ಸಿರಾಜ್ ಹೊತ್ತು ಸಾಗುವ ಹೊರೆ..

ಹರೀಶ್ ಗಂಗಾಧರ್

—-

ಜನವರಿ 2021, ಭಾರತ ಕ್ರಿಕೆಟ್ ತಂಡದ ಸುದೀರ್ಘ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಭಾರತ ಆ ಸರಣಿಯಲ್ಲಿ ಪ್ರಬಲ ಆಸ್ಸಿಗಳು ಮೇಲೆ ಐತಿಹಾಸಿಕ 2-1ರ ಗೆಲುವು ಸಾಧಿಸಿತ್ತು. ಇಡಿಯ ಪ್ರವಾಸದಲ್ಲಿ ಶುಭಮನ್ ಗಿಲ್/ಪಂತ್/ಪೂಜಾರ ಆಟ ಮತ್ತು ರಹಾನೆಯ ನಾಯಕತ್ವ ನೆನೆಪಿನಲ್ಲಿ ಉಳಿದಿದೆ. ಆ ಸರಣಿ ನನಗೆ ಮತ್ತಷ್ಟು ವಿಶೇಷವಾಗಿದ್ದು ಮೊಹಮದ್ ಸಿರಾಜ್ ಅವರ ಸಾಧನೆಯಿಂದ.

ಮೊದಲ ಟೆಸ್ಟ್ ಅಡಿಲೇಡಿನಲ್ಲಿ ನಡೆಯಿತು. ಭಾರತ ಕೇವಲ 36ರನ್ಗಳಿಗೆ ಅಲ್ಔಟ್ ಆಗಿ ಹೀನಾಯ ಸೋಲು ಅನುಭವಿಸಿತು. ಮೊದಲ ಟೆಸ್ಟ್ ನಂತರ ತಂಡದ ನಾಯಕ ವಿರಾಟ್ ಕೊಹ್ಲಿ ತನ್ನ ಮೊದಲ ಮಗು ಹುಟ್ಟುವ ಸಮಯದಲ್ಲಿ ಮಡದಿಯ ಜೊತೆಯಲ್ಲಿರಬೇಕೆಂದು ತವರಿಗೆ ವಾಪಾಸ್ಸಾದರು. ಮಾಜಿ ಆಸ್ಟ್ರೇಲಿಯನ್ ಕ್ರಿಕೆಟ್ ದಿಗ್ಗಜರಾದ ರಿಕ್ಕಿ ಪಾಂಟಿಂಗ್, ಶೇನ್ ವಾರ್ನ್ ಆಸ್ಟ್ರೇಲಿಯಾ 4-0ಅಂತರದಲ್ಲಿ ಸುಲಭವಾಗಿ ಸರಣಿ ಗೆಲ್ಲುವುದೆಂದು ಭವಿಷ್ಯ ನುಡಿದರು.

ಭಾರತ ತೀವ್ರ ಮುದಾಲಿಕೆ, ಟ್ರೋಲ್ಗಳಿಗೆ ಗುರಿಯಾಯಿತು. ಅಷ್ಟರಲ್ಲಿ ತಂಡದಲ್ಲಿದ್ದ ಸಿರಾಜ್ಗೆ ಬರಸಿಡಲಿನಂತೆ ಇನ್ನೊಂದು ಸುದ್ದಿ ಬಂದು ಬಡಿದಿತ್ತು. ಅದು ಆತನ ಸ್ಫೂರ್ತಿಯಾದ ಪ್ರೀತಿಯ ತಂದೆಯ ಸಾವಿನ ಸುದ್ದಿ! ತಂದೆ ಅಂತ್ಯಸಂಸ್ಕರಕ್ಕೂ ಹೋಗದೆ ತಂಡ ಜೊತೆ ಉಳಿಯಲು ಸಿರಾಜ್ ನಿರ್ಧರಿಸಿದ! ಪಂದ್ಯವಾಡುವ ತಂಡಕ್ಕೆ ಆಯ್ಕೆಯಾದ.

ಈ ನಡುವೆ ಆಸ್ಟ್ರೇಲಿಯದಲ್ಲಿ ವರ್ಣಾಧಾರಿತ/ಧಾರ್ಮಿಕ ನಿಂದನೆಗು ಸಿರಾಜ್ ಒಳಗಾಗಿದ್ದ. ಪಂದ್ಯಾರಂಭಕ್ಕೆ ಮುನ್ನ ತಂಡಗಳು ರಾಷ್ಟ್ರಗೀತೆ ಆಡುವುದು ಕ್ರೀಡಾಚರಣೆಗಳಲ್ಲಿ ಒಂದು. “ಅಂದು ರಾಷ್ಟ್ರಗೀತೆಯಾಡುವಾಗ ಸಿರಾಜ್ ಕಣ್ಣೀರಿಡುತ್ತಿದ್ದ. ತಂದೆಯ ಸಾವು, ಧಾರ್ಮಿಕ ನಿಂದನೆಗಳು ಸಿರಾಜ್ನನ್ನ ಘಾಸಿಗಳಿಸಿದ್ದವು” ಎಂದು ಆಸ್ಟ್ರೇಲಿಯಾ ತಂಡದ ಆಟಗಾರ ಟಿಮ್ ಪೇನ್ ನೆನಪಿಸಿಕೊಳ್ಳುತ್ತಾನೆ. ದೇಶ ಪ್ರತಿನಿಧಿಸುವ ತಂದೆಯ ಆಸೆಯನ್ನ ಸಿರಾಜ್ ಪೂರೈಸಿದ್ದ. ಆದರೆ ಆ ಸಾಧನೆ ಸವಿಯಲು, ಗರ್ವದಿಂದ ಆನಂದಭಾಷ್ಪ ಹರಿಸಲು ತಂದೆ ಬದುಕುಳಿದಿರಲಿಲ್ಲ. ಮನದಲ್ಲಿ ದುಃಖ ಸಾಗರವನ್ನೆ ಅಡಗಿಸಿಟ್ಟು ಪಂದ್ಯವಾಡಿದ ಸಿರಾಜ್ ಆತ್ಮಸ್ಥೈರ್ಯ ಎಂತದ್ದು! ಸಿರಾಜ್ ಆ ಐತಿಹಾಸಿಕ ಸರಣಿಯಲ್ಲಿ 13ವಿಕೆಟ್ಗಳನ್ನ ಪಡೆದು ಭಾರತ ಸರಣಿ ಗೆಲ್ಲುವುದರಲ್ಲಿ ಪ್ರಮುಖ ಪಾತ್ರವಹಿಸಿದ.

ಭಾರತವನ್ನು ಪ್ರತಿನಿಧಿಸುವ ಸಿರಾಜ್ನಂತಹ ಆಟಗಾರರ ಮೇಲೆ ಮಾಧ್ಯಮ, ಹಗೆ ತುಂಬಿದ ಮನಸ್ಸುಗಳು ಸದಾ ನಿಗವಿಡುತ್ತದೆ. ಆತ ತಿಲಕವಿಡಿಸಿಕೊಳ್ಳಲಿಲ್ಲ, ತಂಡ ಗೆದ್ದು ಶ್ಯಂಪೇನ್ ಹಾರಿಸುವಾಗ ವೇದಿಕೆಯಲ್ಲಿರಲಿಲ್ಲವೆಂಬ ಕ್ಷುಲ್ಲಕ ಟೀಕೆಗೆ ಗುರಿಯಾಗುತ್ತಾರೆ. ಸಿರಾಜ್ನಂತವರು “ನಾವು ಭಾರತೀಯರೆಂದು ಸಾಬೀತು ಮಾಡುತ್ತಲೇ ಇರಬೇಕಾಗುತ್ತದೆ.” ಈ ಒತ್ತಡ ಬಹುಶಃ ತಂಡ ಬೇರಾರಿಗೂ ಇರಲಾರದು.

ಉದಾಹರಣೆಗೆ ಭಾರತ- ಪಾಕಿಸ್ತಾನ ಪಂದ್ಯ ಊಹಿಸಿಕೊಳ್ಳಿ. ಕಿಕ್ಕಿರಿದ ಕ್ರೀಡಾಂಗಣ. ಪಂದ್ಯ ರೋಚಕ ಹಂತ ತಲುಪಿದೆ. ಆಗಸಕ್ಕೆ ಪಾಕಿಸ್ತಾನಿ ದಾಂಡಿಗ ಚೆಂಡು ಹೊಡೆಯುತ್ತಾನೆ. ಕೆಳಗೆ ಸಿರಾಜ್ ಆ ಚೆಂಡನ್ನು ಹಿಡಿಯಲು ಅಣಿಯಾಗಿದ್ದಾನೆ. ಆ ಕ್ಷಣ ಸಿರಾಜ್ ಮೇಲಿರುವ ಒತ್ತಡ ನಾವು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲವೆನಿಸುತ್ತೆ. 1983 ವಿಶ್ವಕಪ್ ವೇಳೆಯಲ್ಲಿ ಕಪಿಲ್, ವಿವಿಯನ್ ರಿಚರ್ಡ್ಸ್ ಅವರ ಕ್ಯಾಚ್ ಹಿಡಿಯಲಿದ್ದ ಒತ್ತಡದ ನೂರು ಪಟ್ಟು ಎಂದುಕೊಳ್ಳಬಹುದೇನೋ. ಸಿರಾಜ್ ಕ್ಯಾಚ್ ಹಿಡಿದರೆ ಜನ ಸಂಭ್ರಮಿಸಿ ಭಾರತ ಗೆದ್ದಿತು ಎಂದು ಬೀಗುತ್ತಾರೆ. ಸಿರಾಜ್ ಕ್ಯಾಚ್ ಕೈಚೆಲ್ಲಿದರೆ ಆತನನ್ನ ಜನ ಪಾಕಿಸ್ತಾನಿ ಎಂದು ಜರಿಯಬಹುದು! ಆ ಕ್ಯಾಚ್ ಬರಿಯ ಸಿರಾಜ್ ಕ್ಷಮತೆಯನ್ನು ಅಳೆಯುವುದಿಲ್ಲ. ಆತನ ಸಮುದಾಯದ ಬದ್ಧತೆ, ರಾಷ್ಟ್ರಪ್ರೇಮದ ಮಾಪನವಾಗುತ್ತದೆ! This is PRESSURE. ಸಿರಾಜ್ ಹೊತ್ತು ಸಾಗುವ ಹೊರೆ.

ಐಪಿಎಲ್ ವೇಳೆಯಲ್ಲಿ ಕೆಲ ಜೂಜಿನ ಏಜೆಂಟ್ಗಳು ಸಿರಾಜನ ಸಂಪರ್ಕ ಬೆಳೆಸಲು ಪ್ರಯತ್ನಿಸಿದರು. ತಂಡದ ಮಾಹಿತಿ ಹಂಚಿಕೊಂಡರೆ ಮಾಲಾಮಾಲ್ ಆಗುವೆ ಎಂದು ಆಮಿಷವೊಡ್ಡಿದರು. ಸಿರಾಜ್ ವಿಷಯವನ್ನ ಪ್ರಾಮಾಣಿಕವಾಗಿ ಬಿಸಿಸಿಐ ಭ್ರಷ್ಟ ನಿಗ್ರಹ ಘಟಕ್ಕೆ ಮುಟ್ಟಿಸಿದ್ದ. ಏಜೆಂಟರು ಸಿರಾಜ್ ಅವರನ್ನೇ ಏಕೆ ಸಂಪರ್ಕಿಸಿದರು? ಏಜೆಂಟರ ಆಲೋಚನೆಗಳಿಂದಿದ್ದ ಹುನ್ನಾರ ಯಾವುದು? ಈ ಪ್ರಶ್ನೆಗಳಿಗೆ ಉತ್ತರ ಸಿಗಲಿಕ್ಕಿಲ್ಲ. ಆದರೆ ಈ ಪ್ರಶ್ನೆಗಳು ಸಿರಾಜ್ ದಿನನಿತ್ಯ ಎದುರಿಸಬಹುದಾದ ಸವಾಲುಗಳನ್ನ ಮಾತ್ರ ನಮ್ಮ ಮುಂದಿಡುತ್ತವೆ.

ನಮ್ಮ ದೇಶದ ಬಹುಮಂದಿಗೆ “ರಾಷ್ಟ್ರ ಕಟ್ಟುವ” ಹುಚ್ಚು ಹಿಡಿದ ನಂತರದ ದಿನಗಳಲ್ಲಿ, ಎಲ್ಲ ಮುಸ್ಲಿಮರ ರಾಷ್ಟ್ರೀಯತೆ, ಅವರ ಬದ್ಧತೆಯನ್ನ ಪದೆ ಪದೆ ಪ್ರಶ್ನಿಸುವುದು, ಅವರನ್ನ ಎರಡನೆಯ ದರ್ಜೆಯ ಪ್ರಜೆಗಳಂತೆ ಕಾಣುವುದು, ಅನ್ಯರೆಂದು ಜರಿದು ಅವರ ಆಹಾರ, ಧಾರ್ಮಿಕ ಆಚರಣೆಗಳನ್ನ ಹಿಯಾಳಿಸುವುದು ಸರ್ವೇ ಸಾಮಾನ್ಯವಾಗಿದೆ. ಮುಸ್ಲಿಮರು ಈ ದೇಶವಾಸಿಗಳೇ, ಅವರ ಬದ್ಧತೆಯನ್ನ ಪ್ರಶ್ನಿಸುವ, ಅವರನ್ನ ಸಂದೇಹದಿಂದ ಕಾಣುವ ಅಗತ್ಯವಿಲ್ಲ ಎಂಬುದನ್ನ ಸಿರಾಜ್ ಇಂದು ಮತ್ತೊಮ್ಮೆ ಏಷ್ಯಾ ಕಪ್ ಫೈನಲ್ನಲ್ಲಿ ತೋರಿಸಿದ್ದಾರೆ…

ಸಿರಾಜ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಧರ್ಮಾಂಧ ಸಂಕುಚಿತ ಮನಸ್ಸುಗಳಿಗೆ ಮುಜುಗರ ಮೂಡಿಸುತ್ತಿರಲಿ…

‍ಲೇಖಕರು avadhi

September 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: