ಕ್ಯಾನ್ಸರ್ ರೋಗ ಬಂದವನು ಮತ್ತಾವ ರೋಗಕ್ಕೂ ಹೆದರುವುದಿಲ್ಲವಂತೆ, ಹಾಗೆಯೇ ಪೊಲೀಸ್‌ಗೆ ಸಿಕ್ಕಿಹಾಕಿಕೊಂಡವನು ಯಾವುದೇ ಟಿಕೇಟ್ ಕಲೆಕ್ಟರ್‌ಗೂ ಹೆದರುವುದಿಲ್ಲವಂತೆ. ಹವಾಲ್ದಾರನ ಜೊತೆ ರಿಕ್ಷಾದಲ್ಲಿ ಜೀಬಾನ್ ಪೊಲೀಸ್ ಕ್ವಾರ್ಟರ್‍ಸ್ ತಲುಪಿದ. ಒಂದು ಮನೆಯ ಬೀಗ ತೆಗೆದು ಒಳಹೋದರು. ಒಳಗೆ ವಿಶೇಷ ಏನೂ ಇರಲಿಲ್ಲ. ಒಂದೆರಡು ಮಂಚಗಳು, ಲುಂಗಿ, ಪೊಲೀಸ್ ಸಮವಸ್ತ್ರ, ಒಂದಿಷ್ಟು ಈರುಳ್ಳಿ, ಆಲೂಗಡ್ಡೆ ನೆಲದ ಮೇಲಿತ್ತು. ಒಂದಿಷ್ಟು ಗೋಧಿ ಹಿಟ್ಟು, ಸಾಸಿವೆ ಎಣ್ಣೆ, ಮಸಾಲೆ ಪದಾರ್ಥ. ಒಂದೆರಡು ಬಕೆಟ್ ಇದ್ದಿಲು ಹಾಗೂ ಒಂದು ಒಲೆ ಮತ್ತು ಒಂದು ಡ್ರಂ ಇದ್ದವು.
‘ಒಲೆ ಹಚ್ಚೋಕೆ ಬರುತ್ತಾ?’
‘ಬರುತ್ತೆ’.
‘ಹಾಗಾದ್ರೆ ಒಲೆ ಹಚ್ಚಿ ಹಿಟ್ಟನ್ನು ಜರಡಿಗೆ ಹಾಕು’.
ಗೋಧಿ ಹಿಟ್ಟನ್ನು ಕಲಸಿ, ಚಪಾತಿ ಮಾಡಿ ಆಲೂಪಲ್ಯ ಮಾಡಿದ.
‘ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ತಗೊಂಡು ಬಾ. ಮಾಲಿಷ್ ಮಾಡು’, ಒಂದೆಡೆ ಕಿತ್ತು ತಿನ್ನೋ ಹಸಿವು. ಇನ್ನೊಂದೆಡೆ ಪೊಲೀಸನ ಆಜ್ಞೆ. ವಿಧಿಯಿಲ್ಲದೆ ಮಾಲಿಷ್ ಮಾಡಿದೆ. ಸುಮಾರು ಒಂದೂವರೆ ಗಂಟೆ ಮಾಲಿಷ್ ಮಾಡಿಸಿಕೊಂಡ.
‘ಸಾಕು, ರಸ್ತೆಯ ಆ ಬದಿಯಲ್ಲಿ ಬಾವಿ ಇದೆ. ಸ್ನಾನಕ್ಕೆ ನೀರು ತಗೊಂಡು ಬಾ’ ಎಂದು ಕಳಿಸಿದ. ಆರು ಬಕೆಟ್ ನೀರು ತಂದು ಡ್ರಂಗೆ ಸುರಿದೆ. ಆರಾಮಾಗಿ ಸ್ನಾನಮಾಡಿ, ತಲೆಬಾಚಿ ನಾಲ್ಕು ಚಪಾತಿ ತಿಂದ. ತನ್ನ ಮಂಚದ ಮೇಲೆ ಕುಳಿತು, ತಂಬಾಕು ತೀಡಿ ಬಾಯಿಗೆ ಹಾಕಿಕೊಂಡು ‘ನಡಿ ಬೇಗ ಸ್ನಾನಮಾಡಿ ಊಟ ಮಾಡು’ ಎಂದ. ಅಲ್ಲಿ ಉಳಿದಿದ್ದು ಎರಡು ಚಪಾತಿಗಳು.
ಜೀಬಾನ್ ಡ್ರಂನಲ್ಲಿ ಉಳಿದಿದ್ದ ಸ್ವಲ್ಪ ನೀರಿನಲ್ಲೇ ಸ್ನಾನಮಾಡಿ ಉಳಿದಿದ್ದ ಚಪಾತಿ ಪಲ್ಯ ತಿಂದ. ಪೊಲೀಸು ಮತ್ತೆ ಸಮವಸ್ತ್ರ ಧರಿಸಿ ಮನೆಗೆ ಬೀಗಹಾಕಿ, ಜೀಬಾನ್‌ಗೆ ವರಾಂಡದಲ್ಲಿರಲು ತಿಳಿಸಿ ತನ್ನ ಕಛೇರಿ ಕಡೆ ನಡೆದ. ಊಟವಿಲ್ಲದೆ, ನಿದ್ದೆಯಿಲ್ಲದೆ ಕಂಗೆಟ್ಟು ಹೋಗಿದ್ದ. ವರಾಂಡವನ್ನು ಸ್ವಚ್ಛಗೊಳಿಸಿ ಅಲ್ಲಿಯೇ ಬಿದ್ದುಕೊಂಡ. ಮತ್ತೆ ಎಚ್ಚರವಾದದ್ದು ಎದುರುಗಡೆ ಕೆಲ ಮಕ್ಕಳು ಆಟವಾಡುವಾಗ ಆಗುತ್ತಿದ್ದ ಶಬ್ದದಿಂದ. ಮಕ್ಕಳು ಜೋರಾಗಿ ನಗ್ತಾ ಖುಷಿಯಲ್ಲಿ ಆಡ್ತಾ ಇದ್ರು. ಅವರನ್ನು ನೋಡುವಾಗ ಜೀಬಾನ್‌ಗೆ ತಾನು ಕಳೆದು ಕೊಂಡ ಬಾಲ್ಯದ ಆಟಗಳ ಬಗ್ಗೆ ಬೇಸರವಾಯ್ತು. ಈ ಮಕ್ಕಳೆಲ್ಲಾ ಸರ್ಕಾರಿ ನೌಕರರ ಮಕ್ಕಳು. ತಿಂಗಳಿಗೆ ಸರಿಯಾಗಿ ಸಂಬಳ. ಸರ್ಕಾರಿ ನೌಕರರು ಒಂದು ರೀತಿ ಸರ್ಕಾರ ತೆಗೆದು ಕೊಂಡಿರುವ ದತ್ತು ಮಕ್ಕಳ ಹಾಗೆ. ಅವರಿಗೆ ಸಂಬಳವೂ ಬರುತ್ತದೆ. ಲಂಚವೂ ಸಿಗುತ್ತದೆ.
ಕತ್ತಲಾಗತೊಡಗಿತು, ಮಕ್ಕಳು ಆಟ ನಿಲ್ಲಿಸಿದರು. ದೂರದಿಂದ ಆಜಾನ್ ಕೇಳುತ್ತಿತ್ತು. ರಾತ್ರಿ ಎಂಟಕ್ಕೆ ಪೊಲೀಸು ಬಂದ. ಒಂದು ಸಣ್ಣ ನಗು ಕೊಟ್ಟು- ‘ಇನ್ನೂ ಇಲ್ಲೇ ಇದಿಯಾ?’ ಎಂದ. ಮತ್ತೆ ಗೋಧಿ ಹಿಟ್ಟು ಅಳೆದು ಕೊಟ್ಟು ಜೊತೆಗೆ ಆಲೂ ಹಾಗೂ ತರಕಾರಿ ನೀಡಿ ಚಪಾತಿ-ಪಲ್ಯ ಮಾಡಲು ಹೇಳಿದ. ಊಟಮಾಡಿ ತನ್ನ ಮಂಚದ ಮೇಲೆ ಮಲಗಿದ. ಅವನ ಕೈ ಅಳೆತೆಯಲ್ಲೇ ಜೀಬಾನ್ ಮಲಗಿದ. ಹೆದರಿಕೊಂಡೇ ಮಲಗಿದ್ದ. ಹದಿನಾರು ವಯಸಿನ ಮೃದುದೇಹದ ಜೀಬಾನ್‌ಗೆ ನಿದ್ದೆ ಬರುವುದು ಕಷ್ಟವಾಗಿತ್ತು. ಎಲ್ಲೋ ದೂರದಲ್ಲಿ ರಣಹದ್ದೊಂದು ಪುಟ್ಟ ಹಕ್ಕಿಯ ಮೇಲೆರೆಗಿತ್ತು. ಎಲ್ಲೆಲ್ಲೂ ಕತ್ತಲು. ಇದು ಸಹಜವಾದ ಕತ್ತಲಲ್ಲ. ಬೇಕೆಂದೇ ಬೆಳಕನ್ನು ಮರೆಮಾಡಿದ ಕತ್ತಲು. ಅದೊಂದು ಕೆಟ್ಟ ಕೊಳಕು ರಾತ್ರಿ. ಎಲ್ಲವೂ ಅಸಹಜವೆನಿಸುತ್ತಿತ್ತು. ಭೂಮಿ ಬಹುಶಃ ತನ್ನ ಪಥ ಬದಲಿಸಿರಬೇಕು. ಮನುಷ್ಯನ ವಿಕಾಸವಾದ ವಿರುದ್ಧ ದಿಕ್ಕಿನತ್ತ ನಡೆದು ಮತ್ತೆ ಅನಾಗರಿಕತೆ, ಅಮಾನವೀಯತೆ ಮರುಕಳಿಸಿದೆಯೆ? ಹಸಿದ ಪ್ರಾಣಿಯಂತೆ ಆ ಹವಾಲ್ದಾರ ಜೀಬಾನ್ ಮೇಲೆರೆಗಿದ. ಬಾಯಿಯಿಂದ ಏನೇ ಶಬ್ಧ ಬರುವ ಮೊದಲು ಪೊಲೀಸು ಎಚ್ಚರಿಸಿದ- ‘ಕಿರುಚಿದರೆ ನಿನ್ನ ಕುತ್ತಿಗೆ ಕತ್ತರಿಸಿ ಬಿಡ್ತೀನಿ’.
ತನ್ನೆಲ್ಲಾ ಕೊಳಕು, ಜಿಗುಟು ಪೌರುಷವನ್ನು ಜೀಬಾನ್‌ನ ದೇಹದೊಳಗೆ ಸುರಿಸಿದ. ಜೀಬಾನ್ ಎಲ್ಲವನ್ನು ಅವುಡು ಕಚ್ಚಿಕೊಂಡು ಸಹಿಸಿಕೊಂಡ. ಈ ಮುಂಚೆ ಒಂದೆರಡು ಸಂದರ್ಭಗಳಲ್ಲಿ ಹೇಗೋ ತಪ್ಪಿಸಿಕೊಂಡಿದ್ದ. ಆದರೆ ಇಂದು ಯಾರು ಕಾನೂನನ್ನು ಕಾಪಾಡಬೇಕೋ ಅವರಿಂದಲೇ ರಕ್ಷಣೆ ಪಡೆಯಲು ಸಾಧ್ಯವಾಗಲಿಲ್ಲ. ಆತ ಜೀಬಾನ್‌ನ ದೇಹ ಮಾತ್ರ ಅಲ್ಲ, ಅವನ ಆತ್ಮ ಹಾಗೂ ಅಸ್ಮಿತೆಯ ಮೇಲೆ ಅತ್ಯಾಚಾರವೆಸಗಿದ್ದ. ಅದೆಂತಹ ನೋವು ಯಾತನೆ. ಜೀಬಾನ್‌ನ ಈವರೆಗಿನ ಈ ಪುಟ್ಟ ಜೀವನದಲ್ಲಿ ಅದೇನೇನು ಅವಮರ್ಯಾದೆಗಳನ್ನು ಅನುಭವಿಸಿದ್ದನೋ, ಅವೆಲ್ಲವೂ ಇದರ ಮುಂದೆ ಏನೂ ಅಲ್ಲ ಎನಿಸಿತು. ಅಬ್ಬ, ಅತ್ಯಾಚಾರವೆನ್ನುವುದು ಅದೆಷ್ಟು ಭೀಕರ. ಸಂತ್ರಸ್ತರಿಗೆ ಜೀವನವೇ ಸಾಕು ಎನಿಸಿಬಿಡುತ್ತದೆ. ಅತ್ಯಾಚಾರ ನಡೆಯುವುದು ಗಂಡಸರಿಂದ ಮಹಿಳೆಯರ ಮೇಲೆ ಮಾತ್ರ ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ ಇದು ಮಹಿಳೆಯಿಂದ ಪುರುಷನ ಮೇಲೆ, ಮಹಿಳೆಯಿಂದ ಮಹಿಳೆಯ ಮೇಲೆ ಅಥವಾ ಪುರುಷರಿಂದ ಪುರುಷರ ಮೇಲೂ ನಡೆಯಬಹುದು. ಸಾಮಾನ್ಯವಾಗಿ ಇದರ ಬಗ್ಗೆ ಯಾವ ಕಾಳಜಿಯೂ ಇರುವುದಿಲ್ಲ. ಯಾಕೆಂದರೆ ಇದು ಎಲ್ಲೋ ಅಪರೂಪಕ್ಕೆ ನಡೆಯುವ ಕೃತ್ಯ. ಆದರೆ ವಾಸ್ತವವೆಂದರೆ, ಇದು ಕ್ರೂರ ಜಗತ್ತಿಗೆ ಗೊತ್ತಾಗದ ಹಾಗೆ ಸತತವಾಗಿ ನಡೆಯುವ ಕ್ರಿಯೆ.
ಪ್ರಾಣಿಗಳನ್ನೂ ಬಿಡುವುದಿಲ್ಲ. ಸಿಬ್‌ಪುರ ಪೊಲೀಸ್ ಲೈನ್‌ನಲ್ಲಿ ಪೇದೆಯೊಬ್ಬ ನಾಯಿಯ ಮೇಲೆ ಅತ್ಯಾಚಾರ ಮಾಡಿದ ಘಟನೆ ನಿಮಗೆ ನೆನಪಿರಬಹುದು. ಅದು ದೊಡ್ಡ ಸುದ್ದಿಯಾಗಲಿಲ್ಲ. ಅದೇ ಒಂದು ಮಹಿಳೆಯ ಮೇಲೆ ಅತ್ಯಾಚಾರ ನಡೆದರೆ ಅದು ದೊಡ್ಡ ಸುದ್ದಿ. ಸಂತ್ರಸ್ತ ಮಹಿಳೆಯ ಬಗ್ಗೆ ಎಲ್ಲರಿಗೂ ಅನುಕಂಪ. ಅದೇ ಒಬ್ಬ ಹುಡುಗನ ಮೇಲೆ ನಡೆದರೆ ಅದು ತಮಾಷೆಯ, ನಗೆಪಾಟಲಿನ ವಿಚಾರ. ಹಾಗಾಗಿ ಜೀಬಾನ್ ಈ ವಿಚಾರವನ್ನು ಬೇರೆಯವರಿಗೆ ಹೇಗೆ ತಾನೆ ಹೇಳಿಯಾನು? ಪೊಲೀಸ್ ವಿರುದ್ಧ ಪೊಲೀಸ್ ಸ್ಟೇಷನ್‌ನಲ್ಲಿ ದೂರು ಕೊಡಲು ಸಾಧ್ಯವೇ?
ಅಂತೂ ಬೆಳಗಾಯಿತು. ಪೊಲೀಸು ಬೆಳಗಿನ ವಾಯುವಿಹಾರಕ್ಕೆ ಹೋಗಿದ್ದ. ಎಲ್ಲಾ ಒಂದು ರೀತಿಯ ಕೊಳಕು ಕೊಳಕು ಎನಿಸತೊಡಗಿತು. ತಾನೊಂದು ಜನರು ಮೂತ್ರ ಮಾಡುವ ಚರಂಡಿ ಎನಿಸತೊಡಗಿತು. ತನ್ನ ಅವಮಾನ ಎಲ್ಲರಿಗೂ ಗೊತ್ತಾಗಿ ಬಿಟ್ಟಿದೆಯೇನೋ ಎನಿಸಿ ಅಳಬೇಕೆನಿಸಿತು. ಎಲ್ಲರೂ ತನ್ನನ್ನೇ ನೋಡಿ ಮುಸಿಮುಸಿ ನಗುತ್ತಿದ್ದಾರೆಂಬ ಭಾವನೆ ಬರತೊಡಗಿತು.
0 ಪ್ರತಿಕ್ರಿಯೆಗಳು