ಚಂದ್ರಶೇಖರ ಹೆಗಡೆ
ನನ್ನ ಪ್ರಯಾಣದೊಳಗೆ ನನಗೆ ಕಾಡಿದ ಚೋದ್ಯದ ಪ್ರಸಂಗಗಳಲ್ಲಿ ಈ ಸೀಟು ಕಾಯ್ದಿರಿಸುವ ಸಂದರ್ಭವೂ ಒಂದು. ಜಿಲ್ಲಾ ಕೇಂದ್ರ ಬಾಗಲಕೋಟೆಗೆ ಹೊರಡುವ ಬಸ್ಸನ್ನೇರಬೇಕೆಂದು ನಿಲ್ದಾಣದಲ್ಲಿ ಒಂಟಿಗಾಲಿನಲ್ಲಿ ನಿಂತು ಕಾಯುತ್ತಿದ್ದೆ. ಬಿಸಿಲು ನೆತ್ತಿಗೇರುವುದಕ್ಕೆ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದ ಸಮಯವದು. ಮೂವತ್ತು ನಿಮಿಷಗಳು ಉರುಳಿದವು. ಬಸ್ಸಿನ ಮುಖ ದರ್ಶನವಾಗಲಿಲ್ಲ. ಮುಂದಿನ ಬಸ್ಸಿಗಾಗಿ ಹೊರಡುವ ಜನವೂ ಸೇರಿಕೊಂಡು ನಿಲ್ದಾಣ ಗಿಜಿಗಿಡಲಾರಂಭಿಸಿತು. ಕಪ್ಪೆಯಂತೆ ವಟಗುಟ್ಟುತ್ತಲೇ ಕಾಲ ಕಳೆಯುತ್ತಿರುವಾಗ ಯಾರೋ ವಿಸ್ಮಯವೇ ಜರುಗಿದಂತೆ ಹೋ ಎಂದು ಕೂಗಿದರು. ಯಾಕಿಷ್ಟು ಧ್ವನಿ ಎಂದು ಹೊರಳಿದರೆ ಬಿಳಿಪಟ್ಟೆಯೊಂದನ್ನು ಮೈಮೇಲೆಳೆದುಕೊಂಡ ಬಸ್ಸು ಸಿನೇಮಾದಲ್ಲಿ ನಾಯಕನ ಪ್ರವೇಶವಾಗುವಂತೆ ನಿಲ್ದಾಣದೊಳಗೆ ನಿಧಾನವಾದ ಹೆಜ್ಜೆಗಳನ್ನಿರಿಸುತ್ತಾ ಸಾಗಿಬರುತ್ತಿತ್ತು. ತನ್ನ ಕಟಕಟೆಗೆ ಬಂದು ನಿಲ್ಲುವಷ್ಟರಲ್ಲಿ ಸಕ್ಕರೆಗೆ ಇರುವೆಗಳು ಮುತ್ತಿಕೊಳ್ಳುವಂತೆ ಬಸ್ಸಿನ ಎರಡೂ ಬದಿಗಳಿಗೆ ಅಂಟಿಕೊಂಡ ಜನರನ್ನು ಕಂಡು ಹೌಹಾರುವ ಸರದಿ ನನ್ನದು.
ಬಸ್ಸಿನ ಹಿಂಭಾಗದಲ್ಲಿರುವ ಬಾಗಿಲಿಗೆ ಮುತ್ತಿಕೊಳ್ಳಬೇಕಾದ ಜನರೆಲ್ಲಾ ಇದೇನು ಹೀಗೆ ಬಸ್ಸಿನ ಎಡಬಲಗಳನ್ನು ಅಪ್ಪಿಕೊಳ್ಳುತ್ತಿದ್ದಾರಲ್ಲ ಎಂದು ಚಕಿತಗೊಂಡು ದೂರದಲ್ಲಿ ನಿಂತು ಗಮನಿಸಿದೆ. ಅವರು ಹಾಗೆ ಕಿಟಕಿಗಳಿಗೆ ಜೋತುಬಿದ್ದದ್ದು ತಮ್ಮ ಬುತ್ತಿಯ ಗಂಟುಗಳನ್ನಿಟ್ಟು ಸೀಟನ್ನು ಕಾಯ್ದಿರಿಸಲು ಎಂಬುದನ್ನು ತಿಳಿದು, ನಾಯಕರ ಗದ್ದುಗೆ ಗುದ್ದಾಟವು ನೆನಪಾಗಿ ಮುಗುಳ್ನಕ್ಕೆ. ಬಸ್ಸಿನ ಕಿಟಕಿಗೆ ಹೀಗೆ ಶರಣಾಗುವುದನ್ನು ಕಂಡು ವಿಚಿತ್ರವೆನಿಸಿತು. ಸೀಟುಗಳ ಮೇಲಿಟ್ಟಿರುವ ಜನರ ಭಕ್ತಿಯ ಪಾರಮ್ಯದ ದರ್ಶನವಾಯಿತು. ಗದ್ದಲವೆಂದು ಸಾಮಾನ್ಯವಾಗಿ ದೂರ ನಿಲ್ಲುವ ನಾನು ಎಲ್ಲರೂ ಬಸ್ಸನ್ನೇರಿದ ನಂತರ ಒಳಗೇರಿದೆ. ಎಂತಹ ಹೋರಾಟವೆಂದು ಸೀಟು ದೊರೆತ ಮಂದಿ ನಿಟ್ಟುಸಿರು ಬಿಟ್ಟು ವಿರಮಿಸುತ್ತಿದ್ದರು. ಸೀಟು ದೊರೆಯದ ನಮ್ಮ ಪಕ್ಷದವರು ಛೇ ಸೀಟೇ ಇಲ್ಲ ಮೊದಲೇ ಓಡಿ ಬಂದು ಹಿಡಿಯಬೇಕಾಗಿತ್ತು ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದರು.
ಅಷ್ಟರಲ್ಲಿ ಒಬ್ಬ ವಿದ್ಯಾರ್ಥಿನಿ “ಸರ್ ಇಲ್ಲೊಂದು ಸೀಟು ಖಾಲಿ ಇದೆ ಬರ್ರಿ ” ಎಂದು ಕರೆದು ಕೂಡ್ರಿಸಿದಳು. ಧನ್ಯವಾದ ಹೇಳಿ ಕುಳಿತುಕೊಂಡು “ಆಹಾ ! ಕೊನೆಯವನಾಗಿ ಬಂದರೂ ಸೀಟು ಸಿಕ್ಕಿದೆ ಎಂದರೆ ಅದಾರಿಗೆ ದಕ್ಕುವುದು ಈ ಅದೃಷ್ಟ…. ಅದೆಂತಹ ಸೌಭಾಗ್ಯ ನನ್ನದು” ಎಂದು ಮಹತ್ವದ ಗದ್ದುಗೆಯೆಂಬಂತೆ ಅಲಂಕರಿಸಿದ ಹೆಮ್ಮೆಯಿಂದ ಬೀಗಿ ತೃಪ್ತನಾಗಿ ಸಾವರಿಸಿಕೊಂಡೆ. ಕರಕರಿಸಿದ ಬಸ್ಸು ಹಿಂದೆಗೆದು ಅಬ್ಬರಿಸಿ ಹೊರಟಿತು. ಮುಂಜಾವಿನ ಪ್ರಯಾಣದಲ್ಲಿರುವ ಸುಖವನ್ನು ಆನಂದಿಸುತ್ತಾ ಡಿವಿಜಿಯವರು ಹೇಳಿದಂತೆ ಎಲ್ಲರೊಳಗೊಂದಾಗಿ ಸಾಗುತ್ತಿರುವಾಗ ಬಸ್ಸಿನ ಯಂತ್ರದ ಗಂಟಲೊಳಗೆ ಏನೋ ಸಿಲುಕಿದಂತಾಗಿ ಕೆಮ್ಮಲಾರಂಭಿಸಿತು.
ಚಳಿಗಾಲದಲ್ಲಿ ಮಕ್ಕಳು ಮರಿಯೆನ್ನದೆ ಸರ್ವರಿಗೂ ಅಂಟಿಕೊಂಡು ಕಾಡಿದ ಕೆಮ್ಮು ನೆಗಡಿಗಳು ಬಸ್ಸಿಗೂ ವಕ್ಕರಿಸಬೇಕೆ ? ಆರೋಗ್ಯಧಾಮವಾದ ಡಿಪೋದಲ್ಲಿಯೇ ಬಸ್ಸಿಗೆ ಔಷಧಿಯನ್ನು ಕುಡಿಸಿಕೊಂಡು ಬರಬಾರದೆ ಈ ಡ್ರೈವರ್ ಹಾಗೂ ಕಂಡಕ್ಟರರು ಎಂದು ಗೊಣಗಿಕೊಂಡೆ. ಅಷ್ಟರಲ್ಲಿ ಬಸ್ಸನ್ನು ನಿಲ್ಲಿಸಿದ ಚಾಲಕರು ತಮ್ಮ ಸೀಟಿನ ಪಕ್ಕದಲ್ಲಿದ್ದ ನೀರಿನ ಬಾಟಲಿಯನ್ನು ಎತ್ತಿಕೊಂಡವರೆ ಯಂತ್ರದ ಬಾಯಗಲಿಸಿ ನೀರು ಹಾಕಿದರು. ನೀರಡಿಸಿ ಕೆಮ್ಮುತ್ತಾ ಉಸಿರಿಗಾಗಿ ಬಾಯಿಬಿಡುತ್ತಿದ್ದ ಬಸ್ಸಿನ ಇಂಜಿನ್ನು ಗಟಗಟನೆ ನೀರು ಕುಡಿದು ತನ್ನೊಳಗೆ ಅದುವರೆಗೂ ಬಚ್ಚಿಟ್ಟುಕೊಂಡ ಧಗೆಯನ್ನು ಹೊಗೆಯ ಮೂಲಕ ಚುರ್ ಎಂದು ಹೊರಹಾಕಿ ದೀರ್ಘವಾದ ಉಸಿರನ್ನೆಳೆದುಕೊಂಡಿತು. ಕನಿಷ್ಠ ಬಸ್ಸಿನ ಬಾಯಿಗೆ ನೀರು ಬಿಡಲೂ ಸಮಯವಿಲ್ಲದ ನಮ್ಮ ಆಧುನಿಕತೆಯ ಆಟಾಟೋಪಕ್ಕೆ ಬೇಸರಿಸಿದೆ.

ಒಂದಷ್ಟು ಹೊತ್ತು ಬಸ್ಸು ಉಸಿರಾಡಿದ ನಂತರ ಮರಳಿ ತನ್ನ ಸೀಟಿಗೆ ಬಂದು ಕುಳಿತುಕೊಂಡ ಡ್ರೈವರ್ ಚಾಲನೆಯ ಗುಂಡಿಯನ್ನು ಒತ್ತಿದ. ತನ್ನ ಭಾರವನ್ನೇ ಎಳೆದೊಯ್ಯಲು ಏದುಸಿರು ಬಿಡುತ್ತಿದ್ದ ಬಸ್ಸು ಅದು ಹೇಗೆ ಎಪ್ಪತ್ತು ಜನರನ್ನು ಹೊತ್ತೊಯ್ದೀತು ? ಜೋರಾಗಿ ಒಮ್ಮೆ ಉಸಿರು ಚೆಲ್ಲಿ ಮೂರ್ಛೆ ಹೋಯಿತು. ಅಲ್ಲಿಗೆ ನಮ್ಮ ಕತೆಯೂ ಮುಗಿದಿತ್ತು. ಕಂಡಕ್ಟರ್ ಇನ್ನೇನು ಇಳಿಯಿರಿ ಎಂದು ಹೇಳುವುದಕ್ಕಿಂತ ಮುಂಚೆಯೇ ಪಾಪದ ಬಸ್ಸಿನ ದುರವಸ್ಥೆಯನ್ನು ಕಂಡ ಜನರು ಕೆಳಗಿಳಿದುಬಿಟ್ಟರು. ಛೇ ಹೋರಾಡಿ ಗೆದ್ದ ಸೀಟುಗಳನ್ನು ಖಾಲಿ ಮಾಡಬೇಕಾಯಿತಲ್ಲ ಗುಣುಗುಡುತ್ತಲೇ ಅಯ್ಯೋ ಒಲಿದು ಒದಗಿಸಿಕೊಂಡ ನಿನ್ನನ್ನು ಬಿಟ್ಟು ಹೋಗಬೇಕಾಯಿತೆ ? ಎಂಬ ಭಾವದಲ್ಲಿ ಒಲ್ಲದ ಮನಸ್ಸಿನಿಂದಲೇ ಜನರು ಹಿಡಿದಿದ್ದ ಸೀಟು ಬಿಟ್ಟು ಕೆಳಗಿಳಿದರು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಎಂದುಕೊಂಡರು ಅಲ್ಲಿದ್ದ ಹಲವರು. ವಿದ್ಯಾರ್ಥಿನಿಯೊಬ್ಬಳ ಕೃಪೆಯಿಂದ ಒದಗಿದ ಸೀಟನ್ನು ಉಳಿಸಿಕೊಳ್ಳಲಾರದೇ ಹೋದುದಕ್ಕೆ ವ್ಯಥೆ ಪಡುತ್ತಾ ಕೆಳಗಿಳಿದೆ.” ನೋಡು ತಾಯಿ, ನೀನು ಸೀಟು ಕೊಟ್ಟ ಕಾರಣಕ್ಕಾಗಿಯೇ ಬಸ್ಸು ಹೀಗೆ ಮೂರ್ಛೆ ಹೋಗಿರಬೇಕು.” ಎಂಬ ವಿತಂಡವಾದವನ್ನು ಆ ವಿದ್ಯಾರ್ಥಿನಿಯ ಮುಂದಿಟ್ಟಾಗ ನಗುವ ಸರದಿ ಎಲ್ಲರದಾಯಿತು.
ಮತ್ತೊಂದು ಬಸ್ಸನ್ನು ತರಿಸಲಾಗುವುದು ಅಲ್ಲಿಯವರೆಗೆ ಸಮಾಧಾನದಿಂದ ಕಾಯಿರಿ ಎಂದಾಗ ಬಕಪಕ್ಷಿಯಂತೆ ಮತ್ತೊಂದು ಬಸ್ಸಿಗಾಗಿ ಕಾದು ಕುಳಿತೆವು. ಅರ್ಧ ಗಂಟೆಯ ನಂತರ ಬಂದ ಬಸ್ಸಿನ ಸೀಟಿಗಾಗಿ ಮತ್ತೆ ಮುತ್ತಿಕ್ಕಿದ ಜನರ ಹೋರಾಟ ಎರಡನೇ ವಿಶ್ವಯುದ್ದವನ್ನು ನೆನಪಿಗೆ ತರುವಂತೆ ಮಾಡಿತು. ಮೊದಲೇ ದೊಡ್ಡ ಹೋರಾಟ ಮಾಡಿ ಪಡೆದುಕೊಂಡ ಸೀಟನ್ನು ಕಳೆದುಕೊಂಡ ಸಂಕಟ ಒಂದು ಕಡೆ. ಬಸ್ಸಿನ ಖಾಯಿಲೆಯಿಂದ ತಡವಾಗಿರುವ ವಿಕಟ ಮತ್ತೊಂದು ಕಡೆ. ಕಾಯ್ದಿರಿಸಿದ ಸೀಟು ಮಗದೊಮ್ಮೆ ಸಿಗುವುದೇ ಎಂಬ ತರಕಟ ಮಗದೊಂದು ಕಡೆ.
ಹೀಗೆ ಮೂರು ಪರದಾಟಗಳ ಸ್ಥಾಯಿಯನ್ನು ಒಗ್ಗೂಡಿಸಿಕೊಂಡ ಮೇಲೆ ಕೇಳಬೇಕೆ ? ಎರಡನೇ ಮಹಾಯುದ್ಧ ಕಣ್ಣೆದುರಿಗೆ ಸಂಭವಿಸಿಯೇ ಬಿಟ್ಟಿತು ಬಸ್ಸೊಂದು ಎರಡು ಬಾಗಿಲುಗಳಾಗಿದ್ದರೆ ಯುದ್ಧದ ತೀವ್ರತೆ ಕಡಿಮೆಯಾಗಬಹುದಿತ್ತು. ಅದರೆ ಇದು ಬಸ್ಸೊಂದು ಬಾಗಿಲೊಂದು ಆಗಿದ್ದರಿಂದ ಸೀಟಿಗಾಗಿ ನಡೆದ ಕೆಚ್ಚೆದೆಯ ಹೋರಾಟ ಅತಿ ಬಿಸುಪಿನಿಂದಲೇ ಕೂಡಿತ್ತು. ಬಸ್ಸನ್ನೇರಿದ ವಿದ್ಯಾರ್ಥಿನಿಯರಿಗೆ ಈಗ ಸೀಟಿನ ಭಾಗ್ಯ ದೊರೆಯಲಿಲ್ಲ. ಯುದ್ಧಕ್ಕಿಂತ ಮುಂಚೆಯೇ ನಾನಂತೂ ನಿಲ್ಲುವ ಉಮೇದಿಗೆ ಶರಣಾಗಿ ಹೋಗಿದ್ದೆ. ಯಾರೋ ಒಬ್ಬರು ಟಾವೆಲ್ ಹಾಕಿದ ಸೀಟಿಗೆ ಮತ್ತೊಬ್ಬರು ಕುಳಿತುಬಿಟ್ಟಿದ್ದರು. ಮಲ್ಲಯುದ್ಧವೇ ಸಂಭವಿಸುವ ಹಾಗೆ ಉದ್ಘೋಷಗಳು ಎರಡೂ ಬದಿಯಿಂದ ಹೊರಟು ಕೊನೆಗೆ ಆ ಸೀಟು ಕೂತವರ ಪಾಲಾದದ್ದು ಜಗತ್ತಿನ ನಿಯಮ.
ಉಳುವವನೇ ಹೊಲದೊಡೆಯ ಎಂಬಂತೆ ಸದ್ಯ ಕೂತವನೇ ಸೀಟಿನೊಡೆಯಲ್ಲವೆ ಎಂಬ ತರ್ಕದಿಂದ ವಾದ ವಿವಾದಗಳು ಅಂತ್ಯಗೊಂಡರೂ, ಜಯಂತ ಕಾಯ್ಕಿಣಿಯವರ ಮಳೆ ನಿಂತು ಹೋದ ಮೇಲೆ ಹನಿಯೊಂದು ಕಾಡುವ ಹಾಡಿನಂತೆ ಹಾಗೆ, ಸೀಟು ಕಾಯ್ದಿರಿಸಿದರೂ ತನಗೆ ಸಿಗದವನ ಎದೆಯಿಂದ ಆ ರೊಚ್ಚು ಬಿರುಸಾದ ಮಾತಿನ ರೂಹು ಹೊತ್ತು ಹೊರಗೆ ಧಾವಿಸುತ್ತಿದ್ದವು. ಹೋಗಲಿ ಬಿಡ್ರಿ ಎಂದು ಎದ್ದು ನಿಂತವರು ಸಮಾಧಾನ ಹೇಳಿದಾಗ ತುಸು ಕಡಿಮೆಯಾಯಿತಾದರೂ ಗೊಣಗುವಿಕೆ ಮಾತ್ರ ನಿಲ್ಲಲಿಲ್ಲ. ಮೊದಲನೇ ಬಸ್ಸಿನಲ್ಲಿ ಸೀಟು ಸಿಕ್ಕಿತೆಂದು ಹಾಯಾಗಿದ್ದವರು ಎರಡನೇ ಬಸ್ಸಿನಲ್ಲಿ ಸೀಟು ಸಿಗಲಾರದ್ದಕ್ಕೆ ನಿಂತಲ್ಲಿಯೇ ಯಾರನ್ನು ತೆಗಳುವುದು ಎಂದು ತಿಳಿಯದೇ ತಮ್ಮ ಹಣೆಬರಹವನ್ನು ಶಪಿಸುತ್ತಾ ಚಡಪಡಿಸುತ್ತಿದ್ದರು. ಎಂತಹ ವ್ಯಂಗ್ಯವಲ್ಲವೆ ? ನಿಜ ಜೀವನದಲ್ಲಿಯೂ ಕೆಲವು ಬಾರಿ ನಮಗೆ ಬೇಕಾದದ್ದು ಇನ್ನೇನು ದಕ್ಕಿಯೇಬಿಟ್ಟಿತು ಎನ್ನುವಾಗಲೇ ನಮ್ಮ ಕೈಯ್ಯಿಂದ ಜಾರಿ ಹೋದಾಗ ಪಡುವ ವ್ಯಥೆ ಅಷ್ಟಿಷ್ಟಲ್ಲ. ಕಮಲಹಾಸನರು ಬಸ್ಸಿನಲ್ಲಿ ಸೀಟು ಸಿಗದವರಿಗಾಗಿ ಹಾಡಿದ ಮುಂದೆ ಬನ್ನಿ ಮುಂದೆ ಬನ್ನಿ ಎಂದು ಗೀತೆ ನೆನಪಾಗುತ್ತದೆ.
ಮೊದಲನೇ ಬಸ್ಸಿನಲ್ಲಿ ಅಯ್ಯೋ ಅದೆಷ್ಟು ಪ್ರಯತ್ನಿಸಿದರೂ ಸೀಟು ಸಿಗಲಿಲ್ಲವಲ್ಲ ಎಂದು ಹಳಹಳಿಸಿ, ಎರಡನೇ ಬಸ್ಸಿನಲ್ಲಿ ಸೀಟು ಗಿಟ್ಟಿಸಿಕೊಂಡವರಿಗೆ ಸೋತು ಗೆದ್ದ ಸಂಭ್ರಮ. ಇದು ಬದುಕಿನ ಮತ್ತೊಂದು ಪಾಠ. ಯಾವುದೋ ಒಂದು ಕಾರ್ಯಸಾಧನೆಯ ಪ್ರಯತ್ನದಲ್ಲಿ ಸೋತು, ಇನ್ನು ಮುಗಿದೇ ಹೋಯಿತು ತಮ್ಮ ಕಥೆಯೆಂದುಕೊಂಡು ಕೈಚೆಲ್ಲಿ ಕುಳಿತವರು, ಮರಳಿ ಯತ್ನವ ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ಈ ಸಂದರ್ಭ ಸಂಕೇತವಾಗಿ ನಿಲ್ಲುತ್ತದೆ. ಇದನ್ನೇ ಡಿವಿಜಿಯವರು
“ಗುರಿಯನೈದದೊಡೊಮ್ಮೆ ಮರಳಿ ನೀನುಜ್ಜುಗಿಸು
ಕರಯುಕ್ತಿ ಪೆರ್ಚಿಯೋ, ದೈವ ಕರುಣಿಸಿಯೋ
ಕರುಮಋಣ ಸಂಧಿಸಿಯೊ ಕೈಗೂಡಬಹುದು ಗುರಿ
ಪರವೆಯಿಡದುಜ್ಜುಗಿಸು-ಮಂಕುತಿಮ್ಮ
ಎಂದು ಹಾಡಿದ್ದಾರೆ. ಯಾವ ಮಾಯೆಯಿಂದಲಾದರೂ ಸರಿ ಮರಳಿಯತ್ನ ಸಫಲವಾಗಿಬಿಡಬಹುದು ಕೆಲಬಾರಿ ಎಂಬ ಸಂದೇಶವೂ ನನಗೆ ಈ ಸಂದರ್ಭದಿಂದೊದಗಿತು. ಒಟ್ಟು ಸಂದರ್ಭವನ್ನು ರಾಜಕಾರಣಕ್ಕೆ ಅನ್ವಯಿಸಿದರಂತೂ, ಹಾಸ್ಯರಸಗೊಳವೇ ನಿರ್ಮಾಣವಾದರೂ ಆಶ್ಚರ್ಯಪಡಬೇಕಿಲ್ಲ.
ಮತ್ತೊಂದು ಬಾರಿ ನಾನು ಪ್ರಯಾಣದಲ್ಲಿದ್ದಾಗ ಹೇಗೋ ಸೀಟು ಸಿಕ್ಕಿತ್ತು. ಕುಳಿತುಕೊಂಡು ನನ್ನ ಪಾಡಿಗೆ ನಾನು ಪುಸ್ತಕ ತೆರೆದು ಓದುತ್ತಿದ್ದೆ. ಕೆಲವು ಜನರಿಗೆ ಸೀಟು ಸಿಗದೇ ನಿಂತು ಪ್ರಯಾಣ ಮಾಡುವ ಸರದಿಯೊದಗಿತು. ಅಷ್ಟರಲ್ಲಿ ಒಬ್ಬ ಹೆಣ್ಣುಮಗಳು ತಲೆಯ ಮೇಲೊಂದು ಭಾರವಾದ ತುಂಬಿದ ಕೈಚೀಲವನ್ನಿಟ್ಟುಕೊಂಡು ಹತ್ತಿರದಲ್ಲಿ ಬಂದು ನಿಂತಳು. ಬಸ್ಸು ಹೊರಟಿತು. ನನ್ನ ಸೀಟಿನ ಪಕ್ಕದಲ್ಲಿಯೇ ನಿಂತಿದ್ದ ಆ ಮಹಿಳೆಯ ಚಡಪಡಿಕೆಯನ್ನು ಕಂಡು ‘ಬರ್ರಿ.. ಇಲ್ಲಿ ಕೂಡ್ರಿ’ ಎಂದು ಸೀಟು ಬಿಟ್ಟುಕೊಟ್ಟೆ. ಈ ಪರಂಪರೆಯೇ ಮಾಯವಾಗುತ್ತಿರುವ ಈ ಹೊತ್ತಿನಲ್ಲಿ ಅಚ್ಚರಿಯಿಂದ ಆ ಮಹಿಳೆ ” ಪುಣ್ಯಾ ಬರಲ್ರಿ ಯಪ್ಪಾ ನಿಮಗ” ಎಂದವಳೆ ನಾನು ಬಿಟ್ಟುಕೊಟ್ಟ ಆ ಸೀಟಿನಲ್ಲಿ ಕುಳಿತುಕೊಂಡಳು. ಒಬ್ಬ ಬಳಲಿದ ಮಹಿಳೆಗೆ ಸೀಟು ಬಿಟ್ಟುಕೊಟ್ಟ ಆದರ್ಶದ ಬಾಗಿಲಲ್ಲಿ ನಿಂತುಕೊಂಡೇ ಪ್ರಯಾಣ ಮಾಡಿದೆ. ಹದಿನೈದು ನಿಮಿಷದಲ್ಲಿ ಆ ಮಹಿಳೆಯ ಊರು ಬಂತು.
ಗಿಜಿಗಿಡುತ್ತಿದ್ದ ಬಸ್ಸಿನ ಹಿಂಬದಿಯಲ್ಲಿ ಇಳಿಯಲು ಸಿದ್ಧವಾಗುತ್ತಿದ್ದ ಆ ಮಹಿಳೆಯನ್ನು ಕಂಡು ಓ ಮರಳಿ ನನ್ನ ಸೀಟು ನನಗೆ ಸಿಗುತ್ತಿದೆ ಎಂದು ಸಂತೋಷದಿಂದ ಅಣಿಯಾಗುತ್ತಿದ್ದೆ. ಅಷ್ಟರಲ್ಲಿ ಆ ಮಹಿಳೆ ತಾನು ಇಳಿಯುವುದಕ್ಕಿಂತ ಮುಂಚೆ ತನ್ನ ಮುಂದಿನ ಸೀಟಿನ ಪಕ್ಕದಲ್ಲಿ ನಿಂತಿದ್ದ ಮುಂದಿನ ಊರಿಗೆ ಹೋಗುತ್ತಿದ್ದ ಮತ್ತೊಬ್ಬ ಹೆಣ್ಣುಮಗಳನ್ನು ಕೂಗಿ ‘ ಏ ಬಾಯವ್ವ ಇಲ್ಲಿ ಸೀಟು ಖಾಲಿ ಐತಿ ಕೂಡ್ರ ಬಾ’ ಎಂದು ನನ್ನೆದುರಿಗೆ ಕರೆದು ತಾನೆದ್ದು ಅವಳನ್ನು ಮಹಾರಾಣಿಯಂತೆ ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಿ, “ಹೋಗಿ ಬಾ ಬಾಯವ್ವ…” ಎಂದವಳೇ ” ಸ್ವಲ್ಪ ಚೀಲ ತಲಿ ಮ್ಯಾಲ ಹೊರಿಸ್ರಿ ಯಪ್ಪಾ” ಎಂದು ನನ್ನಿಂದಲೇ ಚೀಲವನ್ನು ಹೊರಿಸಿಕೊಂಡು ಸದ್ದಿಲ್ಲದೇ ಹೊರಟು ಹೋದಳು. ಇದನ್ನೆಲ್ಲಾ ಬಿಟ್ಟಕಣ್ಣುಗಳಿಂದ ನೋಡುತ್ತಿದ್ದ ನನಗೆ ಹೇಗಾಗಿರಬೇಡ. ಹೋಗಲಿ ಬಿಡು ಆಕೆಯೂ ಒಬ್ಬ ಮಹಿಳೆಯೇ ತಾನೇ ಎಂದು ನನಗೆ ನಾನೇ ಸಮಾಧಾನ ಮಾಡಿಕೊಳ್ಳದೇ ಅನ್ಯ ದಾರಿಯಿಲ್ಲ. ಅವಳೊಡನೆ ಜಗಳ ತೆಗೆಯಬೇಕೆಂದರೆ ಇಳಿದು ಹೋಗಿ ತನ್ನ ಮನೆ ಸೇರಿದ್ದಾಳೆ. ನನ್ನ ಸೀಟಿನಲ್ಲಿ ಈಗ ಕುಳಿತುಕೊಂಡ ಮಹಿಳೆಯನ್ನು ಕೇಳೋಣವೆಂದರೆ ಅವಳಿಗೂ ನನಗೂ ಸಂಬಂಧವೇ ಇಲ್ಲ. ನನ್ನಿಂದ ಸೀಟು ಪಡೆದುಕೊಂಡ ಮಹಿಳೆಯೇ ಅಲ್ಲಿಲ್ಲ ಎಂದ ಮೇಲೆ ಯಾರೊಡನೆ ವಾಗ್ವಾದ ಮಾಡುವುದು ಅದೂ ಪ್ರಾಧ್ಯಾಪಕನಾಗಿ ಮಕ್ಕಳಿಗೆ ಬುದ್ದಿ ಹೇಳುವ ನಾನು ಒಂದು ಸೀಟಿಗಾಗಿ ಜಗಳವಾಡುವುದೇ ? ಎಂದು ನನ್ನೊಳಗೊಂದು ಆತ್ಮಾನುಸಂಧಾನ ಮಾಡಿಕೊಂಡು ಸಹಿಸಿಕೊಂಡೆ. ಇಷ್ಟೇ ಆಗಿದ್ದರೆ ಗಾಯ ಹೃದಯದವರೆಗೂ ವ್ಯಾಪಿಸುತ್ತಿರಲಿಲ್ಲವೇನೋ? ಮುಂದೆ ಕೇಳಿ ನನ್ನ ಸೀಟಿನ ಪುರಾಣವನ್ನು. ಬಸ್ಸು ಮುಂದಿನೂರಿನತ್ತ ಹೊರಟಿತು. ನನಗೆ ಅವಕಾಶ ನೀಡದೆ ಯಾರು ಯಾರಿಗೋ ಮಣೆ ಹಾಕಿ ಕರೆದು, ಅವಮಾನ ಮಾಡಿದ ಸೀಟಿನ ಪಕ್ಕದಲ್ಲಿಯೇ ನಿಂತಿದ್ದ ನಾನು ಹೇಗಾದರೂ ಸರಿ. ಇಂದು ಈ ಸೀಟನ್ನು ನನ್ನದಾಗಿಸಿಕೊಳ್ಳಲೇಬೇಕು ಎಂದು ಹಠ ತೊಟ್ಟುಕೊಂಡೆ ಮನದೊಳಗೆ ಜಿದ್ದಿಗೆ ಬಿದ್ದ ಪ್ರತಿನಿಧಿಗಳಂತೆ. ಇದಕ್ಕಾಗಿ ಕ್ಷಣ ಕ್ಷಣವೂ ಹೊಂಚು ಹಾಕಿ ಕಾಯುತ್ತಿದ್ದೆ. ಬಸ್ಸು ವೇಗದ ಮದದಲ್ಲಿ ಬುಸುಗುಡುತ್ತಿತ್ತು. ಮುಂದಿನ ಊರಿಗೆ ಆ ಮಹಿಳೆ ಇಳಿಯುವಳೆಂಬುದು ಮೊದಲೇ ಗೊತ್ತಾಗಿದ್ದರಿಂದ ನಾನೂ ಸೀಟನ್ನು ಹೇಗಾದರೂ ಸರಿ ಕಬಳಿಸುವುದಕ್ಕಾಗಿ ಕಾತರಿಸುತ್ತಿದ್ದೆ. ಅಷ್ಟರಲ್ಲಿ ಸಹಜವೆನಿಸುವ ಘಟನೆಯೊಂದು ಜರುಗಿಹೋಯಿತು. ನನ್ನ ಸೀಟಿನಲ್ಲಿ ಕುಳಿತ ಮಹಿಳೆ ಮುಂದಿನ ಎರಡನೇ ಸೀಟಿನಲ್ಲಿ ಕುಳಿತಿದ್ದ ತಮ್ಮ ಸಂಬಂಧಿ ಅಜ್ಜನೊಬ್ಬನನ್ನು ಕುಳಿತಲ್ಲಿಂದಲೇ ಎದ್ದು ಕೂಗಿ ” ಏ ಯಜ್ಜಾ ಎದ್ದು ಬಾ ಇಲ್ಲಿ…” ಎಂದು ಕರೆದಳು. ಓ ಅಜ್ಜನೊಂದಿಗೆ ಈ ಮಹಿಳೆ ಇಳಿಯುತ್ತಾಳೆ ಎಂದು ಖಾತರಿಯಾಯಿತು. ಅಜ್ಜ ನಿಧಾನವಾಗಿ ಸೀಟಿನ ಹತ್ತಿರ ಬಂದ. ಊರಿನ ದರ್ಶನವಾಯಿತು. ಬಸ್ಸು ನಿಂತಿತು. ತಕ್ಷಣ ತನ್ನ ಸೀಟಿನಿಂದ ಮೇಲೆದ್ದ ಮಹಿಳೆ ತನ್ನ ಅಜ್ಜನನ್ನು ಕೈಹಿಡಿದು ತನ್ನ ಸೀಟಿನಲ್ಲಿ ಕುಳ್ಳಿರಿಸಿ ” ನಿನಗ ಆಮ್ಯಾಲ ಎದ್ದು ಬರೂದು ಆಗೂದಿಲ್ಲ ಅದಕ ಇಲ್ಲೆ ಬಾಗಲ ಸಮೀಪ ಕೂತ್ಕೋ ” ಎಂದು ಸ್ಥಾಪಿಸಿ ಕೆಳಗಿಳಿಯಲು ಅನುವಾದಳು. ಇದೇನೆಂದು ಅರ್ಥವಾಗದೇ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತ ನನಗೆ ನಿಜ ಯಾವುದೊ ಸುಳ್ಳು ಯಾವುದೋ ಒಂದೂ ಅರಿಯಲಾಗಲಿಲ್ಲ. ಆ ಕ್ಷಣ ವಿಚಲಿತನಾದೆ. ಕೂಡಲೇ ಎಚ್ವೆತ್ತುಕೊಂಡು ಮುಂದಿನ ಅಜ್ಜನ ಸೀಟಿನಲ್ಲಿಯಾದರೂ ಕುಳಿತುಕೊಂಡರಾಯಿತು ಎಂದು ಓಡಿಬಂದರೆ ಅಲ್ಲಿಯೇ ಹತ್ತಿರದಲ್ಲಿದ್ದ ಮಹನೀಯರು, ಸಂಬಂಧವಿಲ್ಲದ ದೂರವಿದ್ದವನಿಗೆ ಹೇಗೆ ತಾವು ಕನಸು ಕಟ್ಟಿದ ಸೀಟನ್ನು ಬಿಟ್ಟುಕೊಡುತ್ತಾರೆ ? ತಮ್ಮ ಕ್ಷೇತ್ರವನ್ನು ಬಿಟ್ಟು ಮತ್ತೊಂದು ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಗೆಲ್ಲಬೇಕಾದ ಪರಿಸ್ಥಿತಿ ನನ್ನದಾಯಿತು.

ಗೆಲ್ಲುವುದಿರಲಿ ಠೇವಣಿಯೂ ಉಳಿಯಲಿಲ್ಲ. ಜಂಘಾಬಲವೇ ಉಡುಗಿಹೋದಂತಾಗಿ ತೀವ್ರ ನಿರಾಸೆಯಾಯಿತು. ನಮ್ಮ ನಾಯಕರೆಲ್ಲಾ ಯಾಕೆ ತಮ್ಮ ಸೀಟಿಗಾಗಿ ಇಷ್ಟೊಂದು ಗುದ್ದಾಡುತ್ತಾರೆ ಎನ್ನುವುದು ನನಗಾಗ ಅರ್ಥವಾಯಿತಲ್ಲದೆ ಅವರು ಯಾಕೆ ತಮ್ಮ ಕುರ್ಚಿಯನ್ನು ಇನ್ನೊಬ್ಬರಿಗೆ ಬಿಟ್ಟುಕೊಡಲು ಹಿಂಜರಿಯುತ್ತಾರೆ ಎಂಬುದಕ್ಕೂ ಉತ್ತರ ದೊರೆಯಿತು. ಕೆಲವೇ ಘಳಿಗೆಯವರೆಗೆ ಕೂತು, ನಮ್ಮ ನಿಲ್ದಾಣ ಬಂದ ಕೂಡಲೇ ಸೀಟನ್ನು ಬಿಸುಟು ಇಳಿದು ಹೋಗುವ ನಮಗೇ ಇಷ್ಟು ಸೀಟಿನ ಸಂಕಟಗಳಿರಬೇಕಾದರೆ, ಇನ್ನು ಐದು ವರ್ಷಗಳ ಕಾಲ ಅಧಿಕಾರವನ್ನನುಭವಿಸುವ ನಮ್ಮ ನಾಯಕರಿಗೆಷ್ಟು ಸಂಕಟಗಳ ಸರಮಾಲೆಯಿರಬಾರದು ಅಲ್ಲವೆ ? ನಾವು ಸುಖಾ ಸುಮ್ಮನೆ ರಾಜಕಾರಣಿಗಳನ್ನು ವಿಡಂಬನೆ ಮಾಡುತ್ತೇವೆ. ಅವರವರ ಸಂಕಟ ಅವರಿಗೆ. ಎಂತಹ ಪಾಠವಲ್ಲವೇ ?
ಈ ಸೀಟು ಕಾಯ್ದಿರಿಸಲು ಬಳಸುವ ವಸ್ತುಗಳನ್ನೊಮ್ಮೆ ನೀವು ಗಮನಿಸಬೇಕು. ಅದೊಂದು ಸಂಕಥನವೇ ರಚನೆಯಾಗುತ್ತದೆ. ಒಮ್ಮೆ ಎಲ್ಲರಿಗಿಂತಲೂ ಮುಂಚೆಯೇ ಬಸ್ಸಿನೊಳ ಹೊಕ್ಕು ಶತಾಯಗತಾಯ ಸೀಟನ್ನು ಹಿಡಿಯಲೇಬೇಕೆಂದು ಜನಜಂಗುಳಿಯ ಮಧ್ಯೆದಲ್ಲಿಯೇ ನುಸುಳಿ ಎದ್ದು ಬಿದ್ದು ಬಸ್ಸಿನೊಳಗೆ ಬಂದು ಡ್ರೈವರ್ ಹಿಂದಿನ ಸೀಟಿನಿಂದ ಹುಡುಕಲಾರಂಭಿಸಿದೆ. ಡ್ರೈವರ್ ಹಿಂದಿನ ಮೊದಲನೇ ಮೂರು ಜನರ ಸೀಟಿನಲ್ಲಿ ಒಂದು ಉದ್ದನೆಯ ವಸ್ತ್ರವನ್ನು ಹಾಸಲಾಗಿತ್ತು ಹಾವಿನಂತೆ. ಸರಿ ಎರಡನೇ ಸೀಟಿನ ಕಡೆಗೆ ನೋಡಿದೆ. ಅಲ್ಲಿ ಮೂರು ಬುತ್ತಿಯ ಖಾಲಿ ಡಬ್ಭಿಗಳನ್ನು ಸೀಟಿಗೊಂದರಂತೆ ಜೋಡಿಸಿ ಇಡಲಾಗಿದೆ. ಮೂರನೇ ಸೀಟಿನಲ್ಲಿ ಕುಳಿತುಕೊಳ್ಳಲು ಹೋದರೆ ಆ ಸೀಟಿನಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು ತನ್ನ ಎರಡೂ ಕೈಗಳನ್ನಗಲಿಸಿ ನನ್ನ ಗೆಳತಿಯರು ಬರ್ತಾರೆ ಇಲ್ಲಿ ಎಂದು ಸೀಟನ್ನು ಕಾಯ್ದಿರಿಸಿದ್ದಳು.
ಮುಂದಿನ ಸೀಟಿನತ್ತ ಚಿತ್ತ ಹರಿಸಿದೆ. ಅಲ್ಲಿಯೂ ಇದೇ ಪರಿಸ್ಥಿತಿ. ಹೀಗೆ ಖಾಲಿಯಿರುವ ಸೀಟುಗಳನ್ನು ಒಬ್ಬರು ಸುದ್ದಿಪತ್ರಿಕೆಯಿಂದ, ಮತ್ತೊಬ್ಬರು ನೀರಿನ ಬಾಟಲಿಯಿಂದ, ಮತ್ತೊಬ್ಬರು ತಮ್ಮ ಬ್ಯಾಗಿನಿಂದ, ಇನ್ನೊಬ್ಬರು ತಮ್ಮ ಕರವಸ್ತ್ರದಿಂದ, ಇನ್ಜೂ ವಿಶಿಷ್ಟವೆಂದರೆ ಪೋಲಿಸರೊಬ್ಬರು ತಮ್ಮ ಲಾಠಿಯಿಂದಲೇ ಸೀಟನ್ನು ಕಾಯ್ದಿರಿಸಿದ್ದರೆಂದರೆ ಸಾಮಾನ್ಯರ ಸಾರಿಗೆ ಅದೆಷ್ಟು ಜನಪ್ರಿಯವೆಂಬುದು ಗೊತ್ತಾಗುತ್ತದೆ. ಹೀಗೆ ನಮ್ಮ ಜನರು ತಮ್ಮ ತಮ್ಮ ಕೈಗೆಟುಕುವ ಸರಕು ಸರಂಜಾಮುಗಳಿಂದಲೇ ಸೀಟು ಕಾಯ್ದಿರಿಸುವ ಪ್ರಸಂಗವೇ ಸ್ವಾರಸ್ಯಕರ. ಇನ್ನೊಬ್ಬ ಹುಡುಗಿ ಸೀಟು ಕಾಯ್ದಿರಿಸುವುದಕ್ಕಾಗಿ ತನ್ನಲ್ಲಿ ಏನೂ ಇಲ್ಲದುದಕ್ಕಾಗಿ ತನ್ನ ಕೈಯ್ಯಲ್ಲಿರುವ ಬಳೆಗಳನ್ನೇ ಸೀಟಿನ ಮೇಲೆ ಹಾಕಿದ್ದಳು. ಬಸ್ಸು ನಿಲ್ದಾಣಕ್ಕೆ ಬರುತ್ತಿದ್ದುದನ್ನು ಕಂಡ ಹುಡುಗನೊಬ್ಬ ತಾನು ಹಾಕಿಕೊಂಡ ಅಂಗಿಯನ್ನು ಕಳಚಲಾರಂಭಿಸಿದ. ಇವನಿಗೇನೋ ಜಗಳ ಕಾದಿದೆ ಎಂದು ಚಕಿತನಾಗಿ ನೋಡುತ್ತಿದ್ದ ನಾನು ಇವನನ್ನು ಕೇಳಿದೆ ‘ಯಾಕೋ ಅಂಗಿ ಕಳೀತಾ ಇದ್ದೀಯಾ ? ಯಾರೊಂದಿಗೆ ಜಗಳ ? ಏನಾದ್ರೂ ಹೊಡೆದಾಟವಾಯ್ತೆ” ಎಂದು ಕೇಳಿದರೆ “ಇಲ್ಲ ಸರ್ ನಾನು ಅಂಗಿಯನ್ನು ಕಳಚಿದ್ದು ಸೀಟು ಹಿಡಿಯಲು!!” ಎನ್ನಬೇಕೆ ? ನಮ್ಮಂತಹ ಸಾಮಾನ್ಯರು ಹಾಗೂ ಮಧ್ಯಮರು ತಮ್ಮ ಸೀಟಿಗಾಗಿ ನೂರಾರು ಜನರನ್ನು ಸೇರಿಸಿ ಸಮಾವೇಶ ಮಾಡುವವರಲ್ಲ. ದೊಡ್ಡವರ ಲಿಂಕ್ ಹಿಡಿದು ಲಾಬಿ ಮಾಡುವವರೂ ಅಲ್ಲ. ಸೀರೆ ಕುಕ್ಕರ್ ಹಂಚುವವರೂ ಅಲ್ಲ. ಹಾಗೆಂದು ಕೊಟ್ಟರೆ ಬೇಡವೆನ್ನುವವರೂ ಅಲ್ಲ. ಅದಕ್ಕೆ ಬೇಂದ್ರೆಯವರು “ಜನ ಸಾಮಾನ್ಯ – ಇಂವ ಸಾಮಾನ್ಯ ಅಲ್ಲ” ಎಂದದ್ದು ವಿಶೇಷವಾಗಿದೆ.
ಇವರು ಟಾವೆಲ್ ಹಾಕಿದರೆ ಮುಗಿಯಿತು ಬೇರೆ ಯಾರೂ ಈ ಸೀಟನ್ನು ಆಕ್ರಮಿಸುವ ಹಾಗಿಲ್ಲ. ಆಕ್ರಮಿಸಿಕೊಂಡರೆ ಮುಗಿಯಿತು ಅವರ ಕಥೆ ಎಂದೇ ಅರ್ಥ. ಆದರೆ ದೊಡ್ಡವರು ಹಾಕುವ ಟಾವೆಲನ್ನು ಯಾರು ಯಾವಾಗ ತೆಗೆಯುತ್ತಾರೋ, ಎಷ್ಟು ಹೊತ್ತು ತೆಗೆಯುತ್ತಾರೋ, ತೆಗೆಯದೇ ಅದೇ ಟಾವೆಲ್ ಮೇಲೆ ಅದೆಷ್ಟು ಜನ ಗೊತ್ತಾಗದ ಹಾಗೆ ಹಾಕಿರುತ್ತಾರೋ ಹಾಕಿದವರಿಗೆ ಗೊತ್ತಿರುವುದಿಲ್ಲ. ಇದೇ ನಿಗೂಢ ರಹಸ್ಯ. ಬಸ್ಸಿನಲ್ಲಿ ಹಾಗಿಲ್ಲ ಎಲ್ಲವೂ ಖುಲ್ಲಂ ಖುಲ್ಲಾ. ಯಾರು ಹಾಕಿದ್ದಾರೆ ? ಯಾವ ಬಣ್ಣದ್ದು ಹಾಕಿದ್ದಾರೆ ? ಎಂಬದು ಕಣ್ಣಿಗೆ ರಾಚುವ ಸತ್ಯವಾಗಿರುತ್ತದೆ. ಒಮ್ಮೆ ಹಾಕಿದೆ ಮೇಲೆ ಮುಗಿಯಿತು. ಅದನ್ನು ತೆಗೆಯುವ ಹಾಗಿಲ್ಲ. ತೆಗೆದರೂ ಅವರೊಂದಿಗೆ ನೇರಾನೇರ ಹಣಾಹಣಿ. ಅಲ್ಲಿಯೇ ಲಾಟರಿ, ಅಲ್ಲೇ ಡ್ರಾ. ಒಳಗೊಂದು ಹೊರಗೊಂದು ಇಲ್ಲ. ಪ್ರತಿಷ್ಠೆ ಅಹಂಗಳ ಮೆರವಣಿಗೆ ಇಲ್ಲ. ಹುನ್ನಾರ, ಹಂಚಿಕೆಗಳ ಧಗೆ ಇಲ್ಲ. ಬೆನ್ನ ಹಿಂದಿನ ಚದುರಂಗವೂ ಅಲ್ಲಿರುವುದಿಲ್ಲ. “ಅಣ್ಣಾ ನಾನು ಪೇಶಂಟ್ ಅದಕ್ಕೆ ನಿಮ್ಮ ಟಾವೆಲ್ ತೆಗೆದು ನಾನು ಕೂತೆ.” ಅಂದರೆ ಮುಗಿಯಿತು ಕೆಲವೊಮ್ಮೆ ಅಭೂತಪೂರ್ವ ಸಂಧಾನ. ಮೆಚ್ಚಿಕೊಳ್ಳುವ ವ್ಯವಧಾನ. ಆಕಸ್ಮಾತ್ ಸೀಟಿಗಾಗಿ ಜಗಳವಾದರೂ ಅದರ ಕಂಪನ ತಮ್ಮೂರು ಬರುವವರೆಗೆ ಮಾತ್ರ. ಇಳಿದು ಹೋದ ನಂತರ ಅವರು ಯಾರೊ ನಾವು ಯಾರೊ ?
ಜಿ ಎಸ್ ಶಿವರುದ್ರಪ್ಪನವರ ಕವಿತೆ ನೆನಪಾಗುತ್ತದೆ –
ಹಣತೆ ಹಚ್ಚುತ್ತೇನೆ ನಾನೂ,
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ,
ಇರುವಷ್ಟು ಹೊತ್ತು ನಿನ್ನ ಮುಖ
ನಾನು, ನನ್ನ ಮುಖ ನೀನು
ನೋಡಬಹುದೆಂಬ ಒಂದೇ ಒಂದು ಆಸೆಯಿಂದ;
ಹಣತೆ ಆರಿದ ಮೇಲೆ, ನೀನು
ಯಾರೋ, ಮತ್ತೆ
ನಾನು ಯಾರೋ.

ಈ ತಾತ್ವಿಕತೆಯು ಬಸ್ಸಿನಲ್ಲಿ ಸೀಟಿಗಾಗಿ ಜಗಳ ಕಾಯುವವರಿಗೆ ದರ್ಶನಮಂತ್ರವಾಗಿದೆ. ಇದನ್ನು ಪಾಲಿಸಿದರೆ ಸಾಕು ಜಗಳಕ್ಕೆ ಯಾವ ಆಸ್ಪದವೂ ಇರುವುದಿಲ್ಲ. ನಾಯಕರ ಲೋಕದಲ್ಲಿ ಹಾಗಿಲ್ಲ. ಒಮ್ಮೆ ಜಗಳವಾದರೆ ಹಲವಾರು ವರ್ಷಗಳ ಕಾಲ ಬೂದಿ ಮುಚ್ಚಿದ ಕೆಂಡದ ಹಾಗೆ ಹೊಗೆಯಾಡುತ್ತಲೇ ಇರುತ್ತದೆ. ಯಾವಾಗ ಧಗೆಯೇಳುವುದೋ ಗೊತ್ತಾಗುವುದಿಲ್ಲ. ಇನ್ನೊಂದು ವಿಸ್ಮಯವೆಂದರೆ, ಒಂದು ಬಾರಿ ಬೆಳಗಾಗಿ ನಾನೆದ್ದು ಹೊರಡಲು ಬಸ್ಸಿನಲ್ಲಿ ಸೀಟುಗಳೆಲ್ಲಾ ಖಾಲಿ ಖಾಲಿ. ಆಹಾ ಎಂತಹ ಅದೃಷ್ಟ. ಬಾನು ನಕ್ಷತ್ರಗಳೇ ಕೆಳಗಿಳಿದಂತಹ ಅನುಭವ. ವಾಸ್ತವಿಕ ಲೋಕದಿಂದ ಜಿಗಿದು, ಕಾಲ್ಪನಿಕವಾದ ಸ್ವರ್ಗಲೋಕದಲ್ಲಿ ಸಂಚರಿಸಿದ ಪರಿಭಾವ. ಈ ಸೌಭಾಗ್ಯ ನಮ್ಮ ನಾಯಕರಿಗಿರುವುದು ಅಪರೂಪ. ಒಂದೊಂದು ಸೀಟಿಗೂ ಕನಿಷ್ಠ ಹತ್ತು ಮಂದಿಯನ್ನಾದರೂ ಸಂಭಾಳಿಸಬೇಕು. ಇನ್ನು ಖಾಲಿ ಇರುವುದೆಂತಹ ಮಾತು ?. ಕಷ್ಟಾತಿಕಷ್ಟ ಅವರ ಬಾಳ್ವೆ.
ಸಾರಿಗೆಲೋಕದಲ್ಲಿ ಈತರಹದ ಸೀಟು ಕಾಯ್ದಿರಿಸುವಿಕೆಯಿದ್ದರೆ, ವೈದ್ಯಲೋಕದಲ್ಲಿ ಇನ್ನೊಂದು ಬಗೆ. ಡಾಕ್ಟರರನ್ನು ಕಾಣಲು ನೋಂದಣಿ ಮಾಡಿಸಿ ಅಲ್ಲಿ ಟಾವೆಲ್ ಹಾಕಿ ಹೋಗುತ್ತೇವೆಂದರೆ ಶುಶ್ರೂಷಕರಿಗೆ ಎಲ್ಲಿಲ್ಲದ ಕೋಪ. ಜ್ವರ ನಿಮಗೆ ಬಂದಿದೆಯೋ ಟಾವೆಲ್ಲಿಗೆ ಬಂದಿದೆಯೋ ಸುಮ್ಮನೆ ಕೂಡ್ರಿ ಎಂದು ಗದರಿಸಿಕೊಂಡಿದ್ದೇನೆ. ಹಿಟ್ಟಿನ ಗಿರಣಿಯಲ್ಲಾದರೆ ತಂದ ಡಬ್ಬಿಗೆ ಕಿವಿಮಾತು ಹೇಳಿ ಹೋಗಬಹುದು. ರೇಷನ್ ಆಂಗಡಿಯಲ್ಲಿ ನಾವು ತಂದ ಚೀಲಗಳನ್ನೇ ಸಮಾಧಾನ ಮಾಡಿ ಸರದಿಗಾಗಿ ಇಟ್ಟುಹೋಗಬಹುದು. ಕುಡಿಯುವ ನೀರಿಗಾಗಿ ತಂದ ಕೊಡಗಳಿಗೆ ಖಾಲಿ ಇದ್ದರೆ ಸಪ್ಪಳ ಮಾಡಲಾಗುವುದಿಲ್ಲ ಎಂದು ಬುದ್ಧಿ ಹೇಳಿ ಪಾಳಿ ಇಟ್ಟು ಹೋಗಬಹುದು. ಪೆಟ್ರೋಲ್ ಡೀಸೆಲ್ ಗಾಗಿ ತಂದ ಗಾಡಿಯನ್ನೇ ಹೊಟ್ಡೆ ತುಂಬಿಸುವ ಆಸೆಯಿಂದ ಪಾಳಿಯಲ್ಲಿ ನಿಲ್ಲಿಸಿ ಹೋಗಬಹುದು ಆದರೆ ವೈದ್ಯರ ಹತ್ತಿರ ಹೋಗುವಾಗ ಮಾತ್ರ ಈ ಯಾವ ತಂತ್ರಗಳೂ ಉಪಯೋಗವಾಗುವುದಿಲ್ಲ. ಏಕೆಂದರೆ ಚಿಕಿತ್ಸೆ ನಮ್ಮ ದೇಹಕ್ಕೆ ಇರುವುದರಿಂದ ನಾವೇ ಸೀಟನ್ನು ಕಾಯ್ದಿರಿಸಬೇಕೆ ವಿನಹ ನೀನೊಮ್ಮೆ ಒಡಲುಗೊಂಡು ಬಾ ಸರದಿಗಾಗಿ ಎಂದು ಭಗವಂತನನ್ನು ಕರೆದು ಕೂಡ್ರಿಸಲಾಗದು.
ಸಿದ್ಧೇಶ್ವರ ಸ್ವಾಮಿಗಳ ಮಾತು ನೆನಪಾಗುತ್ತಿದೆ – “ಕುರ್ಚಿಗಳು ಅಲ್ಲೇ ಇರ್ತಾವ. ಕುಂತವರು ಎದ್ದು ಹೋಗತಾರ. ಮನೆಗಳು ಅಲ್ಲೇ ಇರತಾವ ಅದರೊಳಗಿರುವವರು ಹೋಗತಾರ.” ಇದೊಂದು ಮಾತು ಸಾಕು. ನಾವು ಯಾಕೆ ಸೀಟಿಗಾಗಿ ಜಗಳವಾಡಬಾರದು ಎಂಬುದಕ್ಕೆ.
ಬಸ್ಸಿನಲ್ಲಿ ಸೀಟು ಕಾಯಿದಿಸುವ ದೈನಂದಿನ ಜೀವನದ ಸಾಮಾನ್ಯ ಅನುಭವವನ್ನು ಹಾಸ್ಯ ಭರಿತವಾಗಿ ರಸವತ್ತಾಗಿ ನಿರೂಪಿಸಿ, ಅದನ್ನು ಬದುಕಿನ ತತ್ವಗಳೊಂದಿಗೆ, ರಾಜಕೀಯದ ವಾಸ್ತವ ಗುದ್ದಾಟದೊಂದಿಗೆ ಸಮೀಕರಿಸಿ, ಕೊನೆಗೆ ಬದುಕಿನ ಸತ್ಯವನ್ನ ತೆರೆದಿಡುವ ತಮ್ಮ ಪ್ರಬಂಧ ಬಹಳ ಚೆನ್ನಾಗಿದೆ. ಎಲ್ಲಿಯೂ ತಾರ್ಕಿಕವಾಗಿ ಭಾರವೆನಿಸದೇ ಕ್ಲಿಷ್ಟ ವಿಷಯಗಳನ್ನು ಅತ್ಯಂತ ಸರಳವಾಗಿ , ಮನೋಜ್ಞವಾಗಿ ಓದುಗರಿಗೆ ತಲುಪಿಸುತ್ತದೆ.