ಒಡಿಯ ಮೂಲ: ಸೂರ್ಯ ಮಿಶ್ರಾ

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
**
-1-
ಒಂದು ಮಡಕೆ ಅಕ್ಕಿ
ಉರಿಯ ತಲೆಯ ಮೇಲೆ ಒಂದು ಮಡಕೆಯ ಅಕ್ಕಿ
ಶಾಖಕ್ಕೆ ಕುದಿಯುತ್ತದೆ ಅಕ್ಕಿ
ಕೇವಲ ಒಂದು ಹಿಡಿ ಅಕ್ಕಿಗಾಗಿ ತಹತಹ
ಕೆಳಗೆ ಬೆಂಕಿ ಮತ್ತು ಬೂದಿ
ಒಂದು ಪುಟ್ಟ ಹಿಡಿ ಅಕ್ಕಿಗಾಗಿ ಎಲ್ಲ
ಕಟಾವು
ಉಳುಮೆ
ಕೊಳದ ಕೆಸರೆರೆಚಾಟ
ನುಚ್ಚುನೂರು ನೆಲ
ಚಟುವಟಿಕೆಗಳನ್ನು ಅವಸರದಲ್ಲಿ ಪ್ರೇರೇಪಿಸಿ
ಲಂಚ ವಶೀಲಿ ನೆಕ್ಕುವುದು
ಸಮಜಾಯಿಷಿ, ಹೆಬ್ಬೆಟ್ಟು ಗುರುತು
ಶಕ್ತಿ ಭರಿತ ಉಪವಾಸ
ಮತಾಂಧ ಕುಣಿತ
ಈ ಅಕ್ಕಿ ಮಡಕೆಯಂತೆ
ನನ್ನ ಹೊಟ್ಟೆ ನನ್ನ ತಲೆ
ನನ್ನ ಜುಜುಬಿ ಮೂಳೆಗಳು ಕಣ್ಣೀರು ರಕ್ತ ಬೆವರು
ಎಲ್ಲ ಕುದಿಯುತ್ತ ಮತ್ತು ಕುದ್ದು ಆವಿಯಾಗುತ್ತಾ
ಈ ಮಾಂತ್ರಿಕ ಮಡಕೆ ಪಡೆಯಲು
ಕಿರೀಟ ಕೆಳಗಿಳಿಯುತ್ತದೆ ಧೂಳಾಗಿ
ಒಲವಿಗೆ ನೀಡಿ ದುಃಖ ಸಿಂಹಾಸನ
ಹೆಣ್ಣು ಕುರೂಪಿ ಮಾಟಗಾತಿ
ಗಂಡು ಪಕ್ಕಾ ಮೃಗವಾಗಿ
ಮಡಕೆಯಲ್ಲಿ ಬೇಯುತ್ತಿರುವ ಅಕ್ಕಿಯ
ಶಾಖ ಕಾಣುತ್ತಿದೆ
ಕಚೇರಿಯಲ್ಲಿ, ವೇಶ್ಯಾವಾಟಿಕೆಯಲ್ಲಿ
ಯುದ್ಧದಲ್ಲಿ, ಹಾಸಿಗೆಯಲ್ಲಿ, ಎಲ್ಲೆಡೆಯೂ
ಮಡಕೆಯಷ್ಟು ಅಕ್ಕಿ
ಬದುಕಿನ ಯಾನ ವಿಚಿತ್ರ ಮತ್ತು ಅನಗತ್ಯ
ಅಲ್ಪ ಅಕ್ಕಿಯ ಮಡಕೆ ನಿಜಕ್ಕೂ ಬದುಕಿನ ಚಾಲಕ
ಒಂದು ಹಿಡಿ ಅಕ್ಕಿಯ ಮಾಂತ್ರಿಕ ಗುಣ
ಬದುಕಿನ ಚಿಲುಮೆ ಪ್ರಚೋದಿಸುತ್ತ
ಯುಗ ಯುಗಗಳ ಕಾಲ
**

-2-
ವೈವಾಹಿಕ ಜೀವನ
ಅವಮಾನಿಸಬೇಡಾ ನೀರು ತುಂಬಿದ ಕಣ್ಣಾಲಿಗಳನ್ನು
ಇನ್ನಷ್ಟು ಕಿಚ್ಚು ಹತ್ತಿಸಬೇಡಾ ಸುಡುವ ಹಸಿವಿನಲ್ಲಿ
ಬಾ ಇಲ್ಲಿ , ಅಪ್ಪಿಕೋ
ಬದುಕಿನ ವಾಡಿಕೆಯ ದೃಶ್ಯಗಳು
ವಿಷಯಗಳ ಸುತ್ತ ಪರಿಭ್ರಮಿಸುತ್ತ
ಸಮ್ಮೋಹಗೊಳಿಸುವ ಕೋಣೆ
ನಿನ್ನ ಬೆಣ್ಣೆ ಮೈ
ಹತ್ತಿಯ ಹಾಸಿಗೆ
ಬಣ್ಣದ ಹಾಸು, ಪರಿಮಳಭರಿತ
ನಾವಿಬ್ಬರು, ಇನ್ನೇನು ಬೇಕು
ಬಿಗಿಯಾಗಿ ಅಪ್ಪಿಕೊಂಡು
ಬದುಕಿನ ಭವ್ಯತೆಯ ಕೀಳಾಗಿಸಿ
ಕೆಟ್ಟ ಚಮತ್ಕಾರವೆನ್ನಿಸಿ
ನಮ್ಮ ಸಂತೋಷದಲ್ಲಿ
ಎರಡು ಸರಕುಗಳಾಗಿ ಸೊರಗುತ್ತಾ
ಇಬ್ಬರ ನಡುವೆ ಯಾವ ನಿರ್ಬಂಧ ವಿನಿಮಯವಿಲ್ಲ
ಯಾರೂ ಮತ್ತೊಬ್ಬರಿಗೆ ಕೃತಜ್ಞತೆ ಸೂಚಿಸುವುದಿಲ್ಲ
ಅಷ್ಟರೊಳಗೆ ಬಯಕೆ ತೀರಿ ದೇಹದ
ವಿವಿಧ ಗೃಹೋಪಯೋಗಿ ವಸ್ತುಗಳಂತೆ
ಎಲ್ಲ ಸ್ವಾತಂತ್ರ್ಯ ಕಳೆದುಕೊಂಡು
ರೂಪಾಂತರಗೊಂಡು ಬರಿ ವಸ್ತುಗಳಾಗಿ
ನಾನು ಮತ್ತು ನೀನು.
ಇಲ್ಲಿಂದ ಮುಂದೆ ಜೀವಾವಧಿತನಕ
ಯಾಂತ್ರಿಕ ಚುಂಬನಗಳು ಅಪ್ಪುಗೆಗಳು
ಸೊಕ್ಕು ಅಹಂಕಾರ ಯಾತನೆಗಳು
ಅರ್ಥರಹಿತ ಜೀತದಲ್ಲಿ ನಮ್ಮ ಸಂಗಮ ಶಾಶ್ವತವಾಗಿ
ನಮ್ಮ ಪ್ರತಿ ಆಸೆ, ಔನತ್ಯಗಳ ಯುಕ್ತಿಯಿಂದ ಸಮಾಳಿಸುತ್ತ
ಷರತ್ತುಗಳ ನಿಭಾಯಿಸಲು
ಕೆರಳಿಸುವ ಸಂಗೀತ
ರಾತ್ರಿಯ ಜಾಗರಣೆಗಳ
ಭಾವೋತ್ಕರ್ಷ ಸಂಭೋಗ ಸುಖ
ಮುಂಜಾನೆ
ಹಾಸಿಗೆ ಕೆಳಗೆ
ಕಿಟಕಿಯ ಪಕ್ಕ
ಬಾಗಿಲಿಗೆದುರಾಗಿ
ಎಲ್ಲ ಕಡೆಯೂ ಚೆಲ್ಲಿ
ನಮ್ಮ ಮಾತಿಲ್ಲದ ಸೋಲಿನ ಮೂಕ ಅವಶೇಷ
ವಸ್ತು ಪ್ರಪಂಚದಂತಹ ಹೀನಾಯ ದಾಸ್ಯ.
0 Comments