ಉರ್ದು ಮೂಲ: ಫೈಜ್ ಅಹಮದ್ ಫೈಜ್
‘ಆಯೆ ಕುಛ್ ಅಬ್ರ್ ಕುಛ್ ಶರಾಬ್ ಆಯೇ’

ಕನ್ನಡಕ್ಕೆ: ಸಿರಾಜ್ ಅಹಮದ್
ಮೋಡಗಳು ಹನಿಗಟ್ಟಿ ದಟ್ಟವಾಗಲಿ ಹಾಗೆಯೇ ಮಧುಪಾತ್ರೆಯೂ ಜೊತೆಗಿರಲಿ
ಇದಾದ ಮೇಲೆ ನಿಗದಿಯಾಗುವ ಎಲ್ಲ ಶಿಕ್ಷೆಗಳೂ ನನಗಿರಲಿ
ಜೀವನದಲ್ಲಿ ನಾನುಂಡ ನೋವುಗಳ ಒಂದೊಂದೇ ಲೆಕ್ಕ ಹಾಕುತ್ತಿದ್ದೆ
ಲೆಕ್ಕವಿಲ್ಲದಷ್ಟು ಸಲ ನಿನ್ನ ನೆನಪುಗಳೇ ಒಂದಾದ ಮೇಲೊಂದು ಒತ್ತರಿಸಿ ಬಂದವು
ಮಧುಪಾತ್ರೆಯ ತುತ್ತತುದಿಯಿಂದ ಚಂದ್ರ ಅವತರಿಸಲಿ
ಸಾಖಿಯ ಸುರಿಯುವ ಕೈಗಳಿಂದ ಬೆಳಗಿನ ಸೂರ್ಯ ಮೇಲೆದ್ದು ಬರಲಿ
ದೇಹದ ನರನಾಡಿಗಳಲ್ಲಿ ಮಿಂಚಿನಂತೆ ಹೊಸ ರಕ್ತ ಹರಿದು ಬರಲಿ
ಮುಸುಕು ಸರಿಸಿ ಅವಳು ಮತ್ತೊಮ್ಮೆ ನನ್ನೆಡೆಗೆ ನೋಡಲಿ

ಬದುಕಿನ ಎಲ್ಲ ಸಾಲು ಪುಟಗಳೆಲ್ಲ ನಿನ್ನ ಮಮತೆ-ಔದಾರ್ಯಗಳೇ
ತುಂಬಿ ತುಳುಕಿವೆಯೆಂದು ಹೃದಯದ ಎಲ್ಲ ಮಿಡಿತಗಳೂ ಹೇಳುತ್ತಿವೆ
ನಿನ್ನ ನೋವಿನ ಸರ್ವಾಧಿಕಾರದಿಂದ ನನಗಂತೂ ಬಿಡುಗಡೆಯಿಲ್ಲ
ನಿನ್ನಿಂದ ಬಿಡುಗಡೆಗಾಗಿ ದಿನವೂ ಹೃದಯ ನಡೆಸುವ ಪ್ರತಿಭಟನೆಗಳಿಗೆ ಕೊನೆಯಿಲ್ಲ
ಒಳಗೆ ಹೆಪ್ಪುಗಟ್ಟಿದ ಮೌನ ಎಲ್ಲ ಕಡೆಯಿಂದ ಅಪ್ಪಳಿಸಿತು
ಎಲ್ಲ ದಿಕ್ಕುಗಳೂ ನನ್ನ ಮೌನಕ್ಕೆ ಮತ್ತೆ ಮತ್ತೆ ಉತ್ತರಿಸಿದವು
ನಾ ನಡೆವ ಹಾದಿಯೇ ನನ್ನ ಗುರಿಯಾಗಿತ್ತು ಫೈಜ್
ಹೋದ ಕಡೆಯೆಲ್ಲ ಗೆಲುವೇ ನನಗೆ ಮನೆಯಾಗಿತ್ತು
0 ಪ್ರತಿಕ್ರಿಯೆಗಳು