‘ಸೇವಾದಿನಗಳ ಚೌಚೌ ಬಾತ್ ಕತೆಗಳು’

ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ತಮ್ಮ ಅಮೆರಿಕಾ ಪ್ರವಾಸದ ನಂತರ ದಿಲ್ಲಿಯ ಸೆಂಟ್ರಲ್ ವಿಸ್ತಾ ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ಪ್ರಧಾನಮಂತ್ರಿಗಳು ನೀಡಿದ ದಿಢೀರ್ ಭೇಟಿಯು ದುರಾದೃಷ್ಟವಶಾತ್ ತಪ್ಪು ಕಾರಣಗಳಿಂದಾಗಿ ಸುದ್ದಿ ಮಾಡಿತು. 

ಈ ಸುದ್ದಿಯು ಎಲ್ಲದಕ್ಕಿಂತ ಹೆಚ್ಚು ಸದ್ದು ಮಾಡಿದ್ದು ಪ್ರಧಾನಮಂತ್ರಿಯವರ ಭೇಟಿಯು ನಿರ್ಮಾಣ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲು ಮಾಡಿದ್ದ ದಿಢೀರ್ ಭೇಟಿಯಾದರೆ, ಅಲ್ಲಿ ನಿಯೋಜಿತ ಕ್ಯಾಮರಗಳದ್ದೇನಿತ್ತು ಕೆಲಸ ಎಂಬುದು! ಕೆಲವೊಮ್ಮೆ ಸಾಕಷ್ಟು ತಲೆ ಓಡಿಸಿ ಸಿದ್ಧಪಡಿಸಿಟ್ಟುಕೊಳ್ಳುವ ಸರಕಾರಿ ಗಿಮಿಕ್ಕುಗಳೂ ಕೂಡ ಹೇಗೆ ಎಡವಟ್ಟಾಗುತ್ತವೆ ಎಂಬುದಕ್ಕೆ ಒಳ್ಳೆಯ ನಿದರ್ಶನವಿದು. 

ಕೆಲ ವರ್ಷಗಳ ಹಿಂದಿನ ಮಾತು. ನಾನು ಆಗಷ್ಟೇ ಸರಕಾರಿ ಮಂತ್ರಾಲಯವೊಂದರಲ್ಲಿ ಎಂಜಿನಿಯರ್ ಆಗಿ ಸೇರಿಕೊಂಡಿದ್ದೆ. ಅದು ಜನವರಿ ತಿಂಗಳ ದಟ್ಟ ಚಳಿಗಾಲ. ರಾಕ್ಷಸಚಳಿಯ ಹೊಡೆತಕ್ಕೆ ಕಣ್ಣು ಹಾಯಿಸಿದಲ್ಲೆಲ್ಲಾ ಮಂಜಿನ ಬಿಳಿಪರದೆಯ ಚಾದರ. ಹೀಗಿರುವಾಗ ಎರಡು ದಿನಗಳ ನಂತರ ಇಂತಿಂಥಾ ನಿರ್ಮಾಣ ಕಾಮಗಾರಿಯ ಸ್ಥಳಕ್ಕೆ ಹೋಗಿ ಪರಿಶೀಲನೆಯನ್ನು ಮಾಡಬೇಕೆಂಬ ಆದೇಶವೊಂದು ಇಲಾಖೆಯಿಂದ ಬಂದಿತು. ಅದೆಷ್ಟೇ ದಿಢೀರ್ ಭೇಟಿಯಾದರೂ ಆಯಾ ಸ್ಥಳದ ಮುಖ್ಯಸ್ಥರಿಗೆ, ಆಯಾ ವಿಭಾಗದ ನೋಡಲ್ ಅಧಿಕಾರಿಗಳಿಗೆ ಪರಿಶೀಲನಾ ಭೇಟಿಯ ಬಗ್ಗೆ ಮುಂಚಿತವಾಗಿ ತಿಳಿಸುವುದು ಒಂದು ವಾಡಿಕೆ. ಪರಿಶೀಲನಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವಾಗ ಎಲ್ಲಾ ಅವಶ್ಯಕ ದಸ್ತಾವೇಜುಗಳು ವ್ಯವಸ್ಥಿತವಾಗಿದ್ದು ಸಮಯವು ವ್ಯರ್ಥವಾಗದಿರಲಿ ಎಂಬ ಉದ್ದೇಶವು ಇದರ ಹಿಂದಿದೆ. 

ಮೈಕೊರೆಯುವ ಚಳಿಯಲ್ಲಿ ಮಂಜನ್ನು ಸೀಳುತ್ತಾ, ಕಾರು-ಬೈಕುಗಳ ನೆರವಿನಿಂದ ದುರ್ಗಮ ಹಾದಿಗಳನ್ನು ದಾಟಿ ದಿಲ್ಲಿಯ ಹೊರಭಾಗದಲ್ಲಿದ್ದ ಸ್ಥಳವನ್ನು ತಲುಪಿದ್ದಾಯಿತು. ಇತ್ತ ನಾಲ್ಕೈದು ಮಂದಿ ಅಧಿಕಾರಿಗಳನ್ನಷ್ಟೇ ನಿರೀಕ್ಷಿಸುತ್ತಿದ್ದ ನಾನು ಸುಮಾರು ಇಪ್ಪತ್ತೈದರಿಂದ ಮೂವತ್ತು ಮಂದಿಗಳ ಗುಂಪನ್ನು ಕಂಡು ಬೆರಗಾಗಿಬಿಟ್ಟೆ. ನಂತರ ಆ ಸ್ಥಳದ ಮುಖ್ಯ ಅಧಿಕಾರಿಯಾಗಿದ್ದ ಹಿರಿಯರೊಬ್ಬರು ನನ್ನನ್ನು ಆಫೀಸಿಗೆ ಬರಮಾಡಿಕೊಂಡರು. ವಿಚಿತ್ರವೆಂದರೆ ಅಷ್ಟೂ ಮಂದಿಯ ಗುಂಪು ನಮ್ಮ ಬೆನ್ನ ಹಿಂದೆ ಆಫೀಸಿನೊಳಕ್ಕೂ ಹಿಂಬಾಲಿಸಿ ಆ ಪುಟ್ಟ ಆಫೀಸನ್ನು ಉಸಿರುಗಟ್ಟಿಸಿಬಿಟ್ಟಿತು. 

ಪ್ರಾಜೆಕ್ಟಿನಲ್ಲಿ ತೊಡಗಿಸಿಕೊಂಡಿರುವ ಮುಖ್ಯ ಅಧಿಕಾರಿಗಳನ್ನು ಬಿಟ್ಟು ಉಳಿದವರೆಲ್ಲರೂ ಹೊರಹೋಗಬೇಕೆಂದು ಮುಖ್ಯಸ್ಥರಲ್ಲಿ ಮನವಿ ಮಾಡಿಕೊಂಡೆ. ಹೀಗೆ ಸುಮಾರು ಹತ್ತು ಜನರನ್ನು ಹೊರತುಪಡಿಸಿ ಉಳಿದವರೆಲ್ಲರೂ ಹೊರಹೋದ ಪರಿಣಾಮವಾಗಿ ಹಕ್ಕಿಗೂಡಿನಂತಿದ್ದ ಆಫೀಸು ಕೊಂಚ ನಿರಾಳವಾಯಿತು. ದಸ್ತಾವೇಜುಗಳ ಪರಿಶೀಲನೆ, ಕಾಮಗಾರಿಗಳ ಪ್ರಗತಿ, ಸರಕಾರಿ ನಿಧಿಯ ವಿತರಣೆ… ಇತ್ಯಾದಿಗಳ ಬಗ್ಗೆ ಅಂದು ಸಂಕ್ಷಿಪ್ತವಾಗಿ ಚರ್ಚಿಸಿ, ಸ್ಥಳ ಪರಿಶೀಲನೆಗೆ ಹೊರಡಲು ತಯಾರಾದೆವು. ಅಷ್ಟರಲ್ಲಿ ಗುಂಪಿನಲ್ಲಿದ್ದ ಆಗಂತುಕನೊಬ್ಬ ನನ್ನತ್ತ ಬಂದು ಮೆಲ್ಲಗೆ ತನ್ನ ವಿಸಿಟಿಂಗ್ ಕಾರ್ಡನ್ನು ನನ್ನ ಕೈಯೊಳಗೆ ತೂರಿಸಿದ. ಆ ಕಾರ್ಡನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆತ ಸ್ಥಳೀಯ ಪತ್ರಿಕೆಯೊಂದರ ಪತ್ರಕರ್ತನೆಂಬುದು ಮನದಟ್ಟಾಯಿತು. 

ಯಾವ ಕಾರಣಕ್ಕೂ ಮಾಧ್ಯಮಗಳ ಆಗಮನವನ್ನು ನಿರೀಕ್ಷಿಸಿರದಿದ್ದ ನನಗೆ ಸಹಜವಾಗಿ ಅಚ್ಚರಿಯಾಗಿತ್ತು. ಪತ್ರಕರ್ತ ಮಹೋದಯರನ್ನು ಅಲ್ಲೇ ನಿಂತಿರಲು ಆದೇಶಿಸಿದ ನಂತರ, ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆಗೆ ಹೊರಟ ನಾನು ಮಾಧ್ಯಮದ ಮಂದಿಯನ್ನು ಕರೆಸಿದ ಬಗ್ಗೆ ಮುಖ್ಯಸ್ಥರನ್ನು  ತರಾಟೆಗೆ ತೆಗೆದುಕೊಂಡೆ. ಇವುಗಳು ಸಾಲದ್ದೆಂಬಂತೆ ಸ್ಥಳ ಪರಿಶೀಲನೆಯ ತರುವಾಯ ಉಪಾಹಾರದ ಹೆಸರಿನಲ್ಲಿ ಮುಖ್ಯಸ್ಥರು ಭರ್ಜರಿ ಔತಣಕೂಟದ ವ್ಯವಸ್ಥೆಯೊಂದನ್ನೇ ಆಯೋಜಿಸಿದ್ದರು. ದೊಡ್ಡ ಮೇಜುಗಳ ತುಂಬಾ ಹತ್ತಿಪ್ಪತ್ತು ಬಗೆಯ ಸಿಹಿತಿಂಡಿಗಳನ್ನು ಪೇರಿಸಿಟ್ಟಿದ್ದ ಪರಿಯು, ಉಪಾಹಾರಕ್ಕಿಂತ ಹೆಚ್ಚಾಗಿ ಗರ್ಭಿಣಿಯರಿಗೆ ಮಾಡುವ ಸೀಮಂತ ಕಾರ್ಯಕ್ರಮದಂತೆ ಕಂಡು ಮತ್ತಷ್ಟು ಮುಜುಗರಕ್ಕೆ ಕಾರಣವಾಯಿತು. 

ಈ ಮಧ್ಯೆ ಪತ್ರಕರ್ತ ಮಹೋದಯರು ಅದ್ಹೇಗೋ ನಮ್ಮ ನಡುವೆ ಮತ್ತೆ ಸೇರಿಕೊಂಡಿದ್ದರು. ಸಿಹಿತಿಂಡಿಗಳನ್ನು ತಿನ್ನುತ್ತಿದ್ದ ಕೆಲವರ ಚಿತ್ರಗಳು ಆತನ ಕ್ಯಾಮೆರಾದಲ್ಲಿ ಸೆರೆಯಾದವು. ಈ ಚಿತ್ರಗಳು ಆತನ ವರದಿಗಾರಿಕೆಗೆ ಅದ್ಯಾವ ರೀತಿಯಲ್ಲಿ ಉಪಯುಕ್ತವಾಗಿತ್ತೋ ತಿಳಿಯದು. ಒಟ್ಟಿನಲ್ಲಿ ಭಯಂಕರ ಫಜೀತಿ. ಇವೆಲ್ಲದರ ತರುವಾಯ ನಿರ್ಮಾಣ ಕಾಮಗಾರಿಯ ಪ್ರಗತಿಯ ಬಗ್ಗೆ ಏನಾದರೂ ಹೇಳಿಕೆ ನೀಡಿ ಎಂಬ ಬೇಡಿಕೆಯೊಂದನ್ನು ಅವರು ನನ್ನ ಮುಂದಿಟ್ಟಿದ್ದರು. ಅದನ್ನು “ಬೇಡಿಕೆ” ಎನ್ನುವುದಕ್ಕಿಂತ “ಬೆದರಿಕೆ” ಎನ್ನುವುದೇ ಸೂಕ್ತವೇನೋ! ನಾನು ಇವೆಲ್ಲದರ ಗೋಜೇ ಬೇಡವೆಂದು ಮಾಡಬೇಕಿದ್ದ ಕರ್ತವ್ಯಗಳನ್ನು ಲಗುಬಗೆಯಿಂದ ಮುಗಿಸಿ ಕಾರಿನತ್ತ ನಡೆದೆ. 

ಅಧಿಕಾರಿಯಾಗಿದ್ದ ಮಾತ್ರಕ್ಕೆ ಸರಕಾರಿ ಯೋಜನೆಗಳ ಬಗ್ಗೆ ಸುಖಾಸುಮ್ಮನೆ ಪತ್ರಿಕೆಗಳಿಗೆ ಅಧಿಕೃತವಾಗಿ ಹೇಳಿಕೆಗಳನ್ನು ನೀಡುವಂತಿಲ್ಲ ಎಂಬ ಬಗ್ಗೆ ಅದೆಷ್ಟೋ ಮಂದಿಗೆ ತಿಳಿದಿರುವುದಿಲ್ಲ. ಅದರಲ್ಲೂ ಕಿರಿಯ ಸರಕಾರಿ ಅಧಿಕಾರಿಗಳಿಗೂ, ಪತ್ರಿಕಾ ಹೇಳಿಕೆಗಳಿಗೂ ದೂರದೂರಕ್ಕೂ ಸಂಬಂಧವಿರುವುದಿಲ್ಲ. ಸರಕಾರಿ ಯೋಜನೆಗಳ ಪ್ರಗತಿಯ ಬಗ್ಗೆ ವರದಿ ಮಾಡುವುದು ಪತ್ರಕರ್ತರ ಕರ್ತವ್ಯವಿರಬಹುದು. ಆದರೆ ಪತ್ರಿಕೆಗಾಗಿ ಅಧಿಕೃತವಾಗಿ ಹೇಳಿಕೆಯನ್ನು ನೀಡುವುದು ನನ್ನ ಕರ್ತವ್ಯವಾಗಿರಲಿಲ್ಲ. ಈ ಬಗ್ಗೆ ಅದೆಷ್ಟು ಕಸರತ್ತು ಮಾಡಿ ಹೇಳಿದರೂ ಆತ ಒಪ್ಪಿಕೊಳ್ಳಲು ತಯಾರಿರಲಿಲ್ಲವಾದ್ದರಿಂದ ಅಲ್ಲೊಂದು ಗೊಂದಲದ ವಾತಾವರಣವೇ ಸೃಷ್ಟಿಯಾಗಿತ್ತು. 

ಉತ್ತರಪ್ರದೇಶ, ಬಿಹಾರದಂತಹ ಸೂಕ್ಷ್ಮ ಪ್ರದೇಶಗಳಲ್ಲಿರುವಾಗ ಇಂತಹ ಅನವಶ್ಯಕ ಜಂಜಾಟಗಳಿಂದ ದೂರವಿರುವುದೇ ಬುದ್ಧಿವಂತ ಅಧಿಕಾರಿಗಳ ಲಕ್ಷಣ. ಕೊನೆಗೂ ಆತನಿಂದ ಬಿಡಿಸಿಕೊಂಡು ಬರುವಷ್ಟರಲ್ಲಿ ನನಗೆ ಸಾಕುಸಾಕಾಗಿತ್ತು. ಒಬ್ಬ ಪತ್ರಕರ್ತನನ್ನು ಸಂಭಾಳಿಸುವುದೇ ಇಷ್ಟು ಕಷ್ಟವಾದರೆ ಗಣ್ಯಾತಿಗಣ್ಯ ವ್ಯಕ್ತಿಗಳು ಈ ‘ಪಾಪರಾಝಿ’ ಕ್ಷಣಗಳನ್ನು ಅದ್ಹೇಗೆ ಸಂಭಾಳಿಸುತ್ತಾರಪ್ಪಾ ಎಂದೆಲ್ಲಾ ಕಲ್ಪಿಸಿಕೊಂಡು ಮಾನಸಿಕವಾಗಿ ಮತ್ತಷ್ಟು ಸುಸ್ತಾಗಿಬಿಟ್ಟೆ. 

ಮರುದಿನ ಎರಡು ಸಂಗತಿಗಳನ್ನು ಬಿಟ್ಟು ಬೇರೆಲ್ಲವೂ ಆ ಹಿಂದಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತಂತೆ. ಅವುಗಳಲ್ಲಿ ಒಂದು ಕೊನೆಗೂ ನನ್ನಿಂದ ವರದಿಗಾರನಿಗೆ ದೊರೆಯದೆ ಹೋದ ಹೇಳಿಕೆ; ಮತ್ತೊಂದು ಸಿಹಿತಿಂಡಿಗಳ ಸಾಗರದ ಮಧ್ಯೆ ಅಧಿಕಾರಿಗಳು ಸ್ವೀಟ್ ಸವಿಯುತ್ತಿದ್ದ ಮುಜುಗರ ತರುವ ಫೋಟೋಗಳು. ಉಳಿದವರ ಬಗ್ಗೆಯಂತೂ ಗೊತ್ತಿಲ್ಲ. ಆದರೆ ಅಂದು ಗೊತ್ತಿದ್ದೋ, ಗೊತ್ತಿಲ್ಲದೆಯೋ ಪತ್ರಕರ್ತ ಮಹೋದಯರನ್ನು ಕರೆಸಿಕೊಂಡ ಮುಖ್ಯ ಅಧಿಕಾರಿ ಮಾತ್ರ ಆ ವರದಿಯನ್ನು ಓದಿ ನಿರಾಳರಾಗಿರಬಹುದು. ಏಕೆಂದರೆ ಸ್ಥಳ ಪರಿಶೀಲನೆಯ ದಿನದಂದು ಈಗಾಗಲೇ ನಡೆದಿದ್ದ ಸಾಕಷ್ಟು ಅಧ್ವಾನಕ್ಕೆ ಕಲಶಪ್ರಾಯವಾಗಿ ಪತ್ರಿಕಾವರದಿಯ ಈ ಪ್ರಕರಣವು ಸೇರಬಹುದಾಗಿತ್ತು. ಅವರ ಪುಣ್ಯ! ಹಾಗಾಗಲಿಲ್ಲ.

ಹೀಗೆ ಕೆಲವೊಮ್ಮೆ ನೀರಸವೆನಿಸುವ ದಿನಗಳ ಮಧ್ಯದಲ್ಲೂ ಇಂತಹ ಕೆಲವು ಘಟನೆಗಳು ಥಟ್ಟನೆ ಎದ್ದು ನೆನಪಿನ ದಾಖಲೆಗಳಾಗಿ ಮನದಾಳದಲ್ಲಿ ಉಳಿಯುತ್ತವೆ. ಹಲವು ಸರಕಾರಿ ಅಧಿಕಾರಿಗಳು ತಮ್ಮ ಸೇವಾ ಅವಧಿಯ ದಿನಗಳ ಬಗ್ಗೆ ಬರೆದಿರುವುದನ್ನು ನಾವೆಲ್ಲಾ ಓದಿರುತ್ತೇವೆ. ಅದರಲ್ಲೂ ರಾಜ್ಯ ಮತ್ತು ರಾಷ್ಟ್ರರಾಜಧಾನಿಯಲ್ಲಿ ಸೇವೆ ಸಲ್ಲಿಸಿದವರಿಗೆ ಎಲ್ಲಾ ಹಂತದ ಅಧಿಕಾರಿಗಳೊಂದಿಗೆ ಮತ್ತು ಗಣ್ಯಾತಿಗಣ್ಯರೊಂದಿಗೆ ಆಗಾಗ ಬೆರೆಯುವ ಅವಕಾಶವೂ ದೊರೆತಿರುತ್ತದೆ. ಹೀಗೆ ಬರೆಯುತ್ತಾ ಹೋದರೆ ಇವುಗಳದ್ದೂ ಕೂಡ ಮುಗಿಯದ ಕತೆ.

ಇಂತಿಪ್ಪ ಆಯ್ದ ಕೆಲವು ಸ್ವಾರಸ್ಯಕರ ಸತ್ಯಕತೆಗಳ ಗುಚ್ಛಗಳು ಇಲ್ಲಿವೆ.   

**********

ಶ್ರೀಮಂತ ಅಧಿಕಾರಿಯ ಬಡ ಇಲಾಖೆ:

ಅದು ಕಳೆದ ಸುಮಾರು ಒಂದು ದಶಕದಿಂದ ಭಾರೀ ನಷ್ಟದಲ್ಲಿದ್ದ ಸರಕಾರಿ ಸ್ವಾಮ್ಯದ ಸಂಸ್ಥೆ. ಯಾವುದೋ ಒಂದು ಕೆಲಸದ ನಿಮಿತ್ತ ಆ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಐ.ಎ.ಎಸ್ ಅಧಿಕಾರಿಯೊಬ್ಬರನ್ನು ನಾನಂದು ಭೇಟಿಯಾಗಬೇಕಿತ್ತು. ಈ ನಿಟ್ಟಿನಲ್ಲಿ ದಿಲ್ಲಿಯ ಹೃದಯಭಾಗದಲ್ಲಿದ್ದ ಅವರ ಆಫೀಸಿನ ವಿಳಾಸವನ್ನು ಪತ್ತೆಹಚ್ಚಿ ಭೇಟಿಯಾಗಲು ಹೊರಟೆ. ಮೊದಲೇ ಸಮಯವನ್ನು ನಿಗದಿಪಡಿಸಿ ಹೊರಟಿದ್ದರಿಂದ ನಿಗದಿತ ಸಮಯಕ್ಕೆ ಸರಿಯಾಗಿ ತಲುಪುವುದು ಪ್ರಯಾಸವೆನಿಸಲಿಲ್ಲ. 

ದಿಲ್ಲಿಯಲ್ಲಿರುವ ಬಹುತೇಕ ಸರಕಾರಿ ಆಫೀಸುಗಳಂತೆ ಇದೂ ಕೂಡ ಭವ್ಯವಾಗಿದ್ದು, ಹೊರನೋಟಕ್ಕೆ ಸರಕಾರಿ ಒಡೆತನದ ಅಧಿಕಾರದ ಪ್ರಭಾವಳಿಯನ್ನು ಯಶಸ್ವಿಯಾಗಿ ಹೊರಹೊಮ್ಮಿಸುವಂತಿತ್ತು. ಆದರೆ ಹೊರಗೆ ಕಾಣುವಂತೆ ಒಳಗೂ ಎಲ್ಲವೂ ಸರಿಯಿರಬೇಕಲ್ಲಾ! ಹಲವು ಮಹಡಿಗಳಲ್ಲಿ ವ್ಯಾಪಿಸಿದ್ದ, ಭೂತಬಂಗಲೆಯಂತಿದ್ದ ಆ ಆಫೀಸಿನಲ್ಲಿ ಕೆಲವೇ ಕೆಲವು ಮಂದಿ ಉದ್ಯೋಗಿಗಳನ್ನು ಕಾಣಬಹುದಿತ್ತು. ಗೋಡೆಗಳು ಬಣ್ಣದ ಮುಖವನ್ನು ಕಾಣದೆ ವರ್ಷಗಳೇ ಉರುಳಿದಂತಿತ್ತು. ಕಟ್ಟಡದ ಕೆಲವು ಭಾಗಗಳು ನಿರ್ಜನವಾಗಿದ್ದು, ಬಲೆಗಳು ಬಾವಲಿಗಳಂತೆ ಜೋತುಬಿದ್ದು ಇಲಾಖೆಯ ದುಸ್ಥಿತಿಗೆ ಕನ್ನಡಿ ಹಿಡಿಯುವಂತಿದ್ದವು. 

ಅಂತೂ ಟೆಲಿಫೋನ್ ಕರೆಯ ಮೂಲಕ ಸಂಪರ್ಕಿಸಿದ್ದ ಐ.ಎ.ಎಸ್ ಅಧಿಕಾರಿಯ ಕೋಣೆಯನ್ನು ತಲುಪುವಷ್ಟರಲ್ಲಿ ಬರೋಬ್ಬರಿ ಇಪ್ಪತ್ತೈದು ನಿಮಿಷಗಳು ಕಳೆದುಹೋಗಿದ್ದವು. ಇಲ್ಲಿಗೆ ಬರುವ ಎಲ್ಲರದ್ದೂ ಇದೇ ಕತೆ ಎಂದು ಅವರೂ ಸಂತೈಸುವಂತೆ ತಲೆಯಾಡಿಸಿದರು. ಇವೆಲ್ಲದಕ್ಕಿಂತಲೂ ಮಿಗಿಲಾಗಿ ಭವನದ ಪ್ರಾಥಮಿಕ ಸೌಲಭ್ಯಗಳ ಪರಿಸ್ಥಿತಿಯು ಅದೆಷ್ಟು ಹದಗೆಟ್ಟಿತ್ತೆಂದರೆ ಆ ಐ.ಎ.ಎಸ್ ಅಧಿಕಾರಿಯ ಹೆಸರು ಮತ್ತು ಹುದ್ದೆಯನ್ನು ಕಪ್ಪು ಬಣ್ಣದ ಮಾರ್ಕರ್ ಒಂದನ್ನು ಬಳಸಿ, ಕಾಗದದಲ್ಲಿ ಬರೆದು, ಆ ಹಳೆಯ ಬಾಗಿಲಿನ ಮೇಲೆ ಅಂಟಿಸಲಾಗಿತ್ತು. 

ಸರಕಾರಿ ಸ್ವಾಮ್ಯದ ಈ ಸಂಸ್ಥೆಯು ಮುಳುಗುತ್ತಿರುವ ಹಡಗು ಎಂಬ ಸಂಗತಿಯು ದೇಶದೆಲ್ಲೆಡೆ ಗುಟ್ಟಾಗಿಯೇನೂ ಉಳಿದಿಲ್ಲವಾದ್ದರಿಂದ ಅವರಿಗೂ ಇದು ಅಭ್ಯಾಸವಾಗಿರಬಹುದು ಎಂದು ನನಗೆ ನಾನೇ ಹೇಳಿಕೊಂಡೆ.

ಫನ್ ಇನ್ ಇಂಡಿಯಾ:

‘ಈ ಹಿರಿಯ ಅಧಿಕಾರಿಯು ದಿಲ್ಲಿಯಿಂದ ಮರಳುವವರೆಗೂ ನೀವಿಬ್ಬರು ಅವರ ಜೊತೆಗಿರುತ್ತೀರಿ’, ಎಂದು ನನಗೆ ಮತ್ತು ನನ್ನ ಜೊತೆಗಿದ್ದ ಪಂಜಾಬಿ ಸಹೋದ್ಯೋಗಿಯೊಬ್ಬನಿಗೆ ಏನಿಲ್ಲವೆಂದರೂ ನೂರು ಬಾರಿ ಹೇಳಲಾಗಿತ್ತು. ಆಫ್ರಿಕನ್ ದೇಶವೊಂದರ ಸರಕಾರಿ ಮಂತ್ರಾಲಯದಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ಆತನ ಉಪಚಾರಕ್ಕೆ ಯಾವ ಕುಂದೂ ಬರಬಾರದು ಎಂಬ ಕಾಳಜಿ ನಮ್ಮ ಸಂಸ್ಥೆಯದ್ದು. ಸರಕಾರಿ ಅಧಿಕಾರಿಗಳಿಗೆ ಆತಿಥ್ಯ-ಉಪಚಾರದ ಕೆಲಸಗಳು ಹೊಸತೇನಲ್ಲ. ಹೀಗಾಗಿ ಒಪ್ಪಿಕೊಳ್ಳದೆ ಬೇರೆ ವಿಧಿಯಿರಲಿಲ್ಲ. 

ಸದರಿ ಅಧಿಕಾರಿಗೆ ದಿಲ್ಲಿಯ ಪ್ರತಿಷ್ಠಿತ ಪಂಚತಾರಾ ಹೋಟೇಲೊಂದರಲ್ಲಿ ವಾಸ್ತವ್ಯದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಂಜೆಯ ಉಪಾಹಾರವನ್ನು ಗಡದ್ದಾಗಿ ಮುಗಿಸಿದವರೇ ನಮ್ಮನ್ನು ಕರೆದು, “ನೀವೆಲ್ಲೂ ಹೋಗಬೇಡಿ. ನಿಮ್ಮೊಂದಿಗೆ ಕೆಲ ಮುಖ್ಯ ವಿಚಾರಗಳನ್ನು ಚರ್ಚಿಸಲಿಕ್ಕಿದೆ. ನಾನು ಹತ್ತು ನಿಮಿಷಗಳಲ್ಲಿ ಫ್ರೆಶ್ ಆಗಿ ಬರುತ್ತೇನೆ” ಎಂದು ವಿನಂತಿಸಿ ಮರೆಯಾದರು. ಇತ್ತ ನನ್ನ ಸಹೋದ್ಯೋಗಿ ದಿಲ್ಲಿಯ ಕೊಲ್ಲುವ ಸೆಕೆಗೋ, ಸಮಯವನ್ನು ಕಳೆಯಲೋ ಹೋಟೇಲಿನ ರೆಸ್ಟೊರೆಂಟಿನಿಂದ ಮತ್ತೊಂದು ಕಾಕ್ಟೇಲ್ ತರಿಸಿಕೊಂಡು ನಿರಾಳನಾದ. 

ಹೀಗೆ ಸುಮಾರು ಹದಿನೈದು ನಿಮಿಷಗಳ ನಂತರ ಹೊರಬಂದ ಅಧಿಕಾರಿ ಈಗ ನಮ್ಮೆದುರು ಹೊಸ ಅವತಾರದಲ್ಲಿ ನಿಂತಿದ್ದರು. ದೊಗಲೆ ಟೀ-ಶರ್ಟು ಮತ್ತು ಕಣ್ಣಿಗೆ ರಾಚುವ ಬಣ್ಣಗಳನ್ನು ಹೊಂದಿದ್ದ, ಆಫ್ರಿಕನ್ ಶೈಲಿಯ ಬರ್ಮುಡಾ ಚಡ್ಡಿಯನ್ನು ಧರಿಸಿದ್ದ ಆತ ಹವಾಯಿ ಚಪ್ಪಲಿಯ ಗೆಟಪ್ಪಿನಲ್ಲಿ ಸಮುದ್ರತೀರಕ್ಕೆ ಹೊರಡಲು ಸಿದ್ಧನಾದಂತಿತ್ತು. “ನನಗೆ ದಿಲ್ಲಿಯ ನೈಟ್ ಕ್ಲಬ್ಬುಗಳನ್ನು ನೋಡಬೇಕಲ್ಲಾ… ಲೆಟ್ಸ್ ಗೋ”, ಎಂದು ಆತ ಹೇಳಿದಾಗ ನಾವು ಗೊಂದಲದಲ್ಲಿ ಬಿದ್ದೆವು. ಇದು ಆಗೋಹೋಗೋ ವ್ಯಾಪಾರವಲ್ಲ ಎಂದು ನಾನು ಹಿಂದಿಯಲ್ಲಿ ನನ್ನ ಸಹೋದ್ಯೋಗಿಗೆ ಹೇಳಿದೆ. ಅದನ್ನೇ ಚಂದದ ಇಂಗ್ಲಿಷಿನಲ್ಲಿ ಅವರಿಗೆ ಹೇಗಾದರೂ ಹೇಳಿಬಿಡು ಮಾರಾಯ ಎಂದ ಆತ ಕ್ಷಣಾರ್ಧದಲ್ಲಿ ಅಲ್ಲಿಂದ ಕಾಲ್ಕಿತ್ತ. ಚೆಂಡು ಈಗ ನನ್ನ ಅಂಗಳದಲ್ಲಿ ಬಿದ್ದಿತ್ತು. 

“ನೋಡಿ ಸಾರ್… ಇವುಗಳೆಲ್ಲಾ ನಿಮ್ಮ ದೇಶದಲ್ಲಿ ಹೇಗಿವೆಯೋ ನನಗೆ ಗೊತ್ತಿಲ್ಲ. ಆದರೆ ದಿಲ್ಲಿಯಲ್ಲಿ ನೀವು ಮೆಕ್ಸಿಕೋ, ಬ್ರೆಜಿಲ್ ಅಥವಾ ಲಾಸ್ ವೇಗಾಸ್ ಗಳನ್ನು ನಿರೀಕ್ಷಿಸಿದರೆ ನಿಮಗೆ ನಿರಾಶೆಯಾಗುವುದು ಖಂಡಿತ”, ಎಂದು ನಯವಾಗಿ ಮನದಟ್ಟು ಮಾಡಿಸಲು ನಾನು ಪ್ರಯತ್ನಿಸುತ್ತಿದ್ದೆ. ಅತಿಥಿಯಾಗಿ ಬಂದಿರುವ ವಿದೇಶಿ ಸರಕಾರಿ ಅಧಿಕಾರಿಯೊಬ್ಬ ದಿಲ್ಲಿಯಲ್ಲಿ ಇಲ್ಲದ ಅವಾಂತರಗಳಿಗೆ ಆಹಾರವಾಗುವ ಬಗ್ಗೆ ಕಲ್ಪಿಸಿಕೊಳ್ಳಲೂ ನಾವು ತಯಾರಿರಲಿಲ್ಲ. ಹೀಗಾಗಿ ಭದ್ರತಾ ಕಾರಣಗಳನ್ನು ಮುಂದಿಟ್ಟು ಅವರನ್ನು ಇಂತಹ ಅಪಾಯಕಾರಿ ಸಾಹಸಗಳಿಂದ ದೂರವಿಡುವುದು ಕೂಡ ನನ್ನ ಯೋಜನೆಗಳಲ್ಲೊಂದಾಗಿತ್ತು. ಕೊನೆಗೂ ನನ್ನ ತರಹೇವಾರಿ ನೆಗೋಷಿಯೇಷನ್ನುಗಳ ನಂತರ ಆತ ದಿಲ್ಲಿಯ ತನ್ನ ನೈಟ್ ಲೈಫ್ ಸಾಹಸಗಳ ಗುಂಗಿನಿಂದ ಹೊರಬಂದು ಹಿಂದಡಿಯಿಟ್ಟರು. ಇತ್ತ ಬದುಕಿದೆಯಾ ಬಡಜೀವವೇ ಎಂದು ನಿರಾಳರಾಗಿದ್ದು ಮಾತ್ರ ನಾವು. 

ಹೀಗೆ ಅವರ ದಿಲ್ಲಿಯ ನೈಟ್ ಕ್ಲಬ್ ಅಡ್ವೆಂಚರಿನ ಕನಸು ಮುಂದೆಂದಾದರೂ ನನಸಾಗಲಿ ಎಂಬ ಹಾರೈಕೆಯೊಂದಿಗೆ ನಾವು ಆ ದಿನಕ್ಕೆ ಮಂಗಳ ಹಾಡಿದೆವು. 

‍ಲೇಖಕರು Admin

October 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: