ಸುನಕ ಶಕೆಯ ‘ಶುನಕ ಸೆಕೆ’ಯ ದಿನಗಳು
ಮುರಳಿ ಹತ್ವಾರ್, ಲಂಡನ್
—
ಭಾರತೀಯ ಮೂಲದ ರಿಷಿ ಸುನಕ್ ತನ್ನ ಪಳಗಿದ ರಾಜಕೀಯ ಪಟ್ಟಿನಲ್ಲಿ ಯುನೈಟೆಡ್ ಕಿಂಗ್ಡಮ್ ಪ್ರಧಾನಿಯಾಗಿ ಇನ್ನೇನು ವರ್ಷ ತುಂಬಲಿದೆ. ಈ ಸುನಕ ಶಕೆಯ ಶುರುವಿನಿಂದ ಈವರೆಗೆ ಒಂದಲ್ಲ ಒಂದು ರಾಜಕೀಯ ವಿವಾದಗಳ ಬಿಸಿಯಿಂದ ಬಾಣಲೆ-ಬೆಂಕಿಯ ಹಾರಾಟದಲ್ಲಿ ತನ್ನ ಹಾಗು ತನ್ನ ಪಾರ್ಟಿಯ ಉಳಿವಿಗೆ ಒದ್ದಾಡುತ್ತಿರುವ ಸುನಕರ ಕಷ್ಟಗಳ ಕಾವು ಮುಂದಿನ ಚುನಾವಣೆಯವರೆಗೂ ಆರುವಂತೆ ಕಾಣುವುದಿಲ್ಲ. ಅವರ ಈ ಬಿಸಿ ಬಿಸಿಯ ದಿನಗಳು, ಅಥವಾ ‘the dog days’ (the hot sultry days of summer, or periods of stagnation) ಅರ್ಥಾತ್ ‘ಶುನಕ ಸೆಕೆ’ಯ ದಿನಗಳು ಮುಂತರಬಹುದಾದ ಪರಿಣಾಮಗಳು ಬೆವರಿಳಿಸುವಂತಿವೆ.
ಮೊದಲಿಗೆ, ಪಾರ್ಟಿಯ ಬಲಪಂತೀಯರನ್ನ ಖುಷಿಯಿಡಲು, ಗೃಹ ಮಂತ್ರಿ, ಸುಯೆಲಾ ಬ್ರಾವರ್ಮನ್, ಮೂಲಕ ಜಾರಿಗೆ ತರುತ್ತಿರುವ ಬಹು ಕಠಿಣ ‘ವಲಸೆ ನೀತಿ’. ಕಳೆದ ಹತ್ತು ವರ್ಷಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಉಗ್ರವಾಗುತ್ತಿರುವ ಈ ನೀತಿ, ರಿಷಿ-ಸುಯೆಲಾ ನೇತೃತ್ವದಲ್ಲಿ ಉಗ್ರತೆಯ ಹಲವು ಮೆಟ್ಟಿಲುಗಳನ್ನ ಏರಿದೆ. ಇಂಗ್ಲೆಂಡ್ ದ್ವೀಪ ರಾಷ್ಟ್ರವಾದ್ದರಿಂದ ಇಲ್ಲಿಗೆ ಇಲ್ಲೀಗಲ್ಲಾಗಿ ಬರುವವರು ಫ್ರಾನ್ಸ್ ನಿಂದ ಇಂಗ್ಲಿಷ್ ಚಾನೆಲ್ ಸಮುದ್ರ ದಾಟಿ ಬರಬೇಕು. ಮಧ್ಯ ಪ್ರಾಚ್ಯ, ಅಫಘಾನಿಸ್ತಾನ, ಉತ್ತರ ಆಫ್ರಿಕಾಗಳ ವಲಸಿಗರು, ಮತ್ತವರ ಜೊತೆ ಪಾಕಿಸ್ತಾನ ಮತ್ತೆ ಭಾರತದಿಂದ ಬರುವ ವಲಸಿಗರು ಇವರೆಲ್ಲ ವ್ಯವಸ್ಥಿತ ಏಜೆಂಟರ ಸುಸಜ್ಜಿತ ಜಾಲದ ನೆರವಿನಿಂದ ಹೇಗೋ ಯೂರೋಪ್ ತಲುಪಿ ಅಲ್ಲಿಂದ ಪರಿಚಯದ ಇಂಗ್ಲಿಷ್ ಭಾಷೆಯ ಕಾರಣಕ್ಕೋ ಅಥವಾ ಮನೆಯ ಒಂದಿಷ್ಟು ಜನ ಆಗಲೇ ಇಂಗ್ಲೆಂಡಿನಲ್ಲಿ ಇರುವ ಕಾರಣಕ್ಕೋ, ಫ್ರಾನ್ಸ್ ಮೂಲಕ, ಸಣ್ಣ ಬೋಟುಗಳಲ್ಲಿ ಇಂಗ್ಲೆಂಡಿನತ್ತ ಪಯಣಿಸುತ್ತಾರೆ.
ಅತಿ ರಿಸ್ಕಿನ ಈ ಪ್ರಯಾಣದಲ್ಲಿ ಆಗಾಗ ಬೋಟ್ ಮಗುಚಿ, ಜನಗಳ ಜಲ ಸಮಾಧಿಯಾಗುವದು ಅಪರೂಪವೇನಲ್ಲ. ಆದರೂ, ಪ್ರತಿ ವರ್ಷ ಸುಮಾರು ೪೦ ರಿಂದ ೫೦ ಸಾವಿರ ಜನ ಹೀಗೆ ಇಂಗ್ಲೆಂಡಿನ ತೀರ ಸೇರುತ್ತಾರೆ. ಹೀಗೆ ಸೇರಿದ ಜನ ಒಂದೋ ಆಶ್ರಯ ಕೋರಿ ಅರ್ಜಿ ಹಾಕುತ್ತಾರೆ, ಇಲ್ಲಾ ಯಾವುದೊ ದೊಡ್ಡ ಊರಿನಲ್ಲಿ ಕರಗಿ ಹೋಗುತ್ತಾರೆ. ಇವರಿಂದ ಇಂಗ್ಲೆಂಡಿನ ಸಂಸ್ಕೃತಿ, ಆರ್ಥಿಕತೆ, ಸರ್ಕಾರೀ ಸವಲತ್ತುಗಳ ಆಲಭ್ಯತೆ ಹೀಗೆ ನೂರಾರು ತೊಂದರೆಗಳು, ಆದ್ದರಿಂದ ಅವರೆಲ್ಲರನ್ನ ದೂರ ಓಡಿಸಬೇಕು ಎನ್ನುವದು ಬಲಪಂತೀಯರ ವಾದ.
ಈ ಬಲಪಂತೀಯರ ವೋಟುಗಳನ್ನ ಜಾರದಂತೆ ಹಿಡಿಯಲು, ರಿಷಿ -ಸುಯೆಲಾ ಜೋಡಿ ಮಾತಿನಲ್ಲೂ, ಕಾರ್ಯದಲ್ಲೂ ಅವರ ಮನವೊಲಿಸಲು ಪ್ರತಿ ನಿತ್ಯ ಒದ್ದಾಡುತ್ತಿದ್ದಾರೆ. ಆಶ್ರಯ ಕೋರಿ ಬಂದ ವಲಸಿಗರನ್ನು ದೊಡ್ಡ ಬಾರ್ಜಿನಲ್ಲಿ ತುಂಬಿಡುವದು ಅಂತಹ ಒಂದು ನೀತಿ. ಹಾಗೆಯೇ, ಅವರನ್ನ ರುವಾಂಡಾ ದೇಶಕ್ಕೆ, ಆ ದೇಶದೊಂದಿಗೆ ಮಾಡಿಕೊಂಡ ಒಪ್ಪಂದದಂತೆ, ರವಾನಿಸುವದು ಮತ್ತೊಂದು. ಇವು ಸಾಲದಂತೆ, ಅವರ ಕಾಲಿಗೆ ಕಳ್ಳರಿಗೆ ಕಟ್ಟಿದಂತೆ ಡಿಜಿಟಲ್ ಟ್ಯಾಗ್ ಕಟ್ಟಿ ಬಿಡುವದೂ ಅವರ ಯೋಚನೆಯಲ್ಲುಂಟು. ಸುಯೆಲಾರ ಸತತ ಪ್ರಯತ್ನಕ್ಕೆ ಮೀರಿ ಈ ಯೋಚನೆಗಳಿಗೆ ವಿವಿಧ ಅಡಚಣೆಗಳು ತಗುಲಿರುವುದರಿಂದ ಇನ್ನೂ ಯಾವುದೂ ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲ: ಬಾರ್ಜಿನಲ್ಲಿ ಲಿಸ್ಟೀರಿಯಾ ಕಾಣಿಸಿಕೊಂಡಿದ್ದರಿಂದ ಅದನ್ನು ಖಾಲಿ ಮಾಡ ಬೇಕಾಯ್ತು, ರುವಾಂಡಾಕ್ಕೆ ಹಾರಬೇಕಿದ್ದ ವಿಮಾನಗಳನ್ನ ಕೋರ್ಟು ತಡೆದಿದೆ. ಆದರೂ, ರಾಜಕೀಯವಾಗಿ ಹೆಜ್ಜೆ ಹಿಂತೆಗೆಯುವ ಪರಿಸ್ಥಿತಿಯಲ್ಲಿ ರಿಷಿ ಶುನಕ ಇಲ್ಲದ ಕಾರಣ, ಮತ್ತಿಷ್ಟು ರೀತಿಗಳಲ್ಲಿ ವಲಸೆ ನೀತಿಯನ್ನು ಕಠಿಣಗೊಳಿಸುವ ದಾರಿಯನ್ನು ಹುಡುಕುತ್ತಾ, ಅದರಿಂದಾದರೂ ಮುಂದಿನ ವರ್ಷದ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ ತಪ್ಪಿಸಿಕೊಳ್ಳುವ ಕನಸಿನ ಕತ್ತಲಲ್ಲಿ, ಸುನಕ ನಡೆಯುತ್ತಿದ್ದಾರೆ.
ಸುನಕರ ಎರಡನೆಯ ಬಿಸಿ ನೀತಿ, ಹಸಿರು ಹೋರಾಟಗಾರರನ್ನ ಬೆಚ್ಚಿಬೀಳಿಸಿದೆ. ಬಿಸಿಯಾಗುತ್ತಿರುವ ಭೂಮಿಯನ್ನ ಹಸನಾಗಿಡಲು, ನೆಲದಡಿಯಿಂದ ತೆಗೆಯುವ ಎನೆರ್ಜಿಯನ್ನ ಕಡಿಮೆ ಮಾಡಬೇಕು ಎಂದು ಪ್ರಪಂಚದಾದ್ಯಂತ ನಡೆಯುತ್ತಿರುವ ಜನಪರ ಹೋರಾಟಗಳು, ಪ್ರಮುಖ ದೇಶಗಳು – ಯುನೈಟೆಡ್ ಕಿಂಗ್ಡಮ್ ಸೇರಿದಂತೆ – ಕಾರ್ಬನ್ ಅಂಶ ಕಡಿಮೆ ಮಾಡಲು ಮಾಡಿಕೊಂಡ ಒಪ್ಪಂದಗಳು, ಅವನ್ನೆಲ್ಲ ಮೀರಿ, ಇಂಗ್ಲೆಂಡಿನಲ್ಲಿ ಹೊಸ ಕಲ್ಲಿದ್ದಲು ಗಣಿಗಳಿಗೆ ಪರವಾನಗಿ ಮತ್ತೆ ನಾರ್ತ್ ಸೀ ಅಡಿಯಲ್ಲಿ ನೂರಾರು ಹೊಸ ತೈಲ ಬಾವಿ ತೋಡಲು ಲೈಸೆನ್ಸ್ ಕೊಟ್ಟಿರುವ ಸುನಕರ ದ್ವಂದ್ವ ನೀತಿ ಜೀರ್ಣಿಸಿಕೊಳ್ಳುವದು ಕಷ್ಟ. ಇವೆಲ್ಲದರ ಮೇಲೆ, ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನ ೨೦೩೦ಕ್ಕೆ ನಿಲ್ಲಿಸುತ್ತೇವೆ ಎಂದು ಅವರದೇ ಸರ್ಕಾರ ಮುಂಚೆ ಮಾಡಿದ್ದ ನಿಯಮವನ್ನ ಬದಲಾಯಿಸಿ, ನಿಲ್ಲಿಸುವ ದಿನವನ್ನ ೨೦೩೫ ಮುಂದೂಡಿರುವದೂ, ಈ ದೇಶದ ‘ಪ್ರಾಮಿಸ್’ಗಳ ಮೌಲ್ಯ ಅಂತರ ರಾಷ್ಟ್ರೀಯ ಮಟ್ಟದಲ್ಲಿ ತಗ್ಗಿಸಿವೆ. ಸುನಕರ ಈ ಪಾಲಿಸಿಗಳಿಂದ ಒಂದಿಷ್ಟು ಓಟು ದಕ್ಕಬಹುದು, ನೂರಾರು ಜನರಿಗೆ ಕೆಲಸ ಸಿಕ್ಕಬಹುದು. ಆದರೆ, ದೊಡ್ಡ ದೇಶಗಳ ಈ ಕ್ಲೈಮೇಟ್ ಚೇಂಜ್ ಕುರುಡುತನದಿಂದಾಗುವ ಕಷ್ಟ, ನಷ್ಟಗಳು ಬರೀ ಯುನೈಟೆಡ್ ಕಿಂಗ್ಡಮ್ ಗಷ್ಟೇ ಸೀಮಿತವಾಗಿರೋಲ್ಲ.
ವಿಮರ್ಶೆಯ ಆಳದಲ್ಲಿಳಿದು ನೋಡಿದರೆ, ಈ ಎರಡೂ ನೀತಿಗಳ ಮೂಲ ಈ ದೇಶದ ಇಂದಿನ ಆರ್ಥಿಕ ಪರಿಸ್ಥಿತಿ. ಹದಿನೆಂಟರಿಂದ ಇಪ್ಪತ್ತನೇ ಶತಮಾನದಂತೆ, ಯುನೈಟೆಡ್ ಕಿಂಗ್ಡಮ್ ಈಗ ‘ಸೂರ್ಯ ಮುಳುಗದ ಸಾಮ್ರಾಜ್ಯ’ ಅಲ್ಲ. ಅಗೆದು, ಬಗೆದು ತುಂಬಿಕೊಳ್ಳಲು ಕೋಲಾರದ ಚಿನ್ನ, ಆಫ್ರಿಕಾದ ವಜ್ರ ಇಲ್ಲ; ಕೆರೀಬಿಯನ್ನಿನ ಸಕ್ಕರೆಯೂ ಇಲ್ಲ. ಅದರ ಮೇಲೆ, ೨೦೧೬ರ ಹುಚ್ಚುತನದ ಬ್ರೆಕ್ಸಿಟ್, ದೊಡ್ಡ ದೊಡ್ಡ ಉದ್ದಿಮೆಗಳನ್ನ ಯೂರೋಪಿಗೆ ತಳ್ಳಿದೆ. ಈಗ ಎಷ್ಟು ಬೊಬ್ಬೆ ಹೊಡೆದರೂ, ಬ್ರೆಕ್ಸಿಟ್ಟಿನ ಅಹಮಿನಲ್ಲಿ ಮುರಿದುಕೊಂಡ ಕಾಲು ಜೋಡಿಸಕ್ಕಾಗೋಲ್ಲ. ಈ ಪರಿಸ್ಥಿತಿಯಲ್ಲಿ, ದುಡ್ಡು ಹುಟ್ಟಿಸಲು, ಸುನಕರಿಗೆ ನೆಲ, ನೀರಡಿಯ ನಿಧಿ ತೋಡದೆ ಬೇರೆ ದಾರಿಯಿಲ್ಲ. ಇಂತಹ ಭಂಡತನದ ನಿರ್ಧಾರಗಳು ಹೆಚ್ಚಿಸುವ ಮಿಥೇನಿನಿಂದ ಉಸಿರುಗಟ್ಟಲಿರುವ ಕರಾಳ ನಾಳೆಗಳ ಸತ್ಯವನ್ನ, ಇನ್ನೂ ಇಂಪೀರಿಯಲ್ಲಿನ ನಶೆಯಲ್ಲಿರುವ ಬಲಪಂತೀಯ ಬ್ರಿಟನ್ನಿಗರಿಗೆ ಹೇಳುವುದು ಬಹುಶ ಯಾರಿಗೂ ಅಸಾಧ್ಯ.
ರಿಷಿ ಸುನಕ್ ಪ್ರಧಾನಿಯಾದ ಸಂದರ್ಭದಲ್ಲಿ ಮತ್ತೆ ಮತ್ತೆ, ‘ಈಗ ನನ್ನೊಂದಿಗಿರಿ, ಮೊಮ್ಮಕ್ಕಳ ಕಾಲಕ್ಕೆ ಮತ್ತೆ ಬ್ರಿಟನ್ ಹೊಳೆಯುವಂತೆ ಮಾಡುತ್ತೇನೆ’, ಎನ್ನುವ ಅರ್ಥದ ಮಾತುಗಳನ್ನು ಹೇಳುತ್ತಿದ್ದರು. ಆ ಮಾತಿಗೆ ಪೂರಕವೆಂಬಂತೆ ಅವರು, ಅವರ ಅಜ್ಜಿ ಬಡತನದಲ್ಲಿ ಇಂಗ್ಲೆಂಡಿಗೆ ಬಂದರು, ಅವರ ಹೋರಾಟದ ದುಡಿಮೆಯ ಫಲವನ್ನ ನಾನು ಅನುಭವಿಸುತ್ತಿದ್ದೇನೆ ಎನ್ನುವ ರೂಪಕವನ್ನ ಮುಂದಿಟ್ಟಿದ್ದರು. ಆದರೆ ರಾಜಕೀಯದ ಬೆಂಕಿಯ ಬೇಗೆಯಲ್ಲಿ ಅವರು ತೆಗೆದುಕೊಂಡಿರುವ ನಿರ್ಧಾರಗಳು ಆ ಮೊಮ್ಮಕ್ಕಳ ಮನೆಗೆ ಈಗಲೇ ಕಡ್ಡಿ ಗೀರುತ್ತ ಅವರ ನಾಳೆಗಳನ್ನ ‘ಶುನಕ ಸೆಕೆ’ಯ ದಿನಗಳನ್ನಾಗಿಸಲಿವೆ ಎನ್ನುವ ಸಂಕಟ ಬಹಳಷ್ಟು ಜನರನ್ನ ಬೆಚ್ಚಿಸಿದೆ.
0 ಪ್ರತಿಕ್ರಿಯೆಗಳು