ಸುನಿತಾ ಮೂರಶಿಳ್ಳಿ ಓದಿದ ‘ಹರಿಯುವ ನದಿಯೂ ಹಂಬಲದ ತಟವೂ’

ಸುನಿತಾ ಮೂರಶಿಳ್ಳಿ

“ಎಲ್ಲರ ಮನೆ ಬೆಳಗಲಾಗದೆ ಸೂರ್ಯನೂ ಸೋಲುತ್ತಾನೆ ಒಂದು ದಿನ” ಎಂಬ ಬೆರಗಿನಿಂದಲೇ ಆರಂಭವಾಗುವುದು ಈ ಕವನಗಳ ಗುಚ್ಛ. ಏನೋ ಕಾಣಬೇಕೆಂಬ ತವಕ ಕಾಣದೇ ವಿಸ್ಮೃತಿಗೆ ತಲುಪುವ ಮಾಟ, ಗೆಲ್ಲುವ ಭರದಲ್ಲಿ ಅಪ್ಪಿಕೊಳ್ಳುವ ಸೋಲು ಎಲ್ಲವೂ ಬದುಕಿನ ನಿತ್ಯ ಬದಲಾಗುವ ಮುಖಪುಟಗಳು. ಈ ಬದುಕೇ ಒಂದು ವಿಸ್ಮಯ. ಈ ಬದುಕಿಗೆ ಬೆಂಬತ್ತಿದ ಎಲ್ಲರೂ ಸೋಲಿನ ರುಚಿಯನು ಉಣಲೇಬೇಕು. ಗೆಲ್ಲುವ ಕುದುರೆಯೂ ಸೋಲಲೇಬೇಕು ಒಂದುದಿನ, ಸೂರ್ಯನೂ ಸೋಲುತ್ತಾನೆ ಒಂದು ದಿನ ಎಂಬುದೇ ಒಂದು ದಿಗಿಲು. ಈಗ ನಾನು ಹೇಳ ಹೊರಟಿರುವುದು ಲಿಂಗರಾಜ ಸೊಟ್ಟಪ್ಪನವರು ರಚಿಸಿದ ಕಣವಿ ಕಾವ್ಯ ಪುರಸ್ಕಾರಕ್ಕೆ ಭಾಜನವಾದ ಹಾಗೂ ಸ್ನೇಹ ಬುಕ್ ಹೌಸ್‌ನವರು ಪ್ರಕಾಶಿಸಿದ “ಹರಿಯುವ ನದಿಯೂ ಹಂಬಲದ ತಟವೂ” ಎಂಬ ಕವನಸಂಕಲನದ ಬಗೆಗೆ:

ಎಲ್ಲರಂತೆ ನಾನೂ ಬರೆದು ನಿರಾಳವಾಗಬೇಕು. ಅನಂತರದ ಖಾಲಿತನವನ್ನು ಭರಿಸುವುದು ಹೇಗೆ? ಹಿಂದೆಯೇ ಚಿಂತೆ. ಹಾಗಾದರೆ ಖಾಲಿಯಾಗುವಿಕೆ ಮತ್ತೊಂದು ತರಹದ ದುಃಖವೆ? ತುಂಬಿಕೊಳ್ಳುವುದು ಸುಖವೆ.. ಅಥವಾ ಅಲ್ಲವೆ?… ಈ ದುಃಖ, ತಲ್ಲಣ, ಅಪಮಾನ, ಅಸಮಾನತೆಗಳನ್ನು ಖಾಲಿಗೊಳಿಸುವ ಬಗೆ ಹೇಗೆ? ಕರುಣೆ, ಪ್ರೀತಿ, ಮಾನವತೆ ಮಮಕಾರಗಳ ಬತ್ತಿದ ಒರತೆ ಪಸೆಯುವದೆಂತು.. ನಿಮ್ಮ ಎದೆ ತಾಕುವ ಒಂದು ಮಾತು. ಪದಗಳ ಹುಡುಕಾಟ ಇನ್ನೂ ಜಾರಿಯಲ್ಲಿದೆ ಎಂದು ಹೇಳುತ್ತಲೇ ಅಲ್ಲಮರ ವಚನಗಳ ಬೆಡಗಿನಂತೆ ಪದವಲ್ಲದ ಪದಗಳ ಬಳಸುತ್ತ ವಿಭಿನ್ನ ಪ್ರತಿಮಾ ಲೋಕವನ್ನೇ ಸೃಷ್ಟಿಸಿಬಿಡುವರು ಕವಿಗಳು.

ಗುಪ್ತಗಾಮಿನಿಯಂತೆ ಎಲ್ಲೋ ಹುಟ್ಟಿ ಎಲ್ಲೋ ಹರಿದು ಮತ್ತೆಲ್ಲೋ ಸೇರುವ ನದಿಯಂತಾದ ಈ ಬದುಕಿಗೆ ಹಂಬಲದ ತಟ ಎಷ್ಟು ಜನರಿಗೆ ದಕ್ಕೀತು? ಈ ಹಂಬಲದಲ್ಲಿಯೇ ಬದುಕು ಸವೆದು ಹೋಗುವುದು. ಕಳೆಯೆಷ್ಟೆ ಇದ್ದರೇನು ಕನಸಿರದ ಬಾಳು ಬಾಳೆ ಎಂದು ಕೆ.ಎಸ್. ನರಸಿಂಹಸ್ವಾಮಿಯವರು ಹೇಳುವಂತೆ ಕನಸುಗಳು ಬೇಕು ಬದುಕಿಗೆ. ಎಷ್ಟೋ ಸಂಕಷ್ಟಗಳ ಮಧ್ಯೆಯೂ ಈ ಜೀವ ಹಾತೊರೆಯುತ್ತದೆ ಬದುಕಿಗಾಗಿ. ಅದಕ್ಕಾಗೇ ಕವಿಮನ ಹೇಳುವುದು

“ಕೊಚ್ಚಿ ಹೋದ ಬದುಕು ಬರ್ಬರತೆಯ ಮಧ್ಯೆ
ಮತ್ತೆ ಹುಟ್ಟಿಕೊಳ್ಳುತ್ತದೆ” ಎಂದು.

ಎಲ್ಲ ಇಲ್ಲವಗಳ ಮಧ್ಯೆ ಇರುವಿಕೆಯನ್ನು ಅರಸಬೇಕಿದೆ ಅದೇ ನಿಜವಾದ ಬದುಕಿನ ನಡೆ ಇದನೇ ಕವಿಯ ಸಾಲು ಬಿತ್ತರಿಸುವದು…

“ಮಳೆ ಮರೆಯಾಗುತ್ತಲೆ
ಸೂರ್ಯನಿಗೆ ಮೈಯೊಡ್ಡುವ ಭುವಿ
ಒಬ್ಬನ ನೆನಪುಗಳು ಇನ್ನೊಬ್ಬನ ಸುಖದಲಿ ಆವಿಯಾಗುತ್ತಿವೆ” ಎಂದು.
ಬದುಕಿಗಾಗಿ ಹೋರಾಟ ಇದ್ದದ್ದೆ, ಅದು ಸೂರ್ಯ ಚಂದ್ರರಷ್ಟೇ ಸತ್ಯ ಹಾಗೂ ಸಹಜ…
“ಹೇಳು
ಯಾವ ಗೂಡಂಗಡಿಯಲಿ ಬೆಚ್ಚಗಿದೆ ಬದುಕು” ಎನ್ನುವ ಕವಿಸಾಲುಗಳೆ ಎಲ್ಲಿ ಸುರಕ್ಷಿತವಾಗಿದೆ ಬದುಕು ಎಂದು ಹೇಳುತ್ತಲೆ ವಾಸ್ತವದತ್ತ ಕೈ ಮಾಡುವುದು.

ಬಡತನಕ್ಕೆ ಕೈಗೂಡದ ಈ ಜಗತ್ತು ಸಿರಿವಂತಿಕೆಗೆ ಅದೆಷ್ಟು ಬೇಗ ಕುರುಬುವದು. ಆ ಕುರುಬುವ ಕಣ್ಣುಗಳಿಗೆ ನನ್ನ ಇರುವಿಕೆ ಕುಕ್ಕಿದರೆ ನಾ ಅವರಿಗಾಗಿ ಮತ್ತೆ ಬೆತ್ತಲಾಗಲಾರೆ ಎಂದು ಅರ್ಥೈಸುವ ಕವನದ ಈ ಸಾಲು ಹೃದಯದ ಆಳದಲ್ಲೆಲ್ಲೋ ಮಾಯದ ಗಾಯ ಮತ್ತೆ ಪರಚಿದಂತಾಗುವದು…

“ನನ್ನವೆರಡು ಬಣ್ಣ
ಅವರ ಕಾಮನಬಿಲ್ಲಿಗೆ ಕೊರತೆಯಾದರೆ
ಆ ದಟ್ಟ ಕೆಟ್ಟ ಬಣ್ಣ ಅವರ ಕಣ್ಣು ಕಲಕಿದರೆ
ನಾ ಮತ್ತೆ ಬೆತ್ತಲಾಗಲಾರೆ”

“ಎತ್ತಲಿಂದ ಬೀಸಿದರೂ ಬದುಕು
ಬಾಗಿಲಿಲ್ಲದ ಸೂರು”

ಹೀಗೆ ಬದುಕಿಗಾಗಿ ಬೆದುಕುವ ತದುಕುವ ಹೋರಾಟದ ವಿವಿಧ ಮಗ್ಗುಲುಗಳು ಇಲ್ಲಿನ ಕವಿತೆಗಳ ಜೀವಾಳವಾಗಿವೆ. ಕವಿಮನ ಕೇಳುವದು…

“ಗಾಳಿ ಬೆಳಕು ಬೆಳದಿಂಗಳು ಎಲ್ಲ ನಿನ್ನದೆ
ಚೂರು ಕರುಣೆಯೂ” ಎಂದು.

“ದೀಪವು ನಿನ್ನದೆ
ಗಾಳಿಯೂ ನಿನ್ನದೆ
ಆರದಿರಲಿ ಬೆಳಕು”

ಎಂಬ ಕೆ.ಎಸ್. ನರಸಿಂಹಸ್ವಾಮಿಯವರ ರಚನೆಯು ಇಲ್ಲಿ ಸ್ಮರಣೆಗೆ ಬರುವದು. ಎಲ್ಲವೂ ನಿನ್ನದೇ ಇರುವಾಗ ಒಂಚೂರು ಕರುಣೆ ಕೂಡಾ ಇರಲಿ ನಿನ್ನದೆ ಎಂದು ಕೇಳುವ ಕವಿಯ ಹೃದಯ ಕಾರುಣ್ಯಕೆ ಆರ್ದ್ರವಾಗುವದು ಮನ.

ಕವನಗಳಲಿ ಬಳಕೆಯಾದ ಪ್ರತಿಮೆ, ರೂಪಕಗಳು ಕಾವ್ಯಕೆ ವಿಭಿನ್ನ ಧ್ವನಿಯನ್ನು ಒದಗಿಸಿವೆ. ಅಂಥ ಕೆಲವು ಸಾಲುಗಳು ಇಲ್ಲಿವೆ…

“ಯಾರೋ ನೆರಳು ನೆಟ್ಟು ಹೋಗಿದ್ದಾರೆ ಮರದ ಹೆಸರಿಗೆ”

“ದುಃಖ ಹಂಚಿಕೊಳ್ಳುವ ವರಸೆಯಲಿ
ಬೆರೆವ ಅವಳು
ಸುಖ ಅರಸುತ್ತಾಳೆ
ಕೂಡುತ್ತಲೆ ಕಳೆದು ಹೋಗುವ ಲೆಕ್ಕಾಚಾರದಲಿ”

“ನನ್ನವರ ಎದೆ ಬಗಿದರೆ
ಬರಿ ಕೆಂಪು
ಉಳಿದ ಬಣ್ಣಗಳಿಗೆ
ಯಾರ ಕನಸು ಕದಿಯಲಿ”

“ಉಂಡುಡುಲು ಅವರಿವರ ಫರ್ಮಾನು
ಪಹರೆ ಕಾಯುತ್ತಿವೆ ತಲವಾರು”

“ತಡರಾತ್ರಿಗೆ ಗೋಡೆಗಳೆಲ್ಲಿ”

“ನಿತ್ಯ ಬರೆಗಳಿಗೆ ಬಣ್ಣಗೆಟ್ಟು ಹೋಗಿದೆ ಮಸಿ ಅರಿವೆ”

“ಬದುಕೊಂದು ಬಣ್ಣದ ಚಿತ್ರ
ಮೊನ್ನೆ ಮೊನ್ನೆ
ಡಾಲರುಗಳಲ್ಲಿ ಮಾರಾಟವಾಯಿತು”

ಹೀಗೆ ಬಡತನ, ನೋವು, ಸಂಕಟ, ದುಃಖದಲಿ ಕಳೆದುಹೋಗುವ ಈ ಬದುಕಿನಲೂ ಆಶಾವಾದಿಯಾಗಿರುವ ಕವಿಗಳು

“ಇರಲಿ ನಮ್ಮ ಗುಲಾಬಿ ಕನಸುಗಳು
ಅದೆಂದಾದರೂ ಬಣ್ಣ ತಳೆದಾವು”

“ನಗುವೆ ಸುಖವೆಂದು ಅರ್ಥ ಹುಡುಕಿ ಹೋಗದಿರಿ
ಪೆದ್ದು ನೀವು
ಹೀಗೆ ಮಾಡಿಯೇ ದಾರಿ ತಪ್ಪಿದ್ದೀರಿ
ತಿರುವಿಗೆಲ್ಲ ಅರ್ಥ ಕೇಳುತ್ತೀರಿ”

ತೋರುವ ದಾರಿ ಇಷ್ಟೆ
ಇರುವ ದಾರಿ ಇದ್ದೇ ಇರುತ್ತೆ
ಬೇಕೆನಿಸಿದರೆ ಒಂದು ರೈಟ್ ಟರ್ನ ತೆಗೆದುಕೊಳ್ಳಿ
ಮನುಷ್ಯರು ಸಿಗಬಹುದು”
ಎಂದು ಬದುಕಿನ ನೆಲೆಯಾದ ಮಾನವತೆಯನ್ನು ಹುಡುಕುವ ಜಾಡು ಹಿಡಿದು ಸಾಗುವರು.

“ಹಗಲನೇ ತಿಂದು ಮುಗಿಸಿದೆ ಕ್ರೌರ್ಯ”
“ಕ್ರೌರ್ಯಕ್ಕೆ ತುಕ್ಕು ಹಿಡಿಯುವುದಿಲ್ಲ”

ಎಂದು ಪ್ರಸ್ತುತ ದಿನಮಾನದ ಅತಿರೇಕದ ನಡೆ ಕವನಗಳಲ್ಲಿ ಪರಿಣಾಮಕಾರಿಯಾಗಿ ಪ್ರತಿಧ್ವನಿಸಿದೆ.

