‘ಸೂರರೈ ಪೊಟ್ರು..‌’

ಗೊರೂರು ಶಿವೇಶ್

ಕ್ಯಾಪ್ಟನ್ ಗೋಪಿನಾಥ್, ಪೂರ್ಣ ಹೆಸರು ಗೊರೂರು ರಾಮಸ್ವಾಮಿ ಗೋಪಿನಾಥ್. ಇವರ ಆತ್ಮಚರಿತ್ರೆಯ ಪುಟಗಳನ್ನು ಆಧರಿಸಿದ “ಸೂರರೈ ಪೊಟ್ರು” (ಶೂರರಿಗೊಂದು ಪರಾಕ್) ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿ ಅಪಾರ ಸದ್ದನ್ನು ಮಾಡುತ್ತಿದೆ. ಗೊರೂರು ಎಂಬ ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನ ಪುಟ್ಟ ಗ್ರಾಮವನ್ನು ಲೋಕಮಾನ್ಯ ಮಾಡಿದವರು ಗೊರೂರು ಎಂದೇ ಪ್ರಸಿದ್ಧರಾಗಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್.

ಅವರ ನಂತರ ಗೊರೂರು ಹೆಸರು ಬಂದಿದ್ದು ಗೊರೂರಿನಲ್ಲಿ ನಿರ್ಮಾಣವಾಗುತ್ತಿದ್ದ ಅಣೆಕಟ್ಟಿನಿಂದ. ಮತ್ತೊಮ್ಮೆ ಅದು ಪ್ರಸಿದ್ಧಿಗೆ ಬಂದದ್ದು ಗೊರೂರು ರಾಮಸ್ವಾಮಿ ಅಯ್ಯಂಗಾರರ ಸಮಕಾಲೀನರಾಗಿದ್ದ ಹಾಗೂ ಶಿಕ್ಷಕರಾಗಿದ್ದ ಜೊತೆಗೆ ಅವರದೇ ಹೆಸರನ್ನು ಹೊಂದಿದ್ದ ರಾಮಸ್ವಾಮಿ ಅಯ್ಯಂಗಾರರ ಪುತ್ರ ಕ್ಯಾಪ್ಟನ್ ಗೋಪಿನಾಥ್, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮಾಡಿದ ಸಾಧನೆಯಿಂದ.

ಈಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಗಾಥೆಯ ಕೆಲವು ಪುಟಗಳು ಸಿನಿಮಾವಾಗಿ ಮೂಡಿಬಂದಿದ್ದು ತಮಿಳಿನ ಖ್ಯಾತ ನಟ ಸೂರ್ಯ ನಾಯಕತ್ವದ ಚಿತ್ರ ಬಿಡುಗಡೆಯಾಗಿದೆ. ಚಿತ್ರ ಬಹುಭಾಷೆಯಲ್ಲಿ ಬಿಡುಗಡೆಯಾಗಿದ್ದು ಕನ್ನಡದಲ್ಲೂ ಅದು ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ. ಆದರೆ ಚಿತ್ರದ ಹೆಸರು ಎಷ್ಟು ವಿಚಿತ್ರ ಎಂದರೆ ಸೂರರೈ ಪೊಟ್ರು ಎಂಬ ತಮಿಳು ಚಿತ್ರವನ್ನುಅದೇ ಹೆಸರಿನಲ್ಲಿ ಕನ್ನಡಕ್ಕೆ ತರಲಾಗಿದ್ದು ಸಮಾನಾರ್ಥಕವಾದ ಕನ್ನಡ ಪದಗಳು ಸಿಗಲಿಲ್ಲವೇ ಎಂಬ ಆಶ್ಚರ್ಯ ಮೂಡುತ್ತದೆ.

ಸುಲಭವಾಗಿ ಆಕಾಶಯಾನ ಅಥವಾ ಆಕಾಶಕನಸು ಮುಂತಾಗಿ ಹತ್ತು ಹಲವು ಹೆಸರುಗಳನ್ನು ಇಡಬಹುದಾದ ಸಾಧ್ಯತೆಗಳಿದ್ದು ನಿರ್ದೇಶಕರು ಕನ್ನಡದ ಅವತರಣಿಕೆಗೆ ಹೆಚ್ಚು ಗಮನ ನೀಡದೆ ತರಾತುರಿಯಲ್ಲಿ ಬಿಡುಗಡೆ ಮಾಡಿರುವುದಕ್ಕೆ ಅನೇಕ ನಿದರ್ಶನಗಳು ಚಿತ್ರದಲ್ಲಿ ಸಿಗುತ್ತವೆ.

ಕನ್ನಡದ ಅಚ್ಚುತ್ ಕುಮಾರ್, ಪ್ರಕಾಶ್ ಬೆಳವಾಡಿ ಮುಂತಾದವರು ಅಭಿನಯಿಸಿದ್ದರೂ ಕೂಡ ಬೇರೆಯವರಿಂದ ಡಬ್ ಮಾಡಿಸಲಾಗಿದೆ. ಜೊತೆಗೆ ಚಿತ್ರಕ್ಕೆ ತಮಿಳಿನ ಹೆಸರನ್ನಿಟ್ಟಿರುವುದು ಬೇಸರ ಮೂಡಿಸುತ್ತದೆ. ಹಾಗೂ ಚಿತ್ರ ಕ್ಯಾಪ್ಟನ್ ಗೋಪಿನಾಥ್ ಅವರ ಆತ್ಮಚರಿತ್ರೆಯನ್ನು ಅನುಸರಿಸಿದೆಯೆ ಎಂದು ಗಮನಿಸಿದರೆ ಇಡಿ ಚಿತ್ರದಲ್ಲಿ ಅವರ ಆತ್ಮಚರಿತ್ರೆಯ ಎಂಟರಿಂದ ಹತ್ತು ಪುಟಗಳ ಕಾಣಸಿಗಬಹುದುಅಷ್ಟೆ.  

ಗೊರೂರು ಎಂಬ ಸಣ್ಣ ಹಳ್ಳಿಯಲ್ಲಿ ಹುಟ್ಟಿ ತಂದೆ ಶಿಕ್ಷಕರಾಗಿದ್ದ ಶಾಲೆಯಲ್ಲಿ ಕಲಿತು ಮುಂದೆ ಬಿಜಾಪುರ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಡಿಫೆನ್ಸ್ ಸರ್ವಿಸ್ ಪರೀಕ್ಷೆ ಬರೆದು ತೇರ್ಗಡೆಹೊಂದಿ ಸೇನೆಯನ್ನು ಸೇರಿದರು. ಕೆಲವು ವರ್ಷಗಳ ಕಾಲ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿ ನಂತರ ಸೇವೆಯಿಂದ ನಿವೃತ್ತಿ ಪಡೆದು ಊರಿಗೆ ಮರಳಿ ಜಾವಗಲ್ ಸಮೀಪ ಆಧುನಿಕ ಕೃಷಿ ಅಳವಡಿಸಿ, ರೇಷ್ಮೆ ಕೃಷಿ ಮಾಡಿದರು.

ಮುಂದೆ ಹಾಸನದಲ್ಲಿ ಮಲ್ನಾಡು ಮೊಬೈಲ್ ಸ್ಕೂಟರ್ ವಿತರಣಾ ಶೋರೂಮ್ ಸ್ಥಾಪಿಸಿ, ಅಲ್ಲಿಂದ ಮುಂದುವರಿದು ಸ್ನೇಹಿತರ ಜೊತೆ ಸೇರಿ ಬೆಂಗಳೂರಿನಲ್ಲಿ ಬಡ ಹಾಗೂ ಸಾಮಾನ್ಯ ಜನರ ಆಸೆಯ ಕೂಸಾಗಿದ್ದ ವಿಮಾನಯಾನ ಕ್ಷೇತ್ರ ಪ್ರವೇಶಿಸಿ ಏರ್ ಡೆಕ್ಕನ್ ಸಂಸ್ಥೆಯನ್ನು ಸ್ಥಾಪಿಸಿ ವಿಮಾನಯಾನದ ಆಸೆ ಹೊತ್ತವರಿಗೆ ಕಡಿಮೆ ದರದಲ್ಲಿ ವಿಮಾನಯಾನ ಅವಕಾಶ ಮಾಡಿಕೊಟ್ಟಿದ್ದು ಈಗ ಇತಿಹಾಸ.

ಹುಡುಗಿಯೇ ಹುಡುಗನನ್ನು ನೋಡಲು ಹಳ್ಳಿಗೆ ಹೋಗುವುದು, ಹಳ್ಳಿಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದಿರುವುದು, ಹುಡುಗಿ ಬೇಕರಿ ಸ್ಥಾಪಿಸುವ ಮೂಲಕ ಸ್ವಂತ ಉದ್ಯಮ ಆರಂಭಿಸುವ ಕನಸನ್ನು ನನಸಾಗಿಸುವ ಆಕೆಯ ಹೋರಾಟ ನಾಯಕನಿಗೆ ಸ್ಪೂರ್ತಿಯಾಗುವುದು.. ಈ ಕೆಲ ಘಟನೆಗಳು ಕ್ಯಾಪ್ಟನ್ ಗೋಪಿನಾಥ್ ಅವರ ಸಿಂಪ್ಲಿಫೈ ಆತ್ಮಚರಿತ್ರೆಯ ಕೆಲ ಪುಟಗಳನ್ನು ಆಧರಿಸಿದೆ. ಉಳಿದಂತೆ ಸಂಪೂರ್ಣವಾಗಿ ತಮಿಳುನಾಡಿನ ಮಧುರೈ ಸಮೀಪದ ಹಳ್ಳಿಯ ಹಿನ್ನೆಲೆಯಲ್ಲಿ ಚಿತ್ರ ಮೂಡಿಬಂದಿದೆ.

ನಡು ಮಾರನ್ ಎಂಬ ಯುವಕನೊಬ್ಬ ಸುಂದರಿ ಎಂಬ ಯುವತಿಯನ್ನು ವಿಶಿಷ್ಟವಾದ ರೀತಿಯಲ್ಲಿ ಭೇಟಿಯಾಗುವುದು, ಅವರಿಬ್ಬರ ಕನಸುಗಳು, ಅಸಾಧಾರಣ ಕನಸನ್ನು ಹೊತ್ತ ನಾಯಕ ಮುನ್ನಡೆಯುವಾಗ ಅವನಿಗೆ ಎದುರಾಗುವ ಸಂಕಷ್ಟಗಳು, ಅಡಚಣೆಗಳು, ಅವುಗಳನ್ನು ಎದುರಿಸಿ ಸಾಧಿಸುವ ಆತನ ವಿಜಯ ಚಿತ್ರದಲ್ಲಿ ಕುತೂಹಲಕಾರಿಯಾಗಿ ಮೂಡಿಬಂದಿದೆ.

ನಂಬಿದವರು ಕೈಕೊಡುವುದು, ವಿಶ್ವಾಸಘಾತಕತನ, ಸಂಪೂರ್ಣ ಆಸೆಯನ್ನು ಕಳೆದುಕೊಂಡಾಗ ಮತ್ತೆಲ್ಲೆಯೂ ಮೂಲೆಯಿಂದ ಮೂಡಿಬರುವ ಆಶಾಕಿರಣ ಚಿತ್ರಕಥೆಯಲ್ಲಿ ಹಾಸುಹೊಕ್ಕಾಗಿ ಮೂಡಿಬಂದಿದ್ದು ಚಿತ್ರದ ಯಶಸ್ಸಿಗೆ ಸಹಕಾರಿಯಾಗಿದೆ. ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸುಧಾ ಕೊಂಗೂರು ಹಾಗೂ ಸಂಭಾಷಣೆ ಬರೆದಿರುವ ವಿಜಯ ಕುಮಾರ್ ಮೆಚ್ಚುಗೆಗೆ ಪಾತ್ರವಾಗುತ್ತಾರೆ.

ಚಿತ್ರದ ನಿರ್ಮಾಪಕರೂ ಆಗಿರುವ ನಾಯಕ ಸೂರ್ಯ ಹಾಗೂ ನಾಯಕಿ ಅಪರ್ಣ ಬಾಲಮುರಳಿ ಅಭಿನಯ, ಗಮನಸೆಳೆಯುವ ಸಂಭಾಷಣೆ, ಛಾಯಾಗ್ರಹಣ ಚಿತ್ರದ ಪ್ಲಸ್ ಪಾಯಿಂಟ್‌. ಜೀವನದಲ್ಲಿ ಹತಾಶರಾದವರಿಗೆ, ಭರವಸೆ ಕಾಣದವರಿಗೆ ಇದೊಂದು ಸ್ಫೂರ್ತಿದಾಯಕ ಸಿನಿಮಾ.  

ಗೊರೂರು ಎಂಬ ನಮ್ಮೂರ ಹೆಸರು ಸಿನಿಮಾದ ತೆರೆಯ ಮೇಲೆ ಹತ್ತಾರು ಬಾರಿ ಬರುವುದು ನನಗೊಂದು ಖುಷಿ ಕೊಡುವ ಸಂಗತಿ. 

‍ಲೇಖಕರು Avadhi

December 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Mallikarjuna Hosapalya

    ತೆಲುಗಿನಲ್ಲಿ ಈ ಚಿತ್ರಕ್ಕೆ ‘ಆಕಾಸಮೇ ಹದ್ದು’ (ಆಕಾಶವೇ ಹದ್ದು ಅಥವಾ ಎಲ್ಲೆ) ಎಂಬ ಅರ್ಥಪೂರ್ಣ ಹೆಸರಿಟ್ಟು ಬಿಡುಗಡೆ ಮಾಡಿದ್ದಾರೆ. ಆದರೆ ನಮ್ಮ ಸಿನಿಮಾ ವ್ಯವಹಾರಸ್ತರು ಮಾತ್ರ ತಮಿಳು ಹೆಸರನ್ನು ಕನ್ನಡದಲ್ಲಿ ಬರೆದು ಬಿಡುಗಡೆ ಮಾಡಿರುವುದು ನಗೆಪಾಟಲು. ನಮ್ಮ ಡಬ್ಬಿಂಗ್ ಸಿನಿಮಾಗಳ ಭಾಷಾ ದಾರಿದ್ರ್ಯಕ್ಕೆ ಇದು ಉತ್ತಮ ಉದಾಹರಣೆ. ಇನ್ನು ನಮ್ಮದೇ ನಟರಿಗೆ ಬೇರೆಯವರು ಧ್ವನಿ ನೀಡುವುದಂತೂ ಬಾಲಿಶವಾದುದು. ಇತ್ತೀಚೆಗೆ ಸುದೀಪ್ ನಟನೆಯ ತೆಲುಗು ಚಿತ್ರ ‘ಈಗ’ ಕನ್ನಡಕ್ಕೆ ಡಬ್ ಆಗಿ ಟೀವಿಯಲ್ಲಿ ಪ್ರಸಾರವಾಯಿತು. ನೋಡಿದರೆ ಸುದೀಪ್ ಗೆ ಬೇರೆಯವರು ಧ್ವನಿ ನೀಡಿದ್ದರು. ತಮಾಶೆ ಎಂದರೆ ತೆಲುಗು ಸಿನಿಮಾಗೆ ಸುದೀಪ್ ಸ್ವತಃ ಡಬ್ ಮಾಡಿದ್ದಾರೆ. ಇಂತಹಾ ಎಡಬಿಡಂಗಿತನಕ್ಕೆ ಡಬ್ಬಿಂಗ್ ಯಾಕೆ ಬೇಕು. ಚಲನಚಿತ್ರ ವಾಣಿಜ್ಯ ಮಂಡಳಿಯೋ ಅಥವಾ ಸರ್ಕಾರವೋ ಇದಕ್ಕೆ ಕಡಿವಾಣ ಹಾಕಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: