ಸುರೇಶ್ ಕಂಜರ್ಪಣೆ ಓದಿದ ‘ಪರ್ಮಾಕಲ್ಚರ್’

ಕೃಷಿಯ ಹೊಸ ಸಾಧ್ಯತೆ ತೋರಿಸುವ ಪರ್ಮಾಕಲ್ಚರ್‌

ಸುರೇಶ್ ಕಂಜರ್ಪಣೆ

ಪ್ರಕೃತಿಯನ್ನು ನಿಯಂತ್ರಿಸಿ ಅದನ್ನು ಸೂರೆ ಮಾಡುತ್ತಾ ಒಂದು ಜೀವನ ಶೈಲಿಯನ್ನು ರೂಪಿಸುವ ನಾಗರಿಕತೆಯ ಅಹಂಕಾರಕ್ಕೆ ಪ್ರಾಕೃತಿಕ ಸಂಪನ್ಮೂಲಗಳಷ್ಟೇ ಬಲಿಯಾಗಿದ್ದಲ್ಲ; ಭಾರತದಂಥಾ ದೇಶದಲ್ಲಿ ಕೃಷಿಯೂ ಬಲಿಯಾಗಿ ಗ್ರಾಮ ಭಾರತವೇ ರೋಗಿಷ್ಠವಾಗಿದೆ. ಈ ವಿಕೃತ ದುರಂತಕ್ಕೆ ಸ್ಪಂದಿಸಿದ ಹಲವರು ಪರ್ಯಾಯ ವಿಧಾನಗಳನ್ನು ಕಟ್ಟಿಕೊಟ್ಟಿದ್ದಾರೆ. ಬಿಲ್ ಮೋಲಿಸನ್ ಅಂಥವರಲ್ಲಿ ಪ್ರಮುಖರು. ಅವರ ಪರ್ಮ ಕಲ್ಚರ್ (‘ಖಾಯಂ ಕೃಷಿ’) ಎಂಬ ಪರಿಕಲ್ಪನೆ ಕೃಷಿ ವಿನ್ಯಾಸದ ಮೂಲಕವೇ ಪರ್ಯಾಯ ತಾತ್ವಿಕತೆಯನ್ನು ಸಾದರಪಡಿಸುವ ವಿಧಾನ.

ಸಾವಯವ, ಸಹಜ ಕೃಷಿ ಸಹಿತ ಈ ಎಲ್ಲಾ ವಿಧಾನಗಳಿಗೊಂದು ಸಾಮ್ಯತೆ ಇದೆ. ಮೂಲಭೂತವಾಗಿ ಇವು ಪ್ರಕೃತಿಯೊಂದಿಗೆ ಸ್ಪಧೆಯಲ್ಲ, ಸಹಕಾರ, ಸಾಮರಸ್ಯ ಎಂಬ ತತ್ವದಿಂದ ಜಿನುಗಿದವು.

ನಾನು ಮೂವತ್ತು ವರ್ಷ ಹಿಂದೆ ಪರ್ಯಾಯ ಕೃಷಿ ಹಾದಿಗಳ ಬಗ್ಗೆ ಓದಿ, ಗಮನಿಸಲು ಹೊರಟಾಗ ನನ್ನನ್ನು ಕಾಡಿದ್ದು ಫುಕೋಕಾ, ಬಿಲ್ ಮಾಲಿಸನ್ ಮತ್ತು ಆಲ್ಬರ್ಟ್ ಹೋವರ್ಡ್. ಹೋವರ್ಡ್ ಚಾರಿತ್ರಿಕವಾಗಿ ಈ ದೇಶದ ಒಳ ಸತ್ವವನ್ನು ಅರಿತು ನಮಗೇ ಸಾದರಪಡಿಸಿದವರು. ಮಸನೋಬ ಫುಕೋಕಾ ಬೌದ್ಧೀಯ ಶಿಸ್ತಿನಲ್ಲಿ ಅದರ ತತ್ವ ಪ್ರಣಾಳಿಯನ್ನು ಕಟ್ಟಿಕೊಟ್ಟರು. ಅವರಿಗೆ ಅದೊಂದು ಧ್ಯಾನ.

ಬಿಲ್ ಮಾಲಿಸನ್ ಇವರಿಗಿಂತ ಹೇಗೆ ಭಿನ್ನ? ಪರ್ಮಾಕಲ್ಚರ್‌ನಲ್ಲಿ ಒಂದು ಜಮೀನಿನ ವಿನ್ಯಾಸವೇ ಅದರ ತತ್ವಪ್ರಣಾಲಿಯನ್ನು ತೋರಿಸಿಕೊಡುತ್ತದೆ. ಉಳಿದ ವಿಧಾನಗಳಲಿ ಹೈಬ್ರಿಡ್/ಏಕಬೆಳೆಯ ವಿನಾಶಕಾರಿ ವಿಧಾನದ ಬದಲು ಪಾರಂಪರಿಕವಾದ ಅಕ್ಕಡಿ ಸಾಲು ಮಿಶ್ರಬೆಳೆ ಇತ್ಯಾದಿ ಬದಲಾವಣೆ ತರುವುದು ಪರ್ಯಾಯದ ಬಲು ಮುಖ್ಯ ಲಕ್ಷಣ. ಒಂದೆಡೆ ಬೆಳೆಗಳ ಆಯ್ಕೆ, ಇನ್ನೊಂದೆಡೆ ಒಳಸುರಿಗಳ ಆಯ್ಕೆ ಇವೆರಡು ಬಹುತೇಕ ಪರ್ಯಾಯ ಮಾರ್ಗಗಳ ನಿರ್ಣಾಯಕ ಅಂಶಗಳು. ಬಿಲ್ ಮಾಲಿಸನ್ ಇವೆಲ್ಲವನ್ನೂ ಒಳಗೊಳ್ಳುವ, ಒಳಗೊಳ್ಳುತ್ತಾ ಒಂದು ಪರ್ಯಾಯ ವಿಶ್ವದ ಮಾದರಿಯನ್ನೇ ಸೃಷ್ಟಿಸುವ ರೈತನ ಸೃಷ್ಟಿಗೆ ಒತ್ತು ಕೊಡುತ್ತಾರೆ.

ಪ್ರಕೃತಿಯನ್ನು ಗಮನಿಸಿದರೆ ಅಲ್ಲಿ ಇರುವ ವಿನ್ಯಾಸ ಅದ್ಭುತ. ಬೆಟ್ಟದ ಮೇಲು ತುದಿಯಲ್ಲಿ ಹುಲ್ಲು. ಕೆಳಗಿಳಿಯುತ್ತಿದ್ದಂತೆ ಕಾಡು; ಕಣಿವೆಗಳಲ್ಲಿ ಜಿನುಗುವ ನೀರು, ಕೆಳಗೆ ಹರಿಯುವ ತೊರೆ; ಅದು ಎಲ್ಲೋ ಕೆರೆಯಾಗಿ ಮತ್ತೆ ನದಿಯಾಗಿ ಹರಿಯುವಾಗ ಅಲ್ಲಿ ವೃದ್ಧಿಸುವ ಜಲಚರಗಳು. ಅದರ ಅಂಚಿನ ಜವುಗು, ಅದರ ಜೊಂಡು. ಈ ವಿನ್ಯಾಸವು ತನ್ನೊಳಗೆ ನಿರ್ದಿಷ್ಟ ಜೀವರಾಶಿಯನ್ನು ಪೋಷಿಸುವುದಷ್ಟೇ ಅಲ್ಲ, ಒಟ್ಟಾರೆ ಜೀವ –ಪ್ರಕೃತಿಯ ಸಂತುಲನವನ್ನೂ ಸಾಧ್ಯ ಮಾಡುತ್ತದೆ. ಮನುಷ್ಯನ ಬಲುದೊಡ್ಡ ಸಾರ್ಥಕತೆ, ಸಂತೃಪ್ತಿ ಇರುವುದು ತಾನು ಈ ಅದ್ಭುತ ವಿನ್ಯಾಸದ ಸೃಷ್ಟಿಯ ಭಾಗ ಎಂಬ ಅರಿವಿನಲ್ಲಿ.

ಆದರೆ ಕೃಷಿಯೆಂಬುದು ಮನುಷ್ಯ ಪ್ರಜ್ಞಾಪೂರ್ವಕವಾಗಿ ಪ್ರಕೃತಿಯೊಂದಿಗೆ ಅರ್ಧ ಸೆಣೆಸುತ್ತಾ, ಅರ್ಧ ಹೊಂದಾಣಿಕೆ ಮಾಡುತ್ತಾ ಸೃಷ್ಟಿಸಿದ ಪ್ರತಿ ಪ್ರಕೃತಿ. ಇದರಲ್ಲಿ ಅನಿಯಂತ್ರಿತ ಕಾಡು ಇಲ್ಲ. ಬೇಕಾದಂತೆ ಇದ್ದು ಬಾಳುವ ಜೀವ ರಾಶಿಗಳಿಲ್ಲ. ಎಲ್ಲವೂ ಒಂದಿಷ್ಟಾದರೂ ಮನುಷ್ಯನ ನಿಯಂತ್ರಣದಲ್ಲಿ ಇದ್ದು ವೃದ್ಧಿಸುವ ವ್ಯವಸ್ಥೆ.

“ ಈ ಪುಸ್ತಕ ವಿನ್ಯಾಸದ ಬಗ್ಗೆ ಇದೆ ಎಂದು ಅನ್ನಿಸಿದರೂ, ಇದು ಮೌಲ್ಯಗಳು ಮತ್ತು ನೈತಿಕತೆಗಳ ಬಗ್ಗೆಯೂ ಇದೆ. ಅದಕ್ಕಿಂತ ಹೆಚ್ಚಾಗಿ ಭೂಮಿಯ ಬಗ್ಗೆ ಕಾಳಜಿ ವಹಿಸುವ ವೈಯುಕ್ತಿಕ ಜವಾಬ್ದಾರಿಯ ಪ್ರಜ್ಞೆ ಬಗ್ಗೆ ಇದೆ”.
“ಖಾಯಂ ಕೃಷಿಯ ಮೂಲತತ್ವವೇನು? ನಮ್ಮ ಮತ್ತು ನಮ್ಮ ಮಕ್ಕಳ ಅಸ್ತಿತ್ವಕ್ಕೆ ನಾವು ಜವಾಬ್ದಾರರು ಎಂಬ ನೈತಿಕ ನಿರ್ಧಾರ ಅದು. ಎಲ್ಲಾ ಜೀವ ವ್ಯವಸ್ಥೆ ಮತ್ತು ಭವಿಷ್ಯದ ಉಳಿಗಾಲ ನಿಂತಿರುವುದೇ ಸಹಕಾರದಲ್ಲಿ; ಸ್ಪರ್ಧೆಯಲ್ಲಲ್ಲ ಎಂಬ ತತ್ವದ ಬುನಾದಿಯಲ್ಲಿ ಪರ್ಮಾಕಲ್ಚರ್ ನಿಂತಿದೆ.”

ಈ ಮಾತುಗಳೆಲ್ಲಾ ಬಿಲ್ ಮೋಲಿಸನ್ ಸಾಂದರ್ಭಿಕವಾಗಿ ತನ್ನ ಮೇರು ಕೃತಿ, ಪರ್ಮಾಕಲ್ಚರ್ ಕೃತಿಯಲ್ಲಿ ಹೇಳಿದ್ದು. ಅವನು ಬಹುಕಾಲ ಆಸ್ಟ್ರೇಲಿಯಾದ ಮೂಲನಿವಾಸಿಗಳ ಜೊತೆ ಕೆಲಸ ಮಾಡಿರುವ ಕಾರಣವೋ ಏನೋ ಮೂಲ ನಿವಾಸಿಗಳ ವಿಶ್ವ ದೃಷ್ಟಿಯೊಂದು ಅವನ ಕೃಷಿ ಪದ್ಧತಿಯನ್ನು ಪ್ರಭಾವಿಸಿದೆ. ನಾವೆಲ್ಲಾ ಒಂದೇ ಮೊಟ್ಟೆಯಿಂದ ಹುಟ್ಟಿದವರು ಎಂಬ ಮೂಲನಿವಾಸಿ ಸೃಷ್ಟಿಯ ನಂಬಿಕೆ ಅದು..

ಬೆಂಗಳೂರಿನ ಇಕ್ರಾ ಸಂಸ್ಥೆ ಬಿಲ್ ಮಾಲಿಸನ್‌ನ ಪರ್ಮಾಕಲ್ಚರ್ ಕುರಿತಾದ ಪರಿಚಯಾತ್ಮಕ ಪುಸ್ತಕವನ್ನು ಪ್ರಕಟಿಸಿ ಮಹದುಪಕಾರ ಮಾಡಿದ್ದಾರೆ. ಪರ್ಮಾಕಲ್ಚರ್ ವಿಧಾನವನ್ನು ಕರಗತ ಮಾಡಿಕೊಂಡು ಕಳೆದ ಮೂರು ದಶಕಗಳಿಂದ ಇದನು ಪ್ರಸರಿಸುತ್ತಿರುವ ಅರ್ಧೇಂದು ಚಟರ್ಜಿ ಈ ಪುಸ್ತಕದ ಕರ್ತೃ. ಈ ಪುಸ್ತಕದಲ್ಲಿ ಅರ್ಧೇಂದು ಚಟರ್ಜಿಯವರು ಪರ್ಮಾಕಲ್ಚರ್ ವಿಧಾನವನ್ನು ಅತ್ಯಂತ ಸರಳವಾಗಿ ವಿವರಿಸುತ್ತಾ ಹೋಗುತ್ತಾರೆ. ಪುಸ್ತಕದ ಕೊನೆಗೆ ರೈತರಿಗೆ ಸಹಾಯವಾಗುವ ಬೀಜ ಕಾಪಿಡುವುದರಿಂದ ಹಿಡಿದು, ರೋಗ ನಿಯಂತ್ರಣದ ವರೆಗೆ ಸಾವಯವ ವಿಧಾನದ ಹತ್ತು ಹಲವು ವಿವರಗಳನ್ನು ಗಾಯತ್ರಿಯವರು ಮತ್ತೊಂದು ಪರ್ಮಾಕಲ್ಚರ್ ಪುಸ್ತಕದಿಂದ ಹೆಕ್ಕಿ ನೀಡಿದ್ದಾರೆ.

ಬಹುತೇಕ ಸಮಗ್ರ ಕೃತಿ ಇದು. ಅರ್ಧೇಂದು ಅವರ ವಿವರಣೆಯಲ್ಲಿ ಸ್ವತಃ ಮಾಡಿ ತೋರಿಸಿದ ವಿವರಗಳಿವೆ. ಆದ್ದರಿಂದಲೇ ಇದು ಹೆಚ್ಚು ಪ್ರಾಮಾಣಿಕವಾದದ್ದು. ರೈತನೊಬ್ಬನ ಜಮೀನಿನ ವಿನ್ಯಾಸದಲ್ಲಿ ಅವನ ಸಕಲ ತತ್ವಗಳೂ ಇರುತ್ತದೆ. ಉದಾ: ಕಾಡಿನ ಮೃಗ ಪಕ್ಷಿ, ಸಸ್ಯ ಸಂಕುಲ ರಕ್ಷಿಸುವುದು ಪರಿಸರ/ವನ್ಯಪ್ರೇಮಿಯೊಬ್ಬನ ಕಾಳಜಿಯಾದರೆ ರೈತನೊಬ್ಬ ಅದಕ್ಕೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುವುದು ಹೇಗೆ ಎಂಬುದನ್ನು ಬಿಲ್ ಮಾಲಿಸನ್ ವಿವರಿಸುತ್ತಾರೆ. ತನ್ನ ಜಮೀನಿನಲ್ಲಿ ಒಂದಷ್ಟು ಪಕ್ಷಿಗಳಿಗೆ ಆಶ್ರಯ ನೀಡುವುದು; ಅಪರೂಪದ ಸಸ್ಯ ತಳಿಗಳಿಗೆ ಆಶ್ರಯ ನೀಡುವುದು- ಹೀಗೆ ರೈತನ ಸೇವೆ ಏಕಕಾಲಕ್ಕೆ ದೊಡ್ಡ ಪರಿಸರ ಸೇವೆಯ ಭಾಗವೂ ಆಗುತ್ತದೆ; ರೈತನ ಅರಿವನ್ನೂ ವಿಶ್ವಾತ್ಮಕಗೊಳಿಸುತ್ತದೆ.

ವೈವಿಧ್ಯತೆಯನ್ನು ಹೆಚ್ಚಿಸುವುದು, ಸ್ವಾವಲಂಬಿಯಾಗುವುದು ಮಣ್ಣಿನ ಫಲವತ್ತತೆಯನ್ನು ಮುಂದಿನ ತಲೆಮಾರಿಗೆ ವೃದ್ಧಿಸಿ ಕೊಡುವುದು- ಇವೆಲ್ಲಾ ಒಂದು ತಾತ್ವಿಕತೆಯ ಭಾಗ. ಇವನ್ನು ವೈವಿಧ್ಯಮಯವಾಗಿ, ಖಾಯಂ ಆಗಿ ತನ್ನ ಜಮೀನಿನಲ್ಲಿ ಪ್ರತಿಷ್ಠಾಪಿಸುವುದು ಹೇಗೆ ಎಂಬುದನ್ನು ಪರ್ಮಾಕಲ್ಚರ್ ವಿನ್ಯಾಸ ತೋರಿಸಿಕೊಡುತ್ತದೆ.

ಯಾರು ಏನೇ ಹೊಸ ಆವಿಷ್ಕಾರ ಮಾಡಿದರೂ ನಮ್ಮಲ್ಲಿ ಅದು ಇತ್ತು ಎಂಬ ಹುಂಬ ಹೆಮ್ಮೆ ನಮ್ಮಲ್ಲಿ ವ್ಯಾಪಕವಾಗಿದೆ. ಈಗ ಮೂವತ್ತು ವರ್ಷ ಹಿಂದೆ ಇಂಥಾ ಮಾತಾಡಿದಾಗ ಇದನ್ನು ವಿವರಿಸಬಲ್ಲ ರೈತರಾದರೂ ಸಿಗುತ್ತಿದ್ದರು. ಈಗ ಅವರೂ ಕಡಿಮೆಯಾಗುತ್ತಿದ್ದಾರೆ. ನಮ್ಮಲ್ಲಿ ಸ್ಥಳೀಯ ಜ್ಞಾನಗಳಿದ್ದವು ಎಂದು ನಾವು ಹೇಳಿದಾಗಲೆಲ್ಲಾ, ಅದನ್ನೊಂದು ವೈಜ್ಞಾನಿಕ ರೀತಿಯಲ್ಲಿ ಮುಂದಿನ ತಲೆಮಾರಿಗೆ ವರ್ಗಾಯಿಸುವ ಕೊಂಡಿಯೇ ಕಡಿದು ಹೋಗಿದೆ.

ಪ್ರತೀ ಹಂಗಾಮನಲ್ಲಿ ರೈತರು ಕೃಷಿ ಸಂಪರ್ಕ ಕೇಂದ್ರಕ್ಕೆ ಬೀಜಕ್ಕಾಗಿ ಅಲೆಯುವುದು; ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಕ್ಕೆ ಕೈಚಾಚುವ ವರ್ತನೆ ನೋಡಿದರೆ ಈ ರೈತರ ಭವಿಷ್ಯದ ಕನಸೇ ಮಸುಕಾಗಿದೆ ಅನ್ನಿಸುತ್ತೆ. ಈ ಬೇಸಾಯವೂ ವರ್ಷವರ್ಷ ಮಣ್ಣನ್ನು ಇನ್ನಷ್ಟು ಬರಡುಗೊಳಿಸುವ ಕಾರ್ಯಕ್ರಮವೇ ಸರಿ. ಈ ಗಾಣ ಸುತ್ತುವ ಕೆಲಸದಿಂದ ಒಂದು ಬ್ರೇಕ್ ತೆಗೆದುಕೊಂಡು ತನ್ನ ಜಮೀನನ್ನು ಗಮನಿಸಿ ಅದನ್ನು ಇನ್ನಷ್ಟು ಸಮೃದ್ಧಗೊಳಿಸಬೇಕೆಂಬ ಇರಾದೆಯೇ ರೈತರಲ್ಲಿ ಮಾಯವಾಗಿದೆ ಅನ್ನಿಸುತ್ತೆ.

ಈ ಕೃತಿ ಅಂಥ ಒಂದು ಬ್ರೇಕ್ ಹೇಗೆ ಸಾಧ್ಯ; ತನ್ನ ಜಮೀನನ್ನು ಮತ್ತೆ ಹೊಸ ರೀತಿಯಲ್ಲಿ ಸೃಷ್ಟಿಸುವುದು ಹೇಗೆ ಎಂಬ ದಾರಿಯನ್ನು ಸರಳವಾಗಿ ತೋರಿಸಿಕೊಡುತ್ತದೆ. ಇದು ಕೇವಲ ರಾಸಾಯನಿಕದ ಬದಲು ಸಾವಯವ ಗೊಬ್ಬರ; ರಾಸಾಯನಿಕ ಪೀಡೆ ನಾಶಕದ ಬದಲು ಸಾವಯವ ಪೀಡೆ ನಾಶಕ; ಹೈಬ್ರಿಡ್ ಬೀಜಗಳ ಬದಲು ನಾಟಿ ತಳಿ ಎಂಬ ಮಟ್ಟಿಗೆ ನಿಲ್ಲುವುದಿಲ್ಲ. ಜಮೀನನ್ನೇ ಒಂದು ಜೀವ ವೈವಿಧ್ಯತೆಯ ಸೃಷ್ಟಿಯಾಗಿ ರೂಪಿಸಲು ಕೈಪಿಡಿಯಾಗಿ ಕೆಲಸ ಮಾಡುತ್ತದೆ. ಪ್ರತಿಯೊಂದನ್ನೂ ವೈಜ್ಞಾನಿಕವಾಗಿ ದಾಖಲಿಸುವುದು ಹೇಗೆ ಎಂಬುದನ್ನೂ ಅರ್ಧೇಂದು ತಿಳಿಸುತ್ತಾರೆ.

ನಾವು ಗಮನಿಸಬೇಕಾದ ಒಂದು ಸಾಮ್ಯತೆ ಎಂದರೆ ಈ ಪರ್ಯಾಯ ಕೃಷಿಯ ಅಧ್ವರ್ಯುಗಳೆಲ್ಲಾ ಮೂಲತಃ ಆಧುನಿಕ ಶಿಕ್ಷಣದಲ್ಲಿ ತರಬೇತಿ ಪಡೆದು ಪರ್ಯಾಯ ಕೃಷಿವಿಧಾನಗಳನ್ನು ಕಟ್ಟಿಕೊಟ್ಟವರು. ಫುಕೋಕಾ, ಹೋವರ್ಡ್, ಬಿಲ್ ಮಾಲಿಸನ್, ಪಾಲೇಕರ್ ಎಲ್ಲರೂ ಆಧುನಿಕ ಶಿಕ್ಷಣದ ಶಿಸ್ತನ್ನು ಮೈಗೂಡಿಸಿಕೊಂಡವರು. ಆದರೆ ಈ ಶಿಕ್ಷಣದ ತರುವಾಯ ವಿಜ್ಞಾನ ತಂತ್ರಜ್ಞಾನದ ಏಕಸ್ವಾಮ್ಯದ ವ್ಯವಸ್ಥೆಯ ದಾಸರಾಗಲಿಲ್ಲ.

ನಮ್ಮ ದುರಂತವಿರುವುದು, ನಮ್ಮಲ್ಲಿ ಇಂಥಾ ಶಿಕ್ಷಣ ಪಡೆದವರು ಈ ಬಲು ದೊಡ್ಡ ವಿನಾಶಕಾರಿ ವ್ಯವಸ್ಥೆಯ ಭಾಗವಾದರು. ಓದದೇ ಇದ್ದ ರೈತರು ಡೋಡೋ ಹಕ್ಕಿಯ ಹಾಗೆ ಸುಲಭ ಬಲಿಯಾದರು. ಯಾವ ವಿವೇಚನೆ, ಅನ್ವೇಷಕತೆಯೂ ಇಲ್ಲದೇ ತಮ್ಮ ಭವಿಷ್ಯಕ್ಕೇ ಕೊಡಲಿ ಏಟು ಹಾಕಿಕೊಂಡು ಈ ದೊಡ್ಡ ರಾಸಾಯನಿಕ ಕೃಷಿಯ ಯಂತ್ರಕ್ಕೆ ಬಲಿಯಾದರು.

ಈ ಪುಸ್ತಕ ಓದುತ್ತಿದ್ದಂತೆ ಎಂಥಾ ದುರಂತಕ್ಕೆ ನಾವು ಸಾಕ್ಷಿಯಾದೆವು ಎಂಬ ವರ್ತಮಾನದ ಪರಿಸ್ಥಿತಿ ನಮ್ಮನ್ನು ಕಾಡತೊಡಗುತ್ತದೆ. ಇಷ್ಟು ದೈತ್ಯ ಶಕ್ತಿಯ ಹೊಡೆತದಿಂದ ಕನಿಷ್ಠ ವ್ಯಕ್ತಿಯಾಗಿ, ಒಂದು ತುಂಡು ಜಮೀನಿನ ಮಾಲೀಕನಾಗಿ ತನ್ನನ್ನು ತಾನು ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ಈ ಪುಸ್ತಕ ಕಲಿಸಿಕೊಡುತ್ತದೆ. ಇಂಥಾ ರೈತನೊಬ್ಬ ಒಂದು ಸಮುದಾಯಕ್ಕೆ ಬೇಕಾದ ಮಾದರಿಯನ್ನು ಸೃಷ್ಟಿಸಿ, ಉಳಿದ ರೈತರೂ ಇದನ್ನು ಅನುಸರಿಸುವ ಮೂಲಕವಷ್ಟೇ ಈ ಕೃಷಿ ದುರಂತವನ್ನು ನಿಲ್ಲಿಸಬಹುದು.

ಇಕ್ರಾ ಇಂಥಾ ಒಂದು ಕೈಪಿಡಿ ನೀಡುವ ಮೂಲಕ ನಾಡಿನ ಋಣ ತೀರಿಸಿದೆ. ಇನ್ನೀಗ ಇದು ರೈತರ ಜವಾಬ್ದಾರಿ.

‍ಲೇಖಕರು Admin

July 9, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: