ಕನಸಿನಯಾನದ ಕಾಡುವ ಕ್ಷಣಗಳಿಗೆ ನನಸಾಗುವ ಯೋಗ ಕೂಡಿಬಂದಿತು. ಏಕತಾನತೆಯ ದಿನಗಳಿಗೆ ಬಿಡುಗಡೆಯ ಭಾಗ್ಯ. ಬಾಲ್ಯದ ಅವಿಸ್ಮರಣೀಯ ಸಂತಸದ ದಿನಗಳು ಅವು.
ನಾಳೆ ರಜೆಯ ಮಜಾ ಸವಿಯಲು ತಾತನ ಊರಿಗೆ ಪಯಣ, ಭರದಿ ಸಿದ್ಧತೆ ನಡೆಯುತ್ತಿದೆ ಅಪ್ಪ ನಾವೆಲ್ಲಾ ಅಲ್ಲಿ ಕಳೆಯುವ ದಿನಗಳ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತ ತಾಕೀತುಹಾಕುತ್ತಿದ್ದರು ನಿಯಮ ಉಲ್ಲಂಘನೆಯಾಗದಂತೆ .
ಸುಮಾರು ಒಂದೂವರೆ ತಿಂಗಳು ಅಲ್ಲೇ ವಾಸ್ತವ್ಯ. ರಾತ್ರಿ ಇಡೀ ಕನಸಿನದೇ ಸಾಮ್ರಾಜ್ಯ. ಅದಾಗಲೇ ತಾತನ ಮನೆಯ ಮುಂದಿನ ಕಟ್ಟೆ ಬಾವಿ ಕಮಾನುಗಳು ಸ್ವಾಗತಿಸುತ್ತಿದ್ದವು .
ನಾಗಸಮುದ್ರ ನನ್ನಮ್ಮನ ತವರುಮನ. ಇದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ಒಂದು ಗ್ರಾಮ. ಬಳ್ಳಾರಿಯಿಂದ ಸುಮಾರು ೪೦ ಕಿಲೋಮೀಟರು ದೂರ ವಿರಬಹುದು .
ಅಮ್ಮ ನಾನು, ನನ್ನತಂಗಿ, ತಮ್ಮಂದಿರು ಇಬ್ಬರು ಐದು ಜನ ಬೆಳಿಗ್ಗೆ ಏಳು ಗಂಟೆಗೆ ಬಸ್ಸಿಗೆ ಹೊರೆಟೆವು. ಕಿಟಕಿಯ ಬಳಿಯಿರುವ ಸೀಟಿಗಾಗಿ ನನಗೆ ನನ್ನ ತಂಗಿ ಅನುಗೆ ಮನೆಯಲ್ಲೇ ಒಪ್ಪಂದವಾಗಿರುತ್ತಿತ್ತು. ನನ್ನ ಉಪಾಯದಂತೆ ಮೊದಲು ಒಂದು ಗಂಟೆ ಅವಳು ಕೂರುತ್ತಿದ್ದಳು. ತಮ್ಮೇನಹಳ್ಳಿಬಂದ ತಕ್ಷಣ ನನಗೆ ಜಾಗ ಬಿಟ್ಟು ಕೊಡಬೇಕು.
ನನ್ನ ಜಾಗ ಸಿಕ್ಕ ಕ್ಷಣ ಸ್ವರ್ಗಕ್ಕೆ ಮೂರೇಗೇಣು. ಅಬ್ಬಾ ಎಷ್ಟೊಂದು ಸುಂದರ ಪ್ರಕೃತಿ ಕಣ್ಣಿಗೆ ಹಬ್ಬ. ದೂರದಲಿ ಬೆಟ್ಟಗಳ ಸಾಲು ..ಬೆಟ್ಟಗಳೇ ಹಾಗೆ ವಿಸ್ಮಯದ ಗಣಿಗಳು. ಕಣ್ಣುಹೊರಳಿಸಿದೆಯೆಲ್ಲ ಬೃಹದಾಕಾರದ ಬಂಡೆಗಳು, ಅಲ್ಲಲ್ಲಿ ಚಿಕ್ಕ ಚಿಕ್ಕ ಗುಂಡಿನಾಕಾರದ ಕಲ್ಲುಗಳು ಪಗಡೆಯ ದಾಳ ದಂತೆ ಉರುಳಿ ಹೋಗಿರುತ್ತಿದ್ದವು .
ಕೆಲವೆಡೆ ಒಂದರ ಮೇಲೆ ಒಂದರಂತೆಹೊಂದಿಸಿ ಇಟ್ಟಂತೆ ಗೋಚರಿಸುತ್ತಿದ್ದವು. ತಣ್ಣನೆಯ ಗಾಳಿ ಬೀಸಿದಂತೆಲ್ಲ ಮುಂದೆಲೆಗಳು ಹಣೆಯಮೇಲೆ ಸುಳಿದಾಡುತ್ತಿದ್ದವು ಇಷ್ಟೊಂದು ಕಲ್ಲುಗಳನ್ನುನಭದಿ ಸುರಿದಿರಬಹುದೇ ? ಇಲ್ಲ ದೈತ್ಯರು ತಂದು ಹಾಕಿರಬಹುದೇ ? ಹೀಗೆ ನೂರಾರು ಪ್ರಶ್ನೆಗಳು ಮೂಡಿದಂತೆಲ್ಲ ಪುಟ್ಟ ಬೆರಳುಗಳಿಂದ ಕೂದಲನ್ನು ಹಿಂದೆ ತಳ್ಳುತ್ತ ಉತ್ತರದ ಹುಡುಕಾಟ ನಡೆಸಿತ್ತು ನನ್ನ ಮನಸ್ಸು .
ಹುಡುಕಾಟದಲ್ಲಿ ಹಲವು ಬಗೆಯ ಕಾಲ್ಪನಿಕ ಊಹೆಗಳು ಸುಳಿದಾಡತೊಡಗುತ್ತವೆ. ನಾನೋ ಭಾವಯಾನದ ಪಯಣದಲಿ ತೇಲುತ್ತಿದ್ದರೆ ಪಕ್ಕದಲ್ಲಿ ಅನು ನಿಮಿಷಕ್ಕೊಂದು ಸಲ ಅಕ್ಕ ಅಕ್ಕ ಎಂದು ನನ್ನ ಮೌನಕ್ಕೆ ಬ್ರೇಕ್ ಹಾಕುತ್ತಿದ್ದಳು. ಉತ್ತರಿಸದಿದ್ದರೆ ಜೋರಾಗಿ ಜಿಗುಟಿ ಮಾತಿಗೆ ಎಳೆಯುತ್ತಿದ್ದಳು.
ರಾಂಪುರ ದಾಟಿದಮೇಲೆ ಆರು ಮೈಲಿ ನಾಗಸಮುದ್ರ ಸಮೀಪಿಸಿದಂತೆಲ್ಲ ಏನೋ ಸಂತಸ. ಸುತ್ತಲೂ ವಿಪರೀತ ಕೊರಕಲುಗಳು ಕಂಡಿತೆಂದರೆ ಊರು ಬಂತೆಂದೇ ಅರ್ಥ. ಹಗರಿಯ ನೀರುಹರಿದೂ ಇಳಿದೂ ಈ ರೀತಿಯ ಕೊರಕಲು ಉಂಟಾಗಿರುತ್ತಿತ್ತು. ಬೇಸಿಗೆ ಕುರುಚುಲು ಗಿಡಗಳು ಬೆಳೆದು ನಿಂತಿರುತ್ತಿದ್ದವು .
ದೂರದಲ್ಲಿ ಬಸ್ಸು ನಿಲ್ದಾಣದಲ್ಲಿ ಹುಣಸೇಮರ. ಸುತ್ತಲೂ ಒಂದು ಕಟ್ಟೆ. ಬದಿಯಲಿ ತಾತ ಕಳಿಸಿದ ಎತ್ತಿನ ಗಾಡಿ ನಿಂತಿರುತ್ತಿತ್ತು. ತಣ್ಣನೆಯ ಗಾಳಿಯಲಿ ಎತ್ತುಗಳು ಹುಲ್ಲು ಮೇಯುತ್ತಾ ನಮ್ಮನ್ನು ಸ್ವಾಗತಿಸಲು ತಲೆ ಅಲ್ಲಾಡಿಸುತ್ತಿದ್ದವು.
ಬಸ್ಸಿನಿಂದ ಒಂದೇ ಜಿಗಿತಕ್ಕೆ ಹಾರಿ ಗಾಡಿಯಲ್ಲಿ ಕುಳಿತುಕೊಳ್ಳುವ ಮನಸ್ಸಾಗಿರುತ್ತಿತ್ತು. ನಾವೆಲ್ಲಾ ಇಳಿದ ತಕ್ಷಣ.ಮಾರ ಎಲ್ಲ ಸಾಮಾನುಗಳನ್ನು ಗಾಡಿಯಲ್ಲಿ ಇಟ್ಟು ಮರಕ್ಕೆ ಕಟ್ಟಿದ ಎತ್ತುಗಳನ್ನು ಬಿಚ್ಚಿ ನೊಗಕ್ಕೆ ಕಟ್ಟಿದ. ಅಲ್ಲಿಂದ ಒಂದು ಕಿಲೋಮೀಟರ್ ಕ್ರಮಿಸಿದ ನಂತರ ತಾತನ ಮನೆ.
ಹಾದಿಯ ಸೊಬಗನು ಸವಿಯಲು ನನ್ನೊಡನೆ ಬರುವಿರಾ?
ಬಾಲ್ಯದ ದಿನಗಳಿಗೆ ಮರಳಿಸಿದ ಲೇಖನ