ಸಿ ಎಚ್ ಭಾಗ್ಯ ಓದಿದ ‘ಯಕ್’

ಸಿ ಎಚ್ ಭಾಗ್ಯ

ಮಾಂಟೋನನ್ನು ‘ಯಕ್..!!’ ಮೂಲಕ revisit ಮಾಡಲು ಅವಕಾಶ ನೀಡಿದ್ದಕ್ಕೆ ಮೊದಲಿಗೆ ನಿಮಗೆ ಒಂದು Thank you ಹೇಳುವೆ. ಮಾಂಟೋನ ಹೆಸರನ್ನು ಮೊದಲು ಕೇಳಿದ್ದು ಎಂ.ಎ ಓದುವಾಗ, ನಮ್ಮ ಘಟಾನುಘಟಿ ಮೇಷ್ಟ್ರುಗಳ ಬಾಯಿಂದ. ಪುಸ್ತಕಗಳ ಗೊಂಡಾರಣ್ಯದಲ್ಲಿ ಕಳೆದುಹೋಗುತ್ತಿದ್ದ ಸಮಯವದು. ಮಾಂಟೋ – ದೇಶವಿಭಜನೆಯ ತಲ್ಲಣ – ಎರಡು ಪದಗಳು ಅಚ್ಚೊತ್ತಿದ್ದವು. ನಂತರ ಮಾಂಟೋ ಎದೆಗಿಳಿದದ್ದು ಸಿರ್ಸಿಯ ಶ್ರೀಪಾದಭಟ್ಟರು ತಮ್ಮ ಕಾವ್ಯರಂಗ ಪ್ರಸ್ತುತಿಯ ಮೂಲಕ ಮಾಂಟೋನನ್ನು ಹೊಸ ವಿನ್ಯಾಸದಲ್ಲಿ ಎದುರಿಗಿಟ್ಟಾಗ. ಮತ್ತೆ ಮಾಂಟೋ ‘ಯಕ್…!!’ ಮೂಲಕ ಮುಖಾಮುಖಿಯಾಗಿದ್ದಾನೆ.

ಮಾಂಟೋನ ಈ ಹದಿನಾರು ಕತೆಗಳ ಆಯ್ಕೆಗೆ ನೀವು ನಿಮ್ಮ ಮಾತುಗಳಲ್ಲಿ ಕೊಟ್ಟಿರುವ ಕಾರಣಗಳು ಏನೇ ಇದ್ದರೂ ನಿಮ್ಮ ಆಯ್ಕೆಯ ಪ್ರಜ್ಞಾಪೂರ್ವಕ ತರ್ಕವನ್ನು ಮೀರಿ ಈ ಕತೆಗಳು ಒಂದು ವಿನ್ಯಾಸವನ್ನು ಹೊಂದಿವೆ. ಇದು ಸ್ಥೂಲವಾಗಿ ಮಾಂಟೋನ ಹುಡುಕಾಟ ಹಾಗೂ ಅವನ ಕತೆಗಳ ಹಿಂದಿನ ವಿನ್ಯಾಸವೂ ಹೌದೆಂದು ನನ್ನ ಅನಿಸಿಕೆ. ಒಬ್ಬ ಪ್ರತಿಭಾಶಾಲಿಯಾದ ಕವಿ, ಕಲಾವಿದ, ಕತೆಗಾರ ಬದುಕಿನ ನಿಗೂಢದ ಎಳೆಯನ್ನು ಹಿಡಿದು ಹೊರಡುತ್ತಾನೆ. ಅದು ಗೋಜಲಾದಷ್ಟೂ ಅವನ ಕೃತಶಕ್ತಿಗೆ ಸವಾಲಾಗಿ ಅದು ಬಹುಮುಖಿಯಾಗುತ್ತದೆ. ಯಾವುದೇ ದೈತ್ಯಪ್ರತಿಭೆ ಹರಳುಗಟ್ಟುವುದು, ಪ್ರವಹಿಸುವುದು, ಧುಮ್ಮಿಕ್ಕುವುದು, ಗುಪ್ತಗಾಮಿನಿಯೂ ಆಗಿಬಿಡುವುದು ಹೀಗೆ. ತಪ್ತ ಮನಸ್ಸು ಸೃಜನಶೀಲವಾದಷ್ಟು ತೀವ್ರವಾಗಿ ಪ್ರಶಾಂತ ಮನಸ್ಸು ಆಗುವುದಿಲ್ಲ. ಅದರ ಪ್ರಶಾಂತತೆ ಬದುಕಿನ ತರ್ಕವನ್ನು ಹುಡುಕಿ ತಾತ್ವಿಕವಾದ ಪರಿಹಾರ ಕಂಡುಕೊಂಡುಬಿಡುತ್ತದೆ. ಈ ಕುದಿಮನಸ್ಸು ಸ್ಫೋಟಗೊಳ್ಳುತ್ತಾ ಹೋಗುತ್ತದೆ. ಬದುಕಿನ ತರ್ಕಹೀನತೆಯೇ ಇದರ ಸೃಜನಶೀಲ ಸೆಲೆಯ ಮೂಲ. ಇಂತಹ ಕುದಿ ಮನಸ್ಸು ಮಾಂಟೋನದು. ಮಾಂಟೋನಿಗೆ ಒಲಿದು ಬೆರಗಾದ ಭಾರತಿಯ ಮನಸ್ಸು, ಪ್ರತಿಭೆ ಯಾವ ಬಗೆಯದು ಎಂದು ಇಲ್ಲಿ ಮತ್ತೆ ಹೇಳಬೇಕಾಗಿಲ್ಲ.

ಮಾಂಟೋನ ಕತೆಗಳ ವಿನ್ಯಾಸವನ್ನು ಗಮನಿಸಿದಾಗ, ಗಡಿಯ ಮೂಲಕ ದೇಶವನ್ನು ಕಂಡರಿಸುವ, ದೇಹದ ಮೂಲಕ ಹೆಣ್ಣನ್ನು ಗ್ರಹಿಸುವ ಪ್ರಭುತ್ವ/ಗಂಡಾಳ್ವಿಕೆಯ ಎರಡು ವಿಸಂಗತಿಗಳು ಅವನನ್ನು ಇನ್ನಿಲ್ಲದಂತೆ ಕಾಡಿ ಹಣ್ಣು ಮಾಡಿರುವುದು ಸ್ಪಷ್ಟವಾಗುತ್ತದೆ. ದೇಶದ ಭೌಗೋಳಿಕ ಗಡಿ ಪ್ರಭುತ್ವದ ನಿರ್ಧಾರ. ಜನರ ಮನಸ್ಸು, ಭಾವನೆಗಳು ಈ ಗೆರೆಗೆ ಕಾಣಿಸದು. ಇದೇ ರೀತಿ ದೇಹ ವ್ಯಾಪಾರಕ್ಕೆ ತೆತ್ತುಕೊಂಡ ಹೆಣ್ಣಿನ ದೇಹದೊಳಗೆ ಅವಿತಿಟ್ಟುಕೊಂಡ ಮನಸ್ಸು ಗಂಡಸಿಗೆ ಅಮುಖ್ಯ. ವಿಭಜನೆಯ ಗೀರು, ಹೆಣ್ಣಿನ ದೇಹದ ಮೇಲಿನ ಗೀರು ಗಾಯ, ಇವು ಜನರ ಮನೋಭೀಷ್ಟ, ಹೆಣ್ಣಿನ ವಾಂಛೆ ಇದಕ್ಕೆ ವಿರುದ್ಧವಾದುದಾದರೂ ಅಂತರಂಗವನ್ನು ಸಮಾಧಿ ಮಾಡಿ ಬಹಿರಂಗವನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಎರಡೂ ಸನ್ನಿವೇಶದಲ್ಲೂ.

ಇಲ್ಲಿ ಮೇಲುನೋಟಕ್ಕೆ ಯಾವುದು ಅತ್ಯಂತ ಸಹಜವೆಂದು ಅನಿಸುತ್ತದೋ ಅದು ಸಹಜವಲ್ಲವೇ ಅಲ್ಲ. ಹೆಣ್ಣೆಂದರೆ ಬರೀ ದೇಹವಲ್ಲ; ದೇಶವೆಂದರೆ ಬರೀ ಭೌಗೋಳಿಕ ಗಡಿಯಲ್ಲ. ಇವೆರಡೂ ಒಪ್ಪಿಸಿದ ವಾಸ್ತವಗಳಾಚೆ ಇರುವ ಮಿಡಿಯುವ ಮನಸ್ಸು, ಸ್ಪಂದಿಸುವ ಹೃದಯಗಳ ಸಂಕಟಗಳು, ಮೌನರಾಗಗಳು ಮಾಂಟೋನ ಕಾಳಜಿ. ಈ ಸಂಘರ್ಷಾತ್ಮಕ ವಾಸ್ತವವನ್ನು ಮಾಂಟೋ ಒಬ್ಬ ತೀರ್ಪುಗಾರನಾಗದೆ (judge mental) ತೆರೆದಿಟ್ಟಿರುವುದೇ ಅವನ ಕತೆಗಳ ಕಸುವು. ಆ ಕಸುವು ಎಳ್ಳಷ್ಟೂ ಶಕ್ತಿಗುಂದದೆ ‘ಯಕ್..!!’ ಮೂಲಕ ಕನ್ನಡಕ್ಕೆ ಬಂದಿರುವುದೇ ವಿಶೇಷ.

‘ಯಕ್..!!’ ನ ಹದಿನಾರು ಕತೆಗಳನ್ನು ಗೆರೆಕೊರೆದಂತೆ ಅಲ್ಲದಿದ್ದರೂ ಸ್ಥೂಲವಾಗಿ ವಿಭಾಗಿಸಬಹುದಾದರೆ ಒಂಬತ್ತು ಕತೆಗಳು ವೇಶ್ಯಾವಾಟಿಕೆಯ ಸುತ್ತ, ನಾಲ್ಕು ಕತೆಗಳು ದೇಶವಿಭಜನೆಯ ಸುತ್ತ ಮೂರು ಕತೆಗಳು ಪ್ರೀತಿ, ಪ್ರೇಮ, ಭೂಗತ ಲೋಕ… ಈ ವಸ್ತುವಿನ ಸುತ್ತ ಇವೆ. ದಾದಾಮಮ್ಮದ್‌ನಂತಹ, ಸೌಗಂಧಿಯಂತಹ ಲೋಕನಿಂದಿತರು ಮಾಂಟೋನ ಕರುಳು ಬಾಧಿಸುವವರು. ‘ಯಕ್..!!’ ಏಕಕಾಲಕ್ಕೆ ಒಂದು ಕತೆಯೂ ಕಥಾ ಸಂಕಲನದ ಕತೆಗಳ ಧ್ವನಿಯೂ ಆಗಿದೆ.

ಮೂಲಕತೆಗಳ ಶೀರ್ಷಿಕೆಗಳಿಗೆ ಕಟ್ಟುಬೀಳದೆ ಅದರ ಅಂತರಂಗಕ್ಕೆ ಹೊಂದುವ ಶೀರ್ಷಿಕೆ ನೀಡಿರುವುದು ಭಾರತಿಯ ಜಿಜ್ಞಾಸು ಪ್ರವೃತ್ತಿಗೆ ಪೂರಕವಾಗಿದೆ. ಸರಿತಾ ಎಂಬ ಮಾಯೆ ಕತೆ ಶೀರ್ಷಿಕೆಯಲ್ಲಿ ಮಾಯೆ ನೇತ್ಯಾತ್ಮಕ ಛಾಯೆಯನ್ನೂ, ಪ್ರೀತಿ ಗಂಡಸಿಗೆ ಉಸಿರು ಕಟ್ಟಿಸುತ್ತದೆ‌ ಎನ್ನುವ ಶೀರ್ಷಿಕೆಯು ಹೇಳಿಕೆಯ ರೂಪದಿಂದ ತುಸು ಸಡಿಲವಾಗುವುದನ್ನು ಬಿಟ್ಟರೆ ಉಳಿದೆಲ್ಲವೂ ಮಾಂಟೋ ಕನ್ನಡದಲ್ಲಿ ಬರೆದಿದ್ದರೆ ಇದೇ ಶೀರ್ಷಿಕೆ ಕೊಡುತ್ತಿದ್ದನೇನೋ ಅನಿಸುವಷ್ಟು ಸಹಜವಾಗಿವೆ.

ಈ ಅನುವಾದದ ಇನ್ನೊಂದು ವಿಶೇಷವೆಂದರೆ ಇಂಗ್ಲಿಷ್‌ನಿಂದ ಇದು ಅನುವಾದವಾಗಿದ್ದರೂ ಪ್ರತಿ ಕತೆಗಳ ಶರೀರ ಧರಿಸಿರುವ ಭಾಷೆ ಮೂಲದಲ್ಲಿ ಬೇರೆಯಾಗಿರಬಹುದಾದಂತೆ ಇಲ್ಲಿಯೂ ಬೇರೆಯಾಗಿದೆ. ಆಡು ಭಾಷೆ, ಕಾವ್ಯಮಯ ಭಾಷೆ, ಗಂಭೀರಭಾಷೆ… ಹೀಗೆ ಒಂದೊಂದು ಕತೆಯ ಲಯವೂ ಬೇರೆಯಾಗಿದೆ. ಬೇರೊಂದು ಭಾಷೆಯಿಂದ ಇಂಗ್ಲಿಷಿಗೆ ಬಂದು ಇಂಗ್ಲಿಷಿನಿಂದ ಅನುವಾದವಾಗುವ ಕೃತಿಗಳಲ್ಲಿ ಕಾಣುವ ಏಕತಾನತೆ ಇಲ್ಲಿ ಕಂಡುಬರುವುದಿಲ್ಲ.
ಮಾಂಟೋನ ಕತೆಗಳ ಅನೂಹ್ಯವಾದ ಕೊನೆ ಅದರಿಂದಾಗುವ ದಿಗ್ಭಾಂತಿ ಇವೆಲ್ಲಾ ಅನುವಾದದಲ್ಲೂ ಮುಕ್ಕಾಗದಂತೆ ಬಂದಿದೆ. ವ್ಯಾನ್ಗೋನ ವಿಕ್ಷಿಪ್ತತೆ, ಅರೇಬಿಯನ್ ನೈಟ್ಸ್‌ನ ಲವಲವಿಕೆ ಇಲ್ಲಿದೆ. ಯೆ ಕೌನ್ ಚಿತ್ರಕಾರ್ ಹೈ… ಯೆ ಕೌನ್ ಚಿತ್ರಕಾರ್ ಹೈ ಅಂತ ಮನಸ್ಸು ಬೆರಗಾಗುತ್ತದೆ.

ಜಾಗತಿಕ ಗುಣಮಟ್ಟದ ಪುಸ್ತಕಗಳನ್ನು ಕನ್ನಡದಲ್ಲಿ‌ ಪ್ರಕಟಿಸುತ್ತಿರುವ ಬಹುರೂಪಿಯ ಕಿರೀಟಕ್ಕೆ ‘ಯಕ್..!!’ ಮತ್ತೊಂದು ಗರಿ.

‍ಲೇಖಕರು Admin

June 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: