಯವನ್ನು ಅತ್ಯಂತ ಪ್ರಬುದ್ಧ ರೀತಿಯಲ್ಲಿ ತೋರಿಸಿಕೊಟ್ಟರು. 

ಕಾರ್ಯಕ್ರಮದ ಕೊನೆಯ ಭಾಗವಾಗಿ ಕುಂತರವರಾಳಿ ರಾಗದ, ತಿಲ್ಲಾನವನ್ನು ಲವಲವಿಕೆಯ ಚಲನೆಗಳು, ಅಡವುಗಳು, ವೈವಿಧ್ಯಮಯ ಜತಿಗಳೊಂದಿಗೆ ಮುರಳಿಗಾನ ಅಸಮಾನಮೈನ ತಿಲ್ಲಾನದೊಂದಿಗೆ ವಿದ್ಯುಕ್ತವಾಗಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ಗರುಡ ಗಮನ ತವ ಚರಣ ಕಮಲಮಿವ ಶ್ಲೋಕದ ಮಂಗಳಂನೊಂದಿಗೆ ಕುಮಾರಿ ಸ್ಮಿತಾ ಎನ್ ಎಸ್ ಅವರು ತಮ್ಮ ರಂಗಪ್ರವೇಶವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದರು.

ಸಾಮಾನ್ಯವಾಗಿ ರಂಗಪ್ರವೇಶಗಳಲ್ಲಿ ಮೊದಲರ್ಧ ಭಾಗದಲ್ಲಿ ಕೆಲವು ನೃತ್ಯಬಂಧಗಳು ಹಾಗೂ ಸಭಾಕಾರ್ಯಕ್ರಮವಾದ ಮೇಲೆ ಇನ್ನುಳಿದ ನೃತ್ಯಬಂಧಗಳನ್ನು ಪ್ರದರ್ಶಿಸಲಾಗುತ್ತದೆ. ಆದರೆ ಗುರು ಶಮಾ ಕೃಷ್ಣ ಅವರ ಸಮರ್ಥ ಮಾರ್ಗದರ್ಶನದಲ್ಲಿ ತಯಾರಾದ ನೃತ್ಯಗಾರ್ತಿಯು ಎಲ್ಲಾ ನೃತ್ಯ ಬಂಧಗಳನ್ನು ಒಂದಾದ ಮೇಲೆ ಒಂದರಂತೆ ನಿರಂತರವಾಗಿ ಪ್ರದರ್ಶಿಸಿದ್ದು ಅವರ ನೃತ್ಯ ನೈಪುಣ್ಯತೆ ಹಾಗೂ ಬದ್ಧತೆಗೆ ಸಾಕ್ಷಿಯಾಗಿತ್ತು. ನೃತ್ಯಬಂಧಗಳನ್ನು ಗುರು ಶಮಾಕೃಷ್ಣ ಅವರು ಅತ್ಯಂತ ಕ್ರಿಯಾತ್ಮಕವಾಗಿ ಸಂಯೋಜಿಸಿದ್ದರು.

ಸಂಗೀತ ಕಲಾರಸಿಕರ ಕರ್ಣಾನಂದವನ್ನು ಉಂಟುಮಾಡುವಂತಹ ಗಾಯನ ವಿದ್ವಾನ್ ಶ್ರೀವತ್ಸ ಅವರದ್ದು. ಸರಳವಾದ, ಸ್ಫುಟವಾದ ನಿರೂಪಣೆಯಲ್ಲಿ ರಾಧಿಕಾ ರಾಮಾನುಜ ಅವರು, ಹಾಗೆಯೇ ವಾದ್ಯ ವೃಂದದಲ್ಲಿ ಅತ್ಯಂತ ನಿಪುಣ ವಿದ್ವಾಂಸರಾದ ಶ್ರೀಹರಿ ರಂಗಸ್ವಾಮಿಯವರು ಮೃದಂಗದಲ್ಲಿ, ಶ್ರೀ ಜಯರಾಂ ಕಿಕ್ಕೇರಿ ಅವರು ವೇಣುವಾದನದಲ್ಲಿ, ವೈಯೋಲಿನ್ ನುಡಿಸಿದವರು ಶ್ರೀ ಜೆ. ಕೆ ಶ್ರೀಧರ್ ಅವರು ಹಾಗೂ ರಿದಂಪ್ಯಾಡ್  ಜೊತೆಗೆ ಶ್ರೀ ಕಾರ್ತಿಕ್ ವೈಧಾತ್ರಿಯವರು, ಹೀಗೆ ನೃತ್ಯಸಂಗೀತ ವಿದ್ವಾಂಸರುಗಳ ಸಹಯೋಗವು ಕಾರ್ಯಕ್ರಮಕ್ಕೆ ಮೆರಗು ನೀಡಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಅಂತರರಾಷ್ಟ್ರೀಯ ಖ್ಯಾತಿಯ ಸಂಗೀತ ವಿದುಷಿ ಶ್ರೀಮತಿ ಪುಸ್ತಕಂ ರಮಾ ಅವರು, ಕೂಚಿಪುಡಿ ನೃತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ವಿದುಷಿ ಶ್ರೀಮತಿ ವೀಣಾ ಮೂರ್ತಿ ವಿಜಯ್ ಅವರು, ಹಾಗೂ ಯುವ ಕಲಾವಿದರಿಗೆ ಸ್ಪೂರ್ತಿಯಾಗಿರುವ, ಭರತನಾಟ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಗುರು ವಿದ್ವಾನ್ ಪಾರ್ಶ್ವನಾಥ್ ಉಪಾಧ್ಯೆ ಅವರು ಉಪಸ್ಥಿತರಿದ್ದು ಕಲಾವಿದೆಗೆ ಶುಭ ಹಾರೈಸಿದರು.

‍ಲೇಖಕರು Admin

December 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: