ಅಮರೇಶ ನುಗಡೋಣಿ
ಸುನಂದಾ ಪ್ರಕಾಶ ಕಡಮೆ ಕಳೆದ ಎರಡು ದಶಕಗಳಿಂದ ಕತೆ, ಕಾದಂಬರಿ, ಕವಿತೆ ಬರೆಯುತ್ತಿದ್ದಾರೆ. ಅನುಭವ ಕೇಂದ್ರಿತ ಬರಹಗಳನ್ನೂ ಬರೆದಿದ್ದಾರೆ. ಅನುಭವಗಳ ಬಿಸಿ ಆರಿಹೋಗದ ಮುನ್ನ ಬರೆದ ಕತೆಗಳು ಆರಂಭದಲ್ಲಿ ಅವರಿಂದ ರಚನೆಗೊಂಡವು. ‘ಪುಟ್ಟ ಪಾದದ ಗುರುತು’ ಮತ್ತು ‘ಗಾಂಧಿ ಚಿತ್ರದ ನೋಟು’ ಸಂಕಲನದ ಕತೆಗಳು ಅನುಭವದ ತೀವ್ರತೆಯಲ್ಲಿ ಅಭಿವ್ಯಕ್ತಗೊಂಡವು. ವಸ್ತು ಪಾತ್ರಗಳು ಘಟನೆಗಳೆಲ್ಲ ಚಿಕ್ಕ ವ್ಯಾಪ್ತಿಯಲ್ಲಿದ್ದು, ವಾಸ್ತವದ ವಿವರಗಳಿಂದ ತುಂಬಿದ್ದರೂ ಘಟನೆಗಳು, ಅವುಗಳ ಸಂದರ್ಭ ನಿಷ್ಠತೆಯಿಂದ, ಸಮಸ್ಯೆಗಳ ತೀವ್ರತೆಯಿಂದ ಓದುಗರ ಮನ ತಲುಪಿದವು. ಸುನಂದಾ ಕೆಳ ಮಧ್ಯಮ ಕುಟುಂಬಗಳ ಬವಣೆಗಳು ಎಲ್ಲರ ಅನುಭವಗಳಾಗಿ ಪರಿಗಮಿಸುವಂತೆ ಕತೆಗಳನ್ನು ರಚಿಸಿ ಹೆಸರನ್ನು ಸಂಪಾದಿಸಿದವರು.
ಕೌಟುಂಬಿಕ ವ್ಯಾಪ್ತಿಯನ್ನು ಮೀರಿದ ಸಾಮಾಜಿಕ ಪರಿಸರವನ್ನು ಕತೆಗಳ ಒಡಲಿಗೆ ಸೇರಿಸಿಕೊಳ್ಳಲು ಸುನಂದಾ ಪ್ರಯತ್ನಿಸಿದ್ದು, ‘ಕಂಬಗಳ ಮರೆಯಲ್ಲಿ’ ಮತ್ತು ‘ತುದಿ ಮಡಚಿಟ್ಟ ಪುಟ’ ಸಂಕಲನಗಳಿಂದ ಕಾಣಿಸುತ್ತದೆ. ಯಾವುದೇ ಕಥೆಗಾರಿಗೂ ತಮ್ಮ ಕಥನ ಕ್ರಮದಲ್ಲಿ ಬದಲಾವಣೆ ತಂದುಕೊಳ್ಳುವುದು ಅನಿವಾರ್ಯವಾಗುತ್ತದೆ. ಕತೆಯನ್ನು ಪಾತ್ರದ ಮೂಲಕ ಗ್ರಹಿಸುವದಕ್ಕೂ ಒಟ್ಟೂ ಸನ್ನಿವೇಶಗಳನ್ನು ಗ್ರಹಿಸುತ್ತ ಬರೆಯುವದಕ್ಕೂ ವ್ಯತ್ಯಾಸವಿದೆ. ಕತೆ-ಕಾದಂಬರಿಯಲ್ಲಿ ಕಾಲದ ನಿರ್ವಹಣೆಯಲ್ಲಿ ಲಯ ತಪ್ಪಿದರೆ ಬಂಧ ಸಡಿಲವಾಗುತ್ತದೆ. ತೀವ್ರತೆ ಕಡಿಮೆಯಾಗುತ್ತದೆ. ಸುನಂದಾ ಅವರು ಕತೆ-ಕಾದಂಬರಿಯಲ್ಲಿ ಕೌಟುಂಬಿಕತೆಯಿಂದ ಹೊರಬಂದು ಸಾಮಾಜಿಕತೆಯನ್ನು ತಂದುಕೊಂಡಾಗ ವ್ಯತ್ಯಾಸವಾಗಿರುವುದನ್ನು ಅಲ್ಲಲ್ಲಿ ಕಾಣಬಹುದು. ಭಾವ ತೀವ್ರತೆ ಉಳಿಸಿಕೊಳ್ಳುವುದು ಸ್ವಲ್ಪ ಕಷ್ಟ. ಕೆಲವರಲ್ಲಿ ಒಂದಾದ ನಂತರ ಒಂದು ಕೃತಿ ರಚನೆಯಿಂದಲೂ ತೀವ್ರತೆ ಕಮ್ಮಿಯಾಗುವ ಸಾಧ್ಯತೆ ಇರುತ್ತದೆ.
ಸುನಂದಾ ಅವರ ಮೂರನೇ ಕಾದಂಬರಿ ‘ಹೈವೆ ೬೩’ ಉತ್ತರಕನ್ನಡದ ಒಂದು ಕಾಡಿನ ಸನ್ನಿವೇಶದಿಂದ ಆರಂಭಗೊಳ್ಳುತ್ತದೆ. ನಳಿನಿ ಆರು ತಿಂಗಳ ಗರ್ಭಿಣಿ ಶಾಲಿನಿಯನ್ನು ನೋಡಲು ಹೊರಡುವ ಸನ್ನಿವೇಶದಿಂದ ಆರಂಭಗೊಳ್ಳುವ ಕಥನ, ನಂತರ ಅವಳ ಹೆರಿಗೆ ಸಮಯದ ವರೆಗೆ ಮೂರು ತಿಂಗಳ ಅವಧಿಯಲ್ಲಿ ಕಟ್ಟಿಕೊಂಡಿದೆ. ಇಲ್ಲಿ ಮುಖ್ಯವಾಗಿ ಎರಡು ಕುಟುಂಬಗಳ ಚಿತ್ರಣವಿದೆ. ಮಾದೇವ ಗಾಂವ್ಕರ, ಈತನಿಗೆ ನಳಿನಿ ಮತ್ತು ನಂದಿನಿ ಎಂಬಿಬ್ಬರು ಮಕ್ಕಳಿದ್ದಾರೆ. ಇವರಿಗೆ ತಾಯಿ ಇಲ್ಲ. ನಳಿನಿಗೆ ಮದುವೆಯಾಗಿತ್ತು. ಗಂಡ ಸುಧಾಕರ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದಾನೆ. ಚಿಕ್ಕ ವಯಸ್ಸಿನ ನಳಿನಿ ಆಶಾ ಕಾರ್ಯಕರ್ತೆಯಾಗಿದ್ದಾಳೆ. ಕುಟುಂಬ ನಂದಿನಿ ಮೇಲೆ ನಡೆಯುತ್ತಿದೆ. ನಳಿನಿ ತಂಗಿ ನಂದಿನಿ ಪ್ರೀತಿ-ಪ್ರೇಮ ಅಂತ ವೆಂಕಟನನ್ನು ಮನಸ್ಸಿನಲ್ಲಿಟ್ಟುಕೊಂಡು ದಿನ ದೂಡುತ್ತಿದ್ದಾಳೆ. ಮಾದೇವ ಗಾಂವ್ಕಾರ್ ಗೆ ಉದ್ಯೋಗ ಅಂತ ಯಾವುದಿಲ್ಲ, ಮನೆಯಲ್ಲಿರುತ್ತಾನೆ.
ಇನ್ನೊಂದು ಕುಟುಂಬವಿದೆ. ದಾಮೋದರ ಕೇಣಿ. ಮಗ ವಿನಾಯಕ. ಮಗಳು ಜಲಜಳಿದ್ದರೂ ಮನೆಯವರ ಒಪ್ಪಿಗೆಯಿಲ್ಲದೇ ಪ್ರೀತಿಸಿದವನನ್ನು ಮದುವೆಯಾಗಿ, ತಂದೆ ಮತ್ತು ತಮ್ಮನಿಂದ ದೂರವಿದ್ದು ಗಂಡನ ಜೊತೆಗಿದ್ದಾಳೆ. ಈ ಕುಟುಂಬದಲ್ಲಿಯೂ ತಾಯಿಯಿಲ್ಲ. ಉಪಜೀವನಕ್ಕೆ ಹೈವೇ- ೬೩ ದ ಪಕ್ಕದಲ್ಲಿ ತಾತ್ಕಾಲಿಕ ಎಂಬಂತೆ ಒಂದು ದಾಬಾ ನಡೆಸಿಕೊಂಡಿದ್ದಾರೆ. ಈ ಎರಡು ಕುಟುಂಬಗಳು ಹೈವೆ ಯ ಅಕ್ಕಪಕ್ಕ ಇದ್ದು, ಯಾವುದೋ ಎಳೆ ಹಿಡಿದು ಸಂಬಂಧ ಬೆಳೆಸಿಕೊಂಡಿವೆ. ಬೆಳೆದಿರುವ ಸಂಬಂಧದಿಂದ ಹತ್ತಿರವಾಗುವ ಹಂತದಲ್ಲಿವೆ. ಆದರೂ ಸಧ್ಯ ಒಲೆಗಳು ಎರಡಿವೆ. ಈ ಎರಡು ಕುಟುಂಬದ ಒಳಗೂ ಹೊರಗೂ ನಡೆಯುವ ವಿದ್ಯಮಾನಗಳು ಕಾದಂಬರಿಯಲ್ಲಿವೆ. ಒಂದೆರಡು ಕುಟುಂಬಗಳ, ಮಾಳಸೇಕರ ಎಂಬ ವ್ಯಕ್ತಿ ಕಾದಂಬರಿಯಲ್ಲಿ ಕಡಿಮೆ ಸಲ ಕಾಣಿಸಿಕೊಂಡರೂ ಅವರ ಗಟ್ಟಿ ವ್ಯಕ್ತಿತ್ವ ಎದ್ದು ಕಾಣುತ್ತದೆ. ಇಡಗುಂದಿ ಟ್ರಾನ್ಸ್ಫೋರ್ಟಿನ ಮಾಲಿಕ ಮಂಜುನಾಥ ಕಾದಂಬರಿಯಲ್ಲಿ ಒಬ್ಬ ಕೇಡಿಗನಂತೆ ಕಾಣಿಸಿಕೊಂಡಿದ್ದಾನೆ. ನಿಗೂಢವಾಗಿ ಅಕ್ರಮ ಕೆಲಸಗಳಲ್ಲಿ ನಿರತನಾಗಿದ್ದರೂ ವರ್ಚಸ್ಸು ಉಳ್ಳವನಂತೆ ಕಾಣುತ್ತಾನೆ. ಮಾದೇವ ಗಾಂವ್ಕರ್, ದಾಮೋದರ ಕೇಣಿಯವರಿಗೆ ಆತ ಭಯವನ್ನುಂಟು ಮಾಡುತ್ತಲೇ ಇರುತ್ತಾನೆ. ನಂದಿನಿಯನ್ನು ಪ್ರೀತಿಸಿದ ವೆಂಕಟ ಈ ಮಂಜುನಾಥನ ಕೈಯಲ್ಲಿ ಕೆಲಸಕ್ಕಿರುವ ಹುಡುಗ. ಕೇಣಿಯ ಮಗ ವಿನಾಯಕನನ್ನು ಕೈಗೊಂಬೆ ಮಾಡಿಕೊಂಡಿದ್ದಂಥವ. ಕಾದಂಬರಿಯ ತುಂಬ ಮಂಜುನಾಥ ಭೀತಿ ಉಂಟುಮಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾನೆ.
‘ಹೈವೆ–೬೩’ ಕಾದಂಬರಿಯಲ್ಲಿ ಕಾಣುವ ಎರಡು ಕುಟುಂಬಗಳಲ್ಲಿ ಪ್ರತ್ಯೇಕವಾದ ಒಳ ಬಿಕ್ಕಟ್ಟುಗಳೂ ಇವೆ. ಅವುಗಳನ್ನು ಅವು ತಾವೇ ನಿಭಾಯಿಸಿಕೊಳ್ಳುವಂತೆ ಕಂಡರೂ ಒಂದಕ್ಕೊಂದು ನೆರವಾಗುವ ಹಂತವನ್ನು ತಲುಪುತ್ತವೆ. ಎರಡು ಕುಟುಂಬಗಳ ನಡುವೆ ನಳಿನಿ ಸೇತುವೆಯಾಗಿ ನಿಲ್ಲುತ್ತಾಳೆ. ಅಷ್ಟೇ ಅಲ್ಲದೇ ತನ್ನ ಸುಪರ್ಧಿಗೆ ಬಂದವರಿಗೂ ನೆರವಾಗುತ್ತಾಳೆ. ಈ ಕಾದಂಬರಿಯ ಕೇಂದ್ರ ಬಿಂದು ನಳಿನಿ. ನಳಿನಿ ಆಶಾ ಕಾರ್ಯಕರ್ತೆಯಾಗಿ ಅರಬೈಲಿನ ಹೆಗ್ಗಾಡು ಕಣಿವೆಯಲ್ಲಿ ಓಡಾಡಿಕೊಂಡು ಬಡಮಹಿಳೆಯರ ಆರೋಗ್ಯವನ್ನು ಕಾಪಾಡುತ್ತ ಒಬ್ಬೊಬ್ಬರ ಮೇಲೂ ನಿಗಾ ಇಡುವುದು ಆಕೆಗೆ ಕಷ್ಟದ ಕೆಲಸವಾಗಿರಲಿಲ್ಲ. ಕಾಡಿನ ಕಾಲುದಾರಿಯಲ್ಲಿ ಮಹಿಳೆಯರನ್ನು ಕಂಡು, ಅವರ ಯೋಗಕ್ಷೇಮ ವಿಚಾರಿಸಿಕೊಳ್ಳುವುದು ನಳಿನಿಗೆ ಸಂತೋಷದ ವಿಚಾರವೇ. ಆದರೆ ಕಾಡಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳು, ಅವುಗಳಲ್ಲಿ ಭಾಗಿಯಾಗುವ ಬಡವರ ಕಷ್ಟ-ನಷ್ಟಗಳಿಗೆ ಭಯಗೊಳ್ಳುತ್ತಿದ್ದಳು. ಕಾಡು ಇದ್ದಲ್ಲಿ ಅಕ್ರಮ ಚಟುವಟಿಕೆಗಳು ಇದ್ದೇ ಇರುತ್ತವೆ. ನಳಿನಿ ಓಡಾಡುವ ಕಾಡಿನಲ್ಲಿ ಕಾಡುಗಳ್ಳರ ಭಯ; ಕಾಡಿಗೆ ಬೆಂಕಿ ಹತ್ತುವ, ಅದರಿಂದ ಉಂಟಾಗುವ ನಷ್ಟವನ್ನು ನಳಿನಿ ಯೋಚಿಸುತ್ತಾಳೆ. ಒಬ್ಬ ನಾಗರಿಕಳಾಗಿ ನಳಿನಿ ಚಿಂತಿಸುತ್ತಾಳೆ.
ಕಾದಂಬರಿಯ ಆರಂಭದಲ್ಲಿಯೇ ನಳಿನಿ ಬಡ ಕುಟುಂಬದ ಶಾಲಿನಿಗೆ ಬಿ ಕಾಂಪ್ಲೆಕ್ಸ್ ಗುಳಿಗೆಗಳನ್ನು ತಲುಪಿಸಲು ಕಾಡಿನಲ್ಲಿಯೇ ಹೊರಟಿರುತ್ತಾಳೆ. ಕಾಡಿನ ದಾರಿಯೇ ಉಸಿರುಗಟ್ಟಿಸುತ್ತದೆ. ಮೇಲಾಗಿ ನಳಿನಿ ಯುವ ಮಹಿಳೆ, ಕಾಡಿನಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿರುವವರು, ಊರಲ್ಲಿ ಸಭ್ಯರಂತೆಯೇ ಕಾಣುತ್ತಾರೆ. ಉದಾಹರಣೆಗೆ ಶಾಲಿನಿಯ ಗಂಡ ವಿಶ್ವನಾಥ, ಅಂದೇ ಅದೇ ಕಾಡಿನ ತಾರಗಾರ ಬೆಟ್ಟದಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿರುತ್ತದೆ, ಅದಕ್ಕೆ ಕಿಡಿಗೇಡಿಗಳೇ ಕಾರಣ ಎಂಬುದು ಫಾರೆಸ್ಟಿನವರಿಗೆ ಗೊತ್ತಿರುತ್ತದೆ. ಕಾಡನ್ನು ರಕ್ಷಿಸುವುದು ಫಾರೆಸ್ಟಿನ ಸಿಬ್ಬಂದಿಗಳಿಗೆ ಜೀವನ್ಮರಣದ ಸಮಸ್ಯೆ. ಬೆಳಗಿನ ಹೊತ್ತಿನಲ್ಲಿ ನಳಿನಿಗೆ ಕಂಡ ಕಾಡಿನ ಸಿಬ್ಬಂದಿ ದತ್ತಾರಾಮ ಕಾಡ್ಗಿಚ್ಚು ನಂದಿಸಲು ಹೋಗಿ ಸುಟ್ಟು ಕರಕಲಾದದ್ದನ್ನೂ ನೋಡಬೇಕಾಗುತ್ತದೆ. ಕಾದಂಬರಿಯಲ್ಲಿ ಕಾಡಿನ ಒಳಗೆ ನಡೆಯುವ ರಹಸ್ಯಗಳನ್ನು ಇಲ್ಲಿ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.
ನಳಿನಿ ಮನೆಯಲ್ಲಿಯೂ ಬಿಕ್ಕಟ್ಟುಗಳನ್ನು ಎದುರಿಸುತ್ತಾಳೆ. ನಂದಿನಿ ಮಂಜುನಾಥನ ಕೈಕೆಳಗೆ ಕೆಲಸಕ್ಕಿರುವ ವೆಂಕಟನೆನ್ನುವ ಅರೆಬರೆ ಉದ್ಯೋಗಿಯನ್ನು ಪ್ರೀತಿಸುತ್ತಾಳೆ. ಅಷ್ಟೇ ಆಗಿದ್ದರೆ ಯಾರಿಗೂ ನಷ್ಟವಿರಲಿಲ್ಲ. ವೆಂಕಟನಿಂದ ಓಡಿಹೋಗಿ ಒಂದು ದಿನ ಕಾಡಿನಲ್ಲಿ ಕಾಲಕಳೆದು ಮತ್ತೆ ಮನೆಗೆ ಬಂದಿರುತ್ತಾಳೆ. ಓಡಿ ಹೋದ ಸಂದರ್ಭವು ತಂದೆ ಗಾಂವ್ಕಾರ ಮತ್ತು ಅಕ್ಕ ನಳಿನಿಗೆ ಸಂಕಟವಾಗುತ್ತದೆ. ಓಡಿ ಹೋದರೆ ಹೋಗಲಿ ಎಂದು ಸುಮ್ಮನೆ ಕೂಡುವ ಪೈಕಿ ಇವರಲ್ಲ. ಹೋದದ್ದೆಲ್ಲಿಗೆ? ಎಂಬುದನ್ನು ತಿಳಿದುಕೊಂಡು ಅದೇ ದುಷ್ಟನಂತಿರುವ ಮಂಜುನಾಥನ ಬಳಿ ನಳಿನಿ ತಂದೆಯೊಂದಿಗೆ ಹೋಗಿ, ನಂದಿನಿ ಎಲ್ಲಿ? ಹುಡುಕಿ ಕೊಡಿ ಎಂದು ಗೋಗರೆಯುತ್ತಾರೆ. ಆತ ನುಣುಚಿಕೊಂಡು ಹಚ್ಚಿಕೊಳ್ಳದೇ ಹಿಂದಕ್ಕೆ ಕಳಿಸುತ್ತಾನೆ. ಗಾಂವ್ಕಾರ ಸಂಕಟ ಆತನಿಗೆ ತಗಲುವುದಿಲ್ಲ, ಮರುದಿನ ನಂದಿನಿ ಮನೆಗೆ ಬರುತ್ತಾಳೆ. ಆದರೆ ಅತ್ತ ರಾತ್ರಿ ನಂದಿನಿ ವೆಂಕಟನ ಜೊತೆ ಕಳೆಯುತ್ತಿರುವಾಗ, ಇತ್ತ ನಳಿನಿ ತಂದೆಯ ಜೊತೆ ಸಂಕಟ ಪಡುವುದನ್ನು ಕಾದಂಬರಿ ಸೂಕ್ಷ್ಮವಾಗಿ ಅಷ್ಟೇ ಆರ್ದ್ರವಾಗಿ ಹಿಡಿದಿದೆ. ನಂದಿನಿ ತಂಗಿಯ ಸ್ಥಿತಿಯ ಬಗ್ಗೆ, ಅದು ಉಂಟು ಮಾಡುವ ಪರಿಣಾಮಗಳ ಬಗ್ಗೆ ರಾತ್ರಿ ಬಿಕ್ಕಿ ಬಿಕ್ಕಿ ಅಳುವುದನ್ನು ತಂದೆ ಸಂತೈಸಬೇಕಾಗುತ್ತದೆ. ಮರುದಿನ ನಂದಿನಿ ಮನೆಗೆ ಬಂದು ಸೇರಿದರೂ, ತಾನು ಮಾಡಿದ ಅಪರಾಧದ ಬಗ್ಗೆ ಆಕೆಗೆ ಪಶ್ಚಾತ್ತಾಪ ಇರುವುದಿಲ್ಲ. ನಿತ್ಯ ಮನೆಯಲ್ಲಿ ತಂದೆ-ಅಕ್ಕನಿಗೆ ಅಸಹಕಾರ ತೋರಿಸುತ್ತಲೇ ಇರುತ್ತಾಳೆ. ಆದರಿಲ್ಲಿ ನಳಿನಿಯ ಸಹನೆ ದೊಡ್ಡದಾಗಿ ಕಾಣುತ್ತದೆ.
