ಸಿ ಎಸ್ ಭೀಮರಾಯ ಓದಿದ ‘ಚಾರಿತ್ರಮೇರು ಅತ್ತಿಮಬ್ಬೆ’

ಸಿ ಎಸ್ ಭೀಮರಾಯ

ಸಮಕಾಲೀನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಡಾ. ಬಾಳಾಸಾಹೇಬ ಲೋಕಾಪುರ ಒಂದು ವಿಶಿಷ್ಟ ಪ್ರತಿಭೆ. ಕಳೆದ ನಾಲ್ಕು ದಶಕಗಳಿಂದ ಅವರು ಕಥೆಗಾರರಾಗಿ, ಕಾದಂಬರಿಕಾರರಾಗಿ, ವಿಮರ್ಶಕರಾಗಿ ಮತ್ತು ಸಂಶೋಧಕರಾಗಿ ಹಲವಾರು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.

‘ಚಾರಿತ್ರಮೇರು ಅತ್ತಿಮಬ್ಬೆ’ ಡಾ. ಬಾಳಾಸಾಹೇಬ ಲೋಕಾಪುರ ರಚಿಸಿದ ಐತಿಹಾಸಿಕ ಕಾದಂಬರಿ. ಅವರು ಹತ್ತನೆಯ ಶತಮಾನದ ಐತಿಹಾಸಿಕ ವಸ್ತುವನ್ನು ಕೈಗೆತ್ತಿಕೊಂಡು ‘ಚಾರಿತ್ರಮೇರು ಅತ್ತಿಮಬ್ಬೆ’ ಕಾದಂಬರಿಯನ್ನು ಬರೆಯುವ ಸಾಹಸ ಮಾಡಿದ್ದಾರೆ. ಸಾಮಾಜಿಕ ಕಾದಂಬರಿಗಳನ್ನೇ ಹೆಚ್ಚಾಗಿ ಬರೆದವರು ಐತಿಹಾಸಿಕ ಕಥೆ-ಕಾದಂಬರಿಗಳ ರಚನೆಗೆ ತೊಡಗುವ ಸಾಹಸ ಮಾಡುವುದು ಅಪರೂಪ. ವರ್ತಮಾನ ಕಾಲದಲ್ಲಿ ನಿಂತು ಕಾಣದೇ ಇರುವ ಭೂತಕಾಲದ ಘಟನೆಗಳನ್ನು ಕಾದಂಬರಿಯ ರೂಪದಲ್ಲಿ ಬರೆಯುವುದು ಸ್ವಲ್ಪ ಕಷ್ಟಕರವಾದುದು. ಲೋಕಾಪುರರ ‘ಚಾರಿತ್ರಮೇರು ಅತ್ತಿಮಬ್ಬೆ’ ಕಾದಂಬರಿ ಬಹುತೇಕ ವಾಸ್ತವಾಂಶಗಳ ನೈಜ ಪ್ರತಿಪಾದನೆಯೇ ಆಗಿದೆ.

ರನ್ನನ ‘ಅಜಿತನಾಥ ಪುರಾಣ’, ಪಂಪನ ‘ಆದಿಪುರಾಣ’, ಪೊನ್ನನ ‘ಶಾಂತಿಪುರಾಣ’ ಮತ್ತು ‘ಲಕ್ಕುಂಡಿ ಶಾಸನ’ ಮುಂತಾದ ಸಂಶೋಧನಾತ್ಮಕ ಕೃತಿಗಳನ್ನೆಲ್ಲ ಅಧ್ಯಯನ ಮಾಡಿಯೇ ಅವರು ಒಂದು ಖಚಿತ ನಿಲುವಿಗೆ ಬಂದು ಈ ಕಾದಂಬರಿ ರಚಿಸಿದ್ದಾರೆ. ಈ ನಿಲುವಿನಲ್ಲಿ ತರ್ಕಬದ್ಧತೆಯೂ ಇರುವುದರಿಂದ ಕಾದಂಬರಿ ಸಹಜವಾಗಿಯೇ ಕುತೂಹಲಕಾರಿಯಾಗಿದೆ. ಲೋಕಾಪುರರ ಕಾದಂಬರಿಗಳನ್ನು ಓದುವುದು ಒಂದು ವಿಶಿಷ್ಟ ಅನುಭವವಾಗುವುದಕ್ಕೆ ಒಂದು ಕಾರಣ ವಿವರಗಳನ್ನು ಕಲಾತ್ಮಕವಾಗಿ ಬಳಸಿಕೊಂಡು, ಕಾದಂಬರಿಯಲ್ಲಿ ಅಸಾಧಾರಣ ಶಿಲ್ಪ ವಿನ್ಯಾಸವನ್ನು ಸಾಧಿಸುತ್ತಾರೆ ಎಂಬುದು. ಇದು ಅವರ ಕಾದಂಬರಿಗಳನ್ನೋದುವಾಗ ನಾವು ನೆನಪಿಡಬೇಕಾದ ಸಂಗತಿ.

ಬಾಳಾಸಾಹೇಬ ಲೋಕಾಪುರರು ವಿವಿಧ ಮೂಲಗಳಿಂದ ವಿಷಯ ಸಂಗ್ರಹಿಸಿ ಮತ್ತು ಐತಿಹಾಸಿಕ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ನಿಜವಾದ ಚಾರಿತ್ರಿಕ ಕಾದಂಬರಿಯನ್ನು ಬರೆದಿದ್ದಾರೆ. ಚಾರಿತ್ರಿಕ ಕಾದಂಬರಿ ಬರೆಯುವವರ ಆಸಕ್ತಿ ಒಂದು ಯುಗದಲ್ಲಿ, ಚಾರಿತ್ರಿಕ ಅವಧಿಯಲ್ಲಿ ಇರಬಹುದು; ಇಲ್ಲವೇ ಚಾರಿತ್ರಿಕ ವ್ಯಕ್ತಿಗಳಲ್ಲಿರಬಹುದು. ಕಾದಂಬರಿಕಾರ ಚಾರಿತ್ರಿಕ ವ್ಯಕ್ತಿಗಳಲ್ಲಿ ಆಸಕ್ತಿ ಹೊಂದಿರಬಹುದು. ಲೋಕಾಪುರರ ಆಸಕ್ತಿ ಇಂಥದು. ಅವರ ಈ ಐತಿಹಾಸಿಕ ಕಾದಂಬರಿ ನಾಡಿನ ಚರಿತ್ರೆಯಲ್ಲಿ ಧೀರರಾಗಿ, ವಿವೇಕವಂತರಾಗಿ, ಆದರ್ಶ ವ್ಯಕ್ತಿಗಳಾಗಿ ಬಾಳಿದವರ ವ್ಯಕ್ತಿತ್ವವನ್ನು ಬೆಳಗುವ ಪ್ರಯತ್ನ. ಮಹಾನ್ ವ್ಯಕ್ತಿಗಳ ಚಿತ್ರಣ ಮುಖ್ಯ ಉದ್ದೇಶವಾದರೂ, ಯುಗವೂ ಹಿನ್ನೆಲೆಯಲ್ಲಿ ತಕ್ಕಷ್ಟು ಪ್ರಧಾನವಾಗಿಯೇ ರೂಪ ತಾಳುತ್ತದೆ. ಆದ್ದರಿಂದ ಲೋಕಾಪುರರ ಈ ಐತಿಹಾಸಿಕ ಕಾದಂಬರಿ ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಕೃತಿ.

ಇದು ಅತ್ತಿಮಬ್ಬೆ, ರನ್ನ ಮತ್ತು ಚಾವುಂಡರಾಯರ ಜೀವನವನ್ನು ಕುರಿತಾದ ವಿಶಿಷ್ಟ ಕಾದಂಬರಿ. ಈ ಕಾದಂಬರಿ ಕರ್ನಾಟಕದ ಉಜ್ವಲ ಚರಿತ್ರೆಯ ಸುವರ್ಣ ಅಧ್ಯಾಯವೊಂದನ್ನು ಸಜೀವವಾಗಿಸಿದೆ. ಈ ಕಾದಂಬರಿಯಲ್ಲಿ ಮೂರು ಅಧ್ಯಾಯಗಳಿದ್ದು, ಅತ್ತಿಮಬ್ಬೆ, ರನ್ನ ಮತ್ತು ಚಾವುಂಡರಾಯರ ವ್ಯಕ್ತಿತ್ವವು ವಿಕಾಸವಾದ ಬಗೆಯನ್ನು ಸವಿವರವಾಗಿ ಚಿತ್ರಿಸಲಾಗಿದೆ. ರಾಜಕೀಯ, ಆಡಳಿತ, ರಾಜರ ಕ್ರೌರ್ಯ, ಯುದ್ಧಗಳು, ಶಾಸ್ತ್ರಗಳು, ಜಾತಿ, ಮತ, ನಿಸರ್ಗ, ನಮ್ಮ ಪೂರ್ವಿಕರು ಬದುಕಿದ ಬಗೆ ‘ಚಾರಿತ್ರಮೇರು ಅತ್ತಿಮಬ್ಬೆ’ ಕಾದಂಬರಿ ಚಿತ್ರಿಸುತ್ತದೆ. ಕಾವ್ಯಾನುಭವವನ್ನು ಜೊತೆಗೆ ವೈಚಾರಿಕತೆಯ ಸ್ಪಷ್ಟ ಹೊಳಹುಗಳನ್ನು ಏಕಕಾಲದಲ್ಲಿ ಒಂದು ಸೃಜನಾತ್ಮಕ ಅನುಭವವಾಗಿ ಕಟ್ಟಿಕೊಡುವುದರಲ್ಲಿ ಈ ಕಾದಂಬರಿ ನಮ್ಮನ್ನು ಸಂಪೂರ್ಣವಾಗಿ ಆವರಿಸಿಬಿಡುತ್ತದೆ. ಕರ್ನಾಟಕದ ಇತಿಹಾಸದಲ್ಲಿಯೇ ವಿಶಿಷ್ಟವಾಗಿ ನಿಲ್ಲುವ ಪಾತ್ರ ಅತ್ತಿಮಬ್ಬೆಯದು.

ಧರ್ಮ, ಆಡಳಿತ, ಸಂಸ್ಕೃತಿ ಮತ್ತು ರಾಜಕಾರಣ ಹೀಗೆ ಹಲವು ಕ್ಷೇತ್ರಗಳಲ್ಲಿ ಅತ್ತಿಮಬ್ಬೆ ಭಾರತೀಯ ಸಮಾಜಕ್ಕೆ ಆದರ್ಶ ಮಹಿಳೆ. ಅತ್ತಿಮಬ್ಬೆಯಲ್ಲಿ ಕಾಣುವುದು ಅಂತಃಕರಣ, ಅಹಿಂಸೆಗಳ ಮಹತ್ವ, ಪಾವಿತ್ರ್ಯ. ಈ ಕಾದಂಬರಿಯು ಅತ್ತಿಮಬ್ಬೆಯ ವ್ಯಕ್ತಿತ್ವ, ದಾನ, ಶೀಲ, ವ್ರತ ಚಾರಿತ್ರ್ಯ, ಮನುಷ್ಯ ಸ್ವಭಾವ, ಸಂಬoಧ, ಚರಿತ್ರೆ, ರಾಜಕಾರಣ, ದಯೆ, ನಂಬಿಕೆ, ಅಹಿಂಸೆ, ಜೈನ ಧರ್ಮದ ಆಚರಣೆಗಳು ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳ ಅನನ್ಯ ಲೋಕವನ್ನು, ಚರಿತ್ರೆಯಲ್ಲಿ ನಡೆದ ಅತ್ಯಂತ ಸೂಕ್ಷ್ಮ ಸಂಘರ್ಷಗಳನ್ನು, ಸಾಂಸ್ಕೃತಿಕ ವಾಗ್ವಾದವನ್ನು ಮತ್ತು ಸಾಮಾಜಿಕ ಬದಲಾವಣೆಯ ಪ್ರಕ್ರಿಯೆಯನ್ನು ದಾಖಲಿಸಿದೆ.

ನಾಗಮಯ್ಯ ಬಿಳಿ ಕುದುರೆಯ ಸವಾರನಾಗಿ ನಾಗಾಲೋಟದಿಂದ ಕರಾವಳಿ ಮಾರ್ಗವಾಗಿ ಬರುವುದು, ಮಲ್ಲಪಯ್ಯ ಅಪ್ಪಕಬ್ಬೆಯನ್ನು ಮದುವೆಯಾಗುವುದು, ಮಲ್ಲಪಯ್ಯ ಮತ್ತು ಅಪ್ಪಕಬ್ಬೆಯರು ಮಕ್ಕಳಾದ ಅತ್ತಿಮಬ್ಬೆ ಮತ್ತು ಗುಂಡಮಬ್ಬೆಯರನ್ನು ಪ್ರೀತಿ-ವಾತ್ಸಲ್ಯದಿಂದ ಬೆಳೆಸುವುದು, ಅತ್ತಿಮಬ್ಬೆ ಮತ್ತು ಗುಂಡಮಬ್ಬೆಯರು ಶಸ್ತç ಮತ್ತು ಶಾಸ್ತ್ರ ಅಭ್ಯಾಸ ಮಾಡುವುದು, ಅತ್ತಿಮಬ್ಬೆ ಮತ್ತು ಗುಂಡಮಬ್ಬೆಯರ ವಿವಾಹ ನಾಗದೇವನೊಂದಿಗೆ ಜರುಗುವುದು, ನಾಗದೇವ ತನ್ನ ಇಬ್ಬರೂ ಪತ್ನಿಯರನ್ನು ತನ್ನ ರಾಜಧಾನಿಗೆ ಕರೆದುಕೊಂಡು ಹೋಗುವುದು, ರನ್ನ ಜಂಬುಖ೦ಡಿಯಲ್ಲಿ ವಿದ್ಯಾಭ್ಯಾಸ ಮಾಡುವುದು, ರನ್ನನು ರಾಚಮಲ್ಲ ದೊರೆಯನ್ನು ಭೇಟಿಯಾಗುವುದು, ತೈಲಪ ದೊರೆ ಮುಂಜ ರಾಜನ ಮೇಲೆ ಯುದ್ಧ ಮಾಡುವುದು, ಇರಿವ ಬೆಡಂಗ ಸತ್ಯಾಶ್ರಯ ಸಾಮ್ರಾಜ್ಯವನ್ನು ವಿಸ್ತರಿಸುವುದು, ನಾಗದೇವ ತನ್ನ ಪರಾಕ್ರಮದಿಂದ ರಾಷ್ಟ್ರಕೂಟರನ್ನು ಮತ್ತು ಅವರ ಮಾಂಡಲೀಕರಾದ ಗಂಗರನ್ನು ಸೆದೆಬಡಿಯುವುದು, ಅತ್ತಿಮಬ್ಬೆಗೆ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡುವುದು, ಹುಟ್ಟಿದ ಮಗುವಿಗೆ ‘ಅಣ್ಣಿಗದೇವ’ ಎಂದು ನಾಮಕರಣ ಮಾಡುವುದು, ನಾಗದೇವ ಯುದ್ಧದಲ್ಲಿ ಸಾವನ್ನಪ್ಪುವುದು, ಗುಂಡಮಬ್ಬೆಯು ಪತಿ ನಾಗದೇವನೊಂದಿಗೆ ಸಹಗಮನ ಮಾಡುವುದು, ಸತ್ಯಾಶ್ರಯನು ಅಣ್ಣಿಗದೇವನನ್ನು ಅಧಿಕಾರಿಯಾಗಿ ನೇಮಿಸುವುದು, ಅತ್ತಿಮಬ್ಬೆ ಮಹಿಳಾ ಸೇನೆಯನ್ನು ತರಬೇತಿಗೊಳಿಸುವುದು, ತೈಲಪ ಚಕ್ರವರ್ತಿ ಯುದ್ಧಕ್ಕೆ ಬರುವುದು, ಪುನ್ನಮಯ್ಯ ತನ್ನೆಲ್ಲ ಸೈನ್ಯವನ್ನು ಒಗ್ಗೂಡಿಸಿಕೊಂಡು ಯುದ್ಧಕ್ಕೆ ಹೊರಡುವುದು, ಚಾವುಂಡರಾಯ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರ ಮೂರ್ತಿಯನ್ನು ನಿರ್ಮಿಸುವುದರೊಂದಿಗೆ ಮಸ್ತಕಾಭಿಷೇಕ ನಡೆಸುವುದು, ಅತ್ತಿಮಬ್ಬೆ ಶ್ರವಣಬೆಳಗೊಳಕ್ಕೆ ಭೇಟಿ ನೀಡುವುದು, ರನ್ನ ‘ಅಜಿತನಾಥ ಪುರಾಣತಿಲಕ’ ಮತ್ತು ‘ಗದಾಯುದ್ಧ’ ಬರೆಯುವುದು -ಹೀಗೆ ಮುಂತಾದ ವಾಸ್ತವಿಕ ಜೀವನದ ಘಟನೆಗಳನ್ನು ಕಾದಂಬರಿ ಕಲಾತ್ಮಕವಾಗಿ ದಾಖಲಿಸಿದೆ. ಕಾದಂಬರಿ ಈ ಎಲ್ಲ ಘಟನೆಗಳ ವರ್ಣಮಯ ಆವರಣದೊಂದಿಗೆ ಸಹಜವಾಗಿಯೇ ಆಕರ್ಷಕವಾಗಿದೆ.

‘ಚಾರಿತ್ರಮೇರು ಅತ್ತಿಮಬ್ಬೆ’ ಕಾದಂಬರಿಯಲ್ಲಿ ಅತ್ತಿಮಬ್ಬೆಯದೇ ಮುಖ್ಯ ಪಾತ್ರವೆಂದು ಹೇಳುವ ಅಗತ್ಯವಿಲ್ಲ. ಆ ಪಾತ್ರವೇ ಈ ಕಾದಂಬರಿಯ ಕೇಂದ್ರಬಿ೦ದು. ಅತ್ತಿಮಬ್ಬೆ ಹತ್ತನೆಯ ಶತಮಾನದ ಉತ್ತರಾರ್ಧ ಮತ್ತು ಹನ್ನೊಂದನೆಯ ಶತಮಾನದ ಮೊದಲ ಭಾಗದಲ್ಲಿ ಜೀವಿಸಿದವಳು. ಅವಳ ಪೂರ್ವಜರು ಈಗಿನ ಆಂಧ್ರಪ್ರದೇಶದಲ್ಲಿರುವ ವೆಂಗಿಮ೦ಡಲದ ಪುಂಗನೂರಿನ ಪ್ರದೇಶದಿಂದ ಬಂದವರು. ಮಲ್ಲಪಯ್ಯ ಮತ್ತು ಅಪ್ಪಕಬ್ಬೆ ಅವಳ ತಂದೆ-ತಾಯಿಯರು. ಅವಳ ತಂದೆಯು ಕಲೆ ಮತ್ತು ಸಾಹಿತ್ಯಗಳ ದೊಡ್ಡ ಪೋಷಕನಾಗಿದ್ದನು. ತನ್ನ ಪತಿ ಮತ್ತು ಸಹೋದರಿಯನ್ನು ಕಳೆದುಕೊಂಡ ವಿಷಾದದಲ್ಲಿ ಮುಳುಗಿದ ಅತ್ತಿಮಬ್ಬೆಯು ದುಃಖವನ್ನು ಕಳೆದುಕೊಂಡು ಧಾರ್ಮಿಕವಾದ ಸರಳ ಜೀವನವನ್ನು ನಡೆಸಿದಳು. ಅವಳ ಜೀವನವು ಸಾಹಿತ್ಯ ಮತ್ತು ಕಲೆಗಳ ಪುನರುಜ್ಜೀವನಕ್ಕೆ ಮೀಸಲಾಯಿತು.

ಪರೋಪಕಾರದಲ್ಲಿ ಮಗ್ನವೂ, ಅತ್ಯಂತ ಸರಳವೂ ಆದ ಜೀವನವನ್ನು ನಡೆಸಿದ ಅತ್ತಿಮಬ್ಬೆಯು ದಾನಚಿಂತಾಮಣಿ, ಕವಿವರ ಕಾಮಧೇನು, ಜಿನಶಾಸನದೀಪಿಕೆ, ಅಕಲಂಕಚರಿತೆ ಎಂಬ ಮೊದಲಾದ ಬಿರುದಗಳನ್ನು ಪಡೆದವಳು. ಅತ್ತಿಮಬ್ಬೆಯು ಲಕ್ಕುಂಡಿಯಲ್ಲಿ ಒಂದು ವಿಶಾಲವಾದ ಜೈನ ಬಸದಿಯನ್ನು ನಿರ್ಮಿಸಿದಳು. ಆ ದೇವಾಲಯದ ನಿರ್ವಹಣೆಗೆ ಅಗತ್ಯವಾದ ದಾನ-ದತ್ತಿಗಳನ್ನೂ ಅವಳೇ ನೀಡಿದಳು. ರತ್ನಖಚಿತವಾದ ಬಂಗಾರದ ಜಿನಬಿಂಬಗಳನ್ನು ಮಾಡಿಸಿ ಭಕ್ತರಿಗೆ ದಾನವಾಗಿ ನೀಡಿದಳು. ರನ್ನನ ‘ಅಜಿತಪುರಾಣ’ ಮತ್ತು ಪೊನ್ನನ ‘ಶಾಂತಿಪುರಾಣ’ ಕಾವ್ಯಗಳ ಹಲವಾರು ಪ್ರತಿಗಳನ್ನು ಓಲೆಗರಿಗಳ ಮೇಲೆ ಬರೆಯಿಸಿ ವಿದ್ವಾಂಸರಿಗೆ ವಿತರಣೆ ಮಾಡಿದಳು. ಅವಳು ಸ್ವತಃ ಕಾವ್ಯ ಬರೆಯದಿದ್ದರೂ ಮಹಾಕಾವ್ಯದ ಬಾಳನ್ನು ಬಾಳಿದಳು. ರನ್ನನಂಥ ವರಕವಿಗಳಿಗೆ ಸ್ಫೂರ್ತಿ-ಆಶ್ರಯ ಕೊಟ್ಟಳು. ನಾಗದೇವ ಮತ್ತು ಅಣ್ಣಿಗದೇವರಂಥ ರಣಕಲಿಗಳಿಗೆ ಉತ್ಸಾಹ ತುಂಬಿದಳು. ಮುನಿಗಳಿಗೆ ಆತ್ಮಾನುಸಂಧಾನದ ಧ್ಯಾನಕಾರ್ಯದಲ್ಲಿ ನೆರವಾದಳು. ನಾಡಿನಾದ್ಯಂತ ನೂರಾರು ಚೈತ್ಯಾಲಯಗಳನ್ನು ನಿರ್ಮಿಸುವುದರ ಮೂಲಕ ಧಾರ್ಮಿಕ ಚೈತನ್ಯವನ್ನು ಸಾಮಾನ್ಯ ಚೇತನದಲ್ಲೂ ತುಂಬಿ ಹರಿಯಿಸಿದ ಮಹಾಚೇತನವಾದಳು. ಬೇಡಿದವರಿಗೆ ಅವರು ಬೇಡಿದ್ದನ್ನು ತಡಮಾಡದೆ ತಕ್ಷಣವೇ ಹಿಡಿ ಹಿಡಿಯಾಗಿ ‘ಹಿಡಿ-ಹಿಡಿ’ ಎಂದು ಮುಕ್ತಹಸ್ತದಿಂದ ನೀಡಿದಳು; ತನ್ನದೆಂಬ ಸರ್ವಸ್ವವನ್ನೂ ಧರ್ಮಕ್ಕಾಗಿ, ಜನಸಾಮಾನ್ಯರ ಒಳಿತಿಗಾಗಿ ದಾನಮಾಡಿದಳು ಅತ್ತಿಮಬ್ಬೆ. ಅವಳು ವೀರಮಾತೆ ಮತ್ತು ಮಾತೃವಾತ್ಸಲ್ಯದ ಪ್ರತೀಕ. ಯುದ್ಧ ವಿನಾಶವಾಗಿ, ಜಗತ್ತಿನಲ್ಲಿ ಶಾಂತಿ ನೆಲೆಸಲಿ, ಅಹಿಂಸೆ ಮುಂದಾಗಲಿ, ಸಹಬಾಳ್ವೆ -ಸಹಜೀವನದ ನೆಮ್ಮದಿಯ ಬದುಕು ಎಲ್ಲರದಾಗಲೆಂದು ಹಂಬಲಿಸಿದವಳು ಅತ್ತಿಮಬ್ಬೆ. ಮನುಷ್ಯ ಜನ್ಮದ ಘನತೆ, ಮಾನವಪ್ರೀತಿ, ದಾನ, ಧರ್ಮ-ದೇವರು, ಸ್ತ್ರೀ-ಪುರುಷ ಸಂಬಂಧಿತ ಅತ್ತಿಮಬ್ಬೆಯ ವಿಚಾರಧಾರೆ ಮತ್ತು ಚಿಂತನಕ್ರಮಗಳು ಪ್ರಬುದ್ಧವಾಗಿ, ಪರಿಣಾಮಕಾರಿಯಾಗಿ ಈ ಕಾದಂಬರಿಯಲ್ಲಿ ಮೂಡಿಬಂದಿವೆ. ಆದ್ದರಿಂದ ಅವಳ ಪೂರ್ಣ ವ್ಯಕ್ತಿತ್ವ ಈ ಕಾದಂಬರಿಯಲ್ಲಿ ಕಂಡುಬರುತ್ತದೆ. ಅವಳ ವೈವಾಹಿಕ ಬದುಕು, ರಾಜನೀತಿ, ಆಡಳಿತ, ಧಾರ್ಮಿಕ ವಿಚಾರ ಮತ್ತು ಸಾಧನೆಗಳೆಲ್ಲವನ್ನು ಲೋಕಾಪುರರು ನಿರೀಕ್ಷಿತ ಮಟ್ಟದಲ್ಲಿ ಕಟ್ಟಿಕೊಟ್ಟಿದ್ದಾರೆ.

ಹತ್ತನೇ ಶತಮಾನ ಕನ್ನಡನಾಡು, ಕವಿರತ್ನಗಳನ್ನು ಕಂಡ ವೈಭವದ ಕಾಲ. ಪಂಪ, ರನ್ನ, ಪೊನ್ನ ಮತ್ತು ಜನ್ನರಂಥ ಮಹಾಕವಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಶ್ರೇಷ್ಠ ಮಹಾಕಾವ್ಯಗಳನ್ನು ನೀಡಿದ ಮಹತ್ವದ ಯುಗ. ರನ್ನ ಕನ್ನಡದ ಚೊಕ್ಕ ಚಿನ್ನವೆಂದೇ ಪ್ರಖ್ಯಾತನಾಗಿದ್ದ ಹಳಗನ್ನಡದ ಮಹಾಕವಿ. ‘ರತ್ನತ್ರಯ’ರಲ್ಲಿ ಮೂರನೆಯವನು ಹಾಗೂ ‘ಕವಿ ಚಕ್ರವರ್ತಿ’ಗಳಲ್ಲಿ ಎರಡನೆಯವನು ಆದ ರನ್ನ ‘ಶಕ್ತ ಕವಿ’ ಎಂದೂ ಪ್ರಖ್ಯಾತ. ಬಹುಮುಖ ಪ್ರತಿಭಾ ಸಂಪನ್ನನಾದ ಮಹಾಕವಿ ರನ್ನ ಪಂಪನ ನಂತರದ ಅವನಷ್ಟೇ ಸರ್ವಶ್ರೇಷ್ಠನಾದ ಪ್ರಮುಖ ಕವಿ. ಚಾವುಂಡರಾಯ ತನಗೆ ಆಶ್ರಯ ನೀಡಿದುದರ ಸ್ಮರಣಾರ್ಥವಾಗಿ ರನ್ನ ತನ್ನ ಮಗನಿಗೆ ‘ರಾಯ’ ಎಂದು. ಇನ್ನೂ ಚಾವುಂಡರಾಯನ ನಂತರ ದಾನ ಚಿಂತಾಮಣಿ ಅತ್ತಿಮಬ್ಬೆ ತನಗೆ ಆಶ್ರಯ ನೀಡಿದುದರ ಸ್ಮರಣಾರ್ಥವಾಗಿ ರನ್ನ ತನ್ನ ಮಗಳಿಗೆ ‘ಅತ್ತಿಮಬ್ಬೆ’ ಎಂದು ಹೆಸರಿಟ್ಟನು. ಆದರೆ, ಪ್ರೀತಿಯಿಂದ ಅವನು ಮಗಳನ್ನು ‘ಅಬ್ಬೆ’ ಎಂದೇ ಕರೆಯುತ್ತಿದ್ದನು.

ಬಾಳಾಸಾಹೇಬ ಲೋಕಾಪುರರ ಈ ಕಾದಂಬರಿಯಲ್ಲಿನ ಮುಖ್ಯ ಪಾತ್ರಗಳು ಜೀವನದಲ್ಲಿ ನಾವು ಕಾಣುವ ಸಾಮಾನ್ಯ ಮನುಷ್ಯರನ್ನು ಮೀರಿದವು. ಅತ್ತಿಮಬ್ಬೆ ಪಾತ್ರದೊಂದಿಗೆ ಎದ್ದು ಕಾಣುವ ಪ್ರಮುಖ ಪಾತ್ರಗಳೆಂದರೆ ಮಲ್ಲಪಯ್ಯ, ಅಪ್ಪಕಬ್ಬೆ, ರನ್ನ, ಪೊನ್ನ, ನಾಗದೇವ, ಅಣ್ಣಿಗದೇವ, ಪುನ್ನಮಯ್ಯ, ಗುಂಡಮಬ್ಬೆ, ಜಕ್ಕಿ ಮತ್ತು ಚಾವುಂಡರಾಯರು. ಆದರೆ ಮಾನವ ಸಹಜ ನೆಲೆಯಲ್ಲಿ ಇವರ ಬದುಕು ಅನಾವರಣಗೊಳ್ಳುತ್ತದೆ. ಈ ಮಾನವೀಕರಣ ಲೋಕಾಪುರರ ಕಥನಧೋರಣೆಗೆ ಅನುಗುಣವಾಗಿಯೇ ಇದೆ. ಈ ಕಾದಂಬರಿಯಲ್ಲಿ ಜೈನಧರ್ಮದ, ತತ್ವಜ್ಞಾನದ ವಿವರಗಳು ಢಾಳಾಗಿ ಕಂಡರೂ ಅಲ್ಲೂ ಮುಖ್ಯವಾಗುವುದು ವರ್ತಮಾನದ ಜೈನ ಮನುಷ್ಯಲೋಕ ಮತ್ತು ಅದರ ಒಳಗಣ ದ್ವಂದ್ವ-ದುಗುಡಗಳೇ.

ಕಾದಂಬರಿಯಲ್ಲಿ ಮುಕ್ತಿ-ಮೋಕ್ಷಗಳಂತಹ ಕಲ್ಪನೆ-ಪರಿಕಲ್ಪನೆಗಳು ಕೆಲವೊಮ್ಮೆ ಜೈನನಂಬಿಕೆಗಳ ಹಿನ್ನೆಲೆಯಲ್ಲಿ ಪ್ರಸ್ತಾಪವಾಗುವುದುಂಟು. ಅದಕ್ಕೆ ಒಂದೇ ಕಾರಣವೆಂದರೆ ಅಲ್ಲಿನ ಹೆಚ್ಚಿನ ಪಾತ್ರಗಳೆಲ್ಲ ಜೈನರೇ ಆಗಿರುವುದು. ಲೋಕಾಪುರರ ಇದುವರೆಗಿನ ಎಲ್ಲ ಆಶಯಗಳು, ತಂತ್ರ, ಪ್ರಯೋಗಗಳು ಈ ಕಾದಂಬರಿಯಲ್ಲಿ ಕ್ರೋಢೀಕೃತವಾಗಿವೆ. ಹಿಂದಿನ ಕಾದಂಬರಿಗಳಲ್ಲಿ ಇರದಿದ್ದ ಒಂದು ನಿರ್ದಿಷ್ಟ ಮತಧರ್ಮ ಮತ್ತು ನಂಬಿಕೆಗಳ ಜಗತ್ತು ಇಲ್ಲಿ ಕಾಣಿಸಿಕೊಂಡಿದೆ. ಜೈನಧರ್ಮಕ್ಕೆ ಸೇರಿದ ಕೆಲವು ವ್ಯಕ್ತಿಗಳು ಮತ್ತು ಕುಟುಂಬಗಳ ಸುತ್ತ ಹೆಣೆಯಲಾಗಿರುವ ಈ ಕಥಾನಕದಲ್ಲಿ ಜೈನ ಸಮಾಜಕ್ಕೆ ಸೇರದ ಕೆಲವು ಪಾತ್ರಗಳು ಸಹ ಕಂಡುಬರುತ್ತವೆ. ಧಾರ್ಮಿಕ ಮೂಲಭೂತವಾದಗಳು, ಕೋಮುವಾದಗಳು ಮತ್ತು ಮತಾಂಧತೆಗಳ ವಿಕಾರ ಮುಖಗಳು ಮತ್ತೆ ತಲೆ ಎತ್ತುತ್ತಿರುವ ಇವತ್ತಿನ ದಿನಗಳಲ್ಲಿ ‘ಚಾರಿತ್ರಮೇರು ಅತ್ತಿಮಬ್ಬೆ’ಯ ಪ್ರಸ್ತುತತೆಯನ್ನು ಯಾರೂ ಅಲ್ಲಗಳೆಯಲಾಗದು.

ರನ್ನ ಮತ್ತು ಚಾವುಂಡರಾಯರು ಹಿಂಸೆಯನ್ನು ಖಂಡಿಸುವ ರೀತಿ ಹೀಗಿದೆ: “ಈ ಸಮರ ದುರಂಧರತೆ, ಹಿಂಸೆ, ಒಬ್ಬರನೊಬ್ಬರನ್ನು ಸೆದೆಬಡಿದು ರಕ್ತ ಕಕ್ಕಿಸಿ ಕೊಲ್ಲುವುದು….. ಇದಕ್ಕೆಲ್ಲಾ ಕೊನೆ ಎಂಬುದಿಲ್ಲ. ಅಹಿಂಸೆ ಮತ್ತು ಪರಮ ಶಾಂತಿ, ತ್ಯಾಗ ಮತ್ತು ಅಮತ್ಸರಗಳೇ ನಮ್ಮನ್ನು ಕಾಪಾಡುವ ಸಿದ್ಧ ಸೂತ್ರಗಳು”. “ತುಂಬ ಸುಯೋಗ್ಯವಾದ ಮಾತು ‘ಅಹಿಂಸಾ ಪರಮೋಧರ್ಮ’ ಎನ್ನುವ ಮೂಲ ಮಂತ್ರವನ್ನು ಪಠಿಸುತ್ತಲೇ ನಾವೆಲ್ಲ ಜಿನಾರಾಧನೆಗೆ ತೊಡಗಿದ್ದೇವೇ ಅಲ್ಲವೇ?”(ಪುಟ-೬೮). ಸಂಘರ್ಷದ ಸಮಯದಲ್ಲೂ ಮಾನವೀಯತೆ, ಸತ್ಯ, ಶಾಂತಿ ಮತ್ತು ಅಹಿಂಸೆಗಳನ್ನು ಬೋಧಿಸುತ್ತ ಹಾಗೂ ಪಾಲಿಸುತ್ತ ಬಂದ ಅತ್ತಿಮಬ್ಬೆ, ರನ್ನ ಮತ್ತು ಚಾವುಂಡರಾಯರ ಪಾತ್ರಚಿತ್ರಣ ಕಾದಂಬರಿಗೊಂದು ಆಳ ದೊರಕಿಸಿಕೊಟ್ಟಿವೆ. ರನ್ನ ಮತ್ತು ಅತ್ತಿಮಬ್ಬೆಯರು ಕೊನೆಯುಸಿರೆಳೆಯುವುದರೊಂದಿಗೆ ಈ ಕಾದಂಬರಿ ಮುಕ್ತಾಯವಾಗುತ್ತದೆ. ಈ ಸನ್ನಿವೇಶ ಚಿತ್ರಣ ಓದುಗರ ಹೃದಯ ಕರಗುವಂತಿದೆ. ಈ ಘಟನೆ ತುಂಬ ಗಂಭೀರವಾಗಿಯೂ ಮತ್ತು ನಿಗೂಢವಾಗಿಯೂ, ಅಷ್ಟೇ ನಾಟಕೀಯವಾಗಿಯೂ ಚಿತ್ರಿತವಾಗಿದ್ದು ಲೋಕಾಪುರರು ಇದನ್ನು ಬಹಳ ಜಾಗರೂಕತೆಯಿಂದ ನಿರ್ವಹಿಸಿದ್ದು ಸ್ಪಷ್ಟವಾಗಿ ಕಂಡುಬರುತ್ತದೆ.

ಐತಿಹಾಸಿಕ ಘಟನೆಗಳನ್ನು ಕ್ರಮಕ್ರಮವಾಗಿ ಹಾಗೂ ವಿವರಣಾತ್ಮಕವಾಗಿ ಕಟ್ಟಿಕೊಡುವ ‘ಚಾರಿತ್ರಮೇರು ಅತ್ತಿಮಬ್ಬೆ’ ಕಾದಂಬರಿಯ ಕಥನ ಕ್ರಮ ಆಕರ್ಷಕವಾಗಿದೆ. ಕಾದಂಬರಿಯ ಮುಖ್ಯ ಪಾತ್ರಗಳ ಮೂಲಕವೇ ಅದರ ಕಥೆ ಹೇಳಿಸಿದ್ದು ಮತ್ತು ಬೆಳೆಸಿದ್ದು ಲೋಕಾಪುರರು ಇಲ್ಲಿ ತೋರಿದ ತಂತ್ರದ ಹೊಸತನ, ತಮ್ಮ ಅನುಭವದ ಪರಿಧಿಯಲ್ಲಿ ಆಯಾ ಪಾತ್ರಗಳು ಕಥೆಯನ್ನು ಬಿಚ್ಚುತ್ತ ಹೋಗಿರುವ ಕ್ರಮ ಕಾದಂಬರಿಯ ಐತಿಹಾಸಿಕತೆಯನ್ನು ಗಟ್ಟಿಗೊಳಿಸಿದೆಯಷ್ಟೇ ಅಲ್ಲ; ಅದರ ವೈವಿಧ್ಯತೆಯನ್ನೂ ಹೆಚ್ಚಿಸಿದೆ. ಐತಿಹಾಸಿಕವಾದ ಎಲ್ಲ ಪಾತ್ರಗಳನ್ನು ಲೇಖಕರು ಯಾವ ವೈಭವೀಕರಣವಿಲ್ಲದೇ ಅತ್ಯಂತ ಸಹಜ ನೆಲೆಯಲ್ಲಿ ಚಿತ್ರಿಸಿರುವುದರಿಂದ ಈ ಪಾತ್ರಗಳೆಲ್ಲ ಜೀವಂತ ವ್ಯಕ್ತಿಗಳಂತೆ ಕಾಣುತ್ತಾರೆ. ಹೀಗಾಗಿಯೇ ಅವು ಓದುಗನೊಂದಿಗೆ ನೇರ ಸಂಪರ್ಕ ಪಡೆಯುತ್ತವೆ. ಈ ಕಾದಂಬರಿಯ ಪಾತ್ರ ಚಿತ್ರಣದಲ್ಲಿ ಲೋಕಾಪುರರ ನಿರ್ಲಿಪ್ತ ಮನೋಭಾವ ಕೆಲಸ ಮಾಡಿರುವುದು ಕಂಡುಬರುತ್ತದೆ. ಇದರಿಂದಾಗಿ ಈ ಕಾದಂಬರಿ ಆಕರ್ಷಕವಾಗಿರುವುದು ಸಹಜ.

ಲೋಕಾಪುರರ ದೃಶ್ಯಕಲ್ಪನಾಶಕ್ತಿ ಓದುಗರನ್ನು ಬೆರಗುಮಾಡುವಂಥದು. ಈ ಕಾದಂಬರಿ ಪ್ರಾರಂಭದಿ೦ದಲೇ ನಾವು ಬೇರೊಂದು ಲೋಕದಲ್ಲಿ ಇದ್ದಂತೆ ಭಾಸವಾಗುತ್ತದೆ. ನಮಗಿಂತ ಬಹು ಎತ್ತರದ ಭವ್ಯ ವ್ಯಕ್ತಿಗಳ ನಡುವೆ ಇರುವ ಅನುಭವ ಕೂಡಲೆ ಆಗುತ್ತದೆ. ಒಬ್ಬ ವ್ಯಕ್ತಿಯನ್ನಾಗಲಿ, ದೊಡ್ಡ ಸಮೂಹವನ್ನಾಗಲಿ ಅವರು ನಮ್ಮ ಮುಂದೆ ನಿಲ್ಲಿಸಬಲ್ಲರು. ಪರ್ವತಸದೃಶ ವ್ಯಕ್ತಿಗಳ ಅತ್ಯಂತ ಗಂಭೀರ ಸಂಭಾಷಣೆಯನ್ನಾಗಲಿ, ಚರ್ಚೆಯನ್ನಾಗಲಿ, ‘ಇವರು ಮಾತನಾಡಿದರೆ ಹೀಗೆಯೇ ಮಾತನಾಡುವರು’ ಎಂದು ನಮಗೆ ಎನ್ನಿಸುವಂತೆ ಭಾಷೆಯನ್ನು ಲೇಖಕರು ಹದಗೊಳಿಸಿದ್ದಾರೆ. ಕಾದಂಬರಿಯ ಭಾಷೆ, ಶೈಲಿ ಬಿಗುವಿನದಾಗಿದೆ. ಸಂಭಾಷಣೆಗಳ ಸಂದರ್ಭದಲ್ಲಿ ಅದು ಸಹಜವಾಗಿಯೇ ನಾಟಕೀಯ ಗುಣ ಪಡೆದಿದೆ. ಕೆಲವೊಂದು ಕಡೆ ಭಾಷಾಪ್ರಯೋಗದಲ್ಲಿ ಲೋಕಾಪುರರು ಸುಂದರ ಮತ್ತು ಆಕರ್ಷಕ ಸನ್ನಿವೇಶಗಳನ್ನು ಕಟ್ಟಿಕೊಟ್ಟಿದ್ದುಂಟು. ಕಾದಂಬರಿಗೆ ತೀವ್ರತೆ ಬಂದದ್ದು ಹಾಗೂ ಅದು ಅತ್ಯಂತ ಕುತೂಹಲಕಾರಿಯಾದದ್ದು ಲೋಕಾಪುರರು ಬಳಸಿರುವ ಕಾವ್ಯಾತ್ಮಕ ಭಾಷೆಯಿಂದ ಎಂದು ಹೇಳಿದರೆ ತಪ್ಪಲ್ಲ. ಈ ಎಲ್ಲ ಕಾರಣಗಳಿಂದ ‘ಚಾರಿತ್ರಮೇರು ಅತ್ತಿಮಬ್ಬೆ’ ಒಂದು ಉತ್ತಮ ಐತಿಹಾಸಿಕ ಕಾದಂಬರಿಯಾಗಿದೆ.

‍ಲೇಖಕರು Admin

February 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: