ಮಂಜುನಾಥ್ ಲತಾ
**
ಮೊದಲಿಗೇ ಹೇಳಿಬಿಡುವೆ;
ಈ ಬಯಕೆ ಈಗಾಗಲೇ ಸ್ವರ್ಗಸ್ಥರಾದವರ ಮೇಲಿನ
ವಿರೋಧವೇನೂ ಅಲ್ಲ;
ಅಲ್ಲಿ ಇರಬಹುದಾದವರ ಮೇಲೆ ನನಗೆ ತಕರಾರೂ ಇಲ್ಲ.
ಏನೇ ಇರಲಿ, ನಾನು ನರಕಸ್ಥನಾಗಲು ಇಚ್ಛಿಸುವೆ.
ಅಲ್ಲಿನ ಬಡಬಗ್ಗರು, ಕಳ್ಳರು, ಭಿಕ್ಷುಕರು, ಕೊಲೆಗಡುಕರು,
ಕೊಳಕರನ್ನು ಭೇಟಿಯಾಗಬಯಸುವೆ.
ಪಾಪಿಗಳು, ಪಾತಕಿಗಳು, ಹೃದಯಹೀನರು, ಕ್ರೂರಿಗಳು
ಇಲ್ಲಿ ನಿತ್ಯನರಕಿಗಳಾಗಿ ಬಾಳಿ
ಅಲ್ಲಿ ಭಜನೆ ಮಾಡುತ್ತಿರಬಹುದಾದವರನ್ನು
ಸಂಧಿಸಬೇಕೆಂದುಕೊಂಡಿರುವೆ.
ಅಲ್ಲಿ ಇರಬಹುದು;
ತಮ್ಮ ಚಿಂದಿ ಸೀರೆಗಳನ್ನು ಹೊಲಿಯಲು
ಸೂಜಿ-ನೂಲುಗಳನ್ನು ಹುಡುಕುತ್ತಿರುವ ನನ್ನ ಅವ್ವಂದಿರು.
ಅಂಗಿ-ಲಂಗ ಕಳೆದುಕೊಂಡ ಪುಟ್ಟ ತಮ್ಮ-ತಂಗಿಯರು.
ಕಾಲುಗಳಲ್ಲಿ ಕಲ್ಲೊತ್ತು ಆಗಿ ಬೆರಳ ತುದಿಗಳಲ್ಲಿ ನಡೆಯುತ್ತ
ರಬ್ಬರು ಚಪ್ಪಲಿಗಳನ್ನು ತಡಕುತ್ತಿರುವ ಮುದಿಯಂದಿರು.
ನಾನು ನೋಡಬೇಕೆಂದುಕೊಂಡಿರುವೆ;
ಒಡೆದ ಕನ್ನಡಿಗಳಲ್ಲಿ ತಮ್ಮ ಅಸ್ತವ್ಯಸ್ತ ಮುಖಗಳನ್ನು
ನೋಡಿಕೊಳ್ಳಲು ಹೆಣಗುತ್ತಿರುವ ಅಪರಿಚಿತರನ್ನು.
ನಾನು ಕೇಳಬೇಕೆಂದುಕೊಂಡಿರುವೆ
ನಾಲಿಗೆ ಸೀಳಿಕೊಂಡು ಹರಕು ಮಾತುಗಳನ್ನಾಡುವವರ
ಜೊಲ್ಲು ನುಡಿಗಳ ಅರ್ಥವನ್ನು.
ಅಲ್ಲಿರಬಹುದೆ
ತಂಬೂರಿ ತಂತಿಯಂತೆ ನುಡಿಯುತ್ತಲೇ
‘ಫಟ್ಟೆಂದು’ ಪ್ರಾಣ ಬಿಟ್ಟ ನನ್ನ ಗೆಣೆಕಾರರು?
ಸತ್ಯಕ್ಕೆ ಕತ್ತು ಕೊಟ್ಟು ‘ಕಚಕ್ಕನೆ’
ತಲೆ ಕಡಿಸಿಕೊಂಡ ನಿಜಗುಣಕಾರರು?
ಅಲ್ಲಿ ಅಡ್ಡಾಡುತ್ತಿರಬಹುದೆ
ಇಲ್ಲಿಂದ ಸ್ವರ್ಗಕ್ಕೆ ಮೂರೇ ಗೇಣು ಇರಬಹುದೆಂದು
ಎಣಿಸುತ್ತ ಹುಡುಕುತ್ತಿರುವ ತಳಮಳದ ಜನರು?
ತಮ್ಮ ಕೈಯಾರೆ ತಮ್ಮ ಮುಖಗಳಿಗೆ ಮಸಿ ಬಳಿದುಕೊಂಡ
ಹುಸಿಮುಖಗಳ ಹಸಿವಿನ ಮಂದಿ?
ಅಲ್ಲಿ ತೆವಳುತ್ತಿರಬಹುದೆ
ದಾರಿ ಆರಿಸಿಕೊಳ್ಳಲಾಗದೆ ದಿಕ್ಕುತಪ್ಪಿ ತಲುಪಿದ
ಕಜ್ಜಿ ನಾಯಿ, ನರಿ, ಬಾವಲಿ, ಹದ್ದು, ಮುಂಗುಸಿ
ಕೊಳಕು ಮೂತಿಯ ಹಂದಿ, ಒಣಜೇಡ
ಕಾಲು ಮುರಿದ ಕುದುರೆ, ತಿಪ್ಪೆ-ಬಚ್ಚಲುಗಳ ಹುಳ?
ಅವರೊಂದಿಗೆಲ್ಲ ನಾನು ನೆಂಟಸ್ತಿಕೆ ಬೆಳೆಸಬೇಕೆಂದುಕೊಂಡಿರುವೆ
ಹಾಗಾಗಿ ನಾನು ನರಕಸ್ಥನಾಗಬಯಸುವೆ.
0 Comments