ಸುಮಾ ಆನಂದರಾವ್‌ ಸರಣಿ 5 – ರುದ್ರ ರಮಣೀಯವಲ್ಲವೇ ಧರೆಯ ಸೌಂದರ್ಯ?

ಸುಮಾ ಆನಂದರಾವ್‌

5

ಬವೇರಿಯ  ಪ್ರದೇಶವು ಜೆರ್ಮನಿಗರಿಗೆ ಹೆಮ್ಮೆ ಪಡುವ ತಾಣವಾಗಿದೆ. ಮ್ಯುನಿಕ್ ನಿಂದ ಒಂದು ಗಂಟೆ, ಸ್ಟುಟ್ಗಾರ್ಟ್ ನಿಂದ ಮೂರು ಗಂಟೆ ಪಯಣಿಸಿದರೆ Garmisch ಸಿಗುತ್ತದೆ. ಪ್ರಯಾಣದ ಮೊದಲ ಹೆಜ್ಜೆಯಿಂದಲೂ ಎಂದಿನಂತೆ ಹಸಿರು ಕಂಡರೂ ಬವೇರಿಯಾದ ಹಸಿರೇ ಬೇರೆ. ಸ್ವಚ್ಛವಾದ ಶುಭ್ರವಾದ ಹಸಿರು, ತಿಳಿ ಹಸಿರು. ಬೇರೆಡೆ ಕಾಣಸಿಗುವ ಹಸುರಿನ ಬಗೆಗಳು ಇಲ್ಲಿ ಸಿಗುವುದಿಲ್ಲ. ನಮ್ಮ ಕಣ್ಣನ್ನು ನಾವೇ ನಂಬದಂತಾಗುತ್ತೇವೆ.

ದೂರದಲ್ಲೆಲ್ಲೋ ಬೆಟ್ಟಗಳು, ಕ್ಷಿತಿಜದ ಅಂಚಿನವರೆಗೂ ದೇವನಿರ್ಮಿತ ಹಸಿರ ಹುಲ್ಲು ಹಾಸುಗಳು. ಮಧ್ಯೆ ಮಧ್ಯೆ ಗೆರೆ ಗೀಚಿದಂತೆ ಕಾಣುವ ರಸ್ತೆಗಳು, ಗಂಟೆಕಟ್ಟಿಕೊಂಡು ಮೈಭಾರವನ್ನು ತಾಳದೆ ಗಂಭೀರವಾದ ಹೆಜ್ಜೆಇಡುತ್ತಿರುವ ಹಸುಗಳು, ರಸ್ತೆ ಪಕ್ಕದಲ್ಲೇ ಮೃಷ್ಟಾನ್ನ ಭೋಜನಗಯ್ಯುತ್ತಿದ್ದರು ಬೇಲಿ ಮಾತ್ರಎಲ್ಲೂ ಇಲ್ಲ. ಅಲ್ಲಲ್ಲಿ ‘ಹಸುಗಳಿವೆ’ ಎಂದು ಎಚ್ಚರಿಕೆ ಕೊಡುವ ಫಲಕಗಳು.

ಅನತಿ ದೂರದಿ ಬೃಹದಾಕಾರದ ಸ್ವಚ್ಛ ಕೊಟ್ಟಿಗೆ. ಎಳೆಬಿಸಿಲು, ತಂಪೆರೆವ ತಂಗಾಳಿ, ತಂಗಾಳಿಯ ಹಾಡಿಗೆ ಮೆಲ್ಲನೆ ತಲೆ ಬಾಗುತ  ನಲಿವ ಹುಲ್ಲು ಹಾಸುಗಳು  ಏನಿದು ಸ್ವರ್ಗವೇ? ಎಂದೆನಿಸಿತು. ಪಕ್ಕದಲ್ಲೇ ಇರುವ ಬೋರ್ಡ್ ಮೇಲೆ ‘ರೋಮಾಂಟಿಕ್ ರಸ್ತೆ’! ಅಬ್ಬಾ! ನಿಜಕ್ಕೂ ಅದ್ಭುತ ! ಪ್ರತಿಯೊಬ್ಬರು ಮಾತು ಮರೆತು ಮಂತ್ರಮುಗ್ದರಾದಂತೆ ಸಾಗುತಿರೆ ಮನವು ಮಾತ್ರ ಕುವೆಂಪುರವ ಭಾವಗೀತೆ ನನ್ನ ಪ್ರಿಯವಾದ  ಹಾಡನ್ನು ಗುನುಗುತ್ತಿತ್ತು. 

ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ 
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ 
ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು 
ಕಲೆಯುತಲೆಯಲೆಯಾಗಿ ತೇಲಿಬರುತಿರಲಿ 

Garmisch ಬಂದಿದ್ದೇ ತಿಳಿಯಲಿಲ್ಲ. ಆಸ್ಟ್ರಿಯಾ ಗಡಿಗೆ ಹೊಂದಿಕೊಂಡಂತೆ Garmisch  ಜೆರ್ಮನಿಯ ಆಲ್ಫ್ಸ್ ಪರ್ವತಗಳ ಬುಡದಲ್ಲಿದೆ. ಈ ಪರ್ವತಗಳು ಏಕಶಿಲಾ ಬೆಟ್ಟಗಳಂತೆ ತೋರುತ್ತವೆ. ಮೋಡಗಳು ಪರ್ವತಗಳನ್ನು ಸುತ್ತುವರೆದಿರುತ್ತವೆ. ಮೋಡಗಳಲ್ಲಿ ತೂರಿ ಆಗಸದೆಡೆ ತಲೆಯೆತ್ತಿ ನಿಂತಂತೆ ಕಾಣುತ್ತಿದೆ ಬೆಟ್ಟದ ಮೊನಚಾದ ತುದಿ.

ಪುಟ್ಟದಾದ ಊರು, ಊರ ತುಂಬಾ ಬಣ್ಣ ಬಣ್ಣದ ಹೂಗಳಿಂದ ಅಲಂಕೃತಗೊಂಡ ರೆಸ್ಟೋರೆಂಟ್ಗಳು, ಅಂಗಡಿಗಳು ಶತಮಾನಗಳಷ್ಟು ಹಳೆಯವು. ಮುಂಭಾಗದ ಗೋಡೆಗಳು ವಿಧವಿಧವಾದ ತೈಲ ಚಿತ್ರಗಳಿಂದ ಕಂಗೊಳಿಸುತ್ತಿವೆ. ಅಲ್ಲಲ್ಲಿ ಕಾರಂಜಿಗಳು, ಹಲವು ಬಣ್ಣದ ಹೂಗಳಿಂದ ತುಂಬಿದ ಹೂವಿನ ಪೊದೆಗಳು, ಜೆರ್ಮನಿಯ ಸಾಂಪ್ರದಾಯಿಕ ಉಡುಗೆ ತೊಟ್ಟ ಹೋಟೆಲಿನ ಸಿಬ್ಬಂದಿ ವರ್ಗ, ಕೆಲವೆಡೆ ಮಾತ್ರ ಈ ಉಡುಗೆ ಕಾಣಲು ಸಾಧ್ಯ.

Partnach Gorge:              
Garmisch ನಲ್ಲಿ ಒಲಿಂಪಿಕ್ನ ಸ್ಕೀಯಿಂಗ್ ನಡೆಯುವ ಸ್ಥಳವಿದೆ. ಅಲ್ಲಿಂದ ಮುಂದೆ ಕುದುರೆ ಗಾಡಿಯ ಪಯಣ. ಅಲಂಕೃತಗೊಂಡ ಕಪ್ಪುಕುದುರೆಗಳು, ಗಾಡಿಯ ಎತ್ತರದರತ್ನಗಂಬಳಿ ಹೊದ್ದ  ಆಸನಗಳು, ನುಣುಪಾದ ಈ ಕುದುರೆ ಸಾರೋಟ್ ನೋಡಿದರೆ ರಾಜಮಹಾರಾಜರ ಕಾಲ ನೆನಪಾಗುತ್ತದೆ.

https://1.bp.blogspot.com/-2gcqoBCqnpk/XUbA6u1M9dI/AAAAAAAAOcg/iJ8jXbx-UC4xEFJwgtBEpGP8kF9IgPCEgCEwYBhgL/s640/1.jpg

ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ ಅರ್ಥಾತ್ ಮೆರವಣಿಗೆ ಹೊರಟಂತಿರುತ್ತದೆ. ಎಡಗಡೆ ಕಾಲುವೆಯಂತೆ ಹರಿಯುವ ನೀರು ಸ್ಪಟಿಕದಂತೆ ಶುಭ್ರವಾಗಿದೆ. ನೀಲಿಯ ಬಣ್ಣ, ತಳದಲ್ಲಿ ನುಣುಪಾದ ಚಿಕ್ಕ ಚಿಕ್ಕ ಕಲ್ಲುಗಳನ್ನು ಸುರಿದಿದ್ದರೇನೋ ಎಂಬಂತೆ ಕಾಣುವ ಸ್ವಚ್ಛವಾದ ನೀರು ಹೀಗೆ ಅರ್ಧಗಂಟೆ ಪಯಣಿಸಿದ ನಂತರ ಸಿಗುವುದೇ Partnach Gorge.

ಇದೊಂದು ನೈಸರ್ಗಿಕ ಅದ್ಭುತವನ್ನೊಳಗೊಂಡ ರುದ್ರ ರಮಣೀಯ ಸ್ಥಳ. ಗುಹೆಯ ಮುಂಭಾಗದಿ ಟಿಕೆಟ್ ಪಡೆದು ಮುನ್ನಡೆದರೆ ಒಂದು ನಿಮಿಷ ಕತ್ತಲಹಾದಿ, ಅಲ್ಲಲ್ಲಿ ಬೆಳಕು ತೂರಿ ಬರುತ್ತಿರುತ್ತದೆ. ಕೆಲ ನಿಮಿಷಗಳಲ್ಲಿ ದಿಗ್ಬ್ರಮೆಗೊಳ್ಳುತ್ತೇವೆ. ಎರೆಡು ಬೃಹದಾಕಾರದ ಬೆಟ್ಟಗಳು. ಶತ ಶತಮಾನಗಳಿಂದ ಹವಾಮಾನ ವೈಪರೀತ್ಯದಿಂದ ಹಲವು ಆಕರಗಳನ್ನು ತಾಳಿ ನಿಂತಿವೆ.

ಮಧ್ಯದ ಆಳದ ಕಮರಿಯಲ್ಲಿ ಭೋರ್ಗರೆವ ನೀರು. ಕಮರಿಯಗುಂಟ ಸಾಗಲು ಬೆಟ್ಟಕ್ಕೆ ಕಬ್ಬಿಣದ ಕಂಬಿಗಳಿಂದ ನಿರ್ಮಿತವಾದ, ಸುಭದ್ರವಾದ ಸೇತುವೆ ಇದೆ. ಕಂಬಿಗಳನ್ನು ಹಿಡಿದು ಸಾಗಿದರೆ ಮಧ್ಯೆ ಮಧ್ಯೆ ತೋರಣದಂತೆ ಗುಹೆಯು ಬಾಗಿ ವಿಚಿತ್ರ ಆಕರಗಳನ್ನು ಸೃಷ್ಟಿಸಿದೆ.  

ಮೇಲಿನಿಂದ ನೀರ ಹನಿಯು ತೊಟ್ಟಿಕ್ಕುತ್ತಿರುತ್ತದೆ. ಹಾದಿಯೆಲ್ಲ ಒದ್ದೆಯಾಗಿರುತ್ತದೆ. ಬಲಗಡೆ ಪ್ರಪಾತದಲ್ಲಿ ಹರಿಯುವ ನೀರು. ನೀಲಿ ಬಣ್ಣದಿಂದ ಕೂಡಿರುತ್ತದೆ. 225 ಅಡಿಯೆತ್ತರದ ಈ ಸೇತುವೆ, 2305 ಅಡಿಗಳಷ್ಟು ಉದ್ದವಾಗಿದೆ. 1912 ರಲ್ಲಿ ‘ನೈಸರ್ಗಿಕ ಸ್ಮಾರಕ’ ಎಂದು ಕರೆಯಲ್ಪಟ್ಟಿದೆ. ಉಸಿರ ಬಿಗಿಹಿಡಿದು ಸಾಗುತ್ತಿದ್ದರೆ ಕಣಿವೆಯಲ್ಲಿ ಹರಿವ ನದಿಮುಂದೆ ಜಲಪಾತವಾಗಿ ಮಾರ್ಪಡುತ್ತದೆ. ಬೆಟ್ಟದ ಸುರಂಗದಲ್ಲಿ ನಡೆಯುತ್ತಿದ್ದರೆ ಪಕ್ಕದಲ್ಲಿ ಹಿಮ್ಮೇಳವಾಗಿ ನೀರಿನ ‘ಭರೋ’ ಎಂಬ ಶಬ್ದ ದಿಗಿಲು ಹುಟ್ಟಿಸುತ್ತದೆ.

https://1.bp.blogspot.com/-Jzxzw8vwPdg/XUbA1zNnxqI/AAAAAAAAOcY/9B1LbVEEjv4a036It64yEsbAWyO8yYIwgCEwYBhgL/s400/6.jpg

ಮುಂದೆ ಗುಹೆಯು ಮುಗಿದು ಬಯಲು ತೆರೆದಾಕ್ಷಣ ನದಿ ಹರಿಯುವ ಜಾಗ ತಲುಪಿರುತ್ತೇವೆ. ಎರೆಡು ಹೆಜ್ಜೆ ಇಳಿದು ಕೊರೆವ ಹಿಮದ ನೀರು ಮುಟ್ಟಿ ಕಾಲು ಇಳಿಬಿಟ್ಟುಕೊಂಡು ಕುಳಿತರೆ  ಸ್ವರ್ಗಕ್ಕೆ ಮೂರೇಗೇಣು. ತಿಳಿಯಾದ  ತಳ ಕಾಣುವ ನೀರು. ಇಷ್ಟು ಸೌಮ್ಯವಾಗಿ ಹರಿವ ನೀರೇ. ನಾವು ಇಷ್ಟು ಹೊತ್ತು ನೋಡುತ್ತಾ ಬಂದಿರುವುದು! ಎಂದು ಆಶ್ಚರ್ಯವಾಗುತ್ತದೆ. ರಚ್ಚೆ ಹಿಡಿದು ಅಳುವ ಮಗು ಅಳು ನಿಲ್ಲಿಸಿ ನಕ್ಕಂತೆ ಭಾಸವಾಗುತ್ತದೆ.

ಇದೆ ಹಾದಿಯಲ್ಲಿ ವಾಪಸ್ಸು ಹೊರಟರೆ ಈಗ ಕಾಣುವ ದೃಶ್ಯವೇ ಬೇರೆ ಏಕೆಂದರೆ ಆಗ ಹತ್ತುತ್ತ ಬಂದೆವು. ಈಗ ಇಳಿಯುತ್ತ ಸಾಗಿರುತ್ತೇವೆ. ಇದೊಂದು ವಿಶಿಷ್ಟ ಅನುಭವ. ಕಬ್ಬಿಣದ ಕಂಬಿಯೊಂದು ಬಿಟ್ಟರೆ ಮಿಕ್ಕೆಲ್ಲ ಪ್ರಕೃತಿ ನಿರ್ಮಿತವಾದದ್ದು. ಮಂತ್ರ ಮುಗ್ಧರನ್ನಾಗಿಸುವ ಶಕ್ತಿ ಪ್ರಕೃತಿಗಲ್ಲದೆ ಮತ್ಯಾರಿಗಿರಲು ಸಾಧ್ಯ?

ಚಳಿಗಾಲದಲ್ಲಿ ನದಿಯ ನೀರುಹಾಗೂ  ಬೆಟ್ಟದೊಳಗಿಂದ ತೊಟ್ಟಿಕ್ಕುವ ನೀರು ಎಲ್ಲವೂ ಮಂಜು ಗಡ್ಡೆಯಾಗಿ ಹಲವು ಆಕರಗಳನ್ನು ತಳೆದಿರುತ್ತದೆ. ಆಗ ಪೂರ್ತಿ ಪಯಣಕ್ಕೆ ಹಾದಿ ಇರುವುದಿಲ್ಲ.

| ಮುಕ್ತಾಯ |

‍ಲೇಖಕರು Admin

September 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: