ಸೌಮ್ಯಶ್ರೀ ಎ ಎಸ್
ನೀನು ಸುರಿಸಿದ ಒಲವ ಮಳೆಯಲ್ಲಿ
ಮಿಂದ ಮನಸು ನಿನದೇ ಕನವರಿಕೆಯಲ್ಲಿ
ಕಳೆದುಹೋಗಿರುವಾಗ ಹದವಾಗಿ ಪ್ರೀತಿಯಲ್ಲಿ
ಬೆಂದ ಇಟ್ಟಿಗೆಯ ಜತನವಾಗಿ ಜೋಡಿಸಿದ್ದೆ.
ಹಸಿ ಇಟ್ಟಿಗೆಗೆ ಬೆಂಕಿ ತಗುಲಿಸಿ
ಅರೆ ಕ್ಷಣ ಕದಲದೆ ಕನಲದೆ
ಹೆದರಿ ಎದುರು ಕೂತಿದ್ದೆ
ಬೆಂಕಿಯ ಬಿಸಿ ಮುಖಕ್ಕೆ ರಾಚುತ್ತಿತ್ತು!
ಒಮ್ಮೊಮ್ಮೆ ಕಣ್ಣಿಗೆ ಹೊಗೆ ತುಂಬಿಕೊಂಡು
ಉರಿ ತಾಳಲಾರದೆ ಎರಡು ಹಸ್ತಗಳು ಉಜ್ಜಿದಾಗ
ಮೈ ಮರೆತು ಅತ್ತಿಂದಿತ್ತ ಕಣ್ಣು ಹಾಯಿಸಿದರೆ
ನನ್ನ ಮನಸು ನನಗರಿವಿಲ್ಲದೆ
ಅರೆ ಬೆಂದ ಇಟ್ಟಿಗೆಯಂತಾಗಿ
ಬಿಡುವುದೋ!

ನಿನದೇ ಗುಂಗಿನಲ್ಲಿ ಮುಳುಗಿ
ಮೈ ಮನಸು ಮತ್ತಿನಲ್ಲಿ ಅಲೆವಾಗ
ಮೊಗದಲ್ಲಿ ಮಾಸದ ಮುಗುಳ್ನಗೆಯ
ಅರಳಿ ನಗುವಾಗ ಅದೆಲ್ಲಿ
ಕಣ್ಣುಗಳು ಅಳಿದುಳಿದ
ಬೆಂಕಿ ಸುರಿಸಿಬಿಡುವವೋ!
ಮಣ್ಣಿನ ಹಚ್ಚನ್ನು ಹದವಾಗಿ
ಮನದಲ್ಲಿ ಕೂರಿಸಿ
ಜತನವಾಗಿ ಉರಿ ತಗುಲಿಸಿ
ಹದವಾಗಿ ಬೇಯಿಸಿ
ಒಲವಿನ ಗೂಡು ಕಟ್ಟಿದ್ದೇನೆ
ನಿನ್ನ ಹೆಜ್ಜೆಯ ಸ್ಪರ್ಶಕ್ಕಾಗಿ ನನ್ನ ಈ ಮನಸು
ಸಂಭ್ರಮದಿ ಕಾದಿದೆ.
0 ಪ್ರತಿಕ್ರಿಯೆಗಳು