“ಹೊತ್ತು ನಡೆಯಬಹುದಷ್ಟೆ
ಹೊತ್ತು ಯಾರದ್ದೂ ಅಲ್ಲ” ಎನ್ನುತ್ತಲೇ ಭರವಸೆಯ ಬೆಳಕನ್ನು ಸೃಜಿಸುವದು ಕವಿಯ ಮನ… “ಮುಗಿಯುತ್ತಿದ್ದಂತೆ ಇಲ್ಲಿ ಎಲ್ಲ ಶುರುವಾಗುತ್ತವೆ
ಕಾಯಿ ಕಟ್ಟುವ ಕಾಲಕ್ಕೆ ಮತ್ತೆ
ಮೊಟ್ಟೆಯೊಡೆಯುತ್ತದೆ ಕಾಯಿಕೊರಕ” ಎಂದು.

“ಜಾತಿ ಕೇಳಲಿಲ್ಲ ಕುಲ ಬೇಕೆನಿಸಲಿಲ್ಲ
ಬೀಸುಗಾಳಿಗೆ ಪಟವಾಯಿತು ಸೆರಗು” ಎಂದು ಮರುಗುವ ಕವಿಮನ ಹಾರೈಸುವದು…

“ಸರ್ವಧರ್ಮ ಸಂಜಾತ
ಹುಟ್ಟಿ ಬರಲಿ
ಹಾದಿಬದಿಯಲೊಂದು ಧರ್ಮ ತಲೆ ಎತ್ತಲಿ
ಮೇಲೆ ನಿನ್ನ ಸೆರಗು ಪತಾಕೆಯಾಗಿ ಹಾರುವದನು
ನಾ ಕಾಣಬೇಕಿದೆ” ಎಂದು.

ಅನಂತವಾದ ಈ ಸಮಯ ಯಾರಿಗಾಗಿ ಕಾಯುವದು… ಬದುಕು ಹರಿಯುತ್ತಲೇ ಇರುವದು. ಅದಕ್ಕಾಗಿಯೆ

“ಪ್ರೀತಿಸಬೇಕು ಗೆಳೆಯ
ಅವಳು ಕೈಕೊಡಬಹುದಾದರೂ
ನಾಲ್ಕು ಸಾಲಿನ ಪದ್ಯವಾದರೂ ದಕ್ಕುತ್ತದೆ
ಪ್ರೀತಿ ಸುಡುಬೆಂಕಿಯಾದರೂ ಸರಿ
ಅದು ಆ ಹೊತ್ತಿನ ಅನ್ನವನ್ನೇ ಬೇಯಿಸುತ್ತಿರುತ್ತದೆ
ಸುರೆಯೆಂದರೂ ಸರಿ
ಅದು ಆ ಮಟ್ಟಿಗಿನ ಸುಖವನ್ನೇ ಹೆರಲು ಕೂತಿರುತ್ತದೆ”

“ಒಮ್ಮೆ ಬಂದೂಕು ಹತಾರ ಕೆಳಗಿಟ್ಟು ಯೋಚಿಸಿ
ನಿಮ್ಮ ಕೈಗಳಿಗೆ ಹೃದಯದ ಮಾತು ಕಲಿಸುತ್ತೇನೆ
ತುಸು ಕಾಯಬೇಕು, ಗೆಳೆಯ ಪ್ರೀತಿಸದೆ ಇಲ್ಲೇನೂ ಉಳಿಯಲಾರದು”

ಎನ್ನುತ್ತಾ ಈ ಜಗತ್ತಿಗೆ ಪ್ರೀತಿಯ ಭಾಷೆ ಕಲಿಸುವ ತವಕ ಕವಿಯದು.

“ಕಪ್ಪೆಂಬುದು ಬಣ್ಣವೆಂದು ಯಾರು ಹೇಳಿದರು ನಿನಗೆ
ಕಪ್ಪೆಂಬುದು ನಿತ್ಯ ಸತ್ಯ”
ಎಂದು ಕವಿ ಕಪ್ಪಿನ ಬಗ್ಗೆ ಹೇಳುತ್ತಿರುವುದು ಯಾವುದಕ್ಕಾಗಿ ಇದು ಮೊಗದ ಬಣ್ಣವೆ… ಜಗದ ಬಣ್ಣವೆ….

“ನಿಮ್ಮೆದುರಿನ ನಾನು…
ನೀವು ದಾಟಿಸುವ ಬಗ್ಗೆ ಯೋಚಿಸುತ್ತಿದ್ದೀರಿ
ನಾನು ಹುಟ್ಟುವ ಬಗ್ಗೆ ಚಿಂತಿತನಾಗಿದ್ದೇನೆ
ಅರ್ಥವಾಗಿದ್ದರ ಆಗದ್ದರ
ಯೋಚನೆ ಕ್ರಿಯೆಗಳ ಮಧ್ಯೆ
ನೀವು ಮಾತು ನಾನು ಮೌನ”

ಎನ್ನುವ ಈ ಕವನದಲ್ಲಿ ಮೌನವೇ ಮಾತಾಗಿದೆ. ಅರ್ಥವಾಗುವ ಆಗದೇ ಹೋಗುವ ವಿಷಯಗಳ ತಾಕಲಾಟದ ಮಧ್ಯೆ ಮೌನ ಹಾಗೂ ಮಾತುಗಳ ಮೆರವಣಿಗೆ ನಿರಂತರ.

ಇಲ್ಲೊಂದು ಎದೆ ತಾಕುವ ಕವನ…

“ಸಾವಿಗೆ ಐಡೆಂಟಿಟಿ ಇಲ್ಲ”. ಈ ಇಡೀ ಕವನ ರೂಪಾತ್ಮಕವಾಗಿದೆ.

“ಬದಿಗಿಟ್ಟು ನೋಡಿದರೆ ಏನೂ ಇಲ್ಲ
ಒಳಗೊಂಡರೆ…?”

“ನಾನು ಇಲ್ಲಿಯೆ ಹುಟ್ಟಿದ್ದೇನೆ ಈ ನೆಲಕ್ಕೆ ಗೊತ್ತಿದೆ ಇಲ್ಲಿಯೆ ಸಾಯುತ್ತೇನೆ ಸಾವಿಗೆ ಐಡೆಂಟಿಟಿ ಇಲ್ಲ ಯಾವ ಆಂಗಲ್‌ಗೂ ದಕ್ಕಲಿಲ್ಲ ಬಡ್ಡಿಮಗಂದು ಸಾವು ಮತ್ತು ನಾನು ಇಬ್ಬರೂ ಒಂದೆ”

ಎಷ್ಟೊಂದು ಅರ್ಥಪೂರ್ಣ… ಇಲ್ಲಿ ನಾ ಎಂಬುದು ಒಳಗೊಂಡರೆ ಏನೆಲ್ಲ ಸಂಬಂಧಗಳು… ಈ ಮಣ್ಣಿನ ಸಂಬಂಧ, ಋಣದ ಸಂಬಂಧ, ರಕ್ತ ಸಂಬಂಧ, ಭಾವಸಂಬಂಧ, ಸ್ನೇಹ ಸಂಬಂಧ… ಹೀಗೆ ಮುಗಿಯದ ಪಯಣ. ಅದೇ ನಾ ಎಂಬುದ ಹೊರತುಪಡಿಸಿದರೆ ಏನೂ ಇಲ್ಲ, ನಿರಾಳ, ಬಯಲು… ಇರುವಿಕೆ ಮೂರ್ತತೆಯನ್ನೆ ಮೈವೆತ್ತಿದರೆ ಇಲ್ಲದಿರುವಿಕೆ ಅಮೂರ್ತತೆಯೆಡೆಗೆ ಕೊಂಡೊಯ್ಯುವದು. ಈ ಇರುವಿಕೆ ಇಲ್ಲದಿರುವಿಕೆ ಎರಡೂ ಒಂದಾಗುವದು ಸಾವಿನಲ್ಲೆ. ಆದ್ದರಿಂದ ಸಾವು ಮತ್ತು ನಾನು ಇಬ್ಬರೂ ಒಂದೆ. ನಾನು ಇಲ್ಲಿಯೇ ಹುಟ್ಟಿದ್ದೇನೆ ಈ ನೆಲಕ್ಕೆ ಗೊತ್ತಿದೆ ಅಂದರೆ ಈ ನೆಲದ ಋಣವಿರುವ ಎಲ್ಲರಿಗೂ ನಾನು ಪರಿಚಯ ಆದರೆ ಮರುಕ್ಷಣವೆ ಇಲ್ಲವಾಗುವ ನಾನು ನನ್ನಿಂದಲೂ ಅಪರಿಚಿತ. ಇರುವಾಗಲೆ ಎಲ್ಲ ಐಡೆಂಟಿಟಿ ಸಾವಿನಲ್ಲಿ ಎಲ್ಲರೂ ಒಂದೇ. ರಾಜನೂ ರಂಕನೂ ಯಾರಾದರೇನು ಈ ಮಣ್ಣಿಗೆ… ಎಲ್ಲರೂ ಒಂದೇ.

ಈ ಆಂಗಲ್ಲಂತೂ ನನ್ನವೇ ಓರೆಕೋರೆಗಳು ಹೇಗಿದ್ದರೇನು, ಯಾರು ಏನೆಂದರೇನು ಅವು ನನ್ನವೆ, ಇಷ್ಟು ಸಾಕು ಯಾರ ಮಾತು ಉಸಾಬರಿ ನಮಗೇನು… ನಾನು ನಾನೆ.
“ತೀರಿ ಹೋದವನು ಬಾಕಿ ಉಳಿಸಿದ ಆಕೆಯ ಸುಖದ ಲೆಕ್ಕ ಸುಖಕ್ಕೆ ಅಹವಾಲು ಸಲ್ಲಿಸಿವೆ ಸಾಕ್ಷಿಗಳಿಲ್ಲದೆ”

ಹೀಗೆ ಬಾಕಿ ಇರುವ ಸುಖದ ಲೆಕ್ಕ, ಋಣದ ಲೆಕ್ಕ ಭರಿ‌ಸುವ ಪರಿ ಎಂತು… ಇದು ಭರಿಸಲಾಗದ ಋಣ ಹೀಗೆಯೇ ಸುದೀರ್ಘವಾಗಿದೆ, ಅನಂತವಾಗಿದೆ ಈ ಋಣದ ಲೆಕ್ಕ.

ಹೀಗೆ ವೈವಿಧ್ಯಮಯವಾದ ವಸ್ತು, ವಿಷಯಗಳ ವಿಭಿನ್ನ ಕಟ್ಟುವಿಕೆ ಮೂಲಕ, ನವೀನ ಪ್ರತಿಮೆಗಳ ಮೂಲಕ ಓದುಗರ ಮನದಲ್ಲಿ ಉಳಿದು ಕಾಡುವ ಈ ಕವನಗಳು ಲಿಂಗರಾಜವರು ಕಾವ್ಯ ಸೃಷ್ಟಿಗೆ ಭರವಸೆಯ ಕಿರಣವಾಗಿದ್ದನ್ನು ಸಾಬೀತುಪಡಿಸಿವೆ. ಇಂತಹ. ಇನ್ನೂ ಹಲವಾರು ಹೊತ್ತಿಗೆಗಳು ಅವರಿಂದ ಮೂಡಿ ಬರಲೆಂದು ಹೃದಯಪೂರ್ವಕವಾಗಿ ಆಶಿಸುವೆ.

ಇದು ಬರೀ ಟೀಸರ್ ಪೂರ್ಣವಾಗಿ ಈ ಕವನಗಳ ಸವಿ ಸವಿಯಲು ನೀವು ಈ ಕವನಸಂಕಲನವನ್ನು ಓದಲೇಬೇಕು.

‍ಲೇಖಕರು admin j

July 13, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: