ಲಲಿತಾ ಸಿದ್ಧಬಸವಯ್ಯ
ಅಡ್ಡೆಸರು ಇಟ್ಟೋರು ಒಂಟೋದರು
ಹಿಂದೆಮುಂದೆ ಸಂತೆದಾರಿ ಅಂತ ಬೊಗಳಿ
ಜೀವಬೆರಸೆ ಇರೋರ ಗತಿ ಏನೇಳಿ
ನೀವು ಅಪ್ಪನಿಗುಟ್ಟಿದ ಅಪ್ಪಂತೋರು ಉತ್ತರವೇಳಿ
ಹೊತಾರೆಯೆದ್ರೆ ಮಕ ಕಂಡೋರೆಲ್ಲ
ಕರೆಪಾರಕ್ಕ ಕರೆಪಾರಕ್ಕ ಕರೆಪಾರಕ್ಕ ಕರೇ,,
ಅವಳ ದುಃಖ ಅವಳು ಬಿಟ್ರೆ
ಗೊತ್ತಿರದು ಆ ಶಿವನಿಗೇ
ಪಾರಕ್ಕ ಅಂಬೋ ಹೆಸರುಳ್ಳವರು
ಅದೇಸು ಜನವೊ ಊರ ತುಂಬ
ಬಾರೆಮನೆ ಪಾರಕ್ಕ , ಅಯ್ನೋರ ಪಾರಕ್ಕ
ಹುಣ್ಸೆಮರದ ಪಾರಕ್ಕ , ಕೆರೆಕೋಡಿ ಪಾರಕ್ಕ,
ಬಿಳೆ ಪಾರಕ್ಕ ; ಒಂದೊಂದು ಪಾರಕ್ಕನಿಗೊಂದೊಂದು ಅಡ್ರಸ್ಸು ; ನಮ್ಮ ಕಾವ್ಯನಾಯಕಿ ಅಡ್ರೆಸ್ಸು
ಕರೆಪಾರಕ್ಕ , ಥೋ
ಸೀನೀರಿಗೆ ಊರೆಲ್ಲ
ಇಳೆ ಬೀಳಬೇಕು ಅವರ ಮನೆ ಬಾವಿಗೆ
ಸೀನೀರುಬಾವಿ ಪಾರಕ್ಕ
ಅಂದರೇನು ಸಿರವೋಗುತ್ತಿತ್ತಾ
ಮತ್ತೆ ನೀವೇ ಹೇಳಿ
ಎಳನೀರೊಳಗೆ ಎಳನೀರು
ಬಂದದ್ದೆಂಗೆಂದು ಬಲ್ಲವರು, ಸಂಪನ್ನರು
ಮಕ ನೋಡಿದವರೆಲ್ಲ, ಕರೆಪಾರಕ್ಕ
ಆಯ್ತಾ ಅಡುಗೆ? ಏನ್ ಕರೆಪಾರಕ್ಕ ಆಯ್ತೇನೆ ತೆನೆ ಬಡ್ದುದ್ದು ? ಮಕ ಕರ್ರಗಿದ್ದುದ್ದ ಮಕ ಕಂಡಾಗೆಲ್ಲ
ಒತ್ತೊತ್ತಿಯೇಳಿ ಜೀವ ಮೆತ್ತಗೆ ಮಾಡಿದರೇ
ಶಿವಶಿವಾ ಗುಟ್ಟೆ ಮಲ್ಲಯ್ಯ
ಇವೊತ್ತೂ ಅದೇ ದುಕ್ಕವಾಗಿ
ಒಲೆ ಮೇಗಳ ಹಿಟ್ಟಿನೆಸರಿಗೂ
ಅತ್ತತ್ತವಾಗಿ ಕುದಿಗೊಂಡಿದ್ದಾಳೆ ಕರೆಪಾರಕ್ಕ
ಕವಗೋಲಿನ ಮೇಲೊಂದು ಕಾಲು
ಒಲೆಬುಡಕ್ಕಿನ್ನೊಂದನ್ನ ಒತ್ತಿಕೊಂಡು
ಕಣ್ಣಾಗೆ ನೀರು ಬಸಿಯುತ್ತವಳು
ಹಿಟ್ಟು ಕುದಿ ಕೂಡಿಸುವಾಗ್ಗೆ
ಅಗಳೇ,, ಆಗಲೇ ಬಂದನೇ ಆ ಸಕುನದೋನು
ಬಂದೋನು ಬಂದಂಗೆ ಕೈಯಾಗಿನ ಗಿಲಕಿ
ಲೊಡಲೊಡ ಅನಿಸಿಗೆಂಡು ಆಡ್ತನೆ
“ಯಾರಮ್ಮಣ್ಣಿ ಗರತಿ ಒಳಗಿರಾರು
ಒಂದೊಳ್ಳೆ ಪಟ್ಟೆಸೀರೆ ಮ್ಯಾಗೆ ಹದಿನಾರಾಣೆ
ಒಂದ್ಸೇರು ಸಣ್ಣಕ್ಕಿ ಪಕ್ಕದಾಗೆರಡು ಬೆಲ್ಲದಚ್ಚು
ನಾಲ್ಕೆಲೆ ಎಂಟಡಿಕೆ ಮೊರದಾಗೆ ಮಡಿಕ್ಕಂಡು ಬಾರವ್ವಾ , ಹಿಂದಾಗೋಗಿದ್ದ ಆಗಿದ್ದಂಗೇಳಿ
ಮುಂದಾಗೋದ ತಿದ್ದಿಕೊಟ್ಟೇನು”
ರೇಗೋಯ್ತು ಪಾರಕ್ಕಂಗೆ
ಹಂಗೆ ಧುಮಗುಟ್ಟಿಕೊಂಡ್ ಬಂದವಳೇ
“ಲೇ ಸಕುನಿ ತಿಕ ಮುಚ್ಕಂಡೋಗಲೆ
ಪಟ್ಟೆಸೀರೆ ತಂದುಡಿಸಕ್ಕೆ ನೀನೇನು ಈ ಮನೆ ಬೀಗನೇ
ಮುಂದಾಗೋದ ತಿದ್ದುತಾನಂತೆ
ತಿದ್ದಲೇ ಹಂಗಾರೆ ಈ ನನ್ ಕರೇ ಮಕವ
ಬೆಳ್ಳಗ್ ಮಾಡಲೆ ಹಂಗಾರೆ ಈ ನನ್ ಕರೇ ಮಕವಾ “
ಆವಾಗ್ಗೆ ಆ ಸಕುನದೋನು
ಪಾರಕ್ಕನ ಸವಾಲನ್ನ ಸ್ವೀಕರಿಸಿದಂತೆ ಅವಳ
ಮುಖವನ್ನೇ ತಿನ್ನುವವನಂಗೆ ನೋಡಿ ಅಂದ ;
“ಆಯ್ತು ತಗಳವ್ವ
ಚಂಜೀವೊಳಗೆ ನಿನ್ ಮಕ ಬೆಳ್ಳಗಾಗ್ತದೆ”
“ಆಗ್ತದೆ ಆಗ್ತದೆ , ಪರಬ್ರಮ್ಮ ನೋಡು
ನಿನ್ನ ವಾಕ್ಕು ಬ್ರಮ್ಮನ ವಾಕ್ಕು ನೋಡು
ಬೆಳ್ಳಗಾಗ್ತದೆ ನನ್ ಮಕ ಬೈಗೊತ್ತಿಗೆ
ಬಿಕ್ಸ ಇಕ್ಕಿಸಿಕಂಡು ವೋಗಯ್ಯ ಸುಮ್ಕೆ
ಮಲಗಿರ ಮಗ ಎದ್ದಾತು ಆಮ್ಯಾಕೆ”
ಪಾರಕ್ಕ ಬಿಟ್ಟುಬಂದಿದ್ದ ಹಿಟ್ಟಿನಕುದಿ
ನೆಪ್ಪಾಗಿ ಬಿರ್ರನೆ ಹೋಗಿ ಕವಗೋಲಿನ ಮ್ಯಾಲೆ
ರಪ್ಪನೆ ಕಾಲೂರಿದ್ದೆಷ್ಟೋ ಅಷ್ಟೇ ದ್ಯಾವ್ರೂ
ಶಿವಶಿವಶಿವಾ ಆಮ್ಯಾಲಿನದ ಯಾವ ಬಾಯಿಂದ ಹೇಳಲೋ ಗುಟ್ಟೆ ಮಲ್ಲಯ್ಯಾ
ಕವಗೋಲು ಜಾರಿ
ಹಿಟ್ಟಿನ ಸೋರೆಯ ಹೊಟ್ಟೆಗೆ ಎಟ್ಟಿ
ಅದು ಠಳ್ಳೆಂದು ಎರಡೊಪ್ಪಾಗಿ ಬಿಟ್ಟುಗೊಂಡು
ಕುದಿಯೆಸರು ಮಂದಗೆ ಹರಿದು ಅಂಗಾಲು ಸುಡಲು
ವಾಸರ ತಪ್ಪಿದ ಪಾರಕ್ಕ ಅಗಗಗಗಾ ಅಂಬೊ ಹೊತ್ತಿಗೆ
ನಿಗಿಕೆಂಡದ ಮ್ಯಾಲೆ ಮಕವಾಗಿ ಮುಗ್ಗರಿಸಿದಳೆಲ್ಲೋ
ಶಿವಶಿವಶಿವಾ
ಮಕವೆಲ್ಲ ಬೆಂದು
ಈರುಳ್ಳಿ ಸಿಪ್ಪೆಯಂಗೆ ಸುಲಿದು
ಆರಾರು ತಿಂಗಳು ಆಸುಪತ್ತರೆಗಲೆ್ದುದು
ಕಂಡದ್ದು ಕೇಳಿದ್ದು ಔಸುಧವ ಬಳಿದು
ಕರೆಪಾರಕ್ಕನ ಮಖವೆಂಬುದೀಗ
ಸಿಪ್ಪೆಯೆರೆದ ಪರಂಗಿಯಣ್ಣು
ಶಿವಶಿವಶಿವಾ
ಹೊಟ್ಟೆಯ ಮಗ ಸೈತ
ಕಿಟ್ಟಾರನೆ ಕಿರುಚೈತೆ
ಹತ್ತು ವರುಷದ ಗಂಡ ಮುಖ ಸಿಂಡರಿಸವ್ನೆ
ಅತ್ತೆ ಮಾವರು ಅತ್ತಂಗೆ ಮಾಡವ್ರೆ
ಅಪ್ಪ ಅಮ್ಮರು ಮಾತ್ರ ಆತುಗೊಂಡವ್ರೆ
ಅವಳ ದುಃಖವೆಂಬುದು
ಹತ್ತುಸಾವಿರ ಪಟ್ಟು ಹೆಚ್ಚಾಗಿ
ಮಕ ಬೆಳ್ಳಗಾದರೂ
ಸುಖವಿಲ್ಲವಾಗೈತೆ ಕರೆಪಾರಕ್ಕನಿಗೆ
ಅಯ್ಯೋ ನಿನ್ನ ಮನೆಕಾಯಾಗ
ಯಾತರ ಶಿವನೋ ನಿನ್ನ ಹುಟ್ಟಡಗ
ಹಸಿರು ಗಿಡದ ಮ್ಯಾಲೆ ಬೆಳ್ಳಾನೆ ಹುವ್ವ
ಬಿಳೇಮುಗಿಲಿನ ಸೆರಗು ಕಪ‌್ಪಾನ ಅಂಚು
ಆಟೇ ಚೆಂದಾಗಿತ್ತೊ ಗುಟ್ಟೆ ಮಲ್ಲಯ್ಯ
ಈಟೊಂದು ನರದೊಗಲು ಹನ್ನೆರಡು ಬಣ್ಣ
ಲೋಕದ ಮೇಲ್ಯಾಕಿಟ್ಟೊ ಕೆಂಡಗಣ್ಣಿನಯ್ಯ
ಲಲಿತಾ ಸಿದ್ದಬಸವಯ್ಯರ ಕವನ ಅದ್ಭುತವಾಗಿದೆ
ತುಂಬಾ ದಿನಗಳ ನಂತರ ಅದ್ಭುತವಾದ ಕವಿತೆ ಓದಿದೆ. ತುಮಕೂರು ಸೀಮೆಯ ಆಡು ನುಡಿಗಳ ಬಳಕೆ ಕಲಾತ್ಮಕವಾಗಿದೆ. ಧನ್ಯವಾದ ಮೇಡಂ.
ತುಮಕೂರಿನ ಆಡುಭಾಷೆಯಲ್ಲಿ ಕತೆಯನ್ನು ಕವಿತೆಯಾಗಿಸಿದ್ದರೆ ಲಲಿತಸಿದ್ದಬಸವಯ್ಯ.ಬಾಷೆಯ ಸೊಗಡಿನೊಂದಿಗೆ ಅದನ್ನು ಕಟ್ಟಿ ಹೇಳಿರುವ
ರೀತಿ ತುಂಬಾ ಸೊಗಸಾಗಿ ಮನ ಮುಟ್ಟುವಂತಿದೆ
ಆದಿವಾಲ ಗಂಗಮ್ಮ
ಜಯನಗರ ಬೆಂಗಳೂರು
ಲಲಿತಾ ಸಿದ್ದಬಸವಯ್ಯ ಅವರ ಕವಿತೆಗಳು ಯಾವಾಗಲೂ ಹಾಗೆ… ಎದೆಗಿರಿದು ಸತ್ಯ ಹೇಳುತ್ತವೆ…
ಈ ಪದ್ಯದ ಕಟ್ಟಕಡೆಯಲ್ಲಿ “ಪವಾಡ”ದಂತಹುದನ್ನು ಬಳಸಿದ್ದು ನನಗಿಷ್ಟವಾಗಲಿಲ್ಲ… ಯಾರದೋ ಶಾಪಕ್ಕೆ ಯಾರದೋ ಮೈ ಸುಟ್ಟಿತು ಎಂಬರ್ಥ ಈ ಕವಿತೆಯ ಉದ್ದೇಶ ಎಂದು ಯಾರು ಭಾವಿಸಬಾರದು.
ಕಡೆಯಲ್ಲಿ ಇರುವ ನಾಲ್ಕು ಸಾಲುಗಳಲ್ಲಿ ಇರುವ ಇಷ್ಟೊಂದು ಬಣ್ಣಗಳ ಯಾಕೆ ಮಾಡಿದೆಯೋ ಎಂಬ ಆರ್ತತೆಯೇ ಈ ಕವಿತೆಯ ಮತ್ತು ಕರೆಪಾರವ್ವನಂತಹ ಎಲ್ಲರ ದನಿಯಾಗಿ ಓದುಗನಲ್ಲಿ ಉಳಿಯಬೇಕು.
– ಬಿ.ಸುರೇಶ
ಅಯ್ಯೋ ಇದೇನಿದು ಶಕುನದ ಪುರುಷನನ್ನು ಗೆಲ್ಲಿಸಿ ಪಾರಕ್ಕನ ಮಖಸುಟ್ಬಿಟ್ರಲ್ಲ ಮೇಡಂ. ಗುಟ್ಟೇಮಲ್ಲಪ್ಪನು ಅಸಹಾಯಕನಾದನೆ?
ಅಂತೂ ಪುರುಷರ ಟ್ರಸ್ಟ್ ರೇಷನ್ ಅನ್ನು ಮತ್ತೆ ಉಳಿಸಿದಂಗಾಯ್ತಲ್ಲ…..
ಪಾರಕ್ಕನಿಗೆ ಪಾಡು ಕಾಣಿಸಿಬಿಟ್ರಿ….
“ಮರಿಗೆಮ್ಮನ ಬಂಡಾಯ” ಬಾಸೆಗೆ ಎಷ್ಟು ಪವರ್ ಅಲ್ಲಾ” ಎಂಬ ಲಲಿತಾ ಸಿದ್ದಬಸವಯ್ಯನವರ ಕವನಗಳನ್ನು ನೆನಪಿಸುವ ಈ ಕವಿತೆ ಕೂಡ ಅವುಗಳಂತೆ ಬಹಳಷ್ಟು ಸಲ ಓದಿಸಿಕೊಳ್ಳುತ್ತದೆ. ತುಮಕೂರಿನ ಆಡುಬಾಷೆಯ ಸೊಗಡಿನಿಂದ ಕೂಡಿದ ಅವರ ಕವನಗಳಲ್ಲಿ ಒಂದು ರೀತಿಯ ಮಾಂತ್ರಿಕತೆಯಿದೆ. ಒಂದು ಕತೆಗಾಗುವಷ್ಟು ಸರಕನ್ನು ಕವನದಲ್ಲಿ ಇಡಿದಿಡುವ ಅವರ ಚತುರತೆ ಮೆಚ್ಚುವಂತದ್ದು.
ಆಡು ಭಾಷೆಯ ಸೊಗಡಿನಲ್ಲಿ ತನ್ಮಯಗೊಳಿಸುವ ಕವನ
ಮೂರ್ನಾಲ್ಕು ಸಾರಿ ಓದಿದೆ. ಆಡು ಭಾಷೆಯ ಸೊಗಡು, ಒಂದು ಜಾನಪದ ಕಥೆಯಂತಾ ಕಥೆಯನ್ನು ಕವನವನ್ನಾಗಿಸಿದ ಪರಿ ಅನನ್ಯ, ಅದ್ಭುತ.
ಅಡ್ರಸ್ಸು ಎಂಬ ಆಂಗ್ಲ ಭಾಷೆಯಿಂದ ಎರವಲು ಪಡೆದ ಶಬ್ದದ ಯಥಾವತ್ ಬಳಕೆ, ಕವನ, ಕವಿತೆಗಳಲ್ಲಿ ಎಷ್ಟು ಸರಿ?
ವೈಯುಕ್ತಿಕವಾಗಿ ನನಗೆ ಹಿಡಿಸದು.
ಈ ಕವನ ಓದಿ , ಮೆಚ್ಚಿ ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ ಶರಣು. ಪ್ರಕಟಿಸಿದ ಅವಧಿಯ ತಂಡ, ವಿಶೇಷ ಸಂಚಿಕೆಯ ಸಂಪಾದಕಿ ಗೆಳತಿ ಆರತಿಯವರಿಗೆ ಶರಣು ಶರಣು.
ನೀವುಗಳು ಗುರುತಿಸಿದ ಹಾಗೆ ಇಲ್ಲಿಯ ಭಾಷೆ ನಮ್ಮ ತುಮಕೂರಿನ, ಹಳ್ಳಿಗರ ಶ್ರಮಿಕ ಜನರ ಆಡು ಮಾತಿನ ಕನ್ನಡ. ಇತ್ತೀಚಿನ ದಿನಗಳಲ್ಲೂ ಇದು ಕಲಬೆರಕೆಯಾಗಿಲ್ಲ. ನೀವು ಕೊರಟಗೆರೆ ಮಧುಗಿರಿ ತಾಲ್ಲೂಕಿನ ಹಳ್ಳಿಪಳ್ಳಿಗಳಲ್ಲಿ ಇದೇ ಕನ್ನಡವೇ ಸಂವಹನ ಸೇತು. ಆದರೆ ಕೆಲವು ಪದಗಳು ಮರೆಯಾಗಿವೆ. ಈ ಭಾಷೆ ಅರಗಿಸಿಕೊಂಡು ಈ ದೊಡ್ಡ ಕವನವನ್ನು ಯಾರಾದರೂ ಓದಿಯಾರೇ ಎಂಬುದೇ ನನಗೆ ಅನುಮಾನವಾಗಿತ್ತು. ನಿಮ್ಮೆಲ್ಲರ ಪ್ರತಿಕ್ರಿಯೆ ಆ ಅನುಮಾನವನ್ನು ತೊಡೆಯಿತು. ಶರಣು.
ನಮ್ಮ ಕುಸುಮಬಾಲೆ ಒಂದು ಕಡೆ ಈ ಕವನ ವಾಚಿಸಿದ್ದಾರೆ, ಶಿವಶಿವಾ, ನಾನೇ ಓದಿದ್ದರೂ ಅದನ್ನು ಅಷ್ಟು ಚೆಂದಾಗಿ ಓದುತ್ತಿದ್ದೆನೋ ಇಲ್ಲವೋ ಅಷ್ಟು ಮನಸ್ಸಿಗೆ ತಟ್ಟುವಂತೆ ವಾಚಿಸಿದ್ದಾರೆ . ಇದು ವೇದಿಕೆಯಲ್ಲ. ಆದರೂ “ಅವಧಿಯ ಕ್ಷಮೆ ಕೋರಿ” ಕುಸುಮಂಗೂ ಇಲ್ಲಿ ಶರಣೆನ್ನುವೆ. ಕುಸಮನ್ನ ಸಂಪರ್ಕಿಸಲು ಸದ್ಯಕ್ಕೆ ಇದೇ ನನಗೆ ಸುಲಭದ ದಾರಿ.
ಅಪರೂಪದಲ್ಲಿ ಅಪರೂಪದ ಕವಿತೆ ಓದಿದೆ ಅಕ್ಕ.
ಚೆನ್ನಾಗಿದೆ.