ಸೃಜನಾತ್ಮಕ ಕಲಾಕೃತಿ ‘ಕ್ಲೋಸ್ ಅಪ್’

ಚಂದ್ರಪ್ರಭ ಕಠಾರಿ

ಅಬ್ಬಾಸ್ ಕಿರೊಸ್ತಾಮಿ ಅವರ ೧೯೯೦ರಲ್ಲಿ ತಯಾರಾದ “ ಕ್ಲೋಸ್ ಅಪ್ ” ಚಲನಚಿತ್ರ ಬಯೋಗ್ರಾಫಿ ಪ್ರಕಾರದ್ದೆಂದು ಹೇಳಿದೆ. ಹಾಗೆ ನೋಡಿದರೆ ಅಲ್ಲಿ ಜೀವನ ಕಥನವೇನು ಇಲ್ಲ. ಒಬ್ಬ ವ್ಯಕ್ತಿಯ ಒಂದು ಸಂದರ್ಭದ ಸುತ್ತ ನಡೆಯುವ ಘಟನಾವಳಿಗಳ ನೈಜ ಚಿತ್ರಣ (ಚಿತ್ರೀಕರಣ) ಮತ್ತು ಕಳೆದ ಘಟನೆಗಳ ಮರುಸೃಷ್ಟಿಯಿಂದ ಕೂಡಿದೆ. ಅದರಿಂದ ತಾನಾಗಿಯೇ ಅದಕ್ಕೊಂದು ಚಿತ್ರಕಥೆ ಲಭ್ಯವಾಗಿದೆ.

ಚಿತ್ರ ನೋಡುತ್ತ ನಮಗೆ ನಾವೇ ನೈಜ ಚಿತ್ರಣ ಮತ್ತು ಮರುಸೃಷ್ಠಿಯ ಚಿತ್ರೀಕರಣ ಬಗ್ಗೆ ಗೆರೆ ಹಾಕಿಕೊಳ್ಳಬೇಕಾಗುತ್ತೆ. ಅದಕ್ಕೆ ಆಸ್ಪದ ಕೊಡದೆ ಚಿತ್ರ ನಮ್ಮನ್ನು ಒಳಗೆ ಕರೆದುಕೊಳ್ಳುತ್ತದೆ.

ಚಿತ್ರದ ಪ್ರಧಾನ ಪಾತ್ರಧಾರಿ ಅಥವಾ ಘಟನೆಗಳ ಕಾರಣಕರ್ತ ಹುಸೇನ್ ಸಬ್ಜಿಯನ್, ಇರಾನಿನ ಖ್ಯಾತ ಪ್ರಚಲಿತ ಚಿತ್ರ ನಿರ್ದೇಶಕ ಮೊಸೆನ್ ಮಖ್ಮಲ್ಬನ ಅಭಿಮಾನಿಯಾಗಿ ಒಂದು ಸಂದರ್ಭದಲ್ಲಿ ತಾನೇ ಮೊಸೆನ್ ಮಖ್ಮಲ್ಬ್ ಎಂದು ಸಣ್ಣ ಸುಳ್ಳನ್ನು ಯಾವುದೇ ಪೂರ್ವಗ್ರಹವಿಲ್ಲದೆ, ವಿನಾಕಾರಣ ಹೇಳುತ್ತಾನೆ.

ಅದರಿಂದ ಪುಳಕಿತಳಾದ ಬಸ್ಸಿನ ಸಹ ಪ್ರಯಾಣಿಕಳಾದ ಶ್ರೀಮಂತ ಮಹಿಳೆ ತನ್ನ ಜೊತೆಗೆ ತನ್ನ ಕುಟುಂಬವನ್ನು ಪರಿಚಯಿಸಿಕೊಳ್ಳುತ್ತಾಳೆ. ಮುಂದೆ ಅವರ ಮನೆಯಲ್ಲಿ ಉಳಿದು ತಾನು ಇನ್ನೊಂದು ಚಿತ್ರನಿರ್ಮಾಣದ ಚಿಂತನೆಯಲ್ಲಿ ಇರುವುದಾಗಿ ಹೇಳಿ ಆ ಚಿತ್ರಕ್ಕೆ ಅದೇ ಮನೆಯನ್ನು ಚಿತ್ರೀಕರಣಕ್ಕೆ ಬಳಸುವುದೆಂದು ಮತ್ತು ಅವರ ವಿದ್ಯಾವಂತ ನಿರುದ್ಯೋಗಿ ಮಕ್ಕಳನ್ನು ಆ ಚಿತ್ರಕ್ಕೆ ನಟರನ್ನಾಗಿಸುವ ಭರವಸೆಯನ್ನು ಹುಸೇನ್ ಕೊಡುತ್ತಾನೆ.

ಮುಂದೆ ಶ್ರೀಮಂತ ಕುಟುಂಬದವರಿಗೆ ಅವನ ನಡಾವಳಿ ಬಗ್ಗೆ ಸ್ವಲ್ವ ಸಂಶಯ ಶುರುವಾಗಿ, ದಿಢೀರ್ ಖ್ಯಾತಿಯ ಹಂಬಲದಲ್ಲಿರುವ ಪತ್ರಕರ್ತನ ಮೂಲಕ ಅವನನ್ನು ಪೋಲಿಸಿಗೆ ಒಪ್ಪಿಸುವ ದೃಶ್ಯದಿಂದ ಸಿನಿಮಾ ಪ್ರಾರಂಭವಾಗುತ್ತದೆ.  

ಬಂಧಿಯಾದ ಹುಸೇನ್ ಜೈಲಿನಲ್ಲಿ ಭೇಟಿಯಾಗಿ ಕ್ಲೋಸ್ ಅಪ್ ಚಿತ್ರ ನಿರ್ದೇಶಕ ಕಿರೊಸ್ತಾಮಿ ತನ್ನ ಚಿತ್ರೀಕರಣದ ಬಯಕೆಯನ್ನು ಅರಹುವುದು, ಕೋರ್ಟಿನಲ್ಲಿ ವಾದ ಪ್ರತಿವಾದಗಳು ಆರಂಭಗೊಳ್ಳುವ ಮುಂಚೆ ಅದನ್ನು ಯಥಾವತ್ತು ಚಿತ್ರೀಕರಿಸಲು ನ್ಯಾಯಾಧೀಶರ ಅನುಮತಿ ಕೇಳುವುದು, ನ್ಯಾಯಾಧೀಶ ಸ್ವಾರಸ್ಯವಿಲ್ಲದ ಸದರಿ ಕೇಸಿನ ದೃಶ್ಯೀಕರಣಕ್ಕೆ ಅಚ್ಚರಿ ವ್ಯಕ್ತಪಡಿಸುವುದು, ಕೋರ್ಟ್‌ನಲ್ಲಿನ ಸಂವಾದಗಳು – ನಮ್ಮನ್ನು ಪ್ರತ್ಯಕ್ಷ ಸಾಕ್ಷಿಯನ್ನಾಗಿ ಮಾಡುತ್ತವೆ.

ಕೊನೆಯಲ್ಲಿ ಹುಸೇನ್ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದಾಗ ಅಚಾನಾಕ್ಕಾಗಿ ನಿರ್ದೇಶಕ ಸಾಕ್ಷಾತ್ ಮೊಸೆನ್ ಮಖ್ಮಲ್ಬನೇ ಎದುರುಗೊಳ್ಳುವುದು. ಹೂಗುಚ್ಚವನ್ನು ಖರೀದಿಸಿ ಹುಸೇನನ್ನು ಕರೆದೊಯ್ದು ಮನೆಯ ಮಾಲೀಕನೊಂದಿಗೆ ಕ್ಷಮೆಯಾಚಿಸುವುದರೊಂದಿಗೆ ಸಿನಿಮಾ ಮುಗಿಯುತ್ತದೆ. ಅವು ನಿಜಕ್ಕೂ ಭಾವುಕದ ಕ್ಷಣಗಳು.

ಪ್ರಚಲಿತ ನಡೆಯುತ್ತಿರುವ ಘಟನೆಯನ್ನೇ ಚಿತ್ರೀಕರಿಸಿ ಅದನ್ನು ಸಿನಿಮಾ ಆಗಿಸಿದ ನಿರ್ದೇಶಕನ ಜಾಣ್ಮೆಯು ಅಚ್ಚರಿ ಮೂಡಿಸುತ್ತದೆ. ಆ ಕ್ಷಣದ ಭಾವ ಸಂವೇದನೆಯ ಎಳೆಗಳನ್ನು ಹೆಣೆದು ಚಿತ್ರದ ಒಟ್ಟೂ ತಾತ್ವಿಕತೆಯನ್ನು ನಿರೂಪಿಸುವ ಸಮೀಪ ಚಿತ್ರ ( ಕ್ಲೋಸ್ ಅಪ್ ಶಾಟ್ ) ಗಳು  ಅದ್ಭುತವಾಗಿವೆ.

ದೃಶ್ಯವೊಂದರಲ್ಲಿ ಖಾಲಿ ಡಬ್ಬ (ಕ್ಯಾನ್) ವನ್ನು ಒದೆಯುತ್ತ ಸಾಗುವ ಪತ್ರಕರ್ತ, ಸುದ್ದಿಯಲ್ಲದ ಸುದ್ದಿಯಿಂದಾದರೂ ಖ್ಯಾತಿಯನ್ನು ಹೊಂದುವ ಹಂಬಲವನ್ನು ಧ್ವನಿಸುತ್ತದೆ.

ಈ ಚಿತ್ರ ಅತ್ಯುತ್ತಮ ಚಿತ್ರವೆಂದು ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳ ಪ್ರಶಸ್ತಿಗೆ ಭಾಜನವಾಗಿದೆ. 

ಅಬ್ಬಾಸ್ ಕಿರೊಸ್ತಾಮಿ ಅವರ ಈ ಸೃಜನಾತ್ಮಕ ಕಲಾಕೃತಿ “ ಕ್ಲೋಸ್ ಅಪ್ “ ಅನ್ನು ಆಸ್ತಕರು ಯುಟೂಬಿನಲ್ಲಿ ವೀಕ್ಷಿಸಬಹುದು.

‍ಲೇಖಕರು Avadhi

October 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: