ಸುಧಾ ಆಡುಕಳ
ಹೆದ್ದಾರಿಯ ಕತ್ತಿಯಂಚಿನ ಪಯಣ
ರ‍್ರನೆ ಹಾದುಹೋದ ಸವಾರ
ಸರಕ್ಕನೆ ಜಾರಿ ರಸ್ತೆಯಂಚಿಗೆ ಉರುಳಿದ
ಅಚಾನಕ್ಕಾಗಿ ಬ್ರೇಕ್ ಒತ್ತಿತು ಕೈ
ಅವನುರುಳಿದಲ್ಲೇ ನಿಂತಿತು ಗಾಡಿ
ಚಿಗುರು ಮೀಸೆಯ ಹುಡುಗ
ಅವಸರದಲ್ಲಿದ್ದಾನೆ; ವೇಗ ವಯೋಸಹಜ
ಬಿದ್ದ ಶಾಕ್‌ನಲ್ಲಿ ತುಸುಹೊತ್ತು ನಿಂತಿದ್ದ
ಬೈಕ್ ಎತ್ತಲು ನಾ ಬಾಗಿದಾಗ ಅವನೂ ಹಿಡಿದ
ಅರೆ! ಕೈ ಚರ್ಮ ಕಿತ್ತು ತೊಟ್ಟಿಕ್ಕುತ್ತಿದೆ ರಕ್ತ
ಒಂದು ಚಿಂದಿಯ ಅರಿವೆ ಆ ಕ್ಷಣದ ಅಗತ್ಯ
ಅವನಲ್ಲಿ ಇಲ್ಲ, ಕೈಬೀಸಿ ಬಂದವನು
ನನ್ನಲ್ಲಿ ಪುಟ್ಟ ಕರವಸ್ತ್ರವೂ ಇರುವುದಿಲ್ಲ
ಸೂರ್ಯನ ಝಳಕ್ಕೂ ಬೆವರದ ವರದವಳು!
ಗಾಡಿಯ ಡಿಕ್ಕಿ ತೆಗೆದು ತಡಕಾಡಿದರೆ
ಕಾಗದ ಪತ್ರಗಳ ಹೊರತು ಬೇರೇನಿಲ್ಲ
ರಕ್ತ ತೊಟ್ಟಿಕ್ಕಿಸುತ್ತಲೇ ಗಾಡಿಯೇರಿ ಹೊರಟ
ಛೆ! ಒಂದು ಚೂರು ಬಟ್ಟೆಯದೇ ಕೊರತೆ!
ಚಿಂದಿಬಟ್ಟೆಗೂ ಇದೆ ಅದರದೇ ಘನತೆ
ಅಮುಖ್ಯರೆಂದು ಗಮನಿಸದ ಹಲವು ಜೀವಗಳಂತೆ
0 ಪ್ರತಿಕ್ರಿಯೆಗಳು