ಕಾದಂಬರಿಯ ನಾಲ್ಕನೇ ಅಧ್ಯಾಯದಿಂದ ಕಥೆ ಸ್ವಲ್ಪ ಹಿಂದಕ್ಕೆ ಹೋಗಿ ಮತ್ತೆ ಮುಂದುವರಿಯುತ್ತದೆ. ಇಲ್ಲಿ ಕಾಣುವ ಇನ್ನೊಂದು ಕುಟುಂಬ ದಾಮೋದರ ಕೇಣಿಯದು. ಕೇಣಿಗೆ ವಯಸ್ಸಾಗಿದೆ, ಮೇಲಾಗಿ ಹೆಂಡತಿ ತೀರಿಕೊಂಡಿದ್ದಾಳೆ. ಇದ್ದ ಒಬ್ಬ ಮಗಳು ಜಲಜ ಲವ್ ಮ್ಯಾರೆಜ್ ಮಾಡಿಕೊಂಡು ಕುಟುಂಬದಿಂದ ದೂರವಾಗಿದ್ದಾಳೆ. ಮಗ ವಿನಾಯಕ ಹತ್ತು ವರ್ಷ ಓಡಿಹೋಗಿ ಮತ್ತೆ ಮನೆಗೆ ಹಿಂತಿರುಗಿ ಬಂದಿದ್ದಾನೆ. ಕಿರವತ್ತಿಯಿಂದ ಹೈವೆ-೬೩ ರ ಪಕ್ಕದಲ್ಲಿ ದಾಬಾ ನಡೆಸಲು ಕೇಣಿ ತನ್ನ ಮಗನೊಂದಿಗೆ ಬಂದಿಳಿದಾಗ, ನಳಿನಿಗೆ ಮತ್ತು ಗಾಂವ್ಕರ‍್ರಿಗೆ ಹಿಂದಿನ ಪರಿಚಯವನ್ನು ನೆನೆದು ಮತ್ತೆ ಪರಸ್ಪರ ಸ್ನೇಹ ಸಂಬಂಧ ಕುದುರಿಸಿಕೊಳ್ಳುತ್ತಾನೆ. ಗಾಂವ್ಕರ್ ನಳಿನಿ ಇಬ್ಬರೂ ಕೇಣಿಗೆ ಸಹಾಯ ಮಾಡತೊಡಗುತ್ತಾರೆ. ಗಾಂವ್ಕಾರ್‌ಗೆ ಒಳ ಆಸೆಯೊಂದು ಬಲಿತು ಕೇಣಿಯ ದಾಬಾಕ್ಕೆ ಕೈ ಜೋಡಿಸುತ್ತಾನೆ. ಬದುಕು ಕೆಡಿಸಿಕೊಂಡಿರುವ ನಂದಿನಿಯನ್ನು ವಿನಾಯಕನಿಗೆ ಕೊಟ್ಟು ಮದುವೆ ಮಾಡಬೇಕೆಂಬುದೇ ಆ ಒಳ ಆಸೆ. ಆದರೆ ನಂದಿನಿಗೆ ಇನ್ನೂ ವೆಂಕಟನ ಮೇಲಿನ ಮೋಹ ಕಿಂಚಿತ್ ಕಡಿಮೆಯಾಗದೇ ಇರುವುದರಿಂದ ವಿನಾಯಕನನ್ನು ನಿರಾಕರಿಸುತ್ತಾಳೆ. ದಾಬಾದಲ್ಲಿಯೂ ಕೆಲಸಕ್ಕಿಳಿದ ನಳಿನಿಯನ್ನು ಕೇಣಿ, ವಿನಾಯಕ ಇಬ್ಬರೂ ಆಕೆಯ ನೆರವಿನಿಂದ ಗೌರವಿಸುವಂತಾಗುತ್ತದೆ. ವಿನಾಯಕನಂತೂ ಮದುವೆಯಾದರೆ ನಳಿನಿಯನ್ನೇ ಎಂಬ ತೀರ್ಮಾನಕ್ಕೆ ಬರುತ್ತಾನೆ. ಆದರೆ ನಳಿನಿಗೆ ಎದುರಾದ ಸಮಸ್ಯೆಯೆಂದರೆ, ಅತ್ತ ತಂದೆಯ ಅಸಹನೆ ಹೆಚ್ಚಾದದ್ದು. ನಂದಿನಿಯನ್ನು ವಿನಾಯಕ ಮದುವೆ ಮಾಡಿಕೊಳ್ಳಲಿ ಎಂಬ ಹಂಬಲದಿಂದ ಮಾದೇವ ಗಾಂವ್ಕಾರ್ ವಿನಾಯಕ ನಳಿನಿಯ ನಡುವಿನ ಸಂಬಂಧವನ್ನು ಅಸಹನೆಯಿಂದ ನೋಡುತ್ತಾನೆ. ಇನ್ನೊಂದು ಸಮಸ್ಯೆಯೆಂದರೆ ದುಷ್ಟನಂತಿರುವ ಮಂಜುನಾಥನ ಕೈಗೊಂಬೆಯಂತಾದ ವಿನಾಯಕನ ಬಗ್ಗೆ ನಳಿನಿಗೆ ಸಂಕಟವಾಗುತ್ತದೆ. ಪದೇ ಪದೇ ಮಂಜುನಾಥ ಕಾರಿನಲ್ಲಿ ದಾಬಾಕ್ಕೆ ಬರುವುದು ನಳಿನಿಗೆ ಭಯ ಹುಟ್ಟಿಸುತ್ತದೆ. ಕೇಣಿಗೂ ಅದು ಸರಿ ಬರುವುದಿಲ್ಲ. ಆದರೆ ವಿನಾಯಕ ಮಂಜುನಾಥನAಥ ವರ್ಚಸ್ಸಿರುವವ ತನ್ನಲ್ಲಿಗೆ ಬರುತ್ತಾನೆಂದು ನಂಬಿ ಅವನ ದಾಸನಾಗುತ್ತಾನೆ. ಇಂಥ ವಿದ್ಯಮಾನಗಳು ನಳಿನಿಗೆ ಸಂಕಟಕ್ಕೀಡು ಮಾಡಿದರೂ ಸಹನೆ ಕಳೆದುಕೊಳ್ಳದೇ ಇರುವುದು ನಂದಿನಿಯ ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ. ಸಮಾಜ ಸುಧಾರಕ ಮಾಳಸೇಕರ ಅವರ ಪ್ರಭಾವ ನಳಿನಿಯ ಮೇಲಿರುವುದರಿಂದ ಅವಳು ಯಾವುದಕ್ಕೂ ದುಡುಕದೇ ತಾಳ್ಮೆಯಿಂದಲೇ ಎಲ್ಲವನ್ನೂ ಗ್ರಹಿಸುತ್ತಿರುತ್ತಾಳೆ.
ಕಾದಂಬರಿಯಲ್ಲಿ ಕಾಣುವ ಇನ್ನೊಂದು ಪ್ರಮುಖ ಅಂಶವೆಂದರೆ ಹೈವೆ-೬೩ ದಲ್ಲಿ ನಡೆಯುವ ರಸ್ತೆ ಅಪಘಾತಗಳು, ಅವುಗಳಿಂದಾಗುವ ಸಾವು ನೋವುಗಳ ಬಗ್ಗೆ ಸಾಮಾನ್ಯರೂ ಅಸೂಕ್ಷ್ಮವಾಗಿ ಬದಲಾಗಿರುವುದು ಕಾಣುತ್ತದೆ. ಕಾಡಿನ ಒಳಗೂ, ಹೈವೇ ಉದ್ದಕ್ಕೂ ಅಕ್ರಮಗಳು ನಡೆಯುತ್ತಿದ್ದರೂ ಅಮಾಯಕರು ಬರಿ ಹಲುಬುತ್ತ ನೋಡುವುದು, ಇಲ್ಲ ಸಿಕ್ಕಷ್ಟು ಸಿಗಲಿ ಎಂದು ತಾವೂ ಅದರಲ್ಲಿ ಪಾಳ್ಗೊಳ್ಳುವುದನ್ನು ನಾವಿಲ್ಲಿ ಸಾಮಾನ್ಯರಲ್ಲೂ ಕಾಣುತ್ತೇವೆ. ಮಂಜುನಾಥನಂತಹ ವ್ಯಕ್ತಿಗಳು ಅಕ್ರಮ ದಂಧೆಗಳನ್ನು ನಡೆಸುವುದು, ಅದನ್ನು ದಕ್ಕಿಸಿಕೊಳ್ಳುವುದಕ್ಕೆ ಮಾಡುವ ಹುನ್ನಾರಗಳು ಕಾದಂಬರಿಯಲ್ಲಿ ಢಾಳಾಗಿ ಕಾಣುತ್ತವೆ. ಕೇಣಿ, ವಿನಾಯಕರ ದಾಬಾದ ಹಿಂದೆ ಕಾಡು ಕಣಿವೆಯಲ್ಲಿ ಕಾಡು ದಾಸ್ತಾನವನ್ನು ಸಂಗ್ರಹಿಸಿಡುವುದು, ಅದನ್ನು ಸಾಗಿಸುವ ದಿನ ಲಾರಿ ಮುಷ್ಕರವೋ ಇನ್ನೊಂದೋ ನಡೆಸಿ ಆ ಹೊತ್ತಿನಲ್ಲಿ ದಾಸ್ತಾನು ಸಾಗಿಸುವುದು ನಡೆಯುತ್ತದೆ. ವಿನಾಯಕ ಮಂಜುನಾಥನ ಮಾತಿನಂತೆ ನಕಲಿ ಪರಿಸರ ಚಳುವಳಿಯಲ್ಲಿ ಪಾಲ್ಗೊಂಡು ಪೊಲೀಸರ ವಶವಾಗುವುದು ಕಾದಂಬರಿಯಲ್ಲಿ ಮಾರ್ಮಿಕವಾಗಿ ಬಂದಿದೆ.
ಮಂಜುನಾಥ ಮಾಡುವ ಹುನ್ನಾರಗಳು ವಿನಾಯಕನಿಗೆ ಗೊತ್ತಾಗುವುದಿಲ್ಲ. ಗುರು ಸಮಾನರಂತಿರುವ ಮಾಳಸೇಕರರ ಜತೆ ನಳಿನಿ ಇರುವುದನ್ನು ಮಂಜುನಾಥ ತಪ್ಪಾಗಿ ತಿಳಿದು ವಿನಾಯಕನಿಗೆ ಹೇಳಿ ಅವನ ಮನಸ್ಸು ಕೆಡಿಸುತ್ತಾನೆ. ಬೇಜವಾಬ್ದಾರಿ ಹುಡುಗ ವೆಂಕಟನೊಂದಿಗೆ ನಂದಿನಿಯನ್ನು ಮದುವೆ ಮಾಡಿಸಲು ಒತ್ತಾಯ ತರುವುದು ಗಾಂವ್ಕಾರ್ ಮತ್ತು ನಳಿನಿಗೆ ಸಂಕಟ ತರುತ್ತದೆ. ಕಾದಂಬರಿಯ ಉದ್ದಕ್ಕೂ ಮಂಜುನಾಥ ಭಯೋತ್ಪಾದಕನಂತೆ ವರ್ತಿಸುತ್ತಾನೆ. ಕಾದಂಬರಿಯಲ್ಲಿ ಕಾಣುವ ಸಂಬಂಧಗಳಲ್ಲಿ ಸಮಾನ ಅಂಶಗಳು ಗೋಚರಿಸುತ್ತವೆ. ನಂದಿನಿ ವೆಂಕಟರ ನಡುವೆ ಮದುವೆ ಸಂಬಂಧ ನಡೆದರೆ, ನಂದಿನಿಗಿಂತ ಮೊದಲು ವೆಂಕಟನಿಗೆ ಬೇರೊಂದು ಮದುವೆಯಾಗಿ ಆ ಸಂಬಂಧ ಮುರಿದು ಬಿದ್ದಿರುತ್ತದೆ, ನಂದಿನಿಗೆ ಅದು ಗೊತ್ತಿರುತ್ತದೆ ಕೂಡ. ನಳಿನಿ ವಿನಾಯಕರ ನಡುವೆ ಸಂಬಂಧ ಏರ್ಪಟ್ಟರೆ, ವಿನಾಯಕ ಈ ಹಿಂದೆ ಹತ್ತು ವರ್ಷಗಳ ಕಾಲ ಓಡಿ ಹೋಗಿದ್ದಾಗ ನೀರಾ ಎಂಬ ಹುಡುಗಿಯ ಜೊತೆ ಸಂಬಂಧ ಇರುವುದು ಆತ ಪೊಲೀಸರ ವಶವಾದಾಗ ಬಯಲಿಗೆ ಬರುತ್ತದೆ.
ಕೇಣಿಯವರ ಮಗಳು ಜಲಜ ತಂದೆ ತಾಯಿಯ ಮಾತನ್ನು ಮೀರಿ, ತಾನು ಪ್ರೀತಿಸಿದ ಹುಡುಗ ತುಕಾರಾಮ ಸಿದ್ದಿಯೊಂದಿಗೆ ಓಡಿ ಹೋಗಿ ಮದುವೆಯಾಗಿ ತವರು ಮನೆಯನ್ನು ಮರೆತಿರುತ್ತಾಳೆ. ಮುಂದೆ ನಳಿನಿಯೇ ಜಲಜಳನ್ನು ಕರೆತಂದು ಕೇಣಿಗೆ ತೋರಿಸಿ ರಾಜಿ ಮಾಡಿಸುತ್ತಾಳೆ. ವಿನಾಯಕ ಪೊಲೀಸರ ವಶವಾದಾಗ ನಳಿನಿಯೇ ಅವನನ್ನು ಜೈಲಿನಿಂದ ಬಿಡಿಸಲು ಮಾಳಸೇಕರರ ಮತ್ತು ಮಂಜುನಾಥನ ಸಹಾಯ ಕೇಳುತ್ತಾಳೆ. ಕಾದಂಬರಿಯ ಕೊನೆಗೆ ಶಾಲಿನಿಯ ಹೆರಿಗೆ ನೋವು ಕಾಣಿಸಿಕೊಂಡಾಗ, ಮಳೆಯ ಆರ್ಭಟದ ನಡುವೆ ರಕ್ಷಣೆಗೆ ನಿಲ್ಲುತ್ತಾಳೆ. ಗಾಂವ್ಕರ್ ಕೇಣಿ ಮತ್ತಿತರರು ಜೊತೆಗಿರುತ್ತಾರೆ. ಆಸ್ಪತ್ರೆಗೆ ಶಾಲಿನಿಯನ್ನು ಕರೆದೊಯ್ಯಲು ಯಾವ ವಾಹನ ಸಿಗದೇ ಹೋದಾಗ ಆಕಸ್ಮಿಕವಾಗಿ ಲೇಡಿ ಡಾಕ್ಟರ್ ಒಬ್ಬರು ಮಳೆಯಲ್ಲೇ ಕಾರಿನಲ್ಲಿ ಬಂದು ಹೆರಿಗೆ ಮಾಡಿಸಿ ಹೋಗುತ್ತಾರೆ. ‘ತಲ್ಲಣಿಸದಿರು ತಾಳು ಮನವೆ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’ ಎಂಬಂತೆ ಶಾಲಿನಿಯ ಹೆರಿಗೆ ನಿರಾಳವಾಗಿ ನಡೆಯುತ್ತದೆ. ಕಾಡು- ಹೆದ್ದಾರಿಯ ಬದುಕಿನಲ್ಲಿ ಸಾವಷ್ಟೇ ಅಲ್ಲ, ಸೃಷ್ಟಿ ಕ್ರಿಯೆಯೂ ಒತ್ತಡದಲ್ಲಿ ನಡೆದರೂ ಸುಸಂಗತವಾಗಿ ನಡೆಯುತ್ತದೆ ಎಂಬುದು ಮಾರ್ಮಿಕವಾಗಿದೆ.
ಕಾದಂಬರಿಯಲ್ಲಿ ಕೆಲವು ಅಧ್ಯಾಯಗಳು ತುಂಬ ಗಮನಾರ್ಹವಾಗಿವೆ. ಮೊದಲ ಅಧ್ಯಾಯದಲ್ಲಿ ನಳಿನಿ ಇದೇ ಶಾಲಿನಿಗೆ ಬಿ ಕಾಂಪ್ಲೆಕ್ಸ್ ಗುಳಿಗೆಗಳನ್ನು ಕೊಡಲು ಆಶಾ ಕಾರ್ಯಕರ್ತೆಯಾಗಿ ಕಾಡಿನಲ್ಲಿ ಹೊರಟಿರುತ್ತಾಳೆ. ಕಾಡಿನ ಮಹಾಮೌನವೇ ಭಯ ಹುಟ್ಟಿಸುವಂಥದ್ದು. ಸಣ್ಣ ಶಬ್ದವೂ ಮನವನ್ನು ಅಲ್ಲಾಡಿಸುವ ವಾತಾವರಣ, ನಳಿನಿ ಒಬ್ಬಂಟಿ. ಹೆಂಗಸು ಬೇರೆ. ಕಾಡಿನಲ್ಲಿ ನಡೆಯುವಾಗ ಯಾರೋ ಹಿಂದೆ ಬೆನ್ನತ್ತಿದ ಅನುಮಾನ. ಕಾಡಿನಲ್ಲಿ ನಡೆಯುವ ಅಕ್ರಮಗಳ ನೆನಪು, ಹೀಗೆ ಇಡೀ ಅಧ್ಯಾಯದಲ್ಲಿ ನಳಿನಿ ಮೂಲಕ ಪ್ರಜ್ಞಾ ಪ್ರವಾಹ ಹರಿಯುತ್ತದೆ. ಲೋಕವನ್ನು ನಳಿನಿಯ ಮೂಲಕ ಗ್ರಹಿಸಿರುವುದರಿಂದ ಬಂಧ ಬಿಗಿಯಾಗಿದೆ. ಭಾವ ತೀವ್ರತೆಯಿದೆ. ಕಾಲದ ನಿರ್ವಹಣೆಯೂ ಬಿಗಿಯಾಗಿದೆ. ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ, ಕಾದಂಬರಿಕಾರರು ಒಂದು ಸನ್ನಿವೇಶದಲ್ಲಿ ನಡೆಯುವುದೆಲ್ಲವನ್ನೂ ನಳಿನಿ ಮೂಲಕ ನೋಡಿರುವುದರಿಂದ, ಸನ್ನಿವೇಶದ ಚಿತ್ರಣದಲ್ಲಿಯೇ ಒಂದು ಒತ್ತಡ ಇರುವುದರಿಂದ ಎಲ್ಲವೂ ಬಿಗಿಯಾಗಿದೆ. ಇಂಥ ಸನ್ನಿವೇಶಗಳು ಕಾದಂಬರಿಕಾರರಿಗೂ ಸವಾಲನ್ನೊಡ್ಡುತ್ತವೆ.
ಇಂಥದೇ ಸನ್ನಿವೇಶ ಇನ್ನೊಂದಿದೆ. ಕೇಣಿಯು ದಾಬಾದ ಹಿಂದುಗಡೆ ಕಾಡಿನ ಕಣಿವೆಯಲ್ಲಿ ಮಲವಿಸರ್ಜನೆಗೆ ಹೋದಾಗ, ಆತನಿಗೆ ಕಾಣುವ ಅಥವಾ ಅರಿವಿಗೆ ಬರುವ ಚಿತ್ರಗಳು ವಾಸ್ತವವೋ ಭ್ರಮೆಯೋ ಎಂದೇ ತಿಳಿಯದ ಅರುವುಮರುವಾಗುತ್ತದೆ. ಅನೂಹ್ಯ ಚಿತ್ರಗಳು ತೇಲಿ ಹೋಗುತ್ತವೆ. ಹಳವಂಡವೇ ನಿರ್ಮಾಣವಾಗುತ್ತವೆ. ಈ ಅಧ್ಯಾಯವನ್ನು ಕೂಡ ಕೇಣಿ ಮುಖೇನ ಕಾದಂಬರಿಕಾರರು ಗ್ರಹಿಸಿದ್ದಾರೆ. ಹಾಗಾಗಿ ಬಿಗಿ ತಾನೇ ತಾನಾಗಿ ಬಂದಿದೆ. ಕಾಲದ ಅವಧಿ ಕಿರಿದಾಗಿರುವುದರಿಂದ ಅದರೊಳಗಿನ ಚಿತ್ರಣದಲ್ಲಿ ತೀವ್ರತೆಯಿದೆ. ಒಂದು ಸನ್ನಿವೇಶದಲ್ಲಿ ಎರಡು ಪಾತ್ರಗಳು ಬಂದರೆ ಇಷ್ಟು ಬಿಗಿಯಾಗಿ ನಿರ್ವಹಿಸಲು ಕಾದಂಬರಿಕಾರರಿಗೆ ಕಷ್ಟವಾಗುತ್ತದೆ. ಆಶಾ ಕಾರ್ಯಕರ್ತರ ಸಮಾವೇಶ ಮುಗಿಸಿಕೊಂಡು ಒಂದೇ ಬಸ್ಸಿನಲ್ಲಿ ನಳಿನಿ ಮತ್ತು ವಿನಾಯಕ ಒಂದೇ ಸೀಟಿನಲ್ಲಿ ಕುಳಿತು ರಾತ್ರಿ ಹೊತ್ತು ಬರುವಾಗ ವಿನಾಯಕನ ಸ್ವಭಾವದಿಂದ ನಳಿನಿಗೆ ಕಿರಿಕಿರಿಯಾಗುತ್ತಿದ್ದರೂ ತಾಳಿಕೊಂಡು ಪ್ರಯಾಣಿಸುತ್ತಾಳೆ, ಈ ಸನ್ನಿವೇಶದಲ್ಲಿ ವಿನಾಯಕನನ್ನೂ ನಿರ್ವಹಿಸಬೇಕಾದ ಇಕ್ಕಟ್ಟಿನಲ್ಲಿ ಭಾವತೀವ್ರತೆ ಕಮ್ಮಿ.
ಹಾಗೆಯೇ ಕಾದಂಬರಿಯ ಕೊನೆಯಲ್ಲಿ ಬರುವ ನಂದಿನಿ, ವೆಂಕಟ ಇಬ್ಬರೂ ಓಡಿಹೋಗಿ ಒಂದು ಹಗಲು ಮತ್ತು ಒಂದು ರಾತ್ರಿ ಜೊತೆಯಲ್ಲಿ ಕಾಲ ಕಳೆಯುವ ಸನ್ನಿವೇಶವಿದೆ. ನಂದಿನಿ ಈ ಸನ್ನಿವೇಶವನ್ನು ನೆನಪಿಸಿಕೊಳ್ಳುವ ಭಾಗ ಅದು. ಆದರೆ ನಂದಿನಿ ಮೂಲಕ ಎಲ್ಲ ಗ್ರಹಿಕೆಗಳು ಬಂದಿದ್ದರೂ, ವೆಂಕಟ ಹತ್ತಿರವೇ ಇರುವುದರಿಂದ ಕ್ಷಣಕ್ಷಣಕ್ಕೂ ಆತನನ್ನೂ ನಿರ್ವಹಿಸಬೇಕಾಗಿದೆ. ಕಾದಂಬರಿ ಬರವಣಿಗೆಯಲ್ಲಿ ಈ ಬಗೆಯ ಸನ್ನಿವೇಶಗಳ ನಿರ್ವಹಣೆ ಯಾರಿಗೂ ಸವಾಲಾಗುತ್ತದೆ. ಕಾದಂಬರಿಯ ಕೊನೆಯ ಅಧ್ಯಾಯದಲ್ಲಿ ಸನ್ನಿವೇಶದೊಳಗೊಂದು ಒತ್ತಡವಿದೆ. ಅದರ ನಿರ್ವಹಣೆಯೂ ತೀವ್ರವಾಗಿ ಚಿತ್ರಣಗೊಂಡಿದೆ. ಮುನ್ನುಡಿ ಬರೆಯಲು ಹೇಳಿದ ಸುನಂದಾ ಇಲ್ಲಿಯ ನಳಿನಿಯ ಹಾಗೆ ವಿಳಂಬವನ್ನು ಸಹಿಸಿಕೊಂಡಿದ್ದಾರೆ. ಅವರಿಗೆ ಕಾದಂಬರಿ ಬರೆದದ್ದಕ್ಕೆ, ನನ್ನ ಓದನ್ನು ಪ್ರವೇಶಿಕೆಯ ರೂಪದಲ್ಲಿ ಸೇರಿಸಿದ್ದಕ್ಕೆ ಕೃತಜ್ಞತೆಗಳು ಮತ್ತು ಧನ್ಯವಾದಗಳು.
ಉತ್ತಮ ಪುಸ್ತಕ ಪರಿಚಯ
ಪ್ರಕಾಶಕರು ಯಾರು ?