ಸುರೇಶ ಎಲ್ ರಾಜಮಾನೆ
**
ಒಣಗಿಹೋದ ಮರದಲ್ಲಿ
ಚಿಗುರು ನೋಡುವ ಅಸೆಗೆ
ಭಾಷೆ ಗೊತ್ತಿಲ್ಲದ
ಭಾವ ಗೊತ್ತಿಲ್ಲದ
ಬೆಂಕಿ ಹಪಹಪಿಸುವದು
ಸರಿಯೊ ತಪ್ಪೊ
ಆಸೆ ಮಾತ್ರ ಸರಿಯಾಗಿಯೇ ಇದೆ
ನೆಲಕ್ಕೆ ಉದುರಿ
ಮಣ್ಣಾಗುವ ಬಯಕೆ ಹೊಂದಿದ್ದ
ಎಲೆಗಳು ಬಿಡದೇ ಬೀಸಿದ
ಬಿರುಗಾಳಿಗೆ ಹಾರಿ
ಉರಿವ ಬೆಂಕಿಗೆ ಆಹುತಿಯಾದವು
ಸಹಜತೆ ಅನ್ನೋದು ಎಷ್ಟು
ಸರಿಯೋ ತಪ್ಪೊ
ಬೆಂಕಿ ಮಾತ್ರ ಸುಡುವುದೆ ಸರಿಯಾಗಿದೆ
ಗಾಳಿಗೆ ಅಡ್ಡಲಾಗಿ ನಿಂತ
ಎಷ್ಟೋ ಮರಗಳು
ಮುಳ್ಳಾಗಿ ಕಾಣುವದು
ಬಾಳಿನ ಕಣ್ಣು
ಹೊಂದಿರುವವರಿಗೆ ಮಾತ್ರ
ಬಾಳಿನಲಿ ತಲೆಯತ್ತಿ ನಿಲ್ಲಲು
ಬಾಗಿ ನಡೆಯುವದನ್ನು
ಹೇಳಿ ಕೊಟ್ಟಿದ್ದರೂ
ಬಾಗಿ ಬಸವಳಿಯುವದು
ಸರಿಯೋ ತಪ್ಪೊ
ಎಲ್ಲ ಸಮಯದಲ್ಲಿಯೂ ಬಾಗುವದು
ಮಹಾ ತಪ್ಪೆಂಬುದೆ ಸರಿಯಾಗಿದೆ
ಭೂಮಿಗೆ ಬಿದ್ದ ಬೀಜ
ಫಲಕೊಡುವವರೆಗೆ
ಕಾಯುವದು
ಕಾಯವನ್ನು ಕಾಯ್ದುಕೊಳ್ಳುವದು
ಕಾಯಕವೇ ಆಗಬೇಕು
ಸಹಾಯಕ್ಕಾಗಿ ಸಹಕರಿಸುವದು
ಸರಿಯೋ ತಪ್ಪೊ
ಫಲಕ್ಕಾಗಿ ಕಾಯಬೇಕೆಂಬುದು
ಸರಿಯಾಗಿಯೇ ಇದೆ
ತೊಟ್ಟಿಲು ಕಟ್ಟಲು
ಜೋಕಾಲಿ ಜೀಕಲು
ಬಳ್ಳಿಯ ತಬ್ಬಲು
ಆಸರೆಯಾಗುವ ಆಶ್ರಯದಾತ
ನರರ ನಿರಾಸಕ್ತಿಗೆ ಬಲಿಯಾಗಿ
ಒಲೆಗೆ ಉರುವಲಾಗಿ
ಉರುಳುತ್ತಿದ್ದು
ಸರಿಯೊ ತಪ್ಪೊ ಎಂದು ಯೋಚಿಸುವ
ಸಮಯವಿದಲ್ಲ
ಉಸಿರಿನ ಸಮಯವೀಗ ಕೈಮೀರಿಯಾಗಿದೆ
ಎಂಬುದು ಸರಿಯಾಗಿಯೇ ಇದೆ
ತುಂಬಾ ಚೆಂದ ಕವಿತೆ ಬರೆದಿದ್ದೀರಿ ಸುರೇಶ್.. ಸರಿ ತಪ್ಪು ಸರಿಪಡಿಸಿಕೊಳ್ಳದಷ್ಟು ರಭಸದಲ್ಲಿದ್ದೀವಿ ಬದುಕಿನೊಳಗೆ…