ಡಿ ಎಸ್ ರಾಮಸ್ವಾಮಿ
ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ ಸಾಂಸ್ಕೃತಿಕ ಮತ್ತು ಬೌದ್ಧಿಕ ವಿವೇಕಗಳ ಕಾರಣ ಕನ್ನಡಿಗರನ್ನು ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಿಮತಿಗಳೆಂದು ಹೊಗಳಿದ್ದೂ ಇದೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತು ಕೆಲವೊಮ್ಮೆ ರಾಜಕೀಯ ಒತ್ತಡಗಳನ್ನು ಸಾಂಸ್ಕೃತಿಕ ಸಂಗತಿಗಳೆಂದು ಕರೆದು ಗೇಲಿಗೆ ಒಳಗಾಗುವುದು ಇತ್ತೀಚೆಗೆ ತೀರ ಸಾಮಾನ್ಯವಾಗಿದೆ.
ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದಷ್ಟೇ ತನ್ನ ಪರಮ ಗುರಿ ಮತ್ತು ಅದೊಂದೇ ಕನ್ನಡದ ಅಭಿವೃದ್ಧಿಯ ದಾರಿ ಎಂದೇ ನಂಬಿರುವ ಪರಿಷತ್ತು ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡಲೇಬೇಕೆಂದು ಸಮ್ಮೇಳನಗಳಲ್ಲಿ ನಿರ್ಣಯ ಮಂಡಿಸಿ ಸುದ್ದಿ ಮಾಡುತ್ತದೆಯೇ ವಿನಾ ಇಷ್ಟೂ ಸಮ್ಮೇಳನಗಳ ನಿರ್ಣಯಗಳು ಏನಾದವು ಎಂಬುದರ ಬಗ್ಗೆ ಯೋಚಿಸಿದ ಬಗ್ಗೆ ಪುರಾವೆಗಳಿಲ್ಲ.
ಬ್ಯೂರೋಕ್ರಾಟ್ ವ್ಯವಸ್ಥೆಯ ಮೂಲಕ ಅಧಿಕಾರದಲ್ಲಿ ಇದ್ದಷ್ಟೂ ದಿನ ಮೆರೆದ ಮನು ಬಳಿಗಾರ್ ಯಾವಾಗ ಈ ಪರಿಷತ್ತಿನ ಅಧ್ಯಕ್ಷರಾದರೋ ಆವಾಗಿನಿಂದ ಪರಿಷತ್ತು ಅದೇ ಬ್ಯೂರೋಕ್ರಾಟ್ ವ್ಯವಸ್ಥೆಯನ್ನು ಅಂದರೆ ನಾಜೂಕಿನಲ್ಲಿ ಎಲ್ಲ ಅಧಿಕಾರವನ್ನೂ ತನ್ನಲ್ಲೇ ಕೇಂದ್ರೀಕರಿಸಿಕೊಳ್ಳುವ ನಿಟ್ಟಿನಲ್ಲಿ ಪರಿಷತ್ತಿನ ಅವಧಿಯನ್ನು ಐದು ವರ್ಷಗಳಿಗೆ ಹೆಚ್ಚಿಸಿಕೊಂಡಿತು.
ಸರ್ವ ಸದಸ್ಯರ ಸಭೆಯಲ್ಲಷ್ಟೇ ಒಪ್ಪಿತ ಆಗಬೇಕಾದ ಮತ್ತು ಸಾಕಷ್ಟು ಚರ್ಚೆಗಳ ನಂತರವೇ ಆಗ ಬಹುದಾಗಿದ್ದ ಈ ಬದಲಾವಣೆ ಇದ್ದಕ್ಕಿದ್ದಂತೆ ಆಯಿತು ಎಂದರೆ ಅದು ಅಧಿಕಾರದ ಮೇಲಿನ ಮೋಹವಲ್ಲದೇ ಮತ್ತೇನಲ್ಲ. ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಾಡು ಮಾಡುವುದಷ್ಟೇ ತನ್ನ ಪರಮ ಕರ್ತವ್ಯ ಎಂದು ಭಾವಿಸಿರುವ ಸಾಹಿತ್ಯ ಪರಿಷತ್ತು ಸಮ್ಮೇಳನದ ನೆವದಲ್ಲಿ ಸುದ್ದಿಯಲ್ಲಿ ಇರುತ್ತದೆ ಅಷ್ಟೆ. ಈಗಂತೂ ಈ ಸಮ್ಮೇಳನಗಳ ಖರ್ಚುವೆಚ್ಚಗಳು ಹತ್ತು ಕೋಟಿಯನ್ನೂ ಮೀರುವುದರಿಂದ ಸಮ್ಮೇಳನವನ್ನು ನಡೆಸಲು ಯಾಕಿಷ್ಟು ಉತ್ಸಾಹ ಎಂದು ಮತ್ತೆ ಹೇಳಬೇಕಿಲ್ಲ
ಸದ್ಯದ ನಮ್ಮೆಲ್ಲರ ತನು ಮನ ಧನವನ್ನು ಕಿತ್ತುಕೊಂಡಿರುವ ಕೋವಿಡ್ ವ್ಯಾಧಿ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಮಾಡಿರುವ ಪರಿಣಾಮ ಘೋರವಾದುದು. ದೇಶಕ್ಕೆ ದೇಶವೇ ಪರಿತಪಿಸುತ್ತ ಇರುವಾಗ ಹಣಕಾಸಿನ ಸಮಸ್ಯೆ ಬಿಗಡಾಯಿಸಿರುವಾಗ ಪರಿಷತ್ತಿನ ಅಧಿಕಾರಾವಧಿಯನ್ನು ಮೂರರಿಂದ ಐದು ವರ್ಷಕ್ಕೆ ತಿದ್ದಿಕೊಂಡ ಕಾರ್ಯಕಾರಿಣಿಗೆ ನಾಚಿಕೆ ಮಾನ ಮರ್ಯಾದೆಗಳು ಇಲ್ಲವೇ ಇಲ್ಲ ಎಂದು ಸಾಬೀತಾಗಿದೆ, ಏಕೆಂದರೆ ಅದು ಬರುವ ಫೆಬ್ರವರಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಹೇಳಿದೆ.
ಇಂಥ ಆರ್ಥಿಕ ಪರಿಸ್ಥಿತಿಯಲ್ಲಿ ಸಮ್ಮೇಳನದ ಅಗತ್ಯವಾದರೂ ಏನಿದೆ? ಸರ್ಕಾರಕ್ಕೆ ಸ್ವಲ್ಪವಾದರೂ ತಿಳುವಳಿಕೆ ಇದ್ದರೆ ಒಂದೇ ಒಂದು ರೂಪಾಯನ್ನು ಸಮ್ಮೇಳನಕ್ಕೆ ಬಿಡುಗಡೆ ಮಾಡದೇ ಬೇಕಿದ್ದರೆ ಅಂತರ್ಜಾಲ ಬಳಸಿ ಸಮ್ಮೇಳನ ಮಾಡಿಕೊಳ್ಳಿ ಎಂದು ಹೇಳಲಿ.
ಸಮ್ಮೇಳನ ನಿಗದಿಯಾದರೆ ಮತ್ತೆ ಆರು ತಿಂಗಳು ಕುರ್ಚಿ ಭದ್ರ ಎಂದೇ ಈ ಸಮಯ ಸಾಧಕರ ಯೋಜನೆ.
ಕನ್ನಡದ ಉದ್ಧಾರಕ್ಕೆ ಸಮ್ಮೇಳನವೊಂದೇ ದಾರಿಯಲ್ಲ.
ಈ ಕುರಿತು ನಾಡಿನ ಚಿಂತಕರು ಸರ್ಕಾರವನ್ನು ಒತ್ತಾಯಿಸಿ ಸಮ್ಮೇಳನವನ್ನು ಸದ್ಯದ ಸ್ಥಿತಿಯಲ್ಲಿ ನಡೆಸದೇ ಇರಲು ಒತ್ತಾಯಿಸಬೇಕಿದೆ.
0 Comments