ಸುಮ್ಮನಿರುವುದು ಸುಲಭವಲ್ಲ…

ಚಲಂ ಹಾಡ್ಲಹಳ್ಳಿ

ಯಾವುದೋ ಒಂದು ವಿಚಾರವನ್ನು ಹಿಡಿದುಕೊಂಡು ಅದರ ಹಿಂದೆ ಬಿದ್ದು ಯೋಚಿಸುತ್ತಾ ಒಂದಷ್ಟು ಹೊತ್ತು ಇದ್ದು ಬಿಡುವುದು ನನ್ನ ಸಂತಸದ ಕ್ಷಣಗಳಲ್ಲಿ ಒಂದು. ಹಾಗಂತ ಯಾವುದೋ ಒಂದು ವಿಚಾರವನ್ನು ಯಾರಾದರೂ ಕೊಟ್ಟು ಬರಿ, ಯೋಚಿಸು ಅಂದರೆ ಆಗದ ಕೆಲಸ. ಆ ಯೋಚನೆ, ಬರವಣಿಗೆ ನನ್ನ ಸ್ವಂತ ವಿಹಾರ. ಅಲ್ಲಿ ಯಾರ ನಿರ್ದೇಶನವೂ ಇರುವುದಿಲ್ಲ. ಲಘು ದಾಟಿಯಲ್ಲಿ ನನ್ನ ಯೋಚನೆ ಹೇಗಿರಬಹುದು ಎಂಬುದಕ್ಕೆ ಉದಾಹರಣೆ ಈ ಲೇಖನಗಳು.

ನಾನು ಮೂಲತಃ ಗಂಭೀರ ಸ್ವಭಾವದ ಮನುಷ್ಯ ಎಂದು ಬಹುತೇಕರು ಹೇಳುತ್ತಾರೆ. ಒಂದು ವೇಳೆ ಹಾಗೆ ಇದ್ದರೂ ಇರಬಹುದು. ನಾನು ಹೇಗಿದ್ದೇನೆ ಎಂಬ ಪ್ರಶ್ನೆಯ ಬೆನ್ನು ಬಿದ್ದ ಮೇಲೆ ಮೊದಲಿಗೆ ತಿಳಿದ ವಿಚಾರವೇ ನಾನು ಹೇಗಿದ್ದೇನೆ ಎಂಬ ಆಲೋಚನೆಯನ್ನು ದೂರವಿಡುವುದು. ನಾನು ಗಂಭೀರ ಸ್ವಭಾವದವ, ತಮಾಷೆಯ ಮನುಷ್ಯ, ಅರಾಜಕ ಮನುಷ್ಯನಿರಬಹುದಾ…? ಹೀಗೆ ಮುಂತಾದ ವಿಚಾರಗಳ ಹಿಂದೆ ಬೀಳುವುದರಿಂದ ಇದೂವರೆಗೂ ಯಾವ ಖುಷಿಯೂ ನನಗೆ ಸಿಕ್ಕಿಲ್ಲ. ಖುಷಿ ಸಿಗದ ಯೋಚನೆಗಳನ್ನು ಹೆಚ್ಚು ಮಾಡಬಾರದು. ಅದೂ ಕೂಡ ಏನಾದರೂ ಖುಷಿ ಸಿಗಲಿ ಅಂತ ಬಿಟ್ಟುಕೊಳ್ಳುವ ಖಾಲಿ ಸಮಯದಲ್ಲಿ ಈ ರೀತಿ ಆಲೋಚಿಸಲೇ ಬಾರದು. ತುಂಬಾ ಜನಕ್ಕೆ ತಾನು ಹೇಗಿದ್ದೇನೆ ಎಂದು ಗೊತ್ತಾದರೆ ಖುಷಿಯಾಗುವುದಿಲ್ಲ.

ನಾನು ಅದ್ಭುತ ಕವಿತೆಯೊಂದಕ್ಕೆ ಕಾರಣವಾಗಬೇಕಿತ್ತು, ಒಂದು ನವಿರಾದ ಅಥವಾ ಬೆಚ್ಚಿ ಬೀಳಿಸುವ ಕಥೆ ಬರೆಯಬೇಕಿತ್ತು. ೧೯೯೬ ರಲ್ಲೇ ಆರಂಭ ಮಾಡಿದ ಕಾದಂಬರಿಯನ್ನು ಅಥವಾ ಈ ಹತ್ತು ವರ್ಷಗಳ ಹಿಂದೆ ಆರಂಭಿಸಿದ ‘ನಿಹಾರಿಕಾ’ ಕಾದಂಬರಿಯನ್ನು ಬರೆದು ಮುಗಿಸಿ ಒಂದಷ್ಟು ಓದುಗರ ಕೈಗಾದರೂ ನೀಡಿ ಓದಿಸಬೇಕಿತ್ತು. ಅವರು ಓದಿಯಾದ ನಂತರ ಅವರಿಂದ ತಪ್ಪಿಸಿಕೊಂಡು ತಿರುಗಾಡಬೇಕಿತ್ತು. ಆದರೆ ಬಹುತೇಕ ಕಾಲ ಇಂತಹುದೇನನ್ನೂ ಬರೆಯಲು ಆಗುವುದಿಲ್ಲ.

ಹಾಗೆ ಬರೆಯದೇ ಇದ್ದಾಗ, ಓದುಗರ ಕೈಯ್ಯಿಂದ ತಪ್ಪಿಸಿಕೊಳ್ಳಲು ಒಂದು ಅವಕಾಶ ಸಿಗದೆ ಇದ್ದಾಗ ಆಗುವ ನೋವು ವಿಚಿತ್ರವಾದುದು. ಯಾರಾದರೂ ಸಿಕ್ಕಾಗ ಒಂದಷ್ಟು ಸಂಕೋಚವಾಗದಿದ್ದರೆ ಬೇಸರವಾಗುತ್ತದೆ. ಅದು ಅವರ ನಿರೀಕ್ಷೆಯನ್ನು ಭರಿಸಲಾಗದ್ದಕ್ಕೆ ಅಥವಾ ಅವರು ನಿರೀಕ್ಷೆಗಳನ್ನು ಮೀರಿದ್ದಕ್ಕೆ ಆಗುವ ಸಂಕೋಚ. ಇವೆಲ್ಲಾ ನನಗೆ ಖುಷಿ ಕೊಡುವ ಸಂಗತಿ. ಆ ಖುಷಿಯಿಂದ ಹಲವು ವರ್ಷಗಳ ಕಾಲವೇ ವಂಚಿತನಾಗಿದ್ದೇನೆ.

ಈಗೇನು ನಿಮ್ಮ ಕೈಯ್ಯಲ್ಲಿ ಪುಟ್ಟಪುಟ್ಟ ಪ್ರಬಂಧಗಳಿವೆಯೋ ಅವೆಲ್ಲಾ ನನಗೆ ಖುಷಿ ಕೊಟ್ಟವು. ಅಲ್ಲಿ ನಾನು ಮಾತ್ರ ಇದ್ದೆ. ಇವುಗಳು ನನ್ನ ಲಘು ದಾಟಿಯ ಆಲೋಚನೆಗಳ ಮಾದರಿ. ಒಬ್ಬ ಪತ್ರಕರ್ತನಾಗಿ ಜೊತೆಗೆ ಬರಹಗಾರನೂ ಆದವವನಿಗೆ ತನ್ನ ಖುಷಿಗೆ ಅಂತ ಒಂದು ಸಣ್ಣ ಜಾಗ ಇರಬೇಕಾಗುತ್ತದೆ. ಆ ಸಣ್ಣ ಜಾಗದಲ್ಲಿ ಒಂದಷ್ಟು ಒಬ್ಬನೇ ಇದ್ದು ಯಾರ ಬಗ್ಗೆಯಾದರೂ, ಯಾವ ವಿಚಾರದ ಬಗ್ಗೆಯಾದರೂ ಸುಮ್ಮನೆ ಯೋಚಿಸಿ ಎದ್ದು ಬರಬೇಕು. ಹಾಗೆ ಆ ಸಣ್ಣ ಕೋಣೆಯಿಂದ ಎದ್ದು ಬರುವಾಗ ಇಂತಹಾ ಒಂದು ಸಣ್ಣಸಣ್ಣ ಬರಹಗಳನ್ನು ಹಿಡಿದುಕೊಂಡು ಬರಬೇಕು.

ಹಾಗೆ ಹಿಡಿದುಕೊಂಡು ಬಂದ ಬರಹಗಳನ್ನು ಪ್ರಕಟಿಸುತ್ತೇನೆ. ಅದರಿಂದ ಏನಾಗುತ್ತದೆಯೋ ಎಂಬ ಸಣ್ಣ ಆಲೋಚನೆಯನ್ನೂ ಸಹಾ ಮಾಡುವುದಿಲ್ಲ. ಈ ರೀತಿಯ ಬರಹಗಳಿಂದ ನನಗೆ ಯಾರಿಂದ ಯಾವ ನಿರೀಕ್ಷೆಗಳೂ ಇಲ್ಲ. ಇದೊಂದು ಸುಮ್ಮನೆ ಒಂದು ಓದು. ಸುಮ್ಮನೆ ಓದುವುದು ಸುಮ್ಮನೆ ಬರೆಯುವುದು ಆಗಾಗ ಮಾಡುವುದು ಒಳ್ಳೆಯ ವಿಷಯ. ಬರೆದು ನಾನೇನೋ ಸುಮ್ಮನಾಗಿ ಬಿಡುತ್ತೇನೆ. ಓದಿದದವರು ಹಾಗೆ ಮಾಡಿದರೆ ಅವರಿಗೂ ಕೂಡ ಅದು ಒಳ್ಳೆಯ ವಿಷಯವೇ ಆಗುತ್ತದೆ.

ವೇಗದ ಜಗತ್ತಿನಲ್ಲಿ ನಾನೆಲ್ಲೋ ನಿಂತು ಬಿಟ್ಟಿದ್ದೇನೆ. ನಾನು ಈ ಕಾಲಕ್ಕೆ ಹೊಂದಿಕೊಳ್ಳುತ್ತಿಲ್ಲ ಎಂಬುದು ಈಗ ಬಹಳ ಬೇಗ ಆವರಿಸಿಕೊಂಡು ಬಿಡುತ್ತದೆ. ಚಿಕ್ಕ ವಯಸ್ಸಿನಲ್ಲೇ ಬಿಳಿಕೂದಲು ಬಂದಂತೆ. ಮೂವತ್ತು ವರ್ಷಕ್ಕೆಲ್ಲಾ ‘ನಮ್ಮ ಕಾಲದ ಖುಷಿಯೇ ಬೇರೆ ಬಿಡಿ’ ಎಂದು ಮಾತನಾಡುವುದನ್ನು ನೋಡಿದ್ದೇನೆ. ಆ ದಾಟಿಯಲ್ಲೇ ನಾನೂ ಸಹ ಮಾತಾಡಿದ್ದೇನೆ. ಯಾಕೆಂದರೆ ನನಗಿಂತ ಕೇವಲ ಐದಾರು ವರ್ಷ ಚಿಕ್ಕವರ ಆಲೋಚನೆಗಳು ನನ್ನ ಆಲೋಚನೆಗಳಿಗಿಂತ ಬಹಳ ವಿಭಿನ್ನವಾಗಿರುವುದನ್ನು ನೋಡಿದ್ದೇನೆ. ನೀವೂ ನೋಡಿರುತ್ತೀರಿ. ಆ ಸಣ್ಣ ಅವಧಿಯ ದೊಡ್ಡ ಭಿನ್ನತೆಗಳು ಗಾಬರಿ ಹುಟ್ಟಿಸುತ್ತವೆ. ಆ ಗಾಬರಿಗಳನ್ನು ದಾಟಲೇ ಬೇಕು. ದಾಟಿ ನನಗಿಂತ ಚಿಕ್ಕವರೊಂದಿಗೆ ಮಾತನಾಡಬೇಕು. ಹಾಗೆಯೇ ನನಗಿಂತ ದೊಡ್ಡವರ ಮುಂದೆ ನನಗಿರುವ ಭಿನ್ನತೆಯನ್ನು ಇಟ್ಟು ‘ನಾನು ಬಹಳ ದೂರ ಹೋಗಿಲ್ಲ ಅಲ್ಲವಾ..?’ ಅಂತ ಕೇಳಬೇಕು.

ಒಟ್ಟಾರೆ ಅಂತರಗಳಿಗೆ ಕೊಂಡಿ ಹೊಂದಿಸಬೇಕು. ಅಂತಹಾ ಒಂದು ಸಾಧ್ಯತೆಯನ್ನು ಯಾವಾಗಲೂ ಇಟ್ಟುಕೊಳ್ಳಬೇಕು. ಅದು ಹೇಗೆ ಎಂಬುದು ಪ್ರಶ್ನೆಯಾದರೆ ಈ ಪುಟ್ಟ ಪ್ರಬಂಧಗಳನ್ನು ಓದಿ. ಓದಿ ಸುಮ್ಮನಾಗಿಬಿಡಿ. ಹಾಗೆ ಸುಮ್ಮನಿರುವ ಕಷ್ಟ ಎಂತದು ಅಂತ ಅನುಭವಿಸಿ. ಆಗ ಸಿಗುವ ಒಂದು ಖುಷಿಯಿದೆ. ಆ ಖುಷಿಯಲ್ಲಿ ನಾನು ಪಾಲು ಕೇಳುವುದಿಲ್ಲ.

‍ಲೇಖಕರು Admin

September 